ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಚಿಲ್ಲರೆ ‘ಕಥನ’ ಮತ್ತು ಅಂತರಂಗದ ಪಿಸುದನಿ!

ಅಬ್ಬರದ ಕಟ್ಟುಕತೆಗಳ ಎದುರು ಪ್ರಾಮಾಣಿಕರ ಪುಟ್ಟ ದನಿಗಳು ಜನಾಭಿಪ್ರಾಯ ರೂಪಿಸಬಲ್ಲವು
Last Updated 23 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಈಚೆಗೆ ಪ್ರಕಟವಾದ ಲೇಖಕ ಸಲ್ಮಾನ್ ರಶ್ದಿ ಅವರ ‘ವಿಕ್ಟರಿ ಸಿಟಿ’ ಕಾದಂಬರಿಯಲ್ಲಿ ಪಂಪ ಕಂಪನಾ ಎಂಬ ಕಥನಕಾರ್ತಿ ಆದರ್ಶ ಸಾಮ್ರಾಜ್ಯವೊಂದನ್ನು ತನ್ನ ಅಪೂರ್ವ ಬೀಜಗಳಿಂದ ಸೃಷ್ಟಿಸುತ್ತಾಳೆ. ಈ ವಿಶಿಷ್ಟ ಕಾದಂಬರಿಯ ಘಟನಾವಳಿಗಳು ನಡೆಯುವ ‘ಬಿಸ್ನಾಗ’ ಸಾಮ್ರಾಜ್ಯ ಹಳೆಯ ಸಿದ್ಧ ಜಾಡಿನಿಂದ ತಪ್ಪಿಸಿಕೊಂಡು ಹೊಸ ಹಾದಿ ತೆರೆಯುವ ರಾಜ್ಯವಾಗಲೆತ್ನಿಸುತ್ತದೆ. ಈ ಸಾಮ್ರಾಜ್ಯ ಸೃಷ್ಟಿಸಿ ನೂರಾರು ವರ್ಷ ಬದುಕುವ ಪಂಪ ಕಂಪನಾ ಮುಂದೊಮ್ಮೆ ಕಲೆ, ಸಂಗೀತ, ಸ್ವಾತಂತ್ರ್ಯ, ಸರ್ವಧರ್ಮ ಸ್ವೀಕಾರದಂತಹ ಉದಾರ ಚಿಂತನೆಗಳು ರಾಜ ಕೃಷ್ಣದೇವರಾಯನ ಅಂತರಂಗದಲ್ಲಿ ಉಕ್ಕುವಂತೆ ಉಸುರುತ್ತಾಳೆ. ಈ ಚಿಂತನೆಗಳನ್ನು ಜನರ ಕಿವಿಯಲ್ಲೂ ಉಸುರಿ ನಾಡಿನುದ್ದಕ್ಕೂ ಹಬ್ಬಿಸುತ್ತಾಳೆ.

ಇದು, ಸಾಂಪ್ರದಾಯಿಕ ಸಾಮ್ರಾಜ್ಯವೊಂದು ಉದಾರವಾದಿಯಾದ ಸುಂದರ ವಿದ್ಯಮಾನವನ್ನು ವಿವರಿಸಲು ಕಾದಂಬರಿಕಾರ ಬಳಸಿರುವ ಮಾಂತ್ರಿಕ ವಾಸ್ತವತಾವಾದಿ ಕಥಾತಂತ್ರವೆನ್ನುವುದು ನಿಜ. ಆದರೇನಂತೆ! ವೈವಿಧ್ಯಮಯ ಜಾತಿ, ಧರ್ಮ, ಜನಾಂಗಗಳನ್ನು ಒಳಗೊಂಡ ಹೊಸ ರೀತಿಯ ಆಳ್ವಿಕೆ, ಹೊಸ ಸಮಾಜಗಳು ಜನರ ಅಂತರಂಗದ ಪಿಸುಮಾತಿನಿಂದಲೂ ಸೃಷ್ಟಿ
ಯಾಗುತ್ತವೆ ಎಂಬ ಸಮಕಾಲೀನ ಸತ್ಯವನ್ನು ಕಾದಂಬರಿ ಅದ್ಭುತವಾಗಿ ಹೇಳುತ್ತದೆ.

ರಶ್ದಿ ಅವರ ಕಾದಂಬರಿಯ ಕಥನಕಾರ್ತಿಯ ಅಂತರಂಗದ ಮೃದಂಗದ ದನಿ ಹಬ್ಬಿಸಿದ ಉದಾರವಾದಿ ಸಾಮ್ರಾಜ್ಯ ಕಂಡು ಪುಳಕಗೊಳ್ಳುವ ನಮ್ಮ ಕಾಲದ ಓದುಗರೆದುರು, ಇದಕ್ಕೆ ಪೂರಾ ವಿರುದ್ಧವಾದ ಈ ಕಾಲದ ಸೈತಾನ ಕಾರ್ಖಾನೆಗಳ ಗಟ್ಟಿ ಗಂಟಲಿನ, ಜೋರು ದನಿಗಳ ಅಬ್ಬರ ಮೂಡತೊಡಗಿದರೆ ಅಚ್ಚರಿಯಲ್ಲ. ಏಕಕಾಲಕ್ಕೆ ಕೆಟ್ಟ ಪಿಸುಮಾತನ್ನೂ ಲಜ್ಜೆಗೇಡಿ ಗಂಟಲನ್ನೂ ಬಳಸಿ ಲಾಭ ಮಾಡಿಕೊಳ್ಳುವವರ ಚಿತ್ರಗಳು ನಿತ್ಯ ನಮ್ಮ ಕಣ್ಣಿಗೆ ರಾಚುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮೂವರು ನಾಯಕರ ಚುನಾವಣಾ ತುರ್ತಿನ ‘ಅಧಿಕೃತ’ ಹೇಳಿಕೆಗಳ ಸ್ಯಾಂಪಲ್ಸ್ ನೋಡಿ:

ಚಿತ್ರ 1: ಬಿಜೆಪಿಯ ಅಶ್ವತ್ಥನಾರಾಯಣ ಎಂಬ ನಾಯಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹೊರಡಿಸಿದ ಫತ್ವಾ ಮಾದರಿಯ ಆದೇಶ ಮತ್ತು ಆನಂತರ ವ್ಯಕ್ತಪಡಿಸಿದ ಅರೆ ಮನಸ್ಸಿನ ವಿಷಾದ.

ಚಿತ್ರ 2: ಇಂಥ ಮಾತುಗಳನ್ನು ಕೇಳಿ ಜನ ರೇಗುತ್ತಿರುವ ಕಾಲದಲ್ಲೇ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಟ್ಟಿರುವ ‘ನಾನು ಒಕ್ಕಲಿಗರ ಮನೆಯ ಮಗ’ ಎಂಬ ವಿಶೇಷ ಫೀಲರ್-ಟ್ರೈಲರ್!

ಚಿತ್ರ 3: ಈ ಎರಡು ‘ಅಪೂರ್ವ’ ಹೇಳಿಕೆಗಳು ಎರಗುವ ಮೊದಲು ಜನತಾದಳದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಪ್ರಲ್ಹಾದ ಜೋಶಿ ಮತ್ತು ಪೇಶ್ವೆ ವಂಶ ಕುರಿತ ಸಂಶೋಧನೆ...

ಇಂಥ ಹೇಳಿಕೆಗಳನ್ನು ಈ ಮಹನೀಯರೇ ಸೃಷ್ಟಿಸುತ್ತಾರೋ ಇವರಿಗೆ ಉಚಿತಾನುಚಿತ ಸಲಹೆಗಳನ್ನು ಕೊಡುವ ‘ಸಂಶೋಧಕ’ರು ಸೃಷ್ಟಿಸುತ್ತಾರೋ, ತಿಳಿಯದು! ಈ ಥರದ ಮಾತುಗಳನ್ನು ಈ ಕಾಲದ ಇಂಗ್ಲಿಷ್ ಪತ್ರಿಕೋದ್ಯಮ ‘ನೆರೇಟಿವ್’ ಎನ್ನುತ್ತಿದೆ. ‘ನೆರೇಟಿವ್’ (Narrative) ಎಂಬ ಪದ ಮೂವತ್ತು ವರ್ಷಗಳ ಕೆಳಗೆ ಜಗತ್ತಿನ ಗಂಭೀರ ಅಕಡೆಮಿಕ್ ವಲಯದಲ್ಲಿ ಹೆಚ್ಚು ಚಾಲ್ತಿಗೆ ಬಂದಾಗ, ಸಂಸ್ಕೃತಿ ಚಿಂತಕ ಡಿ.ಆರ್.ನಾಗರಾಜ್ ಈ ಪರಿಕಲ್ಪನೆಯನ್ನು ‘ಕಥನ’ ಎಂದು ಕರೆದರು, ತಮ್ಮ ಪುಸ್ತಕಕ್ಕೆ ‘ಸಾಹಿತ್ಯ ಕಥನ’ ಎಂದು ಹೆಸರಿಟ್ಟರು. ಅದಕ್ಕೂ ಮೊದಲು ಯು.ಆರ್.ಅನಂತಮೂರ್ತಿ ತಮ್ಮ ‘ಪೂರ್ವಾಪರ’ ಪುಸ್ತಕದ ‘ನೆರೇಟಿವ್’ಗಳನ್ನು ‘ಆಖ್ಯಾನ’ ಎಂದು ಕರೆದರು. ಕನ್ನಡದ ಈ ಎರಡು ಶ್ರೇಷ್ಠ ಪುಸ್ತಕಗಳ ಗಂಭೀರ ಕಥನಗಳನ್ನು ಓದಿ ಬಲ್ಲವರಿಗೆ ‘ನೆರೇಟಿವ್’ ಪದವನ್ನು ಈಗ ಎಷ್ಟು ಅಗ್ಗವಾಗಿ ಬಳಸಲಾಗುತ್ತಿದೆ ಎಂಬುದರ ಅರಿವಾಗಬಲ್ಲದು.

ಗಂಭೀರ ಅರ್ಥಗಳ ಪದಗಳನ್ನು ದುರ್ಬಳಕೆ ಮಾಡಿಕೊಂಡು, ಅವುಗಳ ಅರ್ಥಗಳನ್ನು ಅಗ್ಗವಾಗಿಸುವುದು ಇಂದಿನ ರಾಜಕೀಯ, ಮಾಧ್ಯಮ, ಶೈಕ್ಷಣಿಕ ಹಾಗೂ ಸಮಾಜ ವಿಭಜಕ ವಲಯಗಳ ಕಾಯಿಲೆಯಾಗಿಬಿಟ್ಟಿದೆ. ವ್ಯಾಪಕವಾದ ಸಾಂಸ್ಕೃತಿಕ ಸಾಧ್ಯತೆಯುಳ್ಳ ‘ನೆರೇಟಿವ್’ ಪದವನ್ನು ಅತಿ ವಾಚ್ಯಗೊಳಿಸಿ, ಇದೀಗ ‘ಕಟ್ಟುಕತೆ’ ಎಂಬ ಅರ್ಥಕ್ಕೆ ಇಳಿಸಲಾಗಿದೆ.

ರಾಜಕೀಯ ಪಕ್ಷವೊಂದು ಹರಿಯಬಿಡುವ ಸುಳ್ಳುಗಳನ್ನೇ ‘ನೆರೇಟಿವ್’ ಎಂದು ಕರೆಯುವವರಿದ್ದಾರೆ. ‘ಆ ಪಕ್ಷಕ್ಕೆ ಒಂದು ‘ನೆರೇಟಿವ್’ ಇದೆ, ಈ ಪಕ್ಷಕ್ಕಿಲ್ಲ’ ಎಂದು ಏನನ್ನು ಬೇಕಾದರೂ ಥಿಯರೈಸ್ ಮಾಡುವವರಿದ್ದಾರೆ. ದಶಕಗಳ ಕೆಳಗೆ ಫುಕೋನ ‘ಡಿಸ್ಕೋರ್ಸ್’ ಪರಿಕಲ್ಪನೆ
ಯನ್ನು ‘ಸಂಕಥನ’ ಎಂದು ಕನ್ನಡ ವಿದ್ವಾಂಸರು ಅನುವಾದ ಮಾಡಿಕೊಂಡ ಮೇಲೆ, ಆರಾಮಜೀವಿಗಳು ಬೇಕಾದದ್ದಕ್ಕೆಲ್ಲ ‘ಸಂಕಥನ’ ಎಂಬ ಪದ ಜೋಡಿಸಿ, ಅದರ ಆಳವಾದ ಅರ್ಥವನ್ನೇ ನಗೆಪಾಟಲಾಗಿಸಿದ್ದು ನೆನಪಾಗುತ್ತದೆ!

ಮೇಲೆ ಪ್ರಸ್ತಾಪಿಸಿದ ಮೂರು ಸ್ಯಾಂಪಲ್ ಹೇಳಿಕೆಗಳ ಹಿಂದಿರುವ ಅಸಲಿ ಕಾರಣಗಳೇನು ಎಂಬುದು ಜನ ಸಾಮಾನ್ಯರಿಗೂ ಗೊತ್ತಾಗುತ್ತಿದೆ. ಈ ನಾಯಕರ ‘ನಿತ್ಯ ಪುರಾಣ ಸೃಷ್ಟಿ’ಗೆ ಜನ ಹಾದಿಬೀದಿಗಳಲ್ಲಿ ಕೊಡುವ ಒರಿಜಿನಲ್ ವ್ಯಾಖ್ಯಾನಗಳ ಅದ್ಭುತ ಮಾದರಿಗಳನ್ನೂ ನೋಡಿ:

ಜನಾಭಿಪ್ರಾಯ 1: ಬಿಜೆಪಿಗೆ ಪ್ರಬಲ ಸವಾಲಾಗಿರುವ ನಾಯಕರಾದ ಸಿದ್ದರಾಮಯ್ಯನವರನ್ನು ಪ್ರತಿದಿನ ಯಾರು ಹೆಚ್ಚೆಚ್ಚು ವಿಕಾರವಾಗಿ ಹೀಗಳೆಯುತ್ತಾರೋ ಅವರಿಗೆ ಪಾರ್ಟಿಯಲ್ಲಿ ಹೆಚ್ಚು ಅಂಕ ಕೊಡುವುದರಿಂದ ಅಶ್ವತ್ಥನಾರಾಯಣ ಕೂಡ ರೇಸಿಗಿಳಿದಿದ್ದಾರೆ. ಆದರೆ ಇದಕ್ಕಿಂತ ‘ಉತ್ತಮ’ವಾದ ಕೆಟ್ಟ ಭಾಷೆ ಬಳಸುವವರು ಬಂದ ತಕ್ಷಣ ಅವರ ಸ್ಥಾನ ಪಲ್ಲಟವಾಗುತ್ತದೆ. ಚುನಾವಣೆ ಮುಗಿಯುವವರೆಗೂ ಪ್ರತಿದಿನ ಒಬ್ಬ ‘ಸುಪಾರಿ ಸ್ಪೀಕರ್’ ಈ ರಿಲೇ ರೇಸ್ ಮುಂದುವರಿಸಲಿದ್ದಾರೆ; ಬೆಳಗ್ಗೆ ಒಬ್ಬರು, ಸಂಜೆ ಒಬ್ಬರು ಸಿದ್ದರಾಮಯ್ಯನವರ ವಿರುದ್ಧ ಇಂಥ ಹೇಳಿಕೆಗಳನ್ನು ಕೊಡಲಿದ್ದಾರೆ. ತಪ್ಪದೆ ವಾಚ್ ಮಾಡಿ.

ಜನಾಭಿಪ್ರಾಯ 2: ಕಾಂಗ್ರೆಸ್ಸಿನ ನಿಷ್ಠಾವಂತ ಕಟ್ಟಾಳುವಾಗಿ ಪಕ್ಷಕ್ಕೆ ತಮ್ಮ ತನು ಮನ ಧನಗಳನ್ನು ಧಾರೆಯೆರೆದಿರುವ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಒಕ್ಕಲಿಗರ ಭಾವನಾತ್ಮಕ ಲಾಬಿಯಿಂದಲಾದರೂ ಸಾಧ್ಯವಾಗಬಹುದೇನೋ ಎಂಬ ಆಸೆಯಿಂದ ಈ ಒಕ್ಕಲಿಗ ರಾಗ ಮತ್ತೆ ಹುಟ್ಟಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಫೀಲರ್-ಟ್ರೈಲರ್ ಮತ್ತೆ ಮತ್ತೆ ಕೇಳಿಬರಲಿದೆ. ಕಾದು ನೋಡಿ.

ಜನಾಭಿಪ್ರಾಯ 3: ಎರಡು ಸಲ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕೆಂದರೆ, ಇನ್ನಿತರ ಮುಖ್ಯಮಂತ್ರಿ ಆಕಾಂಕ್ಷಿಗಳತ್ತ ಬಾಣ ಹೂಡಲೇಬೇಕಾಗುತ್ತದೆ. ಗುರಿ ಯಶಸ್ವಿಯಾದರೆ, ‘ಶತ್ರುವಿನ ಶತ್ರು ನನ್ನ ಮಿತ್ರ’ ಎಂಬಂತೆ ಬಿಜೆಪಿಯ ಇನ್ನಿತರ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಕೆಲವರಾದರೂ ಅವರಿಗೆ ಹತ್ತಿರವಾಗಬಹುದು. ಮುಂದೆ ಅವರ ಬಾಣಗಳು ಯಾರ್‍ಯಾರ ವಿರುದ್ಧ ಹೊರಡುತ್ತವೆ ಎಂಬುದನ್ನು ಕುತೂಹಲದಿಂದ ಗಮನಿಸಿ.

ರಶ್ದಿ ಅವರ ಕಾದಂಬರಿಯ ಪಿಸುಮಾತುಗಳಂತಿರುವ ಈ ಪ್ರತಿಕ್ರಿಯೆಗಳು, ಚುನಾವಣಾ ಕಟ್ಟುಕತೆಗಾರರು ಹೇಳಿದ್ದನ್ನೆಲ್ಲ ನಂಬುವ ದಡ್ಡರಲ್ಲ ನಮ್ಮ ಜನರು ಎಂಬುದನ್ನು ಸಾರುತ್ತವೆ. ಜನರೂ ತಮ್ಮ ಕತೆ ಕಟ್ಟುತ್ತಿರುತ್ತಾರೆ. ಅವರು ನೀವು ಹೇಳುವ ಕತೆಗಳನ್ನು ನುಂಗುವುದಿಲ್ಲ ಎಂಬುದಕ್ಕೆ ದೊಡ್ಡ ಪುರಾವೆ ಈಗಿನ ದೇಶದ ಷೇರು ಮಾರುಕಟ್ಟೆಯ ಪ್ರತಿಕ್ರಿಯೆಯಲ್ಲಿದೆ. ತನ್ನ ವಿರುದ್ಧ ಹಿಂಡನ್‌ಬರ್ಗ್ ವರದಿ ಬಂದ ನಂತರ ಅದಾನಿ ಸಮೂಹ ಪುಟಗಟ್ಟಲೆ ಜಾಹೀರಾತು ಕೊಟ್ಟು ತನ್ನದೇ ಆದ ‘ನೆರೇಟಿವ್‘ ಸೃಷ್ಟಿಸಲು ಯತ್ನಿಸಿತು. ತನ್ನ ವಿರುದ್ಧದ ವರದಿ ದೇಶದ ಮೇಲಿನ ದಾಳಿಯೆಂದು ಬಣ್ಣಿಸಿಕೊಂಡಿತು.

ಆದರೆ ಷೇರು ಮಾರುಕಟ್ಟೆಯ ಸಹಭಾಗಿಗಳು ತಮ್ಮದೇ ಆದ ‘ನೆರೇಟಿವ್’ ಸೃಷ್ಟಿಸುತ್ತಿದ್ದಾರೆ! ಹಿಂಡನ್‌ಬರ್ಗ್ ವರದಿಯು ದೇಶದ ಮೇಲಿನ ದಾಳಿ ಎಂಬ ಕತೆ, ಆನಂತರ ಷೇರು ಮೌಲ್ಯದ ನಿರಂತರ ಕುಸಿತ... ಇವೆಲ್ಲ ಒಂದು ಇನ್ನೊಂದನ್ನು ಮುಗಿಸುವ ನೆರೇಟಿವ್‌ಗಳೋ ಅಥವಾ ಗಟ್ಟಿ ಸಂಶೋಧನೆಯೊಂದು ದೇಶದ ಬೃಹತ್ ವ್ಯಾಪಾರೋದ್ಯಮವನ್ನೇ ಉರುಳಿಸಬಹುದು ಎಂಬ ಹೊಸ ಕಥನದ ಉದಯವನ್ನು ಇದು ಹೇಳುತ್ತಿದೆಯೋ?

ಇಂಥ ಬೆಳವಣಿಗೆಗಳ ನಡುವೆ, ‘ವಿಕ್ಟರಿ ಸಿಟಿ’ ಕಾದಂಬರಿ ಹೇಳುತ್ತಿರುವಂತೆ, ಒಳಿತನ್ನು ಬಿತ್ತಿ ಬೆಳೆಯ ಬಯಸುವವರ ಅಂತರಂಗದ ಪಿಸುದನಿಗಳು ಕೂಡ ಜನರ ಅಂತರಂಗದ ಒಳಿತಿನ ಪಿಸುದನಿಗಳಾಗಿ ಬೆಳೆಯಬಹುದು. ಜೋರುಗಂಟಲ ಚೀರುದನಿಯ ಕಟ್ಟುತೆಗಳಿಗೆ ಜನರ ಪಿಸುಮಾತುಗಳು ಗಟ್ಟಿ ಉತ್ತರವಾಗಬಲ್ಲವು ಎಂಬ ನಂಬಿಕೆಯನ್ನಂತೂ ನಾವು ಎಂದೂ ಕಳೆದುಕೊಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT