ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

India-Canada Tension: ಮಾತು ಮೃದುವಾಗಿರಲಿ, ತೋಳಲ್ಲಿ ತಾಕತ್ತಿರಲಿ

Published 6 ಅಕ್ಟೋಬರ್ 2023, 13:23 IST
Last Updated 6 ಅಕ್ಟೋಬರ್ 2023, 13:23 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೊಡೊರ್ ರೂಸ್‌ವೆಲ್ಟ್ ಅವರು ಪಶ್ಚಿಮ ಆಫ್ರಿಕಾದ ಗಾದೆಯನ್ನು ಉಲ್ಲೇಖಿಸಿ ಒಂದು ಮಾತನ್ನು ಯಾವಾಗಲೂ ಹೇಳುತ್ತಿದ್ದರು. ‘ಮಾತು ಮೃದುವಾಗಿರಲಿ; ನಿಮ್ಮ ತೋಳುಗಳಲ್ಲಿ ತಾಕತ್ತಿರಲಿ. ಆಗ ಯಶಸ್ಸು ನಿಮ್ಮದಾಗುತ್ತದೆ’ ಎಂಬುದು ಆ ಮಾತು. ಹಲವಾರು ಸಾಮ್ರಾಟರು ಹಾಗೂ ದೇಶಗಳ ಮುಖ್ಯಸ್ಥರು ಅನುಸರಿಸಿಕೊಂಡು ಬಂದ ‘ಶಾಂತಿಯ ಮಾತುಕತೆ, ಅಗತ್ಯ ಎದುರಾದರೆ ಬಲ‍ಪ್ರಯೋಗ’ ಎಂಬ ತತ್ವದ ಪ್ರಕಾರ ದೇಶವು ಮಿಲಿಟರಿ ತಾಕತ್ತನ್ನು ಬೆಳೆಸಿಕೊಳ್ಳಬೇಕು. ಆ ಶಕ್ತಿಯನ್ನು ಬೆಳೆಸಿಕೊಂಡ ನಂತರವೇ ದೇಶವು ಬೇರೆ ದೇಶಗಳಲ್ಲಿ ರಹಸ್ಯ ಕಾರ್ಯಾಚರಣೆಗಳನ್ನು ನಡೆಸಬೇಕು.

ಭಾರತವು ಮಾತಿನಲ್ಲಿ ಕಠಿಣವಾಗಿದೆಯಾದರೂ, ಅದರ ತೋಳ್ಬಲ ಕುಂದಿದೆಯೇ? ಕೆನಡಾದ ಸಿಖ್ ವ್ಯಕ್ತಿ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್ ಸಿಂಗ್‌ ನಿಜ್ಜರ್‌ನ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಆರೋಪಿಸಿದ್ದಕ್ಕೆ ಪ್ರತಿಯಾಗಿ ಭಾರತವು ಒರಟಾಗಿ ಪ್ರತಿಕ್ರಿಯಿಸಿತೇ? ಕೆನಡಾ ದೇಶವು ಹೇಗೆ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಪೋಷಿಸುತ್ತಿದೆ ಎಂಬುದನ್ನು ತೋರಿಸಲು ಭಾರತವು ಕೆನಡಾದ ಜೊತೆ ಹಾಗೂ ಮುಖ್ಯವಾಗಿ ಅಮೆರಿಕದ ಜೊತೆ, ಅವರ ವರ್ತನೆಯ ಮೇಲೆ ಪ್ರಭಾವ ಬೀರುವ ಬಗೆಯಲ್ಲಿ ವರ್ತಿಸಬಾರದಿತ್ತೇ? ಪಶ್ಚಿಮದ ದೇಶಗಳ ಬಲಿಷ್ಠ ನಾಯಕರು ಚೀನಾವನ್ನು ಎದುರಿಸಿ, ಅದಕ್ಕೆ ಸರಿಸಮನಾಗಿ ನಿಲ್ಲಬಲ್ಲ ದೇಶ ಭಾರತ ಎಂಬ ಕಾರಣಕ್ಕೆ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿರುವಾಗ, ಭಾರತದ ಜೊತೆ ಸ್ನೇಹ ಬೆಳೆಸುತ್ತಿರುವಾಗ, ಟ್ರೂಡೊ ಅವರನ್ನು ಮಣಿಸಲು ಭಾರತವು ಇನ್ನಷ್ಟು ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕಿತ್ತಲ್ಲವೇ? ಖಾಲಿಸ್ತಾನಿ ಚಟುವಟಿಕೆಗಳಿಗೆ ಭಾರತದ ಸಿಖ್ಖರಿಂದ ನೈಜ ಬೆಂಬಲ ಇಲ್ಲ. ಖಾಲಿಸ್ತಾನಿ ಚಟುವಟಿಕೆಗಳು ವಿದೇಶಗಳಲ್ಲಿ ಪುಡಿ ಸಂಘಟನೆಗಳ ಮೂಲಕ ನಡೆಯುತ್ತಿವೆ. ಹೀಗಿರುವಾಗ ನಾವು ಈ ಬಗ್ಗೆ ಅನಗತ್ಯವಾಗಿ ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಿದ್ದೇವೆಯೇ?

ನಿಜ್ಜರ್ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತವು ಅಧಿಕೃತವಾಗಿ ಹೇಳಿದೆ. ಆದರೆ, ದುರ್ಬಲ ಟ್ರೂಡೊ ಅವರನ್ನು ಬಲಿಷ್ಠ ಮೋದಿ ಅವರು ಸೋಲಿಸಿದ್ದಾರೆ ಎಂದು ಬಲಪಂಥೀಯ ಮಾಧ್ಯಮಗಳು ಸಂಭ್ರಮಿಸುತ್ತಿವೆ. ಹತ್ಯೆಯ ಆರೋಪವನ್ನು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಲ್ಲಗಳೆಯುತ್ತಿದ್ದಾರೆ. ಇದೇ ವೇಳೆ ಅವರು, ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿಲ್ಲದ ದೇಶಗಳ ಧ್ವನಿಯಾಗಿರುವ ಭಾರತವು ಈಗ ಅಭಿವೃದ್ಧಿ ಹೊಂದಿರುವ ದೇಶಗಳು ಹೊಂದಿರುವ ಯಜಮಾನಿಕೆಯನ್ನು ಬದಲಿಸಲಿದೆ ಎಂದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಜಂಭದಿಂದ ಹೇಳಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳು ಸ್ವಾತಂತ್ರ್ಯದ ಹೆಸರಿನಲ್ಲಿ ಇಬ್ಬಂದಿತನವನ್ನು ಬೆಳೆಸಿಕೊಂಡು ಬಂದಿವೆ ಎಂದು ಅವರು ದೂರುತ್ತಿದ್ದಾರೆ. 

‘ಭಯೋತ್ಪಾದನೆ, ತೀವ್ರವಾದ ಮತ್ತು ಹಿಂಸೆಗೆ ರಾಜಕೀಯ ಅನುಕೂಲಗಳಿಗೆ ಅನುಗುಣವಾಗಿ ಪ್ರತಿಕ್ರಿಯೆ ನೀಡುವುದನ್ನು ನಾವು ಒಪ್ಪಬೇಕಿಲ್ಲ... ಗಡಿಯ ರಕ್ಷಣೆ ಮತ್ತು ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸದೇ ಇರುವ ನಿಲುವು ಅನುಕೂಲಸಿಂಧು ಎಂಬಂತೆ ಆಗಬಾರದು’ ಎಂದು ಜೈಶಂಕರ್ ಅವರು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಹೇಳಿದ್ದಾರೆ. ನ್ಯೂಯಾರ್ಕ್‌ನ ಕಾರ್ಯಕ್ರಮವೊಂದರಲ್ಲಿ ಅವರು ‘ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಿದ್ದನ್ನು, ಭಾರತದ ರಾಯಭಾರ ಕಚೇರಿಗಳ ಮೇಲೆ ದಾಳಿ ನಡೆಸಿದ್ದನ್ನು ಸ್ವಾತಂತ್ರ್ಯ ಮತ್ತು ಪ್ರಜಾತಂತ್ರದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲಾಗಿದೆ’ ಎಂದು ನ್ಯೂಯಾರ್ಕ್‌ನಲ್ಲಿನ ಭಾಷಣವೊಂದರಲ್ಲಿ ಹೇಳಿದ್ದರು. ಈ ಮಾತುಗಳು ಪಾಕಿಸ್ತಾನ ಮತ್ತು ಚೀನಾವನ್ನು ಉದ್ದೇಶಿಸಿವೆ ಎಂಬುದು ಸ್ಪಷ್ಟ. ಅಷ್ಟೇ ಅಲ್ಲ, ಅವು ಕೆನಡಾವನ್ನು ಹೆಚ್ಚು ಗುರಿಯಾಗಿಸಿಕೊಂಡಿವೆ. ಜೊತೆಗೆ, ಅವು ಅಮೆರಿಕವನ್ನೂ ಪರೋಕ್ಷವಾಗಿ ಗುರಿಯಾಗಿಸಿಕೊಂಡಿವೆ. ಬೇರೆ ದೇಶಗಳಲ್ಲಿ ಇದ್ದುಕೊಂಡು ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ಭಯೋತ್ಪಾದಕರನ್ನು ಅಮೆರಿಕವು ತನ್ನ ಏಜೆನ್ಸಿಗಳ ಮೂಲಕ ಯಾವ ಅಳುಕೂ ಇಲ್ಲದೆ ಹೊಸಕಿಹಾಕುತ್ತದೆ. ಆದರೆ ಪಶ್ಚಿಮದ ನಾಯಕರು ಮೋದಿ ಅವರತ್ತ ಸ್ನೇಹಹಸ್ತ ಚಾಚಿರುವಾಗ, ಭಾರತವನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿರುವಾಗ ಹೀಗೆ ಹೇಳಿರುವುದು ವಿವೇಕದ ನಡೆಯೇ? ಕೆನಡಾ ಮತ್ತು ಟ್ರೂಡೊ ಅವರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ, ಅವರ ಮೇಲೆ ಮಾತ್ರ ಎಲ್ಲರ ಗಮನ ತಿರುಗುವಂತೆ ನೋಡಿಕೊಳ್ಳುವುದು ಉತ್ತಮವಾಗಿತ್ತು, ಅಲ್ಲವೇ?

ನಿಜ್ಜರ್ ಮಾತ್ರವೇ ಅಲ್ಲದೆ ಮೂವರು ಪ್ರಮುಖ ಸಿಖ್ ಪ್ರತ್ಯೇಕತಾವಾದಿಗಳು ಈ ವರ್ಷ ವಿದೇಶಗಳಲ್ಲಿ ನಿಗೂಢವಾಗಿ ಹತ್ಯೆಯಾಗಿದ್ದಾರೆ. ಇವರ ಹತ್ಯೆಗೆ ಭಾರತದ ಬೇಹುಗಾರರೇ ಕಾರಣ ಎಂದು ಸಿಖ್ ಪ್ರತ್ಯೇಕತಾವಾದಿ ಗುಂಪುಗಳು ಆರೋಪಿಸಿವೆ. ಭಾರತದಲ್ಲಿ ಮೋದಿ ಮತ್ತು ಅಮಿತ್ ಶಾ ಅವರ ನಂತರದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿರುವ ಅಜಿತ್ ಡೊಬಾಲ್ ಅವರು ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳ ಹತ್ಯೆಯ ಹಿಂದಿದ್ದಾರೆ ಎಂದು ಪತ್ರಕರ್ತ ರಾಜದೀಪ್ ಸರ್ದೇಸಾಯಿ ಬರೆದಿದ್ದಾರೆ. ಯುಪಿಎ ಆಡಳಿತದ ಅವಧಿಯಲ್ಲಿ ಭಾರತವು, ವಿದೇಶಗಳಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದ ಭಯೋತ್ಪಾದಕರ ವಿರುದ್ಧ ಮೊಸಾದ್ ಮಾದರಿಯಲ್ಲಿ ಕ್ರಮಕ್ಕೆ ಹಿಂಜರಿಯುತ್ತಿದ್ದುದು ಏಕೆ ಎಂದು ಡೊಬಾಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದೂ ಸರ್ದೇಸಾಯಿ ಬರೆದಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕಟ್ಟರ್‌ವಾದಿಗಳಿಗೆ ಇಸ್ರೇಲ್ ಮಾದರಿಯ ಗೋಪ್ಯ ಕಾರ್ಯಾಚರಣೆಗಳ ಬಗ್ಗೆ ಬಹಳ ಆಕರ್ಷಣೆ ಇದೆ. ಇಸ್ರೇಲಿನವರು ಅರಬ್ ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅಪಹರಣಕ್ಕೆ ಒಳಗಾಗಿ ದೂರದ ಉಗಾಂಡಾದ ಎಂಟೆಬೆಯಲ್ಲಿ ಇದ್ದ ವಿಮಾನದಲ್ಲಿನ 106 ಒತ್ತೆಯಾಳುಗಳ ಪೈಕಿ 102 ಮಂದಿಯನ್ನು ಧೈರ್ಯದಿಂದ ರಕ್ಷಿಸಿದ ಕಾರ್ಯಾಚರಣೆಯನ್ನು ಇಸ್ರೇಲ್ ನಡೆಸಿದೆ. ಭಾರತದ ಮಿಲಿಟರಿ ಗುಪ್ತದಳ ಕೂಡ ಮೊಸಾದ್ ಮಾದರಿಯಲ್ಲಿ ಕಾರ್ಯಾಚರಣೆ ನಡೆಸುತ್ತದೆ ಎಂಬ ಹಗಲುಗನಸನ್ನು ಈ ಕಟ್ಟರ್‌ವಾದಿಗಳು ಕಾಣುವುದಿದೆ. ಆದರೆ ವಿದೇಶಗಳಲ್ಲಿ ನೆಲೆ ಕಂಡುಕೊಂಡಿರುವ ಶಂಕಿತ ಭಯೋತ್ಪಾದಕರ ಹತ್ಯೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುವ ಅಮೆರಿಕ ಮತ್ತು ರಷ್ಯಾದ ಗುಪ್ತಚರರು ಕೂಡ ವೃತ್ತಿಪರತೆ ಹಾಗೂ ಎದೆಗಾರಿಕೆಯ ವಿಚಾರದಲ್ಲಿ ಇಸ್ರೇಲ್‌ನ ಮೊಸಾದ್ ಸಮಕ್ಕೆ ಬರುವುದಿಲ್ಲ.

ಇಸ್ರೇಲ್ ಮಿಲಿಟರಿಯ ಜೊತೆ ಭಾರತವು ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದ್ದರೂ, ಕೆನಡಾದಲ್ಲಿ ಇರುವ ಖಾಲಿಸ್ತಾನಿ ನಾಯಕರನ್ನು ಹತ್ಯೆ ಮಾಡಲು ಭಾರತಕ್ಕೆ ಇಸ್ರೇಲ್ ನೆರವು ನೀಡಿರುವ ಸಾಧ್ಯತೆ ಕಡಿಮೆ. ಏಕೆಂದರೆ ಕೆನಡಾವು ನ್ಯಾಟೊ ಸದಸ್ಯ ರಾಷ್ಟ್ರ. ಹಾಗೆಯೇ ಅಮೆರಿಕದ ಪ್ರಮುಖ ಮಿತ್ರರಾಷ್ಟ್ರ. ಹೀಗಾಗಿ, ಅಮೆರಿಕದ ಜೊತೆಗಿನ ಸಂಬಂಧವನ್ನು ಅಪಾಯಕ್ಕೆ ಒಡ್ಡಲು ಇಸ್ರೇಲ್ ಯಾವತ್ತೂ ಮುಂದಾಗುವುದಿಲ್ಲ. ಹಾಗಾದರೆ, ಭಾರತವು ಈ ಹತ್ಯೆಯನ್ನು ಸ್ವತಂತ್ರವಾಗಿ ನಡೆಸಿರಬಹುದೇ? ಕೆಲವು ತಜ್ಞರ ಪ್ರಕಾರ, ಬಿಜೆಪಿಯು 2014ರಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಭಾರತವು ಬೇರೆ ದೇಶಗಳಲ್ಲಿ ಇಂತಹ ಹತ್ಯೆ ನಡೆಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ. ಅದು ನಿಜವಾಗಿದ್ದರೆ, ಅದರ ಬಗ್ಗೆ ಹೇಳಿಕೊಂಡು ತಿರುಗುವುದು ವಿವೇಕದ ಕೆಲಸವಲ್ಲ.

ನಿಜ, ರಾಜಕಾರಣದಲ್ಲಿ ಪ್ರತಿ ದೇಶವೂ ತಾನು ಹೇಳುವ ಸಿದ್ಧಾಂತ ಮತ್ತು ನೈತಿಕತೆಯ ಹೊರತಾಗಿ ತನ್ನ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯವಿರುವ ನೀತಿಗಳನ್ನು ಅನುಸರಿಸುತ್ತದೆ. ಈಚೆಗೆ ಮುಕ್ತಾಯವಾದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತವು, ಒಡೆದ ವಿಶ್ವವನ್ನು ಒಗ್ಗೂಡಿಸುವ ಆಶಾಕಿರಣವಾಗಿ ಮೂಡಿಬಂದಿದೆ. ಜಂಟಿ ಘೋಷಣೆಯೊಂದನ್ನು ಹೊರತರುವಲ್ಲಿ ಜಗತ್ತು ಗುರುತಿಸಲೇಬೇಕಾದ ಬಗೆಯಲ್ಲಿ ಮೋದಿ ಅವರು ವರ್ತಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮೋದಿ ಅವರ ಹೊಗಳುಭಟರು ಮುಂಬರುವ ಚುನಾವಣೆಗಳ ಮೇಲೆ ಕಣ್ಣಿಟ್ಟು, ಜಾಗತಿಕ ರಾಜಕಾರಣವನ್ನು ಹಿಂದುತ್ವದ ಕನ್ನಡಕದ ಮೂಲಕ ನೋಡುತ್ತ, ಮೋದಿ ಅವರನ್ನು ಬಲಿಷ್ಠ ಹಿಂದೂ ರಾಷ್ಟ್ರೀಯವಾದಿ ಎಂದು ಬಿಂಬಿಸಲು ಆತುರಪಡುವುದರಿಂದ ಮೋದಿ ಮತ್ತು ಭಾರತಕ್ಕೆ ಕೆಟ್ಟ ಹೆಸರು ತರುತ್ತಾರೆ.

ತಮ್ಮ ಮಿತ್ರಪಕ್ಷ, ಸಿಖ್ಖರ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಕ್ಷದ ಒತ್ತಡಕ್ಕೆ ಮಣಿದು ಟ್ರೂಡೊ ಅವರು ಭಾರತವ ವಿರುದ್ಧ ಗಟ್ಟಿ ಆಧಾರವಿಲ್ಲದೆ ಆರೋಪ ಮಾಡಿದರು. ನಂತರ ಅದಕ್ಕೆ ತಕ್ಕ ತಿರುಗೇಟು ತಿಂದರು. ಈಗ ದೇಶದ ಜನರ ಕಣ್ಣಲ್ಲಿ ಮೋದಿ ಅವರು ಬಲಿಷ್ಠ ನಾಯಕನಾಗಿ ಕಾಣಿಸಿಕೊಳ್ಳಬಹುದಾದರೂ, ಜಾಗತಿಕ ಮಟ್ಟದಲ್ಲಿ ಅವರ ಕೀರ್ತಿಗೆ ತುಸು ಕುಂದುಂಟಾಗಬಹುದು.

ಬಲಿಷ್ಠ ವ್ಯಕ್ತಿಗಳು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಮೌನವಾಗಿದ್ದುಕೊಂಡೇ ನಮ್ಮ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾದ, ಈಗ ಹಲವು ವೈಫಲ್ಯಗಳಿಗೆ ಸಾಕ್ಷಿಯಾಗಿರುವ ಚೀನಾದ ಜೊತೆ ಗಡಿಯ ಮೇಲೆ ಹೆಚ್ಚು ಗಮನ ಕೊಡಬೇಕಿರುವ ಸಮಯ ಇದು.

ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌

ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT