ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ನರಹತ್ಯೆ ಮತ್ತು ಸಮಾಜದ ಮೌನ..

ಇತ್ತೀಚಿನ ಕೆಲವು ಅಮಾನವೀಯ ಪ್ರಕರಣಗಳು ಭವಿಷ್ಯದ ಭಾರತದ ಬಗ್ಗೆ ಚಿಂತಿಸುವಂತೆ ಮಾಡಿವೆ
ಎನ್. ಜಗದೀಶ್ ಕೊಪ್ಪ
Published 4 ಸೆಪ್ಟೆಂಬರ್ 2024, 19:16 IST
Last Updated 4 ಸೆಪ್ಟೆಂಬರ್ 2024, 19:16 IST
ಅಕ್ಷರ ಗಾತ್ರ

ವಸಾಹತೋತ್ತರ ಭಾರತವು ತನ್ನ ಇತಿಹಾಸದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ. ಯಾವುದೇ ನಂಬಿಕೆ ಅಥವಾ ಚಿಂತನೆ ನಿಂತ ನೀರಲ್ಲ. ಅವು ಆಯಾ ಕಾಲಘಟ್ಟದ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾವಣೆಯಾಗುವುದು ಪ್ರಕೃತಿ ನಿಯಮದಂತೆ ಸಹಜ ಕ್ರಿಯೆ. ಆದರೆ, ಹಿಂದಿನ ಒಂದು ದಶಕದಲ್ಲಿ, ಬಹುಸಂಸ್ಕೃತಿಯ ನೆಲವಾದ ಭಾರತದಲ್ಲಿ ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ, ನರಹತ್ಯೆಯಂತಹ ಅಮಾನುಷ ಪ್ರಕರಣಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ.

ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಲ್ಲಿ ಸಂವಿಧಾನ ಮತ್ತು ಅದರ ಆಶಯಗಳು ಇಲ್ಲಿನ ಪ್ರತಿ ನಾಗರಿಕನಿಗೆ ಸ್ವತಂತ್ರವಾಗಿ ಜೀವಿಸುವುದಕ್ಕೆ ಮತ್ತು ತನ್ನದೇ ಆಹಾರ ಸಂಸ್ಕೃತಿಯಲ್ಲಿ ಬದುಕುವುದಕ್ಕೆ, ಉಡುಪು ಧರಿಸುವುದಕ್ಕೆ ನಾಗರಿಕ ಹಕ್ಕನ್ನು ದಯಪಾಲಿಸಿವೆ. ಆದರೆ, ಆಗಸ್ಟ್ ತಿಂಗಳಿನಲ್ಲಿ ನಡೆದ ಅಮಾನವೀಯ ಪ್ರಕರಣಗಳು ಭವಿಷ್ಯದ ಭಾರತದ ಬಗ್ಗೆ ನಾವೆಲ್ಲರೂ ಚಿಂತಿಸುವಂತೆ ಮಾಡಿವೆ. ಹತ್ಯೆಗಾಗಿ ಹಸು ಮತ್ತು ಎಮ್ಮೆಗಳನ್ನು ಮಾರಾಟ ಮಾಡುವುದರ ವಿರುದ್ಧ ಕೇಂದ್ರ ಪರಿಸರ ಸಚಿವಾಲಯವು 2017ರ ಮೇ 17ರಂದು ಅಧಿಸೂಚನೆಯನ್ನು ಹೊರಡಿಸಿತು. ಆಯಾ ರಾಜ್ಯಗಳು ತಮ್ಮ ನೆಲದ ಸಂಸ್ಕೃತಿಗೆ ಅನುಗುಣವಾಗಿ ಈ ಕಾಯ್ದೆಯನ್ನು ಆಚರಣೆಗೆ ತಂದಿವೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಇರುವುದರಿಂದ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿವೆ. ಆದರೆ, ಗೋವಾ ರಾಜ್ಯ ಇದನ್ನು ವಿರೋಧಿಸಿದೆ.

ಈಶಾನ್ಯ ಭಾರತದ ರಾಜ್ಯಗಳಲ್ಲಿ ಅಸ್ಸಾಂ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿದ್ದರೂ ಎಲ್ಲಾ ಬಗೆಯ, ಅಂದರೆ, ಹಸು, ಕರು, ದನ ಮತ್ತು ಎಮ್ಮೆಯಂತಹ ಪ್ರಾಣಿಗಳ ಹತ್ಯೆ ಹಾಗೂ ಆಹಾರ ಸೇವನೆಗೆ ಅವಕಾಶವಿದೆ. ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಹಸು, ಕರು ಹೊರತುಪಡಿಸಿ ದನಗಳ ಹತ್ಯೆಗೆ ಅವಕಾಶ ಕಲ್ಪಿಸಲಾಗಿದೆ. ಗೋಮಾಂಸ ಸೇವನೆಯು ಭಾರತದ ಹಲವು ತಳಸಮುದಾಯಗಳ ಮತ್ತು ಆದಿವಾಸಿಗಳ ಆಹಾರ ಸಂಸ್ಕೃತಿಯ ಒಂದು ಭಾಗವಾಗಿದೆ. ಅದೇ ರೀತಿ ಮುಸ್ಲಿಂ ಸಮುದಾಯದ ಆಹಾರ ಕೂಡ ಆಗಿದೆ. ಆದರೆ, ವರ್ತಮಾನದ ಭಾರತದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಗೋರಕ್ಷಕ ಜಾಗೃತಿ ದಳ ಎಂಬ ಸ್ವಯಂಘೋಷಿತ ಸಂಘಟನೆಯಿಂದ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಯುತ್ತಿರುವ ನರಹತ್ಯೆಯಂತಹ ಪ್ರಕರಣಗಳು ಈ ದೇಶದ ಒಂದು ಜ್ವಲಂತ ಸಮಸ್ಯೆಯಾಗಿ ಈವರೆಗೆ ಮುನ್ನೆಲೆಗೆ ಬರಲು ಸಾಧ್ಯವಾಗಿಲ್ಲ.

ಆಗಸ್ಟ್‌ನಲ್ಲಿ ನಡೆದ ನಾಲ್ಕು ಪ್ರಕರಣಗಳು ಪ್ರಜ್ಞಾವಂತ ನಾಗರಿಕರ ಮನ ಕಲಕುವಂತಿವೆ. ಉತ್ತರಪ್ರದೇಶದ ಲಖನೌ ನಗರದ ಮನೆಯೊಂದರಲ್ಲಿ ಗೋಮಾಂಸ ಶೇಖರಿಸಿ ಇಡಲಾಗಿದೆ ಎಂಬ ನೆಪದಲ್ಲಿ ಪೊಲೀಸರು ನಡುರಾತ್ರಿಯಲ್ಲಿ ಮುಸ್ಲಿಂ ನಿವಾಸಿಯೊಬ್ಬರ ಮನೆಯ ಮೇಲೆ ದಾಳಿ ಮಾಡಿದಾಗ ಗಾಬರಿಗೊಂಡ ಆ ಮನೆಯ ಗೃಹಿಣಿ ಹೃದಯಾಘಾತದಿಂದ ಮೃತಪಟ್ಟಳು. ಮನೆಯಲ್ಲಿ ಗೋಮಾಂಸ ಇರಲಿಲ್ಲ. ಸುಳ್ಳು ವದಂತಿಗೆ ಹೆಣ್ಣು ಜೀವವೊಂದು ಬಲಿಯಾಯಿತು. ಮಹಾರಾಷ್ಟ್ರದ ನಾಸಿಕ್‌ನಿಂದ ಕಲ್ಯಾಣ್ ನಗರದಲ್ಲಿರುವ ತನ್ನ ಪುತ್ರಿಯ ಮನೆಗೆ ಆಗಸ್ಟ್ 22ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ 72 ವರ್ಷದ ಮುಸ್ಲಿಂ ವೃದ್ಧನೊಬ್ಬನ ಮೇಲೆ ಗೋಮಾಂಸ ಸಾಗಿಸುತ್ತಿದ್ದಾನೆ ಎಂಬ ಆರೋಪದ ಮೇಲೆ ಹಲ್ಲೆ ಮಾಡಲಾಯಿತು. ದಾಳಿ ನಡೆಸಿದ ಐವರಲ್ಲಿ ಮೂವರು ಗೋರಕ್ಷಕರು ರೈಲ್ವೆ ಪೊಲೀಸ್ ಸಿಬ್ಬಂದಿಯ ಪುತ್ರರಾಗಿದ್ದರು.

ಆಗಸ್ಟ್ 23ರಂದು ತನ್ನ ಕುಟುಂಬದ ಸದಸ್ಯರೊಂದಿಗೆ ದೆಹಲಿಯಿಂದ ಹರಿಯಾಣಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರ್ಯನ್ ಮಿಶ್ರ ಎಂಬ ಹತ್ತೊಂಬತ್ತು ವರ್ಷದ ಯುವಕ ಗೋರಕ್ಷಕರ ಗುಂಡೇಟಿಗೆ ಬಲಿಯಾದ. ದೆಹಲಿ ಹೊರವಲಯದಲ್ಲಿ ಗೋರಕ್ಷಕ ದಳದವರು ಕಾರನ್ನು ಅಡ್ಡಗಟ್ಟಿದಾಗ, ಈ ನತದೃಷ್ಟ ಯುವಕ ಡಕಾಯಿತರು ಎಂದು ಭಯಭೀತನಾಗಿ ಕಾರನ್ನು ನಿಲ್ಲಿಸದೆ ಚಲಾಯಿಸಿದ. ಈ ಕಾರಣಕ್ಕಾಗಿ ಅಕ್ರಮ ಗೋ ಮಾರಾಟಗಾರರು ಎಂಬ ಅನುಮಾನದ ಮೇಲೆ ಕಾರನ್ನು ಹಿಂಬಾಲಿಸಿದ ಗೋರಕ್ಷಕರು ಫರೀದಾಬಾದ್ ಬಳಿ ಕಾರಿನ ಮೇಲೆ ಗುಂಡು ಹಾರಿಸಿದರು. ಇದರ ಪರಿಣಾಮವಾಗಿ ಹಿಂದೂ ಯುವಕ ಬಲಿಯಾದ.

ಇದೇ ಹರಿಯಾಣ ರಾಜ್ಯದ ಬದ್ರಾ ಎಂಬ ಗ್ರಾಮದಲ್ಲಿ ಆಗಸ್ಟ್ 27ರಂದು ಪಶ್ಚಿಮ ಬಂಗಾಳದ ಮುಸ್ಲಿಂ ಯುವಕನನ್ನು ಗೋಮಾಂಸ ಸೇವನೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ಥಳಿಸಿ ಹತ್ಯೆ ಮಾಡಲಾಯಿತು. ದೇಶದಾದ್ಯಂತ ಸೃಷ್ಟಿಯಾಗಿರುವ ಗೋರಕ್ಷಕರು ಎಂಬ ಈ ನರರಾಕ್ಷಸರ ಕೈಗೆ ಕಾನೂನು ಬಳಕೆಯ ಅಧಿಕಾರವನ್ನು ನೀಡಿದವರು ಯಾರು? ಇದು ನಮ್ಮ ಮುಂದಿರುವ ಪ್ರಶ್ನೆ.

ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಕಾನೂನು ಜಾರಿಗೆ ಬಂದ ನಂತರ, ಹೈನುಗಾರಿಕೆ ಮತ್ತು ಕೃಷಿಯನ್ನು ನಂಬಿರುವ ಸಣ್ಣ ಕೃಷಿಕರಿಗೆ ಹಸು ಹಾಗೂ ದನಗಳ ಮಾರಾಟ ಅಥವಾ ಕೊಳ್ಳುವಿಕೆಗೆ ದೊಡ್ಡ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಗಿ ಪತ್ರ ಪಡೆದು ಜಾನುವಾರುಗಳ ಸಂತೆ ಮತ್ತು ಜಾತ್ರೆಗೆ ಹೋಗುವ ವ್ಯಾಪಾರಸ್ಥರು ಹಾಗೂ ರೈತರು ಸಹ ಹಲ್ಲೆಗೀಡಾಗಿರುವುದರ ಜೊತೆಗೆ ಹತ್ಯೆಯೂ ಆಗಿರುವ ನಿದರ್ಶನಗಳು ಇವೆ.

ಹಿಂದಿನ ವರ್ಷ ಏಪ್ರಿಲ್ 23ರಂದು ಮಂಡ್ಯ ನಗರದ ನಿವಾಸಿ, 25 ವರ್ಷ ಪ್ರಾಯದ ಇದ್ರೀಸ್ ಪಾಶ ಎಂಬ ಯುವಕ ಕನಕಪುರ ಸಮೀಪದ ಸಾತನೂರು ಸಂತೆಗೆ ಹಸು ಮತ್ತು ಕರುಗಳನ್ನು ಪರವಾನಗಿ ಪತ್ರದೊಂದಿಗೆ ಸಾಗಿಸುತ್ತಿದ್ದ. ಆಗ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಹಾಗೂ ಹಿಂದೂ ಧರ್ಮದ ಸ್ವಯಂಘೋಷಿತ ರಕ್ಷಕ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರಿಂದ ಹತ್ಯೆಯಾದ ಆರೋಪವಿದೆ. ಕೊಲೆ ಆರೋಪಿಯು ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರಬಂದ. ಇಂತಹ ಪ್ರಕರಣಗಳನ್ನು ಪರಾಮರ್ಶಿಸಿದಾಗ, ದೇಶದ ನ್ಯಾಯಾಂಗ ಮತ್ತು ಆಡಳಿತಾಂಗದ ಮೇಲೆ ಇರುವ ನಂಬಿಕೆಗಳು ಕುಸಿಯತೊಡಗುತ್ತವೆ.

ಹ್ಯೂಮನ್ ರೈಟ್ಸ್ ವಾಚ್ ಎಂಬ ಸಂಸ್ಥೆ ಹಿಂದಿನ ಹತ್ತು ವರ್ಷಗಳಿಂದ ಕಲೆಹಾಕಿರುವ ಅಂಕಿ ಅಂಶಗಳು, ಈ ದೇಶವು ಧರ್ಮದ ಹೆಸರಿನಲ್ಲಿ ಎತ್ತ ಸಾಗುತ್ತಿದೆ ಎಂಬುದನ್ನು ದೃಢೀಕರಿಸುತ್ತಿವೆ. 2018ರಲ್ಲಿ ಗೋಹತ್ಯೆ ಮತ್ತು ಗೋ ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ಒಟ್ಟು 44 ಹತ್ಯೆಗಳ ಪೈಕಿ 36 ಮಂದಿ ಮುಸ್ಲಿಂ ಸಮುದಾಯದ ನಾಗರಿಕರು ಸೇರಿದ್ದಾರೆ. 2016ರ ಮಾರ್ಚ್ ತಿಂಗಳಿನಲ್ಲಿ ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಪಶುಪಾಲಕರಾಗಿದ್ದ ಮಹಮ್ಮದ್ ಅನ್ಸಾರಿ ಮತ್ತು ಆತನ ಪುತ್ರ ಇಮ್ತಿಯಾಜ್ ಖಾನ್ ಎಂಬ ಹನ್ನೆರಡು ವರ್ಷದ ಬಾಲಕ ಹತ್ಯೆಗೊಳಗಾದರು. ಆಗ ಜೀವಭಯದಿಂದ ಪೊದೆಯ ಮರೆಯಲ್ಲಿ ಕುಳಿತಿದ್ದ ಎಪ್ಪತ್ತು ವರ್ಷದ ವೃದ್ಧ ಆಜಾದ್ ಖಾನ್ ತನ್ನ ಮಗ ಮತ್ತು ಮೊಮ್ಮೊಗನ ಹತ್ಯೆಗೆ ಮೌನವಾಗಿ ಸಾಕ್ಷಿಯಾದ. ಇದೇ ರೀತಿಯಲ್ಲಿ ಇಂದಿನ ಸಮಾಜ ಕೂಡ ಇಂತಹ ಪ್ರಕರಣಗಳಿಗೆ ಮೌನವಾಗಿ ಸಾಕ್ಷಿಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT