ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಏಕರೂಪ ಸಂಹಿತೆ: ಆಗತ್ಯ ಏಕೆ?

Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಅಕ್ಷರ ಗಾತ್ರ

ಧರ್ಮನಿರಪೇಕ್ಷ ಕಾಂಗ್ರೆಸ್, ಧರ್ಮವನ್ನು ನಂಬದ ಎಡಪಕ್ಷಗಳು ಹಾಗೂ ಕೆಲವು ಇತರ ಪಕ್ಷಗಳು ಕೆಲವು ಮುಸ್ಲಿಂ ಕಟ್ಟರ್‌ಪಂಥೀಯರ ಜೊತೆಗೂಡಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ವಿರೋಧಿಸುತ್ತಿವೆ. ಧರ್ಮನಿರಪೇಕ್ಷ ತತ್ವವನ್ನು ವಿರೋಧಿಸುವ, ಹಿಂದೂ ಪರಮಾಧಿಕಾರ ಹಾಗೂ ಕೋಮುಧ್ರುವೀಕರಣದ ಹಿಂದುತ್ವ ಸಿದ್ಧಾಂತದ ಪರವಿರುವ ಬಲಪಂಥೀಯ ಬಿಜೆಪಿಯು ಈ ಸಂಹಿತೆಯ ಪರವಾಗಿ ಮಾತನಾಡುತ್ತಿದೆ. ಏಕರೂಪ ನಾಗರಿಕ ಸಂಹಿತೆಯ ಸುತ್ತಲಿನ ವಿಚಾರಗಳು ಇನ್ನೂ ವಿಚಿತ್ರವಾಗಲು ಅವಕಾಶ ಇದೆಯೇ?! 

ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಈಚೆಗೆ ಪ್ರಸ್ತಾಪಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಮುಸ್ಲಿಮರಲ್ಲಿ ಆಚರಣೆಯಲ್ಲಿರುವ, ಏಕಕಾಲಕ್ಕೆ ಮೂರು ಬಾರಿ ತಲಾಖ್‌ ಎಂದು ಹೇಳಿ ವಿವಾಹ ಸಂಬಂಧವನ್ನು ಕೊನೆಗೊಳಿಸುವ ಪದ್ಧತಿಯು ಅಕ್ರಮ ಹಾಗೂ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಬಹುಮತದ ತೀರ್ಪೊಂದರಲ್ಲಿ ಹೇಳಿದೆ. ಇದು ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸಿ, ಜಾರಿಗೆ ತರಲು ಅಡ್ಡಿಗಳನ್ನು ನಿವಾರಿಸಿದೆ. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂದು ಬಯಸುವ ಸಮಾಜದಲ್ಲಿ, ನ್ಯಾಯಸಮ್ಮತವಲ್ಲದ ಹಾಗೂ ತಾರತಮ್ಯಕ್ಕೆ ಅವಕಾಶ ಕಲ್ಪಿಸುವ ಕಾನೂನುಗಳಿಗೆ ಪ್ರಗತಿಪರವಾಗಿ ತಿದ್ದುಪಡಿ ತರಬೇಕು.

ವಿವಾಹ, ವಿಚ್ಛೇದನ, ಪರಿಹಾರ, ಆಸ್ತಿಹಕ್ಕು, ದತ್ತುಸ್ವೀಕಾರಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ಮೊದಲು ರೂಪಿಸಿದ್ದು ನಮಗೆ ಸ್ವಾತಂತ್ರ್ಯ ಸಿಗುವುದಕ್ಕೂ ಮೊದಲು. ಈ ಕಾನೂನುಗಳು ನಿಧಾನವಾಗಿ ಕೆಡುಕು ಉಂಟುಮಾಡುವಂತಹ ಬ್ರಿಟಿಷ್‌ ಆಡಳಿತದ ಉಳಿಕೆಗಳು. ಇಂತಹ ಕಾನೂನುಗಳನ್ನು ಎಷ್ಟು ಬೇಗ ನಿವಾರಿಸಲು ಸಾಧ್ಯವೋ, ಅಷ್ಟರಮಟ್ಟಿಗೆ ಜನರಿಗೆ ಒಳಿತಾಗುತ್ತದೆ. ಕಾನೂನು ಸಚಿವರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಬೆಂಬಲದೊಂದಿಗೆ, ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವುದಕ್ಕೆ ಶಿಫಾರಸು ಮಾಡಿದ್ದರು. ಆದರೆ ಅಂಧಶ್ರದ್ಧೆಯ ಜನರಿಂದ ಅದಕ್ಕೆ ವಿರೋಧ ವ್ಯಕ್ತವಾದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪ್ರಜಾತಂತ್ರ, ಧರ್ಮನಿರಪೇಕ್ಷ ಮತ್ತು ಸಮಾಜವಾದಿ ಮೌಲ್ಯಗಳಿಗೆ ನಾವು ಹೊಂದಿರುವ ಬದ್ಧತೆಗೆ ಅನುಗುಣವಾಗಿರುವ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ನೆಹರೂ ನೇತೃತ್ವದ ಸರ್ಕಾರ ಹಾಗೂ ನಂತರದ ಸರ್ಕಾರಗಳು ವಿಫಲವಾದವು. ಪುರುಷಪ್ರಧಾನ ಹಿಂದೂ ಸಮಾಜದ ದೊಡ್ಡದೊಂದು ವರ್ಗ ಹಾಗೂ ಹಳೆಯ ಷರಿಯಾ ಕಾನೂನನ್ನು ಪಾಲಿಸಲು ಬಯಸುವ ಮುಸ್ಲಿಂ ಗುಂಪುಗಳ ಒತ್ತಡಕ್ಕೆ ಅವು ಮಣಿದವು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ನೆಹರೂ ಬದ್ಧರಾಗಿದ್ದರೂ, ಅದರಲ್ಲಿ ಯಶಸ್ಸು ಕಾಣಲಿಲ್ಲ. ಬದಲಿಗೆ, ಅದನ್ನು ಸಂವಿಧಾನದ ರಾಜ್ಯ ನಿರ್ದೇಶನ ತತ್ವಗಳ ಅಡಿಯಲ್ಲಿ ಸೇರಿಸಿದರು.

ಸಂಹಿತೆಯನ್ನು ರೂಪಿಸುವುದು, ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಜಾರಿಗೆ ತರುವುದು ಸಂಸತ್ತಿನ ಕೆಲಸ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ. ಸಂಹಿತೆಯನ್ನು ಜಾರಿಗೆ ತರುವ ಕೆಲಸವನ್ನು ಆದಷ್ಟು ಬೇಗ ಮಾಡಬೇಕು ಎಂದು 2015ರಲ್ಲಿ ಸರ್ಕಾರಕ್ಕೆ ಹೇಳಿದೆ. ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಮಸೂದೆಯನ್ನು 2019 ಮತ್ತು 2020ರಲ್ಲಿ ಸಂಸತ್ತಿನಲ್ಲಿ ಮಂಡಿಸಿದರೂ, ಆರ್‌ಎಸ್‌ಎಸ್‌ ಜೊತೆಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಅದನ್ನು ಹಿಂಪಡೆಯಿತು ಎಂದು ವರದಿಯಾಗಿದೆ. ಇಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ರಾಜಕಾರಣದಲ್ಲಿ ತೊಡಗಿವೆ. 2024ರ ಚುನಾವಣೆಯಲ್ಲಿ ತಮ್ಮ ಮತ ಬ್ಯಾಂಕ್‌ ಮೇಲೆ ಯಾವ ಪರಿಣಾಮ ಉಂಟಾಗಬಹುದು ಎಂಬ ಆಲೋಚನೆಯಲ್ಲಿ ಸಮಾಜದ ಬೇರೆ ಬೇರೆ ವರ್ಗಗಳ ನಡುವಿನ ಒಡಕು ಹೆಚ್ಚಿಸುವ ಕೆಲಸದಲ್ಲಿ ತೊಡಗಿವೆ.

ಆಸ್ತಿ ಹಕ್ಕುಗಳು, ಮದುವೆ, ವಿಚ್ಛೇದನ ಮತ್ತು ಪರಿಹಾರದಂತಹ ವಿಷಯಗಳಲ್ಲಿ ಅತಿಹೆಚ್ಚಿನ ತೊಂದರೆಗೆ ಗುರಿಯಾಗುವವರು ಮಹಿಳೆಯರು. ಮುಸ್ಲಿಮರಲ್ಲಿ, ಅವರಲ್ಲಿನ ಉಪಪಂಗಡಗಳಲ್ಲಿ, ದೇಶದ ಇತರ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಕಥೆ ಕೂಡ ಇದೇ ಆಗಿದೆ. ಧರ್ಮದ ಹೆಸರಿನಲ್ಲಿ ಮತ್ತು ಧರ್ಮವು ನೀಡುವ ಅಧಿಕಾರದ ಹೆಸರಿನಲ್ಲಿ ಮಹಿಳೆಯರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಛಿದ್ರಗೊಳಿಸುವ ದಬ್ಬಾಳಿಕೆಯು ಜಾರಿಯಲ್ಲಿದೆ.

ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಮೂರು ವರ್ಷಗಳ ಹಿಂದೆ ತೀರ್ಪು ನೀಡಿದಾಗ, ಧರ್ಮಗುರುಗಳು ಕೆಲವರು ತಮ್ಮ ಧಾರ್ಮಿಕ ಆಚರಣೆಯ ಹಕ್ಕನ್ನು ರಕ್ಷಿಸಿಕೊಳ್ಳಲು ಯತ್ನಿಸಿದರು. ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದ್ದು, ಸೊಸೆಯ ಮೇಲೆ ಮಾವ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ. ಈ ಪ್ರಕರಣದಲ್ಲಿ ಫತ್ವಾ ಮೂಲಕ ಆ ಮಾವನಿಗೆ, ಸೊಸೆಯ ಜೊತೆ ಸಂಸಾರ ಮಾಡಬೇಕು ಎಂಬ ಶಿಕ್ಷೆ ವಿಧಿಸಲಾಗಿತ್ತು. ಅತ್ಯಾಚಾರ ಎಸಗಿದವನಿಗೆ ಆ ಹೆಣ್ಣಿನ ಜೊತೆ ಬಾಳ್ವೆ ಮಾಡುವಂತೆ ಹೇಳುವುದು, ಆಕೆಯನ್ನು ಸಲಹುವಂತೆ ಹೇಳುವುದು ಒಂದು ಶಿಕ್ಷೆ ಎಂಬ ವಿಚಿತ್ರ ತರ್ಕವನ್ನು ಆಗ ಮುಂದಿಡಲಾಗಿತ್ತು. ಆದರೆ ಇಂಥದ್ದೊಂದು ಶಿಕ್ಷೆಯು ಇನ್ನಷ್ಟು ಅತ್ಯಾಚಾರ ಪ್ರಕರಣಗಳಿಗೆ ಕಾರಣವಾಗಬಹುದು ಎಂಬುದನ್ನು ಸಂಪೂರ್ಣವಾಗಿ ಅಲಕ್ಷಿಸಲಾಯಿತು. ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ಅನಿಸಿಕೆಯನ್ನು ಯಾರಾದರೂ ಆಗ ಕೇಳಿದ್ದರೇ?

ಪಶ್ಚಿಮದ ‍ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಕಾನೂನು ಪ್ರಜೆಗಳಿಗೆ ತಮ್ಮ ಧರ್ಮವನ್ನು ಖಾಸಗಿ ಬದುಕಿನಲ್ಲಿ ಆಚರಿಸುವ ಸ್ವಾತಂತ್ರ್ಯ ನೀಡುತ್ತದೆ. ಆದರೆ ಅವರು ಏಕರೂಪದ ಸಿವಿಲ್ ಹಾಗೂ ಕ್ರಿಮಿನಲ್ ಸಂಹಿತೆಗೆ ಬದ್ಧರಾಗಿರಬೇಕಾಗುತ್ತದೆ. ಈ ಸಂಹಿತೆಯು ಪ್ರಜೆಗಳಿಗೆ, ವಲಸಿಗರಿಗೆ ಸಮಾನವಾಗಿ ಅನ್ವಯವಾಗುತ್ತದೆ. ಈ ದೇಶಗಳ ನ್ಯಾಯದಾನ ವ್ಯವಸ್ಥೆ ಹಾಗೂ ಸಿವಿಲ್ ಸಂಹಿತೆಗಳು ಇನ್ನೂರಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ವಿಕಾಸಗೊಂಡಿವೆ.

ಆದರೆ, ಹಿಂದೂಗಳಿಗೆ ಅನ್ವಯವಾಗುವ ಸಂಹಿತೆಯನ್ನು ಮುಸ್ಲಿಮರಿಗೆ ಅಥವಾ ಇತರ ಅಲ್ಪಸಂಖ್ಯಾತ ಸಮುದಾಯವರಿಗೆ ಒತ್ತಾಯದ ಮೂಲಕ ಅನ್ವಯ ಮಾಡಬೇಕು ಎಂದು ಹೇಳುತ್ತಿಲ್ಲ; ಮುಸ್ಲಿಮರಿಗೆ ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮಾತ್ರ ಇದನ್ನು ಅನ್ವಯಿಸಿ, ಹಿಂದೂಗಳಿಗೆ ಅನ್ವಯಿಸಬಾರದು ಎಂದೂ ಹೇಳುತ್ತಿಲ್ಲ. ಖಾಪ್ ಪಂಚಾಯತ್‌ಗಳು ಮಹಿಳೆಯರ ಪಾಲಿಗೆ ಮತ್ತು ಸಮಾಜದ ಪ್ರಗತಿಗೆ ಫತ್ವಾಗಳು ಹಾಗೂ ಷರಿಯಾ ನ್ಯಾಯಾಲಯಗಳಷ್ಟೇ ಅಮಾನವೀಯವಾಗಿ ಇವೆ. ಕಾನೂನಿನ ಎದುರು ಎಲ್ಲರೂ ಸಮಾನರು ಎಂದು ಆಗಬೇಕಾದಲ್ಲಿ, ಎಲ್ಲರಿಗೂ ಏಕರೂಪದ ಸಿವಿಲ್ ಹಾಗೂ ಕ್ರಿಮಿನಲ್ ಸಂಹಿತೆ ಅನ್ವಯವಾಗಬೇಕು.

ದೇಶವೊಂದಕ್ಕೆ ತನ್ನಲ್ಲಿನ ಹೆಣ್ಣುಮಕ್ಕಳಿಗೆ ಮುಕ್ತವಾದ ಬದುಕು ಸಾಗಿಸಲು ಅಗತ್ಯವಿರುವ ರಕ್ಷಣೆ ಹಾಗೂ ಸಮಾನ ಅವಕಾಶಗಳನ್ನು ನೀಡಲು ಆಗದು ಎಂದಾದರೆ, ಅದು ತೀರಾ ಅನಾಗರಿಕ ಸಂಸ್ಕೃತಿಯನ್ನು ಹೊಂದಿದೆ ಎಂದರ್ಥ. ಸರ್ಕಾರವು ಬಿಜೆಪಿಯ ಜೊತೆಯಲ್ಲಿಯೇ ಇರುವ ಕಟ್ಟರ್‌ವಾದಿ ಸಂಘಟನೆಗಳಿಂದ ದೂರವಾಗಿ ನಿಲ್ಲಬೇಕು. ಏಕರೂಪ ನಾಗರಿಕ ಸಂಹಿತೆ ಜಾರಿಯ ವಿಚಾರವನ್ನು ರಾಜಕೀಯ ವಿವಾದಗಳಿಂದ ಮುಕ್ತಗೊಳಿಸಬೇಕು. ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಲ್ಲಿ ಜಗತ್ತಿನ ಪ್ರಜಾತಂತ್ರ ದೇಶಗಳಿಂದ ಅತ್ಯುತ್ತಮ ಮಾದರಿಗಳನ್ನು ಆಯ್ಕೆ ಮಾಡಿಕೊಂಡು ಸಂಹಿತೆಯನ್ನು ರೂಪಿಸಬೇಕು. ಅದಕ್ಕೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಬೇಕು. ಆ ಸಂಹಿತೆಯು ದೇಶದ ಎಲ್ಲ ರಾಜ್ಯಗಳಲ್ಲಿ ಯಾವ ವಿನಾಯಿತಿಯೂ ಇಲ್ಲದೆ ಜಾರಿಗೆ ಬರಬೇಕು.

ಆಗ ಭಾರತವು ನಿಜ ಅರ್ಥದಲ್ಲಿ, ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ. ದೇಶವು ಆಧುನಿಕ ಹಾಗೂ ನಾಗರಿಕವಾದ ಸಮಾಜವನ್ನು ಹೊಂದಿದಂತೆ ಆಗುತ್ತದೆ. ದೇಶದ ಪುರುಷರು ಹಾಗೂ ಮಹಿಳೆಯರಲ್ಲಿನ ಚೈತನ್ಯವು ಸಮಾನವಾಗಿ ಉಚ್ಛ್ರಾಯ ಸ್ಥಿತಿ ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT