ದೇಶದ ಸದ್ಯದ ಪರಿಸ್ಥಿತಿಯಲ್ಲಿ ‘ಒಳಗೊಳ್ಳುವಿಕೆಯ ಅಭಿವೃದ್ಧಿ’ಯು ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿ ಎಂದು ಭಾವಿಸುವುದು ಸಾಧ್ಯವೂ ಅಲ್ಲ, ಸೂಕ್ತವೂ ಅಲ್ಲ. ಒಳಗೊಳ್ಳುವಿಕೆಯ ಅಭಿವೃದ್ಧಿ ಎಂದರೆ, ಆರ್ಥಿಕ ಪ್ರಗತಿಯ ಲಾಭಗಳಿಂದ ಈ ತನಕ ವಂಚಿತವಾದ ಸಾಮಾಜಿಕ ವರ್ಗಗಳಿಗೆ ಈ ಲಾಭಗಳನ್ನು ಆದ್ಯತೆಯ ಮೇರೆಗೆ ತಲುಪಿಸುವ ಪ್ರಕ್ರಿಯೆ ಎಂದು ಅರ್ಥೈಸಬೇಕಾಗಿದೆ.

ಪೆರು ದೇಶದಲ್ಲಿ 2011ರ ಜುಲೈನಲ್ಲಿ ಮೂರು ದಿನಗಳ ದೊಡ್ಡ ಕಾರ್ಯಾಗಾರವೊಂದು ನಡೆಯಿತು. ಬಜೆಟ್ ತಜ್ಞ ವಾರೆನ್ ಕ್ರಾಫ್ಟಿಕ್, ಆರ್ಥಿಕ ಬೆಳವಣಿಗೆ ಪ್ರಕ್ರಿಯೆಯ ಲಾಭಗಳಿಂದ ಈ ತನಕ ವಂಚಿತರಾದವರಿಗೆ ಈ ಲಾಭಗಳನ್ನು ತಲುಪಿಸುವ ಅಗತ್ಯವನ್ನು ಅಲ್ಲಿ ಮನೋಜ್ಞವಾಗಿ ವಿವರಿಸಿದ್ದರು. ಒಳಗೊಳ್ಳುವಿಕೆಯ ಹೂಡಿಕೆ ಮತ್ತು ಒಳಗೊಳ್ಳುವಿಕೆಯ ಆಡಳಿತ ಪರಿಪಾಲನೆಯಿಲ್ಲದೆ ಒಳಗೊಳ್ಳುವಿಕೆಯ ಅಭಿವೃದ್ಧಿ ಸಾಧನೆಯು ವಾಸ್ತವದಲ್ಲಿ ಅಸಾಧ್ಯ ಎನ್ನುವ ಅವರ ವಾದದಲ್ಲಿ ಸತ್ಯಾಂಶವಿದೆ. ದುರ್ಬಲ ವರ್ಗಗಳಿಗೆ ಸೇರಿದವರು ಇಂಥ ನೀತಿಗಳಿಗಾಗಿ ಈ ದೇಶದಲ್ಲಿ ಈಗ ಕಾಯುವಂತಾಗಿದ್ದು ವಿಪರ್ಯಾಸ.

ಭಾರತದ ಬಡತನದ ನಿಕಟ ಪರಿಚಯವುಳ್ಳ, ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞರಾದ ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿ ಹಾಗೂ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಂ ರಾಜನ್, ಕೊರೊನಾ ಹಾವಳಿಯಿಂದ ನಲುಗುತ್ತಿರುವ ಬಡವರಿಗೆ ಹೆಚ್ಚು ನೆರವಾಗುವ ಅಗತ್ಯವನ್ನು ಇತ್ತೀಚೆಗೆ ಜಂಟಿಯಾಗಿ ಪ್ರತಿಪಾದಿಸಿದ್ದಾರೆ. ಒಳಗೊಳ್ಳುವಿಕೆ ತತ್ವ ಆಧಾರಿತ ‘ಸಾರ್ವಜನಿಕ ವೆಚ್ಚದ ನೀತಿ’ಯನ್ನು ರೂಪಿಸಬೇಕೆಂಬ ಅವರ ಕರೆಗೆ ಮಹತ್ವವಿದೆ.

ಜಿ.ವಿ.ಜೋಶಿ

ವ್ಯಾಪಕವಾಗುತ್ತಿರುವ ಕೊರೊನಾ ಬಾಧೆಯಿಂದ 2020ರ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 2.5ರಷ್ಟಾಗಲಿದೆ ಎಂದು ಮೂಡಿಸ್ ಇನ್ವೆಸ್ಟರ್ ಸರ್ವಿಸ್ 2020-21ರ ‘ಜಾಗತಿಕ ಮುನ್ನೋಟ’ದ ವರದಿಯಲ್ಲಿ ತಿಳಿಸಿದೆ. ಅದು ಶೇ 2ರಷ್ಟಾಗಬಹುದೆಂದು ಇಕ್ರಾ ರೇಟಿಂಗ್ ಏಜೆನ್ಸಿ ಅಂದಾಜಿಸಿದೆ. ನಾಲ್ಕು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಬೆಳವಣಿಗೆ ದರ ಶೇ 1.9ಕ್ಕೆ ಕುಸಿಯುವ ಸಾಧ್ಯತೆಯನ್ನು ಒಪ್ಪಿಕೊಂಡರು. ಬ್ಯಾಂಕಿನ ಹಳೆಯ ಸಂಪ್ರದಾಯದಂತೆ ಮುಂಗಾರಿನ ಮೇಲೆ ವಿಶ್ವಾಸ ಇಟ್ಟು ದಾಸ್, 2021-22ರಲ್ಲಿ ಒಮ್ಮೆಲೇ ಇದು 7.4ಕ್ಕೆ ಜಿಗಿಯುವ ಆಶಾಭಾವ ವ್ಯಕ್ತಪಡಿಸಿದರು! ನೈಜತೆಯ ತಳಹದಿಯೇ ಇಲ್ಲದ ಅವರ ಈ ಹೇಳಿಕೆಯನ್ನು ಗಮನಿಸಿದರೆ, ಒಳಗೊಳ್ಳುವಿಕೆಯ ಅಭಿವೃದ್ಧಿಯು ಹಿಂದಿನಂತೆ ಮುಂದೆಯೂ ಕೇವಲ ಭ್ರಮೆಯಾಗಿಯೇ ಉಳಿಯಲಿದೆಯೆಂಬ ಭಾವನೆ ಇನ್ನಷ್ಟು
ಪ್ರಬಲವಾಗುತ್ತದೆ.

ಕೊರೊನಾ ಸೋಂಕು ‘ದೇಶವಾಸಿ’ಗಳನ್ನು ಪೀಡಿಸಲು ಪ್ರಾರಂಭಿಸುವುದಕ್ಕೆ ಮೊದಲೇ ನಮ್ಮ ಆರ್ಥಿಕತೆಯು ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಬಳಲುತ್ತಿದ್ದ ಸತ್ಯವನ್ನು ಅಡಗಿಸುವುದರಲ್ಲಿ ಯಾವ ಅರ್ಥವಿದೆ? ನೋಟು ರದ್ದತಿ ಹುಟ್ಟಿಸಿದ ನಿರುದ್ಯೋಗ ಸಮಸ್ಯೆಯ ಭೀಕರ ಸ್ವರೂಪವನ್ನು 2019ರ ಏಪ್ರಿಲ್‌ನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನ ವರದಿಯು ಎತ್ತಿ ಹಿಡಿದಿತ್ತು. ನೋಟು ರದ್ದತಿಯ ನಂತರ 50 ಲಕ್ಷಕ್ಕೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡರು.

2017-18ರಲ್ಲಿ ಶೇ 6.1ಕ್ಕೆ ಏರಿದ ನಿರುದ್ಯೋಗದ ಪ್ರಮಾಣ, ಹಿಂದಿನ 45 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನದು ಎಂದು ರಾಷ್ಟ್ರೀಯ ಸಾಂಖ್ಯಿಕ ಆಯೋಗ ವರದಿ ಮಾಡಿತು. ಸಮೀಪಿಸುತ್ತಿದ್ದ 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮೊದಲು ಈ ಮಾಹಿತಿಯನ್ನೇ ಬಚ್ಚಿಡುವ ಪ್ರಯತ್ನ ಮಾಡಿತಾದರೂ ನಂತರ ಒಪ್ಪಿಕೊಳ್ಳಬೇಕಾಯಿತು. ಈಗ ಕೊರೊನಾ ಹಾವಳಿಯಿಂದ ನಿರುದ್ಯೋಗ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತಿದೆ. ಒಳಗೊಳ್ಳುವಿಕೆ ಅಭಿವೃದ್ಧಿಯ ಸಾಧ್ಯತೆ ಇನ್ನಷ್ಟು ಕುಂಠಿತಗೊಂಡಿದೆ. ಇದರ ಪ್ರತಿಕೂಲ ಪರಿಣಾಮವು ದೀರ್ಘಕಾಲಿಕವಾಗುವ ಸಂಭವ ಇದೆ.

ಯುಪಿಎ ನೇತೃತ್ವದ ಸರ್ಕಾರದಲ್ಲಿ ಪ್ರಧಾನ ಆರ್ಥಿಕ ಸಲಹೆಗಾರರಾಗಿದ್ದ ಕೌಶಿಕ್ ಬಸು ಅವರ ‘ಭಾರತ ಅಂಕಿ-ಸಂಖ್ಯೆಗಳನ್ನು ಅಡಗಿಸಬಹುದೇ ಹೊರತು ಸತ್ಯವನ್ನಲ್ಲ’ ಎನ್ನುವ ಮಾರ್ಮಿಕ ಲೇಖನ ‘ದಿ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಫೆಬ್ರುವರಿಯಲ್ಲಿ ಪ್ರಕಟವಾಗಿದೆ. ಜಿಎಸ್‌ಟಿಯಿಂದ ಸಣ್ಣ ಕೈಗಾರಿಕೆಗಳಿಗಾದ ಆಘಾತವನ್ನು ಈ ಲೇಖನದಲ್ಲಿ ಅವರು ವಿವರಿಸಿದ್ದಾರೆ. ಜಿಎಸ್‌ಟಿಯನ್ನು ಪ್ರಾರಂಭಿಕ ಹಂತದಲ್ಲಿ ಸ್ವಾಗತಿಸಿದ ಅವರು, ನಂತರ ಅದರಿಂದ ಎದುರಾದ ತೊಡಕುಗಳಿಂದ ನಿರಾಶೆಗೊಂಡು ಹೀಗೆ ಹೇಳಿದ್ದಾರೆ. ಮೋದಿ ನೇತೃತ್ವದ ಸರ್ಕಾರವು ದೊಡ್ಡ ಕಂಪನಿಗಳ ಪರವಾದ ನೀತಿಯನ್ನು ಅನುಸರಿಸಿದೆ ಎಂದು ಬಸು ಬರೆದಿದ್ದಾರೆ. ಸಣ್ಣ ಕೈಗಾರಿಕೆಗಳ ಮಾಲೀಕರು, ಕೃಷಿಕರು ಮತ್ತು ಕಾರ್ಮಿಕರು ಬಳಲುವಂತಾಗಿದೆ ಎಂದಿದ್ದಾರೆ. ಕೊರೊನಾ ಈಗ ಈ ವರ್ಗಗಳನ್ನೇ ತೀವ್ರವಾಗಿ ಬಾಧಿಸುತ್ತಿದೆ.

ಭಾರತ, ನೈಜೀರಿಯಾ ಮತ್ತು ಬ್ರೆಜಿಲ್‌ನಲ್ಲಿ ಅನೌಪಚಾರಿಕ ಆರ್ಥಿಕ ವಲಯಗಳಲ್ಲಿ ದುಡಿಯುವ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿದ್ದು, ಕೊರೊನಾ ವಿರುದ್ಧದ ಸಮರದಲ್ಲಿ ಅವರು ಗೆಲ್ಲುವುದು ಅಷ್ಟು ಸುಲಭವಲ್ಲ. ಭಾರತದ ಅಸಂಘಟಿತ ವಲಯದಲ್ಲಿ ಉದ್ಯೋಗ ಭದ್ರತೆ ಇಲ್ಲದೆ ದುಡಿಯುವ ಸುಮಾರು 40 ಕೋಟಿ ಜನ ತೀವ್ರ ಸ್ವರೂಪದ ಬಡತನಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ಒಳಗೊಳ್ಳುವಿಕೆ ಅಭಿವೃದ್ಧಿಯ ಉದ್ದೇಶದಿಂದ ಯುಪಿಎ ಅವಧಿಯಲ್ಲಿ ಪ್ರಾರಂಭವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯ ಅನುಷ್ಠಾನ ಹಂತದ ಇತಿಮಿತಿಗಳು ಯೋಜನೆಯ ಉದ್ದೇಶವನ್ನೇ ನಿಷ್ಕ್ರಿಯಗೊಳಿಸುವಷ್ಟು ತೀವ್ರವಾಗಿಲ್ಲ. ನರೇಗಾದಡಿ ಬಂದ ಅನುದಾನವು ಭೂ ಅಭಿವೃದ್ಧಿ, ಅರಣ್ಯೀಕರಣ, ರಸ್ತೆ ನಿರ್ಮಾಣ ಮುಂತಾದ ಉದ್ದೇಶಗಳಿಗೆ ಬಳಕೆಯಾಗಿದ್ದರಿಂದ ಮಹಾರಾಷ್ಟ್ರದಲ್ಲಿ ಅದು (2010-13) ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಿ, ಒಳಗೊಳ್ಳುವಿಕೆಯ ಅಭಿವೃದ್ಧಿಗೆ ದಾರಿ ಮಾಡಿತು. ಅರುಣ್ ಜೇಟ್ಲಿ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ತಮ್ಮ ಬಜೆಟ್‌ನಲ್ಲಿ ನರೇಗಾಕ್ಕೆ ಹೆಚ್ಚು ಅನುದಾನ ನೀಡಿದ್ದರು. ಕೃಷಿಗೆ ಈ ಯೋಜನೆ ಹೆಚ್ಚು ಪೂರಕವಾಗಬೇಕೆಂದು ಆಶಿಸಿದ್ದರು. ಈಗಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020-21ನೇ ಸಾಲಿನ ಬಜೆಟ್‌ನಲ್ಲಿ ನರೇಗಾಕ್ಕೆ ಕಡಿಮೆ ಅನುದಾನ ನೀಡಿದ್ದು, ಒಳಗೊಳ್ಳುವಿಕೆ ಅಭಿವೃದ್ಧಿಗೆ ಅದು ಪೂರಕವಾಗಿ ಇರಲಿಲ್ಲ. ಕೊರೊನಾ ಹಾವಳಿ ಜಾಸ್ತಿಯಾದಂತೆ ಸಚಿವೆಯು ಈ ಯೋಜನೆಯಡಿ ನೀಡುವ ಕೂಲಿಯ ಮೊತ್ತವನ್ನು ಹೆಚ್ಚಿಸಿದ್ದು ಸ್ವಾಗತಾರ್ಹ. ಮೂಲತಃ ಬಡತನ ನಿವಾರಣಾ ಕಾರ್ಯಕ್ರಮವಾದ ನರೇಗಾವು ಕೊರೊನಾ ಸೃಷ್ಟಿಸಿದ ಸಂಕಷ್ಟಗಳಿಂದ ತತ್ತರಿಸಿರುವ ಕೃಷಿರಂಗದ ಪುನಶ್ಚೇತನಕ್ಕೆ ಇನ್ನಷ್ಟು ಪೂರಕವಾಗುವ ರೀತಿಯಲ್ಲಿ ಪರಿವರ್ತನೆಗೊಳ್ಳಬೇಕು.

ಹಸಿವುಮುಕ್ತ ಭಾರತ ಎಂದು ಸೃಷ್ಟಿಯಾಗಲಿದೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಕಾಣುತ್ತಿಲ್ಲ. 2019ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಜಾಗತಿಕ ಹಸಿವು ಸೂಚ್ಯಂಕದ ವರದಿಯಿಂದಲೂ ಈ ದಾರುಣ ಸತ್ಯ ಬಯಲಾಗಿತ್ತು. ಈ ಸೂಚ್ಯಂಕದ ಪ್ರಕಾರ ಭಾರತವು 102ನೇ ಸ್ಥಾನಕ್ಕೆ ಕುಸಿದಿದೆ. ಚೀನಾ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನವು ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ. ದಕ್ಷಿಣ ಏಷ್ಯಾ ಮತ್ತು ಬ್ರಿಕ್ಸ್ ದೇಶಗಳಲ್ಲಿ ಅತ್ಯಂತ ಹೆಚ್ಚು ಜನ ಹಸಿವಿನಿಂದ ಬಳಲುತ್ತಿರುವ ದೇಶ ಭಾರತ ಎನ್ನುವುದು ಜಗತ್ತಿಗೇ ತಿಳಿದ ಸಂಗತಿ.

ಅಸಂಘಟಿತ ವಲಯದಲ್ಲಿನ ಅನೇಕ ಕಾರ್ಮಿಕರು ಕೊರೊನಾ ಹಾವಳಿಯಿಂದ ತಮ್ಮ ಬದುಕನ್ನೇ ಕಳೆದುಕೊಂಡು ತತ್ತರಿಸಿಹೋಗಿದ್ದಾರೆ. ಕೂಳು ಸಿಗದೇ ಇರುವವರ ಗೋಳು ನೇರವಾಗಿ ನಮಗೆ ಕೇಳುತ್ತಿದೆ. ಒಳಗೊಳ್ಳುವಿಕೆಯ ಅಭಿವೃದ್ಧಿಯು ಭ್ರಮೆಯಾಗಿಯೇ ಉಳಿಯಲಿದೆ ಎಂಬ ಭಾವನೆಗೆ ಇನ್ನಷ್ಟು ಬಲ ಬರುತ್ತಿದೆ.

(ಲೇಖಕ: ಪ್ರಾಧ್ಯಾಪಕ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗ, ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಮೂಡುಬಿದಿರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.