ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಘೋಷಣೆ, ಚುನಾವಣೆ ಮತ್ತು ವಾಸ್ತವ

ಭರವಸೆಗಳಿಂದ ಮತ ಸಿಗಬಹುದು, ಆರ್ಥಿಕ ಪ್ರಗತಿ ಸಾಧ್ಯವಾಗದು
Published 23 ಫೆಬ್ರುವರಿ 2024, 19:37 IST
Last Updated 23 ಫೆಬ್ರುವರಿ 2024, 19:37 IST
ಅಕ್ಷರ ಗಾತ್ರ

ಭಾರತದ ಆರ್ಥಿಕತೆಯ ಏಳುಬೀಳುಗಳ ಕುರಿತ ಚರ್ಚೆ ಬಿರುಸಾಗಿ ನಡೆಯುತ್ತಿದೆ. ಆರ್ಥಿಕ ಸಮೀಕ್ಷೆಯ ಬದಲು ‘ಆರ್ಥಿಕ ಅವಲೋಕನ– 2024’ (ಎಕನಾಮಿಕ್ ರೀವ್ಯೂ– 2024) ಎಂಬ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಮಧ್ಯಂತರ ಬಜೆಟ್ ಮಂಡಿಸಿಯಾಗಿದೆ. ಶ್ವೇತಪತ್ರವೂ ಪ್ರಕಟವಾಗಿದೆ. ಇವೆಲ್ಲವುಗಳಲ್ಲಿ ಒಂದು ಸಮಾನ ಅಂಶ ಇದೆ. ಭಾರತದ ಆರ್ಥಿಕತೆಯು ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಸಂಪೂರ್ಣ ಹಾಳಾಗಿತ್ತು, ಮೋದಿ ನೇತೃತ್ವದ ಸರ್ಕಾರ ಅದನ್ನು ಸುಧಾರಿಸಿ, ಸರಿದಾರಿಗೆ ತರುತ್ತಿದೆ; ಭಾರತವನ್ನು ಜಗತ್ತಿನ ಮೂರನೆಯ ಶ್ರೀಮಂತ ರಾಷ್ಟ್ರವಾಗಿ ರೂಪುಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಹತ್ತಿರದಲ್ಲಿರುವಾಗ ಇಂತಹ ಪ್ರಚಾರಗಳು ನಿರೀಕ್ಷಿತವೆ.
 
ಆದರೆ ವಾಸ್ತವ ಅಷ್ಟೊಂದು ಆಶಾದಾಯಕವಾಗಿಲ್ಲ. ಆರ್ಥಿಕತೆಯ ಸ್ವರೂಪವನ್ನು ಕರಾರುವಾಕ್ಕಾಗಿ ಹೇಳುವ ಅಂಕಿಅಂಶಗಳು ಲಭ್ಯವಿಲ್ಲ. ದೇಶದ ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿಯೂ ಸೇರಿದಂತೆ ಲಭ್ಯವಿರುವ ಹೆಚ್ಚಿನ ಮಾಹಿತಿಗಳು ಬರೀ ಅಂದಾಜುಗಳು. ಪರೋಕ್ಷ ಮಾಹಿತಿಗಳನ್ನು ಆಧರಿಸಿಯೇ ನಾವು ಇಂದು ನಿರ್ಧಾರಕ್ಕೆ ಬರಬೇಕಾಗುತ್ತದೆ.

ಆರ್ಥಿಕ ಸಮೀಕ್ಷೆಯ ಬದಲು ಸರ್ಕಾರ ಹತ್ತು ವರ್ಷಗಳ ಸಾಧನೆಯ ವರದಿಯನ್ನು ಪ್ರಕಟಿಸಿದೆ. ಚುನಾವಣಾ ವರ್ಷವಾದ್ದರಿಂದ ಪೂರ್ಣ ಪ್ರಮಾಣದ ಬಜೆಟ್ಟಿನ ಬದಲು ಮಧ್ಯಂತರ ಬಜೆಟ್ಟನ್ನು ಮಂಡಿಸಲಾಗಿದೆ. ತನ್ನ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಬಣ್ಣಿಸಲು ಬಜೆಟ್ಟನ್ನು ಬಳಸಿಕೊಳ್ಳಲಾಗಿದೆ. ಹೂಡಿಕೆ ಬಲವಾಗಿದೆ. ಜನರ ಬದುಕು ಸುಧಾರಿಸಿದೆ. ಜನರ ಸರಾಸರಿ ನೈಜ ವರಮಾನ ಶೇಕಡ 50ರಷ್ಟು ಹೆಚ್ಚಿದೆ. ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರು ಹೆಚ್ಚು ಸಬಲೀಕರಣಗೊಂಡಿದ್ದಾರೆ. ಜನರಿಗೆ ಗೌರವದಿಂದ ಬದುಕುವುದಕ್ಕೆ ಸಾಧ್ಯವಾಗಿದೆ... ಈ ಪಟ್ಟಿ ಹೀಗೇ ಮುಂದುವರಿಯುತ್ತದೆ. ಎಷ್ಟೋ ಹೇಳಿಕೆಗಳು ಉತ್ಪ್ರೇಕ್ಷಿತ ಎನಿಸುತ್ತವೆ.

ಜನರ ಸರಾಸರಿ ನೈಜ ವರಮಾನ ಶೇ 50ರಷ್ಟು ಹೆಚ್ಚಿದೆ ಅನ್ನುವ ಹೇಳಿಕೆಯನ್ನೇ ಗಮನಿಸಿ. ಸರ್ಕಾರದ ಮಾಹಿತಿಯ ಪ್ರಕಾರವೇ 2014–15ರಲ್ಲಿ ನೈಜ ರಾಷ್ಟ್ರೀಯ ತಲಾ ವರಮಾನವು ₹ 72,805 ಇದ್ದುದು 2022–23ರಲ್ಲಿ ₹ 98,374 ಆಗಿದೆ. ಅಂದರೆ ಆಗಿರುವುದು ಶೇ 35ರಷ್ಟು ಹೆಚ್ಚಳ, ಶೇ 50ರಷ್ಟು ಅಲ್ಲ. ಜೊತೆಗೆ ವರಮಾನದ ಹೆಚ್ಚಳವು ಬಹುಮಟ್ಟಿಗೆ ಅನ್ವಯಿಸುವುದು ಮೇಲಿನ ಸ್ತರದ ಶೇ 20ರಷ್ಟು ಜನರಿಗೆ ಮಾತ್ರ ಅನ್ನುವುದೂ ವಾಸ್ತವ. ಹಾಗೆಯೇ ಒಟ್ಟಾರೆ ಉದ್ಯೋಗದಲ್ಲಿ ಹೆಚ್ಚಳವಾಗಿದೆ ಅನ್ನುವುದೂ ವಾಸ್ತವವಲ್ಲ. ಸ್ವ-ಉದ್ಯೋಗಸ್ಥರ ಹಾಗೂ ವೇತನರಹಿತ ಕೆಲಸಗಾರರ ಸಂಖ್ಯೆಯಷ್ಟೇ ಹೆಚ್ಚಿರುವುದು. ಬಹುಸಂಖ್ಯಾತರ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರ ಆದಾಯ, ಅವರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತಿದೆ. ಪರಿಣಾಮವಾಗಿ, ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುತ್ತಿದೆ. ಬೇಡಿಕೆ ಇಲ್ಲ ಅನ್ನುವ ಕಾರಣಕ್ಕೆ ಜನ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಹೂಡಿಕೆ ಹೆಚ್ಚಬೇಕಾದರೆ ಸ್ಥಳೀಯ ಬೇಡಿಕೆ ಹೆಚ್ಚಬೇಕು. ಆಗಷ್ಟೇ ಪ್ರಗತಿ ಸಾಧ್ಯ. ವಿತ್ತೀಯ ಕೊರತೆಯ ನಿಯಂತ್ರಣ ಸಾಧ್ಯ.

ವರಮಾನಕ್ಕಿಂತ ಖರ್ಚು ಹೆಚ್ಚಿಗಾದರೆ ವಿತ್ತೀಯ ಕೊರತೆ ಉಂಟಾಗುತ್ತದೆ. ಹಣವನ್ನು ಹೊಂದಿಸಿಕೊಳ್ಳುವುದಕ್ಕೆ ಸರ್ಕಾರ ಸಾಲ ಮಾಡುತ್ತದೆ. ಸಾಲ ಹೆಚ್ಚಿದಷ್ಟೂ ಬಡ್ಡಿ ಏರುತ್ತಾ ಹೋಗುತ್ತದೆ. ವಿತ್ತೀಯ ಕೊರತೆ ಹೆಚ್ಚುತ್ತದೆ. ವಿತ್ತೀಯ ಕೊರತೆ ಜಿಡಿಪಿಯ ಶೇ 3ರಷ್ಟನ್ನು ಮೀರಬಾರದು ಅನ್ನುವ ನಿಯಮವನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ ಬಹುತೇಕ ವರ್ಷಗಳಲ್ಲಿ ಇದು ಸಾಧ್ಯವಾಗಿಲ್ಲ. ಕೋವಿಡ್ ಸಮಯದಲ್ಲಿ ಅದು ಶೇ 9.2ರಷ್ಟು ಇತ್ತು. ಈಗ ಅದು ಶೇ 5.8ರಷ್ಟು ಇದೆ. 2026ರಲ್ಲಿ ಅದನ್ನು ಶೇ 4.5ಕ್ಕೆ ಇಳಿಸುವ ಉದ್ದೇಶವಿದೆ.

ವಿತ್ತೀಯ ಕೊರತೆ ಇಳಿಯಬೇಕಾದರೆ ವರಮಾನ ಹೆಚ್ಚಬೇಕು ಇಲ್ಲವೇ ಖರ್ಚು ಕಡಿಮೆಯಾಗಬೇಕು. ಸರ್ಕಾರಕ್ಕೆ ಹೆಚ್ಚಿನ ವರಮಾನ ಬರುವುದು ತೆರಿಗೆಯಿಂದ. 2025ರಲ್ಲಿ ಒಟ್ಟಾರೆ ತೆರಿಗೆಯಲ್ಲಿ ವರಮಾನ ತೆರಿಗೆ ಪ್ರಮಾಣ ಶೇ 19ರಷ್ಟು, ಕಾರ್ಪೊರೇಟ್ ತೆರಿಗೆ ಪ್ರಮಾಣ ಶೇ 17ರಷ್ಟು ಹಾಗೂ ಜಿಎಸ್‌ಟಿಯಿಂದ ಶೇ 18ರಷ್ಟು ಸಂಗ್ರಹವಾಗಲಿದೆ ಅನ್ನುವ ಅಂದಾಜಿದೆ. ಹಿಂದಿನ ವರ್ಷ ಸೇವಾ ಕ್ಷೇತ್ರದಲ್ಲಿ ರಫ್ತು ಹೆಚ್ಚಿದ್ದರಿಂದ ಅಂದಾಜಿಗಿಂತ ಹೆಚ್ಚಿನ ವರಮಾನ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿಯೂ ಹೆಚ್ಚಿನ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ. ಒಟ್ಟಾರೆ ತೆರಿಗೆಯಲ್ಲಿ ಪರೋಕ್ಷ ತೆರಿಗೆಯ ಪಾಲು ನಿರಂತರವಾಗಿ ಹೆಚ್ಚುತ್ತಿದೆ. ಈಗ ಅದು ಶೇ 50ಕ್ಕೂ ಹೆಚ್ಚಿದೆ. ಕಾರ್ಪೊರೇಟ್ ತೆರಿಗೆಯು 2013–14ರಲ್ಲಿ ಒಟ್ಟು ತೆರಿಗೆಯಲ್ಲಿ ಶೇ 35ರಷ್ಟು ಇದ್ದುದು ಈಗ ಶೇ 24ಕ್ಕೆ ಇಳಿದಿದೆ. ಅದರಲ್ಲೂ ದೊಡ್ಡ ಕಾರ್ಪೊರೇಟ್ ಉದ್ದಿಮೆಗಳು ಕಟ್ಟುತ್ತಿರುವ ತೆರಿಗೆಯಂತೂ ತುಂಬಾ ಕಡಿಮೆ.
 
ಸರ್ಕಾರದ ಸ್ವತ್ತನ್ನು ಮಾರಿ ಒಂದಿಷ್ಟು ಸಂಗ್ರಹಿಸಲಾಗುತ್ತದೆ. ಉಳಿದ ಹಣಕ್ಕೆ ಸಾಲ ಮಾಡಲಾಗುತ್ತದೆ. ಈ ವರ್ಷ ಬಜೆಟ್ಟಿನ ಖರ್ಚು ಸರಿದೂಗಿಸಲು ಶೇ 28ರಷ್ಟು ಮೊತ್ತವನ್ನು ಸಾಲದ ಮೂಲಕ ಸಂಗ್ರಹಿಸುವ ಅಂದಾಜಿದೆ. ಸಾಲಕ್ಕೆ ಹಿಂದಿನ ಸರ್ಕಾರವನ್ನೇ ಪೂರ್ಣ ಹೊಣೆ ಮಾಡುವುದು ಸರಿಯಲ್ಲ. ಒಟ್ಟಾರೆ ಸಾಲದ ಹೊರೆಯನ್ನು 2013ರ ವೇಳೆಗೆ ಜಿಡಿಪಿಯ ಶೇ 52.13ಕ್ಕೆ ಇಳಿಸಲಾಗಿತ್ತು. ನಂತರದ ದಿನಗಳಲ್ಲಿ ಅದು ಏರುತ್ತಾ ಈಗ 2023ರಲ್ಲಿ ಜಿಡಿಪಿಯ ಶೇ 82ರಷ್ಟು ಆಗಿದೆ.
 
ಇನ್ನು ಖರ್ಚಿನ ವಿಷಯಕ್ಕೆ ಬಂದರೆ, ಸರ್ಕಾರ ಎರಡು ಬಗೆಯ ಖರ್ಚನ್ನು ಮಾಡುತ್ತದೆ. ಒಂದು, ರೆವಿನ್ಯೂ ಅಂದರೆ ಸಂಬಳ, ಪಿಂಚಣಿಯಂತಹ ದಿನನಿತ್ಯದ ಖರ್ಚುಗಳು. ಎರಡನೆಯದು, ಬಂಡವಾಳ ಅಂದರೆ ರಸ್ತೆ, ಶಾಲೆ, ಸೇತುವೆಗಳಂತಹ ಉತ್ಪಾದಕ ಸ್ವತ್ತುಗಳ ನಿರ್ಮಾಣಕ್ಕೆ ಮಾಡುವ ಖರ್ಚು (ಕ್ಯಾಪೆಕ್ಸ್). ಸರ್ಕಾರವು ಬಂಡವಾಳದ ವೆಚ್ಚದ ಕಡೆ ಹೆಚ್ಚು ಗಮನಕೊಡುತ್ತಿದೆ. ಅದರಿಂದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎನ್ನಲಾಗಿದೆ. 2023–24ರಲ್ಲಿ ಕ್ಯಾಪೆಕ್ಸ್ ಜಿಡಿಪಿಯ ಶೇ 2.7ರಿಂದ ಶೇ 3.2ಕ್ಕೆ ಏರಿದೆ. 2024–25ರಲ್ಲಿ ಅದು ಶೇ 3.4ರಷ್ಟು ಆಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಖಾಸಗಿಯವರು ಮಾತ್ರ ಬಂಡವಾಳ ಹೂಡುವುದರಲ್ಲಿ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಹಾಗಾಗಿ, ಒಟ್ಟಾರೆ ಹೂಡಿಕೆ ದರ 2010ರಿಂದಲೇ ಕುಸಿಯುತ್ತಿದೆ. ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಹೂಡಿಕೆ ಹೆಚ್ಚು ಉತ್ತಮವಾಗಿತ್ತು. ಎನ್‌ಡಿಎ ಆಡಳಿತದಲ್ಲಿ ಅದು ಯಾವ ವರ್ಷವೂ ಶೇ 30ರಷ್ಟನ್ನು ದಾಟಿಲ್ಲ ಅನ್ನುವುದು ವಾಸ್ತವ.

ಬಂಡವಾಳ ವೆಚ್ಚವನ್ನು ಸರಿದೂಗಿಸುವುದಕ್ಕೆ ಸಾಮಾಜಿಕ ವೆಚ್ಚದಲ್ಲಿ ಕಡಿತ ಮಾಡಲಾಗುತ್ತಿದೆ. 2023–24ರಲ್ಲಿ ಶಿಕ್ಷಣಕ್ಕೆ ₹ 1,19,417 ಕೋಟಿ ಹಾಗೂ ಆರೋಗ್ಯಕ್ಕೆ ₹ 88,956 ಕೋಟಿ ಇಡಲಾಗಿತ್ತು. ಆದರೆ ಖರ್ಚು ಮಾಡಿದ್ದು ಕ್ರಮವಾಗಿ ₹ 1,18,878 ಕೋಟಿ ಹಾಗೂ ₹ 79,221 ಕೋಟಿ. ಹಾಗೆಯೇ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ₹ 9,409 ಕೋಟಿಯಲ್ಲಿ ಖರ್ಚು ಮಾಡಿದ್ದು ₹ 6,780 ಕೋಟಿ. ಅಂದರೆ ಸಾಮಾಜಿಕ ಖರ್ಚುಗಳಿಗಾಗಿ ತೆಗೆದಿರಿಸಿರುವ ಹಣವನ್ನೂ ಸರ್ಕಾರ ಪೂರ್ಣಪ್ರಮಾಣದಲ್ಲಿ ಖರ್ಚು ಮಾಡುತ್ತಿಲ್ಲ. ಜೊತೆಗೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ವರ್ಗಾಯಿಸುತ್ತಿರುವ ಹಣವೂ ಕಡಿಮೆಯಾಗುತ್ತಿದೆ. 2021–22ರಲ್ಲಿ ರಾಜ್ಯಗಳಿಗೆ ₹ 4,60,575 ಕೋಟಿಯಷ್ಟು ವರ್ಗಾಯಿಸಲಾಗಿತ್ತು. ಅದು 2022–23ರಲ್ಲಿ ₹ 3,07,204 ಕೋಟಿಗೆ ಇಳಿಯಿತು. ಬಜೆಟ್‌ ಅಂದಾಜಿನ ಪ್ರಕಾರ, 2024–25ರಲ್ಲಿ ಅದು ಇನ್ನೂ ಕಡಿಮೆಯಾಗಲಿದೆ. ಹಾಗಾಗಿ, ರಾಜ್ಯಗಳಲ್ಲಿಯೂ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಪೆಟ್ಟು ಬೀಳುತ್ತದೆ.

ಬಂಡವಾಳ ವೆಚ್ಚವನ್ನು ಹೆಚ್ಚಿಸಿದರೆ, ಅಂದರೆ ವೇಗದ ರೈಲು ಯೋಜನೆ, ವಿಮಾನ ನಿಲ್ದಾಣ, ರಸ್ತೆ ನಿರ್ಮಾಣದಂತಹವುಗಳಲ್ಲಿ ಬಂಡವಾಳ ಹೂಡಿದರೆ ಅವು ಅಷ್ಟಾಗಿ ಉದ್ಯೋಗವನ್ನು ಸೃಷ್ಟಿಸುವುದಿಲ್ಲ. ಆಸ್ಪತ್ರೆಗಳನ್ನು ನಿರ್ಮಿಸಿದರೆ ಆರೋಗ್ಯದ ಸುಧಾರಣೆಯ ಜೊತೆಗೆ ಉದ್ಯೋಗ ಸೃಷ್ಟಿಯೂ ಆಗುತ್ತದೆ. ಸಾಮಾಜಿಕ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಬೆಳವಣಿಗೆಯ ಫಲ ಎಲ್ಲರಿಗೂ ಸಿಗುವುದು. ಆಗಷ್ಟೇ ಬಹುಸಂಖ್ಯಾತರ ಆರ್ಥಿಕ ಸ್ಥಿತಿ ಸುಧಾರಿಸುವುದು. ಈಗಿನ ಬಹುತೇಕ ಆರ್ಥಿಕ ಕಾರ್ಯಕ್ರಮಗಳು ಮೇಲಿನ ಸ್ತರದ ಶೇ 10–15ರಷ್ಟು ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡಿವೆ. ಮೇಲಿನ ಸ್ತರದ 15 ಕೋಟಿ ಅಥವಾ 20 ಕೋಟಿ ಜನರ ಆರ್ಥಿಕ ಸ್ಥಿತಿ ಸುಧಾರಿಸಿದರೆ ಬೇಡಿಕೆ ಹೆಚ್ಚುವುದಿಲ್ಲ. ಕೆಳಸ್ತರದ 140 ಕೋಟಿ ಜನರ ಸ್ಥಿತಿ ಸುಧಾರಿಸಬೇಕು, ಅವರ ಕೊಳ್ಳುವ ಶಕ್ತಿ ಹೆಚ್ಚಬೇಕು. ಆಗಷ್ಟೇ ಸ್ಥಳೀಯ ಬೇಡಿಕೆ ಗಣನೀಯವಾಗಿ ಹೆಚ್ಚುವುದು. ಖಾಸಗಿ ಹೂಡಿಕೆ ಹೆಚ್ಚುವುದು, ವಿದೇಶಿ ಬಂಡವಾಳವೂ ಹರಿದುಬರುವುದು. ಅದು ಸಾಧ್ಯವಾಗಬೇಕಾದರೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ, ಗ್ರಾಮೀಣ ಜನರ ಆದಾಯವನ್ನು ದ್ವಿಗುಣಗೊಳಿಸುವ, ಜನರನ್ನು ಸಬಲೀಕರಿಸುವ ಭರವಸೆ ಕಾರ್ಯಗತಗೊಳ್ಳಬೇಕು. ಇಲ್ಲದಿದ್ದರೆ ಅಂತಹ ಭರವಸೆಗಳಿಂದ ಮತ ಸಿಗಬಹುದು, ಆರ್ಥಿಕ ಪ್ರಗತಿ ಸಾಧ್ಯವಾಗುವುದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT