ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅವಿಶ್ವಾಸ ನಿರ್ಣಯ– ಕಳೆದುಹೋದ ಅವಕಾಶ?

ಇಡೀ ಚರ್ಚೆಯಲ್ಲಿ ಆವೇಶ ಹೆಚ್ಚಾಗಿತ್ತು, ಗಟ್ಟಿತನ ಕಡಿಮೆ ಇತ್ತು
Published 17 ಆಗಸ್ಟ್ 2023, 23:51 IST
Last Updated 17 ಆಗಸ್ಟ್ 2023, 23:51 IST
ಅಕ್ಷರ ಗಾತ್ರ

–ಪ್ರೊ. ಸಂದೀಪ್ ಶಾಸ್ತ್ರಿ

2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣಾ ಕದನವು ಕಿವಿಗಡಚಿಕ್ಕುವಂತೆ ಇರಲಿದೆ, ರಾಜಕೀಯ ವಿರೋಧಿಗಳ ನಡುವಿನ ದೋಷಾರೋಪಣೆಗಳೇ ಚುನಾವಣೆಯ ಕೇಂದ್ರಬಿಂದು ಆಗಿರಲಿವೆ ಎಂಬುದು ಈಗ ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಇದು ಖಚಿತವಾಗಿದೆ. ಅವಿಶ್ವಾಸ ನಿರ್ಣಯಕ್ಕೆ ಸೋಲಾಗಲಿದೆ ಎಂಬುದು ಅದರ ಮೇಲಿನ ಚರ್ಚೆ ಆರಂಭವಾಗುವುದಕ್ಕೂ ಮೊದಲೇ ಖಚಿತವಾಗಿತ್ತು. ಲೋಕಸಭೆಯಲ್ಲಿ ಇದುವರೆಗೆ ಅವಿಶ್ವಾಸ ನಿರ್ಣಯಕ್ಕೆ ಜಯ ಸಿಕ್ಕ ನಿದರ್ಶನಗಳೇ ಇಲ್ಲ. ಹೀಗಿದ್ದರೂ, ಪ್ರಕ್ರಿಯೆಯು (ಅಂದರೆ ಚರ್ಚೆಯು) ಅಂತಿಮ ಫಲಿತಾಂಶಕ್ಕಿಂತ ಹೆಚ್ಚಿನ ಮಹತ್ವ ಪಡೆಯಲಿದೆ ಎಂಬುದು ಸ್ಪಷ್ಟವಾಗಿತ್ತು.

ಅವಿಶ್ವಾಸ ನಿರ್ಣಯ ಮಂಡನೆ ಹಾಗೂ ಚರ್ಚೆಯಲ್ಲಿ ವಾಸ್ತವಕ್ಕಿಂತ ಆರ್ಭಟವೇ ಜೋರಾಗಿತ್ತು. ಅವಿಶ್ವಾಸ ಮಂಡನೆಯ ಒಂದು ಪ್ರಮುಖ ಉದ್ದೇಶ, ಪ್ರಧಾನಿಯವರನ್ನು ಸಂಸತ್ತಿನಲ್ಲಿ ಮಾತನಾಡುವಂತೆ ಮಾಡುವುದು, ಅದರಲ್ಲೂ ಮುಖ್ಯವಾಗಿ ಮಣಿಪುರದಲ್ಲಿನ ಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮಾಡುವುದು, ಎಂದು ವಿರೋಧ ಪಕ್ಷಗಳು ಸ್ಪಷ್ಟಪಡಿಸಿದ್ದವು. ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡು, ವಿರೋಧ ಪಕ್ಷಗಳ ಮೇಲೆ ಆಕ್ರಮಣಕಾರಿಯಾಗಿ ಪ್ರಧಾನಿಯವರು ಸದನದಲ್ಲಿ ಮಾತನಾಡಿದರಾದರೂ, ಮಣಿಪುರದ ಬಗ್ಗೆ ಅವರು ಮಾತನಾಡಲಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದರು. ವಿರೋಧ ಪಕ್ಷಗಳ ಒಕ್ಕೂಟದ ಭಾಗವಾಗಿರುವ ರಾಜ್ಯ ಮಟ್ಟದ ಪಕ್ಷಗಳು ತಮ್ಮ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಚರ್ಚೆಯ ವೇಳೆ ಪ್ರಸ್ತಾಪಿಸಿದವು. ಇಡೀ ಚರ್ಚೆಯು ವಿರೋಧಿ ಗುಂಪಿನ ಮೇಲೆ (ಎರಡೂ ಕಡೆಗಳಿಂದ) ವಾಗ್ದಾಳಿ ನಡೆಯುವುದಕ್ಕೆ ಹೆಚ್ಚು ಬಳಕೆಯಾಯಿತು. ವಿರೋಧ ಪಕ್ಷಗಳು ಪರ್ಯಾಯಗಳ ಬಗ್ಗೆ ಮಾತನಾಡಲು ಈ ವೇದಿಕೆಯನ್ನು ಬಳಸಬಹುದು ಎಂದು ನಿರೀಕ್ಷಿಸಲಾಗಿತ್ತು. ಹಾಗೆಯೇ, ಆಡಳಿತ ಪಕ್ಷವು ತನ್ನ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಹಾಗೂ ಸರ್ಕಾರದ ಸಾಧನೆಗಳನ್ನು ತಿಳಿಸಲು ಇದನ್ನು ಬಳಸಿಕೊಳ್ಳಬಹುದು ಎಂದು ಭಾವಿಸಲಾಗಿತ್ತು.

ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ರಾಜಕೀಯವಾಗಿ ಒಳ್ಳೆಯ ಹೆಸರು ಸಂಪಾದಿಸಲು ಪ್ರಯತ್ನಿಸುತ್ತಿವೆ ಎಂಬುದಕ್ಕೆ ಚರ್ಚೆಯ ಸಂದರ್ಭದಲ್ಲಿನ ವಾತಾವರಣ ಆಧಾರ ಒದಗಿಸಿತು. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕಂಡುಬಂದ ಘೋಷಣೆ ಕೂಗುವಿಕೆಯು ಈಚಿನ ದಿನಗಳಲ್ಲಿ ನಡೆದಿರಲಿಲ್ಲ. ಘೋಷಣೆ ಕೂಗುವಿಕೆ ಬೇಡ ಎಂದು ಸ್ಪೀಕರ್‌, ಎರಡೂ ಕಡೆಯವರಿಗೆ ಮನವಿ ಮಾಡಿದರಾದರೂ, ತಾವು ಸಿದ್ಧತೆ ನಡೆಸಿಕೊಂಡು ಬಂದಿದ್ದನ್ನು ಮಾಡಿಯೇತೀರಲು ಪರಸ್ಪರ ಸ್ಪರ್ಧೆಗೆ ಇಳಿದವರಂತೆ ಎರಡೂ ಕಡೆಯವರು ವರ್ತಿಸಿದರು. ಎರಡೂ ಕಡೆಯವರು ಹೆಚ್ಚು ಗಮನ ಸೆಳೆಯುವ ಉದ್ದೇಶದಿಂದ ಮೊದಲೇ ಎಲ್ಲವನ್ನೂ ಆಲೋಚಿಸಿಕೊಂಡು ಬಂದು ವರ್ತಿಸಿದಂತಿತ್ತು. ಸೂಕ್ತವಾದ ಪದಗಳನ್ನು ಬಳಸಿ, ಸದನದಲ್ಲಿ ಅರ್ಥಪೂರ್ಣವಾದ ಹಾಗೂ ತಾರ್ಕಿವಾದ ಚರ್ಚೆ ನಡೆಯಬೇಕು. ಆದರೆ ಅದು ಬಹಳ ಅಪರೂಪವಾಗಿದೆ.

ಸಂಸದೀಯ ವೇದಿಕೆಗಳಲ್ಲಿ ಈಚೆಗೆ ಚರ್ಚೆಗಳು, ಸಾರ್ವಜನಿಕವಾಗಿ ನಡೆಯುವ ಕೆಸರೆರಚಾಟದ ಮಾದರಿಗೆ ತಿರುಗಿವೆ. ಟಿ.ವಿ. ವಾಹಿನಿಗಳು ಕೂಡ ಇದನ್ನು ಎತ್ತಿ ತೋರಿಸಿವೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳಿಂದ ಬರುವ ಪ್ರತಿಕ್ರಿಯೆಗಳನ್ನು ಮೊದಲೇ ಊಹಿಸಬಹುದು, ಚರ್ಚೆಯ ನಂತರ ಆಗಬೇಕಿರುವ ತೀರ್ಮಾನವು ಮೊದಲೇ ಅಂತಿಮವಾದಂತೆ ಇರುತ್ತದೆ, ಚರ್ಚೆಯ ಸಂದರ್ಭದಲ್ಲಿ ಒಂದು ವಾದವನ್ನು ಸಮರ್ಥಿಸುವ ಒಂದೇ ಉದ್ದೇಶದಿಂದ ಸತ್ಯಸಂಗತಿಗಳನ್ನು ಒಂದೆಡೆ ಪೋಣಿಸಿ ಹೇಳಲಾಗುತ್ತದೆ.

ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ವಿರೋಧ ಪಕ್ಷಗಳ ನಡೆಯ ಮೇಲೆ ಒಂದು ಗಮನ ಹರಿಸೋಣ. ಗೌರವ್ ಗೊಗೊಯ್ ಅವರಿಂದ ಅಧೀರ್ ರಂಜನ್ ಚೌಧರಿವರೆಗೆ ಕಾಂಗ್ರೆಸ್ಸಿನ ನಾಯಕರು, ಮಣಿಪುರದ ವಿಚಾರವಾಗಿ ಪ್ರಧಾನಿಯವರನ್ನು ಮಾತನಾಡುವಂತೆ ಮಾಡುವ ಉದ್ದೇಶದಿಂದ ಈ ನಿರ್ಣಯ ಮಂಡಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಾಳಯದಿಂದ ಮಾತನಾಡಿದವರ ಪೈಕಿ ಗೊಗೊಯ್ ಅವರು ಹೆಚ್ಚು ಸಿದ್ಧತೆಯೊಂದಿಗೆ ಬಂದಿದ್ದರು. ಅವರು ತಮ್ಮ ವಾದಗಳನ್ನು ಕ್ರಮಬದ್ಧವಾಗಿ, ಬಹಳ ಸೂಕ್ತವಾದ ಗತಿಯಲ್ಲಿ ಮಂಡಿಸಿದರು. ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವು ಮರುಸ್ಥಾಪನೆ ಆಗಿರುವ ಕಾರಣ, ಅವರ ಮೇಲೆ ಎಲ್ಲರ ಗಮನ ಇತ್ತು. ಆದರೆ ಅವರ ಮಾತುಗಳಲ್ಲಿ ಗಟ್ಟಿತನ ಇರಲಿಲ್ಲ, ಆರ್ಭಟದ ಶೈಲಿ ಮಾತ್ರ ಇತ್ತು. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅವಕಾಶವೊಂದನ್ನು ಕಳೆದುಕೊಂಡಂತೆ ಆಯಿತು ಎಂದು ಕೆಲವರು ಭಾವಿಸಿದರು. ಮಾತಿನ ಸಂದರ್ಭದಲ್ಲಿ ಬಳಕೆಯಾದ ಭಾಷೆಯು ಇನ್ನಷ್ಟು ಪರಿಣಾಮಕಾರಿ ಆಗಿರಬಹುದಿತ್ತು, ಅದು ಮನವೊಲಿಕೆಯ ಧಾಟಿಯಲ್ಲಿ ಇರಬಹುದಿತ್ತು ಎಂದು ಕೆಲವರು ಭಾವಿಸಿದರು.

ಅಧೀರ್ ರಂಜನ್ ಚೌಧರಿ ಅವರು ತಮಗಿದ್ದ ಅವಕಾಶವನ್ನು ಇನ್ನಷ್ಟು ಉತ್ತಮವಾಗಿ ಬಳಸಿಕೊಳ್ಳಬಹುದಿತ್ತು. ಏಕೆಂದರೆ, ಚೌಧರಿ ಅವರು ಮಾತನಾಡಿದ ಸಂದರ್ಭದಲ್ಲಿ ಪ್ರಧಾನಿ ಹಾಜರಿದ್ದರು. ಚೌಧರಿ ಅವರ ಮಾತುಗಳು ವಿವಾದಕ್ಕೆ ಸಿಲುಕಿದವು. ಆಡಳಿತ ಪಕ್ಷವು ಅದನ್ನು ಬಹಳ ಚೆನ್ನಾಗಿ ಬಳಸಿಕೊಂಡಿತು. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ, ವಿರೋಧ ಪಕ್ಷಗಳ ಇತರ ನಾಯಕರು ಹಲವು ಸಂಗತಿಗಳನ್ನು ಪ್ರಸ್ತಾಪಿಸಿದರು. ಆದರೆ ಅವರ ಮಾತುಗಳು, ಅವರು ಪ್ರತಿನಿಧಿಸುವ ರಾಜ್ಯಗಳಿಗೆ ಸಂಬಂಧಿಸಿದ್ದವು. ಅಸಾದುದ್ದೀನ್ ಒವೈಸಿ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲು ಸಿದ್ಧವಾಗುತ್ತಿರುವ ವಿರೋಧ ಪಕ್ಷಗಳು ಒಂದು ಒಕ್ಕೂಟವಾಗಿ ಯಾವ ಕಾರ್ಯತಂತ್ರವನ್ನು ನೆಚ್ಚಿಕೊಂಡಿವೆ ಎಂಬುದು ಖಚಿತವಾಗಲಿಲ್ಲ. ಆಡಳಿತಾರೂಢರ ಕಾರ್ಯತಂತ್ರ ಹಾಗೂ ನೀತಿಗಳಿಗೆ ಪರ್ಯಾಯವಾದ ಕಾರ್ಯತಂತ್ರ ಮತ್ತು ನೀತಿಯನ್ನು ಜನರ ಮುಂದಿಡಲು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭವು ಒಂದು ಅವಕಾಶ ಒದಗಿಸಿತ್ತು. ಆದರೆ ಇದು ಸರಿಯಾಗಿ ಬಳಕೆಯಾಗಲಿಲ್ಲ.

ಆಡಳಿತ ಪಕ್ಷದ ಕಡೆಯಲ್ಲಿ, ಪ್ರಮುಖ ಸಚಿವರು ಮತ್ತು ಸಂಸದೀಯ ಪಟುಗಳು ಅಖಾಡಕ್ಕೆ ಇಳಿದಿದ್ದರು. ಎರಡು ಅಂಶಗಳನ್ನು ಮುಂದಿರಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಲು ಅವರು ಯತ್ನಿಸಿದರು. ರಾಹುಲ್ ಅವರು ಚರ್ಚೆ ಆರಂಭಿಸದಿದ್ದಾಗ, ಹಿರಿಯ ಸಚಿವರು ಹಾಗೂ ಆಡಳಿತ ಪಕ್ಷದ ಹಿರಿಯ ನಾಯಕರು ಮಂದಹಾಸದೊಂದಿಗೆ, ‘ವಾಗ್ದಾಳಿಯನ್ನು ರಾಹುಲ್ ಅವರೇ ಆರಂಭಿಸುತ್ತಾರೆ ಎಂದು ನಾವು ಭಾವಿಸಿದ್ದೆವು’ ಎಂದರು.

ಎರಡನೆಯದಾಗಿ, ಅಧೀರ್ ರಂಜನ್ ಚೌಧರಿ ಅವರು ಕಾಂಗ್ರೆಸ್ ಕಡೆಯಿಂದ ಮಾತನಾಡುವವರ ಪಟ್ಟಿಯಲ್ಲಿ ಇಲ್ಲದಿದ್ದಾಗ, ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂದರು. ಪ್ರಧಾನಿಯವರು ಕೂಡ ತಮ್ಮ ಮಾತಿನ ಆರಂಭದಲ್ಲಿ ಈ ಬಗ್ಗೆ ಉಲ್ಲೇಖಿಸಿದರು. ಪ್ರಧಾನಿಯವರು ಮಾತನಾಡುತ್ತಾರೆ ಎಂದು ವಿರೋಧ ಪಕ್ಷದವರು ಭಾವಿಸಿದ್ದ ವಿಷಯಗಳ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ಅವರೇ ಹೆಚ್ಚು ಮಾತನಾಡಿದರು. ಆಡಳಿತ ಪಕ್ಷವು ಹಿಂದಿನ ಯುಪಿಎ ಆಡಳಿತವನ್ನು ಟೀಕಿಸಲು ಅವಕಾಶ ನೋಡುತ್ತಿತ್ತು. ಯುಪಿಎ ಅವಧಿಯಲ್ಲಿ ಸಚಿವರಾಗಿದ್ದ, ಪ್ರಮುಖ ಖಾತೆ ಹೊಂದಿದ್ದ, ಈಗಲೂ ಸಚಿವರಾಗಿರುವವರೊಬ್ಬರು ಹಿಂದಿನ ಯುಪಿಎ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದುದು ಕುತೂಹಲಕರವಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯು ನಿರೀಕ್ಷಿಸಿದ ರೀತಿಯಲ್ಲಿಯೇ ನಡೆಯಿತು. ವಿರೋಧ ಪಕ್ಷಗಳ ಒಕ್ಕೂಟದಿಂದಾಗಲಿ, ಆಡಳಿತ ಪಕ್ಷದ ಕಡೆಯಿಂದಾಗಲಿ ಹೊಸದಾಗಿ ಏನೂ ಪ್ರಸ್ತಾಪವಾಗಲಿಲ್ಲ. ಚರ್ಚೆಯ ಮೂಲಕ ಎದುರಾಳಿ ಪಕ್ಷದವರನ್ನು ಸೋಲಿಸಬೇಕು ಎಂಬುದೇ ಎರಡೂ ಕಡೆಯವರ ಗುರಿಯಾಗಿತ್ತು. ಆದರೆ ಇಬ್ಬರೂ ಪೂರ್ತಿ ಯಶಸ್ಸು ಕಾಣಲಿಲ್ಲ. ಇಡೀ ಚರ್ಚೆಯಲ್ಲಿ ಆವೇಶ ಹೆಚ್ಚಾಗಿತ್ತು, ಗಟ್ಟಿತನ ಕಡಿಮೆ ಇತ್ತು. ವಿಚಾರವೊಂದರ ಸಮರ್ಥನೆಗೆ ಮನವೊಲಿಕೆಯ ಧಾಟಿಯಲ್ಲಿ ವಾದ ಮಂಡಿಸುವ ಬದಲಿಗೆ, ವಿರೋಧಿಗಳನ್ನು ಹಾಸ್ಯ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT