ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಣ | ‘ಉಚಿತ’ ಸವಲತ್ತುಗಳ ರಾಜಕೀಯ

ಜನರಿಗೆ ನೀಡುವ ಸವಲತ್ತಿನ ವಿಷಯದಲ್ಲಿ ‘ಉಚಿತ’ ಎಂಬ ಪದ ಪ್ರಯೋಗವೇ ತಪ್ಪು
Published 6 ಜೂನ್ 2023, 0:54 IST
Last Updated 6 ಜೂನ್ 2023, 0:54 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ನೀಡಲಿಚ್ಛಿಸಿರುವ ‘ಉಚಿತ’ ಅಕ್ಕಿ, ವಿದ್ಯುತ್, ನಿರುದ್ಯೋಗ ಭತ್ಯೆ, ಗೃಹಲಕ್ಷ್ಮಿ ಯೋಜನೆ ಮತ್ತು ಮಹಿಳೆಯರಿಗೆ ಬಸ್ ಪ್ರಯಾಣವು ಚುನಾವಣಾ ರಾಜಕೀಯವನ್ನು ಕೋಮು ಧ್ರುವೀಕರಣದಿಂದ ಜನರ ಅವಶ್ಯಕತೆಗಳ ಕಡೆಗೆ ತಿರುಗಿಸುವಲ್ಲಿ ಸಫಲವಾಗಿವೆ. ಆದಾಗ್ಯೂ ಇವುಗಳ ವಿರುದ್ಧ ಬಹಳಷ್ಟು ಟೀಕೆಗಳಿವೆ. ಸವಲತ್ತುಗಳನ್ನು ‘ಉಚಿತ’ವಾಗಿ ನೀಡುವುದು ಸರಿಯೇ? ಇವನ್ನು ಜಾರಿಗೊಳಿಸುವುದರಿಂದ ರಾಜ್ಯದ ಆರ್ಥಿಕ ಸ್ಥಿತಿ ಬಿಗಡಾಯಿಸುವುದಿಲ್ಲವೇ? ಇವೆಲ್ಲ ಅನುತ್ಪಾದಕವಲ್ಲವೇ ಎಂಬಂಥವು ಪ್ರಮುಖ ಪ್ರಶ್ನೆಗಳು.‌

ಸವಲತ್ತುಗಳನ್ನು ‘ಉಚಿತ’ವಾಗಿ ನೀಡುವುದು ಸರಿಯೇ ಎಂಬುದು ಮೊದಲ ಪ್ರಶ್ನೆ. ಇಲ್ಲಿ, ಉಚಿತ ಎನ್ನುವ ಪದ ಪ್ರಯೋಗವೇ ತಪ್ಪು. ಏಕೆಂದರೆ ಸವಲತ್ತುಗಳನ್ನು ಏನೇನೂ ಪ್ರತಿಫಲ ಇಲ್ಲದೇ ನೀಡುವುದು ಉಚಿತ. ಇಲ್ಲಿ ಈ ಸವಲತ್ತುಗಳನ್ನು ಪಡೆಯುವ ಜನರು ನೇರವಾಗಿ ಮತ್ತು ಪರೋಕ್ಷವಾಗಿ ಕೋಟಿಗಟ್ಟಲೆ ಮೊತ್ತವನ್ನು ಸರ್ಕಾರಕ್ಕೆ ಸಂದಾಯ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಗ್ರಹ ಮಾಡುವ ಪ್ರತಿ ನೂರು ರೂಪಾಯಿ ತೆರಿಗೆಯಲ್ಲಿ ಮೂರನೇ ಎರಡರಷ್ಟು ಮೊತ್ತವು ಪರೋಕ್ಷ ತೆರಿಗೆಯಿಂದಲೇ ಅಂದರೆ ಅನನುಕೂಲಸ್ಥರಿಂದಲೇ ಬರುವುದು. ಕೆಲವು ನೂರು ಗಳಿಸುವವರು ಕೂಡ ಕನಿಷ್ಠ ಇಪ್ಪತ್ತೈದರಿಂದ ಮೂವತ್ತು ರೂಪಾಯಿ ತೆರಿಗೆ ಸಂದಾಯ ಮಾಡುತ್ತಾರೆ. ಇದರಿಂದಾಗಿಯೇ ರಾಜ್ಯದ ವರಮಾನದಲ್ಲಿ ಶೇ 84ರಷ್ಟು ಪಾಲು ಜನಸಾಮಾನ್ಯರು ಕಟ್ಟುವ ತೆರಿಗೆಯಿಂದಲೇ ಬರುವುದು. ಹೀಗೆ ಈ ಸವಲತ್ತುಗಳ ಭಾರವನ್ನು ಇವರೇ ಹೊರುವುದು ವಿನಾ ಅತ್ಯಲ್ಪ ಸಂಖ್ಯೆಯಲ್ಲಿರುವ ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗವಲ್ಲ.

ಮೇಲಿನವುಗಳೊಂದಿಗೆ, ಜನರು ಸಂದಾಯ ಮಾಡುವ, ಮೇಲ್ನೋಟಕ್ಕೆ ಕಾಣದ ಪರೋಕ್ಷ ತೆರಿಗೆಯ ಪಟ್ಟಿ ದೊಡ್ಡದಿದೆ. ಪ್ರತಿಯೊಬ್ಬರೂ ತಮ್ಮ ವಾಹನಕ್ಕೆ ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಕನಿಷ್ಠ ₹ 40 ತೆರಿಗೆ ಸಂದಾಯ ಮಾಡುತ್ತಾರೆ. ಸಾರ್ವಜನಿಕ ಸವಲತ್ತುಗಳ ಮೇಲೆ ಸರ್ಕಾರಗಳು ಅತ್ಯಂತ ಕಡಿಮೆ ವಿನಿಯೋಗಿಸುವುದರಿಂದ ದಿನಗೂಲಿಗೆ ದುಡಿಯುವವರು ಕೂಡ ತಮ್ಮ ದುಡಿತದ ಶೇ 30-40ರಷ್ಟನ್ನು ಶಿಕ್ಷಣ, ಆರೋಗ್ಯಕ್ಕಾಗಿ ವಿನಿಯೋಗಿಸಬೇಕಾಗಿದೆ.

ಬಜೆಟ್ ಕೊರತೆಯನ್ನು ಸಾಲ ಮಾಡಿ ತುಂಬಿಸುವ ಸರ್ಕಾರದ ಕ್ರಮ ಅನನುಕೂಲಸ್ಥರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹೊರಿಸಿದರೆ, ಅನುಕೂಲಸ್ಥರಿಗೆ ಬಡ್ಡಿ ಗಳಿಸುವ ಅವಕಾಶ ಸೃಷ್ಟಿಸುತ್ತಿದೆ. ಇದೇ ರೀತಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರ ಏರಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸರ್ಕಾರದ ಕ್ರಮವು ಕುಟುಂಬಗಳು ತಾವು ಬದುಕಿ ಉಳಿಯಲು ಮಾಡಿದ ಸಾಲದ ಬಡ್ಡಿ ಮೊತ್ತವನ್ನು ಏರಿಸಿದೆ. ಏಕೆಂದರೆ ಇಂದು ಉದ್ದಿಮೆಗಳ ಸಾಲ ಬಾಕಿಗಿಂತ (ಶೇ 31) ಕುಟುಂಬಗಳ ಸಾಲ ಬಾಕಿ (ಶೇ 49) ಹೆಚ್ಚಿದೆ. ಹೀಗೆ ಇವರು ಕಟ್ಟುವ ತೆರಿಗೆಯಿಂದಲೇ ಇವರಿಗೆ ನೀಡುವ ಅಲ್ಪಸ್ವಲ್ಪ ಸವಲತ್ತುಗಳನ್ನು ಕೂಡ ಉಚಿತ ಎನ್ನುವುದು ಈ ಜನರಿಗೆ ಮಾಡುವ ಅವಮಾನ.

ಇಂತಹ ಸವಲತ್ತುಗಳನ್ನು ನೀಡುವುದರಿಂದ ಸಂಪನ್ಮೂಲ ಕೊರತೆ ಆಗುವುದಿಲ್ಲವೇ ಎನ್ನುವುದು ಎರಡನೇ ಪ್ರಶ್ನೆ. ಮೇಲಿನ ಸವಲತ್ತುಗಳನ್ನು ನೀಡುವ ಮೊದಲೇ ರಾಜ್ಯಗಳು ಸಂಪನ್ಮೂಲ ಕೊರತೆ ಅನುಭವಿಸುತ್ತಿವೆ. ಇದಕ್ಕೆ ಹಲವು ಕಾರಣಗಳಿವೆ. ಒಂದು, ಅಭಿವೃದ್ಧಿಯ ವಿಷಯದಲ್ಲಿ ಮೂರನೇ ಒಂದು ಭಾಗದಷ್ಟು ಜವಾಬ್ದಾರಿ ಇರುವ ಕೇಂದ್ರವು ಮೂರನೇ ಎರಡು ಭಾಗದಷ್ಟು ತೆರಿಗೆ ಸಂಗ್ರಹ ಮಾಡುವುದು ಮತ್ತು ಹೆಚ್ಚು ಅಭಿವೃದ್ಧಿಯ ಜವಾಬ್ದಾರಿ ಇರುವ ರಾಜ್ಯವು ಅತ್ಯಲ್ಪ ಪ್ರಮಾಣದಲ್ಲಿ ಅಂದರೆ ಮೂರನೇ ಒಂದು ಭಾಗದಷ್ಟು ತೆರಿಗೆ ಸಂಗ್ರಹ ಮಾಡುವುದು.

ಎರಡು, ಕೇಂದ್ರವು ಸಂಗ್ರಹ ಮಾಡುವ ತೆರಿಗೆಯಲ್ಲಿ ರಾಜ್ಯದೊಂದಿಗೆ ಹಂಚಿಕೊಳ್ಳುವ ಮೂಲ ತೆರಿಗೆ ಸಂಗ್ರಹವನ್ನು ಶೇ 80ಕ್ಕೆ ಇಳಿಸಿದ್ದು. ಮೂರು, ಕೇಂದ್ರದ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾಲನ್ನು ಜನಸಂಖ್ಯೆ ನೆಲೆಯಲ್ಲಿ ನಿರ್ಧರಿಸುವುದು. ಇದರಿಂದಾಗಿ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಪ್ರತಿ 1 ರೂಪಾಯಿ ತೆರಿಗೆಗೆ ಉತ್ತರ ಪ್ರದೇಶ ₹ 1.79 ಹಿಂದಕ್ಕೆ ಪಡೆದರೆ, ಕರ್ನಾಟಕ ಬರೀ 47 ಪೈಸೆ ಹಿಂದಕ್ಕೆ ಪಡೆಯುತ್ತಿದೆ. ಹೀಗೆ ಕೇಂದ್ರದ ಸಮೀಪದೃಷ್ಟಿಯ ಹಣಕಾಸು ನಿರ್ವಹಣೆಯಿಂದ ಸಂಪನ್ಮೂಲ ಕೊರತೆಯಾಗುತ್ತಿದೆಯೇ ವಿನಾ ಮೇಲಿನ ಸವಲತ್ತುಗಳನ್ನು ನೀಡುವುದರಿಂದ ಅಲ್ಲ.

2023-24ರಲ್ಲಿ ಕರ್ನಾಟಕ ₹ 3.09 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದೆ. ಬಜೆಟ್‍ನ ಸಂಪೂರ್ಣ ಮೊತ್ತ ರಾಜ್ಯದ ಜನರ ಕೊಡುಗೆ. ಈ ಬಜೆಟ್‍ಲ್ಲಿ ₹ 90,000 ಕೋಟಿಗಳನ್ನು (ಶೇ 8ರಷ್ಟನ್ನು ಸಮಾಜ ಕಲ್ಯಾಣ + ಶೇ 22ರಷ್ಟನ್ನು ಇತರ ಸೇವೆಗಳಿಗೆ) ತೆಗೆದಿರಿಸಿದೆ. ಈ ಯೋಜನೆಗಳನ್ನು ಪರಿಷ್ಕರಿಸಿ ಕೆಲವು ಸಾವಿರ ಕೋಟಿಗಳನ್ನು ಹೊಂದಿಸುವುದು ಕಷ್ಟವಲ್ಲ. ಆಡಳಿತ ಸುಧಾರಣೆ, ಭ್ರಷ್ಟಾಚಾರ ಹತೋಟಿ, ತೆರಿಗೆ ಪರಿಷ್ಕರಣೆಯ ಮೂಲಕ ಸವಲತ್ತುಗಳಿಗೆ ಅವಶ್ಯವಿರುವ ಸಂಪನ್ಮೂಲವನ್ನು ಹೊಂದಿಸಬಹುದು.

ಈ ಸವಲತ್ತುಗಳನ್ನು ನೀಡುವುದು ಅಭಿವೃದ್ಧಿಗೆ ಪೂರಕವಲ್ಲ ಅಥವಾ ಅನುತ್ಪಾದಕ ಎನ್ನುವುದು ಮತ್ತೊಂದು ಆಕ್ಷೇಪ. ಇದೊಂದು ಬಂಡವಾಳ ಕೇಂದ್ರಿತ ಅಭಿವೃದ್ಧಿ ಚಿಂತನೆಯ ಪೂರ್ವಗ್ರಹ. ಅಂದರೆ ಸರಕು–ಸೇವೆಗಳ ಉತ್ಪಾದನೆಯಲ್ಲಿ ಬಂಡವಾಳದ್ದೇ ಪ್ರಮುಖ ಪಾತ್ರ, ಇತರರ ಅದರಲ್ಲೂ ಮಾನವ ಶ್ರಮದ ಪಾತ್ರವನ್ನು ಸಂಪೂರ್ಣ ಅಲ್ಲಗಳೆಯುವ ಚಿಂತನೆ. ಇದೇ ಕಾರಣದಿಂದ ಉತ್ಪಾದನೆ ಹೆಚ್ಚಿಸಲು ಸರ್ಕಾರ ನೀಡುವ ಎಲ್ಲ ಸವಲತ್ತುಗಳು (ಬ್ಯಾಂಕ್ ಸಾಲ, ಜಮೀನು, ಪ್ರಾಕೃತಿಕ ಸಂಪನ್ಮೂಲದಂತಹವು) ಬಂಡವಾಳ ಹೂಡಿಕೆ ಮೇಲೆ ನಿರ್ಧರಿಸಲ್ಪಡುತ್ತಿವೆ. ಅಂದರೆ ಹೆಚ್ಚು ಬಂಡವಾಳ ವಿನಿಯೋಗಿಸುವವರಿಗೆ ಹೆಚ್ಚು ಸವಲತ್ತು, ಕಡಿಮೆ ವಿನಿಯೋಗಿಸುವವರಿಗೆ ಕಡಿಮೆ ಸವಲತ್ತು. ಇಷ್ಟೆಲ್ಲ ಬೆಂಬಲ ನೀಡಿದರೂ ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ದೊಡ್ಡ ಬಂಡವಾಳಿಗರ ಕೊಡುಗೆ ಶೇ 50-55ರ ಆಸುಪಾಸಿನಲ್ಲಿದೆ. ಸರ್ಕಾರದಿಂದ ವಿಶೇಷ ಬೆಂಬಲ ಪಡೆಯದ ಸಣ್ಣ ಮತ್ತು ಅತಿ ಸಣ್ಣ ಕೃಷಿ, ವ್ಯಾಪಾರ, ಉದ್ದಿಮೆ ಮತ್ತು ಇವುಗಳಲ್ಲಿ ದುಡಿಯುವವರ ಜಿಡಿಪಿ ಕೊಡುಗೆ ಶೇ 40-45ರಷ್ಟಿದೆ. ಇದೊಂದು ರೀತಿ ಹಲವು ಕೆ.ಜಿ. ಹಿಂಡಿ ತಿಂದು 10 ಲೀಟರ್ ಹಾಲು ಕೊಡುವ ಪರದೇಶಿ ದನ ಮತ್ತು ಹಿತ್ತಲ ಹುಲ್ಲು ಮೇದು 4 ಲೀಟರ್ ಹಾಲು ಕೊಡುವ ದೇಶಿ ದನದ ಕತೆ ಇದ್ದಂತೆ.

ಸರ್ಕಾರ ನೀಡಲಿಚ್ಛಿಸುವ ಅಕ್ಕಿ, ವಿದ್ಯುತ್, ನಿರುದ್ಯೋಗ ಭತ್ಯೆ, ಬಸ್ ಟಿಕೆಟ್‌ನಂತಹವೆಲ್ಲ ದೇಶಿ ದನದ ರೀತಿ ದುಡಿಯುವ ನಮ್ಮ ಸಮಾಜದ ಮುಕ್ಕಾಲು ಭಾಗ ಜನರಿಗೆ ತಲುಪುವ ಸವಲತ್ತುಗಳು. ಇವೆಲ್ಲ ಸವಲತ್ತುಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಂಡರೆ ಪ್ರತಿ ಕುಟುಂಬಕ್ಕೂ ಒಂದೆರಡು ಸಾವಿರ ರೂಪಾಯಿಗಳ ನೆರವು ಸಿಗಬಹುದು. ಹಲವು ಸಾವಿರ ಅಥವಾ ಲಕ್ಷದಲ್ಲಿ ಗಳಿಸುವವರಿಗೆ ಒಂದೆರಡು ಸಾವಿರ ದೊಡ್ಡ ಮೊತ್ತವಲ್ಲ. ಆದರೆ 10 ಸಾವಿರದಿಂದ 15 ಸಾವಿರ ರೂಪಾಯಿ ಆದಾಯವುಳ್ಳವರಿಗೆ ಒಂದೆರಡು ಸಾವಿರ ರೂಪಾಯಿ ದೊಡ್ಡ ಮೊತ್ತ. ಅದರಲ್ಲೂ ಇತ್ತೀಚಿನ ಕೆಲವು ವರ್ಷಗಳ ಬೆಳವಣಿಗೆಗಳು, ಮುಖ್ಯವಾಗಿ ನೋಟು ರದ್ದತಿ, ಜಿಎಸ್‍ಟಿ, ಕೋವಿಡ್ ಹೊಡೆತ, ಆರ್ಥಿಕ ಕುಸಿತ, ನಿರುದ್ಯೋಗ, ಹಣದುಬ್ಬರದಂತಹವು ಇವರ ಖರೀದಿಸುವ ಶಕ್ತಿಯನ್ನು ಕುಂದಿಸಿವೆ. ಈ ಸವಲತ್ತುಗಳು ಖರೀದಿಸುವ ಇವರ ಶಕ್ತಿಯನ್ನು ಅಲ್ಪಸ್ವಲ್ಪ ಸುಧಾರಿಸಬಹುದು.

ಇವರನ್ನು ದಿವಾಳಿಯಾಗಿಸುವ ನೀತಿಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಈ ಅಲ್ಪಸ್ವಲ್ಪ ನೆರವು ಇವರಿಗೆ ಮಾತ್ರ ಆಸರೆಯಲ್ಲ, ನಮ್ಮ ದೇಶ, ರಾಜ್ಯದ ಆರ್ಥಿಕ ಆರೋಗ್ಯಕ್ಕೂ ಅವಶ್ಯ. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಮೂಲಕ ಇಂತಹ ಸವಲತ್ತುಗಳನ್ನು ನೀಡುವ ರಾಜಕೀಯವನ್ನು ತಮಿಳುನಾಡು ಆರಂಭಿಸಿದೆ. ಸವಲತ್ತುಗಳನ್ನು ನೀಡುವುದರಲ್ಲಿ ಇಂದು ಕೂಡ ತಮಿಳುನಾಡು ಮುಂಚೂಣಿಯಲ್ಲಿದೆ. ತಮಿಳುನಾಡು ನಂತರ ಕೇರಳ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳು ಬರುತ್ತಿವೆ. ಹಾಗೆಂದು ಅಭಿವೃದ್ಧಿಯಲ್ಲಿ ದಕ್ಷಿಣದ ರಾಜ್ಯಗಳು ಹಿಂದೆ ಬಿದ್ದಿಲ್ಲ. ಅಭಿವೃದ್ಧಿಯ ಎಲ್ಲ ಸೂಚ್ಯಂಕಗಳಲ್ಲೂ (ಜಿಡಿಪಿ, ಸಾಕ್ಷರತೆ, ಆರೋಗ್ಯ, ಲಿಂಗ ಸಮಾನತೆ, ತಲಾ ಆದಾಯದಂತಹವುಗಳಲ್ಲಿ) ಸವಲತ್ತುಗಳನ್ನು ನೀಡುವ ದಕ್ಷಿಣದ ರಾಜ್ಯಗಳು ಈ ಬಗೆಯ ಸವಲತ್ತುಗಳನ್ನು ನೀಡದಿರುವ ಉತ್ತರದ ರಾಜ್ಯಗಳಿಗಿಂತ ತುಂಬಾ ಮುಂದಿವೆ.

ಹೀಗೆ ಸಮಾಜದ ಕಾಲು ಭಾಗ ಜನರು ಎಲ್ಲ ಸವಲತ್ತುಗಳನ್ನು ಅನುಭವಿಸುವುದು ಮತ್ತು ಮುಕ್ಕಾಲು ಭಾಗ ಜನ ಪ್ರಾಣಿಗಿಂತ ಕಡೆಯಾಗಿ ಬದುಕುವುದು ಎನ್ನುವ ಗ್ರಹಿಕೆಯುಳ್ಳ ಅಭಿವೃದ್ಧಿ ಹಾಗೂ ಆರ್ಥಿಕ ಚಿಂತಕರಿಗೆ ಈ ಸವಲತ್ತುಗಳು ಅನುತ್ಪಾದಕವಾಗಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT