ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮನ್ಯಾಗ ಅಗ್ದಿ ನಾಸ್ತಾಲ್ಜಿಕ್‌ ಆಗಿ ಮಾತು

Published 31 ಮೇ 2024, 18:47 IST
Last Updated 31 ಮೇ 2024, 18:47 IST
ಅಕ್ಷರ ಗಾತ್ರ

ಕೊಬ್ರಿ ಖಾರ ವೈಬೇಕ್ರಿ.. ಸೊಸಿ ದೊಡ್ಡಕಿಯಾದಳು.. ಹಿಂಗ ಒಂದು ಸಂಭ್ರಮದ ಧ್ವನಿ ಮನಿಯೊಳಗ ಉಲೀತು ಅಂದ್ರ ಅವೊತ್ತೆಲ್ಲ ಮನ್ಯಾಗ ಅಗ್ದಿ ನಾಸ್ತಾಲ್ಜಿಕ್‌ ಆಗಿ ಮಾತು ಸಾಗ್ತಾವ.

ಮನೀಗೆ ಕೊಬ್ರಿ ಗಿಟಕು ತಂದು, ಸಮ ಅರ್ಧ ಮಾಡಿ, ಅದನ್ನ ಗೀರಕೊಂತ, ತಮ್ಮ ದಿನಗಳು ಹೆಂಗಿದ್ವು. ತಾವೆಷ್ಟು ಗಾಬರಿಯಾಗಿದ್ರು, ತಮಗೆಷ್ಟು ತ್ರಾಸಾಗಿತ್ತು.. ಆಗ ‘ಸುಡ್ಲಿ ಈ ಪ್ಯಾಡುಗಳಿರಲಿಲ್ಲ. ಬಟ್ಟಿ ಒಗಿಯೂಮುಂದ ವಾಕರಕಿ ಬಂದಂಗ ಆಗ್ತಿತ್ತು’ ಕಣ್ಣೀರು ಕಪಾಳಿಗೆ ಇಳೀತಿದ್ವು. ಅವನ್ನ ಮುಚ್ಚಿ ಒಗೀಬೇಕು, ಮುಚ್ಚಿನೇ ಒಣಗಿಸಬೇಕು. ಇದು ಹೆಂಗರೆ ಆಗಲಿ, ನನಗ ಏನೋ ಆಗೇದ ಅನ್ನುವ ಆತಂಕ, ಯಾರಿಗೂ ಹೇಳಬಾರದು ಅನ್ನುವ ತಾಕೀತು, ಬೆಳೆಯುವ ವಯಸ್ಸಿನ ಹಾರ್ಮೋನುಗಳ ಮಂಗ್ಯಾಟ, ಅಳು, ಸಿಟ್ಟು, ಸೆಡವು ಎಲ್ಲಾ ಒಟ್ಟೊಟ್ಗೆ ತರ್ತಿದ್ದು..

ಈಗ ಕಾಲ ಬದಲಾಗೇದ. ಇವರಿಗೆ ಮೂಲ್ಯಾಗ ಕುಂದರಬೇಕಾಗಿಲ್ಲ. ಎಲ್ಲಾಕ್ಕೂ ಮಿಗಿಲಾಗಿ ಬಟ್ಟಿ ಒಗೀಬೇಕಾಗಿಲ್ಲ.. ಇದೇ ದೊಡ್ಡ ಸಿಹಿ ಸುದ್ದಿ ಅನ್ನೂಹಂಗ ಮಾತಾಡ್ಕೊಂತ ಬೆಲ್ಲ ಜಜ್ಜತಿರ್ತಾರ. 

ನನಗ ನಮ್ಮಪ್ಪ ಹನ್ನೊಂದು ದಿನ ಕೂಡಿಸಿದ್ದ. ಹನ್ನೊಂದು ದಿನಾನೂ ಒಂದೊಂದು ರೇಷ್ಮಿ ಸೀರಿ, ಒಂದೊಂದು ನಮೂನಿ ಉಡಿಸಿ, ಸಂಭ್ರಮ ಪಡೋರು. ನಮಗರೆ ನಡ ನೋಯ್ತಿತ್ತು. ಸಂಜಿಯಾದ್ರ ಇವರು ಎಲ್ಲಾರಿಗೂ ಕರಿಯಾಕ ಹೋಗೋರು.. ಹಿಂಗ ಕರಿಯೂ ಸುದ್ದಿ ಮಾತಾಡ್ಕೊಂತ, ತುಪ್ಪದಾಗ ಅಂಟು ಕರದು, ಅವು ಹೊಟ್ಟಿಯುಬ್ಬಿಸಿಕೊಂಡು, ಕುರುಕುರು ಆಗೂದನ್ನೇ ನಾಜೂಕಾಗಿ ಮಾಡೋರು. ಅದೇ ಉಳದ ತುಪ್ಪದ ಕಾವಿನಾಗ ಎಳ್ಳು, ಕಸಕಸಿ ಬಿಸಿ ಮಾಡ್ಕೊಳ್ಳೋರು. 

ಕರದ ಮಂದಿ ಬರೂದ್ರೊಳಗ ಕಳಸ ತಯಾರು ಮಾಡಿ, ಸೀರಿ ಮಂಟಪ ಕಟ್ಟಿ, ಆರತಿ ಬೆಳಗ್ತಿದ್ರು.. ಬೆಳತನಾ ಆದರೂ ಅವರ ಹಾಡು ಮುಗೀತಿರಲಿಲ್ಲ. ಅಲ್ಲ, ಆ ಸರೂನ ಹೂವಿನ ಜಡಿ ಎಷ್ಟು ಚಂದಾಗಿತ್ತು ಅಂತೇನಿ.. ಹೌದು. ಆದ್ರ ನನಗ ನಮ್ಮ ಸವಿತಾನ ಕ್ಯಾದಗಿ ಜಡಿ ಭಾಳ ಪಸಂದ್‌ ಬಂದಿತ್ತ. ಅಲ್ಲಾ ಗೌರಿ ಮಾವ ಮೈಸೂರಿಂದ ಡಿಗ್ಗಿ ಮಲ್ಲಿಗಿ ತಂದಿದ್ನಲ್ಲವಾ.. ಅದನ್ನ ದಂಡಿ ಮಾಡಿದ್ರಲ್ಲ, ಹುಡುಗಿ ಬಂದ್ರ ಅಗ್ದಿ ಮನಿ ತುಂಬಾ ಘಮ್‌ ಅಂದಿತ್ತು. ಹೌದು ನೋಡ.. ಅದೊಂದು ಮರಿಯಾಕ ಆಗೂದಿಲ್ಲ. ಆಮೇಲೆ ನಮ್ಮ ವೀಣಾಗ ಭಟ್ಕಳದ ಮೊಗ್ಗು ಹೆಣಸ್ಕೊಂಡು ಬಂದಿದ್ರು. ತುರುಬಿಗೆ ಅರ್ಧ ಚಂದ್ರಾಕೃತಿಗಯೊಳಗ ಕಟ್ಟಿದ್ರ ಎಷ್ಟು ಚಂದ ಕಣಾತಿದ್ಲು. ಹಣಿ ಮ್ಯಾಲೆ ಅರ್ಧ ಚಂದ್ರದ ತಿಲಕ ಬ್ಯಾರೆ ಇಟ್ಟಿದ್ರು.. ಚಂದಲೋಕದಿಂದ ಬಂದ ಚಕೋರಿಯ ಹಂಗ ಕಾಣಾತಿದ್ಲು..

ಹಿಂಗ ಇವಿಷ್ಟೂ ಮಾತು ಮುಗಿಯೂದ್ರೊಳಗ, ಗೋಡಂಬಿ, ಬದಾಮಿ, ಕೇರುಬೀಜ, ಅಳವಿ, ಮೆಂತ್ಯಕಾಳು, ಇವೆಲ್ಲ ಹದದಾಗ ಹುರೀತಾರ. ಜೊತೀಗೆ ಉತ್ತತ್ತಿ ಕುಟ್ಕೊಂತ ಕುಂತಾಗ ಮತ್ತ ಮನಸು ತಮ್ಮನಿ ಅಂಗಳಕ್ಕ ಹೋಗ್ತದ. ನಮ್ಮವ್ವ ದೊಡ್ಡಕಿಯಾದಾಗ ಪೆಟ್ರೊಮ್ಯಾಕ್ಸ್‌ ದೀಪ ತಂದಿಟ್ಟು ಹಾಡ್ತಿದ್ರಂತ. ಅಂಥಾ ಶ್ರೀಮಂತಿಕಿ ಅವಾಗ. ಅಜ್ಜ, ಎಲಿ, ಸುಣ್ಣ, ಕಾಚು ಕುಟ್ಟಿ ತಿನ್ನಾಕ ಕೊಡ್ತಿದ್ದ. ರಸಗವಳದ ರಸ, ತುಟೀಗೆ ಸವರ್ಕೋರಿ. ತುಟಿ ಕೆಂಪಾಗ್ತಾವ ಅಂತಿದ್ನಂತ. ಕಾಡಗಿ ಹಚ್ಕೊಂಡು, ರಸಗವಳ ತಿನ್ಕೊಂಡು, ಹಾಡು ಕೇಳಾಕ ಕುಂದರಬೇಕಾಗ್ತಿತ್ತಂತ.

ನಮ್ಮ ಮಕ್ಕಳಿಗೆ ಇಷ್ಟೆಲ್ಲ ನೇಮ ಮಾಡ್ಲಿಲ್ಲ. ಸಾಲೀಗೆ ಕಳಸಲಿಲ್ಲ ಅಷ್ಟೆ. ರೆಸ್ಟ್‌ ಅಂತೂ ತೊಗೋಲೆ ಇಲ್ಲ. ಮಕ್ಕೋಳಿ ಅಂತರೆ ಜಾಯಿಕಾಯಿ ಪುಡಿ ಮಾಡಿ, ಉಂಡಿ ಕಟ್ಟಿದ್ದೆ. ಮಂಗ್ಯಾ.. ಮಲಗಲೇ ಇಲ್ಲ. ಇವಕ್ಕ ಮೊಗ್ಗಿನ ಜಡಿ, ಮಲ್ಲಿಗಿ ದಂಡಿ ಇಂಥ ಖುಷಿನೆ ಕಾಣಲಿಲ್ಲ. ಅದಕ್ಕೆ ಇವರಿಗೆಲ್ಲ ನಸುನಾಚಿಕೆ ಅನ್ನೂದ ಗೊತ್ತಿಲ್ಲ ಅನಸ್ತದ... 

ಹಿಂಗ ಎರಡು ಮೂರು ತಲೆಮಾರು ವಿಶ್ಲೇಷಿಸುವಾಗಲೇ ಬೆಲ್ಲ ಕುಟ್ಟಿ, ಆಣಕ್ಕ ಇಟ್ಟಿರ್ತಾರ. ತುಸು ತುಪ್ಪ ಹಾಕಿ. ಬೆಲ್ಲ ಕರಗಿ ಮನಿ ತುಂಬ ಸಿಹಿಯ ವಾಸ ಹರಡೂ ಮುಂದ,  ಯಾಲಕ್ಕಿ ಕುಟ್ಟಿ ಹಾಕ್ತಾರ. ಚೂರೆ ಚೂರು ಹೌದೋ ಅಲ್ಲೋ ಅನ್ನೂಹಂಗ ಲವಂಗ ಮತ್ತು ಚಕ್ಕೆ ಪುಡಿನೂ ಹಾಕ್ತಾರ. ಇವೆಲ್ಲ ಘಮ್‌ ಅನ್ನೂಮುಂದ ಒಣಕೊಬ್ಬರಿ, ಮತ್ತ ಕರದಿಟ್ಟ ಎಚ್ಚಾ ಎಲ್ಲ ಹಾಕಿ ಕೆಳಗಿಳಸ್ತಾರ. ಅದು ಬಿಸಿ ಆರೂದ್ರೊಳಗ ಉಂಡಿ ಕಟ್ಟಬೇಕು. ಹಂಗ ಉಂಡಿ ಗುಂಡ ಆಗಬೇಕು., ಅಂಟು ಒಡೀಬಾರದು ಅಂದ್ರ ಅಗ್ದಿ ಪ್ರೀತಿಲೆ ಕೈ ಆಡಿಸಬೇಕು. ನಾಜೂಕಿಲೆ. ಆಗ ಹುಟ್ಟಿದ ಕೂಸಿಗೆ ಸ್ನಾನ ಮಾಡಿಸುವಷ್ಟು ನಾಜೂಕಿಲೆ ಮಾಡಬೇಕು. 
ಇದನ್ನ ಕರದಂಟಿನ ಒಡಿ ಮಾಡಬೇಕಂದ್ರ ಬೆಲ್ಲದ ಆಣ ಚೂರು ತಿಳಿಯಾಗಿರಬೇಕು. ಅಳ್ಳಕ ಆಗಿರಬೇಕು. ತಾಟಿಗೆ ತುಪ್ಪ ಸವರಿ, ಉಂಡಿ ಮಿಶ್ರಣ ಸುರದು, ಫ್ಯಾನಿನ ಗಾಳಿಗೆ ಆರಾಕ ಇಡ್ತಾರ.

ಇಷ್ಟು ಅಂಟಿನುಂಡಿ, ಕರದಂಟು ಮಾಡೂದ್ರೊಳಗ ಮೂರು ತಲೆಮಾರು, ಮೂರು ಬಗೆಯ ಸಂಭ್ರಮವನ್ನು ಮೆಲಕು ಹಾಕಿರ್ತಾವ. ನಿಶ್ಯಕ್ತಿ ಆಗಬಾರದು, ಕಬ್ಬಿಣದಂಶ ಕೊರತೆಯಾಗಬಾರದು, ಬೆನ್ನು, ನಡ ಗಟ್ಟಿಯಾಗಬೇಕು. ಮೂಳೆ ಸದೃಢವಾಗಬೇಕು ಅಂತ ಇಷ್ಟೆಲ್ಲ ಪೌಷ್ಟಿಕಾಂಶ ಇರುವ ಉಂಡಿ, ಅಂಟು ತಿನ್ನಾಕ ಕೊಡ್ತಾರ. ದಿನಾ ಬೆಳಗ್ಗೆ ಒಂದು ತಿಂದು, ಹಾಲು ಕುಡಿದ ಮ್ಯಾಲೆ ಮುಂದಿನ ಕೆಲಸ. ಇವೇ ಉಂಡಿ, ಇಷ್ಟೇ ಆಸ್ಥೆಯಿಂದ ಬಾಣಂತನದಾಗೂ ಮಾಡ್ತಾರ. 

ಹಾಲು ರುಚಿ ಆಗ್ತಾವ. ಜೀರ್ಣ ಆಗ್ತದ, ನಿದ್ದಿ ಬರ್ತದ. ದೇಹಕ್ಕ ವಿಶ್ರಾಂತಿ ಸಿಗ್ತದ ಅಂತ ಅವಾಗ ಕೊಡ್ತಾರ. ಒಟ್ಟ ಕಸುವು ಮೂಡಲಿ, ಬದುಕು ಸಿಹಿಯಾಗಲಿ ಅಂತ ಅಂಟಿನುಂಡಿ, ಕರದಂಟು ಕೊಟ್ಟೇ ಕೊಡ್ತಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT