ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಸಣ್ಣ ಸಣ್ಣ ಕ್ಷಣಗಳಲ್ಲಡಗಿವೆ, ಬದುಕಿನ ಅಮೃತಬಿಂದುಗಳು

ನವೀನ ಕುಮಾರ್‌ ಹೊಸದುರ್ಗ
Published 14 ಜನವರಿ 2024, 21:29 IST
Last Updated 14 ಜನವರಿ 2024, 21:29 IST
ಅಕ್ಷರ ಗಾತ್ರ

ಒಮ್ಮೆ ಯೋಚಿಸಿ ನೋಡಿ.. ಬಹಳಷ್ಟು ಸಂದರ್ಭಗಳಲ್ಲಿ ನಾವು ನಾಳೆಗಳ ಕುರಿತು ಚಿಂತಿಸುತ್ತಾ ಇಂದಿನ ಸುಂದರ ಕ್ಷಣಗಳಲ್ಲಿ ಜೀವಿಸುವುದೇ ಇಲ್ಲ. ಫೇಸ್‌ಬುಕ್‌ನಲ್ಲಿ ಓದಿದ ಒಂದು ಸಂದೇಶದಂತೆ ನಾವು ಗಳಿಸಿದ ಹಣದಲ್ಲಿ ಶೇಕಡಾ 70ರಷ್ಟು ನಮ್ಮ ನಂತರ ಬ್ಯಾಂಕ್ ಖಾತೆಯಲ್ಲಿ ಹಾಗೆಯೇ ಉಳಿದಿರುತ್ತದೆ. ನಾವು ವಾಸಿಸುವ ದೊಡ್ಡ ಮನೆಯಲ್ಲಿ ಶೇಕಡಾ 70ರಷ್ಟನ್ನು ನಾವು ಉಪಯೋಗಿಸುವುದೇ ಇಲ್ಲ. ನಮ್ಮ ಕಪಾಟಿನಲ್ಲಿರುವ ಬಟ್ಟೆಗಳಲ್ಲಿ ಶೇಕಡಾ 70ರಷ್ಟನ್ನು ನಾವು ಧರಿಸುವುದಿಲ್ಲ. ನಮ್ಮ ದುಬಾರಿ ಫೋನಿನಲ್ಲಿರುವ 70ರಷ್ಟು ಸೌಲಭ್ಯಗಳನ್ನು ನಾವು ಬಳಸುವುದಿಲ್ಲ. ಇಲ್ಲೆಲ್ಲಾ ಶೇಕಡ 30 ಮಾತ್ರ ನಮ್ಮ ಅಗತ್ಯ. ಇನ್ನುಳಿದ ಶೇಕಡ 70 ಭಾಗ ನಮ್ಮ ಬಳಕೆಗೆ ಬಾರದೇ ವ್ಯರ್ಥವಾಗಿ ಹೋಗುವವು. ಆದರೆ ಜೀವನದ ವ್ಯಂಗ್ಯವೆಂದರೆ ನಮ್ಮ ಬದುಕಿನ ಬಹು ಭಾಗವನ್ನು ಆ ಶೇಕಡ 70 ಭಾಗದ ಗಳಿಕೆಗಾಗಿಯೇ ಮೀಸಲಿಡುತ್ತೇವೆ. ಈ ಜಂಜಾಟದಲ್ಲಿ ನಾವು ನಮ್ಮ ಇಂದಿನ ಸುಂದರ ಕ್ಷಣಗಳನ್ನು ಅನುಭವಿಸದೇ ಬಲಿಕೊಡುತ್ತೇವೆ. ವಾಸ್ತವದಲ್ಲಿ ನಮ್ಮ ಬದುಕಿನ ಖುಷಿ ನಾವು ಅನುಭವಿಸುವ ಶೇಕಡಾ 30ರಲ್ಲಿ ಅಡಗಿದೆಯೇ ಹೊರತು ನಾವು ಬಳಸದ ಶೇಕಡ 70ರಲ್ಲಿ ಅಲ್ಲ.

ಬದುಕಿನ ಖುಷಿ ಹಣ ಗಳಿಕೆಯಲ್ಲಿ ಅಡಗಿದೆ ಎಂಬ ಭಾವನೆ ಬಹುಪಾಲು ಮಂದಿಯಲ್ಲಿ ಇದೆ. ಆದರೆ ಜೀವನದ ನೆಮ್ಮದಿಯ ಕ್ಷಣಗಳು ನಮ್ಮ ಅಂತರಂಗದ ಖಜಾನೆಯಲ್ಲಿಯೇ ಹೇರಳವಾಗಿ ಲಭ್ಯವಿವೆ. ಅವನ್ನು ಹೆಕ್ಕಿಕೊಳ್ಳಲು, ಅನುಭವಿಸಲು ಒಳನೋಟ ಬೇಕಷ್ಟೇ. ನಿತ್ಯವೂ ಸಂಜೆ ನಿಮ್ಮ ಮನೆಯ ತಾರಸಿಯ ಮೇಲೆ ನಿಂತು ಆಗಸದತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ. ಕೆಂಪನೆಯ ರಂಗು ಮೂಡಿಸುತ್ತಾ ಅಸ್ತಮಿಸುತ್ತಿರುವ ಸೂರ್ಯ, ಚದುರಿದ ಮೋಡಗಳು ನೀಲಿ ನಭದಲ್ಲಿ ಸೃಷ್ಟಿಸಿರುವ ರಂಗುರಂಗಿನ ಚಿತ್ತಾರ ಕೊಡುವ ಖುಷಿಗೆ ನೀವು ಒಂದು ಪೈಸೆ ಕೂಡಾ ಖರ್ಚು ಮಾಡಬೇಕಾಗಿಲ್ಲ. ಕಚೇರಿಯಿಂದ ಮನೆಗೆ ಮರಳಿದಾಗ ನಿಮ್ಮ ಬರುವಿಕೆಗಾಗಿ ಕಾಯುತ್ತಿರುವ ನಿಮ್ಮ ಪುಟ್ಟ ಕಂದಮ್ಮ ಬೀರುವ ಅದ್ಭುತವಾದ ನಗುವಿಗೆ ಬೆಲೆ ಕಟ್ಟಲು ಸಾಧ್ಯವೇ? ದೂರದಲ್ಲಿರುವ ನಿಮ್ಮ ಅಮ್ಮನಿಗೊಮ್ಮೆ ಫೋನ್ ಮಾಡಿ ‘ಸುಮ್ಮನೆ ಫೋನ್ ಮಾಡ್ದೆ ಅಮ್ಮ, ನಿನ್ನತ್ರ ಮಾತಾಡಬೇಕು ಅಂತ ಅನ್ನಿಸ್ತು’ ಎಂದು ಹೇಳಿದಾಗ ಆ ಹಿರಿಯ ಜೀವಕ್ಕಾಗುವ ಸಂತೋಷ ನಿಮ್ಮ ಬ್ಯಾಂಕ್ ಬ್ಯಾಲೆನ್ಸಿನ ಅಂಕೆಗಳಿಗಿಂತ ಎಷ್ಟೋ ಮಿಗಿಲಾದದ್ದು. ನಿಮ್ಮ ಮಡದಿಯ ರುಚಿಯಾದ ಅಡುಗೆಗೆ ನೀವು ‘ತುಂಬಾ ಚೆನ್ನಾಗಿದೆ ಕಣೇ’ ಎಂದಾಗ ಆಕೆಯ ಕಣ್ಣಲ್ಲಿ ಮಿಂಚುವ ಖುಷಿಗೆ ನೀವು ದುಬಾರಿ ಬಿಲ್ ತೆರಬೇಕಾಗಿಲ್ಲ. ದಣಿದು ಬಂದ ಪತಿಗೆ ‘ಸುಸ್ತಾಗಿದ್ದೀರಾ, ತಿನ್ನೋಕೆ ಏನು ಮಾಡ್ಲಿ?’ ಎಂದು ಪತ್ನಿ ಕೇಳಿದಾಗ ಆತನ ಮುಖದಲ್ಲಿ ಮೂಡುವ ಸಂತಸ ಹಣದಿಂದ ಸಿಗುವಂಥಹುದಲ್ಲ. ದಿನವೂ ಎದುರು ಸಿಕ್ಕ ಪರಿಚಿತರನ್ನು ನಕ್ಕು ಮಾತಾಡಿಸಿ, ‘ಏನ್ಸಾರ್, ಆರಾಮಾ?’ ಎಂದು ಕೇಳಿ  ಮನಸ್ಸಿನ ಆರೋಗ್ಯ ಹೆಚ್ಚಿಸಿಕೊಳ್ಳೋದಕ್ಕೆ ನಾವು ಒಂದು ಕಾಸೂ ಖರ್ಚು ಮಾಡಬೇಕಾಗಿಲ್ಲ. ಮನೆ ಎದುರಿನ ಮರದ ಹಸಿರನ್ನು ಕಣ್ಣಲ್ಲಿ ತುಂಬಿಸಿಕೊಳ್ಳಲು ಅದರ ಮೇಲಿನ ಹಕ್ಕಿಗಳ ಚಿಲಿಪಿಲಿಯನ್ನಾಲಿಸಲು ಬಿಡಿಗಾಸು ಬಿಚ್ಚಬೇಕಾಗಿಲ್ಲ.

ನಮ್ಮ ಪ್ರತಿದಿನದ ಪ್ರತಿ ಕ್ಷಣವೂ ಹೊಸತೇ. ಅದನ್ನು ಸವಿಯುವ ಮನಃಸ್ಥಿತಿ ನಮ್ಮಲ್ಲಿರಬೇಕು ಅಷ್ಟೇ. ಹೀಗಾಗಿ ನಾವು ಕಂಡಿರದ ನಾಳೆಗಳ ಕುರಿತು ಕೊರಗುವುದರ ಬದಲು ಇಂದಿನ ಸಣ್ಣ ಸಣ್ಣ ಕ್ಷಣಗಳಲ್ಲಿ ಬದುಕುತ್ತಾ ಅವುಗಳಲ್ಲಿನ ಅಮೃತ ಬಿಂದುಗಳನ್ನು ಸವಿದರೆ ಬದುಕಿನ ನಿಜವಾದ ಸಾರದ ಅರಿವು ನಮಗಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT