ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಲಿಂಕನ್ ಮಾತು, ಪ್ರತಿಪಕ್ಷಗಳ ಒಕ್ಕೂಟ

ವಿರೋಧ ಪಕ್ಷಗಳ ನಾಯಕರಲ್ಲಿ ಯಾರಿಗೂ ಅಖಿಲ ಭಾರತ ಮಟ್ಟದಲ್ಲಿ ಜನಪ್ರಿಯತೆ ಇಲ್ಲ
Published 2 ಆಗಸ್ಟ್ 2023, 0:20 IST
Last Updated 2 ಆಗಸ್ಟ್ 2023, 0:20 IST
ಅಕ್ಷರ ಗಾತ್ರ

ಐಎನ್‌ಡಿಐಎ ಒಕ್ಕೂಟವು ಭಿನ್ನ ನಿಲುವುಗಳನ್ನ ಹೊಂದಿರುವ, ಹತಾಶಗೊಂಡಿರುವ ಪಕ್ಷಗಳ ಮೈತ್ರಿಕೂಟವೇ? ಈ ಒಕ್ಕೂಟವು ಬಹುಕಾಲ ಬಾಳಬಲ್ಲದೇ? ಆ ಪಕ್ಷಗಳು ಬಲಶಾಲಿ ನರೇಂದ್ರ ಮೋದಿ ಅವರನ್ನು ಸೋಲಿಸಲು ತಮ್ಮ ಅಹಂ ಮೀರಿ, ಒಟ್ಟಾಗಿ ಉಳಿಯಬಲ್ಲವೇ? ಈ ಪಕ್ಷಗಳು ಸರ್ವಸಮ್ಮತ ನಾಯಕನೊಬ್ಬನನ್ನು ಆಯ್ಕೆ ಮಾಡಿಕೊಳ್ಳಬಲ್ಲವೇ?

ವಿರೋಧ ಪಕ್ಷಗಳು ಕಳೆದ ತಿಂಗಳು ಬೆಂಗಳೂರಿನಲ್ಲಿ ಒಟ್ಟು ಸೇರಿದ್ದವು. ತಮ್ಮ ರಾಜಕೀಯ ಎದುರಾಳಿ ಮೋದಿ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದು ಹೇಗೆಂಬ ಬಗ್ಗೆ ಚರ್ಚಿಸಿದವು. ಬಿಜೆಪಿಯು ಅದೇ ದಿನ ನವದೆಹಲಿಯಲ್ಲಿ 38 ರಾಜಕೀಯ  ಪಕ್ಷಗಳ ಸಭೆ ನಡೆಸಿತು. ನವದೆಹಲಿಯಲ್ಲಿ ಒಟ್ಟಾಗಿದ್ದ ಪಕ್ಷಗಳು ಮೋದಿ ಅವರ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದವು, ಅವರ ನಾಯಕತ್ವದ ಅಡಿಯಲ್ಲಿ ಮುಂದಿನ ಚುನಾವಣೆ ಎದುರಿಸುವುದಾಗಿ ಹೇಳಿದವು.

ವಿರೋಧ ಪಕ್ಷಗಳ ಒಗ್ಗಟ್ಟಿಗೆ ಸಿಕ್ಕಿದ್ದ ಪ್ರಚಾರದ ಹಿನ್ನೆಲೆಯಲ್ಲಿ, ನವದೆಹಲಿಯ ಈ ಸಭೆಯು ಒಂದು ಸಂದೇಶವನ್ನು ಸಾರುವ ಉದ್ದೇಶ ಹೊಂದಿತ್ತು. ಮೋದಿ ಅವರು ಬಿಜೆಪಿಯ ಪ್ರಶ್ನಾತೀತ ನಾಯಕ; ಅಷ್ಟೇ ಅಲ್ಲ, ಅವರು ಈಗಲೂ ವಿರೋಧ ಪಕ್ಷಗಳಿಗೆ ಸಾಧ್ಯವಾಗುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಪಕ್ಷಗಳನ್ನು ತಮ್ಮತ್ತ ಸೆಳೆದು ಮೈತ್ರಿಕೂಟ ರಚಿಸಬಲ್ಲರು ಎಂಬುದು ಆ ಸಂದೇಶ. ವಿರೋಧ ಪಕ್ಷಗಳ ಒಕ್ಕೂಟವು ನಕಾರಾತ್ಮಕತೆಯ ಮೈತ್ರಿಕೂಟ ಎಂದು ಮೋದಿ ಅವರು ಜರಿದರು. ಆ ಒಕ್ಕೂಟವು ಅವಕಾಶವಾದಿತನದಿಂದ ಕೂಡಿದೆ ಎಂದು ದೂರಿದರು. ವಾಸ್ತವದಲ್ಲಿ, ಎನ್‌ಡಿಎ ಬಗ್ಗೆಯೂ ಇದೇ ಮಾತು ಹೇಳಬಹುದು!

ಮೋದಿ ಅವರ ವಿರುದ್ಧ ನಿಲುವು ತಳೆದ ಮಾತ್ರಕ್ಕೆ ಜನರು ವಿರೋಧ ಪಕ್ಷಗಳ ಪರವಾಗಿ ಮತ ಚಲಾಯಿಸುವರೇ? ವಿರೋಧ ಪಕ್ಷಗಳ ಒಕ್ಕೂಟವು ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು, ಮೋದಿ ಅವರನ್ನು ಪದಚ್ಯುತಗೊಳಿಸಬಹುದು – ಹಿಂದೆ ಜನತಾ ಪಕ್ಷವು ಇಂದಿರಾ ಗಾಂಧಿ ಅವರನ್ನು ತುರ್ತು ಪರಿಸ್ಥಿಯ ನಂತರದಲ್ಲಿ ಸೋಲಿಸಿ, ನಂತರ ತಾನೇ ಕುಸಿದುಬಿತ್ತು. ಬಿಜೆಪಿ ಯಾವುದನ್ನು ಪ್ರತಿನಿಧಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಶಕ್ತಿಶಾಲಿ ಹಿಂದೂರಾಷ್ಟ್ರ ನಿರ್ಮಾಣ ಅದರ ಉದ್ದೇಶ. ಆದರೆ ವಿರೋಧ ಪಕ್ಷಗಳಿಗೆ ದೇಶದ ವಿಚಾರವಾಗಿ ಸಮಾನವಾದ ದೂರದೃಷ್ಟಿಯೊಂದು ಇದೆಯೇ? ಅವರು ಅಧಿಕಾರಕ್ಕೆ ಬಂದಲ್ಲಿ, ಒಂದಾಗಿ ಉಳಿದುಕೊಳ್ಳುತ್ತಾರೆಯೇ?

ನಿತೀಶ್ ಕುಮಾರ್ ಯಾವುದರ ಪರವಿದ್ದಾರೆ ಎಂಬುದನ್ನು ಯಾರಾದರೂ ಹೇಳಲು ಸಾಧ್ಯವೇ? ಅವರು ತಮ್ಮ ಬಟ್ಟೆ ಬದಲಿಸಿದಷ್ಟೇ ಸುಲಭವಾಗಿ ಸಿದ್ಧಾಂತವನ್ನೂ ಬದಲಿಸಬಲ್ಲರು. ಅಧಿಕಾರದಲ್ಲಿ ಉಳಿದುಕೊಳ್ಳಲು ಅವರು ಕೇಸರಿ ಪಾಳೆಯದ ಜೊತೆ ಒಂದಕ್ಕಿಂತ ಹೆಚ್ಚು ಬಾರಿ ನಂಟು ಬೆಳೆಸಿದ್ದಾರೆ. ಅವರು ಈ ಒಕ್ಕೂಟಕ್ಕೆ ಯಾವ ಬಗೆಯಲ್ಲಿ ವಿಶ್ವಾಸಾರ್ಹತೆಯನ್ನು, ಸ್ಥಿರತೆಯನ್ನು ತಂದುಕೊಡಬಲ್ಲರು? ಲಾಲು ಪ್ರಸಾದ್ ಅವರ ಕಥೆ ಏನು? ಸಮಾಜವಾದಿ ಆಗಿದ್ದ ಅವರು, ಬಿಹಾರದ ಮುಖ್ಯಮಂತ್ರಿ ಆದ ನಂತರದಲ್ಲಿ ಅಲ್ಲಿನ ರಾಜಕಾರಣವನ್ನೇ ಬದಲಾಯಿಸಿದರು. ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾದರು. ಒಕ್ಕೂಟದ ಭಾಗವಾಗಿರುವ ಇಂತಹ ನಾಯಕರು ಮೋದಿ ಅವರ ವಿರುದ್ಧ ರಫೇಲ್ ಒಪ್ಪಂದ ಉಲ್ಲೇಖಿಸಿ ಅಥವಾ ಅದಾನಿ ಸಮೂಹದ ಬಗ್ಗೆ ಉಲ್ಲೇಖಿಸಿ ಮಾಡುವ ಆರೋಪಗಳು ಜನರಿಗೆ ಒಪ್ಪಿತವಾಗಬಹುದೇ?

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಸರ್ಕಾರವನ್ನು ಏಕಾಂಗಿಯಾಗಿ ಕಿತ್ತೊಗೆದವರು ಮಮತಾ ಬ್ಯಾನರ್ಜಿ. ಅಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರು ತಮ್ಮ ಪಕ್ಷವನ್ನು ಗೂಂಡಾಗಳ ಪಕ್ಷವನ್ನಾಗಿಸಿದ್ದರು. ರಾಜ್ಯದ ಅರ್ಥವ್ಯವಸ್ಥೆ ಹಾಳಾಗಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರದಲ್ಲಿ ಮಮತಾ ಅವರ ಟಿಎಂಸಿ, ಕಮ್ಯುನಿಸ್ಟ್ ಪಕ್ಷದ ಹಲವರನ್ನು ತನ್ನಲ್ಲಿ ಸೇರಿಸಿಕೊಂಡಿತು. ಮಮತಾ ಅವರು ಮೋದಿ ಅವರಷ್ಟೇ ಸರ್ವಾಧಿಕಾರಿ ಎಂಬ ಭಾವನೆ ಇದೆ. ಟಾಟಾ ಮೋಟರ್ಸ್‌ನ ‘ನ್ಯಾನೊ ಕಾರು’ ಯೋಜನೆಯನ್ನು ರಾಜ್ಯದಿಂದ ಹೊರದಬ್ಬಿದ ನಂತರದಲ್ಲಿ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಮಮತಾ ವಿಫಲರಾಗಿದ್ದಾರೆ. ಅಲ್ಲಿನ ಅರ್ಥವ್ಯವಸ್ಥೆ ಕುಸಿದಿದೆ. ಕುಟುಂಬದ ಸದಸ್ಯರನ್ನು ಅಧಿಕಾರ ಕೇಂದ್ರದಲ್ಲಿ ಇರಿಸಿಕೊಂಡ ಆರೋಪ ಮಮತಾ ಅವರ ವಿರುದ್ಧ ಇದೆ. ಬಿಜೆಪಿ ನಡೆಸಿದ ಕೋಮು ಸಂಘರ್ಷಗಳ ವಿರುದ್ಧ ನಿಂತ ಮಮತಾ ಅವರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. ಆದರೆ ಅವರ ಪಕ್ಷವು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಮುಳುಗಿದೆ. ರಾಜ್ಯದಲ್ಲಿ ಸಂಘರ್ಷ ನಿರಂತರವಾಗಿದೆ. ಅವರು ವಿರೋಧ ಪಕ್ಷಗಳಲ್ಲಿ ಸ್ಫೂರ್ತಿ ತುಂಬಬಲ್ಲರು ಎಂದು ನಂಬಬಹುದೇ? ಅವರು ಮೋದಿ ಅವರಿಗೆ ರಾಷ್ಟ್ರಮಟ್ಟದಲ್ಲಿ ವಿಶ್ವಾಸಾರ್ಹ ಸವಾಲು ಒಡ್ಡಬಲ್ಲರೇ?

ಒಳ್ಳೆಯ ಆಡಳಿತ, ಉತ್ತಮ ಶಾಲಾ ಶಿಕ್ಷಣ, ಕೈಗೆಟಕುವ ದರದಲ್ಲಿ ಆರೋಗ್ಯಸೇವೆ, ವಿದ್ಯುತ್ ಮತ್ತು ನೀರು ಪೂರೈಕೆ ವಿಚಾರದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ದೆಹಲಿ ಮುಖ್ಯಮಂತ್ರಿ ಆಗಿ ಅರವಿಂದ ಕೇಜ್ರಿವಾಲ್ ಅವರು ತೋರಿಸಿಕೊಟ್ಟಿದ್ದಾರೆ. ಈ ಹೆಗ್ಗಳಿಕೆಗಳ ಬಲದಿಂದ ಅವರು ಮರು ಆಯ್ಕೆ ಕೂಡ ಆಗಿದ್ದಾರೆ. ಆದರೆ ಅವರ ಅಹಂ ದೊಡ್ಡ ಸಮಸ್ಯೆ. ಅವರು ಸೌಹಾರ್ದದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಕಾಣುವುದಿಲ್ಲ. ಅವರು ಒಕ್ಕೂಟವನ್ನು ಒಂದಾಗಿಸಬಲ್ಲರೇ? ಅಲ್ಲದೆ, ಶರದ್ ಪವಾರ್ ಅವರ ಪಕ್ಷ ಒಡೆದಿದೆ, ಪವಾರ್ ಅವರು ಕುಸಿದಿದ್ದಾರೆ. ಪವಾರ್ ಸೇರಿದಂತೆ ಇವರಲ್ಲಿ ಯಾರಿಗೂ ಅಖಿಲ ಭಾರತ ಮಟ್ಟದಲ್ಲಿ ಜನಪ್ರಿಯತೆ ಇಲ್ಲ.

ಇನ್ನು ಉಳಿಯುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್. ಈ ಎರಡೂ ಹೆಸರು ದೇಶದಾದ್ಯಂತ ಪರಿಚಿತ. ರಾಹುಲ್ ಅವರು ಯುವಕ, ಅವರಿಗೆ ದೊಡ್ಡ ಕುಟುಂಬವೊಂದರ ಹೆಸರಿದೆ. ಅವರು ಪಕ್ಷವನ್ನು ಮುನ್ನಡೆಸಿ, ಕರ್ನಾಟಕದಲ್ಲಿ ಜಯ ಸಿಗುವಂತೆ ಮಾಡಿದ್ದಾರೆ. ಅವರು ಮಾಗಿದ್ದಾರೆ. ‘ವಂಶಪಾರಂಪರ್ಯ ರಾಜಕಾರಣ’ ಎಂಬ ಆರೋಪವು ಜನಸಮೂಹಕ್ಕೆ ಅಷ್ಟೊಂದು ದೊಡ್ಡ ವಿಷಯವಾಗಲಿಕ್ಕಿಲ್ಲ. ಒಕ್ಕೂಟದ ನಾಯಕ ರಾಹುಲ್ ಎಂದು ಘೋಷಿಸಿದರೆ, ಅವರು ಪ್ರಬುದ್ಧ ನಾಯಕತ್ವವೊಂದನ್ನು ನೀಡಬಲ್ಲರೇ? ಮೋದಿ ಮತ್ತು ರಾಹುಲ್ ನಡುವಿನ ಹಣಾಹಣಿಯಲ್ಲಿ, ಒಕ್ಕೂಟವನ್ನು ಜಯದ ದಡ ಸೇರಿಸುವ ಅವಕಾಶ ರಾಹುಲ್ ಅವರಿಗಿದೆಯೇ?

ವಿರೋಧ ಪಕ್ಷಗಳು ಅಧಿಕಾರದ ವಿಚಾರದಲ್ಲಿ ಒಂದಾಗಿವೆ; ಆದರೆ, ವಿವಿಧ ವಿಷಯಗಳ ವಿಚಾರವಾಗಿ ಭಿನ್ನಮತ ಹೊಂದಿವೆ. ಅವರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ತೊರೆದು, ಮೋದಿ ಅವರ ನಾಯಕತ್ವದಲ್ಲಿ ಶಿಸ್ತಿನಿಂದ ನಡೆದುಕೊಳ್ಳುವ ಬಿಜೆಪಿಗೆ ಸ್ಪರ್ಧೆ ಒಡ್ಡಬಲ್ಲರೇ? ಮೋದಿ ಮತ್ತು ಬಿಜೆಪಿಯವರು ಕೋಮು ಸಂಘರ್ಷಕ್ಕೆ ಇಂಬು ಕೊಡುತ್ತಿದ್ದಾರೆ, ಹಿಂದೂಗಳು ಹಾಗೂ ಮುಸ್ಲಿಮರನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸುವ ವಿರೋಧ ಪಕ್ಷಗಳು ತಮ್ಮ ಜಾತಿ ಆಧಾರಿತ ರಾಜಕಾರಣವನ್ನು ಕೈಬಿಡುವವೇ? ತಮ್ಮ ಪೊಳ್ಳು ಧರ್ಮನಿರಪೇಕ್ಷ ನಿಲುವನ್ನು ಹಾಗೂ ಅಲ್ಪಸಂಖ್ಯಾತರನ್ನು ಅತಿಯಾಗಿ ಓಲೈಸುವ ರಾಜಕಾರಣವನ್ನು ಕೈಬಿಡುವವೇ? ಇಸ್ಲಾಮಿಕ್ ಮೂಲಭೂತವಾದ ಹಾಗೂ ಹಿಂದುತ್ವ ಆಧಾರಿತ ಅಂಧಾಭಿಮಾನವನ್ನು ಸಮಾನವಾಗಿ ನಿರ್ಮೂಲಗೊಳಿಸುವ ಭರವಸೆಯನ್ನು ಈ ಪಕ್ಷಗಳು ನೀಡಬಹುದೇ? ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಯಾವುದೇ ತಾರತಮ್ಯ ಎಸಗದ, ಖಾಪ್ ಪಂಚಾಯಿತಿಗಳು ಮತ್ತು ಷರಿಯಾ ಕಾನೂನಿನ ಬಿಗಿಹಿಡಿತಕ್ಕೆ ಸಿಲುಕಿರುವ ಮಹಿಳೆಯರನ್ನು ಅಲ್ಲಿಂದ ಬಿಡುಗಡೆ ಮಾಡುವ ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುವುದಾಗಿ ಈ ಪಕ್ಷಗಳು ಘೋಷಿಸಬಲ್ಲವೇ? ದೇಶದ ತನಿಖಾ ಸಂಸ್ಥೆಗಳನ್ನು ಹಾಗೂ ನ್ಯಾಯಾಂಗ ಇಲಾಖೆಯನ್ನು ಆಡಳಿತ ಪಕ್ಷಗಳ ಹಿಡಿತದಿಂದ ಸ್ವತಂತ್ರಗೊಳಿಸಲಾಗುತ್ತದೆ ಎಂಬ ಭರವಸೆಯನ್ನು ಈ ವಿರೋಧ ಪಕ್ಷಗಳು ನೀಡಬಲ್ಲವೇ?

ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಸವಾಲು ಎದುರಾಗಬಹುದು. ಆದರೆ ಬಹಳ ಆಕರ್ಷಕವಾಗಿ ಕಾಣಿಸುವ ‘ಇಂಡಿಯಾ’ ಎಂಬ ಹೆಸರು (ವಿರೋಧ ಪಕ್ಷಗಳ ಒಕ್ಕೂಟಕ್ಕೆ ನೀಡಿರುವ ಸಂಕ್ಷಿಪ್ತ ಹೆಸರು) ಮಾತ್ರವೇ ವಿರೋಧ ಪಕ್ಷಗಳಿಗೆ ಚುನಾವಣೆ ಗೆಲ್ಲಲು ಸಾಕಾಗುವುದಿಲ್ಲ. ಈ ಪಕ್ಷಗಳಿಗೆ ಜನರ ವಿಶ್ವಾಸವನ್ನು ಗಳಿಸಬೇಕಾದ ಅಗತ್ಯವೂ ಇದೆ. ಆದರೆ ಅದನ್ನು ಸಂಪಾದಿಸುವುದು ಸುಲಭದ ಕೆಲಸವಲ್ಲ. ವಿರೋಧ ಪಕ್ಷಗಳ ನಾಯಕರು ಬೆಂಗಳೂರಿಗೆ ಬಂದಿದ್ದಾಗ ನಗರದ ತುಂಬೆಲ್ಲ ಆ ನಾಯಕರ ಕಟೌಟ್‌ಗಳು ಕಾಣುತ್ತಿದ್ದವು. ಅವರ ಚಿತ್ರಗಳ ಕೆಳಗೆ ಒಂದು ಘೋಷವಾಕ್ಯ ಕೂಡ ಇತ್ತು – ಒಂದಾಗಿದ್ದರೆ ಯಶಸ್ಸು ಎಂಬ ಅರ್ಥದ ಘೋಷವಾಕ್ಯ ಅದು. ಆ ಘೋಷವಾಕ್ಯದ ಕೆಳಗಡೆ ಅಬ್ರಹಾಂ ಲಿಂಕನ್ ಅವರ ಜನಪ್ರಿಯ ಮಾತೊಂದನ್ನು ಸೇರಿಸಿದ್ದಿದ್ದರೆ ಇನ್ನೂ ಸೂಕ್ತವಾಗುತ್ತಿತ್ತು. ‘ತನ್ನಲ್ಲೇ ಒಮ್ಮತವಿಲ್ಲದ ಕುಟುಂಬವೊಂದು ಯಶಸ್ಸು ಕಾಣಲು ಸಾಧ್ಯವಿಲ್ಲ’ ಎಂಬುದು ಆ ಮಾತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT