ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ: ಆಟಕ್ಕುಂಟು ಲೆಕ್ಕಕ್ಕಿಲ್ಲ

ರೈತರ ಆತ್ಮಹತ್ಯೆ ಪ್ರಕರಣಗಳನ್ನು ಮುಚ್ಚಿಡುವುದರ ಹಿಂದೆ ಅಡಗಿರುವ ರಾಜಕಾರಣ ಏನು?
Last Updated 13 ಅಕ್ಟೋಬರ್ 2020, 1:02 IST
ಅಕ್ಷರ ಗಾತ್ರ
ADVERTISEMENT
""

‘ಮಾಡರ್ನಿಟಿ ಅಟ್ ಲಾರ್ಜ್’ ಎಂಬ ಪುಸ್ತಕದಲ್ಲಿ ಸಮಾಜೋ- ಮಾನವಶಾಸ್ತ್ರಜ್ಞ ಅರ್ಜುನ್ ಅಪ್ಪಾದೊರೈ ಅವರು ಜನಗಣತಿ ರಾಜಕೀಯದ ಬಗ್ಗೆ ಬರೆಯುವಾಗ, ‘ನಮ್ಮಲ್ಲಿ ನೂರಾರು ಸಮುದಾಯಗಳು ಸಾಮಾಜಿಕವಾಗಿ ಅಸ್ತಿತ್ವದಲ್ಲಿದ್ದರೂ ಅನೇಕ ಸಮುದಾಯಗಳು ಸರ್ಕಾರಿ ಪಟ್ಟಿಯಲ್ಲಿ ದಾಖಲಾಗುವುದೇ ಇಲ್ಲ’ ಎಂದು ವಾದಿಸಿದ್ದಾರೆ. ಸಣ್ಣಪುಟ್ಟ ಸಮುದಾಯಗಳು ಸರ್ಕಾರಿ ದಾಖಲೆಗಳಲ್ಲಿ ಉಲ್ಲೇಖವಾಗುವುದು ಅಷ್ಟು ಸುಲಭವಲ್ಲ. ದಾಖಲಾದರೆ ಸಮುದಾಯಗಳ ಸಮಸ್ಯೆಗಳು ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತವೆ ಎಂಬ ವಾದ ಇದೆ. ಆದರೆ, ಅದು ಕೂಡ ಅರ್ಧಸತ್ಯ. ಅದೇನೇ ಇದ್ದರೂ ಸಮುದಾಯಗಳು ಸರ್ಕಾರಿ ಕಡತಗಳಲ್ಲಿ ದಾಖಲಾಗುವುದು ಅತೀ ಅವಶ್ಯಕ. ದಾಖಲಾತಿಯು ಜನಗಣತಿಯ ರೂಪದಲ್ಲಿರಬಹುದು, ಮೀಸಲಾತಿಯ ಪಟ್ಟಿ ರೂಪದಲ್ಲಿರಬಹುದು. ಈ ದಾಖಲಾತಿಗಳಿಲ್ಲದ ಸಮುದಾಯಗಳು ಸರ್ಕಾರಿ ಸೌಲಭ್ಯದಿಂದ ವಂಚಿತವಾಗುತ್ತಾ ಮತ್ತೆ ಮತ್ತೆ ಅಂಚಿಗೆ ತಳ್ಳಿಸಿಕೊಳ್ಳುತ್ತಾ ಹೋಗುವುದು ಕೂಡ ಅಷ್ಟೇ ಸತ್ಯ.

ಡಾ. ಮುಜಾಪ್ಫರ್ ಅಸ್ಸಾದಿ

ರೈತರ ಆತ್ಮಹತ್ಯೆ ಕೂಡ ಈಗ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದು ಒಂದು ಕಹಿ ವಾಸ್ತವ. ಕೊರೊನಾ ಕಾರಣದಿಂದ ವಿಧಿಸಿದ ಲಾಕ್‌ಡೌನ್ ಸಂದರ್ಭದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಸಂಖ್ಯೆ ಕುರಿತು ಕೆಲವು ದಿನಗಳ ಹಿಂದೆ ಸಂಸತ್ತಿನಲ್ಲಿ ಸದಸ್ಯರು ಪ್ರಶ್ನೆ ಕೇಳಿದಾಗ, ತನ್ನ ಬಳಿ ನಿಖರ ದಾಖಲೆ ಇಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. ರೈತರ ಆತ್ಮಹತ್ಯೆ ಕುರಿತು ಪ್ರಶ್ನೆ ಕೇಳಿದಾಗಲೂ ಇದೇ ರೀತಿಯ ಉತ್ತರವನ್ನು ನೀಡಿತ್ತು. ಈ ರೀತಿ ದಾಖಲಾಗದ ವಿಷಯಗಳು ಸಮಕಾಲೀನ ಸಂದರ್ಭದಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿವೆ. ಗ್ರಾಮೀಣ ಪ್ರದೇಶದ ಆರ್ಥಿಕ ನಷ್ಟದ ದಾಖಲೆ, ವಲಸೆ ಕಾರ್ಮಿಕರ ಒಟ್ಟಾರೆ ಉದ್ಯೋಗದ ನಷ್ಟ, ರೈತರ ಆರ್ಥಿಕ ಸ್ಥಿತಿಗತಿಯಂತಹ ವಿಷಯಗಳ ಕುರಿತು ದಾಖಲೆಗಳು ಸಿಗುವುದಿಲ್ಲ.

ರೈತರ ಆತ್ಮಹತ್ಯೆ ಪ್ರಕರಣಗಳನ್ನು ‘ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್‌ ಬ್ಯೂರೊ’ 2015ರವರೆಗೆ ನಿಚ್ಚಳವಾಗಿ ದಾಖಲಿಸುತ್ತಿತ್ತು. ಅದಕ್ಕೆ ಕೆಲವು ನಿಖರ ಕಾರಣಗಳನ್ನು ನೀಡುತ್ತಿತ್ತು. ಅವುಗಳಲ್ಲಿ ಕೃಷಿ ಬಿಕ್ಕಟ್ಟು, ಸಾಲ, ಕೌಟುಂಬಿಕ ಸಮಸ್ಯೆ, ಅನಾರೋಗ್ಯ, ಬೆಳೆನಾಶದಂತಹ ಕಾರಣಗಳಿದ್ದವು. ದುರಂತವೆಂದರೆ, ಈ ದಾಖಲಾತಿಯು ಜಾಗತೀಕರಣದ ಮಾರುಕಟ್ಟೆ ಮತ್ತು ಆತ್ಮಹತ್ಯೆ ನಡುವಿನ ಸಂಬಂಧವನ್ನು, ಕಾರ್ಪೊರೇಟ್ ಬಂಡವಾಳ ಮತ್ತು ಕೃಷಿ ಸಂಸ್ಕೃತಿ ನಡುವಿನ ಬಿಕ್ಕಟ್ಟನ್ನು, ರೈತಾಪಿ ಅಸ್ಮಿತೆಯ ತಾಕಲಾಟವನ್ನು ತನ್ನ ದತ್ತಾಂಶ ಕ್ರೋಡೀಕರಣದ ಸಂದರ್ಭದಲ್ಲಿ ಕಾರಣಗಳಾಗಿ ನೀಡುವುದಿಲ್ಲ. ಇಲ್ಲಿ ಅದು ನೀಡುವ ಕೆಲವು ಕಾರಣಗಳು ಅತ್ಯಂತ ಬಾಲಿಶ ಮತ್ತು ಪೇಲವವೆನಿಸುತ್ತವೆ. ಇಂತಹ ಪೇಲವ ಕಥನಗಳು ಭಾರತದಲ್ಲಿ ಸರ್ವೇಸಾಮಾನ್ಯ ಮತ್ತು ಅದರಲ್ಲೂ ಮದ್ಯವ್ಯಸನ, ಕೌಟುಂಬಿಕ ಕಲಹ, ಭಗ್ನಪ್ರೇಮ, ಮದುವೆಯಂತಹ ಕಥನಗಳನ್ನು ವಿವಿಧ ತನಿಖಾ ಆಯೋಗಗಳು, ಸರ್ಕಾರಿ ನೀತಿಗಳು ರೂಪಿಸಿರುವುದು ಬಹಳ ಸ್ಪಷ್ಟ. ಇದರ ಅಂತಿಮ ಗುರಿಯೆಂದರೆ, ಆತ್ಮಹತ್ಯೆಗೆ ಕಾರಣೀಭೂತವಾದ ಮೂಲ ಆರ್ಥಿಕ ನೀತಿಗಳನ್ನು, ಜಾಗತೀಕರಣದ ಪರಿಣಾಮಗಳನ್ನು ಮರೆಮಾಚಿ ರೈತರೇ ಇದಕ್ಕೆ ಮೂಲ ಕಾರಣ ಎಂದು ಬಿಂಬಿಸುವುದು.

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಕುರಿತು ಅಭ್ಯಸಿಸಲು ನೇಮಕಗೊಂಡ ಸಮಿತಿಯೊಂದು ‘ರೈತರ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ, ಕೌಟುಂಬಿಕ ವಿಷಯಗಳು ಕಾರಣ ಎಂದು ಕರಾರುವಾಕ್ಕಾಗಿ ತೀರ್ಮಾನಿಸಿತ್ತು. ಇನ್ನೊಂದು ರಾಜ್ಯದ ಮಂತ್ರಿಯೊಬ್ಬರು ‘ರೈತರ ಆತ್ಮಹತ್ಯೆಗೆ ಅವರ ಹಿಂದಿನ ಜನ್ಮದ ಕರ್ಮ ಕಾರಣ’ ಎಂದಿದ್ದರು. ಆಧ್ಯಾತ್ಮಿಕ ಚಿಂತಕರೊಬ್ಬರು, ರೈತರ ಆತ್ಮಹತ್ಯೆಗೆ ‘ರೈತರಲ್ಲಿ
ಆಧ್ಯಾತ್ಮಿಕತೆಯ ಕೊರತೆ ಕಾರಣ’ ಎಂದಿದ್ದರು. ಅಲ್ಲದೆ, ರೈತರಿಗೆ ನೀಡುವ ಪರಿಹಾರವೇ ಆತ್ಮಹತ್ಯೆಗೆ ಕಾರಣವೆಂಬ ವಾದವನ್ನು ತೇಲಿಬಿಟ್ಟು ಲಘುವಾಗಿ ಮಾತನಾಡುವ ಜನರೂ ನಮ್ಮಲ್ಲಿ ಇದ್ದಾರೆ.

ರೈತರ ಆತ್ಮಹತ್ಯೆಗಳಿಗೆ ಸಂಬಂಧಿಸಿದ ದಾಖಲಾತಿಯು ಕಾಲಾನಂತರ ಹೆಚ್ಚು ಕಡಿಮೆ ನಿಂತೇ ಹೋಯಿತು. ಇದಕ್ಕೆ ಎರಡು ಕಾರಣಗಳನ್ನು ಮುಂದಿಡಲಾಗುತ್ತದೆ. ಅನೇಕ ರಾಜ್ಯಗಳು ತಮ್ಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಡೆದೇ ಇಲ್ಲವೆಂದು ಪ್ರತಿಪಾದಿಸುತ್ತ ಬಂದಿರುವುದು ಒಂದು ಕಾರಣ. ಅದಕ್ಕೆ ಪೂರಕವೆಂಬಂತೆ, ರೈತರ ಆತ್ಮಹತ್ಯೆಯನ್ನು ಈ ರಾಜ್ಯಗಳು ಸೊನ್ನೆ ಎಂದು ದಾಖಲಿಸುತ್ತಾ ಹೋದವು. ಈ ಕಾರಣದಿಂದ, ರೈತರ ಆತ್ಮಹತ್ಯೆ ಕುರಿತು ತನ್ನ ಬಳಿ ದತ್ತಾಂಶವಿಲ್ಲ ಎಂದು ಸರ್ಕಾರ ಪ್ರತಿಪಾದಿಸುತ್ತಾ ಬಂದಿತು. ದಾಖಲಾತಿ ಸಂದರ್ಭದಲ್ಲಿ ಎಡವಟ್ಟುಗಳಾಗುವುದು ಕೂಡ ಇದೆ. ರೈತರ ಬದಲಿಗೆ ವ್ಯಾಪಾರಸ್ಥರು, ಉದ್ಯಮಿಗಳು ರೈತರೆಂದು ದಾಖಲಾದ ನಿದರ್ಶನಗಳು ಕೆಲವು ರಾಜ್ಯಗಳಲ್ಲಿ ದೊರೆಯುತ್ತವೆ. ಇದು, ವಸಾಹತು ಕಾಲದಲ್ಲಿ ಜನಗಣತಿ ದಾಖಲಾತಿಯಲ್ಲಿ ನಡೆದ ಅಧ್ವಾನವನ್ನು ನೆನಪಿಸುತ್ತದೆ. ವಿರೋಧಾಭಾಸವೆಂದರೆ, ಅದರ ಬಳಿ ರೈತರು ‘ಆ್ಯಕ್ಸಿಡೆಂಟಲ್’ ಅಥವಾ ಅಚಾತುರ್ಯದಿಂದ ಸತ್ತ ದಾಖಲೆಗಳಿವೆ. ಇದರರ್ಥ, ಸರ್ಕಾರಕ್ಕೆ ಒಂದೆಡೆ ರೈತರು ಬೇಕು, ಆದರೆ ಅವರ ಆತ್ಮಹತ್ಯೆಯ ದಾಖಲಾತಿ ಬೇಡ.

ರೈತರ ಆತ್ಮಹತ್ಯೆ ವಿಷಯದಲ್ಲಿ ‘ಸೊನ್ನೆ’ ಎಂದು ದಾಖಲಿಸುವ ರಾಜ್ಯಗಳ ದೊಡ್ಡ ಪಟ್ಟಿಯೇ ಇದೆ. ಪಶ್ಚಿಮ ಬಂಗಾಳ, ಬಿಹಾರ, ಗೋವಾ, ಹರಿಯಾಣ, ಅರುಣಾಚಲ ಪ್ರದೇಶ, ಗುಜರಾತ್, ತಮಿಳುನಾಡು, ಉತ್ತರಾಖಂಡ, ಮಣಿಪುರ, ರಾಜಸ್ಥಾನ ಈ ಯಾದಿಯಲ್ಲಿ ಇವೆ. ಇದರಲ್ಲಿ ತಮಿಳುನಾಡು, ಗುಜರಾತ್, ಹರಿಯಾಣ, ಬಂಗಾಳ ಸತತವಾಗಿ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿದ್ದ ರಾಜ್ಯಗಳು. ಆತ್ಮಹತ್ಯೆಗಳನ್ನು ದಾಖಲಿಸದೇ ಇರುವ ಈ ರೀತಿಯ ರಾಜಕಾರಣ ಹೊಸತಲ್ಲ. ಕೆಲವು ವರ್ಷಗಳ ಹಿಂದೆ ತಮಿಳುನಾಡು ಸರ್ಕಾರವು ಸರಣಿ ಆತ್ಮಹತ್ಯೆಗಳನ್ನು ನಿರಾಕರಿಸಿದಾಗ, ಸ್ವಯಂಸೇವಾ ಸಂಸ್ಥೆಗಳು ನಿಖರ ದಾಖಲೆಗಳನ್ನು ಪ್ರಸ್ತುತಪಡಿಸಿದ್ದವು. ತದನಂತರ ಸರ್ಕಾರ ಈ ತಪ್ಪನ್ನು ಒಪ್ಪಿಕೊಂಡಿತ್ತು. ಛತ್ತೀಸಗಡ 2011ರಿಂದ ಸತತವಾಗಿ ಮೂರು ವರ್ಷ ಮತ್ತು ಪಶ್ಚಿಮ ಬಂಗಾಳ 2012ರಲ್ಲಿ ರೈತರ ಆತ್ಮಹತ್ಯೆಗಳಿಲ್ಲದ ವರ್ಷಗಳೆಂದು ಘೋಷಿಸಿದ್ದವು. ಆದರೆ, ಇದೇ ಸಂದರ್ಭದಲ್ಲಿ ಪ್ರಕಟವಾಗಿದ್ದ ಕೇಂದ್ರ ಸರ್ಕಾರದ ಅಧ್ಯಯನ ವರದಿಯೊಂದು, ಇದನ್ನು ಸಂಪೂರ್ಣವಾಗಿ ತಪ್ಪೆಂದು ಸಾಬೀತುಪಡಿಸಿತ್ತು.

ರೈತರ ಆತ್ಮಹತ್ಯೆಯ ದಾಖಲೆಗಳು ಸಾರ್ವಜನಿಕವಾಗಿ ದೊರೆಯುತ್ತಿದ್ದರೂ ಸರ್ಕಾರಗಳು ಯಾಕೆ ನಿರಾಕರಣೆಯ ನೆಲೆಯಲ್ಲಿ ಪ್ರತಿಕ್ರಿಯಿಸುತ್ತಿವೆ ಎಂಬ ಪ್ರಶ್ನೆ ಇದೆ. ಇದಕ್ಕೆ ಎರಡು ಕಾರಣಗಳಿವೆ. ಜಾಗತೀಕರಣ ಪ್ರಕ್ರಿಯೆಯಲ್ಲಿ ಎಲ್ಲವೂ ಸುಲಲಿತವಾಗಿ ಸಾಗಿವೆ, ತಮ್ಮ ಅಭಿವೃದ್ಧಿ ಮಾದರಿಗಳಲ್ಲಿ ಬಿಕ್ಕಟ್ಟುಗಳು ಇಲ್ಲ ಎಂದು ಪ್ರತಿಬಿಂಬಿಸುವ ಯತ್ನ ಇಲ್ಲಿದೆ. ವಾಣಿಜ್ಯ ಬೆಳೆಗಳಿಗೆ ಹೆಚ್ಚು ಜೋತು ಬಿದ್ದಿರುವುದು, ಒಳಸುರಿಗಳ ಹೆಚ್ಚಳ, ಮಾರುಕಟ್ಟೆಯ ಅನಿಶ್ಚಿತ ಸ್ಥಿತಿ ಮತ್ತು ಜಾಗತೀಕರಣದ ಫಲಶ್ರುತಿಯಾಗಿ ರುವ ಆತ್ಮಹತ್ಯೆಗಳ ಸರಣಿ ವಿವಿಧ ರಾಜ್ಯಗಳಿಗೆ ಹರಡಿದಾಗ, ಕೃಷಿ ಮತ್ತು ಭೂಮಿ ಅದರ ಮೊದಲ ಬಲಿಪಶುಗಳಾದವು. ಇದಕ್ಕೆ ತಕ್ಕಂತೆ ಭೂಸುಧಾರಣೆ ಮತ್ತು ಕೃಷಿ ನೀತಿ ‘ಮಾರುಕಟ್ಟೆ ಆಧಾರಿತ’ವಾದವು.

ಕರ್ನಾಟಕದಲ್ಲಿ 1990ರ ದಶಕದಲ್ಲಿ ರೂಪಿಸಿದ ಕೃಷಿ ನೀತಿ, ಭೂಸುಧಾರಣಾ ಕಾಯ್ದೆಯಲ್ಲಿ ಅಳವಡಿಸಿದ ತಿದ್ದುಪಡಿ ಮತ್ತು ಕೃಷಿಗೆ ಸಂಬಂಧಿಸಿದಂತೆ ಇತ್ತೀಚೆಗೆ ತಂದ ತಿದ್ದುಪಡಿಗಳನ್ನು ಈ ಚೌಕಟ್ಟಿನಲ್ಲಿ ನೋಡಬೇಕು. ಈಕಾಯ್ದೆಗಳ ಕುರಿತ ಚರ್ಚೆ ದೇಶದಲ್ಲಿ ಈಗ ಜೋರಾಗಿ ನಡೆದಿದೆ. ಹರಿಯಾಣ, ಪಂಜಾಬ್‌ನಿಂದ ಕರ್ನಾಟಕದವರೆಗೆ ಪರ–ವಿರೋಧದ ಚರ್ಚೆಗಳು ಸಾಗಿವೆ. ಇದೇ ಸಂದರ್ಭದಲ್ಲಿ ರೈತ ಚಳವಳಿಯು ಮರುಹುಟ್ಟು ಪಡೆದಂತೆ ಕಾಣುತ್ತಿದೆ. ವಿಚಿತ್ರವೆಂದರೆ, ಹೊಸ ಹುಮ್ಮಸ್ಸಿನಿಂದ ಹುಟ್ಟಿರುವ ರೈತ ಹೋರಾಟದ ಕಥನದಲ್ಲಿ ರೈತ ಆತ್ಮಹತ್ಯೆಯ ಉಲ್ಲೇಖವೇ ಇಲ್ಲ!

ಲೇಖಕ: ಮುಖ್ಯಸ್ಥ, ರಾಜ್ಯಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT