ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಣ– ಮಂಗನಾಟ ಹಾಗೂ ನಾಯಿಬಾಲ!

ಹಳ್ಳಿಗಳ ಮಂಗನಕಾಟ, ನಗರಗಳ ನಾಯಿಯ ಭೀತಿ ಎರಡರ ಮೂಲವೂ ಒಂದೇ
Published 20 ಜುಲೈ 2023, 23:40 IST
Last Updated 20 ಜುಲೈ 2023, 23:40 IST
ಅಕ್ಷರ ಗಾತ್ರ

ಕಾಡು, ನದಿ, ಜಲಪಾತ, ವನ್ಯಪ್ರಾಣಿಗಳ ದರ್ಶನಕ್ಕೆಂದೇ ಹಲವರು ಮಲೆನಾಡಿನ ತಪ್ಪಲಿನ ಉತ್ತರ ಕನ್ನಡಕ್ಕೆ ಪ್ರವಾಸ ಬರುವುದಿದೆ. ಈಗೊಮ್ಮೆ ಅಲ್ಲಿ ತಿರುಗಾಡಿದರೆ ತೀರಾ ಭಿನ್ನ ಅನುಭವವನ್ನೇ ಪಡೆಯಬಹುದು. ಒಂದೇ ದಿನದ ಮಳೆಗೆ ನೆರೆ ಬಂದು ಬಿರುಕುಬಿಟ್ಟ ಕರಾವಳಿಯ ಮನೆ-ರಸ್ತೆಗಳು, ಅಲ್ಲಿಂದ ಬರೀ ಮೂವತ್ತು- ನಲವತ್ತು ಕಿ.ಮೀ. ದೂರದ ಸಹ್ಯಾದ್ರಿಯ ಘಟ್ಟಗಳಲ್ಲಿ ಇನ್ನೂ ಮಳೆ ಬರದೆ ಒಣಗುತ್ತಿರುವ ತೋಟಗಳು, ಅದಕ್ಕೂ ಮುಂದಿನ ಪೂರ್ವದ ಬಯಲುನಾಡಿನಲ್ಲಿ ನೀರಿರದೆ ಒಣಗಿನಿಂತಿರುವ ಗದ್ದೆಗಳು. ಅರ್ಧ ದಿನದ ಪಯಣದಲ್ಲಿ ಒಂದೇ ಜಿಲ್ಲೆಯಲ್ಲಿ ಈ ಎಲ್ಲ ವೈಪರೀತ್ಯಗಳನ್ನೂ ನೋಡಬಹುದು!

ನೆಲ, ನೀರು, ಜೀವವೈವಿಧ್ಯದಂಥ ನೈಸರ್ಗಿಕ ಸಂಪನ್ಮೂಲಗಳ ಸಮರ್ಥ ನಿರ್ವಹಣೆಯಾಗದೆ, ಸುಸ್ಥಿರ ಆರ್ಥಿಕ ಪ್ರಗತಿ ಸಾಧ್ಯವಿಲ್ಲ ಎಂಬುದು ಈಗ ಎಲ್ಲರೂ ಒಪ್ಪಿರುವ ಮಾತು. ವಾರ್ಷಿಕ ಬಜೆಟ್‌ಗೆ ಮುನ್ನ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯು ಪ್ರತಿವರ್ಷ ಮಂಡಿಸುವ ‘ಆರ್ಥಿಕ ಸಮೀಕ್ಷೆ ವರದಿ’ಗಳಂತೂ ಇದನ್ನು ಸರ್ಕಾರದ ನೆಲೆಯಲ್ಲೇ ಗಟ್ಟಿಧ್ವನಿಯಲ್ಲಿ ಸಾರುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ನಾವು ಸಾಧಿಸಿದ್ದೇವೆ ಎನ್ನಲಾಗುವ ಆರ್ಥಿಕ ಪ್ರಗತಿಯ ಬಹುಪಾಲು ಫಲಗಳು, ಬರಡಾಗುತ್ತಿರುವ ಕೃಷಿ, ಬರಿದಾಗುತ್ತಿರುವ ನೆಲ-ಜಲ, ಸೋಲುತ್ತಿರುವ ಸಾರ್ವಜನಿಕ ಆರೋಗ್ಯ, ಕುಸಿಯುತ್ತಿರುವ ಮೂಲ ಸೌಕರ್ಯದಂತಹವುಗಳಲ್ಲಿ ಕರಗಿಹೋಗುತ್ತಿರುವುದು ಸುಳ್ಳಲ್ಲ ತಾನೇ? ಮಲೆನಾಡಿನ ಪಯಣ ಇದರ ಪ್ರತ್ಯಕ್ಷ ದರ್ಶನ ಮಾಡಿಸಬಲ್ಲದು.

ನೈಸರ್ಗಿಕ ಸುರಕ್ಷತೆಯೆಂಬ ಬದುಕಿನ ಅಡಿಗಟ್ಟು ಕುಸಿಯುತ್ತಿರುವುದು ನಾಡಿನಾದ್ಯಂತ ಢಾಳಾಗಿಯೇ ತೋರುತ್ತಿದೆ. ಕಣ್ಣಿಗೆ ರಾಚುವ ಎರಡು ದೈನಂದಿನ ಗಂಭೀರ ಸಮಸ್ಯೆಗಳ ಮೂಲಕ ಇದನ್ನು ಅರ್ಥೈಸಿಕೊಳ್ಳಬಹುದು. ಮೊದಲಿನದು, ಹಳ್ಳಿಗರ ಕೃಷಿಯನ್ನು ಕಾಡುತ್ತಿರುವ ಮಂಗ, ಹಂದಿಯಂಥ ಕಾಡುಪ್ರಾಣಿಗಳ ಕಾಟ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಬರೀ ಮಂಗನಹಾವಳಿ ಒಂದರಿಂದಲೇ ರೈತರು ತಮ್ಮ ಬೆಳೆಯ ಶೇ 20ಕ್ಕೂ ಮೀರಿ ನಷ್ಟ ಅನುಭವಿಸಿದ್ದಿದೆ. ಬಾಳೆ, ಕಾಫಿ, ಅಡಿಕೆ, ತೆಂಗು, ಹಣ್ಣು, ತರಕಾರಿ- ಎಲ್ಲ ರೈತರದ್ದೂ ಇದೇ ಗೋಳು. ಸುಮಾರು ಎರಡು ದಶಕಗಳಿಂದ ಒಂದೇ ಸಮನೆ ಈ ಬಗೆಯ ಮನುಷ್ಯ-ಪ್ರಾಣಿ ಸಂಘರ್ಷ ಹೆಚ್ಚುತ್ತಲೇ ಇದೆ.

ವೈಜ್ಞಾನಿಕ ಸ್ಥಳಾಧ್ಯಯನಗಳು ಇದರ ಹಿಂದಿರುವ ಕಾರಣಗಳ ಬಲೆಯನ್ನು ಬಿಚ್ಚಿಡಬಲ್ಲವು. ಮಲೆನಾಡಿನ ಅರಣ್ಯ ಪರಿಸ್ಥಿತಿಯನ್ನೇ ಗಮನಿಸಿ. ಅವಿರತ ಮರಕಡಿತ, ಕಾಡಿನ ಅತಿಕ್ರಮಣ, ಗಣಿಗಾರಿಕೆ, ನೆಡುತೋಪು ನಿರ್ಮಾಣ, ಹೊಸ ಹೆದ್ದಾರಿ ನಿರ್ಮಾಣ- ಎಲ್ಲವೂ ಕಾಡನ್ನು ಛಿದ್ರಗೊಳಿಸುವಂಥವೇ. ಹಸಿರು ಮಾಯವಾಗಿ, ಮೇಲ್ಮಣ್ಣು ಸವೆದು, ಗುಡ್ಡ ಕುಸಿದು, ಮಳೆನೀರು ನೆಲದೊಡಲು ಸೇರದೆ ಕೆರೆ, ತೊರೆಗಳು ಒಣಗುತ್ತಿವೆ. ಇತ್ತ, ಊರಿನ ಭತ್ತ, ಜೋಳ, ರಾಗಿ ಗದ್ದೆಗಳೆಲ್ಲ ಅಡಿಕೆ, ಕಬ್ಬು, ಕಾಫಿ, ಶುಂಠಿಯಂಥ ವಾಣಿಜ್ಯ ಬೆಳೆಗಳಿಗೆ ಬಲಿಯಾಗುತ್ತಿವೆ.

ಕಾಡಿನಲ್ಲಿ ಆಹಾರ, ನೀರು ದೊರಕದೆ ಅನಿವಾರ್ಯವಾಗಿ ಊರು ಸೇರಿದ್ದ ಮಂಗಗಳಿಗೆ, ಇಲ್ಲಿ ನೋಡಿದರೆ ಪ್ರೋಟೀನ್‌ಯುಕ್ತ ಮೃಷ್ಟಾನ್ನ ಭೋಜನ! ಆಕ್ರಮಣ ಮಾಡಬಲ್ಲ ಹುಲಿ, ಚಿರತೆ, ಗರುಡಗಳ ಕಾಟವೂ ಇಲ್ಲ. ಇಂಥ ಸುರಕ್ಷಿತ ಪರಿಸರ ದೊರಕಿದಾಗ, ಸಹಜವಾಗಿಯೇ ಅವು ವಂಶಾಭಿವೃದ್ಧಿಯಲ್ಲಿ ಗರಿಷ್ಠ ಕ್ಷಮತೆ ಪಡೆಯುತ್ತವೆ. ಹೀಗಾಗಿ, ಕೃಷಿಭೂಮಿಯಲ್ಲಿ ಮಂಗಗಳ ಸಂಖ್ಯೆ ಏರುತ್ತಲೇ ಇದೆ. ಮಂಗನ ಹಾವಳಿ ಎಂದರೆ, ಗ್ರಾಮೀಣ ಪ್ರದೇಶದಲ್ಲಿನ ಪರಿಸರದ ಸಮತೋಲನವು ಕುಸಿಯುತ್ತಿರುವುದರ ಪ್ರತಿಫಲನವೇ ಸರಿ.

ಇನ್ನೊಂದು ಉದಾಹರಣೆಯನ್ನು ವ್ಯಾಪಕವಾಗುತ್ತಿರುವ ನಗರೀಕರಣದ ಸಂದರ್ಭದಲ್ಲಿ ಗಮನಿಸಬಹುದು. ಯಾವ ಪಟ್ಟಣಕ್ಕೆ ತೆರಳಿದರೂ ಅಲ್ಲಿ ಬೀದಿನಾಯಿಗಳ ಸಂಖ್ಯೆ ಮೀತಿಮೀರುತ್ತಿದೆ ತಾನೇ? ಮಕ್ಕಳು, ವೃದ್ಧರಂಥವರು ಹಗಲಿನಲ್ಲೂ ರಸ್ತೆಯಲ್ಲಿ ಓಡಾಡಲು ಹೆದರುವ ಪರಿಸ್ಥಿತಿ. ನಾಯಿ ಓಡಿಸಿಕೊಂಡು ಬರುವ, ಕಚ್ಚುವ, ರೇಬಿಸ್ ಚುಚ್ಚುಮದ್ದಿಗಾಗಿ ಜನರು ಆಸ್ಪತ್ರೆಗಳಿಗೆ ಧಾವಿಸುವ ಸಂಗತಿಗಳು ಒಂದು ಸಾಮಾನ್ಯ ಸಾಮಾಜಿಕ ಚಿತ್ರಣವಾಗುವಷ್ಟು ಸಮಸ್ಯೆ ಬಿಗಡಾಯಿಸುತ್ತಿದೆ!

ಹಾಗಾದರೆ, ನಾಯಿಗಳ ಸಂಖ್ಯೆ ಈ ಪರಿಯಲ್ಲಿ ಏಕೆ ಹೆಚ್ಚುತ್ತಿದೆ? ನಮ್ಮ ಇತ್ತೀಚಿನ ಅಧ್ಯಯನವೊಂದರಲ್ಲಿ, ಮಲೆನಾಡಿನ ತಾಲ್ಲೂಕು ಕೇಂದ್ರಗಳಲ್ಲಿ ಚದರ ಕಿ.ಮೀ. ಒಂದಕ್ಕೆ ಐವತ್ತಕ್ಕೂ ಮೀರಿ ನಾಯಿಗಳಿದ್ದವು! ಅನಾಥ ನಾಯಿಗಳಿಗೆ ಬೀದಿಯೇ ಆರೈಕೆ ಕೇಂದ್ರ. ಜನರು ಎಗ್ಗಿಲ್ಲದೆ ಬಿಸಾಡುವ ಪಿಷ್ಟ-ಪ್ರೋಟೀನ್‌ಭರಿತ ಆಹಾರವೇ ಆಧಾರ. ಬಹಳಷ್ಟು ಆಹಾರ ಹಾಗೂ ವೈರಿಗಳಿಂದ ರಕ್ಷಣೆ ಇವೆರಡೂ ದೊರಕಿದ್ದಾದರೆ, ವಂಶಾಭಿವೃದ್ಧಿಯು ನಾಲ್ಕರಿಂದ ಆರುಪಟ್ಟು ಏರುವ ಸಸ್ತನಿಗಳ ಗುಣಲಕ್ಷಣಗಳೇ ಪಟ್ಟಣಗಳ ರಸ್ತೆಯಲ್ಲೆಲ್ಲ ಈಗ ಕಾಣಸಿಗುತ್ತಿರುವುದು.

ನಾಯಿಯೊಂದು ವರ್ಷಕ್ಕೆ ಎರಡು ಅಥವಾ ಮೂರು ಸಲ, ತಲಾ ಮೂರು-ನಾಲ್ಕು ಮರಿಗಳನ್ನಿಡುವ ಸಾಮರ್ಥ್ಯ ಪಡೆಯುತ್ತಿದೆ. ಹೀಗಾದಾಗ ಬೀದಿನಾಯಿಗಳ ಸಂಖ್ಯೆ ಕ್ಷಿಪ್ರವಾಗಿ ಏರದೆ ಇನ್ನೇನಾದೀತು? ಸಣ್ಣಮಳೆಗೂ ಪ್ರವಾಹ, ವಿಲೇವಾರಿಯಾಗದ ಕಸದಂತೆ ಬೀದಿನಾಯಿ ಸಮಸ್ಯೆಯೂ ವರ್ತಮಾನದ ನಗರಗಳ ಪರಿಸ್ಥಿತಿಯ ಗಂಭೀರತೆಯನ್ನು ಸಾರುವ ಒಂದು ಪ್ರಮುಖ ಚಿಹ್ನೆಯಾಗಿ ಹೊರಹೊಮ್ಮಿದೆ.

ಹಳ್ಳಿಗಳ ಮಂಗನಕಾಟ ಅಥವಾ ನಗರಗಳ ನಾಯಿಯ ಭೀತಿ- ಇವೆರಡರ ಮೂಲವೂ ಒಂದೇ. ತೀವ್ರವಾಗಿ ಏರುತ್ತಿರುವ ಜನಸಂಖ್ಯೆ ಹಾಗೂ ಮುಕ್ತ ಮಾರುಕಟ್ಟೆ ತೆರೆದಿಟ್ಟಿರುವ ಸೌಕರ್ಯಗಳನ್ನು ಒದಗಿಸಿಕೊಳ್ಳಲು ಹಾತೊರೆಯುವ ಜನರ ಭರಾಟೆ. ಇದರಿಂದಾಗಿ ಉದ್ಭವವಾಗುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಆರ್ಥಿಕ ಪ್ರಗತಿಯ ವೇಗವನ್ನು ಹೆಚ್ಚಿಸಲೇಬೇಕಾದ ಅನಿವಾರ್ಯಕ್ಕೆ ಸರ್ಕಾರಗಳು ಸಿಲುಕಿವೆ. ಆದರೆ, ಆರ್ಥಿಕತೆ ವೃದ್ಧಿಯ ಪ್ರಮಾಣವು ನೈಸರ್ಗಿಕ ಸುರಕ್ಷತಾ ಪರಿಧಿಯನ್ನು ಮೀರಿ ಹಿಗ್ಗಲಾರದೆಂದು ಅಧ್ಯಯನಗಳು ಸಾಬೀತುಪಡಿಸುತ್ತಲೇ ಇವೆ. ಹಾಗೆಂದೇ, ಈ ವರ್ಷದ ಕೇಂದ್ರ ಸರ್ಕಾರದ ಬಜೆಟ್‌ಗೆ ಮುನ್ನ ಹಣಕಾಸು ಸಚಿವಾಲಯವು ಸಂಸತ್ತಿನಲ್ಲಿ ಮಂಡಿಸಿರುವ ‘ಆರ್ಥಿಕ ಸಮೀಕ್ಷೆ- 2023’ ಸಹ ಈ ಕುರಿತು ಸ್ಪಷ್ಟವಾದ ಎಚ್ಚರಿಕೆಯನ್ನೇ ನೀಡಿದೆ.

ಸ್ಥಳೀಯ ಕಾರಣಗಳಿಂದ ಜರುಗುತ್ತಿರುವ ನಿಸರ್ಗ ನಾಶ ಹಾಗೂ ಜಾಗತಿಕ ಕಾರಣಗಳಿಂದಾಗಿ ಸಂಕೀರ್ಣವಾಗುತ್ತಲೇ ಇರುವ ‘ಹವಾಮಾನ ಬದಲಾವಣೆ’ ಇವೆರಡರ ಒಟ್ಟೂ ಪರಿಣಾಮಗಳನ್ನು ಎದುರಿಸಲು ಅಳವಡಿಸಿಕೊಳ್ಳಲೇಬೇಕಾದ ತಕ್ಷಣದ ಹಾಗೂ ದೀರ್ಘಕಾಲೀನ ಸೂತ್ರಗಳನ್ನು ಅದು ಗುರುತಿಸಿದೆ. ಕಾಡಿನ ವಿಸ್ತಾರ ಹಾಗೂ ಗುಣಮಟ್ಟ ಹೆಚ್ಚಿಸುವುದು, ಜಲಮೂಲ ಸಂರಕ್ಷಣೆ, ನೀರಿನ ಸದ್ಬಳಕೆ, ಹಸಿರು ಇಂಧನ ಬಳಕೆ, ತ್ಯಾಜ್ಯ ವಿಲೇವಾರಿ, ಮಾಲಿನ್ಯ ನಿವಾರಣೆ ಇವೆಲ್ಲವೂ ಹಿಂದೆಂದಿಗಿಂತಲೂ ಅನಿವಾರ್ಯ ಆಗುತ್ತಿರುವುದನ್ನು ಅದು ಒತ್ತಿ ಹೇಳಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಕ್ಷಮತೆಯಿಂದ ಬಳಸುವ ‘ಚಕ್ರೀಯ ಆರ್ಥಿಕತೆ’ ತತ್ವ ಅಳವಡಿಸಿಕೊಂಡು ಸುಸ್ಥಿರ ಅಭಿವೃದ್ಧಿ ಸಾಧಿಸಬೇಕೆಂದರೆ, ನಾವು ಈ ವಿವೇಕದ ಹಾದಿಯನ್ನು ತುಳಿಯಲೇಬೇಕಿದೆ.

ಈ ಬಗೆಯಲ್ಲಿ ಅಭಿವೃದ್ಧಿ ವಿಧಾನಗಳನ್ನು ಮರುರೂಪಿಸಲೇಬೇಕಾದ ಅಗತ್ಯವನ್ನು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಮಾಡಿದರೂ ಮನಗಾಣಬಹುದು. ಮೀನು ಸಿಗದೆ ಕಂಗಾಲಾಗಿರುವ ಕರಾವಳಿಯ ಮೀನುಗಾರರು, ನೆಲ-ಜಲಮೂಲ ನಾಶವಾಗಿ ನೆಲೆ ಕಳೆದುಕೊಳ್ಳುತ್ತಿರುವ ಮಲೆನಾಡಿನ ಕೃಷಿಕರು ಹಾಗೂ ವನವಾಸಿಗಳು ಮತ್ತು ಭೂಸಾರ ಕುಸಿದು ಬೆಳೆ ನಾಶವಾಗಿ ತಲೆಗೆ ಕೈಕೊಟ್ಟ ಬಯಲುನಾಡಿನ ಬೇಸಾಯಗಾರರು ಎಲ್ಲರೂ ಅಲ್ಲಿ ಕಾಣಸಿಗಬಲ್ಲರು. ಇಷ್ಟಕ್ಕೂ ನಾಡಿನ ಯಾವ ಭಾಗಕ್ಕೆ ತೆರಳಿದರೂ ಇದೇ ತೆರನ ಅನುಭವವೇ ದೊರಕೀತು. ಪ್ರಕೃತಿನಾಶದ ಹೊಳೆಯಲ್ಲಿ ಅಭಿವೃದ್ಧಿಯ ಹಣ್ಣು ತೊಳೆದುಹೋಗುತ್ತಿದೆ!

ಅಭಿವೃದ್ಧಿ ಕಾಮಗಾರಿಗಳೆಂಬ ದಿಕ್ಕುದೆಸೆಯಿರದ ಮಂಗನಾಟವು ಬದುಕಿಗೆ ಅತ್ಯಗತ್ಯವಾದ ಪರಿಸರ ಸಂರಚನೆಯ ಅಡಿಗಟ್ಟನ್ನೇ ಧ್ವಂಸಗೊಳಿಸುತ್ತಿದೆ. ಇಷ್ಟಾದರೂ ಎಚ್ಚೆತ್ತುಕೊಳ್ಳದೇ ಅಧಿಕಾರ ರಾಜಕಾರಣದಲ್ಲೇ ಮೈಮರೆಯುತ್ತಿದೆ ಆಡಳಿತ ವ್ಯವಸ್ಥೆಯೆಂಬ ನಾಯಿಬಾಲ! ಎಲ್ಲೆಡೆಯೂ ಈ ಅವಸ್ಥೆ ಈಗ ರಾರಾಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT