ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಕೇಂದ್ರಿತ ಕೃಷಿಯ ಸವಾಲುಗಳು: ಕಾನೂನು ಮತ್ತು ತಂತ್ರಜ್ಞಾನದ ಸಾಧ್ಯತೆಗಳು

25 ವರ್ಷಗಳ ಮುನ್ನೋಟ
Published 28 ನವೆಂಬರ್ 2023, 23:54 IST
Last Updated 28 ನವೆಂಬರ್ 2023, 23:54 IST
ಅಕ್ಷರ ಗಾತ್ರ

ಬೀಜ ಬಿತ್ತುವ ಸಮಯದಲ್ಲಿ ಆ ಒಂದು ಫಸಲಿನ ಒಟ್ಟಾರೆ ವಿಸ್ತೀರ್ಣ, ಮಾರುಕಟ್ಚೆಗಳ ಆಗುಹೋಗುಗಳು ಮುಂಚಿತವಾಗಿ ರೈತರಿಗೆ ತಿಳಿದಿರುವುದಿಲ್ಲ. ಬೀಜ ಬಿತ್ತಿದ ನಂತರ, ಫಸಲು ಕಟಾವಿಗೆ ಬರುವವರೆಗೂ ಅದನ್ನೇ ಬೆಳೆಸುವ ಕೆಲಸ ಮಾಡಬೇಕೇ ಹೊರತು ಹೆಜ್ಜೆ ಹಿಂದೆ ಹಾಕಲು ಸಾಧ್ಯವಿಲ್ಲ.

ಹಸಿರು ಕ್ರಾಂತಿಯ ದಿನಗಳಲ್ಲಿ ಕೃಷಿಯು ರೈತ ಕೇಂದ್ರಿತವಾಗಿತ್ತು ಎಂದು ಹೇಳಬಹುದು. ದೊಡ್ಡ ನೀರಾವರಿ ಯೋಜನೆಗಳು, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸುಲಭ ಸಾಲದ ವ್ಯವಸ್ಥೆ, ಮಿಶ್ರತಳಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಸರಬರಾಜು, ಅದನ್ನು ಉಪಯೋಗಿಸುವುದು ಹೇಗೆಂದು ತಿಳಿಸುವ ಕೃಷಿ ವಿಭಾಗದ ಸರ್ಕಾರಿ ಯಂತ್ರಾಂಗ ಮತ್ತು ಕನಿಷ್ಠ ಬೆಂಬಲ ಬೆಲೆಯ (ಎಂ.ಎಸ್.ಪಿ) ಚೌಕಟ್ಟು ವಿಕಸನಗೊಳ್ಳುತ್ತಿದ್ದ ಕಾಲವದು. ಆದರೆ, ಕಾಲಾಂತರದಲ್ಲಿ ಸಹಕಾರ ವ್ಯವಸ್ಥೆ ದುರ್ಬಲಗೊಂಡಿತು. ಅರ್ಥವ್ಯವಸ್ಥೆಯ ಉದಾರೀಕರಣದೊಂದಿಗೆ ಮಾರುಕಟ್ಟೆಗಳ ಮಹತ್ವ ಹೆಚ್ಚುತ್ತಾ ಸರ್ಕಾರದ ಪಾಲು ಕುಂಠಿತವಾಗುತ್ತಾ ಹೋಯಿತು. ಮುಂದಿನ ಎರಡೂವರೆ ದಶಕಗಳಲ್ಲಿ ಕೃಷಿ ಕ್ಷೇತ್ರವು ಯಾವ ದಿಕ್ಕಿನಲ್ಲಿ ಹೋಗಬಹುದೆನ್ನುವುದನ್ನು ಯೋಚಿಸುವುದು ಕಷ್ಟವಾದರೂ, ಯಾವ ದಿಕ್ಕಿನತ್ತ ಪಯಣಿಸಿದರೆ ಉತ್ತಮ ಎಂದು ನಾವು ಊಹಿಸಬಹುದು. ಇದನ್ನು ನಾವು ಮೂರು ಭಾಗಗಳಲ್ಲಿ ವಿಭಜಿಸಿ ಪರೀಕ್ಷಿಸಬಹುದು.

ಭೂಮಿ

ಕೃಷಿಗೆ ಬೇಕಿರುವ ಮೂಲಭೂತ ಸಂಪನ್ಮೂಲ – ನೆಲ, ಭೂಮಿ. ನಮ್ಮಲ್ಲಿ ಕೃಷಿಗೆ ಮೀಸಲಾಗಿರುವ ಭೂವಿಸ್ತೀರ್ಣ ದಶಕದಿಂದ ದಶಕಕ್ಕೆ ಕಮ್ಮಿಯಾಗುತ್ತಿದೆ. ಬೆಳೆಯುತ್ತಿರುವ ಜನಸಂಖ್ಯೆಯ ನಡುವೆ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ನಾವು ನಮ್ಮ ದೇಶದ ಆಹಾರ ಭದ್ರತೆಯನ್ನು ಕಾಪಾಡುತ್ತಿರುವುದಲ್ಲದೇ, ರಫ್ತು ಕೂಡಾ ಮಾಡುತ್ತಿದ್ದೇವೆಂದರೆ ಅದಕ್ಕೆ ಕಾರಣ ವೈಜ್ಞಾನಿಕ ಆವಿಷ್ಕಾರಗಳಿಂದಾಗಿ ಉತ್ಪಾದಕತೆ ಹೆಚ್ಚುತ್ತಿರುವುದು. ಆದರೆ ಇನ್ನಷ್ಟು ದಶಕಗಳು ನಮ್ಮ ಜನಸಂಖ್ಯೆ ಬೆಳೆದು ನಂತರ ಒಂದು ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ. ಅಲ್ಲಿಯ ತನಕ ಬೆಳೆಯುತ್ತಿರುವ ಜನಸಂಖ್ಯೆಗೆ ಉದ್ಯೋಗ-ಉಪಾಧಿಗಳನ್ನು ಕಲ್ಪಿಸಬೇಕು. ಇದಕ್ಕೆ ನಗರೀಕರಣವೂ ಕೃಷಿಯೇತರ ಕ್ಷೇತ್ರಗಳ ಬೆಳವಣಿಗೆಯೂ ಆಗಬೇಕು. ಇದಕ್ಕಾಗಿ ಕೃಷಿಯ ಭೂಮಿಯನ್ನೇ ಬಳಸಬೇಕಾಗುತ್ತದೆ. ಉದಾಹರಣೆಗೆ ಹೆದ್ದಾರಿಗಳ ನಿರ್ಮಾಣ, ರೈಲು ಮಾರ್ಗಗಳು, ಹೊಸ ನಗರಗಳು, ಇರುವ ನಗರಗಳ ವಿಸ್ತರಣೆ ಈ ಎಲ್ಲದಕ್ಕೂ ಕೃಷಿ ಭೂಮಿಯನ್ನೇ ಸ್ವಾಧೀನಪಡಿಸಿಕೊಂಡು ಬಳಸಬೇಕು.

ಬಂಜರು ಮತ್ತು ಮರಳುಗಾಡುಗಳನ್ನು ವೈಜ್ಞಾನಿಕ ಅರಿವಿನೊಂದಿಗೆ ಕೃಷಿಯೋಗ್ಯವಾಗಿ ಮಾಡಬಹುದೇ? ಆಗಬಹುದೇನೋ. ಭೂಮಿಯಿಲ್ಲದೆಯೇ ಜಲಸಂಪನ್ಮೂಲದಿಂದ ಬೆಳೆ ಬೆಳೆಯಬಹುದೇ? ಹೈಡ್ರೋಪೋನಿಕ್ಸ್ ಮೂಲಕ ಇದೂ ಸಾಧ್ಯವಿದೆ. ಆದರೆ, ವಿಸ್ತೃತವಾಗಿ ಇದನ್ನು ಎಲ್ಲ ಬಗೆಯ ಬೆಳೆಗಳಿಗೂ ಅಳವಡಿಸುವ ತಂತ್ರಜ್ಞಾನ ನಮ್ಮಲ್ಲಿ ಇನ್ನೂ ಇಲ್ಲ.

ಈ ಎರಡು ಮಾರ್ಗಗಳು ಬಿಟ್ಟರೆ ನಮಗಿರುವ ಮೂರನೇ ಮಾರ್ಗ ಅರಣ್ಯಗಳನ್ನು ಕಡಿದು ಕೃಷಿಯೋಗ್ಯ ಮಾಡುವುದು. ಅದರಿಂದ ಪರಿಸರಕ್ಕೆ ಕುತ್ತು ಎನ್ನುವುದು ಎಲ್ಲರಿಗೂ ತಿಳಿದ ಮಾತೇ. ಹೀಗಾಗಿ ಕೃಷಿಗೆಂದು ಮೀಸಲಿಟ್ಟಿರುವ ಭೂಮಿಯ ಪ್ರಮಾಣ ತೀವ್ರಗತಿಯಲ್ಲಿ ಕಡಿಮೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಾಥಮಿಕ ಆದ್ಯತೆಯಾಗಬೇಕು. ನಮ್ಮ ಆಹಾರ ಭದ್ರತೆಯನ್ನು ಬಲಿಕೊಟ್ಟು ದೊಡ್ಡ ಇಮಾರತುಗಳನ್ನು ನಿರ್ಮಿಸುವುದರಲ್ಲಿ ಅರ್ಥವಿಲ್ಲ. ವ್ಯಾಪಕವಾದ ಅಧ್ಯಯನ ನಡೆಸಿ ನಗರೀಕರಣದ ಗತಿ, ಅದರಿಂದ ಕೃಷಿಯ ಇಳುವರಿ, ಆರ್ಥಿಕತೆಯ ಮೇಲೆ ಆಗುವ ಪರಿಣಾಮವನ್ನು ಅಂದಾಜು ಮಾಡುವುದು ಮುಖ್ಯ. ಆಧುನಿಕತೆಯನ್ನು ಅಪ್ಪಿಕೊಳ್ಳುವಾಗಲೂ ಮೂಲಭೂತ ಸಂಪನ್ಮೂಲಗಳನ್ನು ಕಾಪಿಟ್ಟುಕೊಳ್ಳುವ ಯೋಜನೆ ಮತ್ತು ಅದಕ್ಕೆ ತಕ್ಕ ಕಾನೂನಿನ ಚೌಕಟ್ಟಿನ ಬಗ್ಗೆ ಸರ್ಕಾರ ತುರ್ತಾಗಿ ಯೋಚಿಸಬೇಕು. ಆಹಾರದ ಸ್ವಾವಲಂಬನೆ ಮತ್ತು ಸುರಕ್ಷತೆಯಿಲ್ಲದ ಆರ್ಥಿಕ ಸಮೃದ್ಧಿ ಇದ್ದು ಏನು ಪ್ರಯೋಜನ? ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಭೂಮಿಯ ಮೂಲಭೂತ ಪಾತ್ರವನ್ನು ಗಮನಿಸಿ ಅದನ್ನು ಕಾಪಿಟ್ಟುಕೊಳ್ಳುವುದು ಮುಂದಿನ ಎರಡೂವರೆ ದಶಕಗಳ ಆದ್ಯತೆಗಳಲ್ಲಿ ಒಂದಾಗಬೇಕು.

ಕೃಷಿಗೆ ಮೀಸಲಿಟ್ಟುರುವ ಭೂಮಿಯ ಪ್ರಮಾಣ ಕುಗ್ಗದಿರಬೇಕೆಂದರೆ ಭೂಮಿಯ ಮಾಲೀಕತ್ವ ಮತ್ತು ಅದರ ಉಪಯೋಗದ ದಾಖಲೀಕರಣ, ಗಣಕೀಕರಣ ವಿಸ್ತೃತವಾಗಿ ಆಗಬೇಕು. ಈ ಎಲ್ಲವನ್ನು ಬಾಹ್ಯಾಕಾಶದಿಂದ ಗ್ರಹಿಸುವ ಚಿತ್ರಗಳಿಂದ ದಾಖಲಾತಿಯನ್ನು ಗಟ್ಟಿ ಮಾಡಿ ಭೂಮಿಯನ್ನು ಬೇರೆ ಉಪಯೋಗಕ್ಕಾಗಿ ಪರಿವರ್ತಿಸುವುದನ್ನು ತಡೆಯಬಹುದು.

ಮಾರುಕಟ್ಚೆಗಳು: ರೈತರ ಮಟ್ಟದ ಆರ್ಥಿಕತೆಯಲ್ಲಿ ಮತ್ತೊಂದು ಆಯಾಮ ಮಾರುಕಟ್ಟೆಗೆ ಸಂಬಂಧಿಸಿದ್ದು. ಯಾವುದೇ ವ್ಯಾಪಾರ ಮಾಡುವಾಗ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಸಿಕ್ಕಬಹುದು ಎನ್ನುವ ಅಂದಾಜು ಉತ್ಪಾದಕರಿಗೆ ಇರುತ್ತದೆ. ಹಾಗೂ ಈ ದರಗಳಲ್ಲಿ ಏರುಪೇರಾದಾಗ ಉತ್ಪಾದನೆಯನ್ನು ಹೆಚ್ಚು-ಕಮ್ಮಿ ಮಾಡುವ ಪ್ರಕ್ರಿಯೆಯನ್ನು ನಾವು ನೋಡಿದ್ದೇವೆ. ಒಪೆಕ್ ದೇಶಗಳು ತೈಲೋತ್ಪನ್ನಗಳ ದರವನ್ನು ಉತ್ಪಾದನೆಯ ಏರುಪೇರಿನ ಮೂಲಕ ತಮಗೆ ಅನುಕೂಲವಾಗುವಂತೆ ಸರಿದೂಗಿಸುವುದನ್ನು ನಾವು ಕಂಡಿದ್ದೇವೆ. ಆದರೆ, ಕೃಷಿಯಲ್ಲಿ ಒಂದು ವಿಶಿಷ್ಟ ಸಮಸ್ಯೆಯಿದೆ.

ಬೀಜ ಬಿತ್ತುವ ಸಮಯದಲ್ಲಿ ಆ ಒಂದು ಫಸಲಿನ ಒಟ್ಟಾರೆ ವಿಸ್ತೀರ್ಣ, ಮಾರುಕಟ್ಚೆಗಳ ಆಗುಹೋಗುಗಳು ಮುಂಚಿತವಾಗಿ ರೈತರಿಗೆ ತಿಳಿದಿರುವುದಿಲ್ಲ. ಬೀಜ ಬಿತ್ತಿದ ನಂತರ, ಫಸಲು ಕಟಾವಿಗೆ ಬರುವವರೆಗೂ ಅದನ್ನೇ ಬೆಳೆಸುವ ಕೆಲಸ ಮಾಡಬೇಕೇ ಹೊರತು ಹೆಜ್ಜೆ ಹಿಂದೆ ಹಾಕಲು ಸಾಧ್ಯವಿಲ್ಲ. ಹೀಗಾಗಿಯೇ ನಮ್ಮಲ್ಲಿ ರಸ್ತೆಯ ಮೇಲೆ ಈರುಳ್ಳಿ – ಟೊಮೆಟೊ ಚೆಲ್ಲಾಡುವಷ್ಟು ಅಧಿಕ ಉತ್ಪಾದನೆ ಮತ್ತು ಕನಿಷ್ಠ ದರ ದೊರಕಿದರೆ, ಕೆಲವೊಮ್ಮೆ ಸರ್ಕಾರಗಳೇ ಅಲ್ಲಾಡುವ ಮಟ್ಟಕ್ಕೆ ಈರುಳ್ಳಿಯ ದರಗಳು ತಾರಕಕ್ಕೇರುವುದನ್ನು ಕಂಡಿದ್ದೇವೆ. ‌ಎಂಎಸ್‌ಪಿಯ ಚೌಕಟ್ಟು ಈ ಕಾರಣದಿಂದಾಗಿ ಕೃಷಿಗೆ ಅತ್ಯವಶ್ಯಕವಾಗುತ್ತದೆ. ಎಂಎಸ್‌ಪಿಯನ್ನು ಮೊದಲೇ ನಿಗದಿ ಮಾಡುವ ಮೂಲಕ ಸರ್ಕಾರವೂ ಯಾವ ಫಸಲಿಗೆ ಎಷ್ಟು ಪ್ರೋತ್ಸಾಹ ಕೊಡುತ್ತಿದೆ ಎನ್ನುವುದಕ್ಕೆ ಒಂದು ಸಾಂಕೇತಿಕ ಚೌಕಟ್ಟನ್ನೂ ಒದಗಿಸಿದಂತಾಗುತ್ತದೆ. ಜತೆಗೆ, ವಿಕೇಂದ್ರೀಕೃತ ಖರೀದಿಯ ಚೌಕಟ್ಟನ್ನೂ ಸರ್ಕಾರ ಹಾಕಿಕೊಳ್ಳಬೇಕು. ಇದರಿಂದಾಗಿ ಮಾರುಕಟ್ಟೆಯಲ್ಲಿರಬಹುದಾದ ಏರುಪೇರನ್ನು ನಿರ್ವಹಿಸಲು ಸಾಧ್ಯವಾಗತ್ತದೆ.

ಇದು ಪ್ರಸ್ತುತ ಚೌಕಟ್ಟಿನಲ್ಲಿ ಸರ್ಕಾರ ಮಾಡಬಹುದಾದ ಕೆಲಸ. ಆದರೆ, ಮಾರುಕಟ್ಟೆಗಳ ಆಧುನೀಕರಣ ಒಂದು ಭಿನ್ನವಾದ ಸವಾಲೇ ಆಗಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಾರಾಟದ ದರ, ಖರೀದಿ ಮಾಡುವವರ ಬೇಡಿಕೆಗಳನ್ನು ಕಂಪ್ಯೂಟರ್ ತೆರೆಯ ಮೇಲೆ ತೋರಿಸಿ ವ್ಯವಹರಿಸವ ಅನುಕೂಲವನ್ನು ಕಲ್ಪಿಸುವುದು ಷೇರುಬಜಾರಿಗೆ ಸಾಧ್ಯವಿದೆ ಎಂದಾದರೆ ಅದನ್ನು ಕೃಷಿಯ ವ್ಯಾಪಾರಕ್ಕೂ ವಿಸ್ತರಿಸಬಹುದು.

ಅಂದರೆ ಕೃಷಿ ಮಾರುಕಟ್ಟೆಯೂ ತಂತ್ರಜ್ಞಾನದಿಂದ ಲಾಭ ಪಡೆಯುವಂತಾಗಬೇಕು. ಇಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರದ ಪ್ರಕ್ರಿಯೆಯಲ್ಲಿ ಮೂಲಭೂತ ಬದಲಾವಣೆಯಾಗಬೇಕು. ಭೌತಿಕವಾಗಿ ಕೃಷಿ ಉತ್ಪನ್ನಗಳನ್ನು ಆಧುನಿಕ ಉಗ್ರಾಣಗಳಿಗೆ ಸರಬರಾಜು ಮಾಡಿ ಅಲ್ಲಿಂದ ಒಂದು ಡೀ-ಮೆಟೀರಿಯಲೈಸ್ಡ್ ವೇರ್‌ಹೌಸ್ ರಸೀದಿಯನ್ನು ರೈತರು ಪಡೆಯುವ ಸವಲತ್ತು ಸೃಷ್ಟಿಸಿದರೆ, ಆ ವೇರ್‌ಹೌಸ್ ರಸೀದಿಯೇ ಒಂದು ಆರ್ಥಿಕ ಆಸ್ತಿಯಾಗಲು ಸಾಧ್ಯ. ಹಾಗಾದಾಗ ಮಾಲನ್ನು ಉಗ್ರಾಣಕ್ಕೆ ಸರಬರಾಜು ಮಾಡಿ ಅದರ ಗುಣಮಟ್ಟ ಮತ್ತು ತೂಕವನ್ನು ರಸೀದಿಯಲ್ಲಿ ದಾಖಲಿಸಿದರೆ, ರೈತರಿಗೆ ಇಷ್ಟವಾದ ಅನುಕೂಲಕರವಾದ ಸಮಯದಲ್ಲಿ ಆ ರಸೀದಿಯನ್ನು ಆಗಿನ ಬೆಲೆಗೆ ತಕ್ಕಂತೆ ದುಡ್ಡಿನ ರೂಪದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಈಗ ಸರ್ಕಾರ ಬಂಗಾರವನ್ನು ಕಾಗದದ ರೂಪದಲ್ಲಿ ಗೋಲ್ಡ್ ಬಾಂಡ್ ರೂಪದಲ್ಲಿ ಮಾರಾಟ ಮಾಡಲು ಸಾಧ್ಯವಾದಂತೆಯೇ, ಸೋನಾ ಮಸೂರಿ ಅಕ್ಕಿಗೆ ಸಂಬಂಧಿಸಿದ ವೇರ್‌ಹೌಸ್ ರಸೀದಿಯನ್ನೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ.

ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ಈ ಪ್ರಕ್ರಿಯೆಯಲ್ಲಿ ನಾಯಕತ್ವವಹಿಸಿದರೆ ಕೃಷಿಯ ಕಾಯಕಲ್ಪಕ್ಕೆ ಒಂದು ದಾರಿ ಮಾಡಿಕೊಟ್ಟಂತಾಗುತ್ತದೆ. ನಾವು ಮಾರುಕಟ್ಚೆ ಮತ್ತು ಸುಧಾರಣೆ ಎಂದಾಕ್ಷಣಕ್ಕೆ ಖಾಸಗಿ ಜನರು ದೊಡ್ಡ ಭೂ ಹಿಡುವಳಿಗಳನ್ನು ಖರೀದಿಸಿ ಆಧುನಿಕ ಫಾರಂಗಳನ್ನು ಮಾಡುವುದು, ರೈತ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಖಾಸಗಿ ಕೈಗೆ ಒಡ್ಡುವುದನ್ನೇ ಯೋಚಿಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ರೈತರು ಸಶಕ್ತರಾಗಿ ವ್ಯವಹರಿಸಲು ಈಗಿನ ರೈತರನ್ನೇ ಸಬಲಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಿಲ್ಲ. ಆಧುನಿಕೀಕರಣ ಮತ್ತು ತಂತ್ರಜ್ಞಾನದ ಬಳಕೆ ಎಂದಮಾತ್ರಕ್ಕೆ ಅದು ಖಾಸಗೀಕರಣದತ್ತ ಹೋಗಲೇ ಬೇಕೆಂದೇನೂ ಇಲ್ಲ. ದರ್ಶನ್ ಪುಟ್ಟಣ್ಣಯ್ಯ ಮತ್ತು ಯೋಗೇಂದ್ರ ಯಾದವ್ ಅವರು ನಂದನ್ ನಿಲೇಕಣಿಯ ಕೈಕುಲುಕಿದರೆ ಇದು ಸಾಧ್ಯ. ಈ ಕೈಕುಲುಕುವ ಪ್ರಕ್ರಿಯೆಯನ್ನು ಸರ್ಕಾರಗಳ ನೀತಿಯನುಸಾರ ನೋಡಬೇಕಾದ ಜವಾಬ್ದಾರಿಯನ್ನು ನಮ್ಮ ರಾಜಕೀಯ ಪ್ರತಿನಿಧಿಗಳು ಮಾಡಬೇಕಾಗಿದೆ.

ಕರ್ನಾಟಕದ ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಕೃಷಿಯನ್ನು ಲಾಭದಾಯಕ ಮತ್ತು ಆಧುನಿಕ ಮಾಡುವಲ್ಲಿ ಮಾರುಕಟ್ಟೆಗಳಿಗಿಂತ ಸರ್ಕಾರದ ಪಾತ್ರವೇ ದೊಡ್ಡಮಟ್ಟದಲ್ಲಿದೆ. ನಮ್ಮ ಹೈನುಗಾರಿಕೆಯ ಅಭಿವೃದ್ಧಿಗೆ ಸರ್ಕಾರಗಳು ರೂಪಿಸಿದ ನೀತಿಗಳ ಫಲವಾಗಿಯೇ ಇಂದು ಹೈನುಗಾರಿಕೆ ಲಾಭದಾಯಕವಾಗಿದೆ, ಮಾರುಕಟ್ಟೆಯ ಸೂತ್ರದ ಮೇಲೆ ಮುಂದುವರಿಯುತ್ತಲೇ ರೈತಪರವಾಗಿದೆ. ಹೈನುಗಾರಿಕೆಯಲ್ಲಿ ಹೊರಪದರ ಮಾರುಕಟ್ಟೆಯನ್ನು ನೋಡುತ್ತಿದ್ದಂತೆ ಕಂಡರೂ ಒಟ್ಟಾರೆ ಆತ್ಮ ರೈತಪರವಾಗಿಯೇ ಇತ್ತು. ಆದರೆ ಹೈನುಗಾರಿಕಾ ಕ್ಷೇತ್ರವು ಹಾಲಿನ ಗುಣಮಟ್ಟದ ಪರೀಕ್ಷೆ, ಕೃತಕ ಗರ್ಭಧಾರಣೆ, ಶೀತಲೀಕರಣ, ಪಾಶ್ಚರೀಕರಣ, ಪ್ಯಾಕೇಜಿಂಗ್, ಮಾರಾಟ ವ್ಯವಸ್ಥೆ – ಎಲ್ಲದರಲ್ಲಿಯೂ ಆಧುನಿಕತೆ ಮತ್ತು ತಂತ್ರಜ್ಞಾನ ವನ್ನು ಅಳವಡಿಸಿಕೊಂಡು ಮುಂದುವರಿಯಿತು. ಇದೇ ಮಾದರಿಯನ್ನು ಭಿನ್ನ ರೀತಿಯಲ್ಲಿ ನಾವು ಫಸಲುಗಳಿಗೂ ಅನ್ವಯಿಸಿದರೆ ಕೃಷಿಯ ಸುವರ್ಣಕಾಲಕ್ಕೆ ನಾಂದಿ ಹಾಕಬಹುದು. ಸರ್ಕಾರ ಮನಸ್ಸು ಮಾಡಬೇಕಷ್ಟೇ.

ರೈತರ ಮಟ್ಟದ ಆರ್ಥಿಕತೆ

ರೈತರ ಮಟ್ಟದ ಆರ್ಥಿಕತೆಯನ್ನೂ ನಾವು ಪರಿಗಣಿಸಬೇಕು. ನಮ್ಮಲ್ಲಿರುವ ವ್ಯಾಪಾರಗಳಿಗೆ ನಿಯಮಿತ ಬಾಧ್ಯತೆಯ ಚೌಕಟ್ಟಿನಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಇದೇ ಚೌಕಟ್ಟಿನಲ್ಲಿ ನವೋದ್ಯಮಗಳೂ ಆಧುನಿಕ ಕಂಪನಿಗಳೂ ನಡೆಯುತ್ತವೆ. ಪಾಲುದಾರಿಕೆಯ ಸಂಸ್ಥೆಗಳೂ ಲಿಮಿಟೆಡ್ ಲಯಬಲಿಟಿ ಪಾರ್ಟನರ್‌ಶಿಪ್ ಆಗಿ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಈ ಚೌಕಟ್ಟಿನಲ್ಲಿ ವ್ಯಾಪಾರದಲ್ಲಿ ಆಗುವ ನಷ್ಟವು ಹೂಡಿಕೆಗೆ ನಿಯಮಿತವಾಗಿರುತ್ತದೆಯೇ ಹೊರತು, ಖಾಸಗಿ ಬಾಧ್ಯತೆಯಾಗುವುದಿಲ್ಲ. ಆದರೆ ಕೃಷಿಯಲ್ಲಿ ಈ ಏರ್ಪಾಟಿಲ್ಲ. ಮಿಕ್ಕ ವ್ಯಾಪಾರಗಳಿಗಿಂತ ಕೃಷಿಯಲ್ಲಿ ವೈಫಲ್ಯದ ಸಾಧ್ಯತೆ ಹೆಚ್ಚಿದೆ.

ಅದಕ್ಕೆ ಕಾರಣ ಮಿಕ್ಕ ವ್ಯಾಪಾರಗಳಲ್ಲಿ ಹೆಚ್ಚುವರಿ ಉತ್ಪಾದನೆ ಮತ್ತು ಉತ್ಪಾದನಾ ವೈಫಲ್ಯಗಳ ಅಪಾಯ ಕಡಿಮೆ. ಒಂದು ಸಾಬೂನನ್ನು ತಯಾರಿಸಲು ಬೇಕಾದ ತಂತ್ರಜ್ಞಾನ (ಕೃಷಿಯ ತಂತ್ರಜ್ಞಾನದಂತೆ) ವ್ಯಾಪಕವಾಗಿ ಲಭ್ಯವಾಗಿರುವುದರಿಂದ, ಯಾರು ಬೇಕಾದರೂ ಸಾಬೂನನ್ನು ತಯಾರಿಸಬಹುದು. ಈ ಬಗೆಯ ವ್ಯಾಪಾರಗಳಲ್ಲಿ ಮಾರಾಟದಲ್ಲಿ ವಿಫಲವಾಗುವ ಅಪಾಯವಿದೆ. ಆದರೆ, ಕೃಷಿಯಲ್ಲಿ ಉತ್ಪಾದಕತೆ ಕುಸಿಯುವುದಕ್ಕೆ ತಂತ್ರಜ್ಞಾನದ ಅಸಮರ್ಥ ಉಪಯೋಗ ಸಣ್ಣಕಾರಣವಿರಬಹುದು. ಆದರೆ, ಉತ್ಪಾದಕತೆ ಕಮ್ಮಿಯಾಗಲು ಮಳೆ, ಪರಿಸರ, ಶಾಖ ಹಾಗೂ ಇತರೇ ನೈಸರ್ಗಿಕ ಕಾರಣಗಳು ರೈತರ ಕೌಶಲವನ್ನು ಮೀರಿದ್ದು. ಹೀಗಾಗಿ ಕೃಷಿಯಲ್ಲಿ ವೈಫಲ್ಯದ ಸಾಧ್ಯತೆಗಳು ಮಿಕ್ಕ ವ್ಯಾಪಾರಗಳಿಗಿಂತ ಹೆಚ್ಚಿರುವುದು ಸಹಜವೇ. ಇದನ್ನು ಒಂದು ಚೌಕಟ್ಟಿನಲ್ಲಿ ಹಾಕಬೇಕಾದರೆ ಭೂಮಿಯ ಕ್ರೋಡೀಕರಣದೊಂದಿಗೆ ಕಾರ್ಪೊರೇಟ್ ಕೃಷಿಯತ್ತ ಹೋಗಬೇಕಾಗುತ್ತದೆ. ಆದರೆ, ನಮ್ಮ ಸಂದರ್ಭದಲ್ಲಿ ಇದನ್ನು ಪ್ರತಿಪಾದಿಸುವುದೂ ಸರಿಯಲ್ಲ. ಕಾರ್ಪೊರೇಟ್ ಕೃಷಿಯಿಂದಾಗಿ ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತದಲ್ಲದೇ, ಅದು ಪರಿಸರಕ್ಕೂ ಮಾರಕವಾಗಿರುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ಉತ್ಪಾದಕತೆ ಹೆಚ್ಚಿಸಲು ಪರಿಸರದಲ್ಲಿರುವ ಸಂಪನ್ಮೂಲಗಳನ್ನು ಬೇಜವಾಬ್ದಾರಿಯಿಂದ ಬಳಸುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ಸಣ್ಣ ಹಿಡುವಳಿ ಮತ್ತು ಅದರಲ್ಲಿರುವ ನೈಸರ್ಗಿಕ ಅಪಾಯಗಳನ್ನು ಪರಿಗಣಿಸಿ, ಸಾಲಮನ್ನಾಗಿಂತ ಉತ್ತಮವಾದ ಚೌಕಟ್ಟನ್ನು ನಾವು ಹಾಕಿಕೊಡಬೇಕಾಗಿದೆ. ಬಿಕ್ಕಟ್ಟಿನ ಕಾಲದಲ್ಲಿ ರೈತರ ಸಾಲಗಳನ್ನು ಮನ್ನಾ ಮಾಡುವುದು ಸರಿಯಾದ ವಿಚಾರವಾದರೂ, ಕೃಷಿಯ ಬಿಕ್ಕಟ್ಟು ಮತ್ತು ಸಾಲಮನ್ನಾಗಳು ಚುನಾವಣೆಯ ಕಾಲಕ್ಕೆ ಮಾತ್ರ ಸಂಭವಿಸುವ ಒಗಟನ್ನು ಬಿಡಿಸಿ, ಸಾಲಮನ್ನಾ ಯಾವ ರೀತಿಯಲ್ಲಿ ಕೈಗೊಳ್ಳಬೇಕು ಎನ್ನುವುದರ ಬಗೆಗೂ ಒಂದು ಮೌಲಿಕವಾದ ಚೌಕಟ್ಟನ್ನು ಕಟ್ಟಿಕೊಳ್ಳಬೇಕು. ಇದಕ್ಕೂ ಒಂದು ಸರಿಯಾದ ಕಾನೂನನ್ನು ಏರ್ಪಾಟು ಮಾಡಿಕೊಳ್ಳಬೇಕಾಗಿದೆ.

ಲೇಖಕ: ಪ್ರಾಧ್ಯಾಪಕ, ಐಐಎಂ – ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT