ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಅಸಾಮಾನ್ಯ ಬದುಕಿನ ಶಿಲ್ಪಿ ಕಾಮರೂಪಿ ಎಂ.ಎಸ್‌. ಪ್ರಭಾಕರ

Last Updated 30 ಡಿಸೆಂಬರ್ 2022, 4:52 IST
ಅಕ್ಷರ ಗಾತ್ರ

ನೆನ್ನೆ (ಗುರುವಾರ), ಕಾಮರೂಪಿ, ಎಂ.ಎಸ್‌. ಪ್ರಭಾಕರ ನಿಧನರಾದರು. ತನ್ನ ಕಡೆಗಾಲದಲ್ಲಿ ತುಂಬಾ ಪ್ರೀತಿಯಿಂದ ತವರು ಕೋಲಾರದ ಮನೆಗೆ ಹಿಂದಿರುಗಿದ ಅವರು, ಐದು ದಶಕಗಳಷ್ಟು ಕಾಲ ಬದಲಾಗಿ ಹೋಗಿದ್ದ ಕನ್ನಡ ನಾಡು ನುಡಿಗಳನ್ನು ಸಂಭಾಳಿಸಲಾಗದೆ ಸೋತುಹೋದರು. ಒಂಟಿಯಾದರು. ಸಾವಿಗಾಗಿ ಕಾಯುತ್ತ, ಅದು ಬರುತ್ತಿಲ್ಲವೆಂದು ಕನಲುತ್ತ, ಅಳಿದುಳಿದ ಕೆಲವೇ ಸ್ನೇಹಿತರ ಮೇಲೆ ಹರಿಹಾಯುತ್ತ, ಕಡೆಗಾಲದ ಕೆಲವು ವರ್ಷಗಳನ್ನು ಕಳೆದರು ಪ್ರಭಾಕರ.

ಅವರನ್ನು ಹತ್ತಿರದಿಂದ ಬಲ್ಲವರೂ, ಅಪಾರವಾಗಿ ಗೌರವಿಸುತ್ತಿದ್ದವರೂ ಆದ ನಮಗೆಲ್ಲ, ಕಳೆದ ಕೆಲವು ವರ್ಷಗಳು ಮುಜುಗರದ ಸಂಗತಿಯಾಗಿತ್ತು. ಅವರನ್ನು ಭೇಟಿಯಾಗುವ ಮೊದಲು ಅಥವಾ ಅವರಿಗೆ ಫೋನು ಮಾಡುವ ಮೊದಲು, ನಾನು ಮನಸ್ಸು ಗಟ್ಟಿ ಮಾಡಿಕೊಳ್ಳುತ್ತಿದ್ದೆ. ಅಳತೊಡಗುತ್ತಿದ್ದರು, ಸಿಟ್ಟು ಮಾಡುತ್ತಿದ್ದರು, ಸಿಡಿ ಸಿಡಿ ಹಾಯುತ್ತಿದ್ದರು. ಆದರೆ ನಿಜದ ಪ್ರಭಾಕರ ಅಂತಹವರಾಗಿರಲಿಲ್ಲ. ಜೀವ ಸ್ಫುರಿಸುತ್ತಿದ್ದವರು, ಕನ್ನಡ ಕಂಡಿರುವ ಅತ್ಯಂತ ವರ್ಣರಂಜಿತ ವ್ಯಕ್ತಿತ್ವವಾಗಿತ್ತು ಅವರದ್ದು.

ಅವರ ದುಗುಡ, ಏಕಾಂಗಿತನ ಹಾಗೂ ಪರಕೀಯ ಭಾವನೆಗಳು ಅಷ್ಟು ಗಾಢವಾಗಿ ಅವರನ್ನು ಕಾಡಿತ್ತು ಕಡೆಗಾಲದಲ್ಲಿ. ಪ್ರಭಾಕರ ಅವರನ್ನು ಹೇಗೆಂದು ವರ್ಣಿಸಲಿ, ಎಲ್ಲಿಂದ ಆರಂಭಿಸಲಿ ಹೇಳಿ? ಕನ್ನಡ ಸಾಹಿತ್ಯದಲ್ಲಿ ಮಿಲಿಟೆಂಟ್‌ ಆಧುನಿಕತೆಯ ಆರಂಭಿಕ ದಿನಗಳವು. ನಿರಾಶವಾದ, ಏಕಾಂತ, ಪರಕೀಯ ಪ್ರಜ್ಞೆಗಳನ್ನು ಹೆಪ್ಪುಗಟ್ಟಿಸಿ, ಹರಳು ಹರಳಾಗಿಸಿ ಕಾಗದಕ್ಕಿಳಿಸಲು ಹಟ ಹಿಡಿದಿದ್ದರು ಕೆಲ ಲೇಖಕರು. ಅಡಿಗ, ರಾಘವ, ಅನಂತಮೂರ್ತಿ, ಲಂಕೇಶ್‌ ಆನಂತರದವರು. ‘ನಾಲ್ಕನೇ ಆಯಾಮ’ ಎಂಬ ಹೆಸರಿನ ಕಿರು ಕಾದಂಬರಿ ಬರೆದ ಕುಸುಮಾಕರ ದೇವರಗೆಣ್ಣೂರ, ‘ಮುಕ್ತಿ’ ಬರೆದ ಶಾಂತಿನಾಥ ದೇಸಾಯಿ, ‘ಹಳದಿ ಮೀನು’ ಬರೆದ ಅಥವಾ ಅನುವಾದಿಸಿದ ಅನ್ನಿ, ಎ.ಕೆ. ರಾಮಾನುಜನ್‌ ಅವರ ಸಾಲಿನಲ್ಲಿ ಬರುತ್ತಾರೆ ಒಂದು ತೊಲ ಪುನುಗು ಮತ್ತು ಇತರ ಕತೆಗಳನ್ನು ಬರೆದ ಪ್ರಭಾಕರ.

ರಾಜೀವ ತಾರಾನಾಥರ ಸಮಕಾಲೀನ ಗೆಳೆಯರು, ಸುಮತೀಂದ್ರ ನಾಡಿಗರ ಸಹಪಾಠಿ, ಲಂಕೇಶ್‌, ಅನಂತಮೂರ್ತಿ, ಗಿರೀಶ್‌ ಇತ್ಯಾದಿ ಲೇಖಕರಿಗಿಂತ ಒಂದೆರಡು ವರ್ಷ ಹಿರಿಯರು ಪ್ರಭಾಕರ. ಒಮ್ಮೆಗೆ ಕನ್ನಡವನ್ನು ತೊರೆದು, ಹೊರಕ್ಕೆ ಜಿಗಿದರು. ಪ್ರಾಯಶಃ ಯೌವನದ ಭಗ್ನ ಪ್ರೇಮ ಪ್ರಕರಣವೊಂದು ಕಾರಣವಾಗಿರಲಿಕ್ಕೂ ಸಾಕು. ದೂರದ ಅಸ್ಸಾಮಿನ ಗುವಾಹಟಿಯಲ್ಲಿ ಯೂನಿವರ್ಸಿಟಿ ಇಂಗ್ಲಿಷ್‌ ಅಧ್ಯಾಪಕರಾದರು. ಅಸ್ಸಾಂ ಗಣ ಪರಿಷತ್ತಿನ ಮೊದಲ ಅಧ್ಯಕ್ಷ ಹಾಗೂ ಮೊದಲ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ ಮೊಹಂತ ಇವರ ಶಿಷ್ಯವರ್ಗದ ಒಬ್ಬರು. ಈಗಲೂ ಪೂರ್ವೋತ್ತರ ರಾಜ್ಯಗಳ ಚಿಂತಕರು ಪ್ರಭಾಕರರನ್ನು ತಮ್ಮ ಪ್ರದೇಶದ ಬಗ್ಗೆ ನಿಖರ ಜ್ಞಾನಿ ಎಂದೇ ತಿಳಿಯುತ್ತಾರೆ, ಗೌರವಿಸುತ್ತಾರೆ.

ನಂತರ ಪತ್ರಿಕೋದ್ಯಮಿಯಾದರು. ಸಿಲೋನಿನಲ್ಲಿ ರಾಜಕೀಯ ಕ್ರಾಂತಿ ಕಂಡರು. ದಕ್ಷಿಣ ಆಫ್ರಿಕಾದಲ್ಲಿ ಅಪಾರ್‌ಥೈಡ್‌ ಕಾಲ ಮುಗಿದಾಗ ಅಲ್ಲಿದ್ದರು. ಕರಿಯರ ಮೊದಲ ಅಧ್ಯಕ್ಷ ನೆಲ್ಸನ್‌ ಮಂಡೇಲ ಆ ದೇಶದ ಅಧಿಕಾರ ಸ್ವೀಕರಿಸಿದ ನಂತರ ಮೊತ್ತ ಮೊದಲ ಸಂದರ್ಶನ ನೀಡಲಿಕ್ಕೆ ಆಯ್ದಕೊಂಡ ಪತ್ರಕರ್ತ ಪ್ರಭಾಕರ ಆಗಿದ್ದರು. ಅದಕ್ಕೂ ಮೊದಲು ಮುಂಬಯಿಯಲ್ಲಿ ಹೆಸರಾಂತ ಆರ್ಥಿಕ ಹಾಗೂ ರಾಜಕೀಯ ಪತ್ರಿಕೆ ‘ಎಕನಾಮಿಕ್‌ ಅಂಡ್‌ ಪೊಲಿಟಿಕಲ್‌ ವೀಕ್ಲಿ’ಯಲ್ಲಿ ಸಂಪಾದಕ ಮಂಡಳಿಯಲ್ಲಿದ್ದರು. ಇತ್ಯಾದಿ, ಇತ್ಯಾದಿ.

ಮುಂಬೈಯಲ್ಲಿ ಹಲವು ವಾರಗಳ ಕಾಲ, ಹಲವು ಬಾರಿ, ನಾನು ಚೌಪಾಟಿ ಬೀಚಿನ ಹತ್ತಿರದಲ್ಲಿದ್ದ ಅವರ ಬಂಗಲೆಯಲ್ಲಿ–ಸ್ನೇಹಿತನ ಮನೆಯಾಗಿತ್ತು ಅದು, ಅವರೊಂದಿಗೆ ನಾನು ಕಾಲ ಕಳೆದಿದ್ದೇನೆ. ಭಾನುವಾರ ಬಂತೆಂದರೆ ಚೌಪಾಟಿ ಸಮುದ್ರ ತೀರದ ಹಳೆಯ ಪುಸ್ತಕದಂಗಡಿ–ಹಂಗಾಮಿ ಅಂಗಡಿಯ ಹತ್ತಿರ ಹಾಜರಾಗುತ್ತಿದ್ದರು. ಅವರ ಬಗಲಲ್ಲಿ ಚದುರಂಗದ ಹಾಸಿರುತ್ತಿತ್ತು. ಹಂಗಾಮಿ ಅಂಗಡಿ ಮಾಲೀಕ, ಪೋಲಿ ಪುಸ್ತಕದಿಂದ ಹಿಡಿದು ಶೇಕ್ಸ್‌ಪಿಯರನವರೆಗೆ, ಪತ್ತೇದಾರಿ ಕಾದಂಬರಿಯಿಂದ ಹಿಡಿದು ಪುರಾತನ ಅಟ್ಲಾಸುಗಳ ವರೆಗೆ ಸಕಲ ಸಂಗತಿಗಳನ್ನೂ ಮಾರುತ್ತಿದ್ದ ಅನಕ್ಷರಸ್ಥ ವ್ಯಾಪಾರಿ ಇವರ ಹಲವು ಸ್ನೇಹಿತರಲ್ಲಿ ಒಬ್ಬ.

ಅಲ್ಲಿ ಹಾದಿ ಬದಿಯ ಪಾವಟಿಗೆಯ ಮೇಲೆ ಹಾಸು ಹಾಸಿ ಚದುರಂಗದ ಕಾಯಿ ಜೋಡಿಸಿಕೊಂಡು ಇಬ್ಬರು ಆಡುತ್ತಿದ್ದರು. ಅವನಿಂದ ಹಾಗೂ ಅವನಂತಹ ಅನೇಕರಿಂದ ಪ್ರವೇಶ ಪಡೆಯುತ್ತಿದ್ದರು. ಪ್ರಭಾಕರ ಸಾಮಾನ್ಯ ಜನಗಳ ಅಸಾಮಾನ್ಯ ಜಗತ್ತಿನೊಳಗೆ ಪ್ರಭಾಕರ ಮಾರ್ಕ್ಸ್‌ವಾದಿ, ಕಡೆಕಡೆಗೆ ಅವರಿಗೆ ನಾನೂ ಮಾರ್ಕ್ಸ್‌ವಾದಿಯಾಗಿ ಮೈಲಿಗೆಯಾದೆ ಎಂದೇ ಅನ್ನಿಸಿತ್ತು. ಹಾಗಂತ ಪ್ರಭಾಕರ ಶುಷ್ಕ ಎಡಪಂಥೀಯ ಖಂಡಿತ ಆಗಿರಲಿಲ್ಲ.

ಒಮ್ಮೆ ಅದೆಲ್ಲಿಂದಲೊ ಫೋನ್‌, ಇನ್ನೆಲ್ಲೊ ಇದ್ದ ನನಗೆ ಫೋನಿನಲ್ಲೇ, ತಾವು ಕಲಿಯುತ್ತಿದ್ದ ಸಂಗೀತ ಕೇಳಿಸಿದ್ದರು. ಅದು, ಬಿ.ವಿ. ಕಾರಂತರು ನಿರ್ದೇಶಿಸಿದ್ದ ‘ಸತ್ತವರ ನೆರಳು’ ನಾಟಕದಲ್ಲಿ ಕಾರಂತರು ಸಂಯೋಜಿಸಿದ್ದ ದಾಸರ ಪದಗಳಾಗಿದ್ದವು. ‘ಆಹಾ, ಆಹಾ!... ಎಷ್ಟು ಚೆನ್ನಾಗಿದೇ..ರಿ!’ ಎಂದು ಖುಷಿಪಟ್ಟಿದ್ದರು ಅವರು.

ಪತ್ತೇದಾರಿ ಕಾದಂಬರಿಯಲ್ಲಿ ಹಲವು ವಿಧಗಳಿವೆ. ಇಂಗ್ಲಿಷ್‌ ಕಾದಂಬರಿಗಳದ್ದೊಂದು ರೀತಿಯಾದರೆ, ಅಮೆರಿಕದ ಕಾದಂಬರಿಕಾರರದ್ದೊಂದು ರೀತಿ. ಅಮೆರಿಕದ ಆರಂಭಿಕ ಪತ್ತೇದಾರಿ ಕಾದಂಬರಿಕಾರರು ಹೆಚ್ಚು ನಿಷ್ಠುರವಾದಿಗಳಾಗಿದ್ದರು. ಹಾರ್ಡ್‌ಬಾಯಿಲ್ಡ್‌ ಎಂಬ ರಾಚನಿಕ ಶೈಲಿಯೊಂದನ್ನು ರೂಪಿಸಿದರು. ಡೇಶಿಯಲ್‌ ಹ್ಯಾಮೆಟ್‌ನ ಕಾದಂಬರಿಗಳೆಂದರೆ ಅವರಿಗೆ ಅಪಾರ ಪ್ರೀತಿ. ಆತನ ಅತ್ಯಂತ ಜನಪ್ರಿಯ ಕಾದಂಬರಿ–ನಂತರ ಜನಪ್ರಿಯ ಹಾಲಿವುಡ್‌ ಸಿನೆಮಾ ಆದದ್ದು, ಮಾಲ್ಟೆಸ್ಸಾ ಫಾಲ್ಕನ್‌ ಬಗ್ಗೆ ನನಗೆ ಮೊದಲು ಹೇಳಿದ್ದು ಅವರೇ.

ಇಂಗ್ಲಿಷ್‌ ಕಾದಂಬರಿಕಾರರಲ್ಲಿ ಎರಿಕ್‌ ಆ್ಯಂಬ್ಲರ್‌ ಅವರ ಪ್ರೀತಿಗೆ ಪಾತ್ರನಾಗಿದ್ದ, ಇರಲಿ ನಮ್ಮ ಕನ್ನಡದ ಮಹಾನ್‌ ಸಿನಿಕ, ಬುದ್ಧಿವಂತ, ನಾಟಕೀಯ ಸ್ವಭಾವದ ವ್ಯಕ್ತಿ, ಎಂ.ಎಸ್‌.ಪ್ರಭಾಕರರಿಗೆ ನಾನು ಸಲ್ಲಿಸಬಹುದಾದ ಸಣ್ಣ ನುಡಿನಮನ.

(ಲೇಖಕರು: ರಂಗಕರ್ಮಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT