ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಜಲದ ದಾಹ ತೀರಿಸುವ ಬಗೆ...

ಲಭ್ಯ ಸಂಪನ್ಮೂಲದಲ್ಲೇ ಬರಕ್ಕೆ ಶಾಶ್ವತ ಪರಿಹಾರ ರೂಪಿಸುವ ಬಹುದೊಡ್ಡ ಸವಾಲಿದೆ
Last Updated 2 ಮೇ 2019, 20:30 IST
ಅಕ್ಷರ ಗಾತ್ರ

ಬರದ ಭೀಕರ ಛಾಯೆ ರಾಜ್ಯದ ಬಹುತೇಕ ಭಾಗವನ್ನು ಆವರಿಸಿದ್ದರೂ, ಚುನಾವಣೆ ಭರಾಟೆಯಲ್ಲಿ ಈ ವಿಷಯದ ಚರ್ಚೆ ಮುನ್ನೆಲೆಗೆ ಬಂದಿಲ್ಲ. ಕಳೆದ ವರ್ಷ ಮಳೆಯ ತೀವ್ರ ಕೊರತೆಯಾಗಿತ್ತು. ಇದರಿಂದ ಸರ್ಕಾರ ಈ ಬಾರಿ ಬರದ ಸಾಧ್ಯತೆಯನ್ನು ನಿರೀಕ್ಷಿಸಿ, ಅದರ ನಿರ್ವಹಣೆಗೆ ತಯಾರಿ ಮಾಡಿಕೊಂಡಿರಬೇಕಿತ್ತು. ಆದರೆ ರಾಜಕೀಯ ನಾಯಕರು, ಅಧಿಕಾರಿ ವರ್ಗದ ಅಸಡ್ಡೆ ಹಾಗೂ ದೂರದೃಷ್ಟಿಯ ಕೊರತೆಯಿಂದ ಮತ್ತೆ ಮತ್ತೆ ಬರದ ಹೊಡೆತ ಅನುಭವಿಸಬೇಕಾದವರು ಎಂದಿನಂತೆ ಗ್ರಾಮೀಣ ಪ್ರದೇಶದ ಜನರೇ. 2015-16ನೇ ಸಾಲಿನಲ್ಲಿ ರಾಜ್ಯದ ಶೇ 90ಕ್ಕೂ ಹೆಚ್ಚು ಪ್ರದೇಶಗಳು ಬರದ ವಿಕೋಪಕ್ಕೆ ಒಳಪಟ್ಟಿದ್ದವು. ಮಹಿಳೆಯರು ತಲೆ ಮೇಲೆ ಬಿಂದಿಗೆ ಹೊತ್ತು ನೀರಿಗಾಗಿ ಮೈಲಿಗಟ್ಟಲೆ ನಡೆಯಬೇಕಾದ ಮತ್ತು ತಳದಲ್ಲಿದ್ದ ಅಲ್ಪಸ್ವಲ್ಪ ನೀರಿಗಾಗಿ ತೆರೆದ ಬಾವಿಗೇ ಇಳಿದ ಭೀಕರ ಚಿತ್ರಗಳು ಇನ್ನೂ ನೆನಪಿನಿಂದ ಮಾಸುವ ಮುನ್ನವೇ, ಹೆಚ್ಚುಕಡಿಮೆ ಅಂತಹುದೇ ತೀವ್ರತೆಯ ಬರ ಮತ್ತೆ ಬಂದಿದೆ.

ಬರ ನಿರ್ವಹಣಾ ಕಾರ್ಯಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಯಿತೆಂದು ಅಧಿಕಾರಿಗಳು ಹೇಳಿದ್ದು ಕುಂಟು ನೆಪವಷ್ಟೆ. ಯಾವ ಚುನಾವಣೆಯೂ ಇಲ್ಲದ ವರ್ಷಗಳಲ್ಲಿ ಸರ್ಕಾರ ಬರ ಪರಿಸ್ಥಿತಿಯನ್ನು ಪರಿಣಾಮ ಕಾರಿಯಾಗಿ ನಿರ್ವಹಿಸಿದ್ದಾಗಲೀ, ಅದರಿಂದ ಪಾಠ ಕಲಿತದ್ದಾಗಲೀ, ನಿರ್ವಹಣೆಯ ಶಾಶ್ವತ ಯೋಜನೆಗಳನ್ನು ರೂಪಿಸಿದ್ದಾಗಲೀ ಅಷ್ಟರಲ್ಲೇ ಇದೆ.

ಕಳೆದ ಸುಮಾರು ನೂರು ವರ್ಷಗಳಲ್ಲಿ (1906-2005) 0.740 ಸೆಲ್ಸಿಯಸ್ ತಾಪಮಾನ ಏರಿರುವುದನ್ನು ಐಪಿಸಿಸಿ (ಇಂಟರ್‌ಗವರ್ನಮೆಂಟಲ್‌ ಪ್ಯಾನಲ್‌ ಆನ್‌ ಕ್ಲೈಮೇಟ್‌ ಚೇಂಜ್‌) ಖಚಿತಪಡಿಸಿದೆ. 2100ನೇ ಇಸವಿಯಷ್ಟು ಹೊತ್ತಿಗೆ ಅದು 2.40ರಿಂದ 6.40ರಷ್ಟು ಹೆಚ್ಚಲಿದೆ ಎಂದು ಹೇಳಿದೆ. ಈ ತೀವ್ರ ತಾಪಮಾನ ಏರಿಕೆಯಿಂದ ಮುಂಬರುವ ವರ್ಷಗಳಲ್ಲಿ ಬರದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಶೇ 66ಕ್ಕೂ ಹೆಚ್ಚು ಎಂದು ಐಪಿಸಿಸಿ ಅಂದಾಜಿಸಿದೆ. ಅದರಿಂದಾಗುವ ದುಷ್ಪರಿಣಾಮಗಳನ್ನು ಎದುರಿಸಲು ಆಮೂಲಾಗ್ರ ಯೋಜನೆಗಳನ್ನು ಹಾಕಿಕೊಳ್ಳದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ.

ಈಗ ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ, ಬರ ಪರಿಸ್ಥಿತಿಗೆ ಶಾಶ್ವತ ಪರಿಹಾರಗಳನ್ನು ರೂಪಿಸುವುದು. ಭೂಮಿಯ ಮೇಲೆ ಇರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗದೆ, ಪ್ರಪಂಚದಲ್ಲಿ ಲಕ್ಷಾಂತರ ಜನ ಕನಿಷ್ಠ ಅಗತ್ಯಗಳೂ ದೊರೆಯದೆ ಪರಿತಪಿಸುವುದನ್ನು ಕಂಡಾಗ ಸಂಕಟವಾಗುತ್ತದೆ. ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನಗರೀಕರಣ ಮತ್ತು ಕೈಗಾರಿಕೆಗಳು ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಬೇಡುತ್ತಿದ್ದು, ನೀರಿನ ಬವಣೆ ಎಲ್ಲವನ್ನೂ ಮೀರಲಿದೆ.

ಭಾರತದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ, ಬರಪೀಡಿತ ರಾಜ್ಯವೆಂದೇ ಹೇಳಬಹುದು. ಆದರೂ ಇಲ್ಲಿ ಬೀಳುವ ಸುಮಾರು 3,438 ಟಿಎಂಸಿ ಅಡಿಯಷ್ಟು ಮಳೆ ನೀರಿನಲ್ಲಿ ನಾವು ಉಪಯೋಗಿಸಲು ಶಕ್ತವಾಗಿರುವುದು 1,695 ಟಿಎಂಸಿ ಅಡಿ ಮಾತ್ರ. ಇನ್ನೂ ಹೆಚ್ಚಿನ ನೀರನ್ನು ಉಪಯೋಗಿಸಿಕೊಳ್ಳಲು ಅಣೆಕಟ್ಟುಗಳು, ಕಾಲುವೆಗಳು, ನೀರಿನ ಸಂಪರ್ಕ ಜಾಲ ಇತ್ಯಾದಿಗಳನ್ನು ನಿರ್ಮಾಣ ಮಾಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸ. ಆದರೆ, ಅದು ಅಸಾಧ್ಯವಾದುದಲ್ಲ. ಜೊತೆಗೆ, ಜೀವವಾಹಿನಿಯಾದ ಪಶ್ಚಿಮಘಟ್ಟವನ್ನು ಕಾಪಾಡಿಕೊಳ್ಳುವುದು ಬರ ನಿರ್ವಹಣೆಯ ಹಾದಿಯಲ್ಲಿ ಮಹತ್ತರ ಕಾರ್ಯವಾಗುತ್ತದೆ. ಮಳೆ ಕಡಿಮೆ ಬೀಳುವುದರಿಂದ, ನೀರು ಹಿಂಗುವಿಕೆಯ ಪ್ರದೇಶಗಳು ಕುಗ್ಗುತ್ತಿರುವುದರಿಂದ ಮತ್ತು ಬಹುಪಾಲು ಪ್ರದೇಶ ಗಡಸು ಕಲ್ಲುಗಳಿಂದ ಕೂಡಿರುವುದರಿಂದ ರಾಜ್ಯದ ಅಂತರ್ಜಲ ಪ್ರಮಾಣವೂ ಕಡಿಮೆಯೇ. ಅಂದರೆ ಸುಮಾರು 524 ಟಿಎಂಸಿ ಅಡಿಯಷ್ಟು ಅಂತರ್ಜಲ ಲಭ್ಯತೆ ಕುಸಿದಿರುವುದೂ ಬರ ನಿರ್ವಹಣೆಯಲ್ಲಿ ಒಂದು ತೊಡಕು.

ಬರ ಎದುರಾದಾಗಲೆಲ್ಲಾ ಸಾಮಾನ್ಯವಾಗಿ ಕೇಳಿಬರುವ ಸಲಹೆಗಳೆಂದರೆ ನದಿಗಳ ಜೋಡಣೆ, ನದಿ ಮಾರ್ಗ ಬದಲಾವಣೆ, ಅಂತರ್ಜಲ ವೃದ್ಧಿಗೆ ಕ್ರಮಗಳು, ನೀರಿನ ಮಿತ ಬಳಕೆ, ಪುನರ್ಬಳಕೆ ಇತ್ಯಾದಿ. ಇವೆಲ್ಲವೂ ಪರಿಣಾಮಕಾರಿಯಾದ ಮಾರ್ಗಗಳೇ ಆದರೂ ನಾವು ಒಂದು ಪ್ರಮುಖವಾದ ವಿಷಯವನ್ನು ಮರೆಯುತ್ತೇವೆ. ಅದೆಂದರೆ, ಇವೆಲ್ಲವುಗಳ ನೀರಿನ ಮೂಲ ಮಳೆಯೇ ಆಗಿದೆ. ಒಂದು ವೇಳೆ ಮಳೆ ಸತತವಾಗಿ ಹಲವಾರು ವರ್ಷ ಕೈ ಕೊಟ್ಟರೆ? ಎಲ್ಲಿಯ ನದಿ, ಎಲ್ಲಿಯ ಅಂತರ್ಜಲ! ಎಲ್ಲವೂ ಭಣಭಣ. ಹಾಗಾಗಿ ಮನುಕುಲವನ್ನು ಭೂಮಿಯಿಂದ ಅಳಿಸಿಹಾಕಲು (ಡೈನೊಸಾರ್‌ಗಳು ನಾಮಾವಶೇಷ ಆದ ಹಾಗೆ) ದೊಡ್ಡ ವಿಕೋಪಗಳೇನೂ ಅಪ್ಪಳಿಸಬೇಕಿಲ್ಲ, ಸದ್ದಿಲ್ಲದೆ ಮಳೆ ಬರುವುದು ನಿಂತರೆ ಸಾಕು! 1998-2012ರ ಅವಧಿಯಲ್ಲಿ ಮಧ್ಯಪ್ರಾಚ್ಯದ ಮೆಡಿಟರೇನಿಯನ್ ಪ್ರಾಂತ್ಯದಲ್ಲಿ ಎರಗಿದ ಬರ, ಕಳೆದ 900 ವರ್ಷಗಳ ಇತಿಹಾಸದಲ್ಲೇ ಕಂಡು ಕೇಳರಿಯದ ವಿಕೋಪವಾಗಿದ್ದು, ಅಲ್ಲಿನ ಜೀವಜಾಲವನ್ನೇ ಅಳಿಸಿಹಾಕುವಷ್ಟು ಭೀಕರವಾಗಿತ್ತೆಂದು ‘ನಾಸಾ’ ಹೇಳಿದೆ. 1770ರ ಬಂಗಾಳ ಕ್ಷಾಮ ಮತ್ತು 1876ರಿಂದ 1899ರ ಅವಧಿಯಲ್ಲಿ ಭಾರತದ ಅನೇಕ ಕಡೆ ಉಂಟಾದ ಕ್ಷಾಮದಿಂದ ಲಕ್ಷಾಂತರ ಜನ ಅಸುನೀಗಿದ್ದನ್ನು ಮರೆಯಲು ಸಾಧ್ಯವೇ? ಹದಿನೇಳು, ಹದಿನೆಂಟನೆಯ ಶತಮಾನ
ವಿರಲಿ, ಇಂದಿನ ತಾಂತ್ರಿಕ ಯುಗದಲ್ಲೂ ಭಾರತದಂತಹ ದೇಶಗಳು ಬರ ಪರಿಸ್ಥಿತಿ ನಿರ್ವಹಿಸಲು ಹೆಣಗಾಡುತ್ತಿವೆ.

ಇಂತಹ ವಿಷಮ ಸನ್ನಿವೇಶಗಳಲ್ಲಿ ಮನುಷ್ಯನಿಗೆ ನೀರಿನ ಆಸರೆಯೊಂದು ಸದಾ ಲಭ್ಯವಿದೆ. ಭೂಮಿಯ ಮುಕ್ಕಾಲು ಭಾಗ ಆವರಿಸಿರುವ, ಭೂಮಿ ಇರುವವರೆಗೆ ಬತ್ತದ ಅಗಾಧ ಜಲರಾಶಿಯ ಕಣಜವಾದ ಸಮುದ್ರವೇ ಆ ಆಸರೆ. ಈ ನೀರನ್ನು ಕುಡಿಯುವ ನೀರಿಗಾಗಿ, ಸ್ವಲ್ಪ ಮಟ್ಟಿನ ಕೃಷಿಗೆ ಬಳಸಿಕೊಳ್ಳಲು ಸಾಧ್ಯವಾಗಿದ್ದರೆ, ಬರದ ಭೀಕರತೆಯನ್ನು ತಗ್ಗಿಸಬಹುದಾಗಿತ್ತು. ಆದರೆ ಆ ದಿಸೆಯಲ್ಲಿ ನಾವು ಗಂಭೀರವಾಗಿ ಯೋಚಿಸುವುದೇ ಇಲ್ಲ. ಏಕೆಂದರೆ ಮಳೆ ಬಂದೇಬರುತ್ತದೆಂಬ ನಂಬಿಕೆಯಿಂದ!ಸಮುದ್ರದ ಉಪ್ಪುನೀರಿನಲ್ಲಿ ಲೀಟರ್‌ಗೆ ಸುಮಾರು 10,000 ಮಿ.ಗ್ರಾಂ. ಲವಣಾಂಶ ಇರುತ್ತದೆ. ಅದನ್ನು 1,500 ಮಿ.ಗ್ರಾಂ.ಗೆ ಇಳಿಸಿದರೆ ಸಾಕು, ಅದು ಬಳಕೆಗೆ ಯೋಗ್ಯವಾಗುತ್ತದೆ. ಅದಕ್ಕೆ ತಾಂತ್ರಿಕತೆಯೂ ಲಭ್ಯವಿದೆ. ಈ ನೀರನ್ನು ಅವಶ್ಯವಿರುವ ಕಡೆ ಸರಬರಾಜು ಮಾಡುವುದೇ ದೊಡ್ಡ ಸವಾಲಾದ್ದರಿಂದ, ಸರ್ಕಾರಗಳು ಸಮುದ್ರದ ನೀರಿನ ಉಪಯೋಗಕ್ಕೆ ಹಿಂದೇಟು ಹಾಕುತ್ತವೆ. ಆದರೆ ಬರ ಬಂದಾಗ ಪರದಾಡುತ್ತವೆ.

ಇಸ್ರೇಲ್‍ನ ಒಟ್ಟಾರೆ ನೀರಿನ ಬಳಕೆಯ ಶೇ 30ಕ್ಕೂ ಹೆಚ್ಚಿನ ಭಾಗ ನಿರ್ಲವಣೀಕರಿಸಿದ ಸಮುದ್ರದ ನೀರೇ ಆಗಿದ್ದು, ಅದರ ಉಪಯೋಗದ ಪ್ರಮಾಣ 2025ರ ಹೊತ್ತಿಗೆ ಶೇ 75ಕ್ಕೆ ಹೆಚ್ಚಲಿದೆ. ಸೌದಿ ಅರೇಬಿಯಾ ತನ್ನ ದೊಡ್ಡ ನಗರಗಳಿಗೆನಿರ್ಲವಣೀಕರಣಗೊಂಡ ನೀರನ್ನೇ ಸಂಪೂರ್ಣವಾಗಿ ಸರಬರಾಜು ಮಾಡುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಇದರ ಉಪಯೋಗ ಹೆಚ್ಚುತ್ತಿದ್ದು, ಬರ ನಿರ್ವಹಣೆಗೆ ಇದು ಶಾಶ್ವತ ಪರಿಹಾರವಾಗಬಲ್ಲದು. ಸೌರಶಕ್ತಿಯ ಬಳಕೆಯೂ ನಿರ್ಲವಣೀಕರಣ ಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.

ಕರ್ನಾಟಕದಲ್ಲಿ ಸುಮಾರು 300 ಕಿ.ಮೀ.ನಷ್ಟು ಉದ್ದದ ತೀರ ಪ್ರದೇಶವಿದೆ. ಹೀಗಾಗಿ, ಸಮುದ್ರದ ನೀರಿನ ನಿರ್ಲವಣೀಕರಣಕ್ಕೆ ಹೇರಳ ಅವಕಾಶವಿದೆ. ಆ ನೀರನ್ನು ಪೈಪ್‍ಗಳ ಮೂಲಕ ಅಗತ್ಯವಿರುವ ಭಾಗಗಳಿಗೆ ಸರಬರಾಜು ಮಾಡುವ, ಶೇಖರಿಸುವ ಮತ್ತು ಹಂಚುವ ನೀರಿನ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸುವ ಶಾಶ್ವತ ಯೋಜನೆಗಳು ಇಂದಿನ ಮತ್ತು ಭವಿಷ್ಯದ ಬರ ಪರಿಸ್ಥಿತಿಯನ್ನು ಎದುರಿಸಲು ಅತ್ಯಂತ ಪರಿಣಾಮಕಾರಿ ಹಾಗೂ ಗುರುತರವಾದ ಕಾರ್ಯಕ್ರಮಗಳಾಗಬಲ್ಲವು.

ಲೇಖಕ: ಭೂವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT