ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಬೆಂಗಳೂರಿನ ಆಡಳಿತ ಯಾಕೆ ಹೀಗಿದೆ?

ಆಡಳಿತದ ದುಃಸ್ಥಿತಿ ಕುರಿತು ಚರ್ಚೆ ಆಗಬೇಕಾದುದು ರಾಜಧಾನಿಗೂ ಮುಖ್ಯ, ರಾಜ್ಯಕ್ಕೂ ಮುಖ್ಯ
Last Updated 11 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ತಿಂಗಳ ಹಿಂದೆ ಮಹಾಮಳೆಗೆ ಬೆಂಗಳೂರಿನ ಕೆಲವು ಭಾಗಗಳು ನೆರೆಗೊಳಗಾಗಿ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಸುದ್ದಿಯಾಯಿತು. ಕೊಳೆಗೇರಿಗಳು, ಕೆಳಮಧ್ಯಮ ವರ್ಗದ ಬಡಾವಣೆಗಳಷ್ಟೇ ಅಲ್ಲದೆ ಹಲವಾರು ಐ.ಟಿ. ಸಂಸ್ಥೆಗಳು, ಐ.ಟಿ. ಉದ್ಯೋಗಿಗಳು ವಾಸಿಸುವ ಅಪಾರ್ಟ್‌ಮೆಂಟ್‌ಗಳು, ಸಿರಿವಂತರು ವಾಸಿಸುವ ವಿಲ್ಲಾಗಳೆಲ್ಲ ನೀರಿನಲ್ಲಿ ನಿಂತ ಕಾರಣದಿಂದಲೊ ಏನೋ ತುಸು ಹೆಚ್ಚೇ ಅನ್ನಿಸುವಷ್ಟು ಗೌಜು ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿವಾಹಿನಿಗಳಲ್ಲೂ ಉಂಟಾಯಿತು.
ತಿಂಗಳೊಪ್ಪತ್ತಿನಲ್ಲಿ, ನೆರೆಯ ನೀರು ಇಳಿದಿದ್ದಕ್ಕಿಂತಲೂ ವೇಗವಾಗಿ ಜನರು ಇದನ್ನು ಮರೆತು ಮುಂದೆ ಸಾಗಿದ್ದೂ ಆಗಿದೆ. ಇನ್ನೊಂದು ಮಹಾಮಳೆ ಬಂದಾಗ ಇದೆಲ್ಲ ಮತ್ತೆ ಯಥಾವತ್ತಾಗಿ ಮರುಕಳಿಸುತ್ತದೆ.

ನಾಡಪ್ರಭು ಕೆಂಪೇಗೌಡರು ಬೆಂಗಳೂರು ಕಟ್ಟಿದರು. ಆನಂತರ ಅನೇಕ ಅರಸರು, ಬ್ರಿಟಿಷರು ಆಳುತ್ತ, ಸ್ವಾತಂತ್ರ್ಯದ ನಂತರ ನಾವೇ ಆಳಿಕೊಳ್ಳುತ್ತ ಬೆಂಗಳೂರು ಆರು ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಕಂಡಿದೆ. ಇದು, ಇತಿಹಾಸದ ಉದ್ದಕ್ಕೂ ಯೋಜಿತವಾದ ರೀತಿಯಲ್ಲೇ ಬೆಳೆಯುತ್ತ ಬಂದಿತ್ತು. ಯೋಜಿತವಾದ ಬೆಳವಣಿಗೆಯು ಕಳೆದ ಎರಡು ದಶಕಗಳಲ್ಲಿ ಬಹುತೇಕ ಮೂಲೆಗುಂಪಾಗಿ ಅಡ್ಡಾದಿಡ್ಡಿ ಬೆಳೆಯುತ್ತ, ಮೂರು ಪಟ್ಟು ಜನಸಂಖ್ಯೆ ಹೆಚ್ಚಿಸಿಕೊಂಡು ಟ್ರಾಫಿಕ್, ಮಾಲಿನ್ಯ, ಮೂಲ ಸೌಕರ್ಯಗಳ ಕೊರತೆ, ಒತ್ತುವರಿ, ಭ್ರಷ್ಟಾಚಾರ ಹೀಗೆ ಸಾಲು ಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ನಗರವಾಗಿ ಇಂದು ನಿಂತಿದೆ. ಕರ್ನಾಟಕ ಸರ್ಕಾರವು ತನ್ನ ವರಮಾನದಲ್ಲಿ ಶೇ 35ಕ್ಕೂ ಹೆಚ್ಚಿನ ಪಾಲು ತಂದುಕೊಡುವ ಊರಿನ ಆಡಳಿತ ಯಾಕಿಷ್ಟು ದುಃಸ್ಥಿತಿಯಲ್ಲಿದೆ ಅನ್ನುವ ಬಗ್ಗೆ ಆಗಾಗ ಚರ್ಚಿಸುತ್ತಲಾದರೂ ಇರಬೇಕು. ಅದು ಬೆಂಗಳೂರಿಗೂ ಮುಖ್ಯ, ಕರ್ನಾಟಕಕ್ಕೂ ಮುಖ್ಯ. ಬೆಂಗಳೂರು ಈಪಾಟಿ ಬದಲಾವಣೆ ಕಂಡ ಕಳೆದ ಎರಡು ದಶಕಗಳನ್ನು ದೂರ ನಿಂತು ಅವಲೋಕಿಸಿದರೆ ಕೆಲ ಅಂಶಗಳನ್ನು ಗುರುತಿಸಬಹುದು. ಇವು, ಇಲ್ಲಿನ ಸ್ಥಿತಿ ಯಾಕೆ ಹೀಗಿದೆ ಅನ್ನುವ ಪ್ರಶ್ನೆಗೆ ಒಂದು ಮಟ್ಟಿಗಿನ ಉತ್ತರವನ್ನೂ ಕೊಡಬಹುದು.

ಮೊದಲನೆಯದಾಗಿ, ಬೆಂಗಳೂರಿನ ಈ 30 ವರ್ಷಗಳ ಬೆಳವಣಿಗೆಯು ಭಾರತವು ಜಾಗತೀಕರಣಕ್ಕೆ ತೆರೆದುಕೊಂಡು, ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆಯತ್ತ ಸಾಗಿದ ಬದಲಾವಣೆಯೊಂದಿಗೆ ತಳುಕು ಹಾಕಿಕೊಂಡಿದೆ. ಈ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಹುಟ್ಟುಹಾಕಿ ಹೊಸ ಮಧ್ಯಮವರ್ಗವೊಂದನ್ನು ಸೃಷ್ಟಿಸಿದ್ದು ಎಲ್ಲರಿಗೂ ತಿಳಿದಿದ್ದೇ. ಜಗತ್ತಿನ ಎಲ್ಲ ಸುಖ ಸೌಲಭ್ಯಗಳು ಇಂದು ಪ್ರಪಂಚದ ಯಾವ ಭಾಗದಲ್ಲೇ ಶುರುವಾದರೂ ಕ್ಷಣಾರ್ಧದಲ್ಲಿ ಬೆಂಗಳೂರಿನಲ್ಲೂ ಸಿಗುವಂತಹ ದಿನಗಳು ಬಂದಿವೆ. ಇದನ್ನು ಪ್ರಗತಿ ಎಂದು ಸಂಭ್ರಮಿಸುವವರಿಗೇನೂ ಕಡಿಮೆಯಿಲ್ಲ. ಇವೆಲ್ಲವುಗಳ ಜೊತೆಜೊತೆಯಲ್ಲೇ ನಮ್ಮ ಸಮಾಜದಲ್ಲಿ ಆಳವಾಗಿ ಬಂದು ನಿಂತಿರುವುದು ಕ್ಯಾಪಿಟಲಿಸಂನ ಉಪ ಉತ್ಪನ್ನ ಎನ್ನಬಹುದಾದ ‘ವ್ಯಕ್ತಿವಾದ’. ಬದುಕು-ಬವಣೆಯ ಎಲ್ಲ ಪ್ರಶ್ನೆಗಳನ್ನೂ ವ್ಯಕ್ತಿಕೇಂದ್ರಿತವಾದ ನೆಲೆಯಲ್ಲೇ ಆಲೋಚಿಸುವಂತಹ ಬೇರು ಮಟ್ಟದ ಬದಲಾವಣೆಯನ್ನು ಈ ಹೊಸ ಆರ್ಥಿಕ ವ್ಯವಸ್ಥೆಯು ಸಮಾಜದಲ್ಲಿ ತಂದಿದೆ. ಅದರ ಪರಿಣಾಮವಾಗಿ ಕೂಡು ಕುಟುಂಬಗಳ ಸಂಸ್ಕೃತಿ ದೂರವಾಗಿದ್ದು, ಕೊಳ್ಳುಬಾಕತನ, ಸಿರಿವಂತಿಕೆಯ ಪ್ರದರ್ಶನವೇ ಪ್ರಗತಿ ಅನ್ನುವಂತಾಗಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಪ್ರಜೆಯಾಗಿ, ನಾಗರಿಕನಾಗಿ ವ್ಯಕ್ತಿಯೊಬ್ಬನ ವ್ಯವಸ್ಥೆಯೊಂದಿಗಿನ ಒಡನಾಟ ಶಿಥಿಲವಾಗುತ್ತ ಬದುಕಿನ ಎಲ್ಲ ಅಗತ್ಯಗಳನ್ನು ಆದಷ್ಟು ವ್ಯವಸ್ಥೆಯ ಹೊರಗೇ ಹಣದಿಂದ ಈಡೇರಿಸಿಕೊಳ್ಳುವ ಬದಲಾವಣೆ ಬಂದಿದೆ.

ಶಿಕ್ಷಣ, ಆರೋಗ್ಯ, ಸುರಕ್ಷತೆ, ಸಾರಿಗೆ, ಹೀಗೆ ಯಾವೆಲ್ಲ ಅಗತ್ಯಗಳಿಗೆ ವ್ಯವಸ್ಥೆ ಬೇಕಿತ್ತೋ ಅದೆಲ್ಲವನ್ನೂ ಖಾಸಗಿಯಾಗಿ ಪಡೆದುಕೊಳ್ಳುವ ಮನಃಸ್ಥಿತಿ ಇಂದು ಎಲ್ಲೆಡೆ ಇದೆ. ಎಲ್ಲೆಲ್ಲಿ ವ್ಯವಸ್ಥೆಯೊಂದಿಗೆ ಒಡನಾಡಲೇಬೇಕಾದ ಅನಿವಾರ್ಯ ಇದೆಯೋ ಅಲ್ಲಿ ಲಂಚ ಕೊಟ್ಟಾದರೂ ಸರಿ ತುರ್ತಾಗಿ ದಾಟಿಕೊಂಡು ಬಿಡೋಣ ಅನ್ನುವ ಮನಃಸ್ಥಿತಿಯೂ ನೆಲೆಗೊಂಡಿದೆ. ಯಾವುದೇ ಸಮಷ್ಟಿ ಪ್ರಜ್ಞೆ ಇಲ್ಲದ ಸಮಾಜವೊಂದು ರೂಪುಗೊಂಡಾಗ ಸಹಜವಾಗಿಯೇ ಅಲ್ಲಿ ಸಮುದಾಯ ಪ್ರಜ್ಞೆ ಗಟ್ಟಿಗೊಳ್ಳುವುದಿಲ್ಲ. ಎಲ್ಲಿ ಸಮುದಾಯವಿಲ್ಲವೋ ಅಲ್ಲಿ ವ್ಯವಸ್ಥೆಯನ್ನು ಎಚ್ಚರಿಸುವ ಯಾವ ಶಕ್ತಿಯೂ ಇರದು. ಈ ಕಾರಣದಿಂದಲೇ ನಮ್ಮಲ್ಲಿ ಗುಂಡಿ ಬಿದ್ದ ರಸ್ತೆ, ಬೀದಿಗಳಲ್ಲಿ ಬೀಳುವ ಕಸ, ಕೆರೆ, ಫುಟ್‍ಪಾತ್ ಒತ್ತುವರಿಯಂಥ ಎಲ್ಲರನ್ನೂ ತಾಕುವ ಸಮಸ್ಯೆಗಳ ಬಗ್ಗೆ ಒಟ್ಟಾಗಿ ಪ್ರತಿಭಟಿಸುವ, ಉತ್ತರದಾಯಿತ್ವಕ್ಕೆ ಒತ್ತಾಯಿಸುವ ಯಾವ ಪ್ರಯತ್ನಗಳೂ ಕಾಣುತ್ತಿಲ್ಲ. ಎರಡು ವರ್ಷಗಳಿಂದ ಬೆಂಗಳೂರಿನ ಮಹಾನಗರ ಪಾಲಿಕೆಗೆ ಚುನಾವಣೆಯೇ ನಡೆಯದಿದ್ದರೂ, ಆಡಳಿತವನ್ನು ಗುತ್ತಿಗೆದಾರರು, ಅಧಿಕಾರಿಗಳು, ರಾಜಕಾರಣಿಗಳು ಸೇರಿಕೊಂಡು ಬೇಕಾಬಿಟ್ಟಿ ನಡೆಸುತ್ತಿದ್ದರೂ ಆ ಬಗ್ಗೆ ಸರಿಯಾದ ಒಂದು ಪ್ರತಿಭಟನೆ ನಡೆದಿದ್ದನ್ನು ನಾವ್ಯಾರೂ ಕಂಡಿಲ್ಲ. ವ್ಯವಸ್ಥೆಯ ಜೊತೆ ಒಡನಾಡುವ ಸಾಮರ್ಥ್ಯ ಇರುವ ಜನರು ಅದರಿಂದ ದೂರ ದೂರ ಹೋಗುವ ಇವತ್ತಿನ ಏರ್ಪಾಡಿನಲ್ಲಿ ಆಡಳಿತ ಕುಸಿಯದೇ ಇರಲು ಸಾಧ್ಯವೇ?

ಎರಡನೆಯದಾಗಿ, ಬೆಂಗಳೂರಿಗೆ ಭರಿಸಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ಆಗುತ್ತಿರುವ ಅನಿಯಂತ್ರಿತ ವಲಸೆ. ಕೇವಲ ಎರಡು ದಶಕಗಳಲ್ಲಿ ಒಂದು ನಗರದ ಜನಸಂಖ್ಯೆ ಮೂರು ಪಟ್ಟು ಹೆಚ್ಚಾದ ಉದಾಹರಣೆ ಪ್ರಪಂಚದಲ್ಲಿ ವಿರಳ. ಇಷ್ಟು ವ್ಯಾಪಕವಾದ ವಲಸೆಯನ್ನು ತಡೆದುಕೊಳ್ಳುವಂತೆ ಇಲ್ಲಿನ ಯಾವ ವ್ಯವಸ್ಥೆಯೂ ರೂಪುಗೊಂಡಿಲ್ಲ. ರಸ್ತೆಯ ಸಾಮರ್ಥ್ಯ ಏಳೆಂಟು ಲಕ್ಷ ವಾಹನಗಳಿಗಿದ್ದರೆ ಇಲ್ಲಿ ಎಂಬತ್ತು ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಈ ಊರಿನ ನೀರಿನ ದಾಹ ತೀರಿಸಲು ಕಾವೇರಿ ಕೊಳ್ಳದ ರೈತರು ಕೃಷಿ ಬಿಟ್ಟರೂ ಆಗಲಿಕ್ಕಿಲ್ಲ. ಈ ಊರಿಗೆ ವಿದ್ಯುತ್ ಪೂರೈಸಲು ಕರ್ನಾಟಕದ ಜಲ, ಅಣು, ಉಷ್ಣ ವಿದ್ಯುತ್ ಮೂಲಗಳು ಸಾಕಾಗದು. ಇದು ವಲಸೆಯ ಒಂದು ಆಯಾಮವಾದರೆ, ಇಂತಹ ವಲಸೆಯು ನಗರದ ಮಟ್ಟದಲ್ಲಿ ಆಡಳಿತದಿಂದ ಹೊಣೆಗಾರಿಕೆ ಎದುರು ನೋಡುವ ನಾಗರಿಕರ ಒಂದು ಸಮುದಾಯ ‘ಸಹಜವಾಗಿ’ ರೂಪುಗೊಳ್ಳುವುದನ್ನು ಕಷ್ಟವಾಗಿಸಿದೆ ಅನ್ನುವುದು ಇನ್ನೊಂದು ಆಯಾಮ.

ಸಮುದಾಯಗಳು ರೂಪುಗೊಳ್ಳಲು ಜನರು ಒಂದಾಗಿ ಬರಬೇಕು. ಹಾಗೆ ಒಂದಾಗಿ ಬರಲು ಅವರ ನಡುವೆ ಸಹಕಾರವನ್ನು ‘ಸಹಜವಾಗಿ’ ರೂಪಿಸುವ ಅಂಶವೊಂದಿರಬೇಕಾಗುತ್ತದೆ. ಅಂತಹ ಸಹಜ ಸಾಧನ ಭಾಷೆ. ಯಾಕೆಂದರೆ ಭಾಷೆ ಅನ್ನುವುದು ಸಂಪರ್ಕದ ಸಾಧನ ಮಾತ್ರವಲ್ಲ. ಅದು ಅದಕ್ಕೂ ಮಿಗಿಲಾಗಿ ಸಹಕಾರದ ಸಾಧನ. ಹತ್ತಾರು ನುಡಿಯಾಡುವ ಜನರು ವಲಸೆ ಬಂದರೂ ಅವರು ಕಾಲಾವಧಿಯಲ್ಲಿ ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯುವುದನ್ನು ಪ್ರೋತ್ಸಾಹಿಸುವ ಯಾವ ಸಾಂಸ್ಥಿಕ ನೀತಿಗಳೂ ಇಂದು ನಮ್ಮಲ್ಲಿಲ್ಲ. ಅಂತಹ ನೀತಿಗಳನ್ನು ರೂಪಿಸಿ, ಜಾರಿಗೆ ತರುವ ಇಚ್ಛಾಶಕ್ತಿಯೂ ನಮ್ಮನ್ನಾಳುವವರಿಗೆ ಇಲ್ಲ. ವಲಸಿಗರು ಅಲ್ಲಲ್ಲಿ ದ್ವೀಪಗಳಂತೆಯೇ ಉಳಿಯುವ ಏರ್ಪಾಡು ಇದ್ದಷ್ಟೂ ವ್ಯವಸ್ಥೆಯೊಂದಿಗೆ ಹತ್ತಿರದಿಂದ ಒಡನಾಡುವ ಸಮುದಾಯವೊಂದನ್ನು ಗಟ್ಟಿಯಾಗಿ ರೂಪಿಸುವ ಪ್ರಯತ್ನಕ್ಕೆ ಬಲ ಬರುವುದಿಲ್ಲ. ಈ ಕಾರಣಕ್ಕಾಗಿಯೇ ವಲಸಿಗರು ಹೆಚ್ಚು ನೆಲೆಗೊಂಡಿರುವ ಬೆಂಗಳೂರಿನ ಪ್ರದೇಶಗಳಲ್ಲಿ ಆಡಳಿತದ ಮಟ್ಟ ಬೆಂಗಳೂರಿನ ಹಳೆಯ ಭಾಗಗಳ ಹೋಲಿಕೆಯಲ್ಲಿ ಹೆಚ್ಚು ಕೆಟ್ಟದಾಗಿದೆ ಎನ್ನಬಹುದು.

ನಮ್ಮ ನಗರಗಳ ಆಡಳಿತ ಸುಧಾರಣೆಗೆ ಮಂತ್ರದಂಡವೇನೂ ಇಲ್ಲ. ಇವತ್ತಿನ ಆರ್ಥಿಕ ಮಾದರಿಗಳು ಎಕಾನಮಿ ಆಫ್ ಸ್ಕೇಲ್ ಸುತ್ತಲೇ ಇರುವ ಕಾರಣದಿಂದ, ನಗರಗಳು ಬೆಳೆಯುವುದು ಮತ್ತು ನಗರಗಳತ್ತ ಜನರು ವಲಸೆ ಬರುವುದು ಸದ್ಯಕ್ಕಂತೂ ಕಡಿಮೆಯಾಗದು. ಬೆಂಗಳೂರು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಆಗಬಾರದು ಅಂದರೆ ಅದರ ಮೇಲಿನ ಒತ್ತಡ ಕಡಿಮೆಯಾಗಿಸಿ ಕರ್ನಾಟಕದ ಬೇರೆ ನಗರಗಳನ್ನು ಬೆಳೆಸುವತ್ತ ಗಮನ ಹರಿಸಬೇಕು.

ದಕ್ಷಿಣ ಭಾರತದಲ್ಲಿ ಅತ್ಯಂತ ಕಡಿಮೆ ನಗರಗಳಿರುವ ರಾಜ್ಯ ಕರ್ನಾಟಕವಾಗಿದೆ. ಇದು ಬದಲಾಗಬೇಕು. ಹೀಗೆ
ಹೊಸ ನಗರಗಳು ರೂಪುಗೊಳ್ಳುವಾಗಲೂ ಅನಿಯಂತ್ರಿತ ವಲಸೆ ನಮ್ಮ ಊರುಗಳ ಕನ್ನಡ ಜನಲಕ್ಷಣವನ್ನು ಬದಲಾಯಿಸದಂತೆ ಉದ್ಯೋಗ, ವಲಸೆಯ ಸುತ್ತ ನೀತಿ-ನಿಯಮಗಳನ್ನು ರೂಪಿಸಿಕೊಳ್ಳುವ ಕೆಲಸವೂ ಆಗಬೇಕಿದೆ. ಜನರು ಆಡಳಿತದಲ್ಲಿ ಸಹಭಾಗಿಗಳಾಗುವಂತೆ ಅವರನ್ನು ತೊಡಗಿಸಿಕೊಳ್ಳುವ ಬದಲಾವಣೆಯೂ ಬರಬೇಕಿದೆ. ಅದಿಲ್ಲದಿದ್ದರೆ ನಗರೀಕರಣ ಅಂದರೆ ಕೆಟ್ಟ ಮೂಲ ಸೌಕರ್ಯಗಳ, ಕನ್ನಡದ ಯಾವ ಪರಿಸರವೂ ಇರದ ನಗರಗಳನ್ನು ಕರ್ನಾಟಕದಲ್ಲಿ ಕಟ್ಟಿಕೊಳ್ಳುವುದು ಅಂತಾಗುತ್ತದೆ. ಅದಾಗಬಾರದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT