ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಹಿಮಾಲಯದಲ್ಲಿ ಹೀಗೊಂದು ಸಮಸ್ಯೆ

‘ಸ್ವರ್ಗಕ್ಕೆ ಏರುವ ಸೋಪಾನ’ದಲ್ಲಿ ಮೂಗು ಮುಚ್ಚಿಕೊಳ್ಳದೇ ವಿಧಿಯಿಲ್ಲ!
Published 19 ಜೂನ್ 2023, 23:00 IST
Last Updated 19 ಜೂನ್ 2023, 23:00 IST
ಅಕ್ಷರ ಗಾತ್ರ

ಮೇ 29, ಅಂತರರಾಷ್ಟ್ರೀಯ ಮೌಂಟ್ ಎವರೆಸ್ಟ್ ದಿನ. ಎಪ್ಪತ್ತು ವರ್ಷಗಳ ಹಿಂದೆ, 1953ರ ಮೇ 29ರಂದು ಎಡ್ಮಂಡ್ ಹಿಲರಿ ಮತ್ತು ತೇನ್‍ಸಿಂಗ್ ನಾರ್ಗೆ, ಅದುವರೆವಿಗೂ ಅಜೇಯವಾಗಿದ್ದ ಜಗತ್ತಿನ ಅತಿ ಎತ್ತರದ ಎವರೆಸ್ಟ್ ಶಿಖರವನ್ನೇರಿದ ದಿನ. ಆಸಕ್ತ ಪರ್ವತಾರೋಹಿಗಳಿರುವ ಪ್ರಪಂಚದ ಎಲ್ಲ ದೇಶಗಳಲ್ಲೂ ಅದು ಸಂಭ್ರಮಾಚರಣೆಯ ಸಂದರ್ಭ.

ನೇಪಾಳದ ಲುಕ್ಲಾದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಎಡ್ಮಂಡ್ ಹಿಲರಿಯ ಮಗ ಪೀಟರ್ ಹಿಲರಿ ಮತ್ತು ತೇನ್‍ಸಿಂಗ್ ನಾರ್ಗೆಯ ಮಗ ಜಾಮ್ಲಿಂಗ್ ನಾರ್ಗೆ ಭಾಗವಹಿಸಿ, ತಮ್ಮ ಹಿರಿಯರ ಎವರೆಸ್ಟ್ ಶಿಖರಾರೋಹಣದ ರೋಚಕ ಕ್ಷಣಗಳನ್ನು ನೆನಪು ಮಾಡಿಕೊಂಡರು. ಏಳು ದಶಕಗಳಲ್ಲಿ ಎವರೆಸ್ಟ್ ಆರೋಹಣ ಸಾಹಸದಲ್ಲಿ ಆಗಿರುವ ಬದಲಾವಣೆಗಳು, ವಾಯುಗುಣ ಬದಲಾವಣೆ ತರುತ್ತಿರುವ ಸಮಸ್ಯೆಯಂತಹ ವಿಷಯಗಳೂ ಚರ್ಚೆಗೆ ಬಂದವು. ಆದರೆ ಇದುವರೆವಿಗೂ ಅಸಡ್ಡೆ, ಹಿಂಜರಿಕೆ, ಸಂಕೋಚದಿಂದ ಬಹಿರಂಗವಾಗಿ ಚರ್ಚೆಗೆ ಬರದಿದ್ದ ಪರ್ವತಾರೋಹಿಗಳ ಶೌಚಾಲಯ ತ್ಯಾಜ್ಯ ತಂದಿರುವ ವಿಷಮ ಸಮಸ್ಯೆ ಗಂಭೀರ ಅವಲೋಕನೆಗೆ ಬಂದದ್ದು ಒಂದು ವಿಶೇಷ.

ಎವರೆಸ್ಟ್ ಶಿಖರವನ್ನೇರಲು ನೇಪಾಳ ಸರ್ಕಾರದ ಅನುಮತಿ ಅಗತ್ಯ. ಪ್ರತಿ ಪರ್ವತಾರೋಹಿಯೂ ಸುಮಾರು 11,000 ಅಮೆರಿಕನ್ ಡಾಲರ್‌ ಶುಲ್ಕ ನೀಡಿ ಪರವಾನಗಿ ಪಡೆಯಬೇಕು. ಇದರೊಂದಿಗೆ ಎಲ್ಲ ರೀತಿಯ ಸಿದ್ಧತೆಗಳಿಗೆ ಸುಮಾರು ಒಂದೂವರೆ ತಿಂಗಳ ಕಾಲ ರಾಜಧಾನಿ ಕಠ್ಮಂಡುವಿನಲ್ಲಿ ಇರಬೇಕು. ಈ ಎಲ್ಲ ತಯಾರಿಗೆ ಪ್ರತಿ ವ್ಯಕ್ತಿಗೆ ಒಟ್ಟು ಸುಮಾರು 45,000 ಡಾಲರುಗಳು ಖರ್ಚಾಗುತ್ತವೆ. ನೇಪಾಳ ಸರ್ಕಾರಕ್ಕೆ ಇದು ಬಹುಮುಖ್ಯ ಆದಾಯವಾದ್ದರಿಂದ ಪರವಾನಗಿಗಳನ್ನು ಧಾರಾಳವಾಗಿ ನೀಡಲಾಗುತ್ತದೆ.

ಎವರೆಸ್ಟ್ ಶಿಖರದ ಆರೋಹಣ ಪ್ರಾರಂಭವಾಗುವುದು 17,598 ಅಡಿ ಎತ್ತರದಲ್ಲಿರುವ ಖುಂಭು ಹಿಮಾನಿಯ ಸಮೀಪವಿರುವ ಬೇಸ್ ಕ್ಯಾಂಪ್‍ನಿಂದ. ಪ್ರತಿವರ್ಷ, ಏಪ್ರಿಲ್- ಜೂನ್‍ ನಡುವಿನ ‘ಕ್ಲೈಂಬಿಂಗ್ ಸೀಸನ್’ನಲ್ಲಿ ಈ ಶಿಬಿರ ಪ್ರಪಂಚದ ವಿವಿಧ ಭಾಗಗಳ ಪರ್ವತಾರೋಹಿಗಳು ಮತ್ತು ಅವರ ಸಹಾಯಕರಿಂದ ತುಂಬಿಹೋಗುತ್ತದೆ. ಈ ಮೂರು ತಿಂಗಳ ಅವಧಿಗೆ ಟೆಂಟುಗಳ ಒಳಗೆ ತಾತ್ಕಾಲಿಕ ಶೌಚಾಲಯಗಳು ನಿರ್ಮಾಣವಾಗುತ್ತವೆ. ಅಲ್ಲಿ ಇಟ್ಟಿರುವ ನೀಲಿಯ ಡ್ರಮ್ಮುಗಳು ವಿಸರ್ಜಿಸಿದ ಮಲದಿಂದ ತುಂಬುತ್ತಿದ್ದಂತೆ ಅವುಗಳನ್ನು ಸಾಗರಮಾತಾ ರಾಷ್ಟ್ರೀಯ ಉದ್ಯಾನದೊಳಗಿರುವ ಗೊರಕ್ ಶೆಪ್ ಎಂಬ ಹಳ್ಳಿಗೆ ತಂದು, ಹೆಪ್ಪುಗಟ್ಟಿರುವ ಕೆರೆಯ ಅಂಗಳದಲ್ಲಿ ಸುರಿಯಲಾಗುತ್ತದೆ. ಪ್ರತಿವರ್ಷ ಮೂರು ತಿಂಗಳ ಅವಧಿಯಲ್ಲಿ ಬೇಸ್ ಕ್ಯಾಂಪ್‌ನಲ್ಲಿ ಉತ್ಪತ್ತಿಯಾಗುವ ಮಲದ ಪ್ರಮಾಣ ಸುಮಾರು 12,000 ಕಿ.ಗ್ರಾಂ ಅಥವಾ 12 ಟನ್‍ಗಳು.

ಇದೀಗ ಗೊರಕ್ ಶೆಪ್ ಕೆರೆಯ ಅಂಗಳದಲ್ಲೂ ಜಾಗವಿಲ್ಲದಂತಾಗಿ, ಈ ಹಳ್ಳಿಗಿಂತ ಕೆಳಗೆ ನದಿತೊರೆಗಳ ದಡದಲ್ಲಿ ಸಣ್ಣ ಗುಂಡಿಗಳನ್ನು ತೋಡಿ, ಸಂಗ್ರಹವಾದ ಮಲವನ್ನು ಅವುಗಳಲ್ಲಿ ಸುರಿಯಲಾಗುತ್ತಿದೆ. ಮಳೆ ಮತ್ತು ಬೇಸಿಗೆಯಲ್ಲಿ ಹಿಮ ಕರಗಿದಾಗ ಈ ತೊರೆಗಳಲ್ಲಿ ಹರಿಯುವ ನೀರು, ಗುಂಡಿಗಳಲ್ಲಿರುವ ಹೊಲಸನ್ನು ಕುಡಿಯುವ ನೀರಿನ ಆಗರಗಳಿಗೆ ಸೇರಿಸುತ್ತದೆ.

ಎವರೆಸ್ಟ್ ಬೇಸ್ ಕ್ಯಾಂಪ್‍ನಿಂದ ಮೇಲೇರಿ, ಪರ್ವತದ ಹವೆಗೆ ಹೊಂದಿಕೊಂಡು, ಬೇರೆ ಬೇರೆ ಶಿಬಿರಗಳಲ್ಲಿ ತಂಗಿ, ಹವಾಮಾನ ಅನುಕೂಲವಾದಾಗ ಶಿಖರದ ನೆತ್ತಿಯನ್ನು ತಲುಪಲು ಸರಾಸರಿ 40 ದಿನಗಳು ಬೇಕೆಂಬ ಅಂದಾಜಿದೆ. ಬೇಸ್ ಕ್ಯಾಂಪ್ ಬಿಟ್ಟಮೇಲೆ ಬೇರೆಲ್ಲೂ ಶೌಚ ವ್ಯವಸ್ಥೆಯಿಲ್ಲ. ಹೀಗಾಗಿ ಅಲ್ಲಿಂದ ಮೇಲೇರುವ ಎಲ್ಲರೂ ಕಡ್ಡಾಯವಾಗಿ ಬೇಕಾದಷ್ಟು ಶೌಚಚೀಲಗಳನ್ನು (ಟಾಯ್ಲೆಟ್ ಬ್ಯಾಗ್) ಕೊಂಡೊಯ್ಯಬೇಕು. ಬಳಸಿದ ಮೇಲೆ ಎಸೆಯದೇ ಬೇಸ್ ಕ್ಯಾಂಪ್‍ಗೆ ತರಬೇಕು. ಹೀಗೆ ಸರಾಸರಿ ನಲವತ್ತು ದಿವಸಗಳ ಸರಕನ್ನು ಹೊರುವುದು ರೇಜಿಗೆಯ ಕೆಲಸ. ಎಲ್ಲರೂ ಈ ಸೂಚನೆಯನ್ನು ಪಾಲಿಸುವುದಿಲ್ಲ. ಅಗತ್ಯ ಬಿದ್ದಾಗ ಹಿಮದಲ್ಲಿಯೇ ಗುಳಿ ತೋಡಿ, ಬಳಸಿದ ಬಳಿಕ ಅದನ್ನು ಹಿಮದಿಂದ ಮುಚ್ಚುವುದು ನಡೆಯುತ್ತದೆ. ಈ ವ್ಯರ್ಥ ಪದಾರ್ಥವೂ ಮುಂದೊಮ್ಮೆ ನದಿ, ತೊರೆಗಳನ್ನು ಸೇರುತ್ತದೆ.

ಎವರೆಸ್ಟ್ ಏರುವವರೆಲ್ಲರೂ 4,000 ಡಾಲರ್‌ಗಳ ಠೇವಣಿಯನ್ನಿಡಬೇಕು. ಅಲ್ಲಿಂದ ಕೆಳಗೆ ಇಳಿದುಬರುವಾಗ 8 ಕಿ.ಗ್ರಾಂ ತ್ಯಾಜ್ಯವನ್ನು ತರುವವರಿಗೆ 4,000 ಡಾಲರ್‌ಗಳ ಠೇವಣಿಯನ್ನು ಹಿಂದಿರುಗಿಸಲಾಗುತ್ತದೆ. ಈ ಸೂಚನೆಯನ್ನು ಬಹುತೇಕ ಪರ್ವತಾರೋಹಿಗಳು ಪಾಲಿಸಿದರೂ ಹೀಗೆ ತಂದ ವಸ್ತುಗಳಲ್ಲಿ ಮಲ ಇರುವುದಿಲ್ಲ.

ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಸಂಘಟಿತ ಪ್ರಯತ್ನ ಪ್ರಾರಂಭವಾದದ್ದು 2010ರಲ್ಲಿ. ಅಮೆರಿಕದ ಪರ್ವತಾರೋಹಣ ಮಾರ್ಗದರ್ಶಕ ಡ್ಯಾನ್ ಮಜೂರ್ ಮತ್ತು ಎಂಜಿನಿಯರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆಯ ಗ್ಯಾರಿ ಪೋರ್ಟರ್ ಅವರ ಆಸಕ್ತಿಯಿಂದ. ಅವರು ಯೋಚಿಸಿದ ಸರಳ ಪರಿಹಾರವೆಂದರೆ, ನೇಪಾಳದಲ್ಲಿ ಆ ವೇಳೆಗಾಗಲೇ ವ್ಯಾಪಕವಾಗಿ ಬಳಕೆಯಲ್ಲಿದ್ದ ಜೈವಿಕ ಅನಿಲ ಘಟಕಗಳನ್ನು ಬೇಸ್ ಕ್ಯಾಂಪ್‍ನಲ್ಲಿ ಸ್ಥಾಪಿಸಿ, ತ್ಯಾಜ್ಯದಿಂದ ಮೀಥೇನ್ ಅನಿಲವನ್ನು ಉತ್ಪಾದಿಸಿ ಸ್ಥಳೀಯ ಸಮುದಾಯಕ್ಕೆ ಇಂಧನವಾಗಿ ಒದಗಿಸುವುದು. ಆದರೆ ಈ ಯೋಜನೆಗೆ ಎದುರಾದ ಸಮಸ್ಯೆಗಳು ಹಲವಾರು.

ಬಳಕೆಯಲ್ಲಿರುವ ಜೈವಿಕ ಸ್ಥಾವರಗಳು ಕಡಿಮೆ ಎತ್ತರದ ಭೂ ಪ್ರದೇಶಗಳಲ್ಲಿ ಮತ್ತು 20ರಿಂದ 30 ಡಿಗ್ರಿ ತಾಪದಲ್ಲಿ ಎಲ್ಲ ರೀತಿಯ ಜೈವಿಕ ತ್ಯಾಜ್ಯವನ್ನೂ ಬಳಸಿ ಕೆಲಸ ಮಾಡುವಂತಹವು. ಡ್ಯಾನ್ ಮಜೂರ್ ಮತ್ತು ಗ್ಯಾರಿ ಪೋರ್ಟರ್ ಯೋಜನೆಯ ಸ್ಥಾವರಗಳು ಶೂನ್ಯ ತಾಪದಲ್ಲಿ, ಮನುಷ್ಯ ತ್ಯಾಜ್ಯವನ್ನು ಮಾತ್ರ ಬಳಸಿ ಮೀಥೇನ್ ಉತ್ಪಾದಿಸಬೇಕಿತ್ತು. ಪರ್ವತಾರೋಹಿಗಳು ಆರೋಗ್ಯ ರಕ್ಷಣೆಗೆ ಬಹಳಷ್ಟು ಪ್ರಮಾಣದಲ್ಲಿ ///ಜೀವಿರೋಧಕಗಳನ್ನು/// ಬಳಸುವುದರಿಂದ ಅವರು ವಿಸರ್ಜಿಸಿದ ತ್ಯಾಜ್ಯದಲ್ಲಿನ //ಜೀವಿರೋಧಕಗಳು,// ವ್ಯರ್ಥವಸ್ತುವನ್ನು ವಿಘಟಿಸುವ ಬ್ಯಾಕ್ಟೀರಿಯಾಗಳ ಕಾರ್ಯಕ್ಷಮತೆಗೆ ತೊಂದರೆಯುಂಟುಮಾಡುತ್ತಿದ್ದವು. ಈ ಸಮಸ್ಯೆಗಳನ್ನು ಪರಿಹರಿಸಲು ಕಠ್ಮಂಡು ವಿಶ್ವವಿದ್ಯಾಲಯ ಮತ್ತು ಅಮೆರಿಕದ ಸಿಯಾಟಲ್ ವಿಶ್ವವಿದ್ಯಾಲಯದ ಸಂಶೋಧಕರು ಕೈಜೋಡಿಸಿದರು. ಜೈವಿಕ ಸ್ಥಾವರದ ಮೂಲ ವಿನ್ಯಾಸವನ್ನು ಬದಲಿಸಿ, ಸ್ಥಾವರದಿಂದ ಹೊರಹೋಗುವ ಶಾಖವನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದರು. ಸೌರವಿದ್ಯುತ್ ಬಳಕೆಯಿಂದ ಸ್ಥಾವರದೊಳಗಿನ ತಾಪವನ್ನು 20-30 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿ ಇರಿಸಿದರು. ಕಠ್ಮಂಡು ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಈ ಹೊಸ ವಿನ್ಯಾಸದ ಜೈವಿಕ ಅನಿಲ ಸ್ಥಾವರ ಯಶಸ್ವಿಯಾಗಿದೆ. ಈಗ ಎವರೆಸ್ಟ್ ಬೇಸ್ ಕ್ಯಾಂಪ್‍ನಲ್ಲಿ ಅದರ ನಿರ್ಮಾಣ ಪ್ರಾರಂಭವಾಗಬೇಕಿದೆ.

ಕಟ್ಟಡ ಸಾಮಗ್ರಿಗಳನ್ನು 17,500 ಅಡಿ ಎತ್ತರಕ್ಕೆ ಸಾಗಿಸಬೇಕಿರುವುದರಿಂದ ಜೈವಿಕ ಅನಿಲ ಸ್ಥಾವರದ ನಿರ್ಮಾಣ ಸಹಜವಾಗಿಯೇ ಬಹಳಷ್ಟು ದುಬಾರಿಯಾಗಲಿದೆ. ಮೂರು ತಿಂಗಳ ಕ್ಲೈಂಬಿಂಗ್ ಸೀಸನ್‍ನಲ್ಲಿ ಉತ್ಪತ್ತಿಯಾಗುವ 12,000 ಕಿಲೊಗ್ರಾಂಗಳಷ್ಟು ಮಾನವ ತ್ಯಾಜ್ಯವನ್ನು, ಜೈವಿಕ ಅನಿಲದ ಉತ್ಪಾದನೆಗೆ ಉಳಿದ ಒಂಬತ್ತು ತಿಂಗಳು ಬಳಸಬೇಕಿರುವುದರಿಂದ ಅದರ ಸಂಗ್ರಹಕ್ಕೆ ವಿಶೇಷ ವ್ಯವಸ್ಥೆ ಮಾಡಬೇಕಿದೆ. ಈ ಎಲ್ಲ ಪ್ರಯತ್ನಗಳ ಜೊತೆಗೆ ಬೇಸ್ ಕ್ಯಾಂಪ್ ದಾಟಿ ಮೇಲೇರುವ ಪರ್ವತಾರೋಹಿಗಳು ತಾವು ಬಳಸಿದ ಟಾಯ್ಲೆಟ್ ಬ್ಯಾಗ್‍ಗಳನ್ನು ಕಡ್ಡಾಯವಾಗಿ ಕೆಳಗೆ ತರುವಂತೆ ಮಾಡಬೇಕಿದೆ.

ಈ ಎಲ್ಲ ಸವಾಲುಗಳ ನಡುವೆಯೇ 2023ರ ಕ್ಲೈಂಬಿಂಗ್ ಸೀಸನ್ ಪ್ರಾರಂಭವಾಗಿದೆ. ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸುವಂತೆ ಪ್ರಪಂಚದ 65 ದೇಶಗಳ 466 ಪರ್ವತಾರೋಹಿಗಳಿಗೆ ಎವರೆಸ್ಟ್ ಆರೋಹಣಕ್ಕೆ ಪರವಾನಗಿ ನೀಡಲಾಗಿದೆ. ಇವರಲ್ಲಿ 368 ಪುರುಷರು, 98 ಮಹಿಳೆಯರಿದ್ದಾರೆ. ಗರಿಷ್ಠ 96 ಪರ್ವತಾರೋಹಿಗಳು ಚೀನಾದಿಂದ ಬಂದಿದ್ದರೆ, ಅಮೆರಿಕದಿಂದ 89 ಮತ್ತು ಭಾರತದಿಂದ 40 ಜನರಿದ್ದಾರೆ. ಇವರೊಡನೆ ಕನಿಷ್ಠ 500 ಶೆರ್ಪಾ ಸಹಾಯಕರು, ಮಾರ್ಗದರ್ಶಕರು, ಪೋರ್ಟರುಗಳು ವಿವಿಧ ತಂಡಗಳಲ್ಲಿದ್ದಾರೆ. ಜೈವಿಕ ಅನಿಲ ಸ್ಥಾವರದ ನಿರ್ಮಾಣಕ್ಕೆ ಕನಿಷ್ಠ ಮತ್ತೊಂದು ವರ್ಷ ಕಾಯಬೇಕಾದ ಪರಿಸ್ಥಿತಿ ಇರುವುದರಿಂದ, ಈ ಪ್ರದೇಶದ ಪರಿಸರವನ್ನು ಸಂರಕ್ಷಿಸಲು ಶ್ರಮಿಸುತ್ತಿರುವ, ಶೆರ್ಪಾ ಸಮುದಾಯದ ಸಾಗರಮಾತಾ ಮಾಲಿನ್ಯ ನಿಯಂತ್ರಣ ಸಮಿತಿಯ ಸದಸ್ಯರು ಬೇಸ್ ಕ್ಯಾಂಪ್‍ನ ಎಲ್ಲ ಪರ್ವತಾರೋಹಿಗಳನ್ನು ಭೇಟಿ ಮಾಡಿ, ಅವರ ಮನ ಒಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಎವರೆಸ್ಟ್ ಪ್ರದೇಶದ ಪರಿಸರವನ್ನು ಸಂರಕ್ಷಿಸಲು ರೂಪಿಸಿರುವ ನೀತಿ, ನಿಯಮಗಳನ್ನು ಪಾಲಿಸದ ಎಲ್ಲ ದೇಶಗಳ ಪರ್ವತಾರೋಹಿಗಳನ್ನು ಈ ಪ್ರದೇಶಕ್ಕೆ ಕಾಲಿಡದಂತೆ ಶಾಶ್ವತವಾಗಿ ನಿಷೇಧಿಸಬೇಕೆಂಬ ಆಗ್ರಹ ಹೆಚ್ಚುತ್ತಿದೆ. ಗೊರಕ್ ಶೆಪ್‍ನಿಂದ ಬೇಸ್‍ಕ್ಯಾಂಪ್‍ಗೆ ಏರುವ ಟ್ರೆಕಿಂಗ್ ದಾರಿಯನ್ನು, ಧರ್ಮಗುರು ದಲೈಲಾಮಾ, ‘ಸ್ವರ್ಗಕ್ಕೆ ಏರುವ ಸೋಪಾನ’ ಎಂದಿದ್ದರು. ಆದರೆ ಈಗ ಈ ಸೋಪಾನವನ್ನು ಏರುವಾಗ ಬಲವಂತವಾಗಿ ಮೂಗು ಮುಚ್ಚಿಕೊಳ್ಳದೇ ವಿಧಿಯಿಲ್ಲ! ಈ ಪರಿಸ್ಥಿತಿಯನ್ನು ತಪ್ಪಿಸಲು ಎಲ್ಲ ಪರ್ವತಾರೋಹಿಗಳೂ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ತೇನ್‍ಸಿಂಗ್ ನಾರ್ಗೆ ಮತ್ತು ಎಡ್ಮಂಡ್ ಹಿಲರಿಯವರ ಮಕ್ಕಳು ಎಲ್ಲ ಪರ್ವತಾರೋಹಿಗಳಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT