ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ರಾಜ್ಯಕ್ಕೆ ಬೇಕಿದೆ ಆರನೇ ಗ್ಯಾರಂಟಿ

ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ನೂತನ ಸರ್ಕಾರ ಸಿದ್ಧವಿದೆಯೇ?
Published 25 ಮೇ 2023, 23:28 IST
Last Updated 25 ಮೇ 2023, 23:28 IST
ಅಕ್ಷರ ಗಾತ್ರ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಮಾರನೇ ದಿನ ಇಂಗ್ಲಿಷಿನಲ್ಲಿ ಒಂದು ಟ್ವೀಟ್ ಮಾಡಿದರು (ಕನ್ನಡದಲ್ಲಿ ಅದು ಬರಲಿಲ್ಲ ಎಂಬುದು ಗಮನಾರ್ಹ). ಅವರ ಮೊಮ್ಮಗ ಬೆಂಗಳೂರಿನ ಕೆನಡಿಯನ್ ಇಂಟರ್‌ನ್ಯಾಷನಲ್ ಸ್ಕೂಲಿನಲ್ಲಿ– ಇಲ್ಲಿ ವಾರ್ಷಿಕ ಶುಲ್ಕ ₹ 5.5 ಲಕ್ಷ– 12ನೇ ತರಗತಿ ಮುಗಿಸಿದ ನಂತರದ ಬೀಳ್ಕೊಡುಗೆ ಸಮಾರಂಭದಲ್ಲಿ ತಾವು ಭಾಗವಹಿಸಿದ್ದ ಮಾಹಿತಿಯನ್ನು ಚಿತ್ರಸಮೇತ ಹಂಚಿಕೊಂಡಿದ್ದರು. ಅವರ ಮೊಮ್ಮಗನ ಮುಂದಿನ ಶಿಕ್ಷಣ ಕರ್ನಾಟಕದ ಯಾವುದೇ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಂಭವವಿಲ್ಲ ಎಂದು ನಾವು ಊಹಿಸಿದರೆ ತಪ್ಪಾಗಲಾರದು. ಅವನ ಭವಿಷ್ಯಕ್ಕೆ ಶುಭ ಹಾರೈಸುತ್ತಾ ಮುಖ್ಯಮಂತ್ರಿಯವರ ಅವಗಾಹನೆಗಾಗಿ ಕೆಲವು ವಿಚಾರಗಳನ್ನು ತರಬಯಸುವೆ. ಸಿದ್ದರಾಮಯ್ಯ ಅವರದು ಶೋಷಿತರ ಉದ್ಧಾರಕ್ಕಾಗಿ ಸ್ಪಂದಿಸುವ ಹೃದಯವಾದ್ದರಿಂದ ಅವರು ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುವರು ಎಂಬ ಭರವಸೆ ಇದೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ನೇತೃತ್ವದಲ್ಲಿ 2020ರಲ್ಲಿ ರಚಿಸಲಾದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ತನ್ನ ಐದನೇ ವರದಿಯಲ್ಲಿ, ರಾಜ್ಯದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟ ಕುಸಿದು ಹೋಗುತ್ತಿರುವ ದಾರುಣ ಸ್ಥಿತಿಯನ್ನು ಚಿತ್ರಿಸಿದೆ. ಈ ಶಾಲೆಗಳಲ್ಲಿ ಕಲಿಯುವ ಬಹುತೇಕ ಎಲ್ಲರೂ ಹಳ್ಳಿಯ ಬಡ ಕಾರ್ಮಿಕ, ರೈತಾಪಿ ಮತ್ತು ಸಿದ್ದರಾಮಯ್ಯ ಅವರ ರಾಜಕಾರಣದ ಕೇಂದ್ರಬಿಂದುವಾದ ‘ಅಹಿಂದ’ ವರ್ಗಗಳಿಗೆ ಸೇರಿದ ಮಕ್ಕಳೇ ಆಗಿದ್ದಾರೆ. ರಾಜ್ಯ ಪಠ್ಯಕ್ರಮದ ವ್ಯಾಪ್ತಿಗೊಳಪಡುವ ಈ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಎಂಬಿಬಿಎಸ್‌ನಂತಹ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸರ್ಕಾರಿ ಕೋಟಾದಡಿ, ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ, ಆರ್ಥಿಕವಾಗಿ ಸಬಲರಾದ ವಿದ್ಯಾರ್ಥಿಗಳಿಗೇ ಸಿಂಹಪಾಲು ದೊರೆಯುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಮುಂದೆ ಕೂಲಿ, ಚಾಕರಿ ಮಾಡುವುದೊಂದೇ ಗತಿ ಎಂದು ತಿಳಿದು, ಲಕ್ಷಾಂತರ ಬಡ ಮಕ್ಕಳು ಇಂದು ಸರ್ಕಾರಿ ಶಾಲೆಗಳನ್ನು ತ್ಯಜಿಸಿ, ಅತಿ ಹೆಚ್ಚು ಶುಲ್ಕ ಕಟ್ಟಬೇಕಾದ– ಸಾಮಾನ್ಯವಾಗಿ ಕಳಪೆ ಗುಣಮಟ್ಟದ– ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರುತ್ತಿದ್ದಾರೆ.

ಕನ್ನಡ ಭಾಷೆಯು ಕರ್ನಾಟಕದ ಸಂಸ್ಕೃತಿಯ ಜನನಿಯೂ ಹೌದು, ಸಂರಕ್ಷಕವೂ ಹೌದು. ಶಿಕ್ಷಣದಲ್ಲಿ ಈಗ ನಡೆಯುತ್ತಿರುವಂತೆ ಮಾತೃಭಾಷೆಯ ಭಯಾನಕ ಉಪೇಕ್ಷೆ ಮುಂದುವರಿದರೆ, ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ವಿಷಮಯ ವಾತಾವರಣ ಸೃಷ್ಟಿಯಾಗುತ್ತದಷ್ಟೇ ಅಲ್ಲ ಅದು ಇನ್ನಷ್ಟು ಗಟ್ಟಿಗೊಳ್ಳುತ್ತದೆ.

ಈ ಸ್ಥಿತಿಯ ಸುಧಾರಣೆಗೆ ಆಯೋಗವು ಕೆಲವು ಶಿಫಾರಸುಗಳನ್ನು ಮಾಡಿದೆ. ಶಿಕ್ಷಣ ಕ್ಷೇತ್ರವಲ್ಲದೆ ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವ ಆರೋಗ್ಯ, ಕೃಷಿ, ಪಶುಸಂಗೋಪನ, ಮತ್ಸ್ಯಕೃಷಿ, ಮೂಲಸೌಕರ್ಯ ನಿರ್ಮಾಣ, ಕೊಳಚೆ ಪ್ರದೇಶಗಳ ಸುಧಾರಣೆ, ಸಕಾಲದಲ್ಲಿ ಸರ್ಕಾರಿ ಸೇವೆಗಳ ಪೂರೈಕೆ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ, ಮಹಿಳಾ ಸಶಕ್ತೀಕರಣದಂತಹ ರಾಜ್ಯ ಸರ್ಕಾರದ ಎಲ್ಲ ವಿಭಾಗಗಳಲ್ಲಿಯೂ ಆಗಲೇಬೇಕಾಗಿರುವ ಆಡಳಿತ ಸುಧಾರಣೆಗಳ ಬಗ್ಗೆ ಮಹತ್ವದ ಸಲಹೆ, ಸೂಚನೆಗಳನ್ನು ನೀಡಿದೆ.

ಸರ್ಕಾರಿ ವ್ಯವಸ್ಥೆಯಲ್ಲಿ ದೈತ್ಯಾಕಾರವಾಗಿ ಬೆಳೆದಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಸಂಬಂಧಿಸಿದಂತೆಯೂ ಅದು ಶಿಫಾರಸುಗಳನ್ನು ಸಲ್ಲಿಸಿದೆ. ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳಾಗದಿದ್ದರೆ, ಸರ್ಕಾರಿ ಸೇವೆಗಳ ಕಾರ್ಯನಿರ್ವಹಣೆಯಲ್ಲಿ ವಿಳಂಬ ತಪ್ಪಿಸಿ, ನೌಕರಶಾಹಿಯ ಉಪಟಳವನ್ನು ನಿಯಂತ್ರಿಸದಿದ್ದರೆ ಭ್ರಷ್ಟಾಚಾರ ಹೋಗಲಾರದು, ಕರ್ನಾಟಕದ ಸಮಗ್ರ ಅಭಿವೃದ್ಧಿಯು ವೇಗ ಪಡೆಯಲಾರದು ಹಾಗೂ ಅದು ಸಮಗ್ರ ದೃಷ್ಟಿಕೋನವನ್ನೂ ಹೊಂದಿರಲಾರದು. ಅಭಿವೃದ್ಧಿ ಕಾರ್ಯ ವಿಳಂಬವಾದರೆ ಮತ್ತು ರಾಜ್ಯದ ಸಾಮಾಜಿಕ, ಭೌಗೋಳಿಕ ಅಸಮಾನತೆಗೆ ಅದು ಪೂರಕವಾಗಿ ಇದ್ದರೆ ಅದರ ಪರಿಣಾಮವನ್ನು ಅನುಭವಿಸುವವರು ಯಾರು? ಹಳ್ಳಿ- ಪಟ್ಟಣಗಳಲ್ಲಿನ ಎಲ್ಲ ಜಾತಿ, ಪಂಥಗಳಿಗೆ ಸೇರಿದ ಕೋಟ್ಯಂತರ ಮಂದಿಯಲ್ಲಿ ಹೆಚ್ಚಿನವರು ಬಡವರು, ಶ್ರಮಿಕರು ಹಾಗೂ ಮಧ್ಯಮ ವರ್ಗದವರೇ ಅಲ್ಲವೆ? ಇದು ನಿರ್ವಿವಾದವಾಗಿದ್ದರೂ ಸುಶಾಸನಕ್ಕೆ ಅಗತ್ಯವಾದ ಸುಧಾರಣೆಗಳ ಕುರಿತು ರಾಜಕೀಯ ಪಕ್ಷಗಳು ಮತ್ತು ಪ್ರಗತಿಪರ ಸಂಘ ಸಂಸ್ಥೆಗಳಲ್ಲಿ ಚರ್ಚೆ, ಬೇಡಿಕೆ, ಒತ್ತಾಯದ ಅಭಾವ ಇರುವುದು ವಿಷಾದನೀಯ.

ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ತಂದುಕೊಟ್ಟದ್ದು ಅತ್ಯಂತ ಸ್ವಾಗತಾರ್ಹ. ಭ್ರಷ್ಟಾಚಾರವನ್ನು ಗಗನಕ್ಕೇರಿಸಿದ, ಸಮಾಜ ವಿಭಜಕ ಕೋಮುದ್ವೇಷದ ರಾಜಕಾರಣ ನಡೆಸಿದ ಹಾಗೂ ಡಬಲ್ ಎಂಜಿನ್ ಸರ್ಕಾರ ಎಂಬ ಸಂವಿಧಾನ ವಿರೋಧಿ ತತ್ವದ ಪ್ರತಿಪಾದನೆ ಮಾಡಿದ ಬಿಜೆಪಿಗೆ ಪಾಠ ಕಲಿಸುವುದು ಅವಶ್ಯವಾಗಿತ್ತು. ಯಾವುದೇ ಪಕ್ಷಕ್ಕೆ ಅಂಟಿಕೊಂಡಿರದ ನಾನು ಕೂಡ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯಕ್ಕಾಗಿ ಪ್ರವಾಸ, ಪ್ರಚಾರ ಮಾಡಿದೆ. ಆದರೆ ವಿಷಾದದ ಸಂಗತಿಯೆಂದರೆ, ಚುನಾವಣಾ ಸಮಯದಲ್ಲಿ ‘ಶಾಸನ ವ್ಯವಸ್ಥೆಯಲ್ಲಿ ಅತ್ಯಗತ್ಯವಾದ ಸುಧಾರಣೆಗಳನ್ನು ತರುವುದು ಕೂಡ ನಮ್ಮ ಗ್ಯಾರಂಟಿ’ ಎಂದು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರಾಗಲೀ ಅಥವಾ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಾಗಲೀ ಖಡಾಖಂಡಿತವಾಗಿ ಹೇಳಲಿಲ್ಲ.

ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತವನ್ನು ಟೀಕಿಸುವುದರ ಹೊರತಾಗಿ ರಾಜ್ಯದ ಜನರಿಗೆ ಕಾಂಗ್ರೆಸ್ ಕೊಟ್ಟ ‘ಐದು ಗ್ಯಾರಂಟಿ’ಗಳ ಬಗ್ಗೆ ಮಾತ್ರ ಅವರು ಮಾತನಾಡುತ್ತಿದ್ದರು. ಈ ಗ್ಯಾರಂಟಿಗಳ ಅಗತ್ಯವನ್ನು ನಾನು ನಿರಾಕರಿಸುವುದಿಲ್ಲ. ಅನ್ಯಾಯ ಮತ್ತು ಉಪೇಕ್ಷೆಗೆ ಒಳಗಾದ ಜನರಿಗೆ ಒಂದಿಷ್ಟು ಪರಿಹಾರಾತ್ಮಕ ನೆರವು ನೀಡುವ ಧೋರಣೆ ಅತ್ಯಂತ ಸ್ತುತ್ಯರ್ಹ. ಆದರೆ ಗ್ಯಾರಂಟಿಗಳನ್ನು ನಾವು ಕಾರ್ಯರೂಪಕ್ಕೆ ತಂದೇ ತೀರುತ್ತೇವೆ ಎಂದು ಮೊದಲ ದಿನವೇ ಘೋಷಿಸಿ, ಅತಿದೊಡ್ಡ ಕ್ರಾಂತಿಕಾರಿ ಕಾರ್ಯ ಮಾಡಿದೆವು ಎಂದು ಸಂತಸಪಡುತ್ತಿರುವ ಕಾಂಗ್ರೆಸ್ಸಿನ ಅಲ್ಪಸಂತುಷ್ಟರಿಗೆ ನಾವು ಒಂದು ಪ್ರಶ್ನೆ ಕೇಳಬೇಕು: ಇಷ್ಟರಿಂದಲೇ ಅಥವಾ ಕೆಲವು ವರ್ಗಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದರಿಂದಲೇ ಬಡವರು ಮತ್ತು ಹಿಂದುಳಿದವರ ಉದ್ಧಾರವಾಗುತ್ತದೆಯೇ? ಹಾಗೆ ನೋಡಿದರೆ ಈ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡುವುದು ತುಲನಾತ್ಮಕವಾಗಿ ಸುಲಭದ ಕಾರ್ಯ. ಇದಕ್ಕೂ ಹೆಚ್ಚು ಕಠಿಣವಾದ, ಆದರೆ ಬಡವರ ಸುಸ್ಥಿರ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಅನಿವಾರ್ಯವಾದ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಇದೆಯೋ ಇಲ್ಲವೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.

ಶೇ 40ರಷ್ಟು ಕಮಿಷನ್ ಆರೋಪವು ಬಿಜೆಪಿ ನೇತೃತ್ವದ ಸರ್ಕಾರದ ಮೇಲಿತ್ತು. ಕಮಿಷನ್‌ ಪ್ರಮಾಣವನ್ನು ಶೇ 5- 10ಕ್ಕಾದರೂ ತಂದು ನಿಲ್ಲಿಸಿದರೆ ಸರ್ಕಾರದ ವರಮಾನದಲ್ಲಿ ಭಾರಿ ಹೆಚ್ಚಳವಾಗುವುದಲ್ಲದೆ ಆರ್ಥಿಕ ಪ್ರಗತಿಯೂ ವರ್ಧಿಸುತ್ತದೆ. ಜೊತೆಗೆ ಕೃಷಿ ಸಹಿತವಾಗಿ ಹೈಟೆಕ್ ಆಧಾರಿತ ಸಣ್ಣ, ಮಧ್ಯಮ, ದೊಡ್ಡ ಕೈಗಾರಿಕೆ ಹಾಗೂ ವ್ಯಾಪಾರಗಳಿಗೆ ಚಾಲನೆ ಕೊಡುವ, ದೇಶ ವಿದೇಶಗಳಿಂದ ಭಾರಿ ಪ್ರಮಾಣದಲ್ಲಿ ಬಂಡವಾಳ ತರುವ, ಉತ್ತರ ಕರ್ನಾಟಕದಲ್ಲೂ ಎಲ್ಲ ತರಹದ ಅಭಿವೃದ್ಧಿಗೆ ಪ್ರೋತ್ಸಾಹ ಕೊಡುವ ಧೋರಣೆಗಳನ್ನು ಅನುಸರಿಸಿದರೆ ರಾಜ್ಯದ ಜಿಡಿಪಿಯನ್ನೂ ಬಜೆಟ್ಟಿನ ಗಾತ್ರವನ್ನೂ ದುಪ್ಪಟ್ಟುಗೊಳಿಸಬಹುದು. ಇದರಿಂದ ‘ಐದು ಗ್ಯಾರಂಟಿ’ಗಳಿಗೆ ಹಣಕಾಸು ಒದಗಿಸುವುದರ ಹೊರತಾಗಿ ಇನ್ನೂ ಹಲವಾರು ಹೊಸ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಾಗೂ ನಿರುದ್ಯೋಗದ ಪ್ರಮಾಣವನ್ನು ತಗ್ಗಿಸಲು ಸಾಧ್ಯ. ಹಿಂದುಳಿದ ಜಾತಿ, ವರ್ಗಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸಿ ಸಕಲ ಸಮುದಾಯಗಳನ್ನೂ ಸಮೃದ್ಧಗೊಳಿಸಲು ಸಾಧ್ಯ. ಆದರೆ ಇವೆಲ್ಲವನ್ನೂ ಮಾಡಲು ಬೇಕಾದ ಸಾಹಸ, ಒಮ್ಮತ ಮತ್ತು ದೂರದೃಷ್ಟಿಯು ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಇದೆಯೇ?

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಭ್ರಷ್ಟಾಚಾರದ ಭದ್ರಕೋಟೆಯಾಗಿರುವುದು ಸರ್ವವಿದಿತ. ಬೆಂಗಳೂರು ಸಹಿತ ಎಲ್ಲ ದೊಡ್ಡ, ಚಿಕ್ಕ ಪಟ್ಟಣಗಳಲ್ಲಿ ಭೂ ಮಾಫಿಯಾವು ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿರುವುದು ಹಾಗೂ ಎಲ್ಲ ಪ್ರಮುಖ ಪಕ್ಷಗಳೂ ರಾಜಕಾರಣವನ್ನು ಹೊಲಸು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಹಿಂದಿನ ಸರ್ಕಾರವು ಅರ್ಹತೆಯಿಲ್ಲದವರನ್ನು ಲಂಚ ಪಡೆದು ಕುಲಪತಿಗಳನ್ನಾಗಿ ನೇಮಿಸಿತ್ತು ಎಂಬ ಆರೋಪವಿದೆ. ಪೊಲೀಸ್ ಇಲಾಖೆಯಲ್ಲಿ ಹುದ್ದೆ ಭರ್ತಿ ಹಾಗೂ ವರ್ಗಾವಣೆ ಲಂಚವಿಲ್ಲದೆ ನಡೆಯುತ್ತಿರಲಿಲ್ಲ. ಜನಪ್ರತಿನಿಧಿಗಳಾಗಿ ಸರ್ಕಾರಿ ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡಿ, ರಾಜ್ಯದ ಸಂಪತ್ತನ್ನು ಕೊಳ್ಳೆಹೊಡೆದು ನೂರಾರು ಕೋಟಿ ರೂಪಾಯಿ ಗಳಿಸಿದ ಅನೇಕರು ನಮ್ಮಲ್ಲಿ ಇದ್ದಾರೆ. ಈ ರೀತಿ ರಾಜಕಾರಣ ಹಾಗೂ ಆಡಳಿತ ಎರಡೂ ವ್ಯವಸ್ಥೆಗಳಿಗೆ ಅಂಟಿಕೊಂಡ ಹಾಗೂ ಪ್ರಜಾಪ್ರಭುತ್ವವನ್ನು ಧನಪ್ರಭುತ್ವವನ್ನಾಗಿ ಕ್ಷೀಣಗೊಳಿಸಿದ ಈ ಮಹಾರೋಗವನ್ನು ಸ್ವಲ್ಪಮಟ್ಟಿಗಾದರೂ ಗುಣಮುಖಗೊಳಿಸುವ ಪ್ರಬಲ ಸಂಕಲ್ಪವನ್ನು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ತೋರಿಸಬಲ್ಲರೇ?

ಆಮೂಲಾಗ್ರ ಶಾಸನ ಸುಧಾರಣೆಗಾಗಿ ಈ ‘ಆರನೇ ಗ್ಯಾರಂಟಿ’ಯನ್ನು ಅವರು ಕೊಟ್ಟರೆ ಹಾಗೂ ಅದನ್ನು ಆಂಶಿಕವಾಗಿಯಾದರೂ ಒಂದು ವರ್ಷದಲ್ಲಿ ಈಡೇರಿಸಿದರೆ ಕರ್ನಾಟಕದ ಪ್ರಬುದ್ಧ ಜನ, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 2023ರ ವಿಧಾನಸಭೆ ಚುನಾವಣೆಯಂತೆಯೇ ಭಾರಿ ಬೆಂಬಲ ನೀಡುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ನಿರಾಸೆಗೊಳಿಸದಿರಿ ಎಂಬುದಷ್ಟೇ ಅವರಲ್ಲಿ ಮಾಡುವ ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT