ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ |ಒಂದು ದೇಶ–ಒಂದು ಚುನಾವಣೆ: ಸಾಮಾನ್ಯ ರೋಗಕ್ಕೆ ‘ಮಹಾನ್‌ ಮದ್ದು’

‘ಒಂದು ದೇಶ–ಒಂದು ಚುನಾವಣೆ’: ಪ್ರಜಾಪ್ರಭುತ್ವ ರಾಜಕಾರಣ ನಿಯಂತ್ರಿಸುವ ಬಯಕೆ
Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಒಂದು ಘನವಾದ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಹೊರಟಾಗ, ಚಾಲಾಕಿ ಉತ್ತರಗಳೇ ಎದುರಾಗುತ್ತವೆ ಎಂಬ ಮಾತಿದೆ. ‘ಒಂದು ದೇಶ–ಒಂದು ಚುನಾವಣೆ’ಗೂ ಈ ಮಾತನ್ನು ಅನ್ವಯಿಸಬಹುದು. ಇಲ್ಲಿ ನಿಜವಾದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಬದಲಿಗೆ, ಒಂದು ‘ಮಹಾನ್‌ ಪರಿಹಾರ’ವನ್ನು ಸಿದ್ಧಪಡಿಸಲಾಗಿದೆ. ವಾಸ್ತವದಲ್ಲಿ ರೋಗ ನೀಡುತ್ತಿರುವ ಉಪಟಳಕ್ಕಿಂತ ಅದರ ಉಪಶಮನಕ್ಕೆಂದು ರೂಪಿಸಿದ ಮದ್ದು ಮತ್ತು ಪರಿಹಾರದ ಉಪಟಳವೇ ಭೀಕರವಾಗಿದೆ. ಈ ಕಾಲದ ತುಘಲಕ್‌ ದೊರೆಯು ಯಾವುದೇ ನೀಲನಕ್ಷೆ ಅಥವಾ ದೂರದೃಷ್ಟಿ ಇಲ್ಲದೆಯೇ ‘ನೋಟು ರದ್ದತಿ’ ಮಾಡಿದ್ದರು. ತನ್ನ ತಲೆಗೆ ಅದ್ಭುತ ಎನಿಸಿದ್ದೆಲ್ಲವನ್ನೂ ಅನುಷ್ಠಾನಕ್ಕೆ ತಂದುಬಿಡುವ ಚಾಳಿಯ ಮುಂದುವರಿದ ಅಧ್ಯಾಯವಿದು.

ಒಂದು ದೇಶ, ಒಂದು ಚುನಾವಣೆಯ ಸಾಧಕ–ಬಾಧಕಗಳ ಪರಿಶೀಲನೆಗೆ ರಚಿಸಿದ ಉನ್ನತ ಸಮಿತಿಯ ವರದಿಯನ್ನು ಪಠಿಸುವಲ್ಲಿ ಆಡಳಿತಾರೂಢ ಪಕ್ಷವು ತೀರಾ ಅನಗತ್ಯ ತರಾತುರಿ ತೋರಿತು. ಇದನ್ನು ಗಮನಿಸಿದರೆ ಈ ಯೋಜನೆ ಪ್ರಾಯೋಗಿಕ ಅಲ್ಲ ಎಂದು ಅರ್ಥವಾಗುತ್ತದೆ.


ಪ್ರಜಾಪ್ರಭುತ್ವವನ್ನು ಅದರ ಅಸ್ತವ್ಯಸ್ತ ಸ್ಥಿತಿಯಿಂದ ಮೇಲೆತ್ತಬೇಕು ಎಂಬ ದೀರ್ಘಕಾಲದ ರಾಜಕೀಯ ಸಂಕಥನಕ್ಕೆ ಇದು ಸರಿಯಾಗಿ ಹೊಂದುತ್ತದೆ. ಗಣರಾಜ್ಯ ವನ್ನು ಶ್ರೀಸಾಮಾನ್ಯರಿಂದ ರಕ್ಷಿಸಬೇಕು ಎನ್ನುವ ಮಧ್ಯಮ ವರ್ಗದ ‘ಫ್ಯಾಂಟಸಿ’ ಮತ್ತು ಪ್ರಜಾಪ್ರಭುತ್ವವನ್ನು ಅದರ ನೆಲದಿಂದಲೇ ಎತ್ತಂಗಡಿ ಮಾಡಿಬಿಡಬೇಕು ಎಂಬ ಅಧಿಕಾರಿಶಾಹಿಯ ಹೆಬ್ಬಯಕೆಯಿಂದಾಗಿ ‘ಪ್ರಜಾಪ್ರಭುತ್ವ ಅಸ್ತವ್ಯಸ್ತ’ ಎಂಬ ಸಂಕಥನ ರೂಪುಗೊಂಡಿದೆ.

ನೋಟು ರದ್ದತಿಯ ‘ಅನುಕೂಲ’ಗಳನ್ನು ಅನ್ವೇಷಿಸಿಕೊಡಿ ಎಂದು ಆರ್‌ಬಿಐಗೆ ಸೂಚಿಸಲಾಗಿತ್ತಲ್ಲಾ,
ಅದೇ ರೀತಿ ಒಂದು ದೇಶ–ಒಂದು ಚುನಾವಣೆಯ ಅನುಕೂಲಗಳನ್ನು ಹುಡುಕಿ ಎಂದು ಈ ಉನ್ನತ ಸಮಿತಿಗೆ ಆಜ್ಞಾಪಿಸಲಾಗಿತ್ತು. ಈ ಸಮಿತಿಯಲ್ಲಿ ಆಳುವ ಪಕ್ಷದ ಪರವಾಗಿರುವ ಮತ್ತು ಏಕ ಚುನಾವಣೆಯ ಪರವಾಗಿರುವ ವಂದಿಮಾಗಧರೇ ಇದ್ದರು. ಹೀಗಾಗಿ, ತಮಗೆ ದೊರೆತ ಆಜ್ಞಾನುಸಾರ, ಏಕ ಚುನಾವಣೆ ನಡೆಸಲು ಅಗತ್ಯವಿರುವ ಕಾನೂನು–ಸಾಂವಿಧಾನಿಕ ಕ್ರಮಗಳು ಮತ್ತು ಆಡಳಿತಾತ್ಮಕ ವ್ಯವಸ್ಥೆಗಳ ಬಗ್ಗೆಯೇ ವರದಿಯಲ್ಲಿ ವಿವರಿಸಿದ್ದಾರೆ. ಈ ‘ಅನುಕೂಲ’ಗಳನ್ನು ಹುಡುಕಲೇಬೇಕು ಎಂಬ ಒತ್ತಾಯ ಪೂರ್ವಕ ಯತ್ನಗಳ ಪರಿಣಾಮವಾಗಿ ವರದಿಯಲ್ಲಿ ಅಲ್ಲಲ್ಲಿ ವಿಚಿತ್ರ ಉಲ್ಲೇಖಗಳು ತೂರಿಕೊಂಡಿವೆ.

ಪದೇಪದೇ ಚುನಾವಣೆ ನಡೆಯುವುದರಿಂದ ಮಹಾರಾಷ್ಟ್ರದಂತಹ ರಾಜ್ಯದಲ್ಲಿ ‘ವರ್ಷವೊಂದರಲ್ಲಿ
ಸರಾಸರಿ 300 ದಿನಗಳು ವ್ಯರ್ಥವಾಗುತ್ತವೆ’, ‘ರಾಜಕೀಯ ಕಾರ್ಯಕರ್ತರಿಗೆ ಮುಕ್ತ ಮತ್ತು ಸಮಾನ ಅವಕಾಶ ಒದಗಿಸುತ್ತದೆ. ಏಕೆಂದರೆ ಸಂಸದನಾಗಿ ಆಯ್ಕೆಯಾದವನು, ಶಾಸಕನ ಸ್ಥಾನಕ್ಕೆ ಸ್ಪರ್ಧಿಸಲು ಆಗುವುದಿಲ್ಲ’, ‘ದ್ವೇಷ ಭಾಷಣದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ’, ‘ಪದೇಪದೇ ಮತದಾನ ಮಾಡಲು ಹೋಗುವುದರಿಂದ ಮತದಾರರಿಗೆ ಆಗುವ ಆಯಾಸವನ್ನು ತಪ್ಪಿಸುತ್ತದೆ’ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತದ ರಾಜಕೀಯ ಕುರಿತು 20 ವರ್ಷಗಳ ಅಧ್ಯಯನದಲ್ಲಿ ಈ ಸಮಸ್ಯೆಗಳು ಒಮ್ಮೆಯೂ ನನ್ನ ಕಿವಿಗೆ ಬಿದ್ದಿಲ್ಲ. ಈ ಸಮಿತಿಯಲ್ಲಿರುವ ‘ಸಂವಿಧಾನ ತಜ್ಞ’ರ ಸಾಂವಿಧಾನಿಕ ಪರಿಜ್ಞಾನದ ಒಂದು ತುಣುಕು ಇಲ್ಲಿದೆ: ‘ಭಾರತವು ಅಧ್ಯಕ್ಷೀಯ ಮತ್ತು ಸಂಸದೀಯ ಸ್ವರೂಪದ ಸರ್ಕಾರಗಳ ಸಂಯೋಜಿತ ವ್ಯವಸ್ಥೆ’. ಏಕ ಚುನಾವಣೆಯ ಲಾಭವನ್ನು ವಿವರಿಸುವ ಒಂದು ಅಂಶ ಹೀಗಿದೆ: ‘ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ನಾಗರಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕತೆ ವೃದ್ಧಿಸುತ್ತದೆ. ದೇಶದ ಎಲ್ಲ ನಾಗರಿಕರೂ
ಪ್ರಜಾಪ್ರಭುತ್ವದ ಈ ಉತ್ಸವದಲ್ಲಿ ಸಾಮೂಹಿಕವಾಗಿ ಭಾಗಿಯಾಗುವ ಕಾರಣ, ಅವರಲ್ಲಿ ನಾಗರಿಕತ್ವ ಮತ್ತು ಭ್ರಾತೃತ್ವ ಬಂಧಗಳು ಗಟ್ಟಿಯಾಗುತ್ತವೆ’. ವರದಿಯಲ್ಲಿನ ಇಂತಹ ಅಂಶಗಳನ್ನು ನೋಡಿದರೆ, ಶಾಲಾ ವಿದ್ಯಾರ್ಥಿಗಳು ತಮ್ಮ ‘ವಿಜ್ಞಾನ ಪ್ರಾಜೆಕ್ಟ್‌ಗಾಗಿ ಮಾಡಿದ ಸಂಶೋಧನೆ’ಯ ಅಗಾಧ ಅನುಕೂಲಗಳನ್ನು ವಿವರಿಸುತ್ತಿರುವಂತೆ ಭಾಸವಾಗುತ್ತದೆ. 

ಇಷ್ಟೆಲ್ಲಾ ಅನಗತ್ಯ ಮತ್ತು ಅತಿದೀರ್ಘ ಉವಾಚವನ್ನು ಬದಿಗಿರಿಸಿ ನೋಡಿದರೆ, ‘ಆಡಳಿತಯಂತ್ರವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ತಪ್ಪುತ್ತದೆ, ಸರ್ಕಾರಗಳ ವೆಚ್ಚ ಕಡಿಮೆಯಾಗುತ್ತದೆ, ನೀತಿಸಂಹಿತೆ ಅವಧಿ ಕುಗ್ಗುವುದರಿಂದ ನೀತಿ–ನಿರೂಪಣೆ ಸ್ಥಗಿತವಾಗುವುದಿಲ್ಲ’ ಎಂಬ ‘ಆಡಳಿತ ಸುಧಾರಣೆ’ಯ ಪ್ರತಿಪಾದನೆ ಮಾತ್ರ ಉಳಿಯುತ್ತದೆ. ಇದನ್ನು ಅತ್ಯಂತ ಎಚ್ಚರಿಕೆಯಿಂದಲೇ ಪರಿಶೀಲಿಸಿದರೆ ಹಲವು ಪ್ರಶ್ನೆಗಳು ಎದುರಾಗುತ್ತವೆ. ಆಡಳಿತಯಂತ್ರವನ್ನು ಚುನಾವಣೆ ಉದ್ದೇಶಕ್ಕೆ ಎಷ್ಟು ಬಾರಿ ಬಳಸಲಾಗುತ್ತಿದೆ? (ಈಗ ಐದು
ವರ್ಷಕ್ಕೆ ಮೂರು ಬಾರಿ ಬಳಸಲಾಗುತ್ತಿದೆ.

ಏಕ ಚುನಾವಣೆಯಲ್ಲಿ ಆ ಸಂಖ್ಯೆ ಎರಡಕ್ಕೆ ಇಳಿಯುತ್ತದೆಯೇ ವಿನಾ ಒಂದಕ್ಕಲ್ಲ) ರಾಜ್ಯಗಳಿಗೆ ದೊಡ್ಡ ರಾಜಕೀಯ ನಾಯಕರು ಭೇಟಿ ಕೊಟ್ಟಾಗ ಅಥವಾ ಬೃಹತ್ ಧಾರ್ಮಿಕ ಸಮ್ಮೇಳನ–ಕಾರ್ಯಕ್ರಮಗಳು ನಡೆದಾಗ ಆಡಳಿತಯಂತ್ರವನ್ನು ಬಳಸುವುದರಿಂದ ಆಡಳಿತಕ್ಕೆ ಅನನುಕೂಲ ಆಗುವುದಿಲ್ಲವೇ? ಚುನಾವಣೆಗಾಗಿ ಸರ್ಕಾರ ಮತ್ತು ಪಕ್ಷಗಳು ಎಷ್ಟು ಖರ್ಚು ಮಾಡುತ್ತವೆ? ಒಂದು ಸರ್ಕಾರ ರಚನೆಯಾಗುವಾಗ ಐದು ವರ್ಷಗಳಲ್ಲಿ ನಾಲ್ಕು ತಿಂಗಳು ಮಾತ್ರ ಚುನಾವಣೆಗೆ ವಿನಿಯೋಗವಾಗುತ್ತದೆ. ಈಗ ಕೆಲವು ರಾಜ್ಯಗಳಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿದ್ದಾಗಲೇ ಮೂರು ವಾರಗಳಲ್ಲಿ ಮೋದಿ ನೇತೃತ್ವದ ಸರ್ಕಾರವು ದೊಡ್ಡ ಮೊತ್ತದ ಆರೋಗ್ಯ ಮತ್ತು ಕೃಷಿ ಯೋಜನೆಗಳನ್ನು ಘೋಷಿಸಿದೆ. ಇದನ್ನು ಮರೆಮಾಚಲೆಂದೇ ಸರ್ಕಾರವು ‘ಚುನಾವಣೆ ಅವಧಿಯಲ್ಲಿ ಆಡಳಿತಯಂತ್ರದ ಕೈಕಟ್ಟಿದಂತಾಗುತ್ತದೆ’ ಎಂದು ಬಡಬಡಿಸುತ್ತದೆ.

ಏಕ ಚುನಾವಣೆ ಮಾತ್ರವಲ್ಲ, ಪರ್ಯಾಯ ಪರಿಹಾರ ಗಳತ್ತಲೂ ಗಮನಹರಿಸಬೇಕಿದೆ. ಆರು ತಿಂಗಳಲ್ಲಿ ಚುನಾವಣೆ ಎದುರಿಸಬೇಕಿರುವ ಎಲ್ಲ ರಾಜ್ಯಗಳ ಚುನಾವಣೆಯನ್ನು ಒಟ್ಟಿಗೇ ನಡೆಸುವ ಅಧಿಕಾರವು ಚುನಾವಣಾ ಆಯೋಗಕ್ಕೆ ಇದೆ (ಹೀಗಿದ್ದೂ ಆಯೋಗವು ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ದೆಹಲಿ ಚುನಾವಣೆಯನ್ನು ಹರಿಯಾಣ, ಜಮ್ಮು–ಕಾಶ್ಮೀರ ಚುನಾವಣೆ ಜತೆಗೆ ನಡೆಸಲು ಮುಂದಾಗಲಿಲ್ಲ). ಇದನ್ನು 12 ತಿಂಗಳಿಗೆ ವಿಸ್ತರಿಸಿದರಾಯಿತು. ಚುನಾವಣಾ ಅವಧಿಯನ್ನು ಇಳಿಸಲೇಬೇಕೆಂದಿ
ದ್ದರೆ, 15 ದಿನಕ್ಕೆ ಇಳಿಸಲಿ ಮತ್ತು ಮತದಾನದ ಹಂತಗಳನ್ನು ಮೂರಕ್ಕಿಂತ ಹೆಚ್ಚಿಲ್ಲದಂತೆ ಬದಲಾವಣೆ ತರಲಿ. ಚುನಾವಣಾ ಅವಧಿಯಲ್ಲೂ ಸಾಮಾನ್ಯ ಆಡಳಿತ ಕಾರ್ಯಗಳಿಗೆ ತೊಂದರೆಯಾಗದಂತೆ ಮಾದರಿ ನೀತಿ ಸಂಹಿತೆಗೆ ಬದಲಾವಣೆ ತರಲಿ. ಮೇಲೆ ಹೇಳಲಾದ ಎಲ್ಲ ರೋಗಗಳಿಗೆ ಇಂತಹ ಸಾಮಾನ್ಯ ಮಾತ್ರೆಗಳೇ ಸಾಕಾಗುತ್ತವೆ ಎಂದಾದರೂ ಶಸ್ತ್ರಚಿಕಿತ್ಸೆ ಏಕೆ ಬೇಕು?

ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಇದು ಮಾಡಲಿರುವ ಗಂಭೀರ ಹಾನಿಗಳನ್ನೂ ಗಮನಿಸಬೇಕು. ಲೋಕಸಭಾ ಚುನಾವಣೆಯ ದಿನಾಂಕಕ್ಕೆ ಹೊಂದಿಕೆಯಾಗುವಂತೆ ವಿಧಾನಸಭೆ, ಪಂಚಾಯಿತಿ ಚುನಾವಣೆಗಳ ಅವಧಿಯನ್ನು ಮೊಟಕು ಅಥವಾ ವಿಸ್ತರಣೆ ಮಾಡುವುದು ಆಡಳಿತ ವ್ಯವಸ್ಥೆಯ ನೀತಿಗಳಿಗೆ ವಿರುದ್ಧವಾದುದು. ಈ ನೆಲೆಯಲ್ಲಿ ಇದು ನಮ್ಮ ಸಂವಿಧಾನದ ‘ಮೂಲ ರಚನೆ’ಯನ್ನೇ ಉಲ್ಲಂಘಿಸುತ್ತದೆ. ಮತ್ತೊಂದು ಗಂಭೀರ ಅಪಾಯವನ್ನೂ ತಂದೊಡ್ಡುತ್ತದೆ. ಎಲ್ಲ ಚುನಾವಣೆಗಳನ್ನು ಒಟ್ಟಿಗೇ ನಡೆಸುವುದರಿಂದ ರಾಜ್ಯಮಟ್ಟದಲ್ಲಿ ಸ್ವಲ್ಪ ಪ್ರಮಾಣದ ಮತಗಳು ರಾಷ್ಟ್ರೀಯ ಪಕ್ಷಗಳತ್ತ ಸರಿಯುವ ಸಾಧ್ಯತೆ ಇರುತ್ತದೆ. ಲೋಕಸಭೆ, ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಯದೇ ಇದ್ದಿದ್ದರೆ ಒಡಿಶಾದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತಿರಲಿಲ್ಲ ಎಂಬುದು ನನ್ನ ವಿಶ್ಲೇಷಣೆ. 

ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಭಾವಿಯಾಗಿರುವ ಸಮುದಾಯಗಳು ಪ್ರಜಾಸತ್ತಾತ್ಮಕ ರಾಜಕಾರಣವನ್ನು ಅಸ್ತವ್ಯಸ್ತ ಎಂದೇ ಪರಿಗಣಿಸಿದ್ದು, ಅದನ್ನು ಶುದ್ಧೀಕರಿಸಲು ಸದಾ ತುದಿಗಾಲಲ್ಲಿ ನಿಂತಿರುತ್ತವೆ. ‘ಅಭ್ಯರ್ಥಿಗಳ ಸಂಖ್ಯೆಯನ್ನು ಮಿತಗೊಳಿಸಬೇಕು, ಪ್ರಾದೇಶಿಕ ಪಕ್ಷಗಳಿಗೆ ಕನಿಷ್ಠ ಮತ ಪ್ರಮಾಣದ ಮಿತಿ ಹೇರಬೇಕು, ಉಚಿತ ಕೊಡುಗೆಗಳನ್ನು ನಿಷೇಧಿಸಬೇಕು...’ ಇವರ ಸುಧಾರಣಾ ಕ್ರಮಗಳು ಇಂತಹವು. ಇದು ಬಿಜೆಪಿ ಪ್ರಣೀತವಾದರೂ, ಬಿಜೆಪಿಯೇತರ ಪಕ್ಷಗಳ ಕೆಲ ನಾಯಕರ ಪ್ರತಿಪಾದನೆಯೂ ಹೌದು. ಇದರ ಹಿಂದೆ ಇರುವುದು ಚುನಾವಣೆ ಎದುರಿಸಬೇಕು ಎಂಬ ತಲೆಬಿಸಿ ಮತ್ತು ಹೊಣೆಗಾರಿಕೆಯ ತೂಗುಗತ್ತಿಯಿಂದ ತಪ್ಪಿಸಿಕೊಳ್ಳುವ ಉದ್ದೇಶವಷ್ಟೆ.

ಏನೇ ಮಾಡಿದರೂ ಚುನಾವಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಇವರಿಗೆ ಸಾಧ್ಯವಿಲ್ಲ. ಬದಲಿಗೆ ಇದನ್ನು ಐದು ವರ್ಷಗಳಿಗೆ ಒಮ್ಮೆ ಮಿತಗೊಳಿಸಲು ಯತ್ನಿಸುತ್ತಿದ್ದಾರೆ. ಹಾಗೆ ಆದರೆ, ಇವರೆಲ್ಲರೂ ನಾಲ್ಕು ವರ್ಷ ಮತ್ತು ಒಂಬತ್ತು ತಿಂಗಳು ಯಾವುದೇ ಅಡಚಣೆ ಗಳಿಲ್ಲದೆ ನಿರಾಯಾಸವಾಗಿ ಆಡಳಿತ ನಡೆಸಬಹುದು. ಈ ಪ್ರಕಾರದಲ್ಲಿ ಒಂದು ದೇಶ–ಒಂದು ಚುನಾವಣೆಯು
ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ವಿರುದ್ಧವಾದುದೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT