ಗುರುವಾರ , ಅಕ್ಟೋಬರ್ 6, 2022
25 °C
ಕಾಲ್ನಡಿಗೆಯು ಕಾಲೆಳೆಯುವ ನಡಿಗೆಯಾಗದಂತೆ ಎಚ್ಚರ ವಹಿಸಬೇಕಿದೆ

ಬರಗೂರು ರಾಮಚಂದ್ರಪ್ಪ ಬರಹ: ಭಾರತವನ್ನು ಬೆಸೆಯುವ ಬಗೆ ಹೇಗೆ?

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

‘ಭಾರತ್ ಜೋಡೊ’ ಎಂಬ ಆಶಯದೊಂದಿಗೆ ರಾಹುಲ್ ಗಾಂಧಿ ಅವರು 3,500ಕ್ಕೂ ಹೆಚ್ಚು ಕಿಲೊಮೀಟರ್ ದೂರದ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಇದೊಂದು ಅಸಾಧಾರಣ ಕ್ರಿಯಾರೂಪಕ ಎಂಬುದರಲ್ಲಿ ಅನುಮಾನವಿಲ್ಲ. ಈ ಪಾದಯಾತ್ರೆಯನ್ನು ವ್ಯವಸ್ಥೆ ಮಾಡಿರುವುದು ಕಾಂಗ್ರೆಸ್ ಪಕ್ಷ. ಆದ್ದರಿಂದ ಆ ಪಕ್ಷವು ಇದನ್ನು ‘ಪಕ್ಷಾತೀತ ಪಾದಯಾತ್ರೆ’ಯೆಂದು ಹೇಳಿದರೂ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಯಾತ್ರೆಯೆಂಬ ಭಾವನೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಹಾಗೆಂದು ಕಾಂಗ್ರೆಸ್ ಮತ್ತು ರಾಹುಲ್ ಅವರ ಶಕ್ತಿವರ್ಧನೆಗೆ ಈ ಪಾದಯಾತ್ರೆ ಬಳಕೆಯಾಗುವುದನ್ನು ಬೇಡ ಎನ್ನುವಂತಿಲ್ಲ. ಯಾಕೆಂದರೆ ಪಾದಯಾತ್ರೆಯ ರೂವಾರಿಗಳು ಇವರೇ ಆಗಿದ್ದಾರೆ. ಇವರು ಅದರ ಲಾಭ ಪಡೆಯಬೇಕೆಂದು ಬಯಸುವುದು ತಪ್ಪಲ್ಲ.

ಹಿಂದೆ ಗಾಂಧೀಜಿ ಕೈಗೊಂಡ ಪಾದಯಾತ್ರೆಯಂತೆ ‘ಲಾಭರಹಿತ’ ಯಾತ್ರೆಗಳನ್ನು ಇಂದು ನಿರೀಕ್ಷಿಸುವುದು ಕಷ್ಟ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ನಡೆಸಿದ ಭಾರತ ಯಾತ್ರೆಯೂ ಉಲ್ಲೇಖನೀಯ. ಪಾದಯಾತ್ರೆಯನ್ನು ಸದುದ್ದೇಶದಿಂದ ಯಾವ ಪಕ್ಷವೇ ನಡೆಸಲಿ, ಯಾವ ವ್ಯಕ್ತಿಯೇ ನೇತೃತ್ವ ವಹಿಸಲಿ ಬದ್ಧತೆಯ ಕಾರಣಕ್ಕೆ ಸ್ವಾಗತಾರ್ಹ. ಭಾರತದಲ್ಲಿ ಒಡೆದ ಮನಸ್ಸುಗಳನ್ನು ಬೆಸೆಯಲು ಹೊರಟ ಈ ಪಾದಯಾತ್ರೆಯ ಉದ್ದೇಶ ಒಳ್ಳೆಯದೇ ಆಗಿದೆ. ಆದರೆ ಇದು ಅನಗತ್ಯ ವಿವಾದಕ್ಕೂ ಕಾರಣವಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ.  ವಿವಾದಗಳ ವಿಸ್ತರಣೆಗೆ ಪಾದಯಾತ್ರೆನಿರತ ಪಕ್ಷವೂ ಪಾಲುದಾರ ಆಗುತ್ತಿರುವುದು ಈಗಿನ ಬೆಳವಣಿಗೆಯಾಗಿದೆ.

ಈ ಪಾದಯಾತ್ರೆಯು ಸಹಜವಾಗಿಯೇ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಕೆಂಗಣ್ಣು ‘ಕೊರತೆ’ಗಳನ್ನು ಹುಡುಕುತ್ತದೆ. ಆದ್ದರಿಂದ ರಾಹುಲ್‍ ಅವರ ಟಿ ಶರ್ಟು ಥಟ್ಟನೆ ಕಾಣಿಸುತ್ತದೆ. 41 ಸಾವಿರ ರೂಪಾಯಿಗಳ ಟಿ ಶರ್ಟು ಧರಿಸಿದ್ದನ್ನು ಟೀಕಿಸಲಾಗುತ್ತದೆ. ಆಗ ಕಾಂಗ್ರೆಸ್ಸಿಗರು ನರೇಂದ್ರ ಮೋದಿ ಅವರ 9 ಲಕ್ಷ ರೂಪಾಯಿಗಳ ಕೋಟು ಮತ್ತು ಅಮಿತ್ ಶಾ ಅವರ 80 ಸಾವಿರ ರೂಪಾಯಿಗಳ ಮಫ್ಲರ್ ವಿಷಯವನ್ನು ಮುನ್ನೆಲೆಗೆ ತರುತ್ತಾರೆ. ಅಲ್ಲಿಗೇ ಮುಗಿದಿದ್ದರೆ ಏಟಿಗೆ ಎದಿರೇಟು ಎಂದು ಸುಮ್ಮನಾಗಬಹುದಿತ್ತು. ಚೆಡ್ಡಿಗೆ ಬೆಂಕಿ ಹಚ್ಚಿ ಬೇಕಿಲ್ಲದ ಟ್ವೀಟ್ ಮಾಡುತ್ತಾರೆ. ಹೀಗಾಗಿ ಪಾದಯಾತ್ರೆಯು ಎರಡು ಪಕ್ಷಗಳ ಜಟಾಪಟಿಗೆ ಸೀಮಿತವಾಗುತ್ತಿದೆ. ಪಾದಯಾತ್ರೆಗೆ ಇರಬೇಕಾದ ಮೂಲ ಆಶಯ ಹಿನ್ನೆಲೆಗೆ ಸರಿಯುವ ಲಕ್ಷಣ ಕಾಣಿಸುತ್ತಿದೆ. ಪಾದಯಾತ್ರೆ ವಿರೋಧಿಗಳಿಗೆ ಬೇಕಾದದ್ದು ಇದೇ ಆಗಿದೆ. ಕಾಂಗ್ರೆಸ್ ಇದನ್ನು ಅರ್ಥಮಾಡಿಕೊಳ್ಳಬೇಕು.

ಆದರೆ ಕಾಂಗ್ರೆಸ್ ಧುರೀಣರು ಬಿಜೆಪಿಯನ್ನಷ್ಟೇ ಅಲ್ಲ, ಎಡಪಕ್ಷವನ್ನೂ ಬಿಟ್ಟಿಲ್ಲ. ಬಿಜೆಪಿಯ ‘ಎ ಟೀಮ್’ ಎಂದು ಎಡಪಕ್ಷವನ್ನು ಟೀಕಿಸಿದ್ದಾರೆ. ಎಡಪಕ್ಷಗಳನ್ನು ಟೀಕಿಸಲು ಬೇರೆ ಕೆಲವು ಕಾರಣಗಳು ಸಿಗಬಹುದಾದರೂ ಧಾರ್ಮಿಕ ಮೂಲಭೂತವಾದವನ್ನು ನಿತ್ಯ ನಿರಂತರವಾಗಿ ವಿರೋಧಿಸುತ್ತ ಬಂದಿರುವುದನ್ನು ‘ಇಲ್ಲ’ ಎನ್ನಲು ಸಾಧ್ಯವಿಲ್ಲ. ಪಾದಯಾತ್ರೆಯು ಕೇರಳದಲ್ಲಿ ಹೆಚ್ಚು ದಿನಗಳ ಕಾಲ ನಡೆಯುವ ಕುರಿತು ಎಡಪಕ್ಷವು ಆಕ್ಷೇಪಿಸಿದ್ದನ್ನು
ಪ್ರಶ್ನಿಸಬಹುದೇ ಹೊರತು ಬಿಜೆಪಿಯ ‘ಎ ಟೀಮ್’ ಎಂದು ಕರೆಯುವುದು ಪ್ರಶ್ನಾರ್ಹ.

ಇಷ್ಟು ಪ್ರಸ್ತಾಪ ಮಾಡಲು ಕಾರಣವೆಂದರೆ, ಕಾಂಗ್ರೆಸ್‍ನ ಕೆಲವರು ಪಾದಯಾತ್ರೆಯ ಸದುದ್ದೇಶವನ್ನು ಬಿತ್ತರಿಸುವ ಬದಲು ಉತ್ತರಿಸುವುದನ್ನೇ ಮುಖ್ಯವಾಗಿಸಿಕೊಂಡಂತೆ ಕಾಣುತ್ತಿದೆ. ಇದು ಪಾದಯಾತ್ರೆಯ ಆದ್ಯತೆಯನ್ನು ಮಂಕು ಮಾಡುತ್ತದೆ. ಆಶಾದಾಯಕ ಅಂಶವೆಂದರೆ- ರಾಹುಲ್ ಅವರು ಟೀಕೆಗಳಿಗೆ ಉತ್ತರಿಸುವ ಗೊಡವೆಗೆ ಹೋಗದೆ, ನಿತ್ಯ ನಡಿಗೆಯಲ್ಲಿ ನಿರತರಾಗಿದ್ದಾರೆ. ಜನರ ಸಂಪರ್ಕ ಸಾಧಿಸುತ್ತಿದ್ದಾರೆ.

ಭಾರತವನ್ನು ಜೋಡಿಸುವುದು ಅಥವಾ ಬೆಸೆಯುವುದು ಹೇಗೆ ಮತ್ತು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿಕೊಂಡರೆ ಪಾದಯಾತ್ರೆಯ ಉದ್ದೇಶಕ್ಕೊಂದು ಸ್ಪಷ್ಟತೆ ಬರುತ್ತದೆ. ನಮ್ಮ ಸಾಮಾಜಿಕ- ಆರ್ಥಿಕ ವ್ಯವಸ್ಥೆಯು ಶತಮಾನಗಳಿಂದ ಶ್ರೇಣೀಕರಣಕ್ಕೆ ಕಾರಣವಾಗಿದೆ. ಜಾತಿ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಗಳ ಆಧಾರದಲ್ಲಿ ‘ಒಡಕು’ ಉಂಟಾಗಿದೆ. ಇಂಥ ಸಾಮಾಜಿಕ- ಆರ್ಥಿಕ ಅಸಮಾನತೆಯ ಒಡಕನ್ನು ಬೆಸೆದು ಸಮಾನತೆಯ ಸಮಾಜ ನಿರ್ಮಿಸಲು ಸೂಕ್ತ ಚಿಂತನೆಯ ಹೋರಾಟಗಳೂ ನಡೆದಿವೆ. ಒಡೆದ ಸಮಾಜಕ್ಕೆ ಸಾಂತ್ವನ ನೀಡಿವೆ; ಸ್ವಲ್ಪ ಸುಧಾರಣೆಗೂ ಕಾರಣವಾಗಿವೆ. ಆದರೂ ಇಂದು ಬಂಡವಾಳಶಾಹಿ ಆರ್ಥಿಕ ನೀತಿಯಿಂದ ಅಸಮಾನತೆಯ ಕಂದಕ ಬೇರೊಂದು ರೂಪದಲ್ಲಿ ಕಾಣಿಸುತ್ತಿದೆ.

ಕಾಂಗ್ರೆಸ್ ನೇತೃತ್ವದ ಸರ್ಕಾರವು 1991- 92ರಲ್ಲಿ ಬಿತ್ತಿದ ಉದಾರೀಕರಣವೆಂಬ ಆರ್ಥಿಕ ನೀತಿಯು ಬಿಜೆಪಿ ಆಡಳಿತದಲ್ಲಿ ಹೆಮ್ಮರವಾಗಿ ಬೆಳೆದು ಖಾಸಗೀಕರಣವೇ ಆದಿ ಮತ್ತು ಅಂತ್ಯವಾಗಿ ಪರಿಣಮಿಸುತ್ತಿದೆ. ನಿರುದ್ಯೋಗ ಸಮಸ್ಯೆ ಹಿಂದೆಂದೂ ಇಲ್ಲದಷ್ಟು ಉಲ್ಬಣಗೊಂಡಿದೆ. ರೈತರು, ದಲಿತರು, ಮಹಿಳೆಯರು ಎಂದಿನಂತೆ ಸಂಕಷ್ಟಗಳ ಸುಳಿಯಲ್ಲಿದ್ದಾರೆ. ಬೆಲೆ ಏರಿಕೆಯಿಂದ ಬದುಕು ಬಸವಳಿಯುತ್ತಿದೆ. ಆದ್ದರಿಂದ ಈ ಸಾಮಾಜಿಕ- ಆರ್ಥಿಕ ಕಂದಕವನ್ನು ಬೆಸೆದು ಭಾರತದ ಮರು ಸಂರಚನೆಗೆ ಸಿದ್ಧವಾಗಬೇಕಾಗಿದೆ. ಈ ದಿಸೆಯಲ್ಲಿ ಸ್ಪಷ್ಟ ಸೈದ್ಧಾಂತಿಕ ತಿಳಿವಳಿಕೆ ಮತ್ತು ಯೋಜನಾಬದ್ಧತೆ ಬೇಕು. ಟೀಕೆಗಳನ್ನು ಗೌಣಗೊಳಿಸಿ ಸಾಮಾಜಿಕ ಮರು ಸಂರಚನೆಯ ಆಶಯವನ್ನು ಜನರಿಗೆ ಮುಟ್ಟಿಸುವುದು ಪಾದಯಾತ್ರೆಯ ತಾತ್ವಿಕತೆಯಾಗಬೇಕು.

ಇಂದು, ಭಾರತದಲ್ಲಿ ಒಡಕುಂಟು ಮಾಡುತ್ತಿರುವ ಮತ್ತೊಂದು ಅಂಶವೆಂದರೆ- ಎಲ್ಲ ಧರ್ಮಗಳಲ್ಲಿರುವ ಮೂಲಭೂತವಾದಿಗಳು ವಿಸ್ತರಿಸುತ್ತಿರುವ ಧರ್ಮದ್ವೇಷ ಮತ್ತು ಬಹುತ್ವ ವಿರೋಧಿ ಶಕ್ತಿಗಳ ನಿರ್ಭಿಡೆಯ ನಡೆ-ನುಡಿ. ಇಂಥ ಸನ್ನಿವೇಶಕ್ಕೆ ಪಾದಯಾತ್ರೆಯು ಪರಿವರ್ತನಶೀಲ ಪರಂಪರೆಯ ಪ್ರತೀಕಗಳ ಮೂಲಕ ಜನರನ್ನು ಜಾಗೃತಗೊಳಿಸಬೇಕು. ಜನಸಾಮಾನ್ಯರು ಪರಂಪರೆಯನ್ನು ಗೌರವಿಸುತ್ತಾರೆಂಬುದನ್ನು ಗೌರವಿಸಬೇಕು. ಈ ದಿಸೆಯಲ್ಲಿ ನಿದರ್ಶನವಾಗಿ ಮೂರು ಮಾದರಿಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ.

ಒಂದು- ಸಂವಿಧಾನ ರಚನಾ ಸಭೆಯಲ್ಲಿ ಧಾರ್ಮಿಕ ಹಕ್ಕುಗಳ ಬಗ್ಗೆ ಡಾ. ಅಂಬೇಡ್ಕರ್ ಮತ್ತು ರಾಧಾಕೃಷ್ಣನ್ ಅವರು ತಳೆದ ನಿಲುವು. ಡಾ. ಅಂಬೇಡ್ಕರ್ ಹಿಂದೂ ಧರ್ಮದ ಹೊರಗೆ ನಿಂತವರು. ಡಾ. ರಾಧಾಕೃಷ್ಣನ್ ಹಿಂದೂ ಧರ್ಮದ ಒಳಗೆ ನಿಂತವರು. ಇಬ್ಬರೂ ಕೂಡಿ ಈ ದೇಶದಲ್ಲಿ ಎಲ್ಲ ಧರ್ಮಗಳೂ ಸಮಾನ ಎಂದು ಪ್ರತಿಪಾದಿಸಿ ಧಾರ್ಮಿಕ ಹಕ್ಕು ಮತ್ತು ಸ್ವಾತಂತ್ರ್ಯಗಳ ಪರವಾಗಿ ನಿಂತರು. ಇದು ಭಾರತವನ್ನು ಬೆಸೆಯುವ ಮನೋಧರ್ಮ. ಎರಡು- ಮುಸ್ಲಿಂ ಸಮುದಾಯದ ಅಶ್ವಖುಲ್ಲಾಖಾನ್ ಮತ್ತು ಹಿಂದೂ ಧರ್ಮಕ್ಕೆ ಸೇರಿದ ರಾಮಪ್ರಸಾದ್ ಬಿಸ್ಮಿಲ್ ಅವರು ಸೋದರರಂತೆ ಬದುಕುತ್ತ ಒಟ್ಟಾಗಿ ಬ್ರಿಟಿಷರ ವಿರುದ್ಧ ಹೋರಾಡಿದರು. ಇಬ್ಬರೂ ಒಂದೇ ದಿನ- 1927 ಡಿಸೆಂಬರ್ 19ರಂದು- ಬ್ರಿಟಿಷರ ಗಲ್ಲು ಶಿಕ್ಷೆಗೆ ಬಲಿಯಾದರು. ಸಾವಿನಲ್ಲೂ ಒಂದಾದ ಸೋದರರಾದರು. ಮೂರು- ಭಾರತದ ಮೊದಲ ಶಿಕ್ಷಕಿ ಎಂಬ ಖ್ಯಾತಿಯ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಒಟ್ಟಾಗಿ ಮಹಿಳೆಯರ ಶಿಕ್ಷಣಕ್ಕಾಗಿ ದುಡಿದರು. ಭಾರತವನ್ನು ಬೆಸೆಯುವ ಇಂತಹ ಸೌಹಾರ್ದ ಪರಂಪರೆಯ ಪ್ರತೀಕಗಳು ಬಹಳಷ್ಟಿವೆ.

ಗಾಂಧೀಜಿ ಧಾರ್ಮಿಕ ಸೌಹಾರ್ದಕ್ಕಾಗಿ ಇಡೀ ಜೀವನ ಮತ್ತು ಜೀವವನ್ನು ಕೊಟ್ಟರು. ಎಲ್ಲ ಧರ್ಮಗಳನ್ನು ಸಮದೃಷ್ಟಿಯಿಂದ ನೋಡಬೇಕೆಂದು ಪ್ರತಿಪಾದಿಸಿದರು. ಡಾ. ಅಂಬೇಡ್ಕರ್ ‘ಧರ್ಮ ಇರುವುದು ಮನುಷ್ಯರಿಗಾಗಿ, ಮನುಷ್ಯರಿರುವುದು ಧರ್ಮಕ್ಕಾಗಿ ಅಲ್ಲ’ ಎಂದರು. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳ ಪ್ರಜಾಪ್ರಭುತ್ವ ಮುಖ್ಯ ಎಂದರು. ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರು ಮುಸ್ಲಿಮರು ಅಪ್ಪಟ ಭಾರತೀಯರೆಂಬ ಬದ್ಧತೆಯನ್ನು ಪ್ರತಿಪಾದಿಸಿದರು. ನೆಹರೂ, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ಪಟೇಲ್ ಮುಂತಾದವರ ವಿಚಾರಧಾರೆಗಳು ಭಾರತವನ್ನು ಕಟ್ಟಿ ಬೆಳೆಸಿದ್ದನ್ನು ನಾವು ನೆನೆಯಬೇಕು. ಬುದ್ಧಗುರು, ಬಸವಣ್ಣ, ಸ್ವಾಮಿ ವಿವೇಕಾನಂದರೇ ಮುಂತಾದ ಮಾನವೀಯ ಮನಸ್ಸುಗಳು ದೇಶದ
ದಾರಿದೀಪವಾಗಬೇಕು. ಪಾದಯಾತ್ರೆಗೂ ಪ್ರತೀಕವಾಗಬೇಕು.

ಒಟ್ಟಾರೆ, ಜನಪರ ಸಾಮಾಜಿಕ– ಆರ್ಥಿಕ ನೀತಿಗಳ ನಿಲುವು ಮತ್ತು ಧಾರ್ಮಿಕ ಸೌಹಾರ್ದದ ಒಲವುಗಳನ್ನು ಒಂದಾಗಿಸಿಕೊಂಡು ಈ ಪಾದಯಾತ್ರೆಯು ಫಲ ನೀಡುವಂತಾಗಲಿ; ಕಾಲ್ನಡಿಗೆಯು ಕಾಲೆಳೆಯುವ ನಡಿಗೆಯಾಗದಂತೆ ಎಚ್ಚರ ವಹಿಸಲಿ. ಇದು ದೇಶ ಬಯಸುವ ಸದಾಶಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು