ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಕೇಂದ್ರದ ದಾಸ್ಯದಲ್ಲಿ ರಾಜ್ಯಪಾಲ

ನಿರಂತರವಾಗಿ ಅಪಬಳಕೆಗೆ ಈಡಾದ ಯಾವ ಹುದ್ದೆ ತಾನೇ ಪಾವಿತ್ರ್ಯ ಉಳಿಸಿಕೊಳ್ಳಲು ಸಾಧ್ಯ?
Published : 28 ಆಗಸ್ಟ್ 2024, 0:30 IST
Last Updated : 28 ಆಗಸ್ಟ್ 2024, 0:30 IST
ಫಾಲೋ ಮಾಡಿ
Comments

ಸಂವಿಧಾನದ ಪಾಲನೆ, ರಕ್ಷಣೆ ಹಾಗೂ ಸಮರ್ಥನೆಯ ಪ್ರಮಾಣವಚನದೊಂದಿಗೆ ಅಧಿಕಾರ ಸ್ವೀಕರಿಸುವ ರಾಜ್ಯಪಾಲರು ಕಾರ್ಯಾಂಗದ ಮುಖ್ಯಸ್ಥರು. ಸಂವಿಧಾನದ ಪ್ರಕಾರ ಮುಖ್ಯಮಂತ್ರಿಯನ್ನು ನೇಮಿಸುವ ಅಧಿಕಾರ ರಾಜ್ಯಪಾಲರದು. ಅವರು ‘ಇಚ್ಛಿಸುವ’ವರೆಗೆ ಮಾತ್ರ ಮುಖ್ಯಮಂತ್ರಿ ಅಧಿಕಾರದಲ್ಲಿ ಇರಬಹುದು ಎನ್ನುತ್ತದೆ ಸಂವಿಧಾನದ 164(1)ನೇ ವಿಧಿ. ರಾಜ್ಯದ ಆಡಳಿತ ಅಧಿಕೃತವಾಗಿ ನಡೆಯುವುದೆಲ್ಲವೂ ರಾಜ್ಯಪಾಲರ ಹೆಸರಿನಲ್ಲಿ, ಅವರ ಅಂಕಿತ ಇಲ್ಲದೆ ಯಾವ ಮಸೂದೆಯೂ ಕಾನೂನು ಆಗುವಂತಿಲ್ಲ. ರಾಜ್ಯಪಾಲರೇ ಕೇಂದ್ರ ಮತ್ತು ರಾಜ್ಯದ ಕೊಂಡಿ... ಇವೆಲ್ಲವನ್ನೂ ಕೇಳುತ್ತಾ ಹೋದರೆ ರಾಜ್ಯಪಾಲರ ಹುದ್ದೆ ಎಷ್ಟೊಂದು ಶಕ್ತಿಶಾಲಿ ಎಂದು ಅನಿಸುವುದು ಸಹಜ. ಆದರೆ ವಾಸ್ತವದಲ್ಲಿ ರಾಜ್ಯಪಾಲರಷ್ಟು ಅಭದ್ರ ಮತ್ತು ಕಳಂಕಿತ ಸಾಂವಿಧಾನಿಕ ಹುದ್ದೆ ಮತ್ತೊಂದಿಲ್ಲ.

ಸಂವಿಧಾನದ ಮೂಲಕ ಸೃಷ್ಟಿಯಾಗಿರುವ ಹುದ್ದೆಗಳಲ್ಲಿ ರಾಜ್ಯಪಾಲರಿಗೆ ಭಿನ್ನ ಸ್ಥಾನಮಾನ. ಇವರು ಏಕಕಾಲಕ್ಕೆ ರಾಜ್ಯದಲ್ಲಿ ಸಾಂವಿಧಾನಿಕ ಮುಖ್ಯಸ್ಥರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿ ಆಗಿರುತ್ತಾರೆ. ಇಂತಹ ದ್ವಿಪಾತ್ರವೇ ಅವರನ್ನು ಆಗಾಗ ವಿವಾದದ ಸುಳಿಯಲ್ಲಿ ಮುಳುಗೇಳಿಸುತ್ತದೆ.

ಸಂಸದರು ಮತ್ತು ಶಾಸಕರ ಮೂಲಕ ಆಯ್ಕೆಯಾಗುವ ರಾಷ್ಟ್ರಪತಿಯವರಿಗೆ ಐದು ವರ್ಷಗಳ ಸುರಕ್ಷಿತ ಕಾರ್ಯಾವಧಿ ಇದೆ. ಇದೇ ಮಾದರಿಯ ಸ್ಥಾನಮಾನ ನ್ಯಾಯಮೂರ್ತಿಯವರದ್ದು. ಇವರಿಬ್ಬರನ್ನೂ ಸಂಸತ್ತಿನ ಮೂರನೇ ಎರಡರಷ್ಟು ಬಹುಮತದ ನಿರ್ಣಯದ ಮೂಲಕವಷ್ಟೇ ಕಿತ್ತುಹಾಕಬಹುದು. ಆದರೆ ರಾಜ್ಯಪಾಲರ ಹುದ್ದೆಗೆ ಒಬ್ಬ ಸಾಮಾನ್ಯ ಸರ್ಕಾರಿ ನೌಕರನಿಗೆ ಇರುವ ಸೇವಾಭದ್ರತೆಯೂ ಇಲ್ಲ, ಸ್ವಾತಂತ್ರ್ಯವೂ ಇಲ್ಲ. ಅವರನ್ನು ಯಾವಾಗ ಬೇಕಾದರೂ ಕಿತ್ತುಹಾಕಬಹುದು. ಅವರ ಸ್ಥಾನಮಾನ ಏನಿದ್ದರೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮರ್ಜಿಯನ್ನು ಅವಲಂಬಿಸಿದೆ. ರಾಜ್ಯಪಾಲರು ಒಮ್ಮೊಮ್ಮೆ ಅತಿ ಕ್ರಿಯಾಶೀಲರಾಗಿ ಎಡವಟ್ಟು ಮಾಡಿಕೊಳ್ಳಲು ಕೂಡ ಈ ಅಭದ್ರತೆ ಮತ್ತು ಕೀಳರಿಮೆ ಕಾರಣವಾಗಿರಬಹುದು.

ಇಂತಹ ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಯಾವ ರಾಜಕೀಯ ಪಕ್ಷವೂ ಹಿಂದೆ ಬಿದ್ದಿಲ್ಲ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸುಮಾರು ನೂರಕ್ಕೂ ಹೆಚ್ಚು ಬಾರಿ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರು. ಕಾಂಗ್ರೆಸ್ ಪಕ್ಷದ ಈ ಚಾಳಿಯನ್ನು ಟೀಕಿಸಿದ್ದ ವಿರೋಧ ಪಕ್ಷಗಳು ತಾವು ಅಧಿಕಾರಕ್ಕೆ ಬಂದಾಗೆಲ್ಲ ಅದೇ ಚಾಳಿಯನ್ನು ಮುಂದುವರಿಸಿಕೊಂಡು ಬಂದಿವೆ. 1977ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ಜನತಾ ಪಕ್ಷದ ನೇತೃತ್ವದ ಸರ್ಕಾರವು ಒಂಬತ್ತು ರಾಜ್ಯಗಳಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನು ವಜಾಗೊಳಿಸಿತ್ತು.

ರಾಜಕೀಯ ದುರುದ್ದೇಶಗಳ ಈಡೇರಿಕೆಗಾಗಿ ಎಲ್ಲರೂ ರಾಜಭವನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದರಿಂದಾಗಿ ರಾಜ್ಯಪಾಲರ ಹುದ್ದೆಯು ಒಮ್ಮೊಮ್ಮೆ ಮುದಿ ರಾಜಕಾರಣಿಗಳ ಪಾಲಿನ ಪುನರ್ವಸತಿಗೆ, ಇನ್ನು ಕೆಲವೊಮ್ಮೆ ಪಕ್ಷನಿಷ್ಠೆಗೆ ನೀಡುವ ಉಡುಗೊರೆಯಾಗಿ, ಇನ್ನೆಷ್ಟೋ ಬಾರಿ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ವಿರೋಧ ಪಕ್ಷಗಳ ನೇತೃತ್ವದ ಸರ್ಕಾರದ ಮೇಲೆ ಪರೋಕ್ಷ ನಿಯಂತ್ರಣಕ್ಕಾಗಿ ಇರುವ ಕೇಂದ್ರದ ಏಜಂಟ್ ರೂಪದಲ್ಲಿ ಬಳಕೆಯಾಗುವುದಿದೆ. ಈ ರೀತಿ ನಿರಂತರವಾಗಿ ಮಾನಭಂಗಕ್ಕೀಡಾದ ನಂತರ ಯಾವ ಹುದ್ದೆ ತಾನೇ ಪಾವಿತ್ರ್ಯ ಉಳಿಸಿಕೊಳ್ಳಲು ಸಾಧ್ಯ?

ರಾಜ್ಯಪಾಲರ ಹುದ್ದೆಯ ದುರುಪಯೋಗಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ದುರ್ಬಳಕೆ ಮಾಡಿಕೊಂಡು ಬಂದದ್ದು ಸಂವಿಧಾನದ 164(1) ಮತ್ತು 356ನೇ ವಿಧಿಗಳನ್ನು. ‘ರಾಜ್ಯಪಾಲರು ಇಚ್ಛಿಸುವವರೆಗೆ ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಇರಬಹುದು’ ಎನ್ನುತ್ತದೆ 164(1)ನೇ ವಿಧಿ. ‘ಸಂವಿಧಾನಕ್ಕೆ ನಿಷ್ಠೆಯಿಂದ ಕಾರ್ಯನಿರ್ವಹಿಸಲು ವಿಫಲವಾಗುವ ಸರ್ಕಾರಗಳನ್ನು ವಜಾ ಮಾಡಬಹುದು’ ಎನ್ನುತ್ತದೆ 356ನೇ ವಿಧಿ. ‘ಬಹುಮತ ಸದನದೊಳಗೆ ನಿರ್ಧಾರವಾಗಬೇಕೇ ವಿನಾ ರಾಜಭವನದಲ್ಲಿ ಅಲ್ಲ’ ಎಂದು ಎಸ್.ಆರ್.ಬೊಮ್ಮಾಯಿ ನೇತೃತ್ವದ ಸರ್ಕಾರದ ಪದಚ್ಯುತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ನಂತರ ರಾಜಭವನದ ದುರುಪಯೋಗ ಕಡಿಮೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರನ್ನು ವಿವಾದದ ಕಟಕಟೆಯಲ್ಲಿ ತಂದು ನಿಲ್ಲಿಸುತ್ತಿರುವುದು ಸಂವಿಧಾನದ 163ನೇ ವಿಧಿ. ‘ರಾಜ್ಯಪಾಲರು ಸಚಿವ ಸಂಪುಟದ ನೆರವು ಮತ್ತು ಸಲಹೆಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು’ ಎಂದು ಹೇಳಿರುವ ಈ ವಿಧಿಯಲ್ಲಿ  ‘ಸಂವಿಧಾನದತ್ತವಾಗಿ ಕಾರ್ಯನಿರ್ವಹಿಸಬೇಕಾದ ಸಂದರ್ಭದಲ್ಲಿ ತಮ್ಮ ವಿವೇಚನೆಗೆ ತಕ್ಕಂತೆ ನಿರ್ಧಾರ ಕೈಗೊಳ್ಳಬಹುದು’ ಎಂಬ ಅಂಶವೂ ಸೇರಿದೆ. ವಿವೇಚನಾಧಿಕಾರಕ್ಕೆ ಇತಿಮಿತಿಗಳು ಇರದೆ ಇರುವ ಕಾರಣಕ್ಕೆ ಸರಳವಾದ 163ನೇ ವಿಧಿಯ ದುರುಪಯೋಗ ಕೂಡ ನಡೆಯತೊಡಗಿದೆ. ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ವಿರುದ್ಧ ಕೇಳಿಬರುತ್ತಿರುವುದು ಕೂಡ ಇದೇ ಆರೋಪ.

ಭವಿಷ್ಯದಲ್ಲಿ ರಾಜ್ಯಪಾಲರ ಹುದ್ದೆಯ ದುರುಪಯೋಗ ನಡೆಯಬಹುದೆಂಬ ನಿರೀಕ್ಷೆಯಿಂದಲೋ ಏನೋ ಸಂವಿಧಾನ ರಚನಾ ಸಭೆಯಲ್ಲಿ ರಾಜ್ಯಪಾಲರ ಹುದ್ದೆ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ರಾಜ್ಯಪಾಲರು ಜನರಿಂದಲೇ ಆಯ್ಕೆಯಾಗಬೇಕು ಎನ್ನುವುದು ಆ ಸಭೆಯಲ್ಲಿದ್ದ ಬಹುತೇಕ ಸದಸ್ಯರ ಮೊದಲ ಅಭಿಪ್ರಾಯವಾಗಿತ್ತು. ರಾಜ್ಯಪಾಲರನ್ನು ರಾಷ್ಟ್ರಪತಿಯವರ ರೀತಿಯಲ್ಲಿ ಪರೋಕ್ಷವಾಗಿ ಅಂದರೆ ಜನಪ್ರತಿನಿಧಿಗಳ ಮತಗಳ ಮೂಲಕ ಆಯ್ಕೆ ಮಾಡಬಹುದು ಎನ್ನುವ ಇನ್ನೊಂದು ಅಭಿಪ್ರಾಯವೂ ಕೇಳಿಬಂದಿತ್ತು. ಆದರೆ ಚುನಾವಣೆ ಮೂಲಕ ಆಯ್ಕೆಯಾದ ರಾಜ್ಯಪಾಲರು ರಾಜ್ಯದಲ್ಲಿ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳದೆ ಆಳುವ ಪಕ್ಷದ ಪ್ರತಿನಿಧಿಯಾಗಬಹುದು ಮತ್ತು ರಾಜ್ಯಗಳಲ್ಲಿ ಪ್ರಾಂತೀಯ ಭಾವನೆಗೆ ಉತ್ತೇಜನ ನೀಡುವ ಸಾಧ್ಯತೆ ಇದೆ ಎಂದು ಜವಾಹರಲಾಲ್‌ ನೆಹರೂ ಅವರಂತಹವರು ಆತಂಕ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಎಲ್ಲರೂ ಒಪ್ಪಿಕೊಂಡದ್ದು ಕೇಂದ್ರ ಸರ್ಕಾರವು ರಾಷ್ಟ್ರಪತಿಯವರ ಮೂಲಕ ನಡೆಸುವ ನೇಮಕಾತಿಯನ್ನು. ದೇಶ ವಿಭಜನೆಯ ಆಘಾತದಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಬಹುತೇಕ ನಾಯಕರು ‘ರಾಜ್ಯ ಸರ್ಕಾರಗಳನ್ನು ನಿಯಂತ್ರಿಸಿಕೊಂಡು ಹೋಗುವ ರೀತಿಯಲ್ಲಿ ಕೇಂದ್ರ ಸರ್ಕಾರವನ್ನು ಬಲಗೊಳಿಸಬೇಕು’ ಎಂಬ ಅಭಿಪ್ರಾಯ ಹೊಂದಿದ್ದು ಕೂಡ ಇದಕ್ಕೆ ಕಾರಣ.

ರಾಜಭವನದ ದುರ್ಬಳಕೆಯ ರೋಗಕ್ಕೆ ಚಿಕಿತ್ಸೆ ಇಲ್ಲವೇ ಇಲ್ಲವೆಂದಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ ಸುಧಾರಣೆಗಾಗಿ ರಚನೆಗೊಂಡಿದ್ದ ನ್ಯಾಯಮೂರ್ತಿ ಆರ್.ಎಸ್.ಸರ್ಕಾರಿಯಾ ಆಯೋಗ ಮತ್ತು ಎನ್‌ಡಿಎ ಸರ್ಕಾರ ರಚಿಸಿದ್ದ ‘ಸಂವಿಧಾನ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗ’ದ ಶಿಫಾರಸುಗಳನ್ನು ಜಾರಿಗೆ ತರುವುದೊಂದೇ ರಾಜಭವನದ ದುರ್ಬಳಕೆಯನ್ನು ತಡೆಯಲು ಇರುವ ಮಾರ್ಗ.
ಸರ್ಕಾರಿಯಾ ಆಯೋಗದ ಕೆಲವು ಶಿಫಾರಸುಗಳು:

• ರಾಜ್ಯಪಾಲರಾಗಿ ನೇಮಕಗೊಳ್ಳುವವರು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದವರಾಗಿರಬೇಕು. ತವರು ರಾಜ್ಯದಲ್ಲಿ ರಾಜ್ಯಪಾಲರಾಗಬಾರದು. ನೇಮಕ ಆಗುವ ಹೊತ್ತಿನಲ್ಲಿ ರಾಜಕೀಯವಾಗಿ ಕ್ರಿಯಾಶೀಲರಾಗಿ ಇರಬಾರದು.

• ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸೇರಿರುವ ವ್ಯಕ್ತಿಗಳನ್ನು ವಿರೋಧ ಪಕ್ಷದ ಆಡಳಿತ ಇರುವ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಕ ಮಾಡಬಾರದು. ರಾಜ್ಯಪಾಲರಾಗಿ ಹೋಗುವ ರಾಜ್ಯದ ರಾಜಕೀಯದಲ್ಲಿ ಅವರು ಆಸಕ್ತಿ ಹೊಂದಿರಬಾರದು.

• ರಾಜ್ಯಪಾಲರ ನೇಮಕಕ್ಕೆ ಮೊದಲು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ಮಾಡಬೇಕು. ಉಪರಾಷ್ಟ್ರಪತಿ ಮತ್ತು ಲೋಕಸಭಾಧ್ಯಕ್ಷರ ಜತೆ ರಹಸ್ಯ ಹಾಗೂ ಅನೌಪಚಾರಿಕ ರೀತಿಯಲ್ಲಿ ಚರ್ಚಿಸಬೇಕು. ರಾಜ್ಯಪಾಲ ಹುದ್ದೆಯಿಂದ ನಿರ್ಗಮಿಸಿದ ನಂತರ ಯಾವುದೇ ರೀತಿಯ ಅಧಿಕಾರದ ಸ್ಥಾನವನ್ನಾಗಲಿ, ಲಾಭದಾಯಕ ಹುದ್ದೆಯನ್ನಾಗಲಿ ಹೊಂದಬಾರದು.

ಸಂವಿಧಾನ ಪುನರ್‌ಪರಿಶೀಲನಾ ಆಯೋಗದ ಶಿಫಾರಸುಗಳು:
• ರಾಜ್ಯಪಾಲರ ನೇಮಕಕ್ಕೆ ಪ್ರಧಾನಮಂತ್ರಿ, ಲೋಕಸಭಾಧ್ಯಕ್ಷರು ಮತ್ತು ಸಂಬಂಧಿತ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ಅದರಲ್ಲಿ ಉಪರಾಷ್ಟ್ರಪತಿಯವರನ್ನು ಸೇರಿಸಿಕೊಳ್ಳಬಹುದು. ಸಮಿತಿಯ ಸಮಾಲೋಚನೆ ರಹಸ್ಯ ಮತ್ತು ಅನೌಪಚಾರಿಕ ರೀತಿಯಲ್ಲಿ ನಡೆಯಬೇಕಾಗಿಲ್ಲ. ಪಾರದರ್ಶಕವಾಗಿದ್ದರೆ ಒಳಿತು.

• ರಾಜ್ಯಪಾಲರ ಕಾರ್ಯಾವಧಿ ಕಡ್ಡಾಯವಾಗಿ ಐದು ವರ್ಷಗಳದ್ದಾಗಿರಬೇಕು. ಸಂಸತ್ತು ಮೂರನೇ ಎರಡರಷ್ಟು ಬಹುಮತದ ಮೂಲಕ ರಾಷ್ಟ್ರಪತಿಯನ್ನು ವಜಾಗೊಳಿಸಲು ಅವಕಾಶ ಇರುವಂತೆ ವಿಧಾನಮಂಡಲಕ್ಕೂ ರಾಜ್ಯಪಾಲರನ್ನು ಬಹುಮತದ ಮೂಲಕ ವಜಾಗೊಳಿಸುವ ಅಧಿಕಾರ ಇರಬೇಕು.

ಸರ್ಕಾರಿಯಾ ಆಯೋಗ ವರದಿ ನೀಡಿ 37 ವರ್ಷ ಮತ್ತು ಸಂವಿಧಾನ ನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗ ವರದಿ ನೀಡಿ 24 ವರ್ಷಗಳಾಗಿವೆ. ಅನುಷ್ಠಾನ ದೂರವೇ ಉಳಿಯಿತು, ಕನಿಷ್ಠ ಈ ಬಗ್ಗೆ ರಾಜಕೀಯ ಪಕ್ಷಗಳು ಚರ್ಚೆಯನ್ನೂ ನಡೆಸುತ್ತಿಲ್ಲ. ಯಾಕೆಂದರೆ ರಾಜಭವನದ ಬಾಗಿಲು ಮುಚ್ಚಿದರೆ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿದ ರಾಜಕೀಯ ನಾಯಕರ ಗತಿ ಏನು? ಎಲ್ಲ ಪಕ್ಷಗಳಲ್ಲಿಯೂ ಗೆಹಲೋತ್‌ಗಳಿದ್ದಾರಲ್ಲಾ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT