ಸೋಮವಾರ, ಮೇ 23, 2022
21 °C
ವನ್ಯ ಮೃಗಗಳು ಸತ್ತಾಗ ಅವುಗಳನ್ನು ಸುಡುವುದು ಅಥವಾ ಹೂಳುವುದರ ಬದಲು ಹಾಗೆಯೇ ಕೊಳೆಯಲು ಬಿಡಬೇಕೇ?

ಪ್ರಾಣಿ ಸತ್ತರೂ ಜೀವ ಪರಿಸರದಲ್ಲಿ ಜೀವಂತ

ಕೃಪಾಕರ ಸೇನಾನಿ Updated:

ಅಕ್ಷರ ಗಾತ್ರ : | |

ಆ ದಿನ ಮುಂಜಾನೆ ಮನೆಯ ಗೇಟಿನ ಚಿಲಕ ಬಡಿಯುತ್ತಾ ‘ಸಾರ್‌... ಸಾರ್‌... ಸಾರ್‌’ ಎಂದು ಯಾರೋ ಗಟ್ಟಿಯಾಗಿ ಕೂಗುತ್ತಿದ್ದಾಗ ಏನೋ ಅನಾಹುತವಾಗಿರಬಹುದೆಂದು ಹೊರಬಂದೆವು. ಗೇಟಿನ ಬಳಿ ಭಾರಿ ಗಾತ್ರದ ಹಗ್ಗಗಳನ್ನು, ಗರಗಸಗಳನ್ನು ಹಿಡಿದು ಕಟ್ಟುಮಸ್ತಾದ ಐದಾರು ಮಂದಿ ನಿಂತಿದ್ದಾಗ ಭಯವಾಯಿತು. ಅವರನ್ನು ಎದುರುಗೊಂಡಾಗ ಅವರು ಏನನ್ನೂ ಮಾತನಾಡದೆ ನಮ್ಮ ಬೆನ್ನ ಹಿಂದೆ ಆಕಾಶದತ್ತ ಮುಖ ಮಾಡಿ ನಿಂತರು. ಅವರು ಏನನ್ನು ನೋಡುತ್ತಿರಬಹುದು ಎಂದು ಅತ್ತ ತಿರುಗಿ ಮತ್ತೆ ಅವರನ್ನು ನೋಡಿದೆವು. ಅವರೆಲ್ಲ ಏಕಾಗ್ರತೆಯಿಂದ ಅದೇ ದಿಕ್ಕಿಗೆ ದೃಷ್ಟಿ ಹರಿಸಿ ಸ್ತಬ್ಧವಾಗಿಯೇ ನಿಂತಿದ್ದರು.

ಮೌನ ಮುರಿದು ‘ಏನು ವಿಷಯ’ ಎಂದು ಪ್ರಶ್ನಿಸಿದ್ದಕ್ಕೆ, ‘ಎಲ್ಲಾ ಕಡೆ ಆರು ಸಾವಿರ ತೆಗೆದುಕೊಳ್ಳುತ್ತಾರೆ. ನಾವು ಮೂರು ಸಾವಿರಕ್ಕೆ ಮುಗಿಸಿ ಬಿಡುತ್ತೇವೆ’ ಎಂದಾಗ ಇನ್ನಷ್ಟು ದಿಗಿಲಾಯಿತು.

‘ಮತ್ತೆ ಏನು’ ಎಂಬ ಪ್ರಶ್ನೆಗೆ, ಮನೆಯ ಅಂಗಳದಲ್ಲಿ ವಯಸ್ಸಾಗಿ ಗರಿಗಳಿಲ್ಲದೆ ಕಂಬವಾಗಿ ನಿಂತಿದ್ದ ತೆಂಗಿನಮರವನ್ನು ತೋರಿದರು. ಅದು ಬೇಡವೆಂದಾಗ ‘ಅಶುಭ ಸಾರ್‌, ಮನೆ ಸಮೃದ್ಧಿಯಾಗಲ್ಲ’ ಎಂದು ಶಕುನ ನುಡಿದು ಹೊರನಡೆದರು. ಮುಂದಿನ ಹಲವಾರು ವಾರಗಳ ಕಾಲ ಒಬ್ಬರಲ್ಲ ಒಬ್ಬರು ಒಣಗಿ ನಿಂತ ತೆಂಗಿನಮರ ಮನೆಯಲ್ಲಿ ಇರಬಾರದೆಂದು ಸಲಹೆ ನೀಡುತ್ತಲೇ ಇದ್ದರು.

ಮಳೆಗಾಲ ಬಂದಾಗ, ರುಂಡವಿಲ್ಲದ ಮರದ ನೆತ್ತಿಯಲ್ಲಿ ಬಗೆಬಗೆಯ ಶಿಲೀಂಧ್ರಗಳು ವಿವಿಧ ಸ್ವರೂಪಗಳಲ್ಲಿ ಹೂವಾಗಿ ಅರಳಿದವು. ಕನಿಷ್ಠ ನಾಲ್ಕು ಜೋಡಿ ಗಿಳಿಗಳು ಬೆಳಿಗ್ಗೆ ಮತ್ತು ಸಂಜೆಯಲ್ಲಿ ಬಂದು ಸತ್ತಮರವನ್ನು ಅಪ್ಪಿಹಿಡಿದು ತಮ್ಮ ಎಲ್ಲಾ ಬಣ್ಣಗಳನ್ನು ಪ್ರದರ್ಶಿಸುತ್ತಿದ್ದವು. ಜೊತೆಗೆ ಪರಸ್ಪರ ಏನನ್ನೋ ಮಾತನಾಡಿಕೊಳ್ಳುತ್ತಿದ್ದವು. ಚಳಿಗಾಲಕ್ಕೆ ಬಾರ್ಬೆಟ್‌ ಹಕ್ಕಿಗಳು ಮರದಲ್ಲಿ ಪೊಟರೆ ಕೊರೆದವು. ಗೂಡಿನ ಕೆಲಸ ನಡೆಯುತ್ತಿದ್ದಾಗ ನಡುನಡುವೆ ಪಿಕಳಾರ ಹಕ್ಕಿಗಳು ದಾರದಂತಹ ನಾರುಗಳನ್ನು ಕದ್ದು ಗಿಡಗಳಲ್ಲಿ ಗೂಡು ಹೆಣೆದವು.

ಬಾರ್ಬೆಟ್‌ಗಳ ಪೊಟರೆ ಸಿದ್ಧವಾಗುತ್ತಿದ್ದಂತೆಯೇ ಮೈನಾಗಳು, ಗಿಳಿಗಳು ಬಂದವು. ಬಾರ್ಬೆಟ್‌ ಮರಿ ಮಾಡಿದ ಬಳಿಕ ಆ ಗೂಡು ತನಗೆಂದು ಜಗಳಾಡಿದವು. ಮರಿಗಳೊಂದಿಗೆ ಬಾರ್ಬೆಟ್‌ ಹೊರನಡೆದಾಗ ಮೈನಾ, ಬಳಿಕ ಗಿಳಿಗಳು ಅಲ್ಲಿ ಸಂಸಾರ ಹೂಡಿದವು.

ಮರುವರ್ಷ ಮಳೆ ನೀರು ಪೊಟರೆಯೊಳಗೆ ಇಳಿದಾಗ ನೆತ್ತಿಯ ಸ್ವಲ್ಪ ಭಾಗ ಕುಸಿಯಿತು. ಮತ್ತೆ ಹೂ ಮುಡಿಸಿದಂತೆ ಶಿಲೀಂಧ್ರಗಳ ದರ್ಬಾರು. ಬಾರ್ಬೆಟ್‌ಗಳ ಆಗಮನ. ಗರಿಗಳೆಲ್ಲ ಮಾಯವಾಗಿ ನೆಲಕ್ಕೆ ಬಿದ್ದ ಬೆಳಕಿಗೆ ಸ್ಪಂದಿಸಿ ಮರವೇರಿದ ಬಳ್ಳಿಗಳಿಂದ ಬಣ್ಣ ಬಣ್ಣದ ಹೂವುಗಳು ಅರಳಿದವು. ಚಿಟ್ಟೆಗಳ ಹಾರಾಟ ಜೇನುಗಳ ಝೇಂಕಾರ ಮುಂದುವರಿಯಿತು.

ಕ್ರಮೇಣ ಐದು ವರ್ಷಗಳಲ್ಲಿ ಹಂತ ಹಂತವಾಗಿ ಕುಸಿದು ಬಿದ್ದ ಮರವನ್ನು ಹುಳುಗಳು ಅವಶೇಷ ಇಲ್ಲದಂತೆ ಕರಗಿಸಿಬಿಟ್ಟವು. ನಂತರ ಆ ಮಣ್ಣಿನಲ್ಲಿ ಹುಳು ಹುಪ್ಪಟೆಗಳ ಸಂಸಾರ. ಆ ಹುಳುಗಳನ್ನು ಹೆಕ್ಕಲು ಬಂದ ಹಕ್ಕಿಗಳ ಪಾಲಿಗೆ ಯಥೇಚ್ಛ ಆಹಾರ.

ಕಾಡಿನಲ್ಲಿ ಒಣಗಿ ನಿಂತ, ನೆಲಕ್ಕುರುಳಿದ ಮರಗಳು ನಿರುಪಯುಕ್ತ, ಅವುಗಳನ್ನು ಮಾರುಕಟ್ಟೆಗೆ ಒಯ್ಯುವುದು ಆರ್ಥಿಕ ಲಾಭ ಎಂಬ ಬಗ್ಗೆ ಚರ್ಚೆ ದಶಕಗಳ ಹಿಂದೆ ನಡೆದಿತ್ತು. ಜೀವಪರಿಸರದಲ್ಲಿ ಲಾಭ ನಷ್ಟ, ಉಪಯುಕ್ತತೆಗಳನ್ನು ಅಂದಾಜಿಸುವ ಮಾನದಂಡ ಯಾವುದು? ಹೇಗೆ? ಎಂಬ ಪ್ರಶ್ನೆಗೆ ಬದುಕು ಪೂರೈಸಿ ಒಣಗಿ ನಿಂತ ತೆಂಗಿನಮರದ ಸುತ್ತ ಜರುಗುವ ಚಟುವಟಿಕೆ ಉದಾಹರಣೆಯಾಗಬಲ್ಲದು.

ಇದೇ ರೀತಿ ಜೀವಪರಿಸರದಲ್ಲಿ ಸತ್ತ ಪ್ರಾಣಿ–ಪಕ್ಷಿಗಳ ಮೃತದೇಹಗಳ ಪಾತ್ರಗಳನ್ನು ಮೇಲ್ನೋಟದಲ್ಲಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಅವುಗಳ ಪಾತ್ರ ಸಹಜವಾಗಿ ಮತ್ತು ಸಂಕೀರ್ಣವಾಗಿ ವಿನ್ಯಾಸಗೊಂಡಿರುತ್ತದೆ. ಕಾಡಿನಲ್ಲಿ ಸತ್ತ ಜೀವಿಗಳನ್ನು ಇದ್ದಂತೆಯೇ ಬಿಟ್ಟುಬಿಡಬೇಕೆಂಬ ಆದೇಶ ಮೇಲಿನ ಉದಾಹರಣೆಗೆ ಪೂರಕವಾಗಿದೆ.

ಈ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ವಿವರಿಸಬಹುದಾದರೆ, ಬದುಕಿರುವ ಅಥವಾ ಸತ್ತಿರುವ ಯಾವುದೇ ಜೀವಿಯು ಸಂಕೀರ್ಣವಾದ ಆಹಾರಜಾಲಗಳ ಮತ್ತು ಪೌಷ್ಟಿಕಾಂಶ ಸರಬರಾಜು ಸರಪಣಿಯ ಒಂದು ಭಾಗ.

ಬ್ಯಾಕ್ಟೀರಿಯಾ, ಏಕಕೋಶ ಜೀವಿಗಳು, ಕೀಟಗಳು ಮತ್ತು ಜಂತುಗಳ ಅಸಂಖ್ಯಾತ ಪ್ರಭೇದಗಳು ಮತ್ತು ಶಿಲೀಂಧ್ರವರ್ಗದ ಕೆಲವು ಪ್ರಭೇದಗಳು ವಸ್ತುವನ್ನು ಒಡೆಯುವ ಅಥವಾ ಕೊಳೆಯಿಸುವ ಕಾರ್ಯದಲ್ಲಿ ಭಾಗಿಯಾಗುತ್ತವೆ. ಅಂದರೆ,  ವಸ್ತುಗಳನ್ನು ರಾಸಾಯನಿಕ ಮೂಲ ವಸ್ತು ಇಲ್ಲವೇ ಸಂಯುಕ್ತ ವಸ್ತುಗಳನ್ನಾಗಿ ಒಡೆದು ಜೀವವ್ಯವಸ್ಥೆಯ ಭಾಗವಾಗುವಂತೆ ಮರಳಿ ಅದಕ್ಕೆ ಸೇರಿಸುತ್ತವೆ. ಬೇಟೆಗಾರ ಪ್ರಾಣಿಗಳು ಸಹ ಸಾಂದರ್ಭಿಕವಾಗಿ ಕಡಿಮೆ ಶಕ್ತಿ ವ್ಯಯಿಸಿ ಆಹಾರ ಸಂಪಾದಿಸುವ ಈ ಸ್ವಭಾವವನ್ನು ಮೈಗೂಡಿಸಿಕೊಂಡಿರುತ್ತವೆ.

ಉದಾಹರಣೆಗೆ ಹುಲಿ, ಚಿರತೆ, ಕಾಡುನಾಯಿಗಳೆಲ್ಲ ಬೇಟೆಗಾರ ಪ್ರಾಣಿಗಳಾದರೂ, ಅವಕಾಶ ಸಿಕ್ಕಾಗ ಸತ್ತಪ್ರಾಣಿಗಳನ್ನು ತಿನ್ನುತ್ತವೆ. ಕಾರಣವಿಷ್ಟೆ, ಬೇಟೆ ಇವುಗಳ ಕಲೆ ಮತ್ತು ಕಸುಬಾದರೂ ಪರಿಶ್ರಮ, ಅಪಾಯವಿಲ್ಲದೆ ದಕ್ಕುವ ಆಹಾರ ಯಾರಿಗೆ ಬೇಕಿಲ್ಲ?

ಜೀವರಾಸಾಯನಿಕವಾಗಿ ಯಾವುದೇ ಜೀವಪರಿಸ್ಥಿತಿ ವ್ಯವಸ್ಥೆಯು ಪೂರ್ಣ ಮುಕ್ತವಾಗಿರುವುದಿಲ್ಲ. ಅಂದರೆ ಕಾರ್ಬನ್ ಡೈ ಆಕ್ಸೈಡ್‌, ನೈಟ್ರೋಜನ್‌ನಂಥ ಕೆಲವು ವಸ್ತುಗಳನ್ನು ಹೊರಗಿನ ವ್ಯವಸ್ಥೆಯಿಂದ ಪಡೆಯುತ್ತವೆ. ಅಲ್ಲದೆ ಅಗತ್ಯವಿರುವ ಪೋಷಕಾಂಶಗಳನ್ನು ಜೀವರಾಸಾಯನಿಕ ಕ್ರಿಯೆಗಳಿಂದ ವಿಘಟಿಸುವ ಜೀವಿಗಳು ಉತ್ಪಾದಿಸುತ್ತವೆ. ಒಟ್ಟಾರೆ, ಪ್ರಕೃತಿಯಲ್ಲಿ ಪೋಷಕಾಂಶಗಳು ಮತ್ತು ಶಕ್ತಿಯ ಪುನರ್ಬಳಕೆಯಾಗುವ ವರ್ತುಲಕ್ಕೆ ಮೃತ ಪದಾರ್ಥಗಳ ವಿಘಟನೆ ಒಂದು ಬಹುಮುಖ್ಯ ಪ್ರಕ್ರಿಯೆ.

ಸಹಜ ವಿಘಟನೆಯಿಂದ ಉತ್ಪತ್ತಿಯಾಗುವ ಜೈವಿಕ ರಾಸಾಯನಿಕಗಳು ಮಣ್ಣಿನಲ್ಲಿ ಪೋಷಕಾಂಶಗಳ ಖಜಾನೆಯನ್ನು ಸೃಷ್ಟಿಸಿ ಹುಲ್ಲು ಮತ್ತು ಇತರ ಕುರುಚಲು ಸಸ್ಯಗಳ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಇದರ ನೇರ ಪರಿಣಾಮ ಅವುಗಳನ್ನು ಅವಲಂಬಿಸಿರುವ ಸಸ್ಯಾಹಾರಿ ಪ್ರಾಣಿಗಳ ಮೇಲೆ ಉಂಟಾಗುತ್ತದೆ.

ಹಾಗಾಗಿ ಅಂತ್ರಾಕ್ಸ್‌ ತರಹದ ಕೆಲವು ಸಾಂಕ್ರಾಮಿಕ ರೋಗಗಳಿಂದ ಸತ್ತ ಪ್ರಾಣಿಗಳನ್ನು ಹೊರತಾಗಿ ಉಳಿದ ಪ್ರಾಣಿಗಳ ಮೃತದೇಹ ಪ್ರಕೃತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.

ಸೂಕ್ಷ್ಮಜೀವಿಗಳು, ಕೊಲಿಯೊ ಪ್ಟೆರಾನ್‌ಗಳಿಂದ ಹಿಡಿದು ಹಲವಾರು ಮಾಂಸಾಹಾರಿ ಪ್ರಾಣಿಗಳಿಗೆ ಮೃತದೇಹಗಳು ನೇರವಾದ ಆಹಾರ. ಯುರೋಪಿನ ಬೈಸನ್‌ಗಳ ಮೇಲೆ ನಡೆದಿರುವ ವೈಜ್ಞಾನಿಕ ಸಂಶೋಧನೆಗಳು ಹಲವಾರು ಕುತೂಹಲಕಾರಿ ಅಂಶಗಳನ್ನು ಬೆಳಕಿಗೆ ತಂದಿವೆ. ಬೈಸನ್‌ಗಳ ಮೃತದೇಹಗಳನ್ನು ಸಹಜವಾಗಿ ವಿಘಟನೆ ಹೊಂದಲು ಬಿಟ್ಟಾಗ ಅಲ್ಲಿನ ಭೂಮಿಯಲ್ಲಿ ನೈಟ್ರೇಟ್‌ ಅಂಶ ಹೆಚ್ಚಾಗಿ ಅದು ಮುಂದಿನ ಒಂದು ವರ್ಷದವರೆಗೆ ಇರುವುದೆಂದು ತಿಳಿದು ಬಂದಿತು. ಅಲ್ಲದೆ, ಮಣ್ಣಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿ ಮುಂದಿನ ಏಳು ವರ್ಷಗಳ ಕಾಲ ಉಳಿದು ಬಂದಿರುವುದು ದಾಖಲಾಗಿದೆ.

ಫಲ ನೀಡುವವರೆಗೆ ಕಲ್ಪವೃಕ್ಷವಾಗಿ, ಸತ್ತಾಗ ಅಪಶಕುನದ ಸಂಕೇತವಾಗಿ ಕಾಣುವ ತೆಂಗಿನಮರ ಜೀವಪರಿಸರದೊಂದಿಗೆ ನಡೆಸಿದ ಸಂವಾದದಂತೆ ಸತ್ತ ಪ್ರಾಣಿ–ಪಕ್ಷಿಗಳ ದೇಹಗಳು ಸಹ ಪ್ರಕೃತಿಯಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಿರುತ್ತವೆ. ಜೀವಪರಿಸರದಲ್ಲಿ ಅದು ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸತ್ತ ಜೀವಿಗಳನ್ನು ಕಾಡಿನಲ್ಲಿ ಇದ್ದಂತೆಯೇ ಬಿಟ್ಟುಬಿಡಬೇಕೆಂಬ ಅರಣ್ಯ ಇಲಾಖೆಯ ಆದೇಶ ವೈಜ್ಞಾನಿಕ ಮತ್ತು ವಿವೇಕದ ನಿರ್ಧಾರ. ಎಂದೋ ಆಗಬೇಕಿದ್ದ ಈ ತೀರ್ಮಾನ ತಡವಾಗಿಯಾದರೂ ಸಾಧ್ಯವಾಗಿದ್ದು ಸ್ವಾಗತಾರ್ಹ.

ಲೇಖಕರು: ಗ್ರೀನ್‌ ಆಸ್ಕರ್‌ ಪ್ರಶಸ್ತಿ ಪುರಸ್ಕೃತರು , ವನ್ಯಜೀವಿ ತಜ್ಞರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು