ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಾಮಾನ್ಯರ ಆತಂಕ ಮತ್ತು ಬಜೆಟ್ ಸ್ಪಂದನ

ಆರ್ಥಿಕ ಪ್ರಗತಿಯ ಫಲದ ನ್ಯಾಯಯುತ ಹಂಚಿಕೆಯೂ ಸರ್ಕಾರದ ಹೊಣೆಯೇ ಆಗಿದೆ
Last Updated 3 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ನಿರ್ಮಲಾ ಸೀತಾರಾಮನ್ ಅವರ 2023– 24ರ ಬಜೆಟ್ ಚುನಾವಣೆ ಮೇಲೆ ದೃಷ್ಟಿ ನೆಟ್ಟಿರುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ಅದು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಿಜವಾಗಿದೆ. ಬರಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಬೆಂಬಲ ಸಿಗಬಹುದು ಎಂದೂ ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಸರ್ಕಾರಕ್ಕೆ ಚುನಾವಣೆ ಗೆಲ್ಲುವುದಕ್ಕೆ ಇಂತಹ ಜನಪರ ಕಾರ್ಯಕ್ರಮಗಳಿಗಿಂತ ಬೇರೆಯೇ ಯೋಜನೆ ಮನಸ್ಸಿನಲ್ಲಿ ಇದ್ದಿರಬಹುದು.

ಇದಕ್ಕೆ ತೆಕ್ಕೆಹಾಕಿಕೊಂಡಂತಹ ಇನ್ನೊಂದು ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ದೇಶದ ಆರ್ಥಿಕತೆಯಲ್ಲಿ ರಾಜ್ಯಗಳ ಪಾತ್ರ ಕಡಿಮೆಯಾಗುತ್ತಿದೆ. ಆಡಳಿತ ಹೆಚ್ಚೆಚ್ಚು ಕೇಂದ್ರೀಕೃತವಾಗುತ್ತಿದೆ. ಇದು ಮುಖ್ಯವಾದ ಅಂಶ. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸದೆಯೇ ಹಲವು ಯೋಜನೆಗಳನ್ನು ರೂಪಿಸುವ ಪ್ರವೃತ್ತಿ ಕೂಡ ಹೆಚ್ಚುತ್ತಿದೆ. ಆದರೆ ಅವುಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ರಾಜ್ಯಗಳ ಮೇಲಿರುತ್ತದೆ. ಅದರ ಪರಿಣಾಮವನ್ನೂ ಅವೇ ಎದುರಿಸಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗೇ ವಿರುದ್ಧವಾದದ್ದು. ಈ ಬಜೆಟ್‌ನಲ್ಲೂ ಈ ಪ್ರವೃತ್ತಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

ರಾಜ್ಯ ಸರ್ಕಾರಗಳಿಗೆ ಬಂಡವಾಳದ ವೆಚ್ಚ ಭರಿಸಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿಕೊಂಡಿದ್ದಾರೆ. ಆದರೆ ವಾಸ್ತವವೆಂದರೆ, ರಾಜ್ಯಗಳಿಗೆ ವರ್ಗಾಯಿಸುತ್ತಿರುವ ಅನುದಾನದಲ್ಲಿ ಕಡಿತವಾಗಿದೆ. 2021-22ರಲ್ಲಿ ₹ 4,60,575 ಕೋಟಿಯಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಲಾಗಿತ್ತು. 2022-23ರಲ್ಲಿ ಅದು ₹ 3,67,204 ಕೋಟಿಗೆ ಇಳಿಯಿತು. ಈ ಸಲ ಅದು ₹ 3,59,470 ಕೋಟಿಯಾಗಿದೆ. ಹಾಗೆಯೇ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ಸಿಗುತ್ತಿರುವ ಪಾಲು ಕೂಡ ಕಡಿಮೆಯಾಗುತ್ತಿದೆ.

ಸರ್ಕಾರವೇ ಒಪ್ಪಿಕೊಂಡ, 14ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಒಟ್ಟು ತೆರಿಗೆಯಲ್ಲಿ ಶೇ 42ರಷ್ಟನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕಿತ್ತು. ಆದರೆ ಈ ಬಜೆಟ್‌ನಲ್ಲಿ ರಾಜ್ಯಗಳಿಗೆ ಸಿಗುತ್ತಿರುವುದು ಬರೀ ಶೇ 30.4ರಷ್ಟು. ಸಂಪನ್ಮೂಲ ಸಂಗ್ರಹಕ್ಕೆ ಇರುವ ದಾರಿಗಳು ಕಡಿಮೆಯಾದ್ದರಿಂದ ರಾಜ್ಯಗಳು ತಮ್ಮದೇ ಆದ ಜನಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳುವುದು ಕಷ್ಟವಾಗುತ್ತದೆ. ಕೇಂದ್ರವನ್ನು ಹೆಚ್ಚೆಚ್ಚು ಅವಲಂಬಿಸಬೇಕಾಗಿರುವುದು ಸುಭದ್ರ ಒಕ್ಕೂಟ ವ್ಯವಸ್ಥೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರದ ಪಾತ್ರ ಮುಖ್ಯವಾಗುತ್ತದೆ. ಆ ದೃಷ್ಟಿಯಿಂದ ಈ ಬಜೆಟ್ ನಿರಾಶಾದಾಯಕವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ), ಸಾಮಾಜಿಕ ಸುರಕ್ಷಾ ಪಿಂಚಣಿಗಳು, ಮಕ್ಕಳ ಪೌಷ್ಟಿಕಾಂಶ ಯೋಜನೆ ಹಾಗೂ ಹೆರಿಗೆ ಅನುಕೂಲಗಳು ಇವುಗಳಿಗೆ ಒಟ್ಟಾಗಿ ಮಾಡುತ್ತಿರುವ ಖರ್ಚು 20 ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿದಿದೆ. ಉದ್ಯೋಗ ಸೃಷ್ಟಿ, ಪೌಷ್ಟಿಕತೆ, ಆರೋಗ್ಯ, ಶಿಕ್ಷಣದಂತಹ ಕ್ಷೇತ್ರಗಳಿಗೆ ಅನುದಾನ ಕಡಿತ ಆಗಿದೆ. ಕೆಲವು ಕಾರ್ಯಕ್ರಮಗಳಿಗೆ ಅನುದಾನದ ಹೆಚ್ಚಳವಾಗಿದ್ದರೂ ಹಣದುಬ್ಬರದ ಪ್ರಮಾಣ ಗಣನೆಗೆ ತೆಗೆದುಕೊಂಡರೆ ಅದು ಕೂಡ ಕಡಿಮೆಯಾಗಿದೆಯೆಂದು ಹೇಳಬಹುದು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅನುದಾನವನ್ನು ಶೇ 13ರಷ್ಟು ಕಡಿತ ಮಾಡಲಾಗಿದ್ದು, ಅದನ್ನು ₹ 1.81 ಲಕ್ಷ ಕೋಟಿಯಿಂದ ₹ 1.57 ಲಕ್ಷ ಕೋಟಿಗೆ ಇಳಿಸಲಾಗಿದೆ. ಹಾಗೆಯೇ ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆಯ ಬಾಬ್ತನ್ನು ₹ 2.15 ಲಕ್ಷ ಕೋಟಿಯಿಂದ ₹ 1.35 ಲಕ್ಷ ಕೋಟಿಗೆ ಇಳಿಸಲಾಗಿದೆ. ಹಾಗಾಗಿ ಕೊರೊನಾ ಸಮಯದಲ್ಲಿ ಕೊಡುತ್ತಿದ್ದ ತಲಾ 5 ಕೆ.ಜಿ. ಪಡಿತರ ಮುಂದುವರಿಯುವ ಸಾಧ್ಯತೆ ಕಡಿಮೆ.

ಭಾರತದ ಜಿಡಿಪಿ ಗಾತ್ರವು ವಿಶ್ವದಲ್ಲಿ ಐದನೆಯ ಅತಿದೊಡ್ಡದು ಎಂದು ಹೇಳಿಕೊಂಡರೂ 81 ಕೋಟಿ ಜನರಿಗೆ ಪುಕ್ಕಟೆ ಪಡಿತರ ಕೊಡಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ ಅನ್ನುವ ವಾಸ್ತವವನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಆಹಾರಕ್ಕೆ ನೀಡುವ ಸಬ್ಸಿಡಿಯಲ್ಲಿ ₹ 80 ಸಾವಿರ ಕೋಟಿಯಷ್ಟು ಕಡಿಮೆ ಯಾಗಿರುವುದು ಟೀಕೆಗೆ ಗುರಿಯಾಗಿದೆ. ಅದು ಇಂದು ದೇಶವನ್ನು ಕಾಡುತ್ತಿರುವ ಅಪೌಷ್ಟಿಕತೆ ಹಾಗೂ ಹಸಿವಿನ ಸಮಸ್ಯೆಯ ಹಿನ್ನೆಲೆಯಲ್ಲಿ ಗಂಭೀರವಾದದ್ದು. ಇದರ ಪರಿಣಾಮವಾಗಿ ಗ್ರಾಮೀಣ ಕುಟುಂಬಗಳು ಮಾರುಕಟ್ಟೆಯ ಬೆಲೆ ತೆತ್ತು ಆಹಾರಧಾನ್ಯಗಳನ್ನು ಕೊಳ್ಳಬೇಕಾಗಬಹುದು. ಜೊತೆಗೆ ರೈತ ಸಂಘಟನೆಗಳು ಗುರುತಿಸಿರುವಂತೆ, ಇದರಿಂದ ಆಹಾರಧಾನ್ಯಗಳ ಸಂಗ್ರಹದಲ್ಲೂ ಇಳಿಕೆಯಾಗುತ್ತದೆ.

ಗ್ರಾಮೀಣ ಬಡವರಿಗೆ ಜೀವನಕ್ಕೆ ಆಸರೆಯಾಗಿದ್ದ ಮನರೇಗಾ ಅನುದಾನವು ₹ 89,000 ಕೋಟಿಯಿಂದ ₹ 60,000 ಕೋಟಿಗೆ ಇಳಿದಿದೆ. ಮನರೇಗಾ ಸಂಘರ್ಷ ಮೋರ್ಚಾದ ನಿಖಿಲ್ ಡೆ ಅವರ ಪ್ರಕಾರ ‘ಇದು ಕೊಲೆ. ಸರ್ಕಾರ ಯೋಜನೆಯನ್ನು ಕೊಲ್ಲುತ್ತಿದೆ. ಪ್ರತೀ ಕುಟುಂಬಕ್ಕೆ ನೂರು ದಿನದ ಕೂಲಿಯನ್ನು ಲೆಕ್ಕ ಹಾಕಿದರೆ ₹ 1.76 ಲಕ್ಷ ಕೋಟಿ ಬೇಕಾಗುತ್ತದೆ. ಸಾಮಗ್ರಿಗಳ ಖರ್ಚು ಸೇರಿ ಅದು ₹ 2.46 ಲಕ್ಷ ಕೋಟಿಯಷ್ಟಾಗುತ್ತದೆ. ಅದಕ್ಕೆ ಇನ್ನೂ ಪಾವತಿಸದೇ ಉಳಿದಿರುವ ₹ 25,800 ಕೋಟಿ ಸೇರಿದರೆ ₹ 2.72 ಲಕ್ಷ ಕೋಟಿಯಾಗುತ್ತದೆ. ಆದರೆ ಈಗ ನಿಗದಿಗೊಳಿಸಿರುವುದು ಕೇವಲ ₹ 60,000 ಕೋಟಿ. ಆ ಮೊತ್ತದಲ್ಲಿ ಹೆಚ್ಚೆಂದರೆ ಪ್ರತೀ ಕುಟುಂಬಕ್ಕೆ 48 ದಿನಗಳ ಉದ್ಯೋಗ ನೀಡಬಹುದು’. ನಿರುದ್ಯೋಗದ ಪ್ರಮಾಣ ತೀವ್ರವಾಗುತ್ತಿರುವ ಈ ಸಮಯದಲ್ಲಿ ಇದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಸರ್ಕಾರ ಈ ಯೋಜನೆಗಳಲ್ಲಿ ಹೆಚ್ಚಿನ ಹಣ ತೊಡಗಿಸಬೇಕು. ಅಷ್ಟೇ ಅಲ್ಲ ನಗರ ಪ್ರದೇಶಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದಿಸೆಯಲ್ಲಿ ಯೋಚಿಸಬೇಕು.

ಹಣದುಬ್ಬರದ ಪ್ರಮಾಣವನ್ನು ಗಮನಕ್ಕೆ ತೆಗೆದುಕೊಂಡರೆ, ರಾಷ್ಟ್ರೀಯ ಆರೋಗ್ಯ ಯೋಜನೆಗೆ ಹಾಗೂ ಶಿಕ್ಷಣಕ್ಕೆ ಮಾಡಿರುವ ಹೆಚ್ಚಳವೂ ಕಡಿಮೆಯೇ. ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಗೆ 2022ರಲ್ಲಿ ₹ 8,270 ಕೋಟಿ ಖರ್ಚು ಮಾಡಲಾಗಿತ್ತು. ಆದರೆ ಈ ಬಜೆಟ್ಟಿನಲ್ಲಿ ಅದಕ್ಕೆ ₹ 3,365 ಕೋಟಿಗಳನ್ನು ಮೀಸಲಿಡಲಾಗಿದೆ. ಹಾಗಾಗಿ ಈಗಾಗಲೇ ವಿಮೆ ಪಡೆದುಕೊಂಡವರ ಆತಂಕ ಸಹಜವಾದದ್ದು.

ರೈತರ ವಿಷಯದಲ್ಲೂ ಹೀಗೆಯೇ ಆಗಿದೆ. ಅಲ್ಲಿಯ ಅಂಕಿ ಅಂಶಗಳು ತಮಾಷೆಯಾಗಿವೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡುವ ಉದ್ದೇಶದಿಂದ ದೊಡ್ಡದಾಗಿ ಪ್ರಾರಂಭಿಸಿದ್ದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಗೆ ಕಳೆದ ಬಜೆಟ್‌ನಲ್ಲಿ ₹ 1,500 ಕೋಟಿ ತೆಗೆದಿರಿಸಲಾಗಿತ್ತು. ಅದು, ಈ ವರ್ಷ ಕೇವಲ ಒಂದು ಲಕ್ಷ ರೂಪಾಯಿಗೆ ಇಳಿದಿದೆ. ಪಿಎಂ ಕಿಸಾನ್ ಪಾವತಿ ಯೋಜನೆಯಲ್ಲಿ ಪ್ರತೀ ರೈತರಿಗೆ ನೀಡುವ ಹಣವನ್ನು ₹ 6000ದಿಂದ ₹ 8000ಕ್ಕೆ ಹೆಚ್ಚಿಸುವುದಾಗಿ ಹೇಳಲಾಗಿದೆ. ಆದರೆ ಅದಕ್ಕೆ ತೆಗೆದಿರಿಸುವ ಮೊತ್ತದಲ್ಲಿ ಹೆಚ್ಚಳ ಆಗಿಲ್ಲ!

ದುರಂತವೆಂದರೆ, ವೃದ್ಧರಿಗೆ ನೀಡುತ್ತಿರುವ ಪಿಂಚಣಿಯ ಮೊತ್ತದಲ್ಲಿ 16 ವರ್ಷಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಈಗಲೂ ತಿಂಗಳಿಗೆ ₹ 200ನ್ನೇ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಈ ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳೂ ಸಾಮಾನ್ಯ ಜನರ ಜೀವನಮಟ್ಟ
ವನ್ನು ಪ್ರಭಾವಿಸುವ ಕಾರ್ಯಕ್ರಮಗಳು. ಆರೋಗ್ಯ, ಶಿಕ್ಷಣ ಇವುಗಳು ಸಾಮಾಜಿಕವಾಗಿ ಅನುಕೂಲಕರ ಮಾತ್ರವಲ್ಲ, ಆರ್ಥಿಕವಾಗಿಯೂ ಪರಿಣಾಮ ಬೀರುತ್ತವೆ. ಇಂತಹ ಕಾರ್ಯಕ್ರಮಗಳು ಜನರಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ. ಗ್ರಾಹಕರ ಸರಕಿಗೆ ಬೇಡಿಕೆ ಹೆಚ್ಚುತ್ತದೆ. ಅದರಿಂದ ಉತ್ಪಾದನೆಯೂ ಹೆಚ್ಚುತ್ತದೆ. ಸರಕು ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಾಣುತ್ತಿರುವ ಈ ಸಂದರ್ಭದಲ್ಲಿ ಇದು ಮುಖ್ಯ. ಅದು ನೇರವಾಗಿ ಖಾಸಗಿ ಹೂಡಿಕೆಯನ್ನೂ ಹೆಚ್ಚಿಸಬಲ್ಲದು. ಉದ್ಯೋಗ ಸೃಷ್ಟಿಯೂ ಸಾಧ್ಯವಾಗಬಹುದು. ಜೊತೆಗೆ ಅಸಮಾನತೆ ಹೆಚ್ಚುತ್ತಿರುವ ಈ ಸಮಯದಲ್ಲಿ ಇಂತಹ ಜನಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚಿಸುವುದು, ಅದರಲ್ಲಿ ಹಣ ತೊಡಗಿಸುವುದು ಸರ್ಕಾರಗಳ ನೈತಿಕ ಜವಾಬ್ದಾರಿಯೂ ಹೌದು. ಆರ್ಥಿಕ ಪ್ರಗತಿಯನ್ನು ಸಾಧ್ಯವಾಗಿಸುವುದಷ್ಟೇ ಅಲ್ಲದೆ ಪ್ರಗತಿಯ ಫಲದ ನ್ಯಾಯಯುತ ಹಂಚಿಕೆಯೂ ಸರ್ಕಾರದ ಹೊಣೆ.

ಬಂಡವಾಳದ ವೆಚ್ಚವನ್ನು ಹೆಚ್ಚಿಸಿ, ಪ್ರಗತಿಯನ್ನು ಸಾಧಿಸಬಹುದೆನ್ನುವ ಮಾರ್ಗ ಸುಭದ್ರ ಆರ್ಥಿಕತೆಯನ್ನು ಕಟ್ಟಿಕೊಡುವುದಿಲ್ಲ. ಇದನ್ನು ಇತ್ತೀಚಿನ ಬೆಳವಣಿಗೆ ತೋರಿಸಿದೆ. ಜೊತೆಗೆ ಅಸಮಾನತೆಯನ್ನು ತೀವ್ರಗೊಳಿಸುತ್ತದೆ ಅನ್ನುವುದನ್ನೂ ಚರಿತ್ರೆ ತಿಳಿಸಿದೆ. ಬೆಳವಣಿಗೆಯ ಪ್ರಕ್ರಿಯೆಯ ಫಲ ಎಲ್ಲರಿಗೂ ಸಿಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT