ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಸ್ ಆಯ್ಕೆ: ಬದಲಾಗಲಿ ಮಾನದಂಡ

ವಿದ್ಯಾರ್ಥಿಯ ಭವಿಷ್ಯಕ್ಕೆ ಪೂರಕವಾದ ಕೋರ್ಸ್‌ ಆಯ್ಕೆ ಹೇಗೆ?
Published 13 ಮೇ 2024, 19:33 IST
Last Updated 13 ಮೇ 2024, 19:33 IST
ಅಕ್ಷರ ಗಾತ್ರ

ಪರೀಕ್ಷೆಯ ಫಲಿತಾಂಶ ಬಂದ ತಕ್ಷಣ, ಮುಂದೆ ಏನನ್ನು ಓದಬೇಕು ಎಂಬ ಚಿಂತನೆಗೆ ವೈಯಕ್ತಿಕ ಮಹತ್ವವಿದೆ.‌ ಇತ್ತೀಚಿನ ದಿನಗಳಲ್ಲಿ ಅದು ಸಾರ್ವಜನಿಕ ಮಹತ್ವದ ವಿಷಯವೂ ಆಗಿದೆ. ಹಾಗೆ ನೋಡಿದರೆ, ಹಿಂದಿನಿಂದಲೂ ಎಸ್ಎಸ್ಎಲ್‌ಸಿಯಲ್ಲಿ ಜಾಸ್ತಿ ಅಂಕ ಪಡೆದವರು ವಿಜ್ಞಾನವನ್ನು, ಸ್ವಲ್ಪ ಕಡಿಮೆ ಅಂಕ ಪಡೆದವರು ವಾಣಿಜ್ಯ ಶಾಸ್ತ್ರವನ್ನು, ಮತ್ತೂ ಕಡಿಮೆ ಅಂಕ ಪಡೆದವರು ಮಾನವಿಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಅಥವಾ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಒಂದು ಸಾರ್ವಜನಿಕ ಮನಃಸ್ಥಿತಿ ಇತ್ತು.‌

ಈಗ ಅಧ್ಯಯನ ಕ್ಷೇತ್ರಗಳು ವಿಸ್ತಾರಗೊಂಡಿವೆ. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಪೂರಕವಾದ ಕೋರ್ಸ್‌ಗಳನ್ನು ಆರಿಸಿಕೊಳ್ಳಲು ಜಾಸ್ತಿ ಆಯ್ಕೆಗಳಿವೆ.‌ ಆದರೆ ಜಾಸ್ತಿ ಅಂಕ ಪಡೆಯುವುದಕ್ಕೂ ಶ್ರೇಷ್ಠವೆಂದು ಕಲ್ಪಿಸಿಕೊಂಡಿರುವ ಕೋರ್ಸ್‌ನ ಆಯ್ಕೆಗೂ ಇರುವ ಸಂಬಂಧದ ಕಲ್ಪನೆ ಬದಲಾಗಿಲ್ಲ. ಅರ್ಥಾತ್ ಜಾಸ್ತಿ ಅಂಕ ಪಡೆದವರು ಮಾರುಕಟ್ಟೆಯ ದೃಷ್ಟಿಯಿಂದ ಶ್ರೇಷ್ಠ ಎನಿಸಿರುವ ಕೋರ್ಸ್ ಅನ್ನು ಆರಿಸಿಕೊಳ್ಳಬೇಕು ಎಂಬ ಭಾವನೆ ಹಾಗೆಯೇ ಇದೆ.

ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರಗಳೆರಡೂ ಸರಳವಾಗಿ ಇದ್ದಾಗ ಅಂಕ ಮತ್ತು ಕೋರ್ಸ್‌ನ ನಡುವಿನ ಸಂಬಂಧ ತುಸು ಹತ್ತಿರ ಇದ್ದಿರಬಹುದು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಶಿಕ್ಷಣವು ಸಂಕೀರ್ಣವಾಗಿದೆ. ಅಂಕಗಳು ಬಹಳ ಉದಾರವಾಗಿ ಸಿಗುತ್ತಿವೆ. ತಾತ್ವಿಕವಾಗಿ ಜ್ಞಾನದ ಪೂರ್ಣ ಗಳಿಕೆ ಸಾಧ್ಯವಿಲ್ಲ.‌ ಆದ್ದರಿಂದ ನೂರಕ್ಕೆ ನೂರು ಅಂಕ ಪಡೆಯುವುದೂ ಸಾಧ್ಯವಿಲ್ಲ. ಆದರೆ ತಾಂತ್ರಿಕ ಅರ್ಥದಲ್ಲಿ ಹಾಗಲ್ಲ. ನಿರ್ದಿಷ್ಟ ಸನ್ನಿವೇಶದಲ್ಲಿ ನಿರ್ದಿಷ್ಟ ಪಠ್ಯದಲ್ಲಿ ನಿಗದಿಪಡಿಸಿದ ಜ್ಞಾನಾರ್ಜನೆ ಮಾಡುವುದು ಔಪಚಾರಿಕ ಶಿಕ್ಷಣ ವ್ಯವಸ್ಥೆ. ಆದ್ದರಿಂದ ಆ ವ್ಯಾಪ್ತಿಯಲ್ಲಿ ಸಮರ್ಪಕ ಉತ್ತರವೇ ಇದ್ದಾಗ ನೂರಕ್ಕೆ ನೂರು ಅಂಕವನ್ನು ಕೊಡಬಹುದು ಎನ್ನುವುದು ತಾಂತ್ರಿಕವಾಗಿ ಸರಿಯಾದ ವ್ಯಾಖ್ಯಾನವಾಗಿದೆ. ಅದಕ್ಕನುಗುಣವಾಗಿ ನೂರಕ್ಕೆ ನೂರು ಅಂಕವೂ ಸಿಗುತ್ತದೆ.

ಅಂಕ ಗಳಿಕೆಯ ವಿಚಾರದಲ್ಲೂ ತಾತ್ವಿಕ ಧೋರಣೆ ಮತ್ತು ತಾಂತ್ರಿಕ ಧೋರಣೆಯ ನಡುವೆ ವ್ಯತ್ಯಾಸವಿದೆ. ತಾತ್ವಿಕವಾಗಿ, ಚೆನ್ನಾಗಿ ಅಧ್ಯಯನ ನಡೆಸಿದ್ದರ ಪರಿಣಾಮವಾಗಿ ಆ ವಿಷಯದ ಜ್ಞಾನವು ವಿದ್ಯಾರ್ಥಿ ಯಲ್ಲಿ ಬಹುತೇಕ ಶಾಶ್ವತ ಜ್ಞಾನವಾಗಿ ಉಳಿದು
ಕೊಂಡಿರುತ್ತದೆ. ಅದನ್ನು ಪರೀಕ್ಷೆಯಲ್ಲಿ ಬರೆದಾಗ ಬರುವ ಅಂಕಗಳು ನಿಜವಾದ ಸಾಮರ್ಥ್ಯವಾಗಿರುತ್ತದೆ. ಆದರೆ ಇದನ್ನು ಪರೀಕ್ಷಿಸಲು ಹಿಂದೆಯೂ ವ್ಯವಸ್ಥೆಗಳಿರ ಲಿಲ್ಲ, ಈಗಲೂ ಸಮರ್ಪಕ ವ್ಯವಸ್ಥೆ ಇಲ್ಲ. ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಇದ್ದರೆ ಆಯಿತು, ಅಂಕವನ್ನು ಕೊಡಬೇಕು ಎನ್ನುವುದು ತಾಂತ್ರಿಕ ಧೋರಣೆ. ಪರೀಕ್ಷೆಗೆ ಕೇಳಲಾದ ಪ್ರಶ್ನೆಗೆ ಉತ್ತರವನ್ನು ಗಳಿಸಿದ ಜ್ಞಾನದಿಂದಲೇ ಕೊಡಲಾಗಿದೆಯೇ ಅಥವಾ ಯಾಂತ್ರಿಕವಾಗಿ ಕಂಠಪಾಠ ಮಾಡಿ ಅಥವಾ ಉತ್ತರವನ್ನು ಮಾತ್ರ ನೆನಪಿಡುವ ತಂತ್ರಗಳನ್ನು ಅನುಸರಿಸಿ ಕೊಡಲಾಗಿದೆಯೇ ಎಂಬುದನ್ನು ಪರೀಕ್ಷೆಯು ಪರೀಕ್ಷಿ
ಸುವುದಿಲ್ಲ.

ಇಲ್ಲಿ ಗಮನದಲ್ಲಿ ಇರಿಸಿಕೊಳ್ಳಲೇಬೇಕಾದ ಶೈಕ್ಷಣಿಕ ಅಂಶವೊಂದಿದೆ. ಎಸ್ಎಸ್ಎಲ್‌ಸಿವರೆಗಿನ ಸಾಮಾನ್ಯ ಶಿಕ್ಷಣವು ಎಲ್ಲ ವಿಷಯಗಳನ್ನೂ ಪರಿಚಯಾತ್ಮಕವಾಗಿಯಷ್ಟೇ ಒದಗಿಸುತ್ತದೆ.‌ ಆಗ ಉತ್ತರಗಳನ್ನು ಸರಳ ತಂತ್ರಗಳಲ್ಲಿ ನೆನಪಿರಿಸಿಕೊಂಡ ಹಾಗೆ ಮುಂದಿನ ಹಂತಗಳಲ್ಲೂ ಸಾಧ್ಯವಾಗುವುದಿಲ್ಲ.‌ ನಿರ್ದಿಷ್ಟ ಕೋರ್ಸ್ ಆಯ್ಕೆ ಮಾಡಿಕೊಂಡಾಗ ಕಲಿಕಾ ವಿಷಯಗಳು ವಿಸ್ತೃತ ವಾಗುತ್ತವೆ, ಆಳವಾಗುತ್ತವೆ.‌ ಆಗ ಅಲ್ಲಿ ಸ್ವಂತಿಕೆಯ ಓದುವಿಕೆಯೇ ಬೇಕಾಗುತ್ತದೆ.‌ ವಿದ್ಯಾರ್ಥಿಯಲ್ಲಿ ತಾನು ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ನಲ್ಲಿನ ಕಲಿಕಾಂಶಗಳನ್ನು
ಸ್ವತಂತ್ರವಾಗಿ ಓದಲು ಬೇಕಾದ ಸಾಮರ್ಥ್ಯ ಇಲ್ಲದೇ ಇದ್ದರೆ ಆಗ ಭವಿಷ್ಯದಲ್ಲಿ ಕಲಿಕಾ ಹಿನ್ನಡೆ ಉಂಟಾಗುತ್ತದೆ. ಆದ್ದರಿಂದ ಎಸ್ಎಸ್ಎಲ್‌ಸಿಯಲ್ಲಿ ಗಳಿಸಿದ ಅಂಕವನ್ನು ಮಾತ್ರವೇ ಆಧಾರವಾಗಿ ಇರಿಸಿಕೊಂಡು ಮುಂದಿನ ಓದಿಗೆ ಕೋರ್ಸ್ ಆರಿಸಿಕೊಳ್ಳುವುದು ಸಮಂಜಸವಲ್ಲ.

ಕೋರ್ಸ್‌ನ ಆಯ್ಕೆಯ ಇನ್ನೊಂದು ಮಗ್ಗುಲಿನಲ್ಲಿ ಭವಿಷ್ಯದ ಔದ್ಯೋಗಿಕ ಪ್ರಪಂಚ ಮತ್ತು ಮಾರುಕಟ್ಟೆಯ ಸಾಧ್ಯತೆಗಳು ಇವೆ.‌ ಇಂದಿನ ಔದ್ಯೋಗಿಕ ಪ್ರಪಂಚಕ್ಕೆ ಜಾಗತಿಕ ವ್ಯಾಪ್ತಿ ಇದೆ.‌ ಇದು ಈ ತಲೆಮಾರಿನ ವಿದ್ಯಾರ್ಥಿ ಗಳಿಗೆ ದೊಡ್ಡದಾದ ಅವಕಾಶ ಎಂಬುದೇನೋ ನಿಜ. ಆದರೆ, ಔದ್ಯೋಗಿಕ‌ ಜಗತ್ತು ಭವಿಷ್ಯದಲ್ಲಿ ಸಾಗಬಹುದಾದ ದಿಕ್ಕನ್ನು ಅಂದಾಜಿಸಲಿಕ್ಕೂ ಸಾಧ್ಯವಿಲ್ಲದಷ್ಟು ಜಟಿಲವೂ ಆಗಿದೆ.‌ ಇದು ಈ ತಲೆಮಾರಿಗೆ ಇರುವ ಸವಾಲು.

ಸದ್ಯೋಭವಿಷ್ಯದಲ್ಲಿ ಸರ್ಕಾರಿ ಕೇಂದ್ರಿತ ಔದ್ಯೋಗಿಕ ವ್ಯವಸ್ಥೆ ಇನ್ನಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಲಿದೆ.‌ ಬದಲಿಗೆ ಖಾಸಗಿ ಕಾರ್ಪೊರೇಟ್ ಕಂಪನಿಗಳು ಬಹುದೊಡ್ಡ ಉದ್ಯೋಗದಾತ ಸಂಸ್ಥೆಗಳಾಗಿರುತ್ತವೆ.‌ ಅವು ಯಾವುದೇ ಸಂದರ್ಭದಲ್ಲೂ ಔದ್ಯೋಗಿಕ ಜಗತ್ತಿನ ದಿಕ್ಕನ್ನು ಬದಲಿಸ ಬಲ್ಲವು.‌ ಆದ್ದರಿಂದ ಕೋರ್ಸ್‌ನ ಆಯ್ಕೆಯು ಬರಿಯ ವಿಷಯ ಜ್ಞಾನಕ್ಕೆ ಮಾತ್ರ ಸೀಮಿತವಾಗುವುದಿಲ್ಲ.‌ ಬದಲಾಗಿ ಆಯಾ ಕೋರ್ಸ್ ಅನ್ನು ಆಧರಿಸಿದ ಜಾಗತಿಕ ಮಾರುಕಟ್ಟೆ ಬಯಸುವ ದಕ್ಷತೆ ಮತ್ತು ಬದಲಾಗುವ ಶೈಲಿಗೆ ಒಗ್ಗಿಕೊಳ್ಳುವ ಸಾಮರ್ಥ್ಯವನ್ನೂ ವಿದ್ಯಾರ್ಥಿಯಿಂದ ಅಪೇಕ್ಷಿಸುತ್ತದೆ.

ಹಾಗಿದ್ದರೆ ಮುಂದಿನ ಓದಿಗೆ ಹೇಗೆ ಕೋರ್ಸ್ ಆರಿಸಿ ಕೊಳ್ಳಬೇಕು ಎಂಬ ಪ್ರಶ್ನೆ ಬರುತ್ತದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಅವರವರ ಆಸಕ್ತಿಯ ವಿಷಯಗಳನ್ನು ಆಧರಿಸಿ ಭವಿಷ್ಯದ ಕೋರ್ಸ್ ಅನ್ನು ಆರಿಸಿಕೊಳ್ಳಬೇಕು ಎಂದು ಉಚಿತ ಸಲಹೆಯನ್ನು ನೀಡುವ ಪದ್ಧತಿ ನಮ್ಮ ಸಮಾಜದಲ್ಲಿದೆ. ಶೈಕ್ಷಣಿಕ ತತ್ವಗಳ ಆಧಾರದಲ್ಲಿ ಈ ಸಲಹೆ ಸರಿಯಾಗಿದೆ.‌ ಆದರೆ ಕಲಿಕೆಗೆ ಜ್ಞಾನಾರ್ಜನೆಯ ಆಯಾಮ‌ ಇರುವ ಹಾಗೇ ಜ್ಞಾನವು ನಿಷ್ಕ್ರಿಯ ಜ್ಞಾನವಾಗಿ ಉಳಿಯದೆ ಉಪಯುಕ್ತ ಜ್ಞಾನವಾಗಿ ಪರಿವರ್ತನೆ ಆಗಬೇಕಾ
ಗುತ್ತದೆ. ಉಪಯುಕ್ತತೆಗೆ ಸಾಮಾಜಿಕ ಆಯಾಮವಿರುವ ಹಾಗೆ ವೈಯಕ್ತಿಕ ಆಯಾಮವೂ ಇದ್ದು ವಿದ್ಯಾರ್ಥಿಗೂ ಅದು ಉಪಯೋಗಕ್ಕೆ ಬರಬೇಕು.‌ ಉದಾಹರಣೆಗೆ, ಒಬ್ಬ ವಿದ್ಯಾರ್ಥಿಗೆ ಇತಿಹಾಸದ ಬಗ್ಗೆ ಆಸಕ್ತಿ ಇದೆ ಎಂದು ಇತಿಹಾಸವನ್ನು ಆಯ್ಕೆ ಮಾಡಿಕೊಂಡರೆ ಆತ ಉದ್ಯೋಗವನ್ನು ಕೇಳುವ ವಯಸ್ಸಿಗೆ ಬಂದಾಗಲೂ ಅವನು ಕಲಿತ ಇತಿಹಾಸವೇ ಉಪಯೋಗಕ್ಕೆ ಬರಲಿದೆಯೇ? ಈ ಪ್ರಶ್ನೆ ಮುಖ್ಯವಾಗುತ್ತದೆ.‌

ಆ ಸಂದರ್ಭಕ್ಕಾದಾಗ ರಸ್ತೆ ನಿರ್ಮಾಣ ಕಂಪನಿಗೆ ರಸ್ತೆಯ ಇತಿಹಾಸದ ವರದಿ ಬೇಕಾಗುತ್ತದೆ ಎಂದು ಕಲ್ಪಿಸಿ ಕೊಳ್ಳೋಣ.‌ ಆ ಉದ್ಯೋಗಕ್ಕೆ ಚಂದ್ರಗುಪ್ತ, ಅಕ್ಬರ್, ವಾಸ್ಕೋಡಗಾಮನ ವಿವರಗಳು ಬೇಕಾಗುವುದಿಲ್ಲ. ಬದಲಿಗೆ ಮಣ್ಣಿನ ಇತಿಹಾಸದ ಜ್ಞಾನ ಅವಶ್ಯವಿರುತ್ತದೆ. ಮಣ್ಣಿನ ಇತಿಹಾಸ ಜ್ಞಾನ ಲಭ್ಯವಾಗಬೇಕಾದರೆ ಆಯ್ಕೆ ಮಾಡಿಕೊಂಡ ಕೋರ್ಸ್‌ನಲ್ಲಿ ಇತಿಹಾಸದೊಂದಿಗೆ ಭೂಗೋಳವೂ ಇರಬೇಕು ಅಥವಾ ಇತಿಹಾಸದಲ್ಲಿ ಮಣ್ಣಿನ ಇತಿಹಾಸವನ್ನೂ ಕಲಿಸುವ ಕೋರ್ಸ್ ಇರಬೇಕು ಅಥವಾ ಮಣ್ಣಿನ ಇತಿಹಾಸವನ್ನು ಸಂಶೋಧಿಸುವ ಸಾಮರ್ಥ್ಯವನ್ನು ಕೋರ್ಸ್ ವಿದ್ಯಾರ್ಥಿಯಲ್ಲಿ ಬೆಳೆಸಿರಬೇಕಾಗುತ್ತದೆ. ಇದು ಬರೀ ಉದಾಹರಣೆಯಷ್ಟೆ. ಆದರೆ ನಿಜವಾಗಿಯೂ 2013ರ ನಂತರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಂಸ್ಕೃತಿಕ ಇತಿಹಾಸಕ್ಕೆ ಹೆಚ್ಚು ಮಹತ್ವವಿದೆ. ಆದರೆ ಇತಿಹಾಸದ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ರಾಜಕೀಯ ಇತಿಹಾಸವನ್ನೇ ಹೆಚ್ಚಾಗಿ ಕಲಿಸಲಾಗುತ್ತಿದೆ.‌ ಇಂತಹ ಸಂದರ್ಭದಲ್ಲಿ, ಕಲಿತ ವಿಷಯ ವಿದ್ಯಾರ್ಥಿಗೆ ಹೆಚ್ಚು ಸಹಾಯಕ್ಕೆ ಬರುವುದಿಲ್ಲ. ಬದಲು ವಿದ್ಯಾರ್ಥಿಯ ಲ್ಲಿರುವ ದಕ್ಷತೆ ಸಹಾಯಕ್ಕೆ ಬರುತ್ತದೆ. ಆದ್ದರಿಂದ ಆಯ್ಕೆಯು ಕೋರ್ಸ್ ಮಾತ್ರ ಆಗಿರದೆ ಯಾವ ವಿದ್ಯಾಸಂಸ್ಥೆ ಗಳಲ್ಲಿ ವಿದ್ಯಾರ್ಥಿಯ ದಕ್ಷತೆಯನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ ಎಂಬುದನ್ನೂ ಆಧರಿಸಿರಬೇಕಾಗುತ್ತದೆ.

ವಿದ್ಯಾರ್ಥಿಗಳ ದಕ್ಷತೆ ಹೆಚ್ಚಳದ ವಿಚಾರದಲ್ಲಿ ಅವರವರ ಆಸಕ್ತಿಯ ವಿಷಯಗಳಿಗೆ ಜಾಸ್ತಿ ಪ್ರಾಮುಖ್ಯ ಇರುತ್ತದೆ.‌ ಆದರೆ ಆಸಕ್ತಿಯೇ ಅಂತಿಮ ಅಲ್ಲ. ಆಸಕ್ತಿ ಇದ್ದ ಮಾತ್ರಕ್ಕೆ ದಕ್ಷತೆ ಇರಲೇಬೇಕೆಂದೇನೂ ಇಲ್ಲ. ವಿದ್ಯಾರ್ಥಿಗೆ ಸುಲಭ ಎನಿಸುವ ವಿಷಯದಲ್ಲಿ ಆಸಕ್ತಿ ಕಾಣಿಸಬಹುದು ಅಥವಾ ವಿದ್ಯಾರ್ಥಿಗೆ ಪ್ರಿಯರಾದ ಅಧ್ಯಾಪಕರು ಬೋಧಿಸುವ ವಿಷಯ ಎಂಬ ನೆಲೆಯಲ್ಲೂ ಆಸಕ್ತಿ ಕಾಣಿಸಬಹುದು. ಆದರೆ ದಕ್ಷತೆ ಬೇರೆ ವಿಷಯದಲ್ಲಿ ಇರಲಿಕ್ಕೂ ಸಾಧ್ಯವಿದೆ. ಆಗ ವಿದ್ಯಾರ್ಥಿ ತನ್ನ ದಕ್ಷತೆ ಯಾವುದರಲ್ಲಿದೆ ಎಂಬುದನ್ನು ಪರಿಶೀಲಿಸಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.‌ ಮತ್ತೆ ಇಲ್ಲಿ ನೆನಪಿಡಬೇಕಾದದ್ದು ಅಂಕಗಳೇ ದಕ್ಷತೆಯ ಏಕೈಕ ಮಾನದಂಡವಾಗಲಾರವು ಎಂಬುದನ್ನು. ವಿದ್ಯಾರ್ಥಿಯ ದಕ್ಷತೆಯನ್ನು ವಿದ್ಯಾರ್ಥಿಯೇ ಪರಿಶೀಲಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಹಿರಿಯರ ಸಹಾಯ ಬೇಕಾಗಬಹುದು ಅಥವಾ ನುರಿತ ಶೈಕ್ಷಣಿಕ ಮನಃಶಾಸ್ತ್ರಜ್ಞರು ವಿದ್ಯಾರ್ಥಿಯ ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸಿ ಸಲಹೆ ನೀಡಬೇಕಾಗಬಹುದು. ಆದರೆ ಇದನ್ನು ವೈಯಕ್ತಿಕ ನೆಲೆಯಲ್ಲಿ ಮಾಡಬೇಕಾಗುತ್ತದೆ.‌ ಸಾರ್ವತ್ರಿಕ ವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಮಾಜದ ಒಟ್ಟೂ ಚಿಂತನಾ ಕ್ರಮದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಅಧ್ಯಯನದ ಆಯ್ಕೆಯ ಮಾನದಂಡದ ಪರಿಕಲ್ಪನೆಗಳು ಬದಲಾಗಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT