ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕತೆಯ ಕೂಗು: ಕರ್ನಾಟಕ ಒಡೆಯುವ ಜಾತಿಕಾರಣ

Last Updated 3 ಆಗಸ್ಟ್ 2018, 19:47 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಬಜೆಟ್ ಮಂಡಿಸುತ್ತಿದ್ದಂತೆಯೇ ಅದು ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿದೆ ಎಂಬ ಟೀಕೆಗೆ ಒಳಗಾಯಿತು. ಈ ತಾರತಮ್ಯ ಸಹಜವಾಗಿ ಚರ್ಚೆಯಾಗುತ್ತಿರುವಾಗಲೇ ಶ್ರೀರಾಮುಲು, ಉಮೇಶ್ ಕತ್ತಿ ಮುಂತಾದ ನಾಯಕರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಹೋರಾಟ ಶುರು ಮಾಡುವುದಾಗಿ ಎಚ್ಚರಿಸಿದರು. ಇದಾದಾಗಿನಿಂದ ರಾಜ್ಯ ರಾಜಕಾರಣದಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕವು ಇಬ್ಭಾಗವಾಗಿ ಎರಡು ರಾಜ್ಯಗಳಾದರೆ ಏನೇನು ಪರಿಣಾಮಗಳಾಗಬಹುದು, ಯಾರಿಗೆ ಲಾಭ, ಯಾರಿಗೆ ನಷ್ಟವಾಗಬಹುದು, ಯಾಕಾಗಿ ಪ್ರತ್ಯೇಕತೆಯ ಕಿಚ್ಚನ್ನು ಹಚ್ಚಲಾಗುತ್ತಿದೆ ಎಂದು ವಿಚಾರ ಮಾಡಬೇಕಿದೆ. ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈ ಬರಹದಲ್ಲಿದೆ.

ಅಲ್ಪಾವಧಿ ರಾಜಕೀಯ ಲೆಕ್ಕಾಚಾರ ಹಾಗೂ ಪರಿಣಾಮ

ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವುದರಿಂದ ತನ್ನ‌ ಸೀಟುಗಳನ್ನು ಕಾಯ್ದಿರಿಸಿಕೊಳ್ಳಲು ಮಾಡಿರುವ ರಾಜಕೀಯ ತಂತ್ರವೆಂದರೆ ತಪ್ಪಾಗದು. ಸಮ್ಮಿಶ್ರ ಸರ್ಕಾರವನ್ನು ಮೈಸೂರಿನ ಸರ್ಕಾರವೆಂದು ಬಿಂಬಿಸಿ, ಕರ್ನಾಟಕದ ಮಿಕ್ಕ ಭಾಗಗಳ ಸೀಟುಗಳನ್ನು ಕಾಯ್ದಿರಿಸ್ಕೊಳ್ಳಬಹುದು. ದೀರ್ಘಾವಧಿಯಲ್ಲಿ ಪ್ರತ್ಯೇಕ ರಾಜ್ಯವಾದರೆ ಈ ರಾಜ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವುದೂ ಸುಲಭವಾಗುತ್ತದೆ ಎಂಬುದು ಬಿಜೆಪಿಗೆ ಅರಿವಿದೆ. ಇದರಿಂದ ಜೆಡಿಎಸ್‌ಗೆ ಆಗಲಿಅಥವಾ ಕುಮಾರಸ್ವಾಮಿಗಾಗಲಿ ನಷ್ಟಕ್ಕಿಂತ ಲಾಭವೇ ಹೆಚ್ಚು. ಪ್ರತ್ಯೇಕತೆಯ ಕೂಗಿನಲ್ಲಿ ಮೈಸೂರು ಭಾಗದ ಜನರ ಮೇಲೆ ಸಾಧಿಸಲಾಗುವ ಹಗೆತನ ಈ ಜನರನ್ನು ಕುಮಾರಸ್ವಾಮಿಯ ಹಿಂದೆ ನಡೆಯುವಂತೆ ಮಾಡಬಹುದು. ದೀರ್ಘಾವಧಿಯಲ್ಲಿ ಪ್ರತ್ಯೇಕತೆಯ ಕೂಗು ನನಸಾದರೆ ಅದು ಜೆಡಿಎಸ್-ಗೆ ರಾಜಕೀಯ ಬೋನಸ್ ಬಂದ ಹಾಗೆ. ಅಖಂಡ ಕರ್ನಾಟಕದಲ್ಲಿ ಎಂದೂ ಸಿಗದ ಬಹುಮತ ಈ ರಾಜ್ಯದಲ್ಲಿ ಸುಲಭವಾಗಿ ಸಿಗುತ್ತದೆ. ಹಾಗಾಗಿ ಇದು ಒಂದು ಬೃಹತ್ ಗಾತ್ರದ ಜಾತಿ ರಾಜಕಾರಣದ ಲೆಕ್ಕಾಚಾರ ಅನ್ನುವುದು ಸ್ಪಷ್ಟವಾಗಿದೆ. ಇದರಿಂದ ಅಲ್ಪಾವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ ಗಳಿಸುವವರು ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳು.

ದೀರ್ಘಾವಧಿ ಜಾತಿ ಲೆಕ್ಕಾಚಾರ ಹಾಗು ಪರಿಣಾಮ

ಪ್ರತ್ಯೇಕ ಉತ್ತರ ಕರ್ನಾಟಕದ ರಾಜಕಾರಣವನ್ನು ಲಿಂಗಾಯತರೇ ಸಂಪೂರ್ಣವಾಗಿ ನಿಯಂತ್ರಿಸಬಹುದು. ಹಾಗೆಯೇ ಪ್ರತ್ಯೇಕ ದಕ್ಷಿಣ ಕರ್ನಾಟಕದ ರಾಜಕಾರಣವನ್ನು ಒಕ್ಕಲಿಗರೇ ಸಂಪೂರ್ಣವಾಗಿ ನಿಯಂತ್ರಿಸಬಹುದು. ಅಖಂಡ ಕರ್ನಾಟಕದಲ್ಲಿ ಇವೆರಡೂ ಸಾಧ್ಯವಾಗುದಿಲ್ಲವೆಂದು ಪದೇ ಪದೇ ಸಾಬೀತಾಗಿದೆ. ದಕ್ಷಿಣದ ಒಕ್ಕಲಿಗರ ಹಾಗೂ ಉತ್ತರದ ಲಿಂಗಾಯತರ ರಾಜಕೀಯ ಶಕ್ತಿ ರಾಜ್ಯ ರಾಜಕಾರಣದಲ್ಲಿ ಒಂದು ಸಮತೋಲನವನ್ನು ಕಾಯ್ದಿರಿಸಿದೆ. ಇವೆರಡೂ ಗುಂಪುಗಳಿಗೆ ಪ್ರತಿಯಾಗಿ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಹಾಗೂ ದಲಿತರ ಗುಂಪೊಂದು ನೆಲೆಯೂರಿ ನಿಂತು ಈ ಸಮತೋಲನವನ್ನು ಇನ್ನಷ್ಟು ಗಟ್ಟಿ ಮಾಡಿದೆ. ಹೀಗಾಗಿ ಯಾವುದೇ ಒಂದು ಜಾತಿಗೆ ಇಡೀ ರಾಜ್ಯ ರಾಜಕಾರಣವನ್ನೇ ನಿಯಂತ್ರಿಸುವ ಶಕ್ತಿ ಇಲ್ಲ. ಆದರೆ ಉತ್ತರ-ದಕ್ಷಿಣ ಎಂದು ಎರಡಾದರೆ, ಭಾಷಾವಾರು ರಾಜ್ಯವಾಗಿದ್ದ ಕರ್ನಾಟಕ ಎರಡು ಜಾತಿವಾರು ರಾಜ್ಯಗಳಾಗಿ ಲಿಂಗಾಯತ ಕರ್ನಾಟಕ - ಒಕ್ಕಲಿಗ ಕರ್ನಾಟಕ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದರಿಂದ ಜಾತಿ ಪ್ರಾಬಲ್ಯವನ್ನೇ ಅಂತಿಮ ಗುರಿಯನ್ನಾಗಿಸಿಕೊಂಡು ಅದರಿಂದಲೇ ಪೂರ್ಣಾಧಿಕಾರಕ್ಕೆ ಬರಬೇಕೆಂಬ ಕನಸಿರುವಂತವರಿಗೆ ಲಾಭವಾಗುತ್ತದೆ. ಪ್ರತ್ಯೇಕತೆಯ ಕಿಚ್ಚು ಹಚ್ಚುತ್ತಿರುವ ಪಕ್ಷ ಯಾವುದೆಂದು ನೋಡಿ. ಈ ಕಿಚ್ಚಿಗೆ ತುಪ್ಪ ಸುರಿಯುತ್ತಿರುವ ಪಕ್ಷ ಯಾವುದೆಂದು ನೋಡಿ. ಇವರ ಲೆಕ್ಕಾಚಾರಗಳು ಏನೆಂದು ಸಲೀಸಾಗಿ ತಿಳಿಯುತ್ತೆ. ಪ್ರತ್ಯೇಕತೆಯ ನಿಜವಾದ ದುಷ್ಪರಿಣಾಮವಾಗುವುದು ಎರಡೂ ಭಾಗಗಳಲ್ಲಿನ ದಲಿತ ಹಾಗೂ ಹಿಂದುಳಿದ ವರ್ಗಗಳ ಮೇಲೆ. ಇವರು ಗಳಿಸಿಕೊಂಡಿದ್ದ ಸ್ವಲ್ಪ ರಾಜಕೀಯ ಶಕ್ತಿಯೂ ಕ್ಷೀಣಿಸಿ ಎರಡೂ ರಾಜ್ಯಗಳಲ್ಲಿ ನೆಲೆ ಕಳೆದುಕೊಂಡು ಮೂಲೆಗುಂಪಾಗುತ್ತಾರೆ.

ಹೊಸ ರಾಜ್ಯದ ರಾಜಧಾನಿ ಯಾವುದು?

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯವಾದರೆ ರಾಜಧಾನಿ ಯಾವುದು ಅನ್ನುವುದರಲ್ಲಿ ಒಮ್ಮತವಿದೆಯೇ? ಎರಡು ವರ್ಷದ ಹಿಂದೆ ರಾಜ್ಯದಲ್ಲಿ ಒಂದು ಐಐಟಿ ಬರುತ್ತದೆಯೆಂದು ಗೊತ್ತಾದಾಗ ಅದು ಯಾವ ಊರಿಗೆ ಬರಬೇಕೆನ್ನುವ ವಿಷಯಕ್ಕೆ ದೊಡ್ಡ ಜಗಳವಾಯಿತು. ಕೊನೆಗೆ ಅದು ಧಾರವಾಡದ ಪಾಲಾದಾಗ ಹೈದೆರಾಬಾದ್ ಕರ್ನಾಟಕದಲ್ಲಿ ಗಲಾಟೆಗಳಾಗಿ ನಿಷೇದಾಜ್ಞೆ ಜಾರಿಗೊಳಿಸುವವರೆಗೂ ತಲುಪಿತ್ತು. ಈ ಅಸಮಾಧಾನದಿಂದ ಇದೇ ಸಮಯದಲ್ಲಿ ನಡೆದ ಕಳಸಾ ಬಂಡೂರಿ ಬಂದ್-ಗೆ ಬೆಂಗಳೂರು, ಮೈಸೂರು ಹಾಗೂ ದಕ್ಷಿಣ ಕರ್ನಾಟಕದ ಪೂರ್ತಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾದರೆ ಹೈದೆರಾಬಾದ್ ಕರ್ನಾಟಕದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ಸಿಕ್ಕಿತ್ತು. ಸ್ಥಳೀಯರಿಗೆ ಏನೂ ಪ್ರಯೋಜನವಾಗದ ಐಐಟಿಗಾಗೇ ಇಷ್ಟು ಪೈಪೋಟಿ ಇದ್ದಮೇಲೆ, ರಾಜ್ಯದ ರಾಜಧಾನಿ ಯಾವುದೆಂಬ ಪ್ರಶ್ನೆಗೆ ಉತ್ತರ ಸುಲಭವಾಗಿ ಸಿಕ್ಕೀತೇ? ರಾಜಧಾನಿ ಯಾವುದೆಂದು ನಿರ್ಧಾರವಾದ ಮೇಲೆ ಆ ನಗರಕ್ಕೆ ಸಾಕಷ್ಟು ಮೂಲಸೌಕರ್ಯಗಳು ಬೇಕು. ಈ ಸೌಕರ್ಯಗಳಿಗೆ ರಾಜ್ಯ ಕೇಂದ್ರದ ಮೊರೆ ಹೋಗಲೇಬೇಕು. ಅಮರಾವತಿಯ ಸ್ಥಾಪನೆಗೆ ಆಂಧ್ರ ಪ್ರದೇಶ ಹೇಗೆ ಪರದಾಡುತ್ತಿದೆಯೆಂದು ನಾವೆಲ್ಲರೂ ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದ ಭಾಗವಾಗೇ ಇದ್ದ ಪಕ್ಷಕ್ಕೇ ನೆರವು ಪಡೆಯಲು ಸಾಧ್ಯವಾಗದಿದ್ದಾಗ ನಮ್ಮ ಧೀರ್ಘಾವಧಿ ಸಮಸ್ಯೆಗಳಿಗೆ ಎಂದೂ ತುಟಿಕ್-ಪಿಟಿಕ್ ಅನ್ನದ ರಾಜಕಾರಣಿಗಳನ್ನು ಇಟ್ಟುಕೊಂಡಿರುವ ನಾವು ಕೇಂದ್ರದಿಂದ ಏನಾದರೂ ಅಪೇಕ್ಷಿಸಲು ಸಾಧ್ಯವೇ?

ಹೊಸ ರಾಜ್ಯದಲ್ಲಿ ಬಂಡವಾಳ ಹೂಡುವವರು ಯಾರು? ಉತ್ತರ ಕರ್ನಾಟಕದವರಾ? ಕನ್ನಡಿಗರಾ?

ಒಂದು ರಾಜ್ಯ ನಡೆಯೋಕ್ಕೆ ಬಹಳಷ್ಟು ಬಂಡವಾಳದ ಅಗತ್ಯವಿರುತ್ತದೆ. ಈ ಬಂಡವಾಳವನ್ನು ಅಲ್ಲಿಯ ಜನರೇ ವ್ಯಾಪಾರ ವಹಿವಾಟಿನ ಮೂಲಕ ಉತ್ಪತ್ತಿ ಮಾಡಿರಬೇಕು. ಅದು ಸ್ಥಳೀಯರಿಂದಲೇ ಸಾಧ್ಯವಾಗದಿದ್ದಾಗ ಆ ಅಗತ್ಯತೆಯನ್ನು ಶ್ರೀಮಂತ ಬಂಡವಾಳಶಾಹಿ ಸಮುದಾಯಗಳು ವಲಸೆ ಬಂದು ತುಂಬಿಸುತ್ತವೆ. ಕನ್ನಡಿಗರ ಮೂಲ ಸಮಸ್ಯೆಯೆಂದರೆ ನಾವು ಶ್ರೀಮಂತ ಬಂಡವಾಳಶಾಹಿ ಸಮುದಾಯವಲ್ಲ. ನಾವು ಮೂಲತಹ ಕೃಷಿಕರ, ಕಾರ್ಮಿಕರ, ನೌಕರರ, ಬಡ ಹಾಗೂ ಮಾಧ್ಯಮ ವರ್ಗದ ಸಮುದಾಯ. ಹಾಗಾಗಿ ಹೊಸ ರಾಜ್ಯದ ಬಂಡವಾಳದ ಕೊರತೆಯನ್ನು ನೀಗಿಸಲು ಬೇರೆಡೆಯಿಂದ ಶ್ರೀಮಂತ ಬಂಡವಾಳಶಾಹಿ ಸಮುದಾಯಗಳು ವಲಸೆ ಬರಲೇಬೇಕಾಗುತ್ತದೆ. ಯಾರೂ ಕರುಣೆಯಿಂದ ಬಂಡವಾಳ ಹೂಡುವುದಿಲ್ಲ. ರಾಜಕೀಯ ಪ್ರಾಬಲ್ಯತೆಯನ್ನು ಅಪೇಕ್ಷಿಸುತ್ತಾರೆ. ಪ್ರತ್ಯೇಕತೆಯ ಬಗ್ಗೆ ಮಾತೆತ್ತಿದ್ದು ಯಾರೆಂದು ನೋಡಿ. ಶ್ರೀಮಂತ ತೆಲುಗು ಗಣಿ ನಾಯಕರೊಬ್ಬರು. ಮಿಕ್ಕಿದ್ದು ನಿಮ್ಮ ಯೋಚನಾಶಕ್ತಿಗೆ ಬಿಟ್ಟದ್ದು! ರಾಜಕೀಯ ಪ್ರಾಬಲ್ಯತೆಯನ್ನು ಈ ಶ್ರೀಮಂತ ಸಮುದಾಯಗಳಿಗೆ ನೀಡಿದರೆ ಅಖಂಡ ಕರ್ನಾಟಕವನ್ನು ಬಿಟ್ಟು ಹೋದದ್ದು ವ್ಯರ್ಥವಾಗುವುದಿಲ್ಲವೆ?

ಹೊಸ ರಾಜ್ಯಕ್ಕೆ ಕಂದಾಯ ಎಲ್ಲಿಂದ ಬರುತ್ತದೆ? ಅಲ್ಲಿಯವರೆಗೂ ಏನು ಗತಿ?

ಒಂದು ರಾಜ್ಯವನ್ನು ನಡೆಸಲು ಕಂದಾಯದ ಅವಶ್ಯಕತೆ ಇರುತ್ತದೆ. ಇದು ರಾಜ್ಯ ಎಷ್ಟು ಸೌಖ್ಯವಾಗಿದೆ, ಬಲಿಷ್ಟವಾಗಿದೆ, ಎಷ್ಟು ಖರ್ಚು ಮಾಡಬಹುದು ಎಂದೆಲ್ಲಾ ಹೇಳುತ್ತವೆ. ಒಂದೊಂದು ರಾಜ್ಯ ಒಂದೊಂದು ರೀತಿಯಲ್ಲಿ ಕಂದಾಯವನ್ನು ಗಳಿಸುತ್ತವೆ. ಉತ್ಪಾದನಾ ಕ್ಷೇತ್ರ,‌ ಸೇವಾಕ್ಷೇತ್ರ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಇತ್ಯಾದಿ. ಹೀಗ ಇವೆಲ್ಲವಕ್ಕೂ ಧೀರ್ಘಾವಾಧಿಯಿಂದ ಸ್ಥಾಪಿತವಾಗಿರುವ ಮೂಲ ಸೌಕರ್ಯಗಳ ಅವಶ್ಯಕತೆಯಿರುತ್ತದೆ. ಒಂದು ರಾತ್ರಿಯಲ್ಲಿ ಇದನ್ನು ಸಿದ್ಧಗೊಳಿಸಲು ಸಾಧ್ಯವಾಗುವುದಿಲ್ಲ. ಹೊಸ ರಾಜ್ಯವು ಮೊದಲು ಯಾವ ಕ್ಷೇತ್ರಗಳಿಂದ ಕಂದಾಯ ಸಂಪಾದಿಸಬಹುದೆಂದು ಯೋಚಿಸಿ, ಆ ಕ್ಷೇತ್ರಗಳಲ್ಲಿ ಮೂಲ‌‌ ಸೌಕರ್ಯಗಳನ್ನು ಸಿದ್ಧಪಡಿಸಲು ಧೀರ್ಘಾವಧಿ ಯೋಜನೆಗಳನ್ನು ತಯಾರಿಸಿ, ಆ ಯೋಜನೆಗಳನ್ನು ಅನುಷ್ಟಾನಗೊಳಿಸಲು ಬಂಡವಾಳವನ್ನು ತಂದು, ಆ ಯೋಜನೆಗಳು ಸಾಕಾರಗೊಂಡು, ಕಂದಾಯ ಹರಿಯಲು ಶುರುವಾಗೋಕ್ಕೆ ದಶಕಗಳೇ ಬೇಕು. ಅಲ್ಲಿಯವರೆಗೂ ಕೇಂದ್ರದ ಮೇಲೆ ಪರಾವಲಂಬನೆಯೇ ಗತಿ. ಕೇಂದ್ರ ಸತತವಾಗಿ ಸ್ಪಂದಿಸುತ್ತದೆ ಎಂಬ ಯಾವ ಖಾತರಿಯೂ ಇಲ್ಲ. ಒತ್ತಡ ಹೇರಿ ನೆರವು ಪಡೆಯುವ ರಾಜಕೀಯ ಶಕ್ತಿಯೂ ಒಂದು ಪುಟ್ಟ ರಾಜ್ಯಕ್ಕೆ ಇರೋಲ್ಲ. ಆದರೆ ಅಖಂಡ ಕರ್ನಾಟಕ ದೇಶದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದು. ಈ ರಾಜ್ಯದಲ್ಲೇ ತಮಗೆ ಸಿಗಬೇಕಾದ ಸವಲತ್ತುಗಳಿಗೆ ಹೋರಾಡಿ ಪಡೆದರೆ ಇದ್ಯಾವ ಕಷ್ಟವನ್ನು ಪಡದೆ ಇನ್ನೂ ಸುಲಭವಾಗಿ, ಕನ್ನಡಿಗರೊಡನೆಯೇ ಇದ್ದು ಪ್ರಗತಿಯನ್ನು ಪಡೆಯಬಹುದು. ಪ್ರತ್ಯೇಕತೆಗಿಂತ, ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಮೇಲೆ, ಉತ್ತರ ಕರ್ನಾಟಕದಿಂದ ಗೆದ್ದು ಬರುವ ಶಾಸಕರು, ಸಂಸದರು ಹಾಗೂ ಸಚಿವರ ಮೇಲೆ ಒತ್ತಡ ಹಾಕಿದರೆ ಒಳಿತು. ಇದಕ್ಕೆ ರಾಜ್ಯದ ಎಲ್ಲ ಭಾಗಗಳ ಜನರ ಬೆಂಬಲವೂ ಇರುತ್ತೆ.

ಹೊಸ ರಾಜ್ಯಗಳಲ್ಲಿ ಕನ್ನಡದ ಸ್ಥಾನಮಾನವೇನು?

ಆರುಕೋಟಿ ಜನರಿರುವ ಅಖಂಡ ಕರ್ನಾಟಕದಲ್ಲಿ ನಾಕೂವರೆ ಕೋಟಿ ಕನ್ನಡವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರು. ಅಖಂಡ ಕರ್ನಾಟಕದಲ್ಲಿ ಕನ್ನಡಿಗರ ಬಹುಮತವಿರುವುದರಿಂದ ಕನ್ನಡಕ್ಕೆ ಒಳ್ಳೆಯ ಸ್ಥಾನಮಾನವಿದ್ದು, ಆಡಳಿತದಲ್ಲಿ ಪ್ರಾಮುಖ್ಯತೆಯನ್ನು ಕಾಯ್ದಿರಿಸಿಕೊಂಡಿದೆ. ರಾಜ್ಯ ಎರಡು ಹೋಳಾದರೆ ಎರಡು ರಾಜ್ಯಗಳಲ್ಲಿನ ಭಾಷಾ ಅಲ್ಪಸಂಖ್ಯಾತರ ಶೇಕಡ ಹೆಚ್ಚುತ್ತದೆ. ಇದರ ಪರಿಣಾಮ ಗಡಿ ಪ್ರದೇಶಗಳಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಬೆಂಗಳೂರಿನಲ್ಲೇ ಐವತ್ತು ಲಕ್ಷಕ್ಕೂ ಹೆಚ್ಚು ಕನ್ನಡೇತರರಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷಿಕ ಜನರು ಹೆಚ್ಚು. ಮಿಕ್ಕ ಅನೇಕ ಗಡಿ ಜಿಲ್ಲೆಗಳಲ್ಲೂ ಬಹಳಷ್ಟು ಭಾಷಾ ಅಲ್ಪಸಂಖ್ಯಾತರಿದ್ದಾರೆ. ಉತ್ತರ ಕರ್ನಾಟಕದ ರಾಜಧಾನಿ ಆಗಬಹುದಾದ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಬಹಳಷ್ಟಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಉರ್ದು ಹಾಗೂ ತೆಲುಗು ಪ್ರಾಬಲ್ಯ ಹೆಚ್ಚಿದೆ. ಇವೆಲ್ಲವನ್ನೂ ಒಂದು ಹಿಡಿತದಲ್ಲಿ ಇಟ್ಟಿರುವುದು ಒಗ್ಗಟ್ಟಾಗಿರುವ ಕನ್ನಡಿಗರ ಜನಸಂಖ್ಯೆ. ಈ ಒಗ್ಗಟ್ಟು ಮುರಿದರೆ ಇವನ್ನು ಹಿಡಿತದಲ್ಲಿ ಇಡುವುದು ಬಹಳಷ್ಟು ಕಷ್ಟವಾಗಿ ಕನ್ನಡದ ಸ್ಥಾನಮಾನಕ್ಕೆ ಕಂಟಕ ಬಂದರೂ ಬರಬಹುದು. ಕನ್ನಡಕ್ಕೆ ಇಂದು ಇರುವ ಪ್ರಾಮುಖ್ಯತೆ ಎರಡೂ ರಾಜ್ಯಗಳಲ್ಲಿ ಕ್ಷೀಣಿಸಿ, ಮೂರು-ನಾಲ್ಕು ಭಾಷೆಗಳು ಈ ರಾಜ್ಯಗಳ ಅಧಿಕೃತ ಭಾಷೆಗಳಾಗಬಹುದು. ಅದರಲ್ಲಿ ಕನ್ನಡವೂ ಒಂದಾಗಿರುತ್ತದಷ್ಟೆ. ರಾಜ್ಯಾಡಳಿತದಲ್ಲಿ ಕನ್ನಡದ ಸ್ಥಾನಮಾನ ಕುಸಿದರೆ ಕನ್ನಡಿಗರು ತಮ್ಮ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಂತೆ.

ತಮಿಳುನಾಡಿನ ಮುಂದೆ ದಕ್ಷಿಣ ಕರ್ನಾಟಕದ ಗತಿಯೇನು?

ಏಳು ಕೋಟಿ ಜನರಿರುವ ತಮಿಳು ನಾಡಿನ ಮುಂದೆ ಆರು ಕೋಟಿ ಜನರಿರುವ ಅಖಂಡ ಕರ್ನಾಟಕವೇ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಪರದಾಡುತ್ತಾ ಬಂದಿದೆ. ರಾಜ್ಯ ಹೋಳಾಗಿ ಪುಟ್ಟ ರಾಜ್ಯವಾಗಿ ಹೋದರೆ ನಾವು ಮಳೆ ಕೈಕೊಟ್ಟ ವರ್ಷಗಳಲ್ಲಿ ಕಾವೇರಿ ನೀರನ್ನು ಮರೆಯಬೇಕಷ್ಟೆ. ತಮ್ಮ ತಾಯಂದಿರಿಗಿಂತ ಮಿಗಿಲಾಗಿ ತಮ್ಮ ಭಾಷೆ ಹಾಗೂ ಸಮುದಾಯವನ್ನು ಕಾಣುವ ತಮಿಳರ ಒಗ್ಗಟ್ಟಿನ ಮುಂದೆ, ಜಾತಿ ಪ್ರೇಮಕ್ಕೆ, ನೀಚ ರಾಜಕಾರಣಕ್ಕೆ ನಮ್ಮನ್ನ ನಾವೇ ಹೋಳು-ಹೋಳಾಗಿಸಿಕೊಂಡ ಕನ್ನಡಿಗರು ನಿಲ್ಲಲು ಸಾಧ್ಯವಾದೀತೇ? ಖಂಡಿತ ಇಲ್ಲ! ಅವರ ನಲವತ್ತು ಸೀಟುಗಳ ರಾಜಕೀಯ ಬಲದ ಮುಂದೆ ಹತ್ತೋ-ಹನ್ನೆರಡೋ ಸೀಟಿರುವ ನಾವು ತೃಣಕ್ಕೆ ಸಮಾನರಾಗಿ, ಯಾವ ರಾಜಕೀಯ ಬಲವಿಲ್ಲದೆ ಕಂಗಾಲಾಗುವುದರಲ್ಲಿ ಸಂದೇಹವಿಲ್ಲ.

ಮಹಾರಾಷ್ಟ್ರ-ಗೋವಾ ರಾಜ್ಯಗಳ ಮುಂದೆ ಉತ್ತರ ಕರ್ನಾಟಕದ ಗತಿಯೇನು?

ನಮ್ಮ ಸಣ್ಣ ಜಿಲ್ಲೆಗಳಷ್ಟೂ ದೊಡ್ಡದಿರದ ಗೋವಾ ರಾಜ್ಯದ ಮುಂದೆ ಅಖಂಡ ಕರ್ನಾಟಕವೇ ದುರ್ಬಲವಾಗಿ ನಿಂತಿದೆ. ಅದರ ಮಂತ್ರಿಯೊಬ್ಬ ನಮ್ಮ ರಾಜ್ಯದೊಳಗೆ ಬಂದು ಕನ್ನಡಿಗರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೋದರೂ, ತೆಪ್ಪಗಿರುವ ಅಶಕ್ತ ಪರಿಸ್ಥಿತಿ ನಮ್ಮ ಕರ್ನಾಟಕದ್ದು. ಆ ಚಿಕ್ಕ ರಾಜ್ಯವೇ ನಮ್ಮ ಅಖಂಡ ಕರ್ನಾಟಕವನ್ನು ಇಷ್ಟು ಕಾಡಿಸುತ್ತಿರುವಾಗ ಮಹಾರಾಷ್ಟ್ರದಂತಹ ಬಲಿಷ್ಟ, ಶ್ರೀಮಂತ ರಾಜ್ಯ ತನ್ನ ಕಾಲ ಮೇಲೆ ತಾನು ನಿಲ್ಲಲು ಪರದಾಡುತ್ತಿರುವ ಪುಟ್ಟ ಉತ್ತರ ಕರ್ನಾಟಕವನ್ನು ಎಷ್ಟು ಕಾಡಿಸಬಹುದು? ಇವೆರಡೂ ರಾಜ್ಯಗಳ ಮುಂದೆ ಉತ್ತರ ಕರ್ನಾಟಕದ ಹಿತಾಸಕ್ತಿ ಉಳಿದೀತೇ? ಮಹದಾಯಿ ಹರಿಯೀತೇ? ಹೊಸ ರಾಜ್ಯವನ್ನು ಸ್ಥಾಪಿಸುವಾಗ ಬೆಳಗಾವಿ ಹಾಗೂ ಕಾರವಾರ ನಮಗೆ ಸೇರಬೇಕು ಎಂದು ಮಹಾರಾಷ್ಟ್ರದವರು ಕ್ಯಾತೆ ತೆಗೆದರೆ ಉತ್ತರ ಕರ್ನಾಟಕದ ಜನ ಏನು ಮಾಡುತ್ತಾರೆ? ಈಗಿನ ಆರು ಕೋಟಿ ಕನ್ನಡಿಗರ ಒಗ್ಗಟ್ಟಿನ ಶಕ್ತಿಯೂ ಆಗಿರೋಲ್ಲ.

ದೇಶದಲ್ಲಿ ಕನ್ನಡಿಗರ ಸ್ಥಿತಿ ಏನಾಗಬಹುದು?

ಹಿಂದಿ ರಾಜ್ಯಗಳಲ್ಲಿ ಜನಸಂಖ್ಯಾ ಸ್ಫೋಟ ನಿರಂತರವಾಗಿ ಮುಂದುವರೆಯುತ್ತಿರುವುದರಿಂದ ಭಾರತದ ಜನಸಂಖ್ಯೆಯಲ್ಲಿ ಹಿಂದಿಯೇತರ ಸಮುದಾಯಗಳ ಶೇಕಡವು ದಶಕಗಳು ಕಳೆದಂತೆಲ್ಲಾ ಕುಸಿಯುತ್ತಿವೆ. ಇದರಿಂದ ಹಿಂದಿ ಭಾಷಿಗರು ಕ್ರಮೇಣವಾಗಿ ದೇಶದ ರಾಜಕಾರಣವನ್ನು ಸಂಪೂರ್ಣವಾಗಿ ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ಸಮಯ ಹತ್ತಿರ ಬರುತ್ತಿದೆ. ಇದಕ್ಕೆ ಕೊನೆಯ ಅಡೆಚನೆಯಾಗಿ ನಿಂತಿರೋದು ದೊಡ್ಡ ಭಾಷಾವಾರು ರಾಜ್ಯಗಳು. ದಕ್ಷಿಣದ ಮಲಯಾಳಿ, ತಮಿಳು, ಕನ್ನಡ ಮತ್ತು ತೆಲುಗು ರಾಜ್ಯಗಳು, ಪಶ್ಚಿಮದ ಮರಾಠಿ ಮತ್ತು ಗುಜರಾತಿ ರಾಜ್ಯಗಳು, ಹಾಗು ಪೂರ್ವದ ಒಡಿಯಾ ಹಾಗೂ ಬಾಂಗ್ಲಾ ರಾಜ್ಯಗಳು. ಈ ಸಮುದಾಯಗಳು ಸಾಕಷ್ಟು ಜನಶಕ್ತಿ ಹಾಗೂ ಆರ್ಥಿಕ ಶಕ್ತಿಯನ್ನು ಹೊಂದಿರುವುದರಿಂದ, ತಕ್ಕ ಮಟ್ಟಿಗೆ ತಮ್ಮ ಭಾಷೆ ಹಾಗೂ ಸಂಸ್ಕೃತಿಗಳ ಮೇಲೆ ಪ್ರೀತಿ-ಭಕ್ತಿ ಹೊಂದಿರುವುದರಿಂದ, ದೇಶದ ರಾಜಕಾರಣದಲ್ಲಿ ಇನ್ನೂ ಸ್ವಲ್ಪ ಸಮತೋಲನವನ್ನು ಕಾಯ್ದಿರಿಸಿವೆ.

ಇವುಗಳಲ್ಲಿ ಹಿಂದಿ ಅಧಿಪತ್ಯವನ್ನು ಹತೋಟಿಯಲ್ಲಿಡುವಂತಹ ತಾಕತ್ತಿರುವ ರಾಜ್ಯಗಳೆಂದರೆ ಅದು ದಕ್ಷಿಣದ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ. ಹಾಗಾಗಿ ಈ ರಾಜ್ಯಗಳನ್ನು ಒಡೆದು ಪುಟ್ಟ ಪುಟ್ಟ ರಾಜ್ಯಗಳನ್ನಾಗಿ ಮಾಡಿದರೆ, ಇವುಗಳಿಗೆ ಈಗಿರುವ ಶಕ್ತಿ ಕುಗ್ಗುತ್ತದೆ. ಅಧಿಪತ್ಯಕ್ಕೆ ಇರುವ ಕೊನೆಯ ಅಡೆಚನೆ ನುಚ್ಚುನೂರಾಗುತ್ತದೆ. ಇದನ್ನು ಆಗಲೇ ಪಕ್ಕದ ತೆಲುಗು ರಾಜ್ಯದಲ್ಲಿ ಯಶಸ್ವಿಯಾಗಿ ಮಾಡಿಸಲಾಗಿದೆ. ಈಗ ಆಂಧ್ರ ಪ್ರದೇಶ ಫಲವತ್ತಾದ ಬಯಲುಸೀಮೆ, ಉದ್ದವಾದ ಕರಾವಳಿಯಿದ್ದರೂ ಒಂದು ಬಿಡುಗಾಸಿಗೂ ಕೇಂದ್ರದ ಮುಂದೆ ಕೈಚಾಚುವ ಪರಿಸ್ಥಿತಿಗೆ ತಲುಪಿದೆ. ಇವರು ತಂದ ವಿಶ್ವಾಸಮತವನ್ನು ರಾಷ್ಟ್ರೀಯ ಪಕ್ಷಗಳೆರಡೂ ಅವೆರಡರ ನಾಯಕರ ನಡುವಿನ ಸಮರವನ್ನಾಗಿಸಿಕೊಂಡು ಇವರ ಮೂಲ ಬೇಡಿಕೆಗಳನ್ನೇ ಮೂಲೆಗುಂಪು ಮಾಡಿದರು. ಏಕೆಂದರೆ ಪುಟ್ಟ ರಾಜ್ಯಗಳು ಕೊಡುವ ಚಿಲ್ಲರೆ ಸೀಟುಗಳಿಂದ ಯಾವ ಪಕ್ಷಕ್ಕೂ ಏನೂ ಆಗಬೇಕಿಲ್ಲ. ಕರ್ನಾಟಕ ತುಂಡಾದರೆ ಮುಂದೆ ಎರಡೂ ಭಾಗಗಳದ್ದು ಇದೇ ಪರಿಸ್ಥಿತಿ.

ಸರ್ಕಾರ ಸರಿಯಿಲ್ಲವೆಂದು ನಾಡು ಒಡೆಯಬೇಕೇ?

ಪ್ರತ್ಯೇಕತೆಯ ಮಾತಾಡುತ್ತಿರುವ ಯಾರನ್ನೇ ಕೇಳಿದರು ತಮ್ಮ ಕೂಗಿಗೆ ಕುಮಾರಸ್ವಾಮಿಯೇ ಕಾರಣವೆನ್ನುತ್ತಿದ್ದಾರೆ. ಅವರ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸಿದೆ ಅನ್ನುತ್ತಿದ್ದಾರೆ. ನೂರಕ್ಕೆ ನೂರು ಸತ್ಯವೇ ಇರಬಹುದು. ಆದರೆ ಅದಕ್ಕೆ ಉತ್ತರವಾಗಿ ಜನರು ಅವರನ್ನು, ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು. ಒಂದು ನಾಡಿಗೂ, ಅದನ್ನು ಪ್ರತಿನಿಧಿಸುವ ಸರ್ಕಾರಕ್ಕೂ ವ್ಯತ್ಯಾಸವಿದೆ. ಸರ್ಕಾರವನ್ನು ವಿರೋಧಿಸುವುದು ಒಳ್ಳೆಯದೇ, ಆದರೆ ನಾಡನ್ನೇ ವಿರೋಧಿಸುವುದು ಒಳ್ಳೆಯದಲ್ಲ. ಸರ್ಕಾರದ ವಿರುದ್ಧ ಮಲತಾಯಿ ಧೋರಣೆಯಾಗಿದೆ ಎಂದು ಪ್ರತಿಭಟಿಸಲು ಯಾರ ಅಭ್ಯಂತರವೂ ಇಲ್ಲ. ಬೇಡ ಅನ್ನುತ್ತಿರುವುದು ಪ್ರತ್ಯೇಕತೆಯ ಕೂಗಿಗೆ. ಪ್ರತ್ಯೇಕತೆಯಿಂದ ಕುಮಾರಸ್ವಾಮಿಗೆ ಏನೂ ನಷ್ಟವಿಲ್ಲ, ಲಾಭವೇ ಹೆಚ್ಚು. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಕೆಲಸ ಇಷ್ಟವಾಗದಿದ್ದಾಗ ಅದರ ವಿರುದ್ಧ ಪ್ರತಿಭಟಿಸುವ ಹಕ್ಕು ಜನರಿಗಿರುವಾಗ ಸರ್ಕಾರ ಸರಿಯಿಲ್ಲವೆಂದು ನಾಡು ಒಡೆಯುವುದು ಎಂದಿನಿಂದ ಪರಿಹಾರವಾಯಿತು? ಇಂದು ಮುಖ್ಯಮಂತ್ರಿ ಇಷ್ಟವಿಲ್ಲವೆಂದು ನಾಡೋಡೆಯಲು ಸಜ್ಜಾಗಿರುವವರು ನಾಳೆ ಒಬ್ಬ ಪ್ರಧಾನ ಮಂತ್ರಿ ಸರಿಯಿಲ್ಲವೆಂದು ದೇಶ ಒಡೆಯುವ ಮಾತಾಡುವುದಿಲ್ಲವೆಂದು ಹೇಗೆ ಹೇಳೋದು? ಇಂತಹ ಯೋಚನೆಗಳು ಇರುವ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಇರುವ ಸಮಸ್ಯೆಗಳ ಮೇಲೆ ಇನ್ನೊಂದಿಷ್ಟು ಸಮಸ್ಯೆಗಳ ರಾಶಿಯನ್ನು ತಂದು ಹಾಕುತ್ತವಷ್ಟೆ.

ಪ್ರತ್ಯೇಕತೆಯ ಮಾತಾಡುತ್ತಿರುವವರಿಗೆ ಏಕೀಕರಣಕ್ಕೆ ಉತ್ತರದವರೇ ಪಟ್ಟ ಶ್ರಮ ಗೊತ್ತೆ?

ಹದಿನಾರನೆ ಶತಮಾನದ ರಕ್ಕಸ ತಂಗಡಿ ಯುದ್ಧದಲ್ಲಿ ಅಳಿಯ ರಾಮರಾಯ ಸೋಲುಂಡ ಮೇಲೆ ಕನ್ನಡ ಸಾಮ್ರಾಜ್ಯಗಳನ್ನೆಲ್ಲ ಕಳೆದುಕೊಂಡ ಕರುನಾಡು ಅನಾಥವಾಗಿ ಕನ್ನಡಿಗರು ಹತ್ತಾರು ಪ್ರಾಂತ್ಯಗಳಲ್ಲಿ ಹರಡಿ ಹೋದರು. ಈ ಪ್ರಾಂತ್ಯಗಳಲ್ಲಿ ಕನ್ನಡ ಹಾಗೂ ಕನ್ನಡಿಗರ ಪ್ರದೇಶಗಳು ಕಡೆಗಣನೆಯಾಗಿ ನಮ್ಮ ಮೇಲೆ ಉರ್ದು-ಮರಾಠಿ-ಪಾರ್ಸಿ ಮುಂತಾದ ಭಾಷೆ-ಸಂಸ್ಕೃತಿಗಳನ್ನು ಹೇರಲಾಯಿತು. ಕೊನೆಗೆ ಹತ್ತೊಂಬತ್ತನೇ ಶತಮಾನದಲ್ಲಿ ಟಿಪ್ಪುವನ್ನು ಸೋಲಿಸಿ ಬ್ರಿಟಿಷರೇ ಮೈಸೂರಿನ ಅಧಿಕಾರವನ್ನು ಕೈಗೆತ್ತಿಕೊಂಡಾಗ ಮರುಜೀವ ಪಡೆದ ಕನ್ನಡ, ಅವರು ಆಡಳಿತವನ್ನು ಒಡೆಯರ್ ರಾಜವಂಶಕ್ಕೆ ಒಪ್ಪಿಸಿದಾಗ ಮತ್ತೆ ಕರುನಾಡಿನ ಆಡಳಿತದಲ್ಲಿ ಪುನರುಜ್ಜೀವನಗೊಂಡಿತು. ಮುಂದೆ ಮೈಸೂರು ಸಮೃದ್ಧಿಯತ್ತ ಸಾಗುತ್ತಿರುವ ಒಂದು ಕನ್ನಡ ರಾಜ್ಯವಾಗಿ ಅಲ್ಲಿನ ಕನ್ನಡಿಗರಿಗೆ ಒಂದು ಗುರುತು ಸಿಕ್ಕಿತ್ತು. ಆದರೆ ಮೈಸೂರಾಚೆಗಿನ ಕನ್ನಡಿಗರಿಗೆ ಈ ಯೋಗವಿರಲಿಲ್ಲ. ಅಭಿವೃದ್ಧಿಯಂತೂ ಇರಲೇ ಇಲ್ಲ. ಇವರೆಲ್ಲರಲ್ಲೂ ಕನ್ನಡದ ಕಿಚ್ಚನ್ನು ಹಚ್ಚಲು ಮೈಸೂರಾಚೆಗಿನ ಕೆಲ ಕನ್ನಡಿಗರು ಮುಂದಾದರು.
ಆಲೂರು ವೆಂಕಟರಾಯರು ‘ಕರ್ನಾಟಕ ಗತವೈಭವ’ ಪುಸ್ತಕದ ಮೂಲಕ ಸಮಸ್ತ ಕನ್ನಡಿಗರಲ್ಲಿ ತಮ್ಮ ಭವ್ಯ ಇತಿಹಾಸದ ಅರಿವನ್ನು ಮೂಡಿಸಿ ಏಕೀಕರಣದ ರಣಕಹಳೆಯನ್ನು ಮೊಳಗಿದರು. ಇದರಿಂದ ಏಕೀಕರಣ ಒಂದು ಬಲವಾದ ರಾಜಕೀಯ ಚಳುವಳಿಯಾಗಿ, ಹತ್ತಾರು ವರ್ಷಗಳ ದೀರ್ಘ ಹೋರಾಟದ ನಂತರ ೧೯೫೬ರಲ್ಲಿ ಯಶಸ್ವಿಯಾಯಿತು. ಮೈಸೂರಿನ ಜನಕ್ಕೆ ಸಿಕ್ಕಿದ್ದ ಯೋಗ ಬಹುತೇಕ ಎಲ್ಲ ಕನ್ನಡಿಗರಿಗೂ ಸಿಕ್ಕಿತು. ಭಾರತದಲ್ಲಿ ೨೯ ರಾಜ್ಯಗಳಿವೆ. ಆದರೆ ಕರ್ನಾಟಕದಂತೆ ಬೇರಾವ ರಾಜ್ಯವೂ ರಾಜ್ಯೋತ್ಸವವನ್ನು ಆಚರಿಸುವುದಿಲ್ಲ. ಏಕೆಂದರೆ ಇದು ಒಂದು ರಾಜ್ಯದ ಸ್ಥಾಪನೆಯಷ್ಟೇ ಆಗಿರಲಿಲ್ಲ. ಕಳಚಿ ಹೋಗಿದ್ದ ಗುರುತನ್ನು ಮತ್ತೆ ಪಡೆಯುವ, ಇತಿಹಾಸವನ್ನ ಮರೆತು ಕೀಳರಿಮೆಯಿಂದ ಬದುಕುತ್ತಿದ್ದ ಒಂದು ಜನಾಂಗದ ಸ್ವಾಭಿಮಾನವನ್ನು ಪುನಶ್ಚೇತನಗೊಳಿಸುವ, ಅಣ್ಣ-ತಮ್ಮ-ಅಕ್ಕ-ತಂಗಿಯರಿಂದ ಬೇರೆಯಾಗಿ ಛಿದ್ರ-ಛಿದ್ರವಾಗಿದ್ದ ಕನ್ನಡ ಜನತೆಯನ್ನು ಒಂದುಗೂಡಿಸುವ ಪ್ರಶ್ನೆಯಾಗಿತ್ತು.

ಆಲೂರು ವೆಂಕಟರಾಯರು
ಆಲೂರು ವೆಂಕಟರಾಯರು

ಏಕೀಕರಣ ಸಾಧಿಸಿದ್ದನ್ನು ಒಂದೇ ಘಳಿಗೆಯಲ್ಲಿ ನಾಶ ಮಾಡಬೇಕೆ?

ಏಕೀಕರಣಕ್ಕಾಗಿ ಅಷ್ಟು ಕಷ್ಟಪಟ್ಟು ಒಂದಾದ ಜನರನ್ನು ಮತ್ತೆ ಬೇರೆ ಮಾಡುವ ಯೋಚನೆಯನ್ನೂ ನಾವು ಮಾಡಬಾರದು. ‘ಕುಂಬಾರನಿಗೆ ಒಂದು ವರುಷ, ದೊಣ್ಣೆಗೆ ಒಂದು ನಿಮಿಷ’ ಎಂಬ ಗಾದೆಯಿದೆ. ಒಂದಾಗಲು ಕನ್ನಡಿಗರು ಪಟ್ಟ ಶ್ರಮ ಅಷ್ಟಿಷ್ಟಲ್ಲ, ಕಾದಿದ್ದು ಎರಡೋ-ಮೂರೋ ವರ್ಷಗಳಲ್ಲ. ಮುನ್ನೂರಕ್ಕೂ ಹೆಚ್ಚು ವರ್ಷಗಳು. ಸರ್ಕಾರವನ್ನು ಐದು ವರ್ಷಗಳ ಕಾಲ ನಡೆಸುವ ಒಂದು ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ಏನೋ ಹೇಳಿದರು, ಇನ್ನೇನೋ ಮಾಡಿದರೆಂದು ಇವೆಲ್ಲವನ್ನೂ ಒಂದು ಕ್ಷಣದಲ್ಲಿ ನಾಶ ಮಾಡುವ ಯೋಚನೆ ಮಾಡುವುದು ನಮಗೆ ನಾವೇ ಮಾಡಿಕೊಳ್ಳುವ ದೊಡ್ಡ ಮೋಸ. ಪ್ರತ್ಯೇಕತೆಯಿಂದ ಜನರಿಗೇನೂ ಒಳಿತಿಲ್ಲ. ಒಳಿತು ಇರೋದು ಲಿಂಗಾಯತರ ಹಾಗೂ ಒಕ್ಕಲಿಗರ ವೋಟು ಬೀಳುವ ಪಕ್ಷಗಳಿಗೆ. ಬೇರೆಲ್ಲರಿಗೂ ಪ್ರತ್ಯೇಕತೆ ತರುವುದು ಒಂದರಮೇಲೊಂದು ಕೆಡಕನ್ನೇ. ಪ್ರತ್ಯೇಕತೆಯ ಮಾತಾಡುವವರು ಹಾಗು ಅದಕ್ಕೆ ಕುಮ್ಮಕ್ಕು ಕೊಡುವವರು ಈ ಎರಡು ಪಕ್ಷಗಳ ಒಳಿತನ್ನೇ ತಮ್ಮ ಜೀವನವೆಂದು ತಿಳಿದಿರುವ ಅವಿವೇಕಿಗಳು. ಪ್ರತ್ಯೇಕತೆ ಜನರ ಕೂಗಲ್ಲ. ಅದು ಒಂದು ಭಾಷಾವಾರು ರಾಜ್ಯವನ್ನು ಮುರಿದು ಎರಡು ಜಾತಿವಾರು ರಾಜ್ಯಗಳನ್ನಾಗಿ ಮಾಡಿ ಅದರಿಂದ ರಾಜಕೀಯ ಲಾಭ ಪಡೆಯಲು ಮಾಡುತ್ತಿರುವ ಕುತಂತ್ರ. ಪ್ರಗತಿಯಾಗಿಲ್ಲ ಎಂಬ ನೆಪವೊಡ್ಡಿ ಅದಕ್ಕೆ ಹೋರಾಡುವ ಬದಲು ನಾಡೊಡೆಯುವ ಮಾತಾಡೋದು ಅಧಿಕಾರದ ಮೋಹಕ್ಕೆ ಹೊರತು ಕನ್ನಡಿಗರ ಒಳಿತಿಗಲ್ಲ. ಕನ್ನಡಿಗರ ಸಮಗ್ರ ಏಳಿಗೆಯನ್ನು ಬಯಸುವವರು ಅದಕ್ಕಾಗಿ ಕರ್ನಾಟಕದ ಒಳಗೆಯೇ ಹೋರಾಡಬೇಕು. ಅದೇ ಕನ್ನಡದವರೆಲ್ಲರೂ ಹೋರಾಡಬೇಕಿರುವ ದಾರಿ.

ಕನ್ನಡ ನಾಡು ಎಂದೆಂದೂ ಒಂದಾಗಿರಲಿ. ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!
(ಲೇಖಕ ರಾಷ್ಟ್ರೀಯ ಕಾನೂನು ಶಾಲೆಯ ಪಬ್ಲಿಕ್ ಪಾಲಿಸಿ ವಿದ್ಯಾರ್ಥಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT