ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಒಬಿಸಿ ಒಳವರ್ಗೀಕರಣದ ತುರ್ತು‌

ನ್ಯಾಯಮೂರ್ತಿ ರೋಹಿಣಿ ಆಯೋಗದ ವರದಿಯ ಶೀಘ್ರ ಜಾರಿ ಅಗತ್ಯ
Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಸಂವಿಧಾನದ 340ನೇ ವಿಧಿಯ ಅಡಿಯಲ್ಲಿ ರಚಿಸಿದ ನ್ಯಾಯಮೂರ್ತಿ ರೋಹಿಣಿ ಆಯೋಗವು ಈ ವರ್ಷದ ಜುಲೈ 31ರಂದು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದೆ. ಈ ಆಯೋಗವನ್ನು 2017ರ ಅಕ್ಟೋಬರ್ 2ರಂದು ರಚಿಸಲಾಗಿತ್ತು. ಆಯೋಗದ ಅಧ್ಯಕ್ಷರಾದ ರೋಹಿಣಿ ಅವರು ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ. ಆಯೋಗದ ನೇಮಕವು ಬಿ.ಪಿ. ಮಂಡಲ್ ವರದಿಯ ಜಾರಿ ನಂತರದಲ್ಲಿ ಸಾಮಾಜಿಕ ನ್ಯಾಯದ ಸಾಕಾರಕ್ಕೆ ಕೇಂದ್ರ ಸರ್ಕಾರ ಇಟ್ಟ ಪ್ರಮುಖ ಹಾಗೂ ಮಹತ್ವದ ಹೆಜ್ಜೆ.

ನ್ಯಾಯಮೂರ್ತಿ ರೋಹಿಣಿ ಆಯೋಗದ ಮಹತ್ವ ಏನು ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸುವುದು ಸೂಕ್ತವಾಗಬಹುದು. ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಮೊದಲಿಗೆ ಸಿಕ್ಕಿದ್ದು 1992ರ ನಂತರದಲ್ಲಿ. ಅಂದರೆ, ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಹೊರಬಿದ್ದ ನಂತರದಲ್ಲಿ ಅವರಿಗೆ ಮೀಸಲಾತಿಯ ಪ್ರಯೋಜನ ದೊರೆಯಿತು. ಕೇಂದ್ರ ಸರ್ಕಾರವು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ತನ್ನದೇ ಆದ, ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯೊಂದನ್ನು ಹೊಂದಿದೆ.

ಈ ಪಟ್ಟಿಯ ಉದ್ದೇಶ ಸಂವಿಧಾನದ 15(4) ಮತ್ತು 16(4) ವಿಧಿಗಳ ಅನುಸಾರ ಕ್ರಮವಾಗಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳನ್ನು ದೊರಕಿಸಿಕೊಡುವುದರ ಜೊತೆಗೆ ಇನ್ನೂ ಅನೇಕ ಸಾಂವಿಧಾನಿಕ ಸೌಲಭ್ಯಗಳನ್ನು ಒಬಿಸಿ ಸಮುದಾಯಗಳಿಗೆ ನೀಡುವುದು.

ಕರ್ನಾಟಕವನ್ನು ಉದಾಹರಿಸಿ ಹೇಳುವುದಾದಲ್ಲಿ, ಇಲ್ಲಿನ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಒಬಿಸಿ ಪಟ್ಟಿ ಬೇರೆ. ಕರ್ನಾಟಕದ ಒಬಿಸಿ ಸಮುದಾಯಗಳು ಯಾವುವು ಎಂದು ಕೇಂದ್ರ ಸಿದ್ಧಪಡಿಸಿರುವ ಪಟ್ಟಿಯೇ ಬೇರೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸಿದ್ಧಪಡಿಸಿರುವ ಒಬಿಸಿ ಪಟ್ಟಿಯಲ್ಲಿ 199 ಜಾತಿಗಳ ಉಲ್ಲೇಖವಿದೆ. ಅಂದರೆ ಈ ಪಟ್ಟಿಯಲ್ಲಿ, ಈ ಇಷ್ಟೂ ಜಾತಿಗಳನ್ನು ಒಂದೇ ಬಗೆಯಲ್ಲಿ ನೋಡಲಾಗುತ್ತಿದೆ. ಇಂತಹ ಪಟ್ಟಿಯನ್ನು ಇಟ್ಟುಕೊಂಡು ಮೀಸಲಾತಿಯನ್ನು ನೀಡಿದರೂ ಒಂದೇ, ನೀಡದೆ ಇದ್ದರೂ ಒಂದೇ.

ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಒಬಿಸಿ ಪಟ್ಟಿಯಲ್ಲಿ ಬೇರೆ ಬೇರೆ ವರ್ಗೀಕರಣ ಇದೆ. ಅಂದರೆ, ರಾಜ್ಯ ಸರ್ಕಾರದ ಪ್ರಕಾರ ರಾಜ್ಯದ ಒಬಿಸಿ ಸಮುದಾಯಗಳಲ್ಲಿಯೇ ಹಿಂದುಳಿದವರು ಹಾಗೂ ಅತಿ ಹಿಂದುಳಿದವರು ಇದ್ದಾರೆ. ಆದರೆ, ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಈ ಬಗೆಯ ವರ್ಗೀಕರಣ ಇಲ್ಲ. ಈ ಪಟ್ಟಿಯಲ್ಲಿ ಬಹಳ ಪರಿಷ್ಕರಣೆಗಳೂ ಆಗಿಲ್ಲ. 199 ಜಾತಿಗಳನ್ನು ಸಮಾನ ನೆಲೆಯಲ್ಲಿ ಸ್ಪರ್ಧೆಗೆ ಇಳಿಸಿದರೆ, ಜಾತಿಗಳಲ್ಲಿನ ಪ್ರಬಲರು ಮಾತ್ರ ಗೆಲುವು ಸಾಧಿಸಬಲ್ಲರು. ಒಳವರ್ಗೀಕರಣ ಇಲ್ಲದೆ ಮೀಸಲಾತಿ ಕಲ್ಪಿಸುವುದು, ಮೀಸಲಾತಿಯ ತತ್ವಕ್ಕೆ ವಿರುದ್ಧ.

ಒಬಿಸಿ ಸಮುದಾಯ ಕೂಡ ಏಕರೂಪದ್ದಲ್ಲ. ಅಲ್ಲಿ ಕೂಡ ಹಿಂದುಳಿದವರು, ಹೆಚ್ಚು ಹಿಂದುಳಿದವರು, ಅತಿ ಹಿಂದುಳಿದವರು ಎಂಬ ಒಳವರ್ಗೀಕರಣಗಳು ಇವೆ. ಹೀಗಾಗಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸೀಮಿತವಾಗಿ ಅಥವಾ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸೀಮಿತವಾಗಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಒಳವರ್ಗೀಕರಣ ಅಗತ್ಯ ಇದೆ – ರಾಜ್ಯದ 199 ಜಾತಿಗಳಲ್ಲಿ ಶಕ್ತರು, ಅಶಕ್ತರು ಯಾರು ಎಂಬುದನ್ನು ಗುರುತಿಸುವ ಕೆಲಸ ಆಗಬೇಕು. ಈ ಕೆಲಸ ಇದುವರೆಗೂ ಆಗಿಲ್ಲ.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೀಮಿತವಾಗಿ ಸಿದ್ಧಪಡಿಸಿರುವ ಒಬಿಸಿ ಪಟ್ಟಿಯಲ್ಲಿ ಒಳವರ್ಗೀಕರಣ ಆಗದೆ ಇದ್ದರೆ, ಒಬಿಸಿ ಸಮುದಾಯಗಳಲ್ಲಿನ ಶಕ್ತರಿಗೆ ಮಾತ್ರ ಮೀಸಲಾತಿಯ ಪ್ರಯೋಜನ ಸಿಗುತ್ತದೆ. ಒಳವರ್ಗೀಕರಣ ಬೇಕು ಎಂಬುದನ್ನು ನ್ಯಾಯಾಲಯಗಳು ಕೂಡ ಒಪ್ಪಿವೆ. ಒಳವರ್ಗೀಕರಣದ ಅಗತ್ಯ ಇದೆ ಎಂಬ ಕಾರಣಕ್ಕೆ ನ್ಯಾಯಮೂರ್ತಿ ರೋಹಿಣಿ ಅವರ ಅಧ್ಯಕ್ಷತೆಯ ಈ ಆಯೋಗದ ರಚನೆ ಆಯಿತು.

ಮಂಡಲ್ ಆಯೋಗವು ಒಬಿಸಿ ಸಮುದಾಯಗಳ ಸ್ಥಿತಿ-ಗತಿಯ ಬಗ್ಗೆ ವರದಿ ನೀಡಲು ಕೇಂದ್ರ ಸರ್ಕಾರವು ಸಂವಿಧಾನದ 340ನೇ ವಿಧಿಯ ಪ್ರಕಾರ ನೇಮಿಸಿದ್ದ ರಾಷ್ಟ್ರೀಯ ಆಯೋಗ. ಈ ಆಯೋಗವು 1979ರಲ್ಲಿ ರಚನೆಯಾಗಿ, 1980ರಲ್ಲಿ ವರದಿ ನೀಡಿತು. ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು 1990ರ ಆಗಸ್ಟ್‌ನಲ್ಲಿ ಈ ವರದಿಯ ಜಾರಿಗೆ ತೀರ್ಮಾನಿಸಿತು. ಆದರೆ, ತೀರ್ಮಾನವನ್ನು ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ತಕ್ಷಣಕ್ಕೆ ಆಗಲಿಲ್ಲ. ಕೇಂದ್ರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ ಪ್ರಶ್ನಿಸಲಾಯಿತು. ಆ ಪ್ರಕರಣದ ತೀರ್ಪು 1992ರಲ್ಲಿ ಪ್ರಕಟವಾದ ನಂತರವಷ್ಟೇ ಒಬಿಸಿ ಸಮುದಾಯಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ದಾರಿ ಸುಗಮವಾಯಿತು. ಸಂವಿಧಾನ ಜಾರಿಗೆ ಬಂದಿದ್ದು 1950ರಲ್ಲಿ. ಒಬಿಸಿ ವರ್ಗಗಳಿಗೆ ಮೀಸಲಾತಿ ಕೊಡಬೇಕು ಎಂಬುದು ಸಂವಿಧಾನದ ಆಶಯ. ಆದರೆ ಸಂವಿಧಾನ ಜಾರಿಗೆ ಬಂದ 42 ವರ್ಷಗಳ ನಂತರದಲ್ಲಿ ಒಬಿಸಿ ವರ್ಗಗಳಿಗೆ ಮೀಸಲಾತಿ ಸೌಲಭ್ಯ ದೊರೆಯಿತು.

ಕೇಂದ್ರದ ಆಡಳಿತಕ್ಕೆ ಒಳಪಟ್ಟ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ಸಮುದಾಯಗಳಿಗೆ ಮೀಸಲಾತಿ ನೀಡಲು ಅರ್ಜುನ್ ಸಿಂಗ್ ಅವರು ಕೇಂದ್ರದ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದರು. ಆ ಮೂಲಕ ಕೇಂದ್ರದ ಆಡಳಿತಕ್ಕೆ ‌ಒಳ‍ಪಟ್ಟ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲಾಯಿತು. ಆದರೆ, ಒಬಿಸಿ ಸಮುದಾಯಗಳು ಮೀಸಲಾತಿಗೆ ಕಾಯುವುದು ಅಲ್ಲಿಗೆ ನಿಲ್ಲಲಿಲ್ಲ. ಸಂವಿಧಾನ ತಿದ್ದುಪಡಿಯ ಅನುಸಾರ 2006ರಲ್ಲಿ ತಂದ ವಿಶೇಷ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆ ಪ್ರಕರಣದಲ್ಲಿ ಕೇಂದ್ರದ ಪರವಾಗಿ 2008ರಲ್ಲಿ ತೀರ್ಪು ಬಂತು. ಆನಂತರ ಶಿಕ್ಷಣ ಕ್ಷೇತ್ರದಲ್ಲಿ ಒಬಿಸಿ ಸಮುದಾಯಗಳಿಗೆ ಮೀಸಲಾತಿ ನೀಡಲು ಸಾಧ್ಯವಾಯಿತು.

ನ್ಯಾಯಮೂರ್ತಿ ರೋಹಿಣಿ ಆಯೋಗಕ್ಕೆ 11 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆಯೋಗ ರಚನೆ ಮಾಡುವಾಗ ವಹಿಸಿದ ಪ್ರಮುಖ ಜವಾಬ್ದಾರಿ ಎಂದರೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಅರ್ಹತೆಗೆ ಅನುಗುಣವಾಗಿ ಒಳವರ್ಗೀಕರಣ ನಿರ್ಧರಿಸುವುದು. ರೋಹಿಣಿ ಆಯೋಗದ ಕರೆ ಮೇರೆಗೆ ಈ ಲೇಖಕ ದೆಹಲಿಯಲ್ಲಿ ಹಾಗೂ ಪುಣೆಯಲ್ಲಿ ಚರ್ಚೆಯಲ್ಲಿ ಭಾಗಿಯಾಗಿ ಲಿಖಿತ ಸಲಹೆಗಳನ್ನು ನೀಡಿಯಾಗಿದೆ. ಈ ಆಯೋಗದ ಅವಧಿಯನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿದೆ. ಈಗ ವಿಳಂಬವಾಗಿಯಾದರೂ, ವರದಿ ಸಲ್ಲಿಕೆ ಆಗಿದೆ. ಈಗಲಾದರೂ ವರದಿಯನ್ನು ಪರಿಗಣಿಸಿ, ಅದನ್ನು ಆದಷ್ಟು ಬೇಗ ಜಾರಿಗೆ ತರಬೇಕು.

ಇದನ್ನು ಜಾರಿಗೆ ತರದೇ ಇದ್ದರೆ, ಒಳವರ್ಗೀಕರಣ ಇಲ್ಲದೆ ಮೀಸಲಾತಿಯ ಪ್ರಯೋಜನವನ್ನು ಶಕ್ತ ಜಾತಿಗಳು ಮಾತ್ರ ಪಡೆಯುವುದು ಮುಂದುವರಿಯುತ್ತದೆ. ರಾಜ್ಯ ಸರ್ಕಾರವು ತಾನು ನೀಡುವ ಮೀಸಲಾತಿ ಸೌಲಭ್ಯಕ್ಕಾಗಿ ಸಿದ್ಧಪಡಿಸಿರುವ ಒಬಿಸಿ ಪಟ್ಟಿಯಲ್ಲಿ ಇರುವ ಎಲ್ಲ ಜಾತಿ ಸಮುದಾಯಗಳು ಕೇಂದ್ರವು ಕರ್ನಾಟಕಕ್ಕೆ ಸೀಮಿತವಾಗಿ ಸಿದ್ಧಪಡಿಸಿರುವ ಒಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬ ವಿವಾದವೊಂದು ಇದೆ. ಆದರೆ ಅದು ಪ್ರತ್ಯೇಕ ವಿಚಾರ. ವರದಿ ಸ್ವೀಕರಿಸಿದ ನಂತರದಲ್ಲಿ, ಅದನ್ನು ಜಾರಿಗೆ ತರದೇ ಇದ್ದರೆ, ಕಣ್ಣೊರೆಸುವ ತಂತ್ರವಾಗಿ ಇದನ್ನು ರಚಿಸಿದಂತೆ ಆಗುತ್ತದೆ. ಆ ರೀತಿ ಆಗಬಾರದು.

ಕೇಂದ್ರದ ಶಿಕ್ಷಣ ಸಚಿವ ಸುಭಾಷ್ ಸರ್ಕಾರ್ ಅವರು ಸಂಸತ್ತಿನಲ್ಲಿ ಇತ್ತೀಚಿಗೆ ನೀಡಿರುವ ಹೇಳಿಕೆ ಪ್ರಕಾರ ಕೇಂದ್ರ ಸರ್ಕಾರದ ಅಧೀನದ 45 ವಿಶ್ವವಿದ್ಯಾಲಯಗಳಲ್ಲಿ ಕೇವಲ 5 ಮಂದಿ ಕುಲಪತಿಗಳು, ಶೇ 4ರಷ್ಟು ಪ್ರೊಫೆಸರ್‌ಗಳು, ಶೇ 6ರಷ್ಟು ಸಹ ಪ್ರಾಧ್ಯಾಪಕರು ಒಬಿಸಿ ಸಮುದಾಯಗಳಿಗೆ ಸೇರಿದವರು. ಇದು ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯ ಪ್ರಮಾಣಕ್ಕಿಂತ ಕಡಿಮೆ ಎಂದು ಸಚಿವರು ಹೇಳಿದ್ದಾರೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಪ್ರೊಫೆಸರ್‌ಗಳ ಪ್ರಮಾಣ ಶೇ 85ರಷ್ಟು, ಸಹಾಯಕ ಪ್ರಾಧ್ಯಾಪಕರ ಪ್ರಮಾಣ ಶೇ 82ರಷ್ಟು. ಉಪನ್ಯಾಸಕೇತರ ಹುದ್ದೆಗಳಲ್ಲಿ ಒಬಿಸಿ ಪ್ರಾತಿನಿಧ್ಯ ಶೇ 12ರಷ್ಟು. ಅಂದರೆ, ಒಬಿಸಿ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿ ಎಂಬುದು ಪೂರ್ಣವಾಗಿ ಜಾರಿಯಾಗಿಲ್ಲ ಎಂದಿದ್ದಾರೆ.

ಪರಿಹಾರವಿಲ್ಲದ ಸಮಸ್ಯೆಗಳಿಲ್ಲ ಎಂಬ ಮಾತು ಬರೀ ಕಾಗದದ ಮೇಲೆ ಉಳಿಯಿತೆ? ಒಳವರ್ಗೀಕರಣ ವಿಳಂಬವಾದಲ್ಲಿ ಒಬಿಸಿ ಮೀಸಲಾತಿ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಮುಂದುವರಿಯುತ್ತದೆ. ತಳಸಮುದಾಯಗಳಿಗೆ ಸಾಮಾಜಿಕ ಭದ್ರತೆಯನ್ನು ನೀಡುವುದೇ ಮೀಸಲಾತಿಯ ಪರಮೋದ್ದೇಶ. ಎಲ್ಲಿಯವರೆಗೆ ಸಾಮಾಜಿಕ ಭದ್ರತೆ, ಸಮಾನತೆ ಇರುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಅಮಾನವೀಯ ಕೃತ್ಯಗಳಿಗೆ ತಡೆ ಇರುವುದಿಲ್ಲ.

ಲೇಖಕ: ಹಿರಿಯ ವಕೀಲ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT