ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಗ್ಯಾರಂಟಿ ಪಟ್ಟಿಗೆ ಸೇರಲಿ ಶಿಕ್ಷಣ..

ಶೈಕ್ಷಣಿಕ ಸಮಾನತೆಯ ಅನುಷ್ಠಾನ ಸರ್ಕಾರದ ಆದ್ಯತೆಯಾಗಬೇಕಿದೆ
Published 15 ಡಿಸೆಂಬರ್ 2023, 19:20 IST
Last Updated 15 ಡಿಸೆಂಬರ್ 2023, 19:20 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿದೆ. ರಾಜ್ಯ ಶಿಕ್ಷಣ ನೀತಿಯ ನಿರೂಪಣೆಗೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಆಳವಾದ ಅಧ್ಯಯನದ ಜೊತೆಗೆ, ಸಾಮಾಜಿಕ, ಪ್ರಾದೇಶಿಕ ಮತ್ತು ಆರ್ಥಿಕ ವೈವಿಧ್ಯಗಳ ವಾಸ್ತವಿಕತೆಯ ಅರಿವು ಅಗತ್ಯ. ಏಕರೂಪಿಯಲ್ಲದ ಭಾರತೀಯ ಸಮಾಜದಲ್ಲಿ ಬಹುತ್ವದ ಬುನಾದಿಯನ್ನು ಅರ್ಥಮಾಡಿಕೊಂಡು ಯಾವುದೇ ನೀತಿ ನಿರೂಪಣೆಯನ್ನು ಮಾಡಬೇಕಾಗುತ್ತದೆ.

ರಾಜ್ಯ ಸರ್ಕಾರವು ರಚಿಸಿರುವ ಸದರಿ ಸಮಿತಿಯಲ್ಲಿ ವಿಷಯತಜ್ಞರ ಒಂದು ಪಟ್ಟಿಯನ್ನು ಕೊಡಲಾಗಿದೆ. ನನ್ನ ವಿನಮ್ರ ತಿಳಿವಳಿಕೆಯೆಂದರೆ- ಪಠ್ಯಕ್ರಮ ಚೌಕಟ್ಟನ್ನು ರೂಪಿಸಲು ವಿವಿಧ ವಿಷಯತಜ್ಞರ ಅಗತ್ಯವಿರುತ್ತದೆ. ಶಿಕ್ಷಣ ನೀತಿಯನ್ನು ರೂಪಿಸಲು ಈ ಮೊದಲು ನಾನು ಹೇಳಿದ ಅಂಶಗಳನ್ನು ಆಧರಿಸಿದ ನೆಲೆ- ನಿಲುವುಗಳ ಅಗತ್ಯ ಇರುತ್ತದೆ. ಶಿಕ್ಷಣ ನೀತಿಯ ಆದ್ಯತೆಗಳೇನು ಎಂಬುದು ತುಂಬಾ ಮುಖ್ಯವಾಗುತ್ತದೆ.

ನನ್ನ ಅಭಿಪ್ರಾಯದಲ್ಲಿ, ಶೈಕ್ಷಣಿಕ ಸಮಾನತೆಯೇ ಶಿಕ್ಷಣ ನೀತಿಯ ಆದ್ಯತೆಯಾಗಬೇಕು. ಆದರೆ ಸಮಾನತೆಯ ತಾತ್ವಿಕತೆಯನ್ನು ಬಿಟ್ಟು ತಾಂತ್ರಿಕ ಅಂಶಗಳೇ ಮೇಲುಗೈ ಪಡೆದಿರುವುದು ನಮ್ಮ ಕಣ್ಣೆದುರಿನ ಸಮಕಾಲೀನ ಸತ್ಯ. ಈಗ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಗಮನಿಸೋಣ. ಮೊದಲು ನಾಲ್ಕು ವರ್ಷ ಪ್ರಾಥಮಿಕ, ನಾಲ್ಕು ವರ್ಷ ಮಾಧ್ಯಮಿಕ, ಮೂರು ವರ್ಷ ಪ್ರೌಢಶಾಲೆ ಎಂದು ತರಗತಿಗಳ ತಾಂತ್ರಿಕ ವಿಂಗಡಣೆ ಮಾಡಲಾಗಿತ್ತು. ಆನಂತರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯನ್ನು ಏಳು ತರಗತಿಗಳಿಗೆ ಮಿತಿಗೊಳಿಸಲಾಯಿತು. ಎಂಟರಿಂದ ಹತ್ತನೇ ತರಗತಿಯವರೆಗೆ ಪ್ರೌಢಶಾಲೆ ಎನ್ನಲಾಯಿತು. ಆಮೇಲೆ ಕಿರಿಯ ಪ್ರಾಥಮಿಕವನ್ನು ಐದನೇ ತರಗತಿಯವರೆಗೆ ವಿಸ್ತರಿಸಲಾಯಿತು. ಹೀಗೆ ತರಗತಿಯ ವರ್ಷಾವಧಿಗಳನ್ನು ತಾಂತ್ರಿಕವಾಗಿ ವಿಂಗಡಿಸಲು ಇದ್ದ ತಾತ್ವಿಕ ಕಾರಣಗಳು ಸ್ಪಷ್ಟವಿಲ್ಲ. ಅದಕ್ಕಿಂತ ಮುಖ್ಯವಾಗಿ, ಹಿಂದೆ ಇದ್ದ ವಿಂಗಡಣೆಯಲ್ಲಿದ್ದ ಕೊರತೆಗಳೇನು, ತೊಂದರೆಗಳೇನು ಎಂಬುದಕ್ಕೆ ದೃಢವಾದ ಕಾರಣಗಳಿಲ್ಲ.

ಒಂದು ವರ್ಷದ ಪಿಯುಸಿಯನ್ನು ಎರಡು ವರ್ಷಗಳ ಪ್ರತ್ಯೇಕ ಘಟಕ ಮಾಡಿದ್ದಕ್ಕೆ ಸಮರ್ಥನೀಯ ಕಾರಣವಿತ್ತು. ಈ ಪದವಿಪೂರ್ವ ಘಟಕವು ಪ್ರೌಢಶಾಲೆ ಮತ್ತು ಸಾಮಾನ್ಯ ಪದವಿ ಹಾಗೂ ವೃತ್ತಿಪರ ಶಿಕ್ಷಣದ ನಡುವಿನ ಸ್ಥಿತ್ಯಂತರದ ಹಂತವಾಗಿ ತನ್ನದೇ ಮಹತ್ವ ಪಡೆದಿದೆ. ಬಾಲ್ಯವನ್ನು ಮೀರಿದ, ಯೌವನಕ್ಕೆ ಸಮೀಪಿಸಿದ ವಯೋಮಾನದ ನಡುವೆ ನಿಂತ ವಿದ್ಯಾರ್ಥಿ ಮನಸ್ಸುಗಳನ್ನು ಭವಿಷ್ಯದ ಶೈಕ್ಷಣಿಕ ಹಂತಕ್ಕೆ ಸಿದ್ಧಗೊಳಿಸುವ ಹಂತವಾಗಿ ಪದವಿಪೂರ್ವ ಘಟಕ ಮುಖ್ಯವಾದುದು. ಮುಂದೆ ಸಾಮಾನ್ಯ ಪದವಿಯ ಮೂರು ವರ್ಷ, ಸ್ನಾತಕೋತ್ತರ ಪದವಿಯ ಎರಡು ವರ್ಷ ಪ್ರಾಯೋಗಿಕವಾಗಿ ಸರಿಯಾಗಿತ್ತು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ನಾಲ್ಕು ಹಂತವಾಗಿ ವಿಂಗಡಿಸಲಾಗಿದೆ. ಅಂಗನವಾಡಿಯಿಂದ ಎರಡನೇ ತರಗತಿಯವರೆಗೆ ತಳಹದಿಯ ಹಂತ, 3ರಿಂದ 5ನೇ ತರಗತಿಯವರೆಗೆ ಸಿದ್ಧತಾ ಹಂತ, 6ರಿಂದ 8 ಮಾಧ್ಯಮಿಕ ಹಂತ, 9ರಿಂದ 12ರವರೆಗೆ ಸೆಕೆಂಡರಿ ಹಂತ, ಕೊನೆಯ ಈ ಹಂತದ ಪ್ರಕಾರ, ಪದವಿ ಪೂರ್ವ ಶೈಕ್ಷಣಿಕ ಘಟಕವು ಶಾಲಾ ಶಿಕ್ಷಣದ ಭಾಗವಾಗಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ವಿಪರ್ಯಾಸದ ಸಂಗತಿಯೆಂದರೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ‘ರದ್ದು ಮಾಡಲು ಬದ್ಧವಾಗಿರುವುದಾಗಿ ಹೇಳುವ’ ಕಾಂಗ್ರೆಸ್ ನೇತೃತ್ವದ ಸರ್ಕಾರವೂ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳಲ್ಲಿ ಇದೇ ಮಾದರಿಯನ್ನು ಅನುಸರಿಸುತ್ತಿದೆ!

ಇನ್ನು ಪದವಿ ಶಿಕ್ಷಣಕ್ಕೆ ಬಂದರೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಏಕಕಾಲಕ್ಕೆ ಮೂರು ಮತ್ತು ನಾಲ್ಕು ವರ್ಷಗಳ ಪದವಿ ಹಂತ, ಒಂದು ಮತ್ತು ಎರಡು ವರ್ಷಗಳ ಸ್ನಾತಕೋತ್ತರ ಹಂತವೆಂದು ವಿಂಗಡಿಸಲಾಗಿದೆ. ಮೂರು ವರ್ಷದ ಪದವಿ ಪೂರೈಸಿದವರು ಎರಡು ವರ್ಷ ಮತ್ತು ನಾಲ್ಕು ವರ್ಷದ ಪದವಿ ಓದಿದವರು ಒಂದು ವರ್ಷದ ಸ್ನಾತಕೋತ್ತರ ಶಿಕ್ಷಣ ಪಡೆಯಬಹುದು. ನಾನಿಲ್ಲಿ ಪಠ್ಯಕ್ರಮದ ವಿಷಯಕ್ಕೆ ಹೋಗುವುದಿಲ್ಲ. ಅದು ಪ್ರತ್ಯೇಕವಾದ ಚಿಂತನೆಯ ವಿಷಯ. ನನ್ನ ಮುಖ್ಯ ಪ್ರಶ್ನೆಯೆಂದರೆ- ಹಿಂದಿನಿಂದ ಇಂದಿನವರೆಗಿನ ಸರ್ಕಾರಗಳು ಹೀಗೆ ತರಗತಿಗಳ ತಾಂತ್ರಿಕ ವಿಂಗಡಣೆ ಮಾಡಿ ಸಾಧಿಸಿದ್ದು ಏನು? ಶೈಕ್ಷಣಿಕ ಸಮಾನತೆಯ ತಾತ್ವಿಕತೆಗಿಂತ ಈ ತಾಂತ್ರಿಕತೆಯೇ ‘ಆದ್ಯತೆ’ಯಾದದ್ದು ತಪ್ಪಲ್ಲವೆ?

ತರಗತಿಗಳ ತಾಂತ್ರಿಕ ವಿಂಗಡಣೆಯ ಜೊತೆಗೆ ‘ತಂತ್ರಜ್ಞಾನ’ಕ್ಕೆ ಆದ್ಯತೆ ಕೊಡಲಾಗುತ್ತಿದೆ. ತಂತ್ರಜ್ಞಾನವನ್ನು ಎಲ್ಲಿ, ಹೇಗೆ ಮತ್ತು ಎಷ್ಟು ಬಳಸಬೇಕು ಎಂಬ ವಿವೇಕ ಮುಖ್ಯವಾಗಬೇಕಾಗಿದೆ. ತರಗತಿಗಳಲ್ಲಿ ತಂತ್ರಜ್ಞಾನವನ್ನು ಹಿತಮಿತವಾಗಿ ಬಳಸಬೇಕೇ ಹೊರತು ಒಂದು ಆದ್ಯತೆಯಾಗಬಾರದು. ತರಗತಿಯೆನ್ನುವುದು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಜ್ಞಾನ ಸಂವಾದದ ಸೇತುಬಂಧ. ಆದರೆ ಈಗ ತಂತ್ರಜ್ಞಾನವು ‘ಜ್ಞಾನ’ಕ್ಕಿಂತ ಹೆಚ್ಚಾಗಿ ಉದ್ಯಮದ ‘ತಂತ್ರ’ವಾಗಿಬಿಟ್ಟಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಶೇ 40ರಷ್ಟು ಆನ್‍ಲೈನ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿ, ತಂತ್ರ ಜ್ಞಾನೋದ್ಯಮಕ್ಕೆ ಒತ್ತು ಕೊಟ್ಟಿದೆ. ಅಷ್ಟೇಕೆ, ರಾಜ್ಯ ಸರ್ಕಾರದ ಕೆಲ ಸಚಿವರ ಹೇಳಿಕೆಗಳನ್ನು ಗಮನಿಸಿದರೆ, ಶಿಕ್ಷಣವು ಉದ್ಯಮಕ್ಕೆ ಅನುಗುಣವಾಗಿ ಇರಬೇಕೆಂಬುದು ‘ನೀತಿ’ಯಾಗಿಬಿಟ್ಟಿದೆ. ಶಿಕ್ಷಣವು ‘ಸೇವಾಕ್ಷೇತ್ರ’ ಎಂಬ ಪರಿಕಲ್ಪನೆಯನ್ನು ಪಲ್ಲಟಗೊಳಿಸಲಾಗಿದೆ.

ಹೀಗೆ ಆದ್ಯತೆಗಳನ್ನು ಪಲ್ಲಟಗೊಳಿಸುವ ‘ಜ್ಞಾನೋದ್ಯಮ’ ಪರಿಕಲ್ಪನೆಯು ಉದ್ಯಮಿಗಳಂತೆಯೇ ಸರ್ಕಾರಗಳಿಗೂ ಪ್ರಿಯವಾಗಿದ್ದು, ಶೈಕ್ಷಣಿಕ ಸಮಾನತೆಯ ಧ್ಯೇಯ ಹಿಂದಿನ ಸಾಲಲ್ಲಿ ಸುಮ್ಮನೆ ಕೂತುಬಿಟ್ಟಿದೆ! ಈಗ ಶಾಲಾ ಶಿಕ್ಷಣವನ್ನೇ ನೋಡಿ. ಒಂದೇ ವಯಸ್ಸಿನ ಮಕ್ಕಳಲ್ಲಿ ಬಡವರ ಮತ್ತು ತಳಸಮುದಾಯದ ಮಕ್ಕಳಿಗೆ ಅಂಗನವಾಡಿಗಳು ಮತ್ತು ಉಳ್ಳವರಿಗೆ ಎಲ್‌ಕೆಜಿ, ಯುಕೆಜಿ ಎಂಬಂತಾಗಿದೆ. ಬಡವರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಮಾತೃಭಾಷಾ ಮಾಧ್ಯಮ, ಸ್ಥಿತಿವಂತರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ. ರಾಜ್ಯ ಪಠ್ಯಕ್ರಮ ಶಾಲೆಗಳು ಮತ್ತು ಕೇಂದ್ರೀಯ ಪಠ್ಯಕ್ರಮದ ಶಾಲೆಗಳ ನಡುವೆ ಅಗಾಧ ಅಂತರ. ಸರ್ಕಾರವೇ ತನ್ನ ಶಾಲೆಗಳಲ್ಲಿ ತಾರತಮ್ಯ ಮಾಡುವ ನೀತಿಯನ್ನು ಅನುಸರಿಸುತ್ತ ಕೆಲವರಿಗೆ ಮೊರಾರ್ಜಿ, ಡಾ. ಅಂಬೇಡ್ಕರ್, ರಾಣಿ ಚೆನ್ನಮ್ಮ, ನವೋದಯದಂತಹ ಸುಸಜ್ಜಿತ ವಸತಿ ಶಾಲೆಗಳ ಜೊತೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳನ್ನು ಆರಂಭಿಸಿ ಪೂರ್ಣ ಇಂಗ್ಲಿಷ್‌ ಮಾಧ್ಯಮ ಬೋಧನೆಗೆ ಅವಕಾಶ ಕಲ್ಪಿಸಿದೆ. ಈ ಮೂಲಕ ತಾನೇ ಒಪ್ಪಿಕೊಂಡಿರುವ ‘ಕಿರಿಯ ಪ್ರಾಥಮಿಕ ಹಂತದಲ್ಲಿ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮವೆಂಬ ನೀತಿ’ಯನ್ನು ಸ್ವಯಂ ಉಲ್ಲಂಘಿಸಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ 4.11ನೇ ವಿಧಿಯಲ್ಲಿ ಮಾತೃಭಾಷೆ ಮಾಧ್ಯಮವನ್ನು ‘ಸಾಧ್ಯವಾದ ಕಡೆ’ ಅನುಷ್ಠಾನ ಮಾಡಬೇಕೆಂದು ಮಾತ್ರ ಹೇಳಲಾಗಿದೆ. ಶಿಕ್ಷಣ ಮಾಧ್ಯಮದ ವಿಷಯವನ್ನು ಹೊರತುಪಡಿಸಿಯೂ ಶಾಲಾ ಶಿಕ್ಷಣದಲ್ಲಿ ವಿವಿಧ ಮಾದರಿಯ ಶಾಲೆಗಳಿದ್ದು ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ಮೂಲಸೌಕರ್ಯರಹಿತ ಸಾಮಾನ್ಯ ಶಾಲೆಗಳು ಕೆಲವರಿಗೆ ಸುಸಜ್ಜಿತ ಶಾಲೆಗಳು ಎಂಬಂತಾಗಿದೆ. ಸಮಾನ ಶಾಲಾ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಒಂದೇ ವಯಸ್ಸಿನ ಮಕ್ಕಳ ನಡುವೆ ತಾರತಮ್ಯ ಮಾಡಲಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದುಡಿಯುವ ಅತಿಥಿ ಅಧ್ಯಾಪಕರ ಸಮಸ್ಯೆಗೂ ಪರಿಹಾರ ಹುಡುಕದೆ, ಅಗತ್ಯ ಪ್ರಮಾಣದ ಕಾಯಂ ಅಧ್ಯಾಪಕರನ್ನೂ ನೇಮಿಸದೆ ಎಲ್ಲ ಸರ್ಕಾರಗಳೂ ಕಾಲ ತಳ್ಳುತ್ತಿವೆ. ಇಂಥ ಹತ್ತಾರು ಸಮಸ್ಯೆಗಳನ್ನು ಪರಿಹರಿಸಿ ಶೈಕ್ಷಣಿಕ ಸಮಾನತೆಯ ಅನುಷ್ಠಾನವನ್ನು ಸರ್ಕಾರದ ಆದ್ಯತೆಯಾಗಿಸಬೇಕಾಗಿದೆ.

ಈ ದಿಸೆಯಲ್ಲಿ ಶಿಕ್ಷಣ ಕ್ಷೇತ್ರದ ಸಮಾನ ಸಮಗ್ರ ಸುಧಾರಣೆಯು ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿಗಳ ಪಟ್ಟಿಗೆ ಸೇರಬೇಕು. ಅಗತ್ಯ ಅನುದಾನ ಮತ್ತು ಅನುಷ್ಠಾನ ಮುಖ್ಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT