ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಶಿಕ್ಷಣ ವ್ಯವಸ್ಥೆ ಮತ್ತು ತಾತ್ವಿಕ ನೆಲೆ

ಶಿಕ್ಷಣ ನೀತಿಯು ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಸಾಧನವಾಗಬೇಕು
Published 16 ನವೆಂಬರ್ 2023, 20:23 IST
Last Updated 16 ನವೆಂಬರ್ 2023, 20:23 IST
ಅಕ್ಷರ ಗಾತ್ರ

ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿರುವ ಇಂದಿನ ಕಾಲಘಟ್ಟದಲ್ಲಿ, ಮೂಲಭೂತ ಹಕ್ಕಾಗಿರುವ ಶಿಕ್ಷಣವನ್ನು ಹಕ್ಕು ಆಧಾರಿತ ನೆಲೆಯಿಂದ ನೋಡಬೇಕು. ಸಮಾನ ಗುಣಾತ್ಮಕ ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಅದನ್ನು ಕೊಡಮಾಡುವ ಕರ್ತವ್ಯ, ಜವಾಬ್ದಾರಿ ಸರ್ಕಾರಗಳದ್ದಾಗಿರಬೇಕು. ಅಂತರರಾಷ್ಟ್ರೀಯ ಕಾನೂನು, ಒಡಂಬಡಿಕೆ, ಒಪ್ಪಂದ, ಘೋಷಣೆ
ಗಳಲ್ಲಿ ಮತ್ತು ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಶಾಲಾ ಶಿಕ್ಷಣವನ್ನು ಒಂದು ಮೂಲಭೂತ ಮಾನವ ಹಕ್ಕೆಂದು ಗುರುತಿಸಲಾಗಿದೆ. ಹೀಗಾಗಿ, ಸರ್ಕಾರಗಳು ಈ ಹಕ್ಕನ್ನು ಗೌರವಿಸಿ ಸಾಕಾರಗೊಳಿಸುವುದನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು. ಈ ಕಾರಣದಿಂದ, ಶಿಕ್ಷಣ ನೀತಿಯ ತಾತ್ವಿಕ ನೆಲೆ ಏನಾಗಬೇಕೆಂದು ಚರ್ಚಿಸುವುದು ಈ ಲೇಖನದ ಆಶಯ.

ಮೊದಲನೆಯದಾಗಿ, ಸರ್ಕಾರಗಳು ಶಿಕ್ಷಣವನ್ನು ಒಂದು ಸಾಮಾಜಿಕ ಒಳಿತು ಹಾಗೂ ಸಾಮಾಜಿಕ ಪರಿವರ್ತ
ನೆಯ ಸಾಧನವೆಂದು ಪರಿಗಣಿಸಬೇಕು. ಶಿಕ್ಷಣವು ಮಹತ್ತರ ಉದ್ದೇಶಕ್ಕಾಗಿ ದೀರ್ಘಕಾಲದಲ್ಲಿ ಒಂದು ನ್ಯಾಯಯುತ ಸಮಾಜವನ್ನು ಕಟ್ಟುವ ಸಾಧನವಾಗಬೇಕು. ಸಂವಿಧಾನದ ಮೂಲಭೂತ ಹಕ್ಕನ್ನು ಸಾಕಾರಗೊಳಿಸಲು ರೂಪಿಸಲಾಗಿರುವ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಶಿಕ್ಷಣದ ಸಾರ್ವತ್ರೀಕರಣದ ಉದ್ದೇಶ ಮತ್ತು ಕಾರಣಗಳನ್ನು ವಿವರಿಸಲಾಗಿದೆ. ಅದರಲ್ಲಿರುವ ಪ್ರಮುಖ ಅಂಶಗಳು, ಸರ್ಕಾರಗಳು ರೂಪಿಸಬಹುದಾದ ನೀತಿಯ ಮುಂಗಾಣ್ಕೆ ಹಾಗೂ ಮಾರ್ಗದರ್ಶಿ ತತ್ವಗಳಾಗಬೇಕು.

‘ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಎಂಬ ಮೌಲ್ಯಗಳನ್ನು ಕಾಯ್ದುಕೊಳ್ಳಬಹುದು ಹಾಗೂ ಎಲ್ಲರನ್ನೂ ಒಳಗೊಳ್ಳುವ ಪ್ರಾಥಮಿಕ ಶಿಕ್ಷಣದ ಮೂಲಕ ಒಂದು ನ್ಯಾಯಯುತ ಮಾನವೀಯ ಸಮಾಜವನ್ನು ಕಟ್ಟಿಕೊಳ್ಳಬಹುದು ಎಂಬ ನಂಬಿಕೆಯಿಂದ ಈ ಮಸೂದೆಯನ್ನು ರೂಪಿಸಲಾಗಿದೆ. ಅವಕಾಶವಂಚಿತ ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ತೃಪ್ತಿದಾಯಕ ಶಿಕ್ಷಣದ ಅವಕಾಶ ಒದಗಿಸುವುದು ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳ ಜವಾಬ್ದಾರಿ ಮಾತ್ರವಲ್ಲ, ಅದರ ಜೊತೆಗೆ ಸರ್ಕಾರದ ಅನುದಾನವನ್ನು ಅವಲಂಬಿಸದ ಶಾಲೆಗಳ ಜವಾಬ್ದಾರಿಯೂ ಹೌದು’ ಎಂದು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಪ್ರತಿಪಾದಿಸಲಾಯಿತು.

ಎರಡನೆಯದಾಗಿ, ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಪೂರಕವಾಗಿ ಎಲ್ಲಾ ಮೂಲಸೌಕರ್ಯಗಳನ್ನು ನಿಗದಿತ ಅವಧಿಯಲ್ಲಿ ಒದಗಿಸುವುದು ಶಿಕ್ಷಣ ನೀತಿಯ ಆದ್ಯತೆಯಾಗಬೇಕು. ಅಂಗವಿಕಲರು ಸೇರಿದಂತೆ ಎಲ್ಲಾ ಮಕ್ಕಳ ಕಲಿಕೆಗೆ ಇದು ಒತ್ತು ನೀಡಬೇಕು. ಜೊತೆಗೆ, ಸ್ವಾತಂತ್ರ್ಯಪೂರ್ವದಲ್ಲಿ ಅಂದಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಜಾಗತಿಕ ಅಗತ್ಯಗಳಿಗೆ ಅನುಗುಣವಾಗಿ ಇದ್ದ 8 ವರ್ಷಗಳ ಕಡ್ಡಾಯ ಶಿಕ್ಷಣವನ್ನು, ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಹುಟ್ಟಿನಿಂದ 18 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ನೀಡಬೇಕು. ಜಾತಿ, ವರ್ಗಭೇದ, ಧರ್ಮ ಮತ್ತು ಸಾಮಾಜಿಕ– ಆರ್ಥಿಕ ತಾರತಮ್ಯ ಅಲ್ಲಿ ಇರಬಾರದು. ಈ ಮಕ್ಕಳ ಆರೈಕೆ, ರಕ್ಷಣೆ, ಪೋಷಣೆ, ಆರೋಗ್ಯ ಕಾಯ್ದುಕೊಳ್ಳುವಿಕೆ ಮತ್ತು ಗುಣಾತ್ಮಕ ಶಿಕ್ಷಣವನ್ನು ಒಂದು ಸಂವಿಧಾನಾತ್ಮಕ ಹಕ್ಕ
ನ್ನಾಗಿ ಒಳಗೊಳ್ಳಲು ಅನುವಾಗುವಂತೆ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರುವ ಅಗತ್ಯವನ್ನು ಶಿಕ್ಷಣ ನೀತಿ
ಪ್ರಸ್ತಾಪಿಸಬೇಕು.

ಶಿಕ್ಷಣವನ್ನು ಬರೀ ಓದು, ಬರಹದ ಲೆಕ್ಕಾಚಾರಕ್ಕೆ ಸೀಮಿತಗೊಳಿಸದೆ, ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ಪ್ರಕ್ರಿಯೆಯನ್ನಾಗಿಸಬೇಕು. ಈ ದಿಸೆಯಲ್ಲಿ, ಹಾಲಿ ಮಾಹಿತಿ ಒದಗಿಸುವ ವಿಧಾನದ ಬದಲು ರಚನಾತ್ಮಕವಾದ ಹಾಗೂ ಪ್ರಜಾಸತ್ತಾತ್ಮಕ ಚರ್ಚೆಯ ಮೂಲಕ, ಈಗಾಗಲೇ ಮಕ್ಕಳಲ್ಲಿರುವ ಭಾಷಾ ಸಾಮರ್ಥ್ಯ, ಹೊಳಹು, ಕಲಿಕೆ ಮತ್ತು ಅನುಭವಗಳನ್ನು ಆಧರಿಸಿದ ಜ್ಞಾನವನ್ನು ಕಟ್ಟಿಕೊಡುವ ಹೊಸ ವಿಧಾನಗಳನ್ನು ಬಳಸಬೇಕು. ಇದಕ್ಕಾಗಿ, ವೃತ್ತಿ ಪರಿಣತಿಯಿರುವ ಸಮರ್ಥ ಶಿಕ್ಷಕರನ್ನು ರೂಪಿಸುವುದು ನೀತಿಯ ಜೀವಾಳವಾಗಬೇಕು. ಶಿಕ್ಷಣ ಮತ್ತು ಅದು ಕೊಡಮಾಡುವ ಎಲ್ಲಾ ತರಗತಿ ಪ್ರಕ್ರಿಯೆಗಳು ಪ್ರಜಾ
ಪ್ರಭುತ್ವೀಕರಣ ಶಿಕ್ಷಣ ನೀತಿಯ ಬುನಾದಿಯಾಗಬೇಕು.

ಮೂರನೆಯದಾಗಿ, ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗಾದರೂ ಶಿಕ್ಷಣವು ಮಾತೃಭಾಷೆ ಅಥವಾ ಪರಿಸರ ಭಾಷೆಯಲ್ಲಿದ್ದು, ಇಂಗ್ಲಿಷ್‌ ಭಾಷೆ ಅಥವಾ ನಮ್ಮ ಸಂವಿಧಾನದಲ್ಲಿ ಗುರುತಿಸಿರುವ 22 ರಾಷ್ಟ್ರೀಯ ಭಾಷೆಗಳ ಪೈಕಿ ಮಗು ಕಲಿಯಲು ಇಚ್ಛಿಸುವ ಒಂದು ಅಥವಾ ಹೆಚ್ಚಿನ ಭಾಷೆಗಳನ್ನು ಸಮರ್ಥವಾಗಿ ಕಲಿಸುವುದು ಶಿಕ್ಷಣ ನೀತಿಯ ಆಶಯವಾಗಬೇಕು. ಈ ನೀತಿಯು ಎಲ್ಲಾ ಬಗೆಯ ಪಠ್ಯಕ್ರಮಗಳ ಶಾಲೆಗಳಲ್ಲಿ ಸಮಾನವಾಗಿ ಜಾರಿಯಾಗಬೇಕು. ಮೌಲ್ಯಾಂಕನದ ಹೆಸರಿನಲ್ಲಿ ಅನಗತ್ಯವಾಗಿ ಪರೀಕ್ಷೆಗಳನ್ನು ನಡೆಸುವ ಬದಲು ವ್ಯಾಪಕ ಹಾಗೂ ನಿರಂತರ ಮೌಲ್ಯಮಾಪನದ (ಸಿಸಿಇ) ಆಧಾರದಲ್ಲಿ ಮಕ್ಕಳ ಕಲಿಕೆಯನ್ನು ಶಾಲಾ ಹಂತದಲ್ಲಿಯೇ ಮೌಲ್ಯಾಂಕನ ಮಾಡಿ, ಪರಿಣಾಮಕಾರಿಯಾಗಿ ಕಲಿಸಲು ಎಲ್ಲಾ ಅಗತ್ಯ ಕ್ರಮ ವಹಿಸಬೇಕು. ಇದು ಒಂದು ಉತ್ತಮ ಶಿಕ್ಷಣ ನೀತಿಯ ಬುನಾದಿ ತತ್ವವಾಗಬೇಕು. ದಿನನಿತ್ಯ ಈ ಅಂಶಗಳ ಮೇಲುಸ್ತುವಾರಿಗಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಬಲವರ್ಧನೆಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಸೂಚಿಸುವುದು ಶಿಕ್ಷಣ ನೀತಿಯ ಕಾರ್ಯಸೂಚಿಯಾಗಬೇಕು.

ನಾಲ್ಕನೆಯದಾಗಿ, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಖಾಸಗಿ ವಲಯದಲ್ಲಿ ಉತ್ತರದಾಯಿತ್ವ
ಮತ್ತು ಪಾರದರ್ಶಕತೆ ತರಲು ಕಟ್ಟುನಿಟ್ಟಾದ ಸಮಗ್ರ ಕಾನೂನನ್ನು ರೂಪಿಸುವುದು ಶಿಕ್ಷಣ ನೀತಿಯ ಭಾಗವಾಗಬೇಕು. ಬಹುತೇಕ ರಾಜ್ಯಗಳಲ್ಲಿ ಈ ವಿಧಾನ ಈಗಾಗಲೇ ಜಾರಿಯಲ್ಲಿದೆ. ಖಾಸಗಿ ಶಾಲೆಗಳು ಜನಸಾಮಾನ್ಯರಿಗೆ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಹೊಂದಿರಲು ಅನುವಾಗುವಂತೆ ಶುಲ್ಕ ನಿಯಂತ್ರಣ, ಗುಣಾತ್ಮಕಶಿಕ್ಷಣಕ್ಕಾಗಿ ಕನಿಷ್ಠ ಪ್ರಮಾಣಕಗಳು, ಮಾನದಂಡಗಳು ಮತ್ತು ಪೋಷಕರ ಪಾಲ್ಗೊಳುವಿಕೆಗೆ ಪೂರಕವಾಗುವ ಸಾಂಸ್ಥಿಕ ರಚನೆಯನ್ನು ಇದು ಒಳಗೊಂಡಿರಬೇಕು.

ಐದನೆಯದಾಗಿ, ಮೂಲಭೂತ ಹಕ್ಕಾದ ಹಾಗೂ ಸಾಮಾಜಿಕ ಒಳಿತಿಗೆ ಪೂರಕವಾದ ಶಿಕ್ಷಣವನ್ನು ಸಾಕಾರ
ಗೊಳಿಸುವುದರ ಭಾಗವಾಗಿ ಸರ್ಕಾರವು ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರಗಳು ತಮ್ಮ ಆಯವ್ಯಯದಲ್ಲಿ ಕನಿಷ್ಠ ಶೇಕಡ 20ರಷ್ಟನ್ನಾದರೂ ಶಿಕ್ಷಣಕ್ಕೆ ಮೀಸಲಿಡುವುದು ಶಿಕ್ಷಣ ನೀತಿಯ ಆಶಯವಾಗಬೇಕು. ಜೊತೆಗೆ, ಸರ್ಕಾರವು ಸಮಾನ ಗುಣಮಟ್ಟದ ಶಿಕ್ಷಣ ಒದಗಿಸುವ ಪ್ರಕ್ರಿಯೆಗೆ ತಾನು ಒದಗಿಸುವ ಸಂಪನ್ಮೂಲಗಳಿಗೆ ಪೂರಕವಾಗಿ ಹಾಗೂ ಹೆಚ್ಚುವರಿಯಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಅದರಂತೆ, ನಾಡಿನ ಕಲಿಕಾ ವ್ಯವಸ್ಥೆಯನ್ನು ಕಟ್ಟಲು
ಸ್ವಯಂಪ್ರೇರಿತವಾಗಿ ಭಾಗವಹಿಸಲು ಇಚ್ಛಿಸುವ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು, ಕಾರ್ಪೊರೇಟ್‌ ಕಂಪನಿಗಳಿಗೆ ಅವಕಾಶ ಕಲ್ಪಿಸಬೇಕು. ಈ ಮೂಲಕ, ಸರ್ಕಾರ ಸ್ಥಾಪಿಸುವ ಸಾರ್ವಜನಿಕ ಸಮಾನ ಶಾಲಾ ದತ್ತಿ ನಿಧಿಗೆ ವ್ಯಕ್ತಿ ಅಥವಾ ಕಂಪನಿಗಳು ತಮ್ಮ ಸಿಎಸ್‌ಆರ್‌ ದೇಣಿಗೆಯನ್ನು ನೀಡಲು ಅವಕಾಶ ಇರಬೇಕು.

ಕೊನೆಯದಾಗಿ, ಸರ್ಕಾರವು ಕಾಲದಿಂದ ಕಾಲಕ್ಕೆ ರೂಪಿಸುವ ಶಾಲಾ ಶಿಕ್ಷಣ ನೀತಿಗಳನ್ನು ಪರಿಣಾಮ
ಕಾರಿಯಾಗಿ ಜಾರಿಗೊಳಿಸಲು, ಮೇಲುಸ್ತುವಾರಿ ಮಾಡಲು ಮತ್ತು ಕಾಲಕಾಲಕ್ಕೆ ಪರಾಮರ್ಶಿಸಿ ಸೂಕ್ತ ಬದಲಾವಣೆಗಳ ಮೂಲಕ ಬಲಿಷ್ಠ ಶಾಲಾ ಶಿಕ್ಷಣ ವ್ಯವಸ್ಥೆ ರೂಪಿಸಲು ಒಂದು ಶಾಶ್ವತ ಶಾಲಾ ಶಿಕ್ಷಣ ಆಯೋಗ ಅಥವಾ ಪ್ರಾಧಿಕಾರ ರಚನೆಯಾಗಬೇಕು. ಶಿಕ್ಷಣ ನೀತಿಯು ಇಂತಹ ಬಲಿಷ್ಠ ಆಡಳಿತಾತ್ಮಕ ವ್ಯವಸ್ಥೆಗೆ ಪ್ರಬಲವಾಗಿ ಶಿಫಾರಸು ಮಾಡಬೇಕು. ಒಟ್ಟಾರೆ, ಶಿಕ್ಷಣ ನೀತಿಯು ಸಂವಿಧಾನದ ಆಶಯದಂತೆ, ಭಾರತವನ್ನು ಒಂದು ಬಲಿಷ್ಠ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸುವ ಮೂಲಕ ಸಂವಿಧಾನದ ಪೀಠಿಕೆಯಲ್ಲಿನ ಎಲ್ಲಾ ವಾಗ್ದಾನಗಳನ್ನು ನಾಗರಿಕರಿಗೆ ಕೊಡಮಾಡುವ ಒಂದು ಸಾಧನವಾಗಬೇಕು.

ನಿರಂಜನಾರಾಧ್ಯ ವಿ.ಪಿ.

ನಿರಂಜನಾರಾಧ್ಯ ವಿ.ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT