ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಯ್‌ ಕುಮಾರ್‌ ಸಿಂಗ್‌ ಬರಹ: ಶಾಂತಿಯ ತೋಟದಲ್ಲಿ ಬೆಂಕಿಗೇನು ಕೆಲಸ?

Last Updated 26 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಇಡೀ ನಾಡು ತ್ರಸ್ತಗೊಂಡಿದೆ; ಅಸ್ತವ್ಯಸ್ತಗೊಂಡಿದೆ. ಒಂದೆಡೆ ಕ್ರೌರ್ಯದ ಹೇಷಾರವ ಹೆಚ್ಚಾಗಿದ್ದರೆ, ಮತ್ತೊಂದೆಡೆ ಸಂವೇದನಾಶೀಲ ಮನಸುಗಳು ದಿಗ್ಮೂಢವಾಗಿ ಕುಳಿತಿವೆ. ಕೋಮುದ್ವೇಷದ ವಿಷ ದಿನದಿಂದ ದಿನಕ್ಕೆ ‘ವಿಷಮ’ಶೀತ ಜ್ವರದ ಹಾಗೆ ಏರುತ್ತಲೇ ಇದೆ. ವಿಪರ್ಯಾಸವೆಂದರೆ ಕಣ್ಣು–ಹೃದಯಗಳಿಲ್ಲದ ಈ ಹರಿತ ಕತ್ತಿಯ ಬೀಸಿನ ಅಳವಿನಲ್ಲಿರುವವರೆಲ್ಲ ಎಳೆಯ ಕುಡಿಗಳು, ಮುಗ್ಧ ಮನಸ್ಸುಗಳು. ‌ಕಾಲೇಜಿನ ಅಂಗಳದಲ್ಲಿ ಸೃಷ್ಟಿಯಾದ ‘ಹಿಜಾಬ್‌ ವಿವಾದ’ ಈಗ ಕೋರ್ಟಿನ ಅಂಗಳದಲ್ಲಿದೆ. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತನ ಕೊಲೆ, ಅದರ ನಂತರ ನಡೆದ ದೊಂಬಿಗಳು ಕೋಮುದ್ವೇಷದ ಅಟ್ಟಹಾಸದ ಕ್ರೂರ ಕೋರೆ–ದಾಡೆಗಳನ್ನು ಕಾಣಿಸಿವೆ. ದೇಶಭಕ್ತಿ, ಧರ್ಮ, ಜಾತಿ ಎಲ್ಲವೂ ಪುರಾವೆಗಳನ್ನು ಬೇಡುತ್ತಿರುವ ಈ ಕಾಲದಲ್ಲಿ, ಮನುಷ್ಯನೆನಿಸಿಕೊಳ್ಳಲು ಅತ್ಯಗತ್ಯವಾದ ಆತ್ಮಸಾಕ್ಷಿಯೇ ಕಾಣೆಯಾಗುತ್ತಿದೆಯೇ? ಮುಗ್ಧ ಯುವಜನರದ ಬಿಸಿರಕ್ತದ ಕಾವಿನಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವರಿಗೆ ಈ ನೆಲದ, ಸಾಕ್ಷಿಪ್ರಜ್ಞೆಯ ಅಂತಃಕರಣದ ಧ್ವನಿ ಕೇಳಿಸುವ ಪ್ರಯತ್ನವೊಂದು ಇಲ್ಲಿದೆ...

***

ಬಹುಶಃ ಅದು, 1981ರ ಮೇ ತಿಂಗಳು. ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ ಆಗಿದ್ದ ನನ್ನನ್ನು ಶಿವಮೊಗ್ಗದ ಎಸ್‌ಪಿ ಆಗಿ ನಿಯುಕ್ತಿಗೊಳಿಸಲಾಗಿತ್ತು. ಶಿವಮೊಗ್ಗ, ನಿಸರ್ಗದ ಮಡಿಲಲ್ಲಿ ಪವಡಿಸಿರುವ ಅದೊಂದು ಬಹಳ ಸುಂದರವಾದ ಒಂದು ಜಿಲ್ಲೆ. ತೀರ್ಥಹಳ್ಳಿಯ ಕಾಡು, ಆಗುಂಬೆಯ ಬೆಟ್ಟ, ಸಾಗರ ಮತ್ತು ಅಲ್ಲಿನ ಅದ್ಭುತವಾದ ಜೋಗ ಜಲಪಾತ... ಹೀಗೆ ಆ ಜಿಲ್ಲೆಯ ಸೊಬಗು ಕಣ್ಮುಂದೆ ಇನ್ನೂ ನವಿರಾಗಿದೆ. ಮಲೆನಾಡಿಗೆ ಮುತ್ತಿನ ಸರದಂತಿರುವ ಪಶ್ಚಿಮ ಘಟ್ಟಗಳಾಚೆಗೆ ನೇಸರ ತೆರೆ ಮುಚ್ಚುವಾಗ ಈ ಜಿಲ್ಲೆಯೇ ಸ್ವರ್ಗ. ನನ್ನ ಜೀವನದಲ್ಲೇ ಅಂತಹ ಅದ್ಭುತ ಸೂರ್ಯಾಸ್ತವನ್ನು ಹಿಂದೆಂದೂ ನೋಡಿರಲಿಲ್ಲ. ಅದೂ ಆಗುಂಬೆ ಘಾಟಿಯಲ್ಲಿ, ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಬರುವ ದಾರಿಯಲ್ಲಿ ನಿಂತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದೇ ಆನಂದ. ಮುಂಗಾರು ಕಳೆದ ಮೇಲಂತೂ ಇಡೀ ಜಿಲ್ಲೆಗೆ ಮಂಜಿನ ತೋರಣ.

ಸೌಂದರ್ಯದ ಜೊತೆಗೆ ಸಾಂಸ್ಕೃತಿಕವಾಗಿ ಬಹಳ ಸಕ್ರಿಯವಾಗಿದ್ದ ಜಿಲ್ಲೆ ಶಿವಮೊಗ್ಗ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ತವರೂರು ಎಂದೇ ಕರೆಯಬಹುದು. ಸಾಹಿತ್ಯ ಕ್ಷೇತ್ರದ ಮೇಲೆ ನನಗೆ ಆಸಕ್ತಿ ಇತ್ತು. ಆದರೆ, ಈ ಕ್ಷೇತ್ರಕ್ಕೆ ನನ್ನನ್ನು ನಾನು ಮತ್ತಷ್ಟು ತೆರೆದುಕೊಂಡಿದ್ದು ಇಲ್ಲಿಂದಲೇ. ಆಂಗ್ಲ ಪತ್ರಿಕೆಯಲ್ಲಿ ಅನುವಾದಗೊಂಡ ಗೋಪಾಲಕೃಷ್ಣ ಅಡಿಗ ಅವರ ಕವನವೊಂದನ್ನು ನಾನು ಮೊದಲ ಬಾರಿ ಓದಿದ್ದು ಶಿವಮೊಗ್ಗದಲ್ಲೇ. ಇದು ನನ್ನನ್ನು ಕನ್ನಡ ಸಾಹಿತ್ಯದತ್ತ ಮತ್ತಷ್ಟು ಸೆಳೆಯಿತು. ಹೀಗೆ ಕನ್ನಡ ಸಾಹಿತ್ಯದ ಜೊತೆಗೆ ಸಂಬಂಧ ಹೆಚ್ಚಿಸಿದ ಜಾಗ ಶಿವಮೊಗ್ಗ. ಇಲ್ಲಿದ್ದ ಮೇಲೆ ಕೆ.ವಿ. ಸುಬ್ಬಣ್ಣ ಅವರ ಪರಿಚಯ ಆಗಲೇಬೇಕಲ್ಲವೇ? ಅವರ ಭೇಟಿ ನನ್ನ ಸಾಹಿತ್ಯ ಜೀವನಕ್ಕೆ ತಿರುವು ಸಿಕ್ಕ ಗಳಿಗೆ. ಸುಬ್ಬಣ್ಣ ಅವರಿಂದ, ಯು.ಆರ್‌. ಅನಂತಮೂರ್ತಿ, ರಾಮಚಂದ್ರ ಶರ್ಮಾ, ಚಂದ್ರಶೇಖರ ಕಂಬಾರ, ಪ್ರಸನ್ನ, ಡಿ.ಆರ್‌.ನಾಗರಾಜ್‌, ಎಚ್‌.ಎಸ್‌. ಶಿವಪ್ರಕಾಶ್‌, ಕಿ.ರಂ. ನಾಗರಾಜ್‌, ಸುಮತೀಂದ್ರ ನಾಡಿಗ, ಶೂದ್ರ ಶ್ರೀನಿವಾಸ್‌... ಹೀಗೆ ವೈಯಕ್ತಿಕ ಪರಿಚಯದ ಸರಣಿಯೇ ಆರಂಭವಾಯಿತು.

ಇಂಥ ಸ್ಥಳದಲ್ಲಿ ನಾನು ಸುಮಾರು ಒಂದು ವರ್ಷ 11 ತಿಂಗಳು ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದೆ. ತಂಪಾದ ಪರಿಸರದಲ್ಲಿರುವ ಈ ಜಿಲ್ಲೆಯಲ್ಲಿ ಸದಾ ಶಾಂತಿ ನೆಲೆಸಿರಬೇಕು ಎನ್ನುವ ಬಯಕೆ ನನ್ನದಾಗಿತ್ತು.

ನಾನು ಶಿವಮೊಗ್ಗ ಎಸ್‌ಪಿ ಆಗಿ ರಾತ್ರೋರಾತ್ರಿ ನಿಯುಕ್ತಿಗೊಂಡಿದ್ದೂ ಇದೇ ರೀತಿ ಗಲಭೆಯೊಂದು ನಡೆದಿದ್ದ ಸಂದರ್ಭದಲ್ಲೇ. ನನಗೆ ಆ ಘಟನೆ ಅಷ್ಟು ಜ್ಞಾಪಕಕ್ಕೆ ಬರುತ್ತಿಲ್ಲ. ಇಂಥ ಘಟನೆ ಮಧ್ಯೆಯೇ ನಾನು ಅಧಿಕಾರ ಸ್ವೀಕರಿಸಿ ಕಾರ್ಯನಿರ್ವಹಿಸುವುದು ಸವಾಲಿನಿಂದ ಕೂಡಿತ್ತು. ಈ ಅವಧಿಯಲ್ಲಿ ಸಹೋದ್ಯೋಗಿಗಳು ಕಳಕಳಿ ಮತ್ತು ಮುತುವರ್ಜಿಯಿಂದ ಕೆಲಸ ಮಾಡಿದರು. ಜನರಿಂದ ಅದ್ಭುತವಾಗಿ ಸಹಕಾರ ದೊರೆಯಿತು. ಮಾತುಕತೆಯ ದಾರಿ ಎಲ್ಲರ ಬಳಿಯೂ ಇತ್ತು. ಈಗಿನ ಶಿವಮೊಗ್ಗದ ಸ್ಥಿತಿ ನೆನೆದು ವ್ಯಥೆಯಾಗುತ್ತಿದೆ.

ಜಿಲ್ಲೆಯಲ್ಲಿ ಆಗಲೇ ಹಿಂದೂ ಮಹಾಸಭಾ, ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌, ತಬ್ಲೀಗ್‌ ಜಮಾತ್‌ ಹೀಗೆ ಎಲ್ಲ ಧರ್ಮದ ಸಂಘಟನೆಗಳು ನೆಲೆಯೂರಿದ್ದವು. ಆದರೆ ಎಲ್ಲರ ಜೊತೆಗೂ ನನ್ನ ಸಂವಾದ ನಿರಂತರವಾಗಿತ್ತು. ಪರಸ್ಪರ ನಂಬಿಕೆ ನಮ್ಮಲ್ಲಿ ಬೆಳೆದಿತ್ತು. ಇವರ ಬಳಿ ಮನಸ್ಸು ಬಿಚ್ಚಿ ಮಾತನಾಡಬಹುದು ಎನ್ನುವ ಧೈರ್ಯ ಬಂದಿತ್ತು. ಈ ಭಾವನೆ ಪರಸ್ಪರರದ್ದಾಗಿತ್ತು. ಇದರಿಂದ ನಮಗೆ ಶಕ್ತಿ ಉಪಯೋಗ ಮಾಡುವ ಪ್ರಸಂಗವೇ ಬಂದಿರಲಿಲ್ಲ. ಮಾತುಕತೆ ಮೂಲಕವೇ ಬಹಳ ಸಮಸ್ಯೆಗಳನ್ನು ಬಗೆಹರಿಸಿದ್ದೆವು. ಕೆಲವೊಮ್ಮೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗುತ್ತಿತ್ತು.

ಆದರೆ, ಅತಿರೇಕಕ್ಕೆ ಹೋಗುತ್ತಿರಲಿಲ್ಲ (ಈಗಿನಂತಹ ವಾತಾವರಣ ಎಂದಿಗೂ ನಿರ್ಮಾಣವಾಗಿರಲಿಲ್ಲ ಬಿಡಿ). ಪ್ರಕ್ಷುಬ್ಧ ಸ್ಥಿತಿ ನಡುವೆಯೂ ಮಾತುಕತೆಯ ದಾರಿ ನಮಗಿತ್ತು. ಒಂದು ರೀತಿ ಸೇಫ್ಟಿ ವಾಲ್ವ್‌ ನಮ್ಮ ನಡುವೆ ಇತ್ತು. ಈಗ ಅದು ‘ಇಲ್ಲ’ವಾಯಿತೇ ಎಂಬ ನೋವು ಕಾಡುತ್ತಿದೆ.

ಕೆಲವೊಮ್ಮೆ ಯಾವ ಧರ್ಮದವರಾದರೂ ನನ್ನನ್ನು ಅವರ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರೆ ಒಂದು ಷರತ್ತು ಹಾಕುತ್ತಿದ್ದೆ. ನನಗೆ ಆಹ್ವಾನ ನೀಡಿದರೆ, ಮತ್ತೊಂದು ಧರ್ಮದ ನಾಯಕರೊಬ್ಬರಿಗೆ ಆಹ್ವಾನ ನೀಡಬೇಕು ಎಂಬ ಷರತ್ತು ಅದು. ಇದನ್ನು ಅವರು ಒಪ್ಪುತ್ತಿದ್ದರು. ಎಲ್ಲರೂ ಜೊತೆಯಾಗಿರಬೇಕು, ಪರಸ್ಪರ ಸಂವಾದಕ್ಕೆ ಅವಕಾಶವಿರಬೇಕು ಎನ್ನುವುದೇ ಇದರ ಹಿಂದಿನ ಉದ್ದೇಶವಾಗಿತ್ತು. ಬಾವಿಯೊಳಗಿನ ಕಪ್ಪೆಯಾಗದೆ ವಿಶಾಲವಾಗಿ ಆಲೋಚನೆ ಮಾಡಬೇಕು ಎನ್ನುವುದು ನನ್ನ ಸಲಹೆಯಾಗಿತ್ತು. ಇನ್ನೊಬ್ಬರ ಮಾತನ್ನು ಅರ್ಥ ಮಾಡಿಕೊಂಡರೆ, ಕೋಪವೂ ಕಡಿಮೆಯಾಗಿ ವೈಮನಸ್ಸಿಗೆ, ತಪ್ಪು ತಿಳಿವಳಿಕೆಗೆ ಜಾಗವಿರುವುದಿಲ್ಲ ಎನ್ನುವುದು ನನ್ನ ತುಡಿತವಾಗಿತ್ತು. ಅಲ್ಲಿನ ನೆಲದಲ್ಲಿಯೇ ಕೋಮು ಸಾಮರಸ್ಯದ ಈ ಎಲ್ಲ ಪಾಠಗಳಿವೆ. ಹೇಳಿಕೇಳಿ,
ಅದು ಸಮಾಜವಾದಿಗಳ ತಾಣ. ನಿಜಕ್ಕೂ ಅದು ಕುವೆಂಪು ಅವರು ಹೇಳಿದಂತೆ ‘ಸರ್ವಜನಾಂಗದ ಶಾಂತಿಯ ತೋಟ’ವೇ. ಆ ತೋಟದಲ್ಲಿ ಹೀಗೆ ಶಾಂತಿಯನ್ನು ಕದಡುವ ಕೆಲಸವನ್ನು ಯಾರೂ ಮಾಡಬಾರದು.

ಹೀಗೇ ಬರೆಯುತ್ತಾ ಘಟನೆಯೊಂದು ನೆನಪಿಗೆ ಬರುತ್ತಿದೆ. ನಾನು ಡಿ.ಜಿ. ಆಗಿದ್ದಾಗ, ಭಟ್ಕಳ ಸಮೀಪ ಮುಸ್ಲಿಂ ಮನೆಯೊಂದರಲ್ಲಿ ಹಿಂದೂ ಯುವತಿಯ ಶವ ಸಿಕ್ಕಿತ್ತು. ಆದರೆ, ಆ ಮನೆಯಲ್ಲಿ ಮೂರ್ನಾಲ್ಕು ದಿನಗಳಿಂದ ಯಾರೂ ಇರಲಿಲ್ಲ. ಈ ಘಟನೆಯಿಂದ ಕೋಮುಗಲಭೆ ಆಗುವುದು ಖಚಿತವಾಗಿತ್ತು. ಆ ಸಂದರ್ಭದಲ್ಲಿ ರಮಣ್‌ ಗುಪ್ತಾ ಅವರು ಉತ್ತರ ಕನ್ನಡ ಜಿಲ್ಲೆಯ ಎಸ್‌ಪಿ ಆಗಿದ್ದರು. ‘ಹೇಗೆ ಇದನ್ನು ನಿಭಾಯಿಸುತ್ತೀರಿ’ ಎಂದು ನಾನು ಕೇಳಿದ್ದೆ. ‘ನಮ್ಮ ಮಾತನ್ನು ಜನರು ಕೇಳುತ್ತಾರೆ. ಗಲಾಟೆ ಮಾಡುತ್ತಾರೆ, ಆದರೆ ಯಾವುದೇ ಗಲಭೆ ಆಗುವುದಿಲ್ಲ ಎನ್ನುವ ಧೈರ್ಯ ನಮಗಿದೆ’ ಎಂದು ಅವರು ಉತ್ತರಿಸಿದ್ದರು. ಅವರ ಮಾತಿನಂತೆಯೇ ಯಾವುದೇ ಗಲಭೆ ಅಲ್ಲಿ ಆಗಲಿಲ್ಲ. ಕಾರಣವಿಷ್ಟೆ: ಪ್ರತಿ ಕಾನ್‌ಸ್ಟೆಬಲ್‌, ಇನ್‌ಸ್ಪೆಕ್ಟರ್‌ ಸ್ಥಳೀಯರ ಜೊತೆ ನಿರಂತರ, ನಿಕಟವಾದ ಸಂಪರ್ಕದಲ್ಲಿರುವ ಬೀಟ್‌ ವ್ಯವಸ್ಥೆಯನ್ನು ನಾವು ತಂದಿದ್ದೆವು. ಎಸ್‌ಪಿ ಅಂದು ಮಾತುಕತೆಯ ಮೂಲಕವೇ ಇದನ್ನು ಬಗೆಹರಿಸಿ, ತನಿಖೆ ನಡೆಸಲು ಸಮಯ ಕೇಳಿ ಶಾಂತಿ ಕಾಪಾಡುವಂತೆ ಕೋರಿದ್ದರು. ಎಲ್ಲ ಮುಖಂಡರೂ ಇದಕ್ಕೆ ಒಪ್ಪಿದ್ದರು. ವಾರದೊಳಗೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದರು. ಇದು ಎಲ್ಲರಿಗೂ ಮಾದರಿ. ಇಲ್ಲಿ ಜನರ ನಡೆಯೂ ಅನುಕರಣೀಯ. ಕರಾವಳಿ, ಮಲೆನಾಡು ಎನ್ನದೆ ಇಡೀ ಕರುನಾಡು ಅನುಸರಿಸಬೇಕಾದ ಮಾರ್ಗ ಇದಾಗಿದೆ.

ಶಿವಮೊಗ್ಗ, ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ’ ಎಂದು ಹಾಡಿದ, ‘ಮೊದಲು ಮಾನವನಾಗು’ ಎಂದು ಕರೆಕೊಟ್ಟ ಕುವೆಂಪು ಅವರ ಜನ್ಮಸ್ಥಳ. ಕುವೆಂಪು ಅವರು ಹೇಳಿದ ಮಾತು ಕನ್ನಡಿಗರಿಗಷ್ಟೇ ಅಲ್ಲ; ಇಡೀ ಭಾರತಕ್ಕೆ ಅನ್ವಯವಾಗುವಂಥದು. ಅವರ ಮಾತುಗಳನ್ನು ಮರೆಯಬಾರದು. ಪ್ರಸ್ತುತ ಸಂದರ್ಭದಲ್ಲಿ ಇದನ್ನು ನೆನಪಿನಲ್ಲಿ, ಮನಸ್ಸಿನಲ್ಲಿ ಇಟ್ಟುಕೊಂಡರೆ ಸಾಲದು, ಅದರಂತೆ ನಡತೆ ಇರಬೇಕು. ಇದು ಬಹಳ ಕಷ್ಟದ ಕೆಲಸವೇನಲ್ಲ. ಮನಸ್ಸಿನಲ್ಲಿ ಸ್ವಲ್ಪ ಕರುಣೆ, ಪ್ರೀತಿ ಭಾವ ಬಂದರೆ ಬೇರೆಯೇ ಮನೋಭಾವ ಹುಟ್ಟಿಕೊಳ್ಳುತ್ತದೆ. ಯಾರೂ ಪ್ರಚೋದನೆಗೆ ಬಲಿಯಾಗಬಾರದು. ‘ನಮ್ಮಿಂದ ತಪ್ಪಾಗಿದೆ ಕ್ಷಮಿಸಿ’ ಎಂದು ಮಾತಿನಲ್ಲಿ ಕೇಳಿದರೆ ಸಾಲದು. ಮುಂದೆ ನಡತೆಯಲ್ಲೂ ತೋರಿಸಿಕೊಡಬೇಕು.

ಕೆಲವೊಂದು ಬಾರಿ ಕೈಮೀರಿ ಅನಾಹುತ ನಡೆದುಹೋಗುತ್ತದೆ. ಪ್ರತಿಯೊಂದನ್ನೂ ತಡೆಯಲು ಸಾಧ್ಯವಿಲ್ಲ. ಮಾತುಕತೆಯ ದಾರಿಯಲ್ಲಿ ಹೆಚ್ಚಿನ ಸಮಸ್ಯೆಯನ್ನು ಬಗೆಹರಿಸಲು ನೋಡಬೇಕು. ಶಿವಮೊಗ್ಗದಲ್ಲಿ ಯುವಕನ ಕೊಲೆಗೆ ಕಾರಣರಾದವರ ವಿರುದ್ಧ ತ್ವರಿತಗತಿಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಹಾಗೆಯೇ ಅಂತ್ಯಸಂಸ್ಕಾರದ ಸಮಯದಲ್ಲಿ 144 ಸೆಕ್ಷನ್‌ ಹಾಕಿದ್ದಾಗ ಅದಕ್ಕೆ ಎಲ್ಲರೂ ಗೌರವ ಕೊಡಬೇಕಿತ್ತು. ಸಾವಿರಾರು ಜನರು ಸೇರಿದರೆ ಪ್ರಚೋದನೆ ಆಗುತ್ತದೆ, ಸಣ್ಣ ಘಟನೆಯೂ ವಿಕೋಪಕ್ಕೆ ಹೋಗುತ್ತದೆ. ಇದರಿಂದ ಎಲ್ಲರಿಗೂ ನೋವು ಖಚಿತ. ನಿಷೇಧಾಜ್ಞೆ ಉಲ್ಲಂಘಿಸಿ ಅಂತಹ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು. ಹಿಂಸಾಚಾರದಲ್ಲಿ ಹಲವು ವಾಹನಗಳನ್ನು ಸುಟ್ಟರು. ಇಲ್ಲಿ ಆ ವಾಹನ, ಅಂಗಡಿ ಮುಂಗಟ್ಟುಗಳ ಮಾಲೀಕರ ತಪ್ಪೇನಿದೆ? ಈ ರೀತಿ ಆಗಬಾರದಿತ್ತು. ಇಂತಹ ಸಂದರ್ಭಗಳಲ್ಲಿ ಜನರ ಮನವೊಲಿಸಿ, ಅಹಿತಕರ ಘಟನೆ ತಡೆಯುವ ಹೆಚ್ಚಿನ ಜವಾಬ್ದಾರಿ ರಾಜಕೀಯ ನಾಯಕರು, ಧರ್ಮಗುರುಗಳ ಮೇಲಿದೆ. ತಮ್ಮ ಮೇಲಿನ ಹೊಣೆಯನ್ನು ಅವರು ಮರೆಯುವಂತಿಲ್ಲ.

ನಾನು ಕರುನಾಡಿಗೆ ಕಾಲಿಟ್ಟಿದ್ದು 1976ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಎಲ್ಲೂ ಹೋಗದೆ ‘ಸರ್ವಜನಾಂಗದ ಶಾಂತಿಯ ತೋಟ’ವಾಗಿಯೇ ಇರುವ ಈ ನೆಲವನ್ನು ನೋಡಿದ್ದೇನೆ. ಈ ದಾರಿಯಲ್ಲೇ ನಾವು ಮತ್ತಷ್ಟು ನಡೆಯೋಣ, ಮತ್ತಷ್ಟು ಬೆಳೆಯೋಣ ಎನ್ನುವುದೇ ನನ್ನ ಆಶಯ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಕರ್ನಾಟಕ ಇನ್ನಷ್ಟು ಬೆಳೆಯಲಿ ಎನ್ನುವುದೇ ನನ್ನ ಆಸೆ.

ಶಿವಮೊಗ್ಗಕ್ಕೆ ಹೋದ ಬಳಿಕ ಮೊದಲ ಬಾರಿ ಜೋಗ ಜಲಪಾತಕ್ಕೆ ಹೋದಾಗ ಇಳಿ ಸಂಜೆಯಾಗಿತ್ತು. ಜಲಪಾತ ಅಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಅದರ ಭೋರ್ಗರೆತ ಕಿವಿಗಚ್ಚುತ್ತಿತ್ತು. ಆಗ ನನಗರಿವಿರದೇ ಕವಿತೆಯೊಂದು ಮನಸ್ಸಿನಲ್ಲಿ ಹುಟ್ಟಿಕೊಂಡಿತ್ತು. ಈಗ ಇದು ಪ್ರಸ್ತುತ ಎನಿಸುತ್ತಿದೆ.

Falling, falling, falling

Reaching the rock bottom

The river regained its old glory.

ಬದುಕೂ ಅಷ್ಟೆ.

ಲೇಖಕ: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ

ನಿರೂಪಣೆ: ಅಭಿಲಾಷ್‌ ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT