ಗುರುವಾರ , ನವೆಂಬರ್ 26, 2020
20 °C
ಕೆಲವು ನಾಯಕಿಯರ ಸ್ವಸಾಮರ್ಥ್ಯವನ್ನು ಮನಗಾಣಲು ಪುರುಷನಿಗೆ ದಶಕಗಳೇ ಬೇಕಾದವು

ವಿಶ್ಲೇಷಣೆ: ಹೆಣ್ಣಿನ ಕುರಿತ ಕೆಲವು ಮಿಥ್ಯೆಗಳು

ಟಿ.ಎನ್‌.ವಾಸುದೇವಮೂರ್ತಿ Updated:

ಅಕ್ಷರ ಗಾತ್ರ : | |

ನಮ್ಮ ಸಂವಿಧಾನವು ಸ್ತ್ರೀ– ಪುರುಷರ ನಡುವೆ ತಾರತಮ್ಯವನ್ನು ಎಣಿಸದಿದ್ದರೂ ಸಂವಿಧಾನದ ಆಶಯಗಳನ್ನು ಪಾಲಿಸುತ್ತಿರುವಂತೆ ಸೋಗು ಹಾಕುವವರು ಲಿಂಗಭೇದದ ಆಚೆಗಿನ ನೆಲೆಯಲ್ಲಿ ನಿಂತು, ಸಹಜವಾಗಿ ಹೆಣ್ಣನ್ನು ನೋಡುವ ದೃಷ್ಟಿಯನ್ನಿನ್ನೂ ಬೆಳೆಸಿಕೊಂಡಿಲ್ಲ. ಇಂದಿರಾ ಗಾಂಧಿಯಂತಹವರು ರಾಜಕೀಯ ಗೆಲುವಿನ ಏಣಿ ಹತ್ತುವಾಗ ಅವರ ಸುತ್ತಲಿನ ಜನ ಅವರನ್ನು ‘ದುರ್ಗಾಮಾತೆ’ ಎಂದು ಸ್ತುತಿಸಿದರು. ಆಕೆ ಪತನಗೊಂಡಾಗ ಅದೇ ಜನ ‘ಕುತಂತ್ರ ಬುದ್ಧಿಯ ನರಿ’, ‘ಮಾಟಗಾತಿ’ ಎಂದೆಲ್ಲ ಪ್ರಚಾರ ಮಾಡಿದರು. ಒಟ್ಟಿನಲ್ಲಿ ಇವರ ಪಾಲಿಗೆ ಹೆಣ್ಣು ದೈವವಾಗಿರಬೇಕು ಇಲ್ಲವೇ ಪಶುವಾಗಿರಬೇಕು.

ಹೆಣ್ಣು ತಮ್ಮೊಂದಿಗೆ ಸಹಬಾಳ್ವೆ ಮಾಡುತ್ತಿರುವ, ತನ್ನಂತೆಯೇ ರಕ್ತಮಾಂಸವುಳ್ಳ ಒಬ್ಬ ಮಾನವಜೀವಿ ಎಂಬಂತೆ ನೋಡಲು ಕಲಿತಿಲ್ಲ ಅಥವಾ ಹಾಗೆ ನೋಡಲು ಇವರಿಗೆ ಇಷ್ಟವಿದ್ದಂತಿಲ್ಲ. ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಕಮಲನಾಥ್, ಬಿಜೆಪಿ ನಾಯಕಿ ಇಮಾರ್ತಿ ದೇವಿಯವರನ್ನು ಇತ್ತೀಚೆಗೆ ‘ಐಟಂ’ ಎಂದು ಕರೆದದ್ದನ್ನು ನೋಡಿದರೂ ಇದೇ ಅನಿಸಿಕೆ ದೃಢವಾಗುತ್ತದೆ.

ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಹೆಣ್ಣಿನ ರಾಜಕೀಯ ಪ್ರಜ್ಞೆ ಹೆಚ್ಚುತ್ತಲೇ ಇದ್ದರೂ ನಮ್ಮ ರಾಜಕೀಯ ವಲಯದಲ್ಲಿ ವ್ಯಾಪಿಸಿರುವ ಕೆಲವು ಮಿಥ್ಯೆಗಳು ಇನ್ನೂ ಹಾಗೇ ಉಳಿದಿವೆ. ‘ಹೆಣ್ಣಿಗೆ ಹೆಣ್ಣೇ ವೈರಿ’ ಎಂಬುದು ಅಂತಹ ಮೊದಲ ಮಿಥ್ಯೆಯಾಗಿದೆ. ಇಂತಹ ಮಿಥ್ಯೆಗಳನ್ನು ಮೊದಲು ತೊಡೆದು ಹಾಕಬೇಕಾಗಿದೆ.

ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಒಬ್ಬ ಮಹಿಳಾ ಅಭ್ಯರ್ಥಿ ಸ್ಪರ್ಧಿಸಲು ನಿರ್ಧರಿಸಿದಾಗ ಇದೇ ಮಿಥ್ಯೆಯನ್ನು ಆಕೆಯ ಮೇಲೆ ಪ್ರಯೋಗಿಸಲಾಯಿತು. ಕೆಲವು ಮಾಧ್ಯಮಗಳು ಆ ಮಹಿಳಾ ಅಭ್ಯರ್ಥಿಯ ಅತ್ತೆ (ಆಕೆಯ ಮೃತ ಗಂಡನ ತಾಯಿ) ವಾಸಿಸುತ್ತಿದ್ದ ಕುಗ್ರಾಮಕ್ಕೆ ತೆರಳಿ, ಆಕೆಯನ್ನು ಈಕೆಯ ವಿರುದ್ಧ ಎತ್ತಿಕಟ್ಟುವ ಹುನ್ನಾರ ಮಾಡಿದವು. ಒಟ್ಟಿನಲ್ಲಿ ಆ ಮಹಿಳಾ ಅಭ್ಯರ್ಥಿಯ ತೇಜೋವಧೆ ಮಾಡುವುದು ಹೀಗೆ ಚಿತಾವಣೆ ಮಾಡಿದವರ ಹುನ್ನಾರವಾಗಿತ್ತು. ಅತ್ತೆಗೆ ಸೊಸೆಯ ಮೇಲಿದ್ದ ವೈಯಕ್ತಿಕ ಅಸಮಾಧಾನಗಳನ್ನೆಲ್ಲ ಸಾರ್ವಜನಿಕಗೊಳಿಸಿ, ಕೊನೆಗೆ ‘ಹೆಣ್ಣಿಗೆ ಹೆಣ್ಣೇ ವೈರಿ’ ಎಂಬ ಭರತವಾಕ್ಯದೊಂದಿಗೆ ಅವು ಕೃತಾರ್ಥಭಾವ ಅನುಭವಿಸಿದವು.

ಹಾಗಿದ್ದರೆ ಗಂಡಿಗೆ ಗಂಡು ಮಿತ್ರನೇ? ಒಬ್ಬ ಗಂಡು ಮತ್ತೊಬ್ಬನ ಮೇಲೆ ಹಿಂಸಾಚಾರ, ಹತ್ಯೆ, ಲೂಟಿಯನ್ನು ಮಾಡುವುದೇ ಇಲ್ಲವೆ? ಹೀಗೆ ಲಿಂಗಭೇದ ತರುವ ಉದ್ದೇಶ ಹೆಣ್ಣನ್ನು ಹಣಿಯುವುದಾಗಿದೆ ಅಷ್ಟೇ. ಮನುಷ್ಯ ಸಹಜ ಗುಣಾವಗುಣಗಳ ನಡುವೆ ಲಿಂಗಭೇದವಿರಲು ಸಾಧ್ಯವಿಲ್ಲ.

‘ಹಿಂಸೆ, ಅಪರಾಧಗಳಿಂದಲೇ ತುಂಬಿರುವ ರಾಜಕೀಯದಲ್ಲಿ ಹೆಣ್ಣಿಗೆ ಆಸಕ್ತಿ ಇರುವುದಿಲ್ಲ’ ಎಂಬುದು ನಾವು ಬೆಳೆಯಿಸಿರುವ ಇನ್ನೊಂದು ಮಿಥ್ಯೆಯಾಗಿದೆ. ನಿಜವೇನೆಂದರೆ ಹೆಣ್ಣು, ಪುರುಷನಿಗಿಂತಲೂ ಉತ್ಸಾಹದಿಂದ ಮತ್ತು ಪ್ರಾಮಾಣಿಕತೆಯಿಂದ ರಾಜಕೀಯವಾಗಿ ಸಕ್ರಿಯವಾಗಿದ್ದಾಳೆ. ಹೆಣ್ಣುಮಕ್ಕಳ ಈ ಪಾಲ್ಗೊಳ್ಳುವಿಕೆಯನ್ನು ಪ್ರವರ್ಧಿಸಲೆಂದೇ ಎಂಬತ್ತರ ದಶಕದಲ್ಲಿ ನಮ್ಮ ರಾಷ್ಟ್ರೀಯ ಪಕ್ಷಗಳು ಬಿಜೆಪಿ ಮಹಿಳಾ ಮೋರ್ಚಾ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಂತಾದ ಪ್ರತ್ಯೇಕ ಮಹಿಳಾ ವಿಭಾಗಗಳನ್ನು ಪ್ರಾರಂಭಿಸಿದವು. ಈಗ ಎರಡರಲ್ಲೂ ಕೋಟ್ಯಂತರ ಮಹಿಳಾ ಕಾರ್ಯಕರ್ತರು ನೋಂದಾಯಿಸಿಕೊಂಡು, ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ರಾಜಕೀಯ ಪಾಲ್ಗೊಳ್ಳುವಿಕೆ ಎಂದರೆ ಬರೀ ವೋಟು ಹಾಕುವುದಲ್ಲ, ಚುನಾವಣೆಯಲ್ಲಿ ನಿಂತು ಕ್ಷೇತ್ರವನ್ನು ಪ್ರತಿನಿಧಿಸುವುದೂಪಾಲ್ಗೊಳ್ಳುವಿಕೆಯೇ ಆಗಿದೆ. ಈ ಎರಡೂ ಪಾಲ್ಗೊಳ್ಳುವಿಕೆಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ. 1962ರಿಂದ ಇಂದಿನವರೆಗೆ ಮತ ಚಲಾಯಿಸಿದ ಮಹಿಳೆಯರ ಪ್ರಮಾಣದಲ್ಲಿ ಶೇ 27ರಷ್ಟು ಹೆಚ್ಚಾಗಿದ್ದರೆ, ಪುರುಷರಲ್ಲಿ ಈ ಸಂಖ್ಯೆ ಕೇವಲ ಶೇ 7ರಷ್ಟು ಏರಿದೆ.

ಹೆಣ್ಣು ಗೆದ್ದುಬಂದರೂ ಅವಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾರಳು; ಅವಳ ಗಂಡ ಅಥವಾ ಮಗ ಅಥವಾ ಯಾವುದೇ ಪುರುಷ ಸಂಬಂಧಿಯ ಹಿತಾಸಕ್ತಿಗೆ ಅನುಗುಣವಾಗಿ ಆಡಳಿತ ನಡೆಸುತ್ತಾಳೆ ಎಂಬುದು ಮತ್ತೊಂದು ಮಿಥ್ಯೆಯಾಗಿದೆ. ಹಾಗಿದ್ದರೆ ಪುರುಷ ಅಭ್ಯರ್ಥಿಗಳು ಯಾರ ಹಿತಾಸಕ್ತಿಗಾಗಿ, ಯಾವ ಉದಾತ್ತ ಉದ್ದೇಶಕ್ಕಾಗಿ ಆಡಳಿತ ನಡೆಸುತ್ತಾರೆ? ಇಂದು ದೇಶದುದ್ದಗಲಕ್ಕೂ ಗ್ರಾಮ ಪಂಚಾಯಿತಿ ಹಂತದಿಂದ ಹಿಡಿದು ಸಂಸತ್ತಿನವರೆಗೆ ಲಕ್ಷಾಂತರ ಮಹಿಳಾ ಪ್ರತಿನಿಧಿಗಳಿದ್ದಾರೆ. ಅವರ ಪೈಕಿ ಎಷ್ಟೆಷ್ಟು ಮಂದಿ ಮಹಿಳೆಯರು ಪುರುಷ ಹಿತಾಸಕ್ತಿಗೆ ಅನುಗುಣವಾಗಿ ಆಡಳಿತ ನಡೆಸುತ್ತಿದ್ದಾರೆ ಎಂಬ ಬಗ್ಗೆ ಇವರ ಬಳಿ ಅಂಕಿ ಅಂಶಗಳೇನಾದರೂ ಉಂಟೇ? ಜಪಾನಿನ ವಿಶ್ವವಿದ್ಯಾಲಯವೊಂದು 1992- 2012ರ ಅವಧಿಯಲ್ಲಿ ನಡೆಸಿರುವ ಒಂದು ಸರ್ವೇಕ್ಷಣೆಯ ಪ್ರಕಾರ, ನಮ್ಮಲ್ಲಿ ಮಹಿಳಾ ಪ್ರಾತಿನಿಧ್ಯವಿರುವ ವಿಧಾನಸಭಾ ಕ್ಷೇತ್ರಗಳು ಜಿಡಿಪಿಗೆ ಶೇ 1.8ರಷ್ಟು ಹೆಚ್ಚಿನ ಕೊಡುಗೆ ನೀಡಿವೆ. ಮಹಿಳಾ ಜನಪ್ರತಿನಿಧಿಗಳ ನೇತೃತ್ವದ ಕ್ಷೇತ್ರಗಳಲ್ಲಿ ಆರ್ಥಿಕ ಪ್ರಗತಿಯೂ ಹೆಚ್ಚಿದೆ. ಪೊಲೀಸ್ ಠಾಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗಿಂತ ಪುರುಷ ಅಭ್ಯರ್ಥಿಗಳ ಅಪರಾಧ ಕೃತ್ಯಗಳು ಮೂರು ಪಟ್ಟು ಹೆಚ್ಚಿಗೆ ದಾಖಲಾಗಿವೆ.

ಸತ್ಯಾಸತ್ಯತೆಯನ್ನು ಬಗೆದು ನೋಡಬೇಕಾದ ಇಂತಹ ಇನ್ನೂ ಹತ್ತು ಹಲವು ಮಿಥ್ಯೆಗಳಿವೆ. ಇವೆಲ್ಲ ಹೆಣ್ಣನ್ನು ನಿಯಂತ್ರಣದಲ್ಲಿ ಇರಿಸಲೆಂದೇ ಸೃಷ್ಟಿಸಲಾದ ಮಿಥ್ಯೆಗಳಾಗಿವೆ. ಹೆಣ್ಣು ಈ ಎಲ್ಲ ಮಿಥ್ಯೆಗಳನ್ನೂ ಹರಿದು ಪುರುಷನಿಗೆ ಹೆಗಲೆಣೆಯಾಗಿ ನಿಂತಾಗ, ಪುರುಷನಾದವನು ತನ್ನ ಕೊನೆಯ ಅಸ್ತ್ರವನ್ನು ಅವಳ ಮೇಲೆ ಪ್ರಯೋಗಿಸುತ್ತಾನೆ. ಅಂದರೆ ಕಮಲ‌ನಾಥ್‌ ಅವರಂತೆ ಅವಳ ಶೀಲ–ಚಾರಿತ್ರ್ಯಗಳನ್ನು ಪ್ರಸ್ತಾಪಿಸುವ ‘ಐಟಂ’ ಮಾತುಗಳನ್ನು ಆಡುತ್ತಾರೆ.

ಇಲ್ಲಿ ಹೆಣ್ಣೆಂದ ಮಾತ್ರಕ್ಕೆ ಎಲ್ಲ ಹೆಣ್ಣುಮಕ್ಕಳನ್ನೂ ರಾಜಕಾರಣದಲ್ಲಿ ಏಕರೂಪದಲ್ಲಿ ನಡೆಸಿಕೊಳ್ಳಲಾಗುವುದಿಲ್ಲ. ಹಣ, ಜಾತಿ, ರಾಜಕೀಯ ಹಿನ್ನೆಲೆಗಳಲ್ಲಿ ಉನ್ನತ ಸ್ಥಾನದಲ್ಲಿರುವ ಹೆಣ್ಣುಮಕ್ಕಳ ವಿಷಯದಲ್ಲಿ ಇಷ್ಟು ಹಗುರವಾದ ಪದವನ್ನು ಪ್ರಯೋಗಿಸುವ ಧೈರ್ಯ ಮಾಡುವುದಿಲ್ಲ. ಪ್ರಭಾವೀ ಹೆಣ್ಣು ಮಕ್ಕಳು ಇವರ ಕಣ್ಣಿಗೆ ಬೇರೆಯದೇ ಸ್ವರೂಪದಲ್ಲಿ ಕಾಣಿಸುತ್ತಾರೆ. ಹಿಂದೆ, ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಶಶಿ ತರೂರ್ ಮಡದಿ ಸುನಂದಾ ಪುಷ್ಕರ್‌ ಅವರನ್ನು ‘50 ಕೋಟಿ ಗರ್ಲ್‌ಫ್ರೆಂಡ್’ ಎಂದು ವ್ಯಂಗ್ಯವಾಗಿ ಬಣ್ಣಿಸಿದ್ದರು. ಆದರೆ ಇಮಾರ್ತಿ ದೇವಿಯಂತಹ ಕೆಳವರ್ಗದ, ಯಾವುದೇ ರಾಜಕೀಯ ಹಿನ್ನೆಲೆ, ಪ್ರಭಾವವಿಲ್ಲದವರು ಮಾತ್ರ ನಮ್ಮ ರಾಜಕಾರಣಿಗಳ ಕಣ್ಣಿಗೆ ಹಗುರವಾದ ‘ಐಟಂ’ ಆಗುತ್ತಾರೆ. ಕಮಲ‌ನಾಥ್‌ ಅವರ ಈ ಹೀನ ಅಭಿರುಚಿಯ ಮಾತುಗಳಿಗೆ ಪ್ರತಿಕ್ರಿಯಿಸಿದ ಇಮಾರ್ತಿ ದೇವಿ ಇದೇ ಪ್ರಶ್ನೆಯನ್ನು ಮಾಧ್ಯಮಗಳ ಮುಂದಿಟ್ಟಿದ್ದರು. ಹಾಥರಸ್‌ನ ಬಡ ಹೆಣ್ಣುಮಗಳ ಮೇಲೆ ನಿರ್ಭೀತಿಯಿಂದ ಅತ್ಯಾಚಾರ ಎಸಗುವ ನೀಚ ಮನಃಸ್ಥಿತಿಯ ಮೂಲ, ದೊಡ್ಡವರ ಈ ಹೀನ ಅಭಿರುಚಿಯಲ್ಲಿದೆ.

ಇಂದು ಭಾರತದಲ್ಲಿ ಹಣವಿಲ್ಲದೇ ರಾಜಕೀಯ ಬೆಂಬಲವಿಲ್ಲದೇ- ಹೆಣ್ಣಿಗಾಗಲಿ ಅಥವಾ ಗಂಡಿಗಾಗಲಿ- ಚುನಾವಣಾ ಕಣಕ್ಕೆ ಧುಮುಕಲಾಗದು. ಹೀಗೆ ಧುಮುಕಿ ಜಯಶಾಲಿಯಾದ ಹೆಣ್ಣುಮಕ್ಕಳ ಬಗ್ಗೆ ‘ಯಾವುದೋ ಗಾಡ್‌ಫಾದರ್ ಬೆಂಬಲದಿಂದ ಗೆದ್ದರು’ ಎನ್ನುವ ನಮಗೆ, ಇದೇ ತೀರ್ಮಾನ ಪುರುಷ ಅಭ್ಯರ್ಥಿಗೂ ಅನ್ವಯಿಸುತ್ತದೆ ಎಂದೆನಿಸುವುದೇ ಇಲ್ಲ! ಮಾಯಾವತಿ, ಜಯಲಲಿತಾ ಮುಂತಾದ, ಗಾಡ್‌ಫಾದರ್ ಹೊಂದಿದ್ದ ನಾಯಕಿಯರ ಸ್ವಸಾಮರ್ಥ್ಯವನ್ನು ಅಂಗೀಕರಿಸಲು ನಮಗೆ ದಶಕಗಳೇ ಬೇಕಾದವು.

ಪ್ರತಿಯೊಬ್ಬ ಸಾಮಾನ್ಯ ಪುರುಷನೂ ಹೆಣ್ಣು ತನ್ನ ಬದುಕಿನ ಊರುಗೋಲು ಮತ್ತು ತನ್ನ ಭವಿಷ್ಯದ ಆಶಾಕಿರಣ ಎಂದು ನಂಬಿ ಅವಳನ್ನೇ ಅವಲಂಬಿಸಿರುತ್ತಾನೆ. ಇಂದು ಪುರುಷನಾದವನು ಹೆಣ್ಣಿಗೆ ಅವಕಾಶವನ್ನಾಗಲೀ ಔದಾರ್ಯವನ್ನಾಗಲೀ ತೋರಿಸಿ ಉದ್ಧಾರ ಮಾಡಬೇಕಾದ ಅವಶ್ಯಕತೆ ಇಲ್ಲ. ಬದಲಾಗಿ ಹೆಣ್ಣಿನ ಮೇಲಿನ ಈ ನಂಬಿಕೆ, ಅವಲಂಬನೆಗಳನ್ನು ಸಾರ್ವಜನಿಕ ಬದುಕಿನಲ್ಲೂ ಒಪ್ಪಿ, ಅದರಂತೆ ನಡೆದುಕೊಂಡರೆ ಸಾಕಾಗಿದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು