ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಾಧಿಸೋಣ ವಿದ್ಯುತ್‌ ಸ್ವಾವಲಂಬನೆ

ರೈತರೇ ವಿದ್ಯುತ್ ಉತ್ಪಾದಕರಾದರೆ, ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ
Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

1974ರ ಆಸುಪಾಸು. ಶರಾವತಿ ವಿದ್ಯುದಾಗಾರವು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭಿ
ಸಿತ್ತು. ಆಗ ವಿದ್ಯುತ್ತಿಗೆ ಬೇಡಿಕೆಯಿಲ್ಲದ ಕಾರಣಕ್ಕೆ, ಇಂಧನ ಇಲಾಖೆಯ ನೌಕರರು ಮನೆ ಮನೆಗೆ ತೆರಳಿ, ಅಡುಗೆ ಮಾಡಲು ವಿದ್ಯುತ್‌ ಒಲೆ, ಸ್ನಾನಕ್ಕೆ ವಿದ್ಯುತ್ ಹೀಟರ್ ಬಳಸಿ, ಇದರಿಂದ ಕಾಡು ಉಳಿಯುತ್ತದೆ ಎಂದು ದುಂಬಾಲು ಬೀಳುತ್ತಿದ್ದರು. ಅಂದರೆ, ವಿದ್ಯುತ್ ಬಳಕೆಗಿಂತ ಉತ್ಪಾದನೆಯೇ ಹೆಚ್ಚಿದ್ದ ಕಾಲವಾಗಿತ್ತು.

ವಿದ್ಯುತ್ ಎಂಬ ಮಾಯೆ ಬಲುಬೇಗ ಕಷ್ಟಜೀವಿಗಳನ್ನೂ ದಾಸರನ್ನಾಗಿ ಮಾಡಿಕೊಂಡಿತು. ಯಂತ್ರಗಳ ಆವಿಷ್ಕಾರ ಮತ್ತು ಅವುಗಳ ವ್ಯಾಪಕ ಬಳಕೆಗಾಗಿ ವಿದ್ಯುತ್ ಉತ್ಪಾದನೆ ಮಾಡುವ ಅನಿವಾರ್ಯ ಸರ್ಕಾರಗಳಿಗೆ ಬಂತು. ಅಣೆಕಟ್ಟು ಕಟ್ಟಿ, ಕಾಡನ್ನು ಮುಳುಗಿಸಿ ವಿದ್ಯುತ್ ಉತ್ಪಾದಿಸುವುದು ಅತ್ಯಂತ ಸುಲಭದ ಮಾರ್ಗವಾಗಿತ್ತು. ಇದಕ್ಕಾಗಿ ಕಾಳಿ, ಕಾವೇರಿ ನದಿಗಳಿಗೂ ಅಣೆಕಟ್ಟು ಕಟ್ಟಿ ಗಣನೀಯ ಪ್ರಮಾಣದ ನೈಸರ್ಗಿಕ ಅರಣ್ಯ ಪ್ರದೇಶವನ್ನು ಮುಳುಗಿಸಲಾಯಿತು. ಬೇಡಿಕೆ ಹೆಚ್ಚುತ್ತಿದ್ದಂತೆ ಇನ್ನಷ್ಟು ಮತ್ತಷ್ಟು ವಿದ್ಯುತ್‌ಗಾಗಿ ಉಷ್ಣವಿದ್ಯುತ್‌, ಅಣುವಿದ್ಯುತ್ ಸ್ಥಾವರಗಳು ತಲೆ ಎತ್ತಿದವು.

ಈ ಎರಡು ವಿಧಾನಗಳಿಂದ ವಿದ್ಯುತ್ ಉತ್ಪಾದನೆ ಮಾಡುವುದು ಆರ್ಥಿಕ ಲೆಕ್ಕಾಚಾರದಲ್ಲಿ ತುಂಬಾ ದುಬಾರಿ
ಆಗುತ್ತದೆ. ಅಲ್ಲದೆ ಕರ್ನಾಟಕದಲ್ಲಿ ಕಲ್ಲಿದ್ದಲಿನ ನಿಕ್ಷೇಪ ಇಲ್ಲದಿರುವುದರಿಂದ, ಬಿಹಾರ ಮತ್ತು ಛತ್ತೀಸಗಢದಿಂದ ಕಲ್ಲಿದ್ದಲನ್ನು ತಂದು ರಾಯಚೂರಿನ ಸ್ಥಾವರದಲ್ಲಿ ಅದನ್ನು ಉರಿಸಿ, ವಿದ್ಯುತ್ ಉತ್ಪಾದಿಸಿ, ಸರಬರಾಜು ಮಾಡುತ್ತಿದ್ದೇವೆ. ಉಷ್ಣಸ್ಥಾವರಗಳಲ್ಲಿ ಉಪಯೋಗಿಸುವ ಕಲ್ಲಿದ್ದಲನ್ನು ತೊಳೆಯಲು ನೀರು ಬೇಕು. ಕಲ್ಲಿದ್ದಲನ್ನು ಸುಟ್ಟು, ನೀರನ್ನು ಕುದಿಸಿ, ಆ ಹಬೆಯಿಂದ ಟರ್ಬೈನ್ ತಿರುಗಿಸಿ ವಿದ್ಯುತ್ ಉತ್ಪಾದನೆ ಮಾಡಲು ವಿಪರೀತ ನೀರು ಬೇಕು. ಕಲ್ಲಿದ್ದಲನ್ನು ಸುಟ್ಟ ನಂತರದಲ್ಲಿ ಉಳಿಯುವ ಬೂದಿಯನ್ನು ಗಾಳಿಗೆ ಹಾರದಂತೆ ತಡೆಯಲು ಮತ್ತೆ ನೀರು ಬೇಕು.

ಈ ಕಲುಷಿತ ನೀರು ಮತ್ತೆ ಅಂತರ್ಜಲವನ್ನು ಕಲುಷಿತಗೊಳಿಸುವ ಮೂಲವಾಗುತ್ತದೆ. ಇಷ್ಟೇ ಅಲ್ಲ, ಕಲ್ಲಿದ್ದಲು ಉಷ್ಣ ಸ್ಥಾವರಗಳ ಕ್ಷಮತೆಯೂ ತೀರಾ ಕಡಿಮೆಯಿದೆ. ಹಾಗೆಯೇ ಉತ್ಪಾದನೆಯಾದ ವಿದ್ಯುತ್ತನ್ನು ಸಾಗಣೆ ಮತ್ತು ವಿತರಣೆ ಮಾಡುವಲ್ಲಿಯೂ ವಿಪರೀತ ಸೋರಿಕೆಯಾಗುತ್ತದೆ. ನಮ್ಮಲ್ಲಿ ಈ ಪ್ರಮಾಣ ಶೇ 18ರಷ್ಟಿದೆ. ರಾಯಚೂರು, ಬಳ್ಳಾರಿ ಹಾಗೂ ಆಲಮಟ್ಟಿ ಸನಿಹದ ಉಷ್ಣವಿದ್ಯುತ್ ಸ್ಥಾವರಗಳಿಗೆ ಕೃಷ್ಣಾ ಮತ್ತು ತುಂಗಭದ್ರಾ ನದಿಯ ನೀರನ್ನು ಬಳಸಲಾಗುತ್ತದೆ. ಇದರಿಂದ ಬರ ಪ್ರದೇಶದ ಜನರ ಮೇಲೆ ಮತ್ತೆ ಬರೆ ಎಳೆದಂತೆ ಆಗುತ್ತಿದೆ. ಅಣು ವಿದ್ಯುತ್ ಸ್ಥಾವರದ್ದೂ ಹೆಚ್ಚುಕಡಿಮೆ ಇದೇ ಕತೆ.

ಈಗೀಗ ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದರ ಫಲವಾಗಿ ಪಾವಗಡದಲ್ಲಿ ಸುಮಾರು 13 ಸಾವಿರ ಎಕರೆ ಕೃಷಿಭೂಮಿಯಲ್ಲಿ 2 ಸಾವಿರ ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇದು ಪರಿಸರಸ್ನೇಹಿ ವಿದ್ಯುತ್ ಉತ್ಪಾದನಾ ಕ್ರಮವೆಂದು ಮೇಲ್ನೋಟಕ್ಕೆ ತೋರಿದರೂ ಇಲ್ಲೂ ಕೆಲವು ಮಿತಿಗಳಿವೆ. ದೇಶದಲ್ಲಿ ಅತಿ ಹೆಚ್ಚಿನ ನೀರಿನ ಅಭಾವವಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನವಿದೆ. ಪಾವಗಡ ತಾಲ್ಲೂಕು ಲಾಗಾಯ್ತಿನಿಂದ ಬರದಿಂದ ಬಳಲುತ್ತಿದೆ. ಸಾವಿರಾರು ಎಕರೆಯಲ್ಲಿ ಹರಡಿಕೊಂಡಿರುವ ಸೌರವಿದ್ಯುತ್‌ ಫಲಕಗಳನ್ನು ತೊಳೆದು ಶುಚಿಗೊಳಿಸಲು ಮತ್ತಷ್ಟು ನೀರು ಬೇಕು. ರೈತರಿಗೆ ಹಾಗೂ ಕುಡಿಯುವ ನೀರಿಗೆ ತೀವ್ರ ಅಭಾವವಿರುವಾಗ ಈ ತರಹದ ಮೆಗಾ ಯೋಜನೆಗಳು ಅಪ್ರಸ್ತುತವಾಗಬೇಕಿತ್ತು. ಹಾಗಾಗದೆ, ಪಾವಗಡದಲ್ಲೇ ಮತ್ತೆ 500 ಮೆ.ವಾ. ಸಾಮರ್ಥ್ಯದ ಹೆಚ್ಚುವರಿ ಸೌರ ವಿದ್ಯುತ್ ಫಲಕ ಅಳವಡಿಸಲು 1,500 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.

ಹವಾಮಾನ ವೈಪರೀತ್ಯದಿಂದ ಆಗುತ್ತಿರುವ ಅಡ್ಡಪರಿಣಾಮಗಳು ಈಗಾಗಲೇ ನಮ್ಮ ಅನುಭವಕ್ಕೆ ಬಂದಿವೆ. ಈ  ವಿಕೋಪಗಳಿಗೆ ಕಾಡು, ಜೀವಿವೈವಿಧ್ಯ ನೆಲೆ ನಾಶದಂತಹ ಕಾರಣಗಳ ಕೊಡುಗೆಯೂ ಉಂಟು. ಇರುವ ಅರಣ್ಯ ಪ್ರದೇಶವನ್ನು ಉಳಿಸುವ ಬದಲಿಗೆ ಅದನ್ನು ಮುಳುಗಿಸಿ ಜಲವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗಳಿಗೆ ಇನ್ನಾದರೂ ವಿದಾಯ ಹೇಳಬೇಕು.

ಗರಿಷ್ಠ ವಿದ್ಯುತ್ ಬಳಕೆಯ ಹೊತ್ತಿನಲ್ಲಿ ವಿದ್ಯುತ್ತನ್ನು ಸಮರ್ಪಕವಾಗಿ ಪೂರೈಸಲು ಕರ್ನಾಟಕ ವಿದ್ಯುತ್ ನಿಗಮ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದೆ. ಇದಕ್ಕೆ ಅಂತರ್ಗತ ಜಲವಿದ್ಯುತ್ ಯೋಜನೆಯೆಂಬ ಹೆಸರನ್ನೂ ನೀಡಲಾಗಿದೆ. ಅಂದರೆ, ಒಮ್ಮೆ ಬಳಕೆಯಾದ ನೀರನ್ನು ಮತ್ತೆ ಹಿಂದಿನ ಅಣೆಕಟ್ಟಿಗೆ ಎತ್ತಿ ತರುವುದು ಮತ್ತು ಗರಿಷ್ಠ ಬೇಡಿಕೆಯಿರುವ ಹೊತ್ತಿಗೆ ಆ ನೀರನ್ನು ಉಪಯೋಗಿಸಿ ವಿದ್ಯುತ್ ಉತ್ಪಾದಿಸುವುದು. ಇದಕ್ಕಾಗಿ ಹಾಲಿ ಎರಡು ಸ್ಥಳಗಳನ್ನು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಯ ಗೇರುಸೊಪ್ಪೆ ಅಣೆಕಟ್ಟಿನಿಂದ ತಲಕಳಲೆ ಅಣೆಕಟ್ಟಿಗೆ ನೀರನ್ನು ಎತ್ತಿ ತಂದು, ಮತ್ತೆ ಅದನ್ನು ಹರಿಸಿ ವಿದ್ಯುತ್ ಉತ್ಪಾದನೆ ಮಾಡುವುದು. ಇದಕ್ಕಾಗಿ ಶರಾವತಿ ಸಿಂಗಳೀಕ ಅಭಯಾರಣ್ಯದ ಅತಿಸೂಕ್ಷ್ಮ ಪ್ರದೇಶದಲ್ಲಿ ಸುಮಾರು 800 ಎಕರೆ ದಟ್ಟಾರಣ್ಯ ನಾಶವಾಗಲಿದೆ. ಇದೇ ರೀತಿಯಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ಇನ್ನೊಂದು ಅಣೆಕಟ್ಟನ್ನು ನಿರ್ಮಿಸುವ ಯೋಜನೆಯೂ ಮುನ್ನೆಲೆಗೆ ಬರುತ್ತಿದೆ. ಇದಕ್ಕಾಗಿ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ದಟ್ಟಕಾಡು ನಾಶವಾಗಲಿದೆ.

ಅತ್ತ ಕಾವೇರಿ ನದಿಗೆ ಮೇಕೆದಾಟು ಪ್ರದೇಶದಲ್ಲಿ ಸಮಾನಾಂತರ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯೂ ಸರ್ಕಾರದ ಮುಂದಿದೆ. ಈ ಯೋಜನೆ ಕೂಡ ಸುಮಾರು 11 ಸಾವಿರ ಎಕರೆ ಕಾಡನ್ನು ಆಪೋಶನ ತೆಗೆದುಕೊಳ್ಳಲಿದೆ. ಕಾಡಿನಲ್ಲಿ ವಾಸಿಸುವ ಅಷ್ಟೂ ವನ್ಯಜೀವಿಗಳು ನೆಲೆ ಕಳೆದುಕೊಂಡು ಅನಾಥವಾಗಲಿವೆ. ಇದರಿಂದ ಮಾನವ- ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಲಿದೆ.

ಕರ್ನಾಟಕದ ಭೌಗೋಳಿಕ ಪ್ರದೇಶದ ಸಿಂಹಪಾಲು (ಶೇ 64) ಕೃಷಿ ಚಟುವಟಿಕೆಗಳಿಗೆ ಮೀಸಲಾಗಿದೆ. ಈ ಬಾರಿ ಮಳೆಯ ತೀವ್ರ ಕೊರತೆಯಾಗಿದ್ದರಿಂದ ಅಕ್ಟೋಬರ್‌ನಲ್ಲೇ ವಿದ್ಯುತ್‌ ಬೇಡಿಕೆಯು 6 ಸಾವಿರ ಮೆ.ವಾ.ಗೂ ಹೆಚ್ಚಿಗೆ ಇತ್ತು. ರೈತರಿಗೆ ರಾತ್ರಿ ಹೊತ್ತು ವಿದ್ಯುತ್ ಪೂರೈಸುವ ಪರಿಪಾಟವನ್ನು ವಿದ್ಯುತ್ ನಿಗಮ ಇಟ್ಟುಕೊಂಡಿದೆ. ಹಾಸನ, ಮೂಡಿಗೆರೆ, ಚಿಕ್ಕಮಗಳೂರಿನಂಥ ಪ್ರದೇಶಗಳಲ್ಲಿ ರೈತರು ರಾತ್ರಿ ಹೊತ್ತು ಜಮೀನಿಗೆ ನೀರುಣಿಸಲು ಹೋಗುವುದು ತುಂಬಾ ಅಪಾಯಕಾರಿ. ವನ್ಯಜೀವಿ- ಮಾನವ ಸಂಘರ್ಷಕ್ಕೆ ಅದು ಎಡೆಮಾಡಿಕೊಡುತ್ತದೆ. ಹಾಗಾದರೆ ಸರ್ಕಾರದ ಮುಂದೆ ಇರುವ ಇತರ ಸುಲಭ ಸಾಧ್ಯತೆಗಳೇನು? 

ಅದೇ ವಿಕೇಂದ್ರೀಕೃತ ಸೌರವಿದ್ಯುತ್ ಫಲಕಗಳನ್ನು ಅಳವಡಿಸುವುದು. ಸಾಮಾನ್ಯವಾಗಿ ಎಲ್ಲಾ ರೈತರು ತಮ್ಮ ಹೊಲಗಳಿಗೆ ನೀರು ಹಾಯಿಸಲು ವಿದ್ಯುತ್ ಸಂಪರ್ಕ ಪಡೆದಿದ್ದು, ಪಂಪ್‌ಹೌಸುಗಳನ್ನು
ಹೊಂದಿರುತ್ತಾರೆ. ಹಾಲಿ ಇರುವ ಪಂಪ್‌ಹೌಸಿನ ಮೇಲೆಯೇ ಸೌರವಿದ್ಯುತ್ ಫಲಕಗಳನ್ನು ಅಳವಡಿಸಿ
ಕೊಳ್ಳುವುದರಿಂದ, ರೈತರ ವಿದ್ಯುತ್ ಸಮಸ್ಯೆಯು ಒಂದು ಹಂತಕ್ಕೆ ಶಾಶ್ವತವಾಗಿ ಪರಿಹಾರವಾಗುತ್ತದೆ.
ಯಾವ ರೈತರು ಸೌರವಿದ್ಯುತ್‌ಚಾಲಿತ ಪಂಪ್‌ಸೆಟ್‌ಗಳನ್ನು ಬಳಸುವರೋ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ 60ರಷ್ಟು ಸಬ್ಸಿಡಿ ನೀಡುತ್ತಿವೆ. ಈಗಿನ ಸೌರ ಫಲಕಗಳು 25 ವರ್ಷ ಬಾಳಿಕೆ ಬರುತ್ತವೆ. ಈ ರೀತಿ ಸೌರ ಫಲಕ ಅಳವಡಿಸಿಕೊಳ್ಳುವುದರಿಂದಾಗಿ ಲೋಡ್ ಶೆಡ್ಡಿಂಗ್ ಎಂಬ ಕಣ್ಣಾಮುಚ್ಚಾಲೆ ಆಟ ಇರುವುದಿಲ್ಲ, ಸಾಗಣೆ ಮತ್ತು ವಿತರಣೆ ಸೋರಿಕೆಯೂ ಇರುವುದಿಲ್ಲ. ಸೂರ್ಯನ ಬೆಳಕಿದ್ದಾಗಲೇ ವಿದ್ಯುತ್ ಉತ್ಪಾದನೆ ಆಗುವುದರಿಂದ, ರಾತ್ರಿ ವೇಳೆ ರೈತರು ಹೊಲ–ಗದ್ದೆಗಳಿಗೆ ಹೋಗುವ ಪ್ರಮೇಯ ಇರುವುದಿಲ್ಲ.

ದಿನದಲ್ಲಿ ಎರಡರಿಂದ ಮೂರು ತಾಸು ಸೌರ ವಿದ್ಯುತ್ ಉಪಯೋಗಿಸಿಕೊಂಡು, ಉಳಿದ ಸಮಯದಲ್ಲಿ
ಉತ್ಪಾದನೆಯಾಗುವ ವಿದ್ಯುತ್ತನ್ನು ನಿಗಮಕ್ಕೆ ಮಾರುವುದರಿಂದ ರೈತರಿಗೆ ಹೆಚ್ಚುವರಿ ಹಣವೂ ಸಿಗುವಂತಾಗುತ್ತದೆ. ಮುಖ್ಯವಾಗಿ ಸರ್ಕಾರ ಹಾಗೂ ರೈತರ ನಡುವೆ ಅನವಶ್ಯಕ ಸಂಘರ್ಷ ತಪ್ಪುತ್ತದೆ.

ವಿದ್ಯುತ್ತಿನ ಅಸಮರ್ಪಕ ಪೂರೈಕೆಯ ಕಾರಣಕ್ಕೇ ವಿದ್ಯುತ್‌ ಮತ್ತು ನೀರು ಈ ಎರಡೂ ಪೋಲಾಗುವ ಸಾಧ್ಯತೆಯನ್ನು ಅನೇಕ ಕಡೆ ಕಾಣಬಹುದು. ಯಾವಾಗ ವಿದ್ಯುತ್ ಪೂರೈಕೆಯಾಗುತ್ತದೋ ಆಗ ಪಂಪ್ ತಾನೇ ತಾನಾಗಿ ಚಾಲೂ ಆಗಿ, ನೀರು ಹಾಯುತ್ತದೆ– ರೈತರ ಅನುಪಸ್ಥಿತಿಯಲ್ಲೂ. ಆ ರೀತಿ ಸ್ವಯಂಚಾಲಿತ ವ್ಯವಸ್ಥೆಯನ್ನು ರೈತರು ಮಾಡಿಕೊಂಡಿದ್ದಾರೆ. ಈ ಕ್ರಮದಿಂದ ಹಲವು ಬಾರಿ ಅಗತ್ಯಕ್ಕಿಂತಲೂ ಹೆಚ್ಚು ನೀರು ಹರಿಯುತ್ತದೆ. ರೈತರೇ ವಿದ್ಯುತ್ ಸ್ವಾವಲಂಬಿಗಳಾದಲ್ಲಿ ಹಲವು ಬಗೆಯ ಸಂಕಷ್ಟಗಳಿಂದ ಪಾರಾಗಬಹುದು ಮತ್ತು ವಿದ್ಯುತ್‌ ಹಾಗೂ ನೀರು ಪೋಲಾಗುವುದನ್ನು ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT