‘ಮತಗಳ್ಳತನ’ದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಾರಂಭಿಸಿರುವ ಆಂದೋಲನವು ಕೇಂದ್ರ ಚುನಾವಣಾ ಆಯೋಗವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಇದು ಸ್ವಾಯತ್ತ ಸ್ವರೂಪದ ಸಾಂವಿಧಾನಿಕ ಸಂಸ್ಥೆಯ ಹಲವು ಒಳಹುಳುಕುಗಳನ್ನು ಹೊರಹಾಕಿದೆ. ಒಂದೊಮ್ಮೆ ಈ ಆಂದೋಲನ ಯಶಸ್ಸನ್ನು ಕಂಡು ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ನಿವಾರಣೆ ಆಗಿಬಿಟ್ಟರೆ, ಇಡೀ ಚುನಾವಣಾ ವ್ಯವಸ್ಥೆ ಪರಿಶುದ್ಧ ಮತ್ತು ಪರಿಪೂರ್ಣವಾಗಲಿದೆ ಎಂದು ಹೇಳಬಹುದೇ?

ಇದಕ್ಕೆ ಮೊದಲು ದೇಶದ 543 ಲೋಕಸಭಾ ಸದಸ್ಯರು ಮತ್ತು ರಾಜ್ಯಗಳ ಒಟ್ಟು 4,123 ವಿಧಾನ
ಸಭಾ ಸದಸ್ಯರನ್ನು ಇನ್ನೊಂದು ಪ್ರಶ್ನೆ ಕೇಳಬೇಕಾಗಿದೆ. ಇವರಲ್ಲಿ ಯಾರಾದರೂ ಒಬ್ಬರು ಮುಂದೆ ಬಂದು ತಮ್ಮ ಆತ್ಮಸಾಕ್ಷಿಯ ಮೇಲೆ ಆಣೆ ಮಾಡಿ ‘ಚುನಾವಣಾ ಆಯೋಗದ ಎಲ್ಲ ನೀತಿ-ನಿಯಮಗಳನ್ನು ಅಕ್ಷರಶಃ ಪಾಲಿಸಿದ್ದೇನೆ. ಉದಾಹರಣೆಗೆ, ಚುನಾವಣಾ ಆಯೋಗದ ನಿಯಮದಂತೆ ಲೋಕಸಭಾ ಚುನಾ
ವಣೆಗೆ ₹95 ಲಕ್ಷ ಮತ್ತು ವಿಧಾನಸಭಾ ಚುನಾವಣೆಗೆ ₹45 ಲಕ್ಷವಷ್ಟೇ ಖರ್ಚು ಮಾಡಿ ಗೆದ್ದು ಬಂದಿದ್ದೇನೆ’ ಎಂದು ಧೈರ್ಯದಿಂದ ಘೋಷಿಸಬಹುದೇ?

ಈ ಪ್ರಶ್ನೆಗೆ ಚುನಾವಣಾ ಸುಧಾರಣೆಗಾಗಿ ಕಳೆದ ಮೂರು ದಶಕಗಳಿಂದ ಶ್ರಮಿಸುತ್ತಿರುವ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್’ (ಎಡಿಆರ್) ನೀಡಿರುವ ವರದಿಗಳಲ್ಲಿ ಉತ್ತರ ಇದೆ. ಎಡಿಆರ್ ವರದಿಗಳ ಪ್ರಕಾರ, ಲೋಕಸಭೆಯಲ್ಲಿರುವ 543 ಸದಸ್ಯರ ಪೈಕಿ 251 ಸದಸ್ಯರ ಮೇಲೆ (ಶೇ 46) ಕ್ರಿಮಿನಲ್ ಕೇಸ್ಗಳಿವೆ. ಇವರಲ್ಲಿ 170 ಸದಸ್ಯರ (ಶೇ 31) ವಿರುದ್ದ ಕೊಲೆ, ಅತ್ಯಾಚಾರ, ಅಪಹರಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದಂತಹ ಗಂಭೀರ ಸ್ವರೂಪದ ಆರೋಪಗಳಿವೆ. ದೇಶದ 27 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 4,123 ಸದಸ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಇವರಲ್ಲಿ 1,203 ಸದಸ್ಯರ ವಿರುದ್ಧ ಕೊಲೆ, ಅತ್ಯಾಚಾರ, ಅಪಹರಣದಂತಹ ಗಂಭೀರ ಆರೋಪಗಳಿವೆ.

ಲೋಕಸಭೆಯ 543 ಸದಸ್ಯರಲ್ಲಿ 504 ಸದಸ್ಯರು ಕೋಟ್ಯಧಿಪತಿಗಳು. ಇವರಲ್ಲಿ ಹತ್ತು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಆದಾಯದ ಸದಸ್ಯರ ಸಂಖ್ಯೆ 227. ಭಾರತದಲ್ಲಿ ಸರಾಸರಿ ತಲಾದಾಯ ₹2,04,200. ಶೇ 50ರಷ್ಟಿರುವತಳಮಟ್ಟದ ಕುಟುಂಬಗಳ ಸರಾಸರಿ ವಾರ್ಷಿಕ ಆದಾಯ ಕೇವಲ ₹53,610. ಇದು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ನಮ್ಮನ್ನು ಪ್ರತಿನಿಧಿಸುತ್ತಿರುವವರ ವ್ಯಕ್ತಿಚಿತ್ರದ ಒಂದು ಕಿರುನೋಟ.

ವಾಸ್ತವ ಸಂಗತಿ ಏನೆಂದರೆ, ದೇಶದ ಇಡೀ ಚುನಾವಣಾ ವ್ಯವಸ್ಥೆಯೇ ರೋಗಗಳ ಗೂಡಾಗಿದೆ. ಇತ್ತೀಚೆಗೆ ಚರ್ಚೆಯಲ್ಲಿರುವ ‘ಮತಗಳ್ಳತನ’, ‘ಎಲೆಕ್ಟ್ರಾನಿಕ್ ಮತಯಂತ್ರಗಳ ದುರುಪಯೋಗ’, ‘ಚುನಾವಣಾ ಬಾಂಡ್ಗಳ ಹಗರಣ’ಗಳೆಲ್ಲವೂ ಒಂದೊಂದು ರೋಗದ ಲಕ್ಷಣಗಳು. ಇದರ ಅರ್ಥ ಹದಿನೈದು ವರ್ಷಗಳ ಹಿಂದೆ ಚುನಾವಣಾ ವ್ಯವಸ್ಥೆ ಸಂಪೂರ್ಣ ಆರೋಗ್ಯಕರವಾಗಿತ್ತು ಎಂದಲ್ಲ. ತುರ್ತು
ಪರಿಸ್ಥಿತಿಯನ್ನು ಘೋಷಿಸುವ ಹಂತಕ್ಕೆ ಇಂದಿರಾಗಾಂಧಿಯವರನ್ನು ತಳ್ಳಿದ್ದು ಕೂಡ ಚುನಾವಣಾ ಅಕ್ರಮದ ಆರೋಪ ಎನ್ನುವುದನ್ನು ಮರೆಯಬಾರದು.

ಕಾಲಕಾಲಕ್ಕೆ ಕೇಂದ್ರದ ಚುನಾಯಿತ ಸರ್ಕಾರಗಳು ಚುನಾವಣಾ ವ್ಯವಸ್ಥೆಗೆ ಬಡಿದಿರುವ ರೋಗಗಳನ್ನು ನಿವಾರಿಸಲು ಚಿಕಿತ್ಸೆ ನೀಡುತ್ತಲೇ ಬಂದಿವೆ. ಕೇಂದ್ರ ಚುನಾವಣಾ ಆಯೋಗದ ಕಪಾಟಿನಲ್ಲಿ ದೂಳು ತಿನ್ನುತ್ತಾ ಬಿದ್ದಿರುವ ಚುನಾವಣಾ ಸುಧಾರಣಾ ವರದಿಗಳೇ ಈ ಪ್ರಯತ್ನಗಳಿಗೆ ಸಾಕ್ಷಿ. ‘ನಾಗರಿಕ ಹಕ್ಕುಗಳ ಆಂದೋಲನದ ಪಿತಾಮಹ’ ಎಂದೇ ಕರೆಯಲಾಗುವ ವಿ.ಎಂ. ತಾರ್ಕುಂಡೆ ನೇತೃತ್ವದ ಸಮಿತಿಯಿಂದ ಹಿಡಿದು, 1990ರ ಇಂದ್ರಜಿತ್ ಗುಪ್ತಾ ನೇತೃತ್ವದ ಸಮಿತಿವರೆಗೆ ಕನಿಷ್ಠ ಏಳು ಸಮಿತಿಗಳು ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಕ್ರಮಗಳನ್ನು ಸೂಚಿಸಿ ವರದಿಗಳನ್ನು ನೀಡಿವೆ. ಇವುಗಳ ಜೊತೆಗೆ ಕಾನೂನು ಆಯೋಗಗಳು ಕೂಡ ಒಂದಷ್ಟು ಶಿಫಾರಸುಗಳನ್ನು ಮಾಡಿವೆ. ಇದರ ನಡುವೆ ನ್ಯಾಯಾಂಗ ಆಗಾಗ ಮಧ್ಯಪ್ರವೇಶಿಸಿ, ಕೆಲವೊಮ್ಮೆ ಕಿವಿ ಹಿಂಡಿ, ಇನ್ನೂ ಕೆಲವೊಮ್ಮೆ ತಲೆಗೆ ಮೊಟಕಿ, ಹಟಮಾರಿ ಶಾಸಕಾಂಗ ಅನಿವಾರ್ಯವಾಗಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವಂತೆ ಮಾಡಿದೆ.

1974ರಲ್ಲಿ ರಚನೆಗೊಂಡ ವಿ.ಎಂ. ತಾರ್ಕುಂಡೆ ನೇತೃತ್ವದ ಚುನಾವಣಾ ಸುಧಾರಣಾ ಸಮಿತಿಯ ಪಾತ್ರ ಬಹುಮುಖ್ಯವಾದುದು. ‘ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಸಮಿತಿ ಮೂಲಕ ಮುಖ್ಯ ಚುನಾವಣಾ ಆಯುಕ್ತರ ನೇಮಕ, ಮತದಾರರ ವಯೋಮಿತಿ 24ರಿಂದ 18 ವರ್ಷಕ್ಕೆ ಇಳಿಕೆ, ಚುನಾವಣಾ ಪ್ರಕ್ರಿಯೆ ಶುರುವಾದ ನಂತರ ಆಡಳಿತಾರೂಢ ಸರ್ಕಾರ ಉಸ್ತುವಾರಿ ಸರ್ಕಾರವಾಗಿ ಕಾರ್ಯ ನಿರ್ವಹಣೆ, ರಾಜಕೀಯ ಪಕ್ಷಗಳು ಲೆಕ್ಕಪತ್ರ ಪರಿಶೋಧಕರಿಂದ ದೃಢೀಕರಿಸಲ್ಪಟ್ಟ ಲೆಕ್ಕಪತ್ರವನ್ನು ಸಾರ್ವಜನಿಕರ ಅವಗಾಹನೆಗೆ ಮುಕ್ತವಾಗಿ ಇಡುವುದು, ಎರಡು ಕ್ಷೇತ್ರಗಳಿಗಿಂತ ಹೆಚ್ಚಿನ ಕಡೆ ಸ್ಪರ್ಧಿಸದಂತೆ ನಿರ್ಬಂಧ, ಸರ್ಕಾರದಿಂದಲೇ ಚುನಾವಣಾ ವೆಚ್ಚವನ್ನು ಭರಿಸುವುದು– ಇವು ತಾರ್ಕುಂಡೆ ಸಮಿತಿ 1975ರಲ್ಲಿ ಸರ್ಕಾರಕ್ಕೆ ನೀಡಿದ್ದ ವರದಿಯಲ್ಲಿನ ಮುಖ್ಯ ಶಿಫಾರಸುಗಳು.

ಇದರ ನಂತರ ಚುನಾವಣಾ ಸುಧಾರಣೆಗಾಗಿಯೇ ನೇಮಕಗೊಂಡ ದಿನೇಶ್ ಗೋಸ್ವಾಮಿ ಸಮಿತಿ (1990), ವೋಹ್ರಾ ಸಮಿತಿ (1993), ವಿ.ಆರ್. ಕೃಷ್ಣ ಅಯ್ಯರ್ ಸಮಿತಿ (1994), ಇಂದ್ರಜಿತ್ ಗುಪ್ತಾ ಸಮಿತಿಗಳು (1998) ಕೂಡ ತಾರ್ಕುಂಡೆ ಸಮಿತಿಯ ಕೆಲವು ಶಿಫಾರಸುಗಳ ಜೊತೆಯಲ್ಲಿ ಹೊಸ ಶಿಫಾರಸುಗಳನ್ನು ನೀಡಿವೆ. ‘ಖಾಸಗಿ ಕಂಪನಿ ಮತ್ತು ಅನಾಮಧೇಯ ಸಂಸ್ಥೆಗಳ ದೇಣಿಗೆಗೆ ನಿಷೇಧ, ರಾಜಕೀಯ ಪಕ್ಷಗಳ ಕಡ್ಡಾಯ ಲೆಕ್ಕಪತ್ರ ಪರಿಶೋಧನೆ, ಸತತ ಎರಡು ಚುನಾವಣೆಗಳಲ್ಲಿ ಶೇ 5ಕ್ಕಿಂತ ಕಡಿಮೆ ಮತಗಳನ್ನು ಪಡೆಯುವ ರಾಜಕೀಯ ಪಕ್ಷಗಳ ನೋಂದಣಿ ರದ್ದತಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ವಿವರ ಘೋಷಣೆ’ ಸೇರಿದಂತೆ ಹೊಸ ಶಿಫಾರಸುಗಳನ್ನು ಈ ಸಮಿತಿಗಳು ನೀಡಿವೆ.

ಇವುಗಳಲ್ಲಿ ಮುಖ್ಯವಾಗಿ, ಮತದಾರರ ಗುರುತು ಚೀಟಿ, ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಮಿತಿ, ಮತದಾರರ ವಯೋಮಾನ ಇಳಿಕೆ. ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ, ಒಬ್ಬ ಅಭ್ಯರ್ಥಿ ಎರಡಕ್ಕಿಂತ ಹೆಚ್ಚಿನ ಕ್ಷೇತ್ರಗಳಿಂದ ಸ್ಪರ್ಧಿಸದಂತೆ ನಿರ್ಬಂಧ ಸೇರಿದಂತೆ ಸಮಿತಿಗಳ ಬಹಳಷ್ಟು ಶಿಫಾರಸುಗಳು ನಿಧಾನವಾಗಿಯಾದರೂ ಜಾರಿಗೆ ಬಂದಿವೆ, ಕೆಲವು ಬಾಕಿ ಇವೆ.

ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿರುವ ಬಹಳ ಮುಖ್ಯವಾದ ಇನ್ನೊಂದು ಚುನಾವಣಾ ಸುಧಾರಣಾ ಕ್ರಮಕ್ಕೆ ಕಾರಣವಾಗಿದ್ದು, 2003ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ.

‘ಸ್ಪರ್ಧಾ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯ ಹಿನ್ನೆಲೆಯನ್ನು ತಿಳಿದುಕೊಳ್ಳುವ ಹಕ್ಕು ಮತದಾರನಿಗಿದೆ. ಈ ಕಾರಣಕ್ಕಾಗಿ ಅಭ್ಯರ್ಥಿಯ ನಾಮಪತ್ರಗಳ ಜೊತೆಯಲ್ಲಿ ತನ್ನ ಕ್ರಿಮಿನಲ್ ಅಪರಾಧಗಳ ವಿವರ, ಆದಾಯ ಮತ್ತು ಸಾಲದ ಲೆಕ್ಕ ಹಾಗೂ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಸಲ್ಲಿಸಬೇಕು’ ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದರ ನಂತರ ಆ ಕಾಲದಲ್ಲಿ ಇನ್ನೂ ಸ್ವತಂತ್ರವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದ ಕೇಂದ್ರ ಚುನಾವಣಾ ಆಯೋಗ ಚುನಾವಣಾ ನಿರ್ವಹಣಾ ನಿಯಮಾವಳಿಗೆ ತಿದ್ದುಪಡಿ ಮಾಡಿ ‘ಅಪರಾಧ ಹಿನ್ನೆಲೆ ಮತ್ತು ಆದಾಯದ ವಿವರ ಘೋಷಣೆಯನ್ನು ಕಡ್ಡಾಯಗೊಳಿಸಿ ಹೊಸ ಮಾರ್ಗದರ್ಶಿಗಳನ್ನು ಜಾರಿಗೊಳಿಸಿತ್ತು.

ತಕ್ಷಣ ಸಿಡಿದೆದ್ದ ಸರ್ವಪಕ್ಷಗಳ ಸಂಸದರ ಒತ್ತಡಕ್ಕೆ ಮಣಿದ ಯುಪಿಎ ಸರ್ಕಾರ, ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಿ ಹೊಸ ಮಾರ್ಗದರ್ಶಿ ಸೂತ್ರವನ್ನು ಸುಗ್ರೀವಾಜ್ಞೆ ಮೂಲಕ ಹೊರಡಿಸಿತ್ತು. ಈ ತಿದ್ದುಪಡಿಯ ಪ್ರಕಾರ ಅಭ್ಯರ್ಥಿಗಳು ಸ್ಪರ್ಧಿಸುವಾಗ ವಿವರ ಸಲ್ಲಿಸುವ ಅಗತ್ಯ ಇರಲಿಲ್ಲ. ಆರಿಸಿ ಬಂದರೆ ಮಾತ್ರ ಲೋಕಸಭಾ ಮತ್ತು ವಿಧಾನಸಭಾ ಅಧ್ಯಕ್ಷರಿಗೆ ಈ ವಿವರಗಳನ್ನು ಸಲ್ಲಿಸಬೇಕಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿ ತನ್ನ ಆದೇಶವನ್ನು ಜಾರಿಗೊಳಿಸಲು ಸೂಚನೆ ನೀಡಿತು.

ಕೇಂದ್ರ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ
ಮೂರ್ತಿಯನ್ನು ಕಿತ್ತುಹಾಕುವುದರಿಂದ ಹಿಡಿದು, ಚುನಾವಣಾ ಬಾಂಡ್ ಜಾರಿವರೆಗೆ ಕಳೆದ ಹನ್ನೆರಡು ವರ್ಷಗಳ ಆಡಳಿತದ ಅವಧಿಯಲ್ಲಿ ಸ್ವಾಯತ್ತ ಸ್ವರೂಪದ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಕೈಗೊಂಬೆ ಮಾಡಿಕೊಳ್ಳಲು ಹೊರಟಿರುವ ಪ್ರಸಕ್ತ ಕೇಂದ್ರ ಸರ್ಕಾರ, ಇತ್ತೀಚೆಗೆ ಸಂವಿಧಾನಕ್ಕೆ 130ನೇ ತಿದ್ದುಪಡಿ ಮಾಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ. ಭ್ರಷ್ಟಾಚಾರ ಅಥವಾ ಗಂಭೀರ ಅಪರಾಧ ಆರೋಪ ಎದುರಿಸುತ್ತಿರುವ ಪ್ರಧಾನಿ ಅಥವಾ ಮುಖ್ಯಮಂತ್ರಿಗಳು ಸತತವಾಗಿ 30 ದಿನಗಳ ಕಾಲ ಬಂಧನದಲ್ಲಿದ್ದರೆ ಅವರನ್ನು ಅಧಿಕಾರದಿಂದ ಕಿತ್ತುಹಾಕುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಮೇಲ್ನೋಟಕ್ಕೆ ಕ್ರಾಂತಿಕಾರಿ ಎನಿಸಿರುವ ಈ ಮಸೂದೆಯ ಹಿಂದೆ ವಿರೋಧ ಪಕ್ಷಗಳನ್ನು ಹಣಿಯುವ ದುರುದ್ದೇಶ ಇರುವುದು ಸ್ಪಷ್ಟವಾಗಿದೆ.

ರಾಜಕೀಯ ಅಪರಾಧೀಕರಣ ಮತ್ತು ಚುನಾವಣೆಯಲ್ಲಿ ಹಣದ ಪ್ರಭಾವವನ್ನು ನಿಯಂತ್ರಣ ಮಾಡುವ ಪ್ರಾಮಾಣಿಕ ಆಶಯವನ್ನು ಕೇಂದ್ರ ಸರ್ಕಾರ ಹೊಂದಿದ್ದರೆ, ಎ.ಬಿ. ವಾಜಪೇಯಿ ಸರ್ಕಾರದ ಅವಧಿಯಲ್ಲಿಯೇ ಕಾನೂನು ಆಯೋಗ (1999) ಮತ್ತು ಸಂವಿಧಾನ ಪುನರ್ ಪರಿಶೀಲನಾ ಆಯೋಗ (2001) ನೀಡಿರುವ ಶಿಫಾರಸನ್ನು ಜಾರಿಗೆ ತರಬೇಕು. ಇದರ ಪ್ರಕಾರ, ಐದು ವರ್ಷಗಳ ಜೈಲು ಶಿಕ್ಷೆಗೆ ಈಡಾಗಿರುವ ಆರೋಪಿಯ ವಿರುದ್ಧ ನ್ಯಾಯಾಲಯಗಳಲ್ಲಿ ಮೇಲ್ಮನವಿ ಇತ್ಯರ್ಥವಾಗಲು ಬಾಕಿ ಇದ್ದರೂ ಅಂತಹವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ.

ಕನಿಷ್ಠ ಈ ಒಂದು ಸುಧಾರಣಾ ಕ್ರಮ ಜಾರಿಗೆ ಬಂದರೆ, ಒಂದೇ ಏಟಿನಲ್ಲಿ ಈಗಿನ ಲೋಕಸಭೆಯ 153 ಸ್ಥಾನಗಳು ಮತ್ತು ವಿಧಾನಸಭೆಗಳ 1,203 ಸದಸ್ಯರ ಸ್ಥಾನಗಳು ಖಾಲಿಯಾಗುತ್ತವೆ. ಪ್ರಭುತ್ವ ದಮ್ಮು–ತಾಕತ್ತು ತೋರಿಸಬೇಕಾಗಿರುವುದು ಇದರಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.