ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಂಕ್ರಮಣ ಕಾಲದಲ್ಲಿ ವಯೋವೃದ್ಧರು

ದುಡಿಯುವ ವಯಸ್ಸಿನಲ್ಲಿಯೇ ವೃದ್ಧಾಪ್ಯದ ದಿನಗಳಿಗಾಗಿ ನಡೆಯಲಿ ಪೂರ್ವಸಿದ್ಧತೆ
Published 3 ಜನವರಿ 2024, 23:32 IST
Last Updated 3 ಜನವರಿ 2024, 23:32 IST
ಅಕ್ಷರ ಗಾತ್ರ

ಬದಲಾವಣೆಯೊಂದೇ ಶಾಶ್ವತ ಎನ್ನುವ ಲೋಕೋಕ್ತಿಯಂತೆ, ಭಾರತೀಯ ಸಾಂಪ್ರದಾಯಿಕ ಕೌಟುಂಬಿಕ ಸಂಬಂಧಗಳಲ್ಲಿ ಕಾಲಾನುಕ್ರಮವಾಗಿ ಬಹಳಷ್ಟು ಬದಲಾವಣೆಗಳು ಆಗಿರುವುದನ್ನು ನಾವು ಗುರುತಿಸಬಹುದು. ಬಾಹ್ಯ ಪ್ರಭಾವದಿಂದ ಎಳೆಯ ಮನಸ್ಸುಗಳು ಮುಕ್ತತೆಗೆ ತೆರೆದುಕೊಂಡರೆ, ಹಳೆಯ ತಲೆಗಳು ಅತಂತ್ರ ಸ್ಥಿತಿಗೆ ತಳ್ಳಲ್ಪಡುತ್ತಿರುವುದು ನೋವಿನ ಸಂಗತಿ. ಹಾಗಾಗಿ, ವರ್ತಮಾನ ಭಾರತದ ಈ ಕಾಲಘಟ್ಟವನ್ನು ಹಿರಿಯ ಜೀವಗಳ ಬದುಕಿನ ನಿರ್ವಹಣೆಯ ಕುರಿತು ಗಂಭೀರವಾಗಿ ಚಿಂತಿಸಬೇಕಾದ ಸಂಕ್ರಮಣಕಾಲ ಎನ್ನಬಹುದು. 

ಈ ಚರ್ಚೆ ಯಾಕೆ ಮುಖ್ಯವಾಗುತ್ತದೆಂದರೆ, ಬದುಕಿರುವ ಪ್ರತಿಯೊಬ್ಬರೂ ಈ ಕಾಲಘಟ್ಟವನ್ನು
ಅನುಭವಿಸಲೇಬೇಕಾಗಿರುವುದರಿಂದ. ಆದರೆ ಅದಕ್ಕಾಗಿ ಸೂಕ್ತ ಪೂರ್ವತಯಾರಿ ಬೇಕು, ಮಾನಸಿಕ ಸ್ಥಿರತೆ ಹಾಗೂ ಬದುಕುವ ಕಲೆಯನ್ನು ಅಂತರ್ಗತ ಮಾಡಿಕೊಳ್ಳ ಬೇಕಾದುದು ಅಗತ್ಯ. ಇಂದು ವಯೋವೃದ್ಧರಿಗಾಗಿ ಬಹಳಷ್ಟು ಯೋಜನೆಗಳು ಇದ್ದರೂ ಅವು ಎಷ್ಟರಮಟ್ಟಿಗೆ ಅರ್ಹರನ್ನು ತಲುಪುತ್ತಿವೆ ಎಂಬ ಪ್ರಶ್ನೆ ಇದ್ದೇ ಇದೆ. ಅದಕ್ಕಿಂತ ಮಿಗಿಲಾಗಿ, ಅವರ ಗೌರವಯುತ ಜೀವನಕ್ಕೆ ಪೂರಕವಾಗುವಂತಹ ಸಾಮಾಜಿಕ ನಿಲುವು ಇನ್ನೂ ರೂಪುಗೊಂಡಿಲ್ಲ. ಇಂತಹ ಸಂವೇದನೆಯನ್ನು ‘ಬುದ್ಧಿವಂತ’ ಮನುಷ್ಯನಲ್ಲಿ ಜಾಗೃತಗೊಳಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ವಯೋವೃದ್ಧರಿಗೆ ಗೌರವದ ಸ್ಥಾನಮಾನ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರ, ಆರೈಕೆ ಧಾರಾಳವಾಗಿ ಸಿಗುತ್ತಿತ್ತು. ಅಲ್ಲಿ ಎಳೆಯರಿಗೆ ‘ಹುಡುಗುಬುದ್ಧಿ’ ಪಟ್ಟವಿತ್ತು, ಅವರ ಜೀವನದ ರೂಪುರೇಷೆಗಳನ್ನು ಹಿರಿಯರೇ ನಿರ್ಧರಿಸುತ್ತಿದ್ದರು. ಇದಕ್ಕೆ ತದ್ವಿರುದ್ಧವಾಗಿ, ಇಂದು ನಮ್ಮ ಯುವಜನರು ಸೂತ್ರವಿಲ್ಲದ ಗಾಳಿಪಟದಂತೆ, ಕೈಯಲ್ಲೊಂದು ಸ್ಮಾರ್ಟ್ ಫೋನ್ ಹಿಡಿದು ಪ್ರಪಂಚವನ್ನು ಮರೆತು ಧ್ಯಾನಸ್ಥರಾಗಿರುವಂತೆ ಕಂಡುಬಂದರೆ, ವಯಸ್ಸಾದವರು ತೀವ್ರ ಸಂಕಷ್ಟವಿದ್ದರೂ ಗಣನೆಗೆ ಬಾರದಂತಹ ಸ್ಥಿತಿಯಲ್ಲಿದ್ದಾರೆ. ಹೀಗೆ, ಮಾನಸಿಕ, ದೈಹಿಕ ಮತ್ತು ಆರ್ಥಿಕ ಅಶಕ್ತಿಯ ದಣಿವಿನಲ್ಲಿರುವ ಮನುಷ್ಯನ ಜೀವನದ ಕೊನೆಯ ದಿನಗಳನ್ನು ಸಹನೀಯ ಮತ್ತು ಆನಂದದಾಯಕ ಮಾಡುವ ಹೊಣೆ ಸಮಾಜಕ್ಕೆ ಇದೆಯಲ್ಲವೇ? ಹೀಗಾಗಿ, ಇಂದಿನ ವಯೋವೃದ್ಧರ ಬದುಕಿನ ಸೂಕ್ತ ನಿರ್ವಹಣೆಗಾಗಿ ಇಡೀ ದೇಶಕ್ಕೆ ಅನ್ವಯ ಆಗುವಂತೆ ತುರ್ತಾಗಿ ಕೈಗೆತ್ತಿಕೊಳ್ಳಬೇಕಾದ ಗ್ಯಾರಂಟಿ ಯೋಜನೆಯೊಂದರ ಅಗತ್ಯವಿದೆ ಎನಿಸುತ್ತದೆ.

ವೃದ್ಧಾಪ್ಯದ ದಿನಗಳಿಗೆ ನಮ್ಮ ಪೂರ್ವತಯಾರಿ ಹೇಗಿರಬೇಕು? ನಿಧಿ ಹೂಡಿಕೆ ಮತ್ತು ಉಳಿತಾಯವಷ್ಟೇ ಸಾಕೆ? ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಲ್ಲವೇ? ನಿವೃತ್ತಿಯ ನಂತರ ಅನುಭವಿಸುವ ಒತ್ತಾಯಪೂರ್ವಕ ಒಂಟಿತನ, ನಿರುಪಯುಕ್ತತೆಯ ಭಾವ, ಮಾನಸಿಕ ಖಿನ್ನತೆ ಕಾಡಿದಾಗ ಮತ್ತು ಬದುಕು ಹಂಚಿಕೊಂಡವ ರೆಲ್ಲ ಒಬ್ಬೊಬ್ಬರೇ ಕಣ್ಣೆದುರಿನಲ್ಲೇ ಕಣ್ಮರೆ ಆಗುತ್ತಿರುವಾಗ, ನಮ್ಮನ್ನು ನಾವು ನಿಭಾಯಿಸಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಲ್ಲವೇ?

ಮೂಲತಃ ಸ್ವಕೇಂದ್ರಿತವಾಗಿ ವ್ಯವಹರಿಸುವ ನಮಗಿಂದು, ಮಕ್ಕಳು ನಮ್ಮ ವೃದ್ಧಾಪ್ಯ ಕಾಲದ ಊರುಗೋಲಾಗಿ ಕಂಡರೆ, ವೃದ್ಧರು ಇನ್ನೇನೂ ಪ್ರಯೋಜನಕ್ಕೆ ಬಾರದ ಭೂತಕಾಲದ ಸವಕಲು ನಾಣ್ಯ ದಂತೆ ಕಾಣಿಸುತ್ತಾರೆ. ಈ ನಿಲುವು, ನಾವು ನಮ್ಮ ಜೀವನ ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕೆಂದು ಒತ್ತಾಯಿಸುತ್ತದೆ. ಲೌಕಿಕ ವ್ಯವಹಾರಗಳಲ್ಲಿ ಮುಳುಗಿರುವ ಮಕ್ಕಳಿಗೆ, ಹೆತ್ತವರೊಂದಿಗೆ ಕಳೆಯಲು ಸಮಯ
ಇರುವುದಿಲ್ಲ. ಮೊಮ್ಮಕ್ಕಳೊಂದಿಗೆ ಆಟವಾಡುವ, ಕಥೆ ಹೇಳಬಯಸುವ ತುಡಿತವಿದ್ದರೂ ಅವರ ಶಾಲಾ ಚಟುವಟಿಕೆಗಳ ಒತ್ತಡದಲ್ಲಿ (ಅಥವಾ ಹೆತ್ತವರ ಸೂಚನೆಯಂತೆ) ಅವರಿಗೂ ಹಿರಿಯರೊಂದಿಗೆ ಕಳೆಯಲು ಸಮಯವಿಲ್ಲ. ಜೊತೆಗೆ, ವಯಸ್ಸು ಹೆಚ್ಚಾದಂತೆ ಕಾಡುವ ಆರೋಗ್ಯ ಸಮಸ್ಯೆಗಳಿಗಾಗಿ ಪೋಷಕರಿಗೆ ಮಾಡಬೇಕಾದ ಖರ್ಚುವೆಚ್ಚ, ಆರೈಕೆಗೆ ಅನ್ಯರನ್ನು ಅವಲಂಬಿಸಬೇಕಾದ ಅನಿವಾರ್ಯ ಸಂದರ್ಭಗಳನ್ನು ನಿಭಾಯಿಸುವ ಸಂಯಮ ಮತ್ತು ಕಾಳಜಿ ಮಕ್ಕಳಲ್ಲಿ ಕಾಣಿಸುತ್ತಿಲ್ಲ. ಆದಕಾರಣ, ವಯೋವೃದ್ಧರು ತಮ್ಮ ಇಳಿವಯಸ್ಸಿನಲ್ಲಿ ಎದುರಾಗುವ ತೊಡಕುಗಳನ್ನು ಸಂಭಾಳಿಸಿಕೊಳ್ಳಲು ದುಡಿಯುವ ವಯಸ್ಸಿನಲ್ಲಿಯೇ ಪೂರ್ವಸಿದ್ಧತೆ ಮಾಡಿಕೊಳ್ಳ
ಬೇಕಾದುದು ಅಗತ್ಯ.

ಇಂದಿನ ಮಕ್ಕಳು ತಮ್ಮ ಬಾಲ್ಯ ಮತ್ತು ಹಿರಿಯರ ಈಡೇರದ ಕನಸಿನ ಬಾಲ್ಯ ಎರಡನ್ನೂ ಮೇಳೈಸಿಕೊಂಡು ದೊಡ್ಡವರಾಗಬೇಕಾದ ಒತ್ತಡದಲ್ಲಿದ್ದಾರೆ. ಇದರಿಂದ ಉಂಟಾಗಿರುವ ಪ್ರಮುಖ ಸಮಸ್ಯೆಯೆಂದರೆ, ಹೆತ್ತವರು– ಮಕ್ಕಳ ನಡುವೆ ಎದ್ದಿರುವ ಸಂಬಂಧಗಳ ಪರಕೀಯತೆ. ನಾವು ಪ್ರೀತಿಯ ಬದಲಾಗಿ ಅವರಿಗೆ ಅತ್ಯುತ್ತಮ ವ್ಯವಸ್ಥೆ ಯನ್ನು ನೀಡುವುದಕ್ಕೆ ಹೋರಾಡುತ್ತೇವೆ. ಹಾಗಾಗಿ, ಅವರು ಕೂಡ ನಮ್ಮ ಇಳಿವಯಸ್ಸಿನಲ್ಲಿ ಪ್ರೀತಿಯ ಬದಲಾಗಿ ಬದುಕುವ ವ್ಯವಸ್ಥೆಯನ್ನಷ್ಟೇ ಮಾಡಿಕೊಟ್ಟು ದೂರವಿದ್ದರೆ ಆಶ್ಚರ್ಯಪಡಬೇಕಾಗಿಲ್ಲ.

ನಾವು ನಮ್ಮ ಭವಿಷ್ಯದ ದಾರಿಯಲ್ಲಿ ರಭಸವಾಗಿ ನಡೆಯುತ್ತಾ, ನಿಧಾನವಾಗಿ ನಡೆಯುವ ನಮ್ಮ ಹೆತ್ತವರನ್ನು ಹಿಂದಕ್ಕೆ ಬಿಟ್ಟು ಮುಂದೆ ಸಾಗುತ್ತೇವೆ. ಅಂತೆಯೇ, ನಮ್ಮ ಮಕ್ಕಳನ್ನು ಸ್ಪರ್ಧಾಯುಗದಲ್ಲಿ ಮುನ್ನುಗ್ಗುವುದಕ್ಕೆ ಬಿಟ್ಟ ನಾವು, ಅವರೆದುರು ಹಳೆಯ ಕಾಲದವರಾಗಿ ಹಿಂದುಳಿದರೆ ಸೋಜಿಗವಿಲ್ಲ. ಮನಸ್ಸನ್ನು ಗಾಸಿಗೊಳಿಸುವ, ನಿಷ್ಕರುಣೆಯ ವ್ಯವಹಾರದ ಮಾತುಗಳನ್ನು ಮಕ್ಕಳ ಬಾಯಿಂದ ಕೇಳುವ ಪರಿಸ್ಥಿತಿಗಿಂತ, ಅವರಿಗೆ ಭಾರವಾಗದೆ, ಹಂಗಿಲ್ಲದೆ, ತಮ್ಮಿಚ್ಛೆಯಂತೆ, ಕೊನೆಯಪಕ್ಷ ಜೀವನದ ಅಂತಿಮ ದಿನಗಳಲ್ಲಾದರೂ ಲೋಕದ ನಿರೀಕ್ಷೆಗಳ ಭಾರ ಕಳಚಿ ನೆಮ್ಮದಿಯಿಂದ ಬದುಕಲು ಮಾನಸಿಕ ಸಿದ್ಧತೆಯ ಅಗತ್ಯವಿದೆ. ಇದಕ್ಕಾಗಿ, ‘ನಿನಗೆ ನೀನೇ ದಾರಿದೀಪ’ ಎಂಬ ಬುದ್ಧನ ಮಾತನ್ನು ಅಂತರ್ಗತಗೊಳಿಸಿಕೊಳ್ಳುವುದು, ಮಕ್ಕಳನ್ನು ಬೆಳೆಸುವುದು ನಮ್ಮ ಆನಂದ ಕ್ಕಾಗಿಯೇ ವಿನಾ ಅವರಿಗೆ ಭಾರವಾಗುವುದಕ್ಕಾಗಿ ಅಲ್ಲ ಎನ್ನುವ ನಿರ್ಲಿಪ್ತತೆಯನ್ನು ಮೈಗೂಡಿಸಿಕೊಳ್ಳುವುದು ಅಗತ್ಯ. ಇಂತಹ ಮಾನಸಿಕ ಪೂರ್ವಸಿದ್ಧತೆಯನ್ನು ಹಿರಿಯರಲ್ಲಿ ಬೆಳೆಸುವ ಕಾರ್ಯಕ್ರಮಗಳು ಮತ್ತು ಯೋಜನೆಗಳು ಹೆಚ್ಚು ಜನಪ್ರಿಯ ಹಾಗೂ ಸಾಮೂಹಿಕ ಆಂದೋಲನವಾಗಬೇಕಾಗಿದೆ.

ವೃದ್ಧಾಪ್ಯದಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳು ದೀರ್ಘಕಾಲದವರೆಗೆ ನಮ್ಮ ಮೈಮನಸ್ಸು ಗಳನ್ನು ಕಾಡಿದಾಗ, ಪರಾವಲಂಬನೆ ಅನಿವಾರ್ಯವಾ ದಾಗ, ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ, ಬದುಕು ಹತಾಶೆಗೆ ಮತ್ತು ಖಿನ್ನತೆಗೆ ತಳ್ಳಲ್ಪಡುತ್ತದೆ. ಹಾಗಾಗಿ, ದೈಹಿಕ ವ್ಯಾಯಾಮ ಮತ್ತು ಸ್ವನಿಯಂತ್ರಿತ ಊಟೋಪಚಾರ ವನ್ನು ನಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಂಡಲ್ಲಿ, ಹೆಚ್ಚಿನ ವಯೋಸಂಬಂಧಿ ಕಾಯಿಲೆಗಳನ್ನು ಸೈರಿಸಿಕೊಂಡು ಸ್ವಾವಲಂಬಿಯಾಗಿ ಬದುಕುವಷ್ಟು ದೈಹಿಕ ಶಕ್ತಿಯನ್ನು ಉಳಿಸಿಕೊಳ್ಳಬಹುದು.

ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಆರ್ಥಿಕ ಅನುಕೂಲ ಹೊಂದಿದ್ದರೆ ಆತ್ಮವಿಶ್ವಾಸದಿಂದ ಬದುಕಲು ಭರವಸೆ ದೊರೆಯುತ್ತದೆ. ನಾವು ಮಕ್ಕಳನ್ನು ಪ್ರೀತಿಸಬೇಕು ನಿಜ, ಆದರೆ, ನಮ್ಮೆಲ್ಲಾ ಆರ್ಥಿಕ ಮೂಲಗಳನ್ನು ಅವರಿಗೆ ಹಸ್ತಾಂತರಿಸುವ ಬದಲು, ನಮ್ಮ ಜೀವನ ನಿರ್ವಹಣೆಗೆ ಆಗುವಷ್ಟನ್ನು ನಮ್ಮ ಕೈಯಲ್ಲೇ ಉಳಿಸಿಕೊಂಡಲ್ಲಿ, ಎಂತಹ ಅನಿಶ್ಚಿತ ಸ್ಥಿತಿಯನ್ನಾದರೂ ಎದುರಿಸುವ ಧೈರ್ಯ ಬರುತ್ತದೆ.

ವೃದ್ಧಾಶ್ರಮಗಳನ್ನು ಅನಾಥಾಶ್ರಮಗಳೆಂದೇ ನಾವಿಂದು ಪರಿಗಣಿಸುತ್ತೇವೆ. ಈ ಪರಿಕಲ್ಪನೆಯನ್ನು ಬದಲಾಯಿಸಿ, ಇವುಗಳನ್ನು ಜೀವನದ ಕೊನೆಯ ದಿನಗಳನ್ನು ಸಾಮೂಹಿಕವಾಗಿ ಆನಂದಮಯವಾಗಿ ಕಳೆಯುವ ತಾಣಗಳನ್ನಾಗಿಸಬೇಕಾಗಿದೆ. ವೃದ್ಧಾಶ್ರಮ ಗಳು ಇಂದು ಅನಾಥರಿಗೆ ಮಾತ್ರವಲ್ಲ ಒಂಟಿತನ ಅನು ಭವಿಸುವ ಉಳ್ಳವರಿಗೂ ಅಗತ್ಯವಾಗಿವೆ. ಹಾಗಾಗಿ, ವೃದ್ಧಾಶ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆದು, ಅವು ಕೊಡುವ ಸೌಕರ್ಯಕ್ಕೆ ಅನುಗುಣವಾಗಿ ವಯೋವೃದ್ಧರು ಅವುಗಳನ್ನು ಆಯ್ಕೆ ಮಾಡಿಕೊಳ್ಳುವಂತಹ ಪ್ರಕ್ರಿಯೆಗಳನ್ನು ಸಾಮಾನ್ಯವಾಗಿಸಬೇಕು. ಆಗ ವೃದ್ಧಾಶ್ರಮಗಳಲ್ಲಿ ಯಾವ ಹಂಗಿಲ್ಲದೆ ನೆಮ್ಮದಿಯಿಂದ ಸಮವಯಸ್ಕರೊಂದಿಗೆ ದಿನಗಳೆಯಲು ಹೆಚ್ಚು ಜನರು ಮುಂದೆ ಬಂದಾರು.

ಅನಿವಾರ್ಯ ಕಾರಣಗಳಿಂದ ಹೆತ್ತವರನ್ನು ನೋಡಿಕೊಳ್ಳಲಾಗದ ಮಕ್ಕಳು ಕೂಡ ಉತ್ತಮ ಸೌಕರ್ಯ ವಿರುವ ವೃದ್ಧಾಶ್ರಮಗಳಲ್ಲಿ ಹೆತ್ತವರನ್ನು ಬಿಟ್ಟು, ಅದರ ಖರ್ಚುವೆಚ್ಚ ಭರಿಸಿ, ನಿರಂತರವಾಗಿ ಭೇಟಿ ನೀಡುವುದರ ಮೂಲಕ ತಮ್ಮ ಋಣ ತೀರಿಸಬಹುದು. ಇದು, ಒಟ್ಟಿಗಿದ್ದೂ ದಿನಾ ಕಿತ್ತಾಡುತ್ತಾ ಬದುಕುವುದ ಕ್ಕಿಂತ ಮೇಲು. ಇಂತಹ, ಮನಃಪರಿವರ್ತನೆಯು ಸಾಮುದಾಯಿಕವಾಗಿ ಆಗಬೇಕಾದುದು ಇಂದಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT