ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಭಾಷಾ ಕೌಶಲ: ಬೇಕು ಯೋಜನೆ

ಕಲಿಕೆ ವಿಸ್ತಾರಗೊಳ್ಳಲು ಸಮರ್ಪಕ ಭಾಷಾ ಕೌಶಲ ಅತ್ಯಗತ್ಯ
Published 3 ಅಕ್ಟೋಬರ್ 2023, 23:30 IST
Last Updated 3 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಓದು, ಬರಹ, ಲೆಕ್ಕ ಮಹಾತ್ಮ ಗಾಂಧಿಯವರ ಮೂಲ ಶಿಕ್ಷಣದ ಮೂಲ ಕೌಶಲಗಳು.‌ ನಂತರ ಗಾಂಧಿಯವರು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾರೆ. ಆದರೆ ಅವರು ಹೇಳುವ ಶಿಕ್ಷಣದ ಮೂಲ ಕೌಶಲದ ವಿಷಯವು ವರ್ತಮಾನದ ಶೈಕ್ಷಣಿಕ ಸಂದರ್ಭದಲ್ಲಿ ಬಹಳ ಮಹತ್ವ ಪಡೆದಿದೆ.‌

ಬಹಳಷ್ಟು ಅಧ್ಯಯನ ವರದಿಗಳು ಮಕ್ಕಳ ಓದುವ ಮತ್ತು ಬರೆಯುವ ಕೌಶಲಗಳ ಹಿಂದುಳಿಯುವಿಕೆಯ ಬಗ್ಗೆ ಹೇಳುತ್ತಿವೆ. ಅದಕ್ಕಿಂತಲೂ ಹೆಚ್ಚು ಸತ್ಯದ ವರದಿ ಸಿಗಬೇಕಾದರೆ ಪ್ರಾಥಮಿಕ ಶಾಲೆಯಿಂದ ಕಾಲೇಜುವರೆಗಿನ ಬೋಧಕರನ್ನು ಆಪ್ತವಾಗಿ, ಅನೌಪಚಾರಿಕವಾಗಿ ಮಾತನಾಡಿಸಬೇಕು. ‘ಮಕ್ಕಳಿಗೆ ಓದಲು ಬರುವುದಿಲ್ಲ’ ಎನ್ನುವುದೇ ಅವರ ಮುಖ್ಯ ಸಮಸ್ಯೆಯಾ ಗಿರುತ್ತದೆ. ಇದರರ್ಥ ಎಲ್ಲ ಮಕ್ಕಳಿಗೂ ಓದಲು ಬರುವುದಿಲ್ಲ ಎಂದಲ್ಲ. ಒಂದು ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಓದಲು ಗೊತ್ತಿಲ್ಲದಿದ್ದರೂ, ಬೋಧನೆಯನ್ನು ಮುಂದುವರಿಸಲು ಆಗುವುದಿಲ್ಲ. ಆದರೆ ಪಠ್ಯವಸ್ತುವನ್ನು ಪೂರ್ಣಗೊಳಿಸಲೇಬೇಕು.

ಅಲ್ಲದೆ, ಸುಮಾರು 25 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಪಠ್ಯಪುಸ್ತಕಗಳ ಗಾತ್ರ ಮತ್ತು ವಿಚಾರಗಳ ಭಾರ ಸುಮಾರು ಒಂದೂವರೆಯಿಂದ ಎರಡೂವರೆ ಪಟ್ಟು ಜಾಸ್ತಿಯಾಗಿದೆ. ಇತರ ಕಾರ್ಯಚಟುವಟಿಕೆಗಳ ಹೆಚ್ಚಳದಿಂದಾಗಿ ಬೋಧನಾ ಅವಧಿ ಸುಮಾರು ಶೇಕಡ 50ರಷ್ಟು ಕಡಿಮೆಯಾಗಿದೆ. ಆಗ ಬೋಧಕರು ಓದಲು ಬಾರದ ವಿದ್ಯಾರ್ಥಿಯನ್ನು ನಿರ್ಲಕ್ಷಿಸಿಯೇ ಮುಂದು ವರಿಯಬೇಕಾಗುತ್ತದೆ. ಹಾಗೆ ಮುಂದುವರಿದಾಗ ಓದಲು ಬಾರದವರನ್ನು ಉತ್ತೀರ್ಣಗೊಳ್ಳುವ ಹಾಗೆ ಮಾಡುವುದು ಹೇಗೆ ಎನ್ನುವ ಸವಾಲನ್ನು ಎದುರಿಸ ಬೇಕಾಗುತ್ತದೆ. ಭಾಷಾ ಕೌಶಲದ ಕಲಿಕೆ ವಿದ್ಯಾರ್ಥಿ ಗಳಿಗೆ ಕಿರಿಯ ಪ್ರಾಥಮಿಕ ಹಂತದಲ್ಲೇ ಸಮರ್ಪಕವಾಗಿ ಆಗದಿದ್ದರೆ ಮುಂದೆ ಶಿಕ್ಷಣದ ಎಲ್ಲ ಹಂತಗಳಲ್ಲೂ ಆ ವಿದ್ಯಾರ್ಥಿಗಳು, ಅವರ ಸಹಪಾಠಿಗಳು ಮತ್ತು ಬೋಧಕರು ಸಂಕಷ್ಟವನ್ನು ಎದುರಿಸಲೇಬೇಕಾಗುತ್ತದೆ.

ಈ ರೀತಿಯ ಸನ್ನಿವೇಶದ ಹಿಂದೆ ಹಲವಾರು ಕಾರಣಗಳಿರುತ್ತವೆ. ಮೊದಲನೆಯದಾಗಿ, ಸಿಇಟಿ ಅನುಷ್ಠಾನಗೊಂಡ ನಂತರದ ದಿನಗಳಲ್ಲಿ ಇಂಗ್ಲಿಷ್ ಮಾಧ್ಯಮದ ಬಗೆಗಿನ ಪೋಷಕರ ಒಲವನ್ನು ಇದುವರೆಗೆ ಬದಲಿಸಲು ಸಾಧ್ಯವಾಗಿಲ್ಲ. ಮಾಧ್ಯಮ ಇಂಗ್ಲಿಷ್ ಆಗಿದ್ದಾಗ, ಕನ್ನಡ ಹೇಗೂ ಪರಿಸರದ ಭಾಷೆಯಾಗಿ ಬರುತ್ತದೆ, ಇಂಗ್ಲಿಷ್ ಚೆನ್ನಾಗಿ ಕಲಿತರೆ ಸಾಕು ಎಂಬ ಭಾವನೆ ಸಮಾಜದಲ್ಲಿದೆ. ವಾಸ್ತವದಲ್ಲಿ ಇದು ಎರಡು ರೀತಿಯ ಸಮಸ್ಯೆಗಳನ್ನು ನಿರ್ಮಿಸುತ್ತದೆ. ಮಗುವಿನ ಸಾಮಾಜಿಕ ಪರಿಸರವು ಇಂಗ್ಲಿಷ್‌ನದ್ದಾಗಿರದೇ ಇರುವುದರಿಂದ ಕನ್ನಡ ಭಾಷೆಯ ಕೌಶಲಗಳನ್ನು ಸಾಧಿಸದೆ ಮತ್ತೊಂದು ಭಾಷೆಯ ಕೌಶಲವನ್ನು ಸಾಧಿಸಲು ಆಗುವುದಿಲ್ಲ. ಆದರೆ ಇಂಗ್ಲಿಷ್ ಮಾಧ್ಯಮವಾಗಿದ್ದಾಗ ಸ್ವಾಭಾವಿಕವಾಗಿ ಕನ್ನಡ ಕಲಿಕೆಗೆ ಆದ್ಯತೆ ಇರುವುದಿಲ್ಲ. ಆಗ ವಿದ್ಯಾರ್ಥಿ ಕನ್ನಡವನ್ನು ವ್ಯವಸ್ಥಿತವಾಗಿ ಕಲಿಯದೆಯೇ ಇಂಗ್ಲಿಷ್ ಅನ್ನು ಕಲಿಯುತ್ತಾನೆ. ಆಗ ಅಲ್ಲಿ ಕಲಿಕಾ ಸಮಸ್ಯೆಯ ಎರಡು ಗುಂಪುಗಳು ನಿರ್ಮಾಣಗೊಳ್ಳುತ್ತವೆ.

ಮೊದಲನೆಯದು, ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಸಮರ್ಪಕವಾಗಿ ಓದಿ, ಬರೆಯಲು ಸಾಧ್ಯವಾಗದವರ ಒಂದು ಗುಂಪು. ಎರಡನೆಯದಾಗಿ, ಇಂಗ್ಲಿಷ್‌ನಲ್ಲಿ ಓದಬಲ್ಲ ಮತ್ತು ಬರೆಯಬಲ್ಲ ಒಂದು ಗುಂಪು. ಈ ಎರಡನೆಯ ಗುಂಪಿನಲ್ಲಿ ಭಾಷಾ ಕೌಶಲದ ಸಮಸ್ಯೆಯೇನೂ ಇಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಓದಲು, ಬರೆಯಲು ಬಂದರೂ ಯಾವುದೇ ವಸ್ತು, ವಿಚಾರ, ಪರಿಕಲ್ಪನೆಯನ್ನು ಸಮಗ್ರವಾಗಿ ಗ್ರಹಿಸಿ ತಾವೇ ನಿರೂಪಣೆ ಮಾಡುವ ಶಕ್ತಿ ಅವರಿಗೆ ಬಂದಿರುವುದಿಲ್ಲ. ಏಕೆಂದರೆ ಓದು, ಬರಹದ ಕೌಶಲ ಅವರಿಗಿದ್ದರೂ ಸಮಗ್ರವಾಗಿ ಭಾಷಾ ಕೌಶಲ ಸಾಧನೆಯಾಗಿರುವುದಿಲ್ಲ.

ಎರಡನೆಯದಾಗಿ, ಆವಿಷ್ಕಾರಗೊಳಿಸಲಾದ ಕಲಿಕಾ ಪದ್ಧತಿಗಳನ್ನು ಕಲಿಕಾ ಸನ್ನಿವೇಶಕ್ಕೆ ಒತ್ತಾಯದಿಂದ ತರುವುದೂ ಭಾಷಾ ಕೌಶಲದ ಹಿನ್ನಡೆಗೆ ಕಾರಣವಾಗಿದೆ. ಉದಾಹರಣೆಗೆ, ನಲಿ-ಕಲಿ ಪದ್ಧತಿ ಜಾರಿಗೆ ಬಂದಿತು. ಕಲಿಕಾ ಪದ್ಧತಿಯಾಗಿ ಅದು ಚೆನ್ನಾಗಿದೆ. ಆದರೆ ಕಲಿಕೋ ಪಕರಣಗಳು ಸೂಕ್ತ ಕಾಲಕ್ಕೆ ತಲುಪದೇ ಇದ್ದರೆ ಅಷ್ಟೂ ಕಲಿಕೆಯು ಹಿಂದುಳಿಯುತ್ತದೆ. ನಮ್ಮ‌ ಸಾಮಾಜಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಕಾಲವಿಳಂಬ ಇಲ್ಲದಂತೆ ಯಾವುದೇ ಅಗತ್ಯವನ್ನು ಪೂರೈಸುವ ಸ್ಥಿತಿ ಇನ್ನೂ ಬಂದಿಲ್ಲ. ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲೂ ಭಾಷಾ ಕೌಶಲದ ಹಿಂದುಳಿಯುವಿಕೆ ಯನ್ನು ಶೈಕ್ಷಣಿಕ ಆಡಳಿತ ಗುರುತಿಸಿದೆ ಮತ್ತು ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಭಾಷಾ ಕೌಶಲ ಕಲಿಸಲು ಸೂಚನೆಯನ್ನೂ ನೀಡುತ್ತದೆ.

ಇಷ್ಟನ್ನೇ ಮಾಡಿದರೆ ನಿಜವಾಗಿ ಸ್ವಲ್ಪ ಸಹಾಯವಾದೀತು.‌ ಆದರೆ ಅಲ್ಲಿಗೂ ಕಲಿಕಾ ಪದ್ಧತಿಗಳು, ಹಂತಗಳು ಎಂದೆಲ್ಲ‌ ತಂದು, ಭಾಷೆಯನ್ನು ಈ ಪದ್ಧತಿಗಳ ಮುಖಾಂತರವೇ ಕಲಿಸಬೇಕು ಎಂದು ಸೂಚಿಸಿದಾಗ ಬೋಧಕರಿಗೆ ಅದೇ ಪದ್ಧತಿಗಳನ್ನು ಅಳವಡಿಸಿದ ದಾಖಲೆಗಳನ್ನು ಸಿದ್ಧಪಡಿಸುವುದು ಮೊದಲ ಅಗತ್ಯ
ವಾಗುತ್ತದೆ ವಿನಾ ಭಾಷಾ ಕೌಶಲ ಕಲಿಸುವುದಲ್ಲ. ನಿಜವಾಗಿ ಕಲಿಕಾ ಪದ್ಧತಿಗಳು ಗೊತ್ತಿರಬೇಕಾದದ್ದು ಬೋಧಕರಿಗೆ. ಡಿ.ಇಡಿ, ಬಿ.ಇಡಿಯಲ್ಲಿ ಅವರು ಅದನ್ನು ಅಭ್ಯಾಸ ಮಾಡಿರುತ್ತಾರೆ.‌ ಶಿಕ್ಷಕರಿಗೆ ಕೊಡಲಾಗುವ ತರಬೇತಿಯಲ್ಲೂ ಅದನ್ನು ಹೇಳಲಾಗಿರುತ್ತದೆ. ಆದರೆ ಕಲಿಕಾ ಸನ್ನಿವೇಶದಲ್ಲಿ ಯಾವ ಮಗುವಿಗೆ ಯಾವ ಪದ್ಧತಿ ಸೂಕ್ತ ಎಂದು ನಿರ್ಧರಿಸಿ ಶಿಕ್ಷಕರೇ ಅಳವಡಿಸಿಕೊಳ್ಳ
ಬೇಕು. ಕಲಿಸಬೇಕು ಎಂದರೆ ಸಾಕು; ಹೀಗೆಯೇ ಕಲಿಸಬೇಕು ಎಂದಾಗ ಸಮಸ್ಯೆಯಾಗುತ್ತದೆ. ಬೋಧಕರ ಕಾರ್ಯಗಳಿಗೆ ಅತಿಯಾದ ಮಧ್ಯಪ್ರವೇಶವೂ ಕಲಿಕಾ ಹಿನ್ನಡೆಗೆ ಕಾರಣ.

ಇಪ್ಪತ್ತೈದು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಒಟ್ಟೂ ಸಮಾಜದಲ್ಲಿ ಕ್ರಿಯಾಶೀಲತೆ ಜಾಸ್ತಿಯಾಗಿದೆ. ಅದರಿಂದಾಗಿ ಬೋಧಕರ ಆಡಳಿತಾತ್ಮಕ ಹೊಣೆಗಾರಿಕೆಯೂ ಹೆಚ್ಚಾಗಿದೆ. ಶಿಕ್ಷಣದಲ್ಲಿ ಕ್ರೀಡೆ, ಕಲೆ, ಸಂಸ್ಕೃತಿ ಮತ್ತಿತರ ಪೂರಕ ಚಟುವಟಿಕೆಗಳು ಜಾಸ್ತಿಯಾಗಿವೆ. ಇವೆಲ್ಲವೂ ಆಗಬೇಕಾದ್ದೇ. ಆದರೆ ಹೀಗೆ ಆಗುವಾಗ ಪಠ್ಯಪುಸ್ತಕದ ಗಾತ್ರ ಮತ್ತು ವೈಚಾರಿಕ ಭಾರ ಕುಗ್ಗಬೇಕಾಗಿತ್ತು, ಬದಲು ಹಿಗ್ಗಿದೆ. ಬೋಧಕರ ಕಾರ್ಯ ಚಟುವಟಿಕೆ ಹೆಚ್ಚಾಗಿರುವಾಗ ಶಾಲೆಗಳಲ್ಲಿ ಆಡಳಿತ ಮತ್ತು ಅಕಡೆಮಿಕ್ ವಿಭಾಗಗಳು ಪ್ರತ್ಯೇಕ ಆಗಬೇಕು, ಅದು ಆಗಿಲ್ಲ. ಸಿಬ್ಬಂದಿಯ ಒದಗಣೆ ಜಾಸ್ತಿಯಾಗಬೇಕು, ಅದೂ ಆಗಿಲ್ಲ.

ಬೋಧಕರನ್ನು, ಆಡಳಿತಗಾರರನ್ನು, ಖಾಸಗಿ ಆಡಳಿತ ಮಂಡಳಿಗಳನ್ನು, ರಾಜಕಾರಣಿಗಳನ್ನು ಟೀಕಿಸುವುದರಿಂದ ಉಪಯೋಗ ಆಗುವುದಿಲ್ಲ. ಎಲ್ಲರಿಗೂ ಅವರವರ ಕೆಲಸ ಮಾಡಬೇಕೆಂಬ ಅರಿವಿರುತ್ತದೆ. ಆದರೆ ಮಾಡಲು ಸಾಧ್ಯವಾಗದ ಸನ್ನಿವೇಶ ಇರುತ್ತದೆ. ಆ ಸನ್ನಿವೇಶವನ್ನು ವಾಸ್ತವಿಕ ನೆಲೆಯಲ್ಲಿ‌ ಮೊದಲು ಅರಿತುಕೊಳ್ಳಬೇಕು. ನಂತರ ಅದಕ್ಕೆ ತಕ್ಕುದಾದ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು.

ಆದರೆ ಭಾಷಾ ಕೌಶಲ ಸಮರ್ಪಕವಾಗದ ವಿನಾ ಕಲಿಕೆಯು ವಿಸ್ತಾರಗೊಳ್ಳುವುದಿಲ್ಲ. ಭಾಷಾ ಸಾಮರ್ಥ್ಯ ಇಲ್ಲದಿದ್ದರೆ ಮೇಲು ಮೇಲಿನ ತರಗತಿಗಳಿಗೆ ಹೋಗುತ್ತಿದ್ದ ಹಾಗೆಲ್ಲ ಕಲಿಕಾ ದಕ್ಷತೆಯು ಕುಸಿಯುತ್ತಾ ಹೋಗುತ್ತದೆ. ಆದ್ದರಿಂದ ಸಾರ್ವತ್ರಿಕ ಭಾಷಾ ಕೌಶಲದ ಸಾಧನೆಗೆ ಆದ್ಯತೆಯನ್ನು ನೀಡಬೇಕು.

ಮನೆಯಲ್ಲೇ ಇಂಗ್ಲಿಷ್‌ನಲ್ಲಿ ವ್ಯವಹರಿಸುವ ಕುಟುಂಬಗಳನ್ನು ಹೊರತುಪಡಿಸಿ ಹೇಳುವುದಾದರೆ, ಮಾತೃಭಾಷೆಯನ್ನು ಸಮರ್ಪಕವಾಗಿ ಕಲಿಯದೆ ಇಂಗ್ಲಿಷನ್ನು ಕಲಿಯಲು ಸಾಧ್ಯ ಎಂದು ಭಾವಿಸುವುದು ತಪ್ಪಾಗುತ್ತದೆ. ಮಾತೃಭಾಷಾ ಕೌಶಲಗಳನ್ನು ಸಮರ್ಪಕಗೊಳಿಸಿದ ನಂತರವಷ್ಟೇ ಇಂಗ್ಲಿಷ್‌ನ ಸಾಮರ್ಥ್ಯವನ್ನೂ ಗಳಿಸಿಕೊಳ್ಳಲು ಸಾಧ್ಯ ಮತ್ತು ಮಾತೃ ಭಾಷಾ ಸಾಮರ್ಥ್ಯ ಇದ್ದಾಗ ಇಂಗ್ಲಿಷ್ ಅನ್ನು ಕಲಿಯುವುದು ಸುಲಭವಾಗುತ್ತದೆ. ಆದ್ದರಿಂದ ಮೊದಲು ಭಾಷಾ ಸಾಮರ್ಥ್ಯದ ಕೊರತೆ ಇರುವ ಮಕ್ಕಳನ್ನು ಗುರುತಿಸಬೇಕು.‌ ಈ ಗುರುತಿಸುವಿಕೆಗೆ ಹೊರಡುವ ಮೊದಲು ಸತ್ಯ ಮಾಹಿತಿಯನ್ನು ಕೊಟ್ಟದ್ದ ಕ್ಕಾಗಿ ಬೋಧಕರನ್ನು ಶಿಕ್ಷೆಗೆ ಗುರಿ ಮಾಡಲಾಗುವುದಿಲ್ಲ‌ ಎಂಬ ಭರವಸೆ ನೀಡಬೇಕು. ಈ ಭರವಸೆಯನ್ನು ನೀಡದೇ ಇದ್ದರೆ ಸತ್ಯ ಮಾಹಿತಿ ಎಂದೂ ಸಿಗುವುದಿಲ್ಲ. ಹೀಗೆ ಗುರುತಿಸಲ್ಪಟ್ಟ ಮಕ್ಕಳಿಗೆ ಅವರು ಯಾವ ಹಂತದಲ್ಲಿ ದ್ದಾರೊ ಆ ಹಂತದ ಇತರ ಪಠ್ಯಗಳ ಕಲಿಕೆಯಿಂದ ಒಂದು ವರ್ಷ ವಿನಾಯಿತಿಯನ್ನು ನೀಡಬೇಕು. ಭಾಷೆಯನ್ನು ಮಾತ್ರ ಕಲಿತು ಅದರ ಆಧಾರದಲ್ಲೇ ಪರೀಕ್ಷೆ ನಡೆಸಿ ಉತ್ತೀರ್ಣಗೊಳಿಸಲು ಸೂಕ್ತ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು.

.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT