ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಘಲ್‌ ಉದ್ಯಾನಕ್ಕೆ ಮರುನಾಮಕರಣ: ಅಮೃತ ಉದ್ಯಾನದಿಂದ ಅಮೃತ ಕಾಲ

ಸಂವಿಧಾನದ ಭವ್ಯ ದೃಷ್ಟಿಗೆ ಪ್ರತಿಕೂಲವಾದ ನೆನಪುಗಳನ್ನು ಅಳಿಸುವ ಪ್ರಕ್ರಿಯೆ ಅಪೂರ್ಣವಾಗಿದೆ
Last Updated 10 ಫೆಬ್ರುವರಿ 2023, 21:32 IST
ಅಕ್ಷರ ಗಾತ್ರ

ರಾಷ್ಟ್ರಪತಿ ಭವನದ ಆವರಣದಲ್ಲಿರುವ ಮೊಘಲ್‌ ಉದ್ಯಾನಕ್ಕೆ ‘ಅಮೃತ ಉದ್ಯಾನ’ ಎಂದು ರಾಷ್ಟ್ರಪತಿಯವರು ಮರುನಾಮಕರಣ ಮಾಡಿರುವುದಕ್ಕೆ ಮತ್ತದೇ ಟೀಕಾಕಾರರು ಯಥಾಪ್ರಕಾರ ಕೊಂಕು ನುಡಿದಿದ್ದಾರೆ. ಮಹತ್ವದ ಸ್ಥಳಗಳ ಹೆಸರುಗಳನ್ನು ಭಾರತೀಕರಣ ಗೊಳಿಸುವ ವಿಷಯದಲ್ಲಿ ‘ನಿರ್ದಿಷ್ಟ ಆಯ್ಕೆ’ಗಳಿಗೆ ಮಾತ್ರ ಒತ್ತು ಕೊಡುವ ಕಾಂಗ್ರೆಸ್‌ ಪಕ್ಷದ ಸದಸ್ಯರು, ಭಾರತೀಯತೆಯನ್ನು ಪ್ರತಿಬಿಂಬಿಸುವ ಪ್ರತಿಯೊಂದನ್ನೂ ದ್ವೇಷಿಸುವ ಕಮ್ಯುನಿಸ್ಟರು ಮತ್ತು ಮೋದಿಯವರ ಪ್ರತೀ ಕಾರ್ಯದಲ್ಲಿ ಕೊಂಕು ಹುಡುಕುತ್ತ ಅವರನ್ನು ಬೈಯುವವರ ಗುಂಪಿನವರು– ಇವರೇ ಉದ್ಯಾನದ ಮರುನಾಮಕರಣದಲ್ಲಿ ತಪ್ಪು ಹುಡುಕುತ್ತಿರುವ ಟೀಕಾಕಾರರು.

ರಾಷ್ಟ್ರಪತಿಯವರ ಈ ನಿರ್ಧಾರವು ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತೀಯ ಮನಃಸ್ಥಿತಿಯಿಂದ ವಸಾಹತುಶಾಹಿ ಮನೋಭಾವವನ್ನು ಸಂಪೂರ್ಣವಾಗಿ ಕಿತ್ತುಹಾಕಬೇಕೆಂಬ ಮೋದಿ ನೇತೃತ್ವದ ಸರ್ಕಾರದ ಸಂಕಲ್ಪಕ್ಕೆ ಅನುಗುಣವಾಗಿಯೇ ಇದೆ. ಮುಂದಿನ ಕಾಲು ಶತಮಾನವನ್ನು ಪ್ರಧಾನಿಯವರು ಅಮೃತ ಕಾಲ ಎಂದು ಕರೆದಿದ್ದಾರೆ. ಈ ಅವಧಿಯಲ್ಲಿ ಭಾರತ ಮತ್ತೆ ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಹೊರ ಹೊಮ್ಮಲಿದ್ದು, ವೈಭವದ ದಿನಗಳನ್ನೂ ಕಾಣಲಿದೆ. ಮೊಘಲ್ ಉದ್ಯಾನದ ಮರುನಾಮಕರಣವು ವಸಾಹತುಶಾಹಿ ಯುಗದ ಕೊನೆಯ ಕುರುಹುಗಳನ್ನು ತೆಗೆದುಹಾಕುವ ದೊಡ್ಡ ಕಾರ್ಯಸೂಚಿಯಭಾಗವಾಗಿದೆ. ವಿದೇಶಿ ಆಕ್ರಮಣಕಾರರು ದೇಶದ ಹೆಚ್ಚಿನ ಭಾಗಗಳನ್ನು ಅತಿಕ್ರಮಿಸಿದಾಗ, ಭಾರತೀಯ ನಾಗರಿಕತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಿದ್ದರು ಹಾಗೂ ಭಾರತದ ಜನ ತಮ್ಮ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುವಂತಹ ಸನ್ನಿವೇಶವನ್ನೂ ಸೃಷ್ಟಿಸಿದ್ದರು.

ಮೋದಿಯವರು 2014ರಲ್ಲಿ ಪ್ರಧಾನಿಯಾದ ದಿನದಿಂದಲೂ ಕಾಂಗ್ರೆಸ್ ಪಕ್ಷವು ತೀವ್ರ ವಿಸ್ಮೃತಿಯಿಂದ ಬಳಲುತ್ತಿದೆ. ಕಿಂಗ್ಸ್‌ವೇಗೆ ರಾಜಪಥ, ಕ್ವೀನ್ಸ್‌ವೇಗೆ ಜನಪಥ, ಕರ್ಜನ್ ರಸ್ತೆಗೆ ಕಸ್ತೂರಬಾ ಗಾಂಧಿ ಮಾರ್ಗ ಮತ್ತು ಯಾರ್ಕ್ ರಸ್ತೆಗೆ ಮೋತಿಲಾಲ್ ನೆಹರೂ ಮಾರ್ಗ ಎಂದು, ತಾನೇ ಅಧಿಕಾರದಲ್ಲಿದ್ದಾಗ ಮರುನಾಮಕರಣ ಮಾಡಿದ್ದನ್ನೂ ಆ ಪಕ್ಷ ಮರೆತಂತಿದೆ. ಅದೇ ರೀತಿ, ದೆಹಲಿಯ ಪ್ರತಿಷ್ಠಿತ ಶಾಪಿಂಗ್ ಪ್ರದೇಶ ಎನಿಸಿದ ಕನ್ಹಾಟ್ ಸರ್ಕಸ್ ಮತ್ತು ಕನ್ಹಾಟ್ ಪ್ಲೇಸ್‌ಗೆ– ಡ್ಯೂಕ್‌ ಆಫ್‌ ಕನ್ಹಾಟ್‌ ಸ್ಮರಣೆಗಾಗಿ ಇಡಲಾಗಿದ್ದ ಹೆಸರು– ಕ್ರಮವಾಗಿ ಇಂದಿರಾ ಚೌಕ ಮತ್ತು ರಾಜೀವ್ ಚೌಕ ಎಂದು ಮರುನಾಮಕರಣ ಮಾಡಿದ್ದು ಕೂಡ ಇದೇ ಕಾಂಗ್ರೆಸ್‌ ನೇತೃತ್ವದ ಸರ್ಕಾರ. ಕ್ವೀನ್ ವಿಕ್ಟೋರಿಯಾ ರಸ್ತೆ (ರಾಜೇಂದ್ರ ಪ್ರಸಾದ್ ರಸ್ತೆ), ಕಿಂಗ್‌ ಎಡ್ವರ್ಡ್ ರಸ್ತೆ (ಮೌಲಾನಾ ಆಜಾದ್ ರಸ್ತೆ) ಮತ್ತು ವಿಲಿಂಗ್ಡನ್ ಕ್ರೆಸೆಂಟ್‌ನ (ಮದರ್ ತೆರೆಸಾ ಕ್ರೆಸೆಂಟ್) ಹೆಸರು ಬದಲಾಗಿದ್ದು ಕೂಡ ಕಾಂಗ್ರೆಸ್‌ ಪಕ್ಷವೇ ಆಡಳಿತದಲ್ಲಿದ್ದಾಗ ಎನ್ನುವುದನ್ನು ಮರೆಯುವಂತಿಲ್ಲ.

ಮರುನಾಮಕರಣದ ವಿಷಯವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ನಿರ್ವಹಿಸುತ್ತಿರುವ ರೀತಿಯಲ್ಲಿ ಭಾರಿ ಅಂತರವಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರಸ್ತೆಗೆ ಮಾಡಿದ ಮರುನಾಮಕರಣಗಳೆಲ್ಲವೂ ಅದೇ ಪಕ್ಷದ ಮುಖಂಡರಿಗೆ ಸಂಬಂಧಿಸಿದ್ದವು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಒಂದು ನಿರ್ದಿಷ್ಟ ಕುಟುಂಬಕ್ಕೆ ಸೇರಿದವರ ಹೆಸರುಗಳನ್ನೇ ರಸ್ತೆಗಳಿಗೆ ನಾಮಕರಣ ಮಾಡಲಾಗಿತ್ತು. ಹೀಗಾಗಿ ಮರುನಾಮಕರಣದ ಹಿಂದಿನ ಆ ಪಕ್ಷದ ಉದ್ದೇಶ ಉದಾತ್ತವಾಗಿರ
ಲಿಲ್ಲ. ವಸಾಹತುಶಾಹಿ ಯುಗದ ಕೊನೆಯ ಕುರುಹುಗಳನ್ನು ತೆಗೆದುಹಾಕುವ ಉದ್ದೇಶಕ್ಕಿಂತಲೂ ತನ್ನ ನಾಯಕರನ್ನು ಮೆರೆಸುವುದೇ ಆ ಪಕ್ಷಕ್ಕೆ ಮಹತ್ವದ್ದಾಗಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿಯ ಉದ್ದೇಶಗಳ ನಡುವೆ ಮುಖ್ಯವಾದ ವ್ಯತ್ಯಾಸ ಇರುವುದು ಇಲ್ಲೇ. ರಾಜಪಥವನ್ನು ಕರ್ತವ್ಯಪಥ ಎಂದು ಮತ್ತು ಮೊಘಲ್‌ ಉದ್ಯಾನವನ್ನು ಅಮೃತ ಉದ್ಯಾನ ಎಂದು ಮರುನಾಮಕರಣ ಮಾಡುವ ಸರ್ಕಾರದ ಸದ್ಯದ ನಿರ್ಣಯದ ಹಿಂದೆ ವಸಾಹತುಶಾಹಿ ಯುಗದ ಕುರುಹುಗಳನ್ನು ತೆಗೆದುಹಾಕುವ ಧೋರಣೆಯೇ ಎದ್ದು ಕಾಣುತ್ತದೆ.

ರಸ್ತೆಗಳಿಗೆ ಹೆಚ್ಚು ಮರುನಾಮಕರಣ ಮಾಡಿದ್ದು ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಆಗಿದೆ. ಹೀಗಿದ್ದೂ, ಭಾರತೀಯತೆ ಮತ್ತು ಭಾರತದ ಅಪ್ರತಿಮ ನಾಗರಿಕತೆಯ ಇತಿಹಾಸದ ಪ್ರಶ್ನೆ ಬಂದಾಗ ಆ ಪಕ್ಷ ಸದಾ ಗೊಂದಲದಲ್ಲೇ ಇರುತ್ತದೆ. ಮೋದಿ ನೇತೃತ್ವದ ಸರ್ಕಾರವು 2015ರಲ್ಲಿ ಔರಂಗಜೇಬ್‌ ರಸ್ತೆಯ ಹೆಸರನ್ನು ಎಪಿಜೆ ಅಬ್ದುಲ್‌ ಕಲಾಂ ರಸ್ತೆ ಎಂದು ಬದಲಾಯಿಸುವ ನಿರ್ಧಾರ ಕೈಗೊಂಡಾಗ ಆ ಪಕ್ಷ ನಡೆದುಕೊಂಡ ರೀತಿಯೇ ಇದಕ್ಕೆ ಉದಾಹರಣೆ. ಕಾಂಗ್ರೆಸ್‌, ಆಗ ತೀವ್ರವಾದ ಪ್ರತಿಭಟನೆಯನ್ನು ನಡೆಸಿತ್ತು. ಧರ್ಮ ನಿರಪೇಕ್ಷ ಹಾಗೂ ಪ್ರಜಾತಾಂತ್ರಿಕ ಭಾರತವು ಧಾರ್ಮಿಕ ಮೂಲಭೂತವಾದಿಯನ್ನು, ನಿರಂಕುಶ ಆಡಳಿತಗಾರನನ್ನು, ಹಿಂದೂ, ಸಿಖ್ ಮತ್ತು ಭಾರತ ಮೂಲದ ಇನ್ನಿತರ ಧರ್ಮಗಳ ಅನುಯಾಯಿಗಳ ಜೊತೆ ಅತ್ಯಂತ ಕಠಿಣವಾಗಿ ನಡೆದುಕೊಂಡವನನ್ನು ವೈಭವೀಕರಿ
ಸುವುದು ಅದೆಷ್ಟು ಅಸಂಗತ ನಡೆ ಎಂಬ ಬಗ್ಗೆ ಆಲೋಚಿಸಲು ಕಾಂಗ್ರೆಸ್ಸಿಗರು ಸಿದ್ಧರಿರಲಿಲ್ಲ.

ಔರಂಗಜೇಬನ ಕಥೆ, ಸಂಕ್ಷಿಪ್ತವಾಗಿ, ಹೀಗಿದೆ: ಹಿಂದೂ ದೇವಾಲಯಗಳು ಮತ್ತು ಶಾಲೆಗಳನ್ನು ಧ್ವಂಸಗೊಳಿಸುವಂತೆ ಆತ 1669ರಲ್ಲಿ ಆದೇಶ ಹೊರಡಿಸಿದ. ಕಾಶಿ ವಿಶ್ವನಾಥ ಮಂದಿರ, ಸೋಮನಾಥ ಮಂದಿರ, ಮಥುರಾ ಕೃಷ್ಣ ಮಂದಿರ ಸೇರಿದಂತೆ ನೂರಾರು ದೇವಾಲಯಗಳು ಆಗ ಧ್ವಂಸಗೊಂಡವು. ಹಿಂದೂಗಳ ಬಗೆಗಿನ ಆತನ ದ್ವೇಷಕ್ಕೆ ಮಿತಿಯೇ ಇರಲಿಲ್ಲ. ಮಥುರಾದಲ್ಲಿ ದೇವಾಲಯವನ್ನು ಕೆಡವಿದ ಜಾಗದಲ್ಲೇ ಮಸೀದಿಯನ್ನು ನಿರ್ಮಿಸಿದ. ಹಿಂದೂಗಳು ತಮ್ಮ ಮತದಲ್ಲೇ ಮುಂದುವರಿಯಲು ಬಯಸಿದರೆ ಅವರ ಮೇಲೆ ‘ಜೆಜಿಯಾ’ ಎಂಬ ತೆರಿಗೆ ವಿಧಿಸಿದ, ಹಿಂದೂ ಜಾತ್ರೆಗಳನ್ನು ನಿಷೇಧಿಸಿದ, ಹಿಂದೂ ಗುಮಾಸ್ತರು ಮತ್ತು ಲೆಕ್ಕಪರಿಶೋಧಕರನ್ನು ವಜಾಗೊಳಿಸಿದ, ಸರಕುಗಳನ್ನು ಆಮದು ಮಾಡಿಕೊಳ್ಳುವಾಗ ಹಿಂದೂಗಳಿಗೆ ಹೆಚ್ಚಿನ ತೆರಿಗೆ ಹಾಕಿದ, ಅಪರಾಧಿಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ಅವರ ಶಿಕ್ಷೆಯನ್ನು ಕಡಿಮೆ ಮಾಡಿದ– ಹೀಗೆ ಆತನ ಮತಾಂಧ ಕಾರ್ಯಗಳಿಗೆ ಕೊನೆ ಎಂಬುದೇ ಇರಲಿಲ್ಲ.

ಸಿಖ್ಖರ ವಿಷಯದಲ್ಲೂ ಆತ ಅಷ್ಟೇ ಕಠಿಣ ವ್ಯಕ್ತಿಯಾಗಿದ್ದ. ಗುರು ತೇಘ್‌ ಬಹದ್ದೂರ್‌ ಅವರನ್ನು ಜೈಲಿಗೆ ತಳ್ಳಿದ ಆತ, ಹಲವು ದಿನಗಳವರೆಗೆ ಅವರಿಗೆ ಚಿತ್ರಹಿಂಸೆ ನೀಡಿದ. ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿ
ಸಿದ್ದರಿಂದ ಅವರ ತಲೆಯನ್ನೇ ಕತ್ತರಿಸಿದ. ನಂತರ ಗುರು ಗೋವಿಂದ ಸಿಂಗ್‌ ಅವರತ್ತ ವಕ್ರದೃಷ್ಟಿ ಬೀರಿದ ಆತ, ಅವರ ನಾಲ್ವರು ಪುತ್ರರನ್ನು ಕೊಲ್ಲಿಸಿದ.

ವಿಲ್‌ ಡ್ಯುರಾಂಟ್‌ ಅವರು ತಮ್ಮ ಅವಿಸ್ಮರಣೀಯ ಕೃತಿ ‘ದಿ ಸ್ಟೋರಿ ಆಫ್‌ ಸಿವಿಲೈಸೇಷನ್‌’ನಲ್ಲಿ ಹೀಗೆ ಹೇಳಿದ್ದಾರೆ: ‘ತನ್ನ ಅರ್ಧ ಶತಮಾನದ ಆಳ್ವಿಕೆಯಲ್ಲಿ, ಔರಂಗಜೇಬ್‌ ಭಾರತದಿಂದ ಇಸ್ಲಾಂ ಧರ್ಮವೊಂದನ್ನು ಹೊರತುಪಡಿಸಿ ಉಳಿದೆಲ್ಲ ಧರ್ಮಗಳನ್ನು ನಿರ್ಮೂಲನೆ ಮಾಡಲು ಯತ್ನಿಸಿದ’. ಇದಕ್ಕಿಂತ ದೊಡ್ಡ ದೋಷಾ
ರೋಪಣೆ ಬೇರೆ ಯಾವ ಆಡಳಿತಗಾರನ ಮೇಲಾದರೂ ಇರಲು ಸಾಧ್ಯವೇ? ಇದಕ್ಕಿಂತ ದೊಡ್ಡ ಮತಾಂಧ ಯಾರಾದರೂ ಇರಬಹುದೇ? ಔರಂಗಜೇಬ್‌ನಲ್ಲಿ ನಮ್ಮ ಧರ್ಮನಿರಪೇಕ್ಷ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ಹೆಮ್ಮೆ
ಪಡುವಂಥದ್ದು ಏನಾದರೂ ಇದೆಯೇ? ಪ್ರಧಾನಿ ಮೋದಿ ಅವರು ಕಲ್ಪನಾ ದಾರಿದ್ರ್ಯ ಎಂದು ಕರೆದಿರುವುದು
ಇದಕ್ಕಾಗಿಯೇ. ಸ್ವಾತಂತ್ರ್ಯದ ಬಳಿಕ ರಾಷ್ಟ್ರದ ಚುಕ್ಕಾಣಿ ಹಿಡಿದ ಹಲವರು ಅಂತಹ ದಾರಿದ್ರ್ಯವನ್ನು ರಾಷ್ಟ್ರದ ಮೇಲೆ ಹೇರಿದ್ದಾರೆ ಎಂದು ಅವರು ಹೇಳಿರುವುದು ಕೂಡ ಈ ಹಿನ್ನೆಲೆಯಲ್ಲಿಯೇ.

ಆದ್ದರಿಂದ, ವೈವಿಧ್ಯವನ್ನು ಗೌರವಿಸುವ ಮತ್ತು ವೈವಿಧ್ಯಮಯ ಜನರ ಸಾಮರಸ್ಯದ ಸಹಬಾಳ್ವೆಯನ್ನು ಗೌರವಿಸುವ ಸಂವಿಧಾನದ ಭವ್ಯ ದೃಷ್ಟಿಗೆಪ್ರತಿಕೂಲವಾದ ನೆನಪುಗಳನ್ನು ಅಳಿಸುವ ಪ್ರಕ್ರಿಯೆಯು ಇನ್ನೂ ಅಪೂರ್ಣವಾಗಿದೆ ಎಂದೇ ಹೇಳಬೇಕು. ನಾವು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯ ಮತ್ತು ಭಾರತದ ಸಂವಿಧಾನ ಎಂಬ ಅಸಾಮಾನ್ಯ ದಾಖಲೆಯ ಮೂಲಕ ನಮಗೆ ನಾವೇ ಮಾಡಿಕೊಂಡಿರುವ ಉದಾರವಾದ, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸಂರಕ್ಷಿಸಲು ಬಾಬರ್ ಮತ್ತು ಇತರ ವಸಾಹತುಶಾಹಿ ಪಳೆಯುಳಿಕೆಗಳಿಗೂ ಔರಂಗಜೇಬನಿಗೆ ಆಗಿರುವ ಗತಿಯನ್ನೇ ಕಾಣಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT