ಹತ್ತು ವರ್ಷದ ಕೆಳಗೆ ಇಂಥದ್ದೇ ಮೇ ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾದ ಕಾಲದ ನಿರೀಕ್ಷೆಗಳು ನೆನಪಾಗುತ್ತಿವೆ. ಆಗ, ಅಧಿಕಾರ ವಹಿಸಿಕೊಂಡ ದಿನವೇ ಅನ್ನಭಾಗ್ಯ ಹಾಗೂ ರೈತರ ಸಾಲಮನ್ನಾ ಕಡತಗಳಿಗೆ ಸಹಿ ಹಾಕಿದ್ದ ಸಿದ್ದರಾಮಯ್ಯನವರ ಎದುರು ಈಗ, ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಗಳನ್ನು ಜಾರಿಗೆ ತರುವ ದೊಡ್ಡ ಸವಾಲಿದೆ. ಎರಡನೆಯ ಸಲ ಮುಖ್ಯಮಂತ್ರಿಯಾಗುತ್ತಿರುವ ಅವರೆದುರು, ಕರ್ನಾಟಕದ ಎಲ್ಲ ಸಮುದಾಯಗಳ ಹಾಗೂ ಶೇಕಡ 42ರಷ್ಟಿರುವ ಕಾಂಗ್ರೆಸ್ ಬೆಂಬಲಿಗ ಮತದಾರರ ನಿರೀಕ್ಷೆಗಳು ಇನ್ನಷ್ಟು ಹೆಚ್ಚಿವೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈ ಸಲದ ಸವಾಲುಗಳು ಹಿಂದಿಗಿಂತ ಭಿನ್ನವಾಗಿವೆ. ರಾಜ್ಯದ ಹಣಕಾಸು ಸ್ಥಿತಿ ಕುರಿತ ಶ್ವೇತಪತ್ರ ಹೊರಬರುವ ತನಕ, ಕಾಂಗ್ರೆಸ್ ಕೊಟ್ಟ ಭರವಸೆಗಳ ಜಾರಿಗೆ ಅಗತ್ಯವಾದ ಆರ್ಥಿಕ ಶಕ್ತಿಯ ಅಂದಾಜು ಸಿಕ್ಕಲಾರದು. ಉಚಿತ ವಿದ್ಯುತ್ ಪೂರೈಕೆ, ಉಚಿತ ಮಹಿಳಾ ಪ್ರಯಾಣದಂತಹವುಗಳಿಂದ ಆಯಾ ಸಂಸ್ಥೆಗಳಿಗೆ ಆಗುವ ನಷ್ಟ ಭರಿಸಲು ಎಎಪಿ ಮಾಡಿದ್ದ ಹೋಮ್‌ವರ್ಕನ್ನು ಕಾಂಗ್ರೆಸ್ ಮಾಡಿದೆಯೇ ಎಂಬ ಪ್ರಶ್ನೆಯಿದೆ.
ಕಾಂಗ್ರೆಸ್ಸಿನ 2013ರ ಜನಪ್ರಿಯ ಭರವಸೆಗಳು ಕೈಯಳತೆಯಲ್ಲಿದ್ದವು. ಈ ಸಲ ಅವು ಬಹಳಷ್ಟು ದುಬಾರಿಯಾಗಿವೆ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಕಾಲ ಹಣಕಾಸು ಖಾತೆ ನಿರ್ವಹಿಸಿರುವ ಸಿದ್ದರಾಮಯ್ಯ ಇದನ್ನೆಲ್ಲ ಸರಿದೂಗಿಸಬಲ್ಲರು ಎನ್ನುವವರಿದ್ದಾರೆ. ಹಿಂದಿನ ಪ್ರಣಾಳಿಕೆಯ 99 ಭಾಗದಷ್ಟನ್ನು ಜಾರಿಗೆ ತಂದಿರುವುದಾಗಿ ಕಾಂಗ್ರೆಸ್ ಮತ್ತೆ ಮತ್ತೆ ಹೇಳಿಕೊಂಡಿರುವುದರಿಂದ, ಈ ಸಲದ ಭರವಸೆಗಳ ಈಡೇರಿಕೆಗಾಗಿ ಜನ ಬಹುಕಾಲ ಕಾಯಲಾರರು. ಮೊನ್ನೆಯ ಚುನಾವಣಾ ಪ್ರಚಾರದಲ್ಲಿ ಜನ ಕೇಳುತ್ತಿದ್ದ ನೇರ ಪ್ರಶ್ನೆಗಳಲ್ಲಿ ಮತದಾರರ ನವಜಾಗೃತಿ ಸ್ಪಷ್ಟವಾಗಿ ಕಾಣುತ್ತಿತ್ತು.
2013ರಂತೆಯೇ ಈ ಸಲವೂ ಭ್ರಷ್ಟಾಚಾರದ ವಿರುದ್ಧ ಹಾಗೂ ಸುಭದ್ರ ಸರ್ಕಾರಕ್ಕಾಗಿ ಜನ ಮತ ಕೊಟ್ಟಿದ್ದಾರೆ. ಆದ್ದರಿಂದ ಉಪಮುಖ್ಯಮಂತ್ರಿ ಹುದ್ದೆ, ಸಚಿವ ಹುದ್ದೆ, ಅಧಿಕಾರ ಹಂಚಿಕೆಯಂತಹ ನಿತ್ಯ ಗೊಣಗಾಟಗಳು ತಕ್ಷಣ ನಿಲ್ಲದಿದ್ದರೆ ಸರ್ಕಾರ ನಗೆಪಾಟಲಿಗೀಡಾಗಲಿದೆ. 2008- 13ರ ನಡುವಣ ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳ ಪ್ರಹಸನಕ್ಕೆ ಬೇಸತ್ತ ಜನ ಕಾಂಗ್ರೆಸ್ಸಿಗೆ ಬಹುಮತ ಕೊಟ್ಟಿದ್ದರು. 2018ರಿಂದೀಚೆಗೆ ಕೂಡ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮೂವರು ಮುಖ್ಯಮಂತ್ರಿಗಳನ್ನು ಕಂಡ ಜನ ಮತ್ತೆ ಕಾಂಗ್ರೆಸ್ಸನ್ನು ಬೆಂಬಲಿಸಿದ್ದಾರೆ. ಹಿಂದಿನ ಐದು ವರ್ಷಗಳಿಂದ ಶಾಸಕರ ನಿರ್ಲಜ್ಜ ಮಾರಾಟ, ಮಂತ್ರಿಗಳ ದುರುಳ ವರ್ತನೆಗಳ ಬಗ್ಗೆ ಜನ ಒಳಗೊಳಗೇ ಅಸಹ್ಯಪಡುತ್ತಿದ್ದರು. ಹಿಜಾಬ್, ಗೋರಕ್ಷಣೆ, ಪಠ್ಯಪುಸ್ತಕಗಳ ವಿಕೃತಿಯಂತಹ ವಿವಾದಗಳಿಂದ ನಾಡನ್ನು ಒಡೆಯುತ್ತಿದ್ದ ಆಡಳಿತವನ್ನು ಕಂಡು ಜನ ಸಿಟ್ಟಾಗಿದ್ದರು. ಐದು ವರ್ಷಗಳಲ್ಲಿ ತಲೆಯೆತ್ತಿ ಹೇಳಿಕೊಳ್ಳುವ ಕೆಲಸಗಳನ್ನೇ ಮಾಡದ ನಾಯಕರು ಮತದಾರರೆದುರು ತಲೆತಗ್ಗಿಸಿ ನಿಂತು ಸೋತಿದ್ದಾರೆ. ಕೋಮು ವಿಭಜನೆಯನ್ನು ಕರ್ನಾಟಕ ಮಾನ್ಯ ಮಾಡುವುದಿಲ್ಲವೆಂಬುದು ಮತ್ತೆ ಸಾಬೀತಾಗಿದೆ. ಇದು ಸಾಮರಸ್ಯ, ಸಹಬಾಳ್ವೆಯ ಕರ್ನಾಟಕಕ್ಕಾಗಿ ಹಾಕಲಾದ ಮತ. ಮಕ್ಕಳ ಪಠ್ಯಪುಸ್ತಕಗಳಲ್ಲಿ, ಊರು ಕೇರಿಗಳಲ್ಲಿ, ರಂಗಭೂಮಿಯಲ್ಲಿ ವಿಷ ತುಂಬಲೆತ್ನಿಸಿದ ಸಮಾಜ ಕಂಟಕರ ವಿರುದ್ಧ ಹಾಕಲಾದ ಮತ.
ಇವೆಲ್ಲದರ ವಿರುದ್ಧ ಸಿದ್ದರಾಮಯ್ಯನವರು ಐದು ವರ್ಷ ನಿರಂತರವಾಗಿ ನಿರ್ವಹಿಸಿದ ವಿರೋಧ ಪಕ್ಷದ ನಾಯಕತ್ವದ ಗತ್ತಿನ ಹೊಣೆ, ಸ್ಪಷ್ಟ ನಿಲುವು ಹಾಗೂ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ತಂಡದ ಸತತ ಸಂಘಟನೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ದಿಕ್ಕು ನೀಡಿದ್ದವು. ಈಚಿನ ದಶಕಗಳಲ್ಲಿ ಕರ್ನಾಟಕದಲ್ಲಿ ಅಷ್ಟಾಗಿ ಕಾಣದ ಗಂಭೀರ ವಿರೋಧ ಪಕ್ಷದ ನಾಯಕನ ಮಾದರಿಯನ್ನು ಸಿದ್ದರಾಮಯ್ಯನವರ ಸದನದ ಒಳ-ಹೊರಗಿನ ಭಾಷಣಗಳು, ಪ್ರತಿಕ್ರಿಯೆಗಳು ಸೃಷ್ಟಿಸಿದ್ದವು. ಸೋತಾಗ ಮಾತ್ರ ಒಟ್ಟಾಗಿ ಕೆಲಸ ಮಾಡಲೆತ್ನಿಸುವ ಕಾಂಗ್ರೆಸ್ಸಿಗರು ವಿರೋಧ ಪಕ್ಷದ ಭಾಷೆಗೆ ಅಷ್ಟಿಷ್ಟು ಒಗ್ಗಿಕೊಳ್ಳತೊಡಗಿದ್ದರು! ಆದರೂ ಕಾಂಗ್ರೆಸ್ ವಕ್ತಾರರು ಹಾಗೂ ಬೆರಳೆಣಿಕೆಯ ನಾಯಕರನ್ನು ಬಿಟ್ಟರೆ ಉಳಿದವರು ವಿರೋಧ ಪಕ್ಷದವರಂತೆ ಮಾತಾಡಲೇ ಇಲ್ಲ. ಸರ್ಕಾರವನ್ನು ಹಣಿಯಲು ಬೇಕಾದ ಅಂಕಿ ಅಂಶಗಳಾಗಲೀ ತಾತ್ವಿಕ ಸಿದ್ಧತೆಯಾಗಲೀ ಅನೇಕರಿಗಿರಲಿಲ್ಲ. ಆದರೆ ಕಾಂಗ್ರೆಸ್ಸಿಗಿಂತ ಗಟ್ಟಿ ವಿರೋಧ ಪಕ್ಷವಾಗಿ ಸರ್ಕಾರದ ನಡೆಗಳನ್ನು ನೇರವಾಗಿ ಟೀಕಿಸುತ್ತಾ, ಸ್ವಯಂಸ್ಫೂರ್ತಿಯಿಂದ ಅಳಿಲುಸೇವೆ ಮಾಡಿದ ನೂರಾರು ಹುಡುಗ ಹುಡುಗಿಯರಿದ್ದಾರೆ. ‘ಪ್ರಜಾವಾಣಿ’ಯಂಥ ಕೆಲವು ಪತ್ರಿಕೆಗಳು, ಸೋಷಿಯಲ್ ಮೀಡಿಯಾದ ದಿಟ್ಟ ವ್ಯಕ್ತಿಗಳು ವಸ್ತುನಿಷ್ಠವಾಗಿ ವಿರೋಧ ಪಕ್ಷದ ಕೆಲಸ ನಿರ್ವಹಿಸಿದ್ದು ಕೂಡ ಕಾಂಗ್ರೆಸ್ಸಿಗೆ ನೆರವಾಗಿದೆ. ಈ ನಡುವೆ, ಐದು ವರ್ಷ ಕಾಣೆಯಾಗಿದ್ದ ಕೆಲವರು ತಾವೀಗ ತುರ್ತಾಗಿ ಉಪಮುಖ್ಯಮಂತ್ರಿ ಆಗಬೇಕೆಂದು ಹೇಳುತ್ತಿರುವುದು ತಮಾಷೆಯಾಗಿದೆ!
ರಾಹುಲ್ ಗಾಂಧಿಯವರ ‘ಭಾರತ್ ಜೋಡೊ’ ಯಾತ್ರೆ ಜನರನ್ನು ಒಡೆಯುವ ಭಾಷೆಯನ್ನು ಹಿಮ್ಮೆಟ್ಟಿಸಿ, ಹೃದಯಗಳನ್ನು ಜೋಡಿಸುವ ಭಾಷೆಯನ್ನು ಹಬ್ಬಿಸಿದ್ದನ್ನು ಮರೆಯಲಾಗದು. ಯಾವ ಪಕ್ಷಕ್ಕೂ ಸೇರದ ಜನರನ್ನು ಅದು ಕಾಂಗ್ರೆಸ್ಸಿನೆಡೆಗೆ ತಂದಿದೆ. ಹಿಂದೆ ಕಮ್ಯುನಿಸ್ಟ್, ಸೋಷಲಿಸ್ಟ್ ಪಕ್ಷಗಳನ್ನು ತಾತ್ವಿಕವಾಗಿ ಒಪ್ಪಿ ಅತ್ತ ವಾಲುತ್ತಿದ್ದ ಉದಾರವಾದಿ ಮತದಾರರು ಈಚಿನ ದಶಕಗಳಲ್ಲಿ ಕಾಂಗ್ರೆಸ್ಸಿನತ್ತ ವಾಲಿದ್ದಾರೆ. ಜಾತ್ಯತೀತ ಧೋರಣೆ, ಸಮುದಾಯ ಬೆಸುಗೆಯ ಭಾಷೆ ಹಾಗೂ ಸಾಮಾಜಿಕ ನ್ಯಾಯವನ್ನು ಬೆಂಬಲಿಸುವ ಈ ವರ್ಗ ಕರ್ನಾಟಕದಲ್ಲಿ ಹಿಂದೊಮ್ಮೆ ಜನತಾಪಕ್ಷ, ಜನತಾದಳದ ಪರವಾಗಿತ್ತು. ಒಂದು ಕಾಲಕ್ಕೆ ಈ ವರ್ಗ ದೇವರಾಜ ಅರಸು ಅವರನ್ನು ಮೆಚ್ಚುತ್ತಿದ್ದರೂ, ಅಂದಿನ ಕಾಂಗ್ರೆಸ್ಸನ್ನು ಒಪ್ಪದಿದ್ದುದರಿಂದ ಆ ಪಕ್ಷಕ್ಕೆ ಮತ ಹಾಕುತ್ತಿರಲಿಲ್ಲ. ಹಿಂದಿನ ಹದಿನೈದು ವರ್ಷಗಳಲ್ಲಿ ಈ ಮತದಾರರ ಒಲವು, ಮತ, ಬೆಂಬಲವನ್ನು ಕಾಂಗ್ರೆಸ್ಸಿನತ್ತ ಒಯ್ದದ್ದು ಸಿದ್ದರಾಮಯ್ಯನವರ ಸಾಮಾಜಿಕ ತಾತ್ವಿಕತೆ, ನಡೆ ನುಡಿ ಹಾಗೂ ಖಚಿತ ಕೋಮುವಾದ ವಿರೋಧ.
ಆದ್ದರಿಂದಲೇ ಕರ್ನಾಟಕದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಬಗ್ಗೆ ಹುಟ್ಟಿರುವ ನಿಜವಾದ ಪಾಸಿಟಿವ್ ಬೆಂಬಲವನ್ನು ಯೋಜನೆ, ಕಾರ್ಯಕ್ರಮ, ನಡೆ, ನುಡಿಗಳ ಮೂಲಕ ಕಾಯ್ದುಕೊಳ್ಳುವ ಸವಾಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಎದುರಿಗಿದೆ. ಕಾಂಗ್ರೆಸ್ ಗೆದ್ದ ಸುದ್ದಿ ಹಬ್ಬಿದ ತಕ್ಷಣ ರಾಜ್ಯದ ಸಾರ್ವಜನಿಕ ವಲಯದಲ್ಲಿ, ಹಲವು ಜಾತಿ, ವರ್ಗಗಳಲ್ಲಿ, ಅಲ್ಪಸಂಖ್ಯಾತರಲ್ಲಿ ನೆಮ್ಮದಿ ಉಕ್ಕಿದ್ದು ಎಲ್ಲೆಡೆ ಎದ್ದು ಕಾಣತೊಡಗಿದೆ. ಬರೆಯುವ ಕೈಗಳು, ಮುಕ್ತವಾಗಿ ಮಾತಾಡುವ ದನಿಗಳು ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸತೊಡಗಿವೆ. ಆದರೆ ಆ ನೆಮ್ಮದಿ ಹಾಳಾಗುವಂತೆ ದೆಹಲಿ ಗೊಂದಲ ಶುರುವಾಯಿತು. ಸದ್ಯ! ಈಚೆಗೆ ಮಹಾರಾಷ್ಟ್ರದ ಶಿಂದೆ ಬಣದ ಶಾಸಕರ ಅನರ್ಹತೆ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪತನ ಕುರಿತು ಸುಪ್ರೀಂ ಕೋರ್ಟ್ ಕೊಟ್ಟ ಖಡಕ್ ತೀರ್ಪು ಶಾಸಕರ ಮಾರಾಟಕ್ಕೆ ತಡೆ ಒಡ್ಡಿದ್ದರಿಂದ ಶಾಸಕರ ಹರಾಜಿನ ಆತಂಕ ಕಾಂಗ್ರೆಸ್ಸಿಗೆ ಎದುರಾಗಲಿಲ್ಲ.
ಅಂದರೆ, ಹೆಚ್ಚಿನ ಜನಬೆಂಬಲ ಹಾಗೂ ನ್ಯಾಯಾಂಗದ ತೀರ್ಪಿನ ರಕ್ಷಣಾ ಕವಚಗಳ ನಿಜವಾದ ಸುರಕ್ಷಿತ ವಾತಾವರಣದಲ್ಲಿ ಸಿದ್ದರಾಮಯ್ಯನವರ ಹೊಸ ಸರ್ಕಾರ ರಚನೆಯಾಗಿದೆ. ರಾಜ್ಯಗಳ ನಾಡಿಮಿಡಿತವೇ ಗೊತ್ತಿರದೆ, ಸೂತ್ರಧಾರಿಗಳಂತೆ ಆಡಲು ಹೋಗಿ ಪಕ್ಷಗಳನ್ನು ಹಾಳುಗೆಡಹುವ ಹೈಕಮಾಂಡ್ ಜನ ತಮ್ಮ ಮಿತಿಗಳನ್ನು ಕೊನೆಗೂ ಅರಿತಂತಿದೆ. ರಾಜ್ಯಗಳ ರಾಜಕೀಯ ನಿರ್ವಹಣೆಯನ್ನು ಆಯಾ ರಾಜ್ಯ ನಾಯಕರ ಅನುಭವಗಳ ಬೆಳಕಿನಲ್ಲೇ ನಡೆಸುವುದು ಸೂಕ್ತವೆಂಬ ಜ್ಞಾನ ಕೊನೆಗೂ ದಿಲ್ಲಿಯವರಿಗೆ ಬಂದಂತಿದೆ.
ಕರ್ನಾಟಕದ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿ ಎನ್ನುವವರಿದ್ದಾರೆ. ಆದ್ದರಿಂದಲೇ ನಿರೀಕ್ಷೆಗಳು ಹೆಚ್ಚಿವೆ. ಸವಾಲುಗಳೂ ದೊಡ್ಡದಾಗಿವೆ. ಹೊಸ ಸರ್ಕಾರ ಬಂದಿರುವ ನೆಮ್ಮದಿ ಹಾಗೂ ಅದು ಜನರಲ್ಲಿ ಹುಟ್ಟಿಸಿರುವ ನಿರೀಕ್ಷೆಯನ್ನು ಕಾಂಗ್ರೆಸ್ಸಿಗರಾಗಲೀ, ಕಾಂಗ್ರೆಸ್ಸನ್ನು ಬೆಂಬಲಿಸುವ ವಾಚಾಳಿಗಳಾಗಲೀ ಹಾಳು ಮಾಡದಿರಲಿ. ಸರ್ಕಾರ ಹಾದಿ ತಪ್ಪಿದಾಗಲೆಲ್ಲ ತಿಳಿ ಹೇಳುವ, ಸಕಾರಣವಾಗಿ ಟೀಕಿಸುವ ವರ್ಗ ಸದಾ ಜಾಗೃತವಾಗಿರಲಿ. ತಮ್ಮ ನಾಯಕರ, ಕಾರ್ಯಕರ್ತರ ಪ್ರತಿಯೊಂದು ಠೇಂಕಾರದ ನಡೆಯೂ ಲೋಕಸಭಾ ಚುನಾವಣೆಯಲ್ಲಿ ಹೊಡೆತ ಕೊಡುತ್ತದೆ ಎಂಬ ಪ್ರಜ್ಞೆ ಸರ್ಕಾರ ನಡೆಸುವವರಿಗೂ ಇರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.