ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ| ಜನಸಂಖ್ಯೆಯಲ್ಲಿ ಮುಂಚೂಣಿಗೆ- ಮುಂದೆ?

Published 1 ಮೇ 2023, 18:33 IST
Last Updated 1 ಮೇ 2023, 18:33 IST
ಅಕ್ಷರ ಗಾತ್ರ

ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಜಗತ್ತಿನ ಮೊದಲ ಸ್ಥಾನಕ್ಕೆ ಏರಿರುವ ಸುದ್ದಿ ಇತ್ತೀಚೆಗೆ ಬಂತು. ವಿಶ್ವಸಂಸ್ಥೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, 142.86 ಕೋಟಿ ಜನಸಂಖ್ಯೆಯೊಂದಿಗೆ ಭಾರತ ಈಗ ಈ ಸ್ಥಾನಕ್ಕೆ ತಲುಪಿದೆ. 1950ಕ್ಕೆ ಹೋಲಿಸಿದಾಗ, ಭಾರತದ ಜನಸಂಖ್ಯೆ 75 ವರ್ಷದಲ್ಲಿ ನೂರು ಕೋಟಿಯಷ್ಟು ಹೆಚ್ಚಿದೆ. ಜಗತ್ತಿನ ಜನಸಂಖ್ಯೆ 800 ಕೋಟಿ ತಲುಪುತ್ತಿರುವಾಗ, ಜಗತ್ತಿನ ಪ್ರತಿ ಐವರಲ್ಲಿ ಒಬ್ಬರು ಭಾರತೀಯರು ಅನ್ನುವುದು ಇದರ ಅಗಾಧತೆಯನ್ನು ಗ್ರಹಿಸಲು ನೆರವಾಗಬಹುದು.

ಎರಡನೆಯ ಮಹಾಯುದ್ಧದ ನಂತರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಾದ ಅಗಾಧ ಬದಲಾವಣೆಗಳು ಆಹಾರ ಉತ್ಪಾದನೆ, ಆರೋಗ್ಯ ಸೇವೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದ ಪರಿಣಾಮ, ಮನುಷ್ಯನ ಸರಾಸರಿ ಜೀವಿತಾವಧಿ ಹೆಚ್ಚಿದ್ದೂ ಈ ಹೆಚ್ಚಳಕ್ಕೆ ಬಹುಮುಖ್ಯ ಕಾರಣಗಳಲ್ಲೊಂದು. ಈಗಿರುವ ಅಂದಾಜಿನ ಪ್ರಕಾರ, ದೊಡ್ಡ ಪ್ರಮಾಣದ ಸಾಂಕ್ರಾಮಿಕ ಕಾಯಿಲೆಗಳು, ಯುದ್ಧದಂತಹವು ಜರುಗದೇ ಇದ್ದಲ್ಲಿ ಜಗತ್ತಿನ ಜನಸಂಖ್ಯೆ 2090ಕ್ಕೆ ಸಾವಿರ ಕೋಟಿ ತಲುಪಿ ಆಮೇಲಷ್ಟೇ ಇಳಿಮುಖವಾಗಬಹುದು. ಪರಿಸರವನ್ನು, ಇತರೆಲ್ಲ ಜೀವರಾಶಿಗಳನ್ನು ಬುದ್ಧಿವಂತಿಕೆಯ ಬಲದಿಂದ ತನ್ನ ಕೈವಶ ಮಾಡಿಕೊಂಡು ನಡೆಯಬಲ್ಲ ಮನುಷ್ಯ ಎಂಬ ಒಂದೇ ಒಂದು ಪ್ರಭೇದದ ಎಣಿಕೆ ಹೀಗೆ ಏರುವುದು ಯಾವ ರೀತಿಯಲ್ಲೂ ಭೂಮಿಗಾಗಲಿ, ಒಟ್ಟಾರೆ ಮನುಕುಲಕ್ಕಾಗಲಿ ಒಳಿತು ಮಾಡಲಿಕ್ಕಿಲ್ಲ.

ವಸಂತ ಶೆಟ್ಟಿ
ವಸಂತ ಶೆಟ್ಟಿ

ಹೀಗೆ ಏರುತ್ತಿರುವ ಜನಸಂಖ್ಯೆಯನ್ನು ಪೊರೆಯಲು ಬೇಕಿರುವ ಶಕ್ತಿಮೂಲಗಳನ್ನು ನಿರಂತರವಾಗಿ ಪೂರೈಸುವ ಸವಾಲುಗಳು, ಅವುಗಳಿಗಾಗಿ ನಡೆಯುವ ಸಂಘರ್ಷಗಳು ಮತ್ತು ಈ ಶಕ್ತಿಮೂಲಗಳ ಅತಿಯಾದ ಬಳಕೆಯನ್ನೇ ಬುನಾದಿಯನ್ನಾಗಿ ಇರಿಸಿಕೊಂಡಿರುವ ಆಧುನಿಕ ಅರ್ಥವ್ಯವಸ್ಥೆ ತರುವ ಪರಿಸರದ ಬಿಕ್ಕಟ್ಟುಗಳು ಮುಂದಿನ ದಿನಗಳಲ್ಲಿ ಜಗತ್ತಿನ ರಾಜಕಾರಣವನ್ನು ಸಹಕಾರದ ಹಾದಿಗಿಂತ ಸಂಘರ್ಷದ ಹಾದಿಯತ್ತ ತಳ್ಳಬಹುದು. ಇದು ವಿಶ್ವಸಂಸ್ಥೆಯಂತಹ ಸಂಸ್ಥೆಗಳ ಹೊಣೆಗಾರಿಕೆಯನ್ನು ಇನ್ನೂ ಹೆಚ್ಚಿಸಿದೆ. ಇಂತಹ ಸಂಸ್ಥೆಗಳು ಕೆಲ ಮುಂದುವರಿದ ದೇಶಗಳ ಕೈಗೊಂಬೆಯಾಗದೆ ನಿಜ ಅರ್ಥದಲ್ಲಿ ‘ಜಗತ್ತೇ ಒಂದು ಕುಟುಂಬ’ ಅನ್ನುವ ತತ್ವವನ್ನು ನಂಬಿ ನಡೆಯುವ ಕಾಯಕಕ್ಕೆ ಮುಂದಾಗಬೇಕಿದೆ. ‘ನನ್ನ ದೇಶವೇ ಶ್ರೇಷ್ಠ’ ಅನ್ನುವ ಅತಿರೇಕದ ರಾಷ್ಟ್ರವಾದ ಎಲ್ಲೆಡೆ ಮುನ್ನೆಲೆಗೆ ಬರುತ್ತಿರುವಾಗ, ಇಂತಹ ಸಂಸ್ಥೆಗಳು ಎಲ್ಲ ದೇಶಗಳನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯುವುದು ಕಪ್ಪೆಗಳನ್ನು ತಕ್ಕಡಿಗೆ ಹಾಕುವಷ್ಟೇ ಸವಾಲಿನದ್ದು.

ಜನಸಂಖ್ಯೆಯ ಏರಿಕೆಯು ದೇಶ ದೇಶಗಳ ನಡುವೆ ತರುವ ರಾಜಕೀಯ, ಸಾಮಾಜಿಕ ಮತ್ತು ಪರಿಸರದ ಬಿಕ್ಕಟ್ಟುಗಳು ಒಂದು ತೆರನಾದರೆ, ದೇಶಗಳ ಒಳಗೂ ಅದು ಹಲವು ರೀತಿಯ ಸಮಸ್ಯೆಗಳನ್ನು ಹುಟ್ಟುಹಾಕಲಿದೆ. ಭಾರತದ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಳದ ಸಮಸ್ಯೆಗೆ ಇನ್ನೂ ಹಲವು ಆಯಾಮಗಳಿವೆ. ಮೊದಲಿಗೆ, ಭಾರತದ ಜನಸಂಖ್ಯೆಯ ಬೆಳವಣಿಗೆ ದೇಶದೆಲ್ಲೆಡೆ ಒಂದೇ ತೆರನಾಗಿಲ್ಲ. ಗುಜರಾತ್, ಮಹಾರಾಷ್ಟ್ರ ಮತ್ತು ದಕ್ಷಿಣದ ಎಲ್ಲ ರಾಜ್ಯಗಳಲ್ಲೂ ಜನಸಂಖ್ಯೆ ಬೆಳವಣಿಗೆಯ ಸಮತೋಲನದ ಮಟ್ಟವನ್ನು ಸೂಚಿಸುವ ಫಲವಂತಿಕೆ ದರದ (ಟಿ.ಎಫ್.ಆರ್) ಪ್ರಮಾಣ 2.1ಕ್ಕಿಂತ ಕೆಳಗಿದೆ. ಸರಳವಾಗಿ ಹೇಳಬೇಕು ಅಂದರೆ, 100 ಗಂಡು, 100 ಹೆಣ್ಣಿಗೆ 210 ಮಕ್ಕಳಾಗುವುದು ಜನಸಂಖ್ಯೆ ಏರದೇ, ಇಳಿಯದೇ ಸಮತೋಲನದ ಮಟ್ಟ ಸಾಧಿಸುವ ಪ್ರಮಾಣ ಎನ್ನಲಾಗುತ್ತದೆ. ಅದು ಈಗಾಗಲೇ ಕರ್ನಾಟಕದಂತಹ ರಾಜ್ಯದಲ್ಲಿ 170ಕ್ಕೆ ಇಳಿದಿದೆ. ಇದರರ್ಥ, ಮುಂದಿನ ಒಂದು ದಶಕದಲ್ಲಿ ಕರ್ನಾಟಕದ ಮೂಲನಿವಾಸಿಗಳ ಜನಸಂಖ್ಯೆ ಕುಸಿಯುತ್ತ ಸಾಗಲಿದೆ.

1951ರಲ್ಲಿ ಭಾರತದ ಜನಸಂಖ್ಯೆಯಲ್ಲಿ ಕನ್ನಡಿಗರ ಪ್ರಮಾಣ ಶೇ 4.05ರಷ್ಟು  ಇತ್ತು. 2011ರ ಗಣತಿಯ ಹೊತ್ತಿಗೆ ಅದು ಶೇ 3.59ಕ್ಕೆ ಕುಸಿದಿದೆ. ಅದು ಇನ್ನೂ ಇಳಿಮುಖವಾಗಲಿದೆ. ಆದರೆ ಇದೇ ಹೊತ್ತಿನಲ್ಲಿ ಉತ್ತರಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಇಂದಿಗೂ ಫಲವಂತಿಕೆ ದರದ ಪ್ರಮಾಣ ಸಮತೋಲನದ ಮಟ್ಟಕ್ಕಿಂತ ಬಹಳಷ್ಟು ಮೇಲಿದೆ. ಇದರ ಪರಿಣಾಮವಾಗಿ, ಮುಂದಿನ ಒಂದೆರಡು ದಶಕಗಳಲ್ಲಿ ಭಾರತದ ಜನಸಂಖ್ಯೆಯ ಏರಿಕೆಯಲ್ಲಿ ಉತ್ತರದ ಈ ಕೆಲವೇ ರಾಜ್ಯಗಳ ಕೊಡುಗೆ ಸಿಂಹಪಾಲಿನದ್ದಾಗಿರಲಿದೆ.

ಜನಸಂಖ್ಯೆ ಬೆಳವಣಿಗೆಯ ಸಮಸ್ಯೆಯನ್ನು ಭಾರತದ ಮಟ್ಟದಲ್ಲಿ, ಒಟ್ಟಂದದಲ್ಲಿ ನೋಡಬೇಕು ಅನ್ನುವುದು ನಿಜ. ಆದರೂ ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಇದು ರಾಜ್ಯಗಳ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಯ ಮೇಲೆ ಬೀರುವ ಪರಿಣಾಮವನ್ನು ಲೆಕ್ಕಕ್ಕೆ ಹಿಡಿಯದೇ ಹೋದರೆ, ಮುಂದಿನ ಕೆಲವು ದಶಕಗಳಲ್ಲಿ ಹತ್ತಾರು ಹೊಸ ಬಿಕ್ಕಟ್ಟುಗಳು ದೇಶದೊಳಗೂ ಸೃಷ್ಟಿಯಾಗಬಹುದು.

ಜನಸಂಖ್ಯೆಯ ಆಧಾರದ ಮೇಲೆ ರಾಜಕೀಯ ಪ್ರತಿನಿಧಿತ್ವ ಕಲ್ಪಿಸಿರುವ, ಬಹಳಷ್ಟು ಕೇಂದ್ರಿಕೃತವಾಗಿರುವ ವ್ಯವಸ್ಥೆ ನಮ್ಮಲ್ಲಿದೆ. ಇದರಿಂದಾಗಿ ಜನಸಂಖ್ಯೆಯ ಬಲವುಳ್ಳ ರಾಜ್ಯಗಳು ದೆಹಲಿಯಲ್ಲಿ ಹೆಚ್ಚಿನ ಪ್ರತಿನಿಧಿತ್ವ ಪಡೆದಿವೆ. ಸಹಜವಾಗಿಯೇ ಲೋಕಸಭೆಯಲ್ಲಿ ಚಿಕ್ಕ ಚಿಕ್ಕ ರಾಜ್ಯಗಳಿಗೆ ಹೆಚ್ಚಿನ ದನಿಯಿಲ್ಲ. ರಾಜ್ಯಗಳ ಲೋಕಸಭೆ ಸದಸ್ಯರ ಸಂಖ್ಯೆ 1971ರ ಜನಗಣತಿಯ ಮೇಲೆ ನಿಗದಿಯಾಗಿದೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಇಂದು 28 ಲೋಕಸಭೆ ಸದಸ್ಯರಿದ್ದಾರೆ. 2026ರವರೆಗೆ ಇದೇ ಮಾನದಂಡ ಇರಲಿದೆಯಾದರೂ, ತದನಂತರದ ಜನಗಣತಿಯ ಮೇಲೆ ಹೊಸದಾಗಿ ಲೋಕಸಭೆ ಸ್ಥಾನಗಳು ನಿರ್ಧಾರವಾಗಲಿವೆ. ಜನಸಂಖ್ಯೆಯನ್ನು ನಿಯಂತ್ರಿಸಿದ ಕರ್ನಾಟಕದಂತಹ ರಾಜ್ಯಗಳ ಪ್ರತಿನಿಧಿತ್ವ ಕಡಿಮೆಯಾಗಿ, ಉತ್ತರದ ಕೆಲವು ರಾಜ್ಯಗಳಿಗೆ ಇನ್ನಷ್ಟು ಪ್ರತಿನಿಧಿತ್ವ ದೆಹಲಿಯಲ್ಲಿ ಸಿಗಲಿದೆ. ಇದು, ಕರ್ನಾಟಕದ ಲೋಕಸಭಾ ಸದಸ್ಯರ ಸಂಖ್ಯೆಯನ್ನು 23ಕ್ಕೆ ಇಳಿಸಬಹುದು.

ಎರಡನೆಯದಾಗಿ, ರಾಜ್ಯಗಳು ಕಾನೂನು ಸುವ್ಯವಸ್ಥೆ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳ ದೊಡ್ಡ ಹೊಣೆ ಹೊತ್ತಿದ್ದರೂ ಅದನ್ನು ನಿಭಾಯಿಸಲು ಬೇಕಾದ ತೆರಿಗೆ ಸಂಪನ್ಮೂಲವನ್ನು ಸಂಗ್ರಹಿಸಲು ಅವುಗಳಿಗೆ ಇರುವ ಅವಕಾಶ ಅತ್ಯಂತ ಸೀಮಿತವಾಗಿದೆ. ಕೇಂದ್ರ ಸಂಗ್ರಹಿಸುವ ನೇರ ಮತ್ತು ಆದಾಯ ತೆರಿಗೆಯಲ್ಲಿ ಪಾಲೊಂದನ್ನು ಹಣಕಾಸು ಆಯೋಗದಡಿ ಒಂದು ನಿರ್ದಿಷ್ಟ ಸೂತ್ರದಲ್ಲಿ ರಾಜ್ಯಗಳಿಗೆ ಹಂಚುವ ಕ್ರಮವಿದ್ದರೂ ಆ ಸೂತ್ರದಲ್ಲೂ ರಾಜ್ಯವೊಂದರ ಜನಸಂಖ್ಯೆಗೆ ದೊಡ್ಡ ತೂಕವಿದೆ. ಈ ಕಾರಣದಿಂದಲೂ ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಕಡಿಮೆ ತೆರಿಗೆ ಪಾಲು ಸಿಗುವಂತಹ ಬೆಳವಣಿಗೆಯನ್ನು ಈಗ ಗಮನಿಸಬಹುದಾಗಿದೆ. ಕರ್ನಾಟಕದ ಇಂದಿನ ಸರ್ಕಾರವೂ ಸೇರಿದಂತೆ ಹಿಂದಿನ ಹಲವು ಸರ್ಕಾರಗಳು ಈ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅಳಲು ತೋಡಿಕೊಂಡ ಉದಾಹರಣೆಗಳಿವೆ.

ಮೂರನೆಯದಾಗಿ, ಭಾರತದ ಅರ್ಥವ್ಯವಸ್ಥೆಯನ್ನು ಮುನ್ನಡೆಸುತ್ತಿರುವ ಮುಂಚೂಣಿಯ ಬಹುತೇಕ ರಾಜ್ಯಗಳು ಈಗಾಗಲೇ ಜನಸಂಖ್ಯೆಯ ಸಮತೋಲನದ ಮಟ್ಟವನ್ನು ತಲುಪಿವೆ. ಈ ರಾಜ್ಯಗಳಲ್ಲೇ ಹೆಚ್ಚಿನ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿರುವುದರಿಂದ ಜನಸಂಖ್ಯೆಯ ತೀವ್ರ ಸಮಸ್ಯೆ ಹೊಂದಿರುವ ರಾಜ್ಯಗಳಿಂದ ಈ ರಾಜ್ಯಗಳಿಗೆ ದೊಡ್ಡ ಮಟ್ಟದ ವಲಸೆ ನಿರಂತವಾಗಿ ಆಗುತ್ತಿದೆ. ನಮ್ಮ ನಗರಗಳ ಸ್ಥಳೀಯ ಜನಲಕ್ಷಣವನ್ನು ಕಾಯ್ದುಕೊಳ್ಳುವುದು ದಿನಗಳೆದಂತೆ ಕಷ್ಟವಾಗುತ್ತಿದೆ. ಇಂತಹ ವಲಸೆ ನಗರಗಳ ಮೂಲಸೌಕರ್ಯದ ಮೇಲೆ ತೀವ್ರ ಒತ್ತಡವನ್ನು ತರುತ್ತಿದೆ, ನಗರಗಳಲ್ಲಿನ ಪರಿಸರ ಮತ್ತು ಬದುಕಿನ ಮಟ್ಟದ ಕುಸಿತಕ್ಕೂ ಕಾರಣವಾಗಿದೆ. ಅಲ್ಲದೆ ವಲಸೆ ಬಂದವರು ಕಾಲಕ್ರಮೇಣ ಸ್ಥಳೀಯ ಮುಖ್ಯವಾಹಿನಿಯಲ್ಲಿ ಬೆರೆಯುವುದನ್ನು ಪ್ರೋತ್ಸಾಹಿಸುವ ನೀತಿಗಳನ್ನು ಜಾರಿಗೆ ತರುವ ಯಾವುದೇ ಸ್ವಾಯತ್ತತೆ ರಾಜ್ಯಗಳಿಗೆ ಇಲ್ಲದಿರುವುದರಿಂದ, ಇಂತಹ ವಲಸೆಯು ಸ್ಥಳೀಯರು ಮತ್ತು ವಲಸಿಗರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿರುವಂತಹ ಹತ್ತಾರು ಪ್ರಕರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗ ನಿರಂತರವಾಗಿ ಕಾಣಬಹುದಾಗಿದೆ.

ಭಾರತದ ಜನಸಂಖ್ಯಾ ಬೆಳವಣಿಗೆಯ ಈಗಿನ ಚಿತ್ರಣವನ್ನು ಕಂಡಾಗ, ಇಂತಹ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು ಅನ್ನಿಸುತ್ತದೆ.

ಒಟ್ಟಿನಲ್ಲಿ ಅತಿರೇಕದ ರಾಷ್ಟ್ರವಾದ, ಅಣುಯುದ್ಧದ ಸಾಧ್ಯತೆ, ಎ.ಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ, ಜಾಗತಿಕ ತಾಪಮಾನ ಏರಿಕೆಯಂತಹ 21ನೇ ಶತಮಾನದ ಸವಾಲುಗಳ ಮೂಲದಲ್ಲಿ ಜನಸಂಖ್ಯೆಯ ತೀವ್ರ ಬೆಳವಣಿಗೆ ತಳುಕು ಹಾಕಿಕೊಂಡಿದೆ. ಭಾರತದ ಸಂದರ್ಭದಲ್ಲಿ ಈ ಸಮಸ್ಯೆ ಕುರಿತ ಚರ್ಚೆಯಲ್ಲಿ, ಭಾರತದ ವೈವಿಧ್ಯವನ್ನು ಕೇಂದ್ರವಾಗಿ ಇರಿಸಿಕೊಂಡು, ಇದಕ್ಕಿರುವ ಒಳ ಮತ್ತು ಹೊರ ಮುಖಗಳೆರಡರ ಬಗೆಗೂ ಚರ್ಚೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT