ಪ್ರಸನ್ನ
ಭ್ರಷ್ಟಾಚಾರ ಎಂದರೆ ಬರೀ ಲಂಚ ರುಶುವತ್ತುಗಳಲ್ಲ. ಬರೀ ಪೊಲೀಸ್ ಪಡೆಯನ್ನು ಹೆಚ್ಚು ಮಾಡುವುದರಿಂದ ಅಥವಾ ಕಾನೂನುಗಳನ್ನು ಹೆಚ್ಚು ಮಾಡುವುದರಿಂದ ಭ್ರಷ್ಟಾಚಾರ ನಿವಾರಣೆಯಾಗುವುದಿಲ್ಲ. ವ್ಯವಸ್ಥೆ ದೊಡ್ಡದಾದಷ್ಟೂ ಸಂಕೀರ್ಣವಾದಷ್ಟೂ ವ್ಯವಸ್ಥಿತ ಭ್ರಷ್ಟಾಚಾರ ಎಂಬುದು ಸಹ ದೊಡ್ಡದಾಗುತ್ತಾ ಹೋಗುತ್ತದೆ.
ಹೌದು, ಭ್ರಷ್ಟತೆಗೂ ವ್ಯವಸ್ಥೆಗಳಿಗೂ ಬಲವಾದ ನಂಟಿದೆ. ಸರ್ಕಾರಗಳು ಮಾತ್ರವೇ ಏಕೆ ಮಠಮಾನ್ಯಗಳು, ಶಾಲೆಗಳು, ಸಂಸಾರಗಳು, ಧರ್ಮಗಳು ಎಲ್ಲವೂ ವ್ಯವಸ್ಥೆಗಳೇ ತಾನೆ? ಎಲ್ಲ ವ್ಯವಸ್ಥೆಗಳೂ ಅದರ ನಾಯಕರ ನೈತಿಕತೆ ಸಡಿಲಗೊಂಡಾಗ ನಾರತೊಡಗುತ್ತವೆ ತಾನೆ? ಅದರೆ ಇದೇ ಜನ ನೈತಿಕ ಗಟ್ಟಿತನ ತೋರಿದಾಗ ವ್ಯವಸ್ಥೆಗಳು ಬೆಳಗುತ್ತವೆ, ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತಿರುತ್ತವೆ. ದುರಂತವೆಂದರೆ, ಇಂದಿನದು ನೈತಿಕ ಗಟ್ಟಿತನದ ಯುಗವೂ ಅಲ್ಲ ಅಥವಾ ಸಾಮಾನ್ಯ ಯುಗವೂ ಅಲ್ಲ. ಇದು ಅಸಾಮಾನ್ಯ ಅವಸರದ ಯುಗವಾಗಿದೆ. ಇಂತಹ ಅವಸರದ ಯುಗಗಳಲ್ಲಿ ನೈತಿಕತೆ ಹಾಗೂ ನಿಯಮಗಳನ್ನು ಗಂಭೀರವಾಗಿ ಪರಿಗಣಿಸುವುದೇ ಅಪರಾಧವಾಗುತ್ತದೆ. ಹಾಗಾಗಿ ಭ್ರಷ್ಟಾಚಾರಕ್ಕೆ ಹೇಳಿ ಮಾಡಿಸಿದ ಯುಗವಿದು.
ವ್ಯವಸ್ಥೆಗಳಿಗೆ ಎರಡು ಆಯಾಮಗಳಿರುತ್ತವೆ. ವ್ಯವಸ್ಥೆಯನ್ನು ರೂಪಿಸಿದ ಆಶಯ ಹಾಗೂ ಆಶಯದ ನಿರ್ವಹಣೆಗಾಗಿ ಮಾಡಿಕೊಂಡಿರುವ ವ್ಯವಸ್ಥೆ. ಅಥವಾ, ಆಡಳಿತ ಅಥವಾ ಕಾನೂನು ಅಥವಾ ನೀತಿನಿಯಮ ಅಥವಾ ಆಚರಣೆ. ವ್ಯವಸ್ಥೆ ಎಂತಹದ್ದೇ ಇರಲಿ ಭ್ರಷ್ಟತೆ ಇದ್ದೇ ಇರುತ್ತದೆ. ಏಕೆಂದರೆ, ಮನುಷ್ಯನಿಗೆ ಲಾಲಸೆ ಸಹಜವಾದದ್ದು ತಾನೆ? ಆಶಯಕ್ಕೆ ಆಕಾರ ಕೊಡಬೇಕಾದವರು ನಾವೇ ತಾನೆ? ಕೆಲಸವೊಂದನ್ನು ಯಾಕಾಗಿ ಮಾಡುತ್ತಿದ್ದೇವೆ, ಯಾರಿಗಾಗಿ ಮಾಡುತ್ತಿದ್ದೇವೆ, ಮೂಲ ಆಶಯವಾದರೂ ಏನು ಎಂಬ ಪ್ರಶ್ನೆಗೆ ನಾವು ಪುನಃ ಪುನಃ ಮರಳುತ್ತಿರಬೇಕು. ಮಾತ್ರವಲ್ಲ, ಗಾಂಧೀಜಿ ಹೇಳಿದ ಹಾಗೆ, ಈ ವಿಷಯದಲ್ಲಿ ಗೊಂದಲ ಮೂಡಿದಾಗಲೆಲ್ಲ ಸಮಾಜದ ಕಟ್ಟಕಡೆಯ ದರಿದ್ರನ ದೃಷ್ಟಿಕೋನದಲ್ಲಿ ನಮ್ಮನ್ನು ನಾವೇ ವಿಮರ್ಶಿಸಿಕೊಳ್ಳುತ್ತಿರಬೇಕು. ಆಗಮಾತ್ರ ವ್ಯವಸ್ಥಿತ ಭ್ರಷ್ಟಾಚಾರ ಎಂಬುದು ಕೊಂಚ ಹಿಡಿತದಲ್ಲಿರುತ್ತದೆ. ಹಾಗೆ ನೋಡಿದರೆ, ಆಚರಣೆಗಳ ಬಗೆಗಿನ ಬ್ರಾಹ್ಮಣಿಕೆ ಹಾಗೂ ಆಶಯದ ಬಗೆಗಿನ ಅಸಡ್ಡೆಯೇ ಭ್ರಷ್ಟಾಚಾರದ ಮೂಲವಾಗಿದೆ.
ನನ್ನೀ ಮಾತಿನಿಂದಾಗಿ ಜಾತಿ ಬ್ರಾಹ್ಮಣರು ನೊಂದುಕೊಳ್ಳಬೇಕಾದ ಅಗತ್ಯವಿಲ್ಲ. ಬ್ರಾಹ್ಮಣಿಕೆ ಎಂಬುದು ಯಾವುದೇ ಒಂದು ಜಾತಿಗೆ ಸೀಮಿತವಾದ ರೋಗವಾಗಿ ಉಳಿದಿಲ್ಲ ಇಂದು. ಎಲ್ಲರೂ ಎಲ್ಲವನ್ನೂ ಬರೀ ಮಂತ್ರವನ್ನಾಗಿಸಿ ಬರಿದೇ ಉಗುಳುವುದನ್ನು ಕಲಿತಿದ್ದೇವೆ. ಎಲ್ಲ ಮಹತ್ತರವಾದ ಸಂಗತಿಗಳನ್ನೂ ಸುಲಭ ಕರ್ಮಕಾಂಡಗಳನ್ನಾಗಿಸಿ ಬರಿದೇ ಮೆರೆಸುತ್ತಿದ್ದೇವೆ. ಕೇವಲ ಬೃಹತ್ ಮಂದಿರಗಳು, ಬೃಹತ್ ಮಸೀದಿಗಳು, ಬೃಹತ್ ವಿಧಾನಸೌಧಗಳಂತಹವನ್ನು ನಿರ್ಮಿಸುವುದು ಬ್ರಾಹ್ಮಣಿಕೆ ಅಥವಾ ಕೆಂಪುಪಟ್ಟಿ ವ್ಯವಸ್ಥೆ. ಫೈಲುಗಳಿಗೆ ಷರಾ ಬರೆದು ಅದನ್ನು ಪರಿಶುದ್ಧ ಕೆಂಪುಪಟ್ಟಿಯಿಂದ ಬಿಗಿದು ಪರಿಶುದ್ಧ ಕಪಾಟುಗಳಲ್ಲಿ ಜೋಡಿಸಿದರೆ ಜನಕಲ್ಯಾಣ ಸಾಧಿಸಿಬಿಡುತ್ತದೆ ಎಂದು ನಂಬುವ ಪ್ರವೃತ್ತಿಯಿದು.
ಕಲ್ಯಾಣದ ಕ್ರಾಂತಿ ಮುಗಿದು ನಾಲ್ಕು ಶತಮಾನ ಕಳೆದಿತ್ತು. ಲಿಂಗಾಯತವು ಭದ್ರವಾದ ಒಂದು ಜಾತಿಯಾಗಿ ರೂಪುಗೊಂಡಿತ್ತು. ಕಾಯಕವೆಂದರೆ ಕೌಶಲಪೂರ್ಣವಾದ ಕೈಕೆಲಸ ಎಂಬ ಪರಿಕಲ್ಪನೆ ಕ್ರಮೇಣ ಹಿನ್ನೆಲೆಗೆ ಸರಿದಿತ್ತು. ಬದಲಿಗೆ, ಕಾಯಕವೆಂದರೆ ಲಿಂಗಪೂಜೆ ಎಂಬ ಬ್ರಾಹ್ಮಣಿಕೆ ಮುನ್ನೆಲೆಗೆ ಬಂದಿತ್ತು. ಕಲ್ಯಾಣದ ಕ್ರಾಂತಿಯ ಕಾರ್ಯಕರ್ತರೆಲ್ಲರೂ ಪರಿಶುದ್ಧವಾದ ಕಾವಿ ತೊಟ್ಟು ವಿಭೂತಿ ತೊಟ್ಟು ದಾಸೋಹದ ಹೆಸರಿನಲ್ಲಿ ಭೂರಿ ಭೋಜನ ಉಣ್ಣುತ್ತ ಜಂಗಮ ಬ್ರಾಹ್ಮಣರಾಗಿ ಪರಿವರ್ತಿತರಾಗಿದ್ದರು. ಲಿಂಗಾಯತವು ಕಳೆಗುಂದಿತ್ತು. ಇತ್ತ, ಕಾಯಕಜೀವಿಗಳು ಮತ್ತಷ್ಟು ಹೀನಾಯರಾಗಿದ್ದರು. ಆಗ, ಅಲ್ಲಮರು ಮತ್ತೊಮ್ಮೆ ಎದ್ದು ಬರುತ್ತಾರೆ.
‘ಇದು ಸರಿಯಲ್ಲ, ಈಗ ಮತ್ತೊಂದು ಕ್ರಾಂತಿಯ ಅಗತ್ಯವಿದೆ!’ ಎಂದು ಅವರು ನಿರ್ಧರಿಸುತ್ತಾರೆ. ಮತ್ತೆ ಕಲ್ಯಾಣದತ್ತ ಹೆಜ್ಜೆಹಾಕುತ್ತಾರೆ. ದೂರದಲ್ಲಿ ಅವರಿಗೆ ಮಹಾಮನೆ ಕಾಣುತ್ತದೆ. ಮಹಾಮನೆಯ ಸುತ್ತ ನೆರೆದಿರುವ ಸಾವಿರಾರು ದಷ್ಟಪುಷ್ಟ ಜಂಗಮಬ್ರಾಹ್ಮಣರು ಕಾಣುತ್ತಾರೆ. ‘ಓಹೋ! ಕಾವಿ ಬಟ್ಟೆಯೇ ಮಲಿನವಾಗಿದೆ, ಈಗ ನಾನು ಅದೇ ಬಟ್ಟೆ ತೊಟ್ಟು ಹೋಗಬಾರದು!’ ಅನ್ನಿಸಿ, ಕಾವಿವಸ್ತ್ರವನ್ನು ಗಲೀಜು ಮಾಡಿಕೊಳ್ಳುತ್ತಾರೆ ಅಲ್ಲಮರು. ಹರಿದುಕೊಂಡು ಚಿಂದಿಯಾಗಿಸಿಕೊಳ್ಳುತ್ತಾರೆ. ತನ್ನ ಮೈಯಿಂದ ಕೀವು, ರಕ್ತ ಒಸರುವಂತೆ ಮಾಡಿಕೊಳ್ಳುತ್ತಾರೆ. ಬಾಯಿಂದ ಹೆಂಡದ ದುರ್ನಾತ ಒಸರಿಸಿಕೊಳ್ಳುತ್ತಾರೆ. ಭುಜಗಳ ಮೇಲೆ ಸತ್ತ ಕರುವಿನ ಮಾಂಸ ಹೊತ್ತುಕೊಳ್ಳುತ್ತಾರೆ. ಹೀಗೆ ಮಾಡಿಕೊಂಡು ಮಹಾಮನೆಯ ಮುಂದೆ ನಿಂತು, ‘ಅಪ್ಪಾ!... ಶರಣು ಬಂದಿದ್ದೇನೆ, ಹಸಿದಿದ್ದೇನೆ, ಒಳಗೆ ಬಿಡಿ’ ಅನ್ನುತ್ತಾರೆ. ಜಂಗಮರು ಗಲೀಜು ದರಿದ್ರನನ್ನು ಕಂಡು ಥಳಿಸಿ ಅಟ್ಟಿಬಿಡುತ್ತಾರೆ. ಅಲ್ಲಮರು ರೋಷಾವೇಷ ತೋರಿಸುತ್ತ ಒಬ್ಬ ಅಸ್ಪೃಶ್ಯನ ಮನೆಯ ತಿಪ್ಪೆಯ ಮೇಲೆ ಹೋಗಿ ಮಲಗಿಬಿಡುತ್ತಾರೆ.
ಇತ್ತ ಮಹಾಮನೆಯಲ್ಲಿ ಅರಿವಿನ ಗಂಟೆ ಬಾರಿಸುತ್ತದೆ. ಬಸವಣ್ಣನವರಿಗೆ, ‘ಓಹೋ ದೇವರು ಬಂದರು!’ ಎಂಬ ಅರಿವಾಗುತ್ತದೆ. ನೀಲಾಂಬಿಕೆಯೊಟ್ಟಿಗೆ ಧಾವಿಸಿ ಹೊರಬರುತ್ತಾರೆ ಅವರು. ಗಲೀಜು ದರಿದ್ರನ ವೇಷಧಾರಿ ಅಲ್ಲಮರನ್ನು ಕಾಡಿಬೇಡಿ ತಿಪ್ಪೆಯಿಂದೆಬ್ಬಿಸಿ ಮಹಾಮನೆಯೊಳಗೆ ಕರೆತರುತ್ತಾರೆ. ಕಾಲಿಗೆಬಿದ್ದು ಕ್ಷಮೆ ಕೋರುತ್ತಾರೆ. ಅಲ್ಲಮರು, ಬ್ರಾಹ್ಮಣಿಕೆ ತೋರಿದ ಜಂಗಮರನ್ನು ಶಪಿಸಿ, ಪ್ರಮಥರನ್ನು ಕ್ಷಮಿಸಿ ಧರ್ಮೋದ್ಧಾರ ಮಾಡುತ್ತಾರೆ. ಇದು ಕತೆ. ಈಗ, ನಲವತ್ತು ಪರ್ಸೆಂಟ್ ಭ್ರಷ್ಟಾಚಾರದತ್ತ ಹೊರಳೋಣ.
ಧರ್ಮಗಳಿಗೆ ಮಾತ್ರವಲ್ಲ ಸರ್ಕಾರಗಳಿಗೂ ಒಬ್ಬ ಅಲ್ಲಮರ ಅಗತ್ಯವಿದೆ ಇಂದು. ನೀವೇ ನೋಡಿ! ವ್ಯವಸ್ಥೆ ಹಿಂದೆಂದಿಗಿಂತಲೂ ಭವ್ಯವಾಗಿದೆ. ಅಲ್ಲಮರನ್ನು ಒಳಗೇ ಸೇರಿಸದಂತೆ ತಡೆದ ಜಂಗಮ ಪಡೆಯಂತೆಯೇ ವಿಧಾನಸೌಧದ ಸುತ್ತ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಸೇನೆ ನೆರೆದಿದೆ. ಪೊಲೀಸರ ಪಡೆ ನೆರೆದಿದೆ. ಕಬ್ಬಿಣದ ಬೇಲಿಗಳು, ಬಂದೂಕುಗಳು ನೆರೆದಿವೆ. ಆದರೆ ಇವು ಕಾರಿನಲ್ಲಿ ಆಗಮಿಸುವ ದುಡ್ಡಿನ ಕುಳಗಳನ್ನು ತಡೆಯುವುದಿಲ್ಲ. ಏಕೆಂದರೆ ಅವರು ನಾರುತ್ತಿರುವುದಿಲ್ಲ, ಮುಗುಳುನಗೆ ಬೀರುತ್ತಿರುತ್ತಾರೆ. ಬಿಳಿವ್ಯವಸ್ಥೆ ತಡೆಹಿಡಿಯುವುದು ಗಲೀಜು ಜನರನ್ನು ಮಾತ್ರ.
ಕೌಶಲಪೂರ್ಣನಾಗಿದ್ದ ಕಾಯಕಜೀವಿ ಇಂದು ನಿರುದ್ಯೋಗಿಯಾಗಿದ್ದಾನೆ. ಕೌಶಲ ಮರೆತು ಗಲೀಜಾಗಿದ್ದಾನೆ. ಅತ್ತ, ಜಂಗಮರು ಭವ್ಯರಾಗಿದ್ದಾರೆ, ಡೊಳ್ಳುಹೊಟ್ಟೆ ಹೊತ್ತು ವಿಧಾನಸೌಧದ ಸುತ್ತ ನೆರೆದು ಪ್ರಗತಿಯ ಮಾತನಾಡುತ್ತಿದ್ದಾರೆ. ಒಡೆದ ಹಾಲಿನಂತಾಗಿದೆ ಇಂದಿನ ವ್ಯವಸ್ಥೆ. ಮೇಲೆ ನಿಂತ ಹಾಲೂ ವಿಷವಾಗಿದೆ, ಕೆಳಗುಳಿದ ನೀರೂ ವಿಷವಾಗಿದೆ. ಕರ್ನಾಟಕದ ಸಮಕಾಲೀನ ಸಂದರ್ಭದಲ್ಲಿ ಭ್ರಷ್ಟ ಜಂಗಮರಾರು, ಕರ್ಮಕಾಂಡಗಳಲ್ಲಿ ಮುಳುಗಿರುವ ಪ್ರಮಥರಾರು, ಇವರೆಲ್ಲರನ್ನೂ ಬಡಿದೆಬ್ಬಿಸಬಲ್ಲ ಅಲ್ಲಮರಾರು ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಸಿದ್ದರಾಮಯ್ಯನವರಾಗಲೀ ಯಡಿಯೂರಪ್ಪನವರಾಗಲೀ ಪ್ರಮಥರಾಗಬಲ್ಲರೇ ವಿನಾ ಅಲ್ಲಮರಾಗಲಾರರು.
ಒಂದರ್ಥದಲ್ಲಿ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಾತಿಭೇದ ಮರೆತು ವೋಟು ಮಾಡಿ ಭ್ರಷ್ಟತೆಯನ್ನು ಸೋಲಿಸಿದ ಬಡಜನತೆಯೇ ಅಲ್ಲಮರು, ಅರ್ಥಾತ್ ಅವರಂತೆ ಕಾಣುವ ನಾಯಕನೇ ಅಲ್ಲಮರು. ಅವರಿಗೆ ಪೂರಕವಾಗಿ ನಿಲ್ಲಬೇಕು ನಾವು, ಅವರನ್ನು ತಿದ್ದಿ, ಅವರ ಕಾಯಕವನ್ನು ಅವರಿಗೆ ಹಿಂದಿರುಗಿಸಿ ಕೊಡಬೇಕು ನಾವು. ಅವರ ನಿರಾಶೆ, ಕುಡಿತ, ಆಲಸ್ಯವನ್ನು ನಿವಾರಿಸಬೇಕು. ಗಾಧೀಜಿ ಪ್ರತಿಪಾದಿಸಿದ ರಚನಾತ್ಮಕ ಚಳವಳಿ ಇದುವೇ ಆಗಿದೆ. ಅಲ್ಲಮರು ಸರ್ಕಾರಗಳಿಂದ ಹಾಗೂ ಅಧಿಕಾರ ಸ್ಥಾನಗಳಿಂದ, ಗಾಂಧೀಜಿಯಂತೆಯೇ ದೂರ ಉಳಿಯಬೇಕಾಗಿದೆ.
ಭ್ರಷ್ಟಾಚಾರ ನಿವಾರಣೆಗೂ ಗ್ರಾಮೋದ್ಯೋಗ ಸೃಷ್ಟಿಗೂ ಗಾಢವಾದ ಸಂಬಂಧವಿದೆ. ಅಷ್ಟೇ ಏಕೆ, ಪಾರಂಪರಿಕವೆಂದು ನಾವು ಭಾವಿಸುವ ಕಾಯಕಕ್ಕೂ ಆಧುನಿಕವೆಂದು ಭಾವಿಸುವ ಸಮಾಜವಾದಕ್ಕೂ ಸಂಬಂಧವಿದೆ. ಗ್ರಾಮೋದ್ಯೋಗ ಎಂಬುದು ನಾಳಿನ ಉದ್ದಿಮೆ ಎಂದು ತಿಳಿಯಬೇಕಿದೆ ನಾವು. ಯಂತ್ರ ಮಾನವನ ಮೇಲೆ ದೇವರು ಮುನಿದಿದ್ದಾನೆ ಎಂದು ತಿಳಿಯಬೇಕಿದೆ ನಾವು. ಹೇಗೂ, ಭೂಮಿ ಬಗೆಯದೆ, ಕಾಡು ಕಡಿಯದೆ, ಬೆಂಕಿಯುರಿಸದೆ ನಡೆಸಬಹುದಾದ ಉದ್ದಿಮೆಗಳ ಅಗತ್ಯ ಒದಗಿಬಂದಿದೆ ಈಗ. ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಲೇ, ಅತ್ತ ಪ್ರಕೃತಿಯನ್ನೂ ಸಲಹುತ್ತಲೇ, ಅತ್ತ ಧರ್ಮ ಹಾಗೂ ಜಾತ್ಯತೀತತೆ ಎರಡನ್ನೂ ಬೆಸೆಯುತ್ತಲೇ ಬದುಕು ಕಟ್ಟಿಕೊಡಬಲ್ಲ ರಾಜಕಾರಣದ ಅಗತ್ಯವಿದೆ ಇಂದು.
ಹೊರಗೆ ದರಿದ್ರರೂಪ ಧರಿಸಿ ಒಳಗೆ ಹೃದಯವೈಶಾಲ್ಯ ಮೆರೆಯಬಲ್ಲ ಅಲ್ಲಮರನ್ನು, ನಾವು ಕನ್ನಡಿಗರು, ಮಂಟೇಸ್ವಾಮಿಗಳೆಂದು ಕರೆದು ಗೌರವಿಸಿದ್ದೇವೆ. ಮಂಟೇಸ್ವಾಮಿಗಳ ಹಾದಿ ತುಳಿಯದೆ ಭ್ರಷ್ಟಾಚಾರ ನಿವಾರಣೆ ಸಾಧ್ಯವಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.