ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧೀಂದ್ರ ಕುಲಕರ್ಣಿ ಬರಹ: ‘ಕ್ವಾಡ್’, ‘ಆಕಸ್’ ಸುಳಿಯಲ್ಲಿ ಏಷ್ಯಾ

ಅಮೆರಿಕದ ಆಟಗಳಿಗೆ ಭಾರತ ದಾಳವಾಗುವುದರಿಂದ ಆಗಬಹುದಾದ ಪರಿಣಾಮಗಳೇನು?
Last Updated 3 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಗುರುದೇವ ರವೀಂದ್ರನಾಥ ಟ್ಯಾಗೋರ್ ಇಂದು ಬದುಕಿ ದ್ದಿದ್ದರೆ ಅವರು ದುಃಖಭರಿತ ವ್ಯಕ್ತಿಯಾಗಿರುತ್ತಿದ್ದರು. ಏಷ್ಯನ್ ಏಕತೆಯನ್ನು ಪಟ್ಟುಹಿಡಿದು ಪ್ರತಿಪಾದಿಸಿದ ಕವಿ, ತತ್ವಜ್ಞಾನಿ ಅವರು. ಏಷ್ಯಾದಲ್ಲಿನ ಸಂಘರ್ಷಗಳು, ಅನೈಕ್ಯತೆ ಹಾಗೂ ಏಷ್ಯಾ ಖಂಡವನ್ನು ಪ್ರಾಂತ್ಯವಾರು ಪೈಪೋಟಿಯ ರಾಡಿಯಲ್ಲಿ ಇರಿಸುವಲ್ಲಿ ಪಾಶ್ಚಿಮಾತ್ಯ ಶಕ್ತಿಗಳ ಸದ್ಯದ ಪ್ರಯತ್ನಗಳಿಂದ ಅವರು ಖಂಡಿತ ಯಾತನೆ ಅನುಭವಿಸಿರುತ್ತಿದ್ದರು. ಅವರ ಕಾಲದಲ್ಲಿ ಅವರಷ್ಟು ಅಷ್ಟೊಂದು ಏಷ್ಯನ್ ರಾಷ್ಟ್ರಗಳಿಗೆ ಭೇಟಿ ನೀಡಿದ ಭಾರತೀಯ ನೇತಾರರೇ ಇರಲಿಲ್ಲ.

‘ಏಷ್ಯನ್ ಮನಸ್ಸು ಸೃಷ್ಟಿ’- ಅವರ ಜೀವಿತದ ಧ್ಯೇಯವಾಗಿತ್ತು. 1921ರಲ್ಲಿ ಅವರು ‘ವಿಶ್ವ ಭಾರತಿ’ ಯನ್ನು ಸ್ಥಾಪಿಸಿದಾಗ, ಏಷ್ಯಾದ ಇತರ ರಾಷ್ಟ್ರಗಳ ಜೊತೆಗೆ ಭಾರತವನ್ನು ಬೆಸೆದಿದ್ದ ನಾಗರಿಕ, ಸಾಂಸ್ಕೃತಿಕ ಹಾಗೂ ಅಧ್ಯಾತ್ಮದ ಬಂಧಗಳನ್ನು ಪುನರುಜ್ಜೀವಗೊಳಿಸುವುದೇ ಅವರ ಮುಖ್ಯ ಗುರಿಯಾಗಿತ್ತು.

ಗುರುದೇವರ ಕನಸಿನ ‘ಏಷ್ಯನ್ ಮನಸ್ಸು’ ಇಂದು ಛಿದ್ರಗೊಂಡಿದೆ. ಒಂದಾನೊಂದು ಕಾಲದಲ್ಲಿ ವಸಾಹತುಶಾಹಿಯ ಬಲಿಪಶುಗಳಾಗಿದ್ದಂತಹ ರಾಷ್ಟ್ರಗಳು ಪರಸ್ಪರ ದೂರ ಸರಿದಿವೆ. ಸ್ಪರ್ಧಾತ್ಮಕ ಗುಂಪುಗಳನ್ನು ಸೃಷ್ಟಿಸಿ ಸಂಘರ್ಷದ ಕಿಡಿಯನ್ನು ಹೊತ್ತಿಸಲು ಪಾಶ್ಚಿಮಾತ್ಯ ಶಕ್ತಿಗಳು ಯತ್ನಿಸುತ್ತಿರುವ ಸಂದರ್ಭದಲ್ಲಿ ವಿಶ್ವದ ಶೇಕಡ 60ರಷ್ಟು ಜನಸಂಖ್ಯೆಗೆ ನೆಲೆಯಾದ ಏಷ್ಯಾ, ಅಶಾಂತಿಯ ಬೀಡಾಗುತ್ತಿರುವುದು ಹೆಚ್ಚಾಗುತ್ತಿದೆ. ದುಃಖದ ಸಂಗತಿ ಎಂದರೆ, ಏಷ್ಯಾದ ಆಂತರಿಕ ಕಲಹಗಳು ಶಾಂತಿಗೆ ಮಾರಕವಾಗುತ್ತಿರುವುದಲ್ಲದೇ ಜನರ ಯೋಗಕ್ಷೇಮ ಹೆಚ್ಚಿಸಲು ಪರಸ್ಪರ ಪೂರಕವಾಗಿರುವಂತಹ ಸಹಕಾರದ ಅವಕಾಶಗಳ ಬಾಗಿಲುಗಳನ್ನೂ ಮುಚ್ಚಿಬಿಡುತ್ತಿವೆ.

ಪಶ್ಚಿಮ ಏಷ್ಯಾ ಇತ್ತೀಚಿನ ವರ್ಷಗಳಲ್ಲಿ ಅನೇಕ ಯುದ್ಧಗಳನ್ನು ಕಂಡಿದೆ: ಇರಾನ್- ಇರಾಕ್ ಯುದ್ಧ, ಇರಾಕ್ ಮೇಲೆ ಅಮೆರಿಕ ದಾಳಿ, ಸಿರಿಯಾ ಮತ್ತು ಯೆಮನ್‌ಗಳಲ್ಲಿ ನಡೆಯುತ್ತಿರುವ ಯುದ್ಧಗಳು. ದಕ್ಷಿಣ ಏಷ್ಯಾದಲ್ಲಿ, ಅಫ್ಗಾನಿಸ್ತಾನವು ನಾಲ್ಕು ದಶಕಗಳ ಕಾಲ ಹೊರಗಿನ ಯುದ್ಧಗಳು ಹಾಗೂ ಆಂತರಿಕ ಕಾದಾಟಗಳನ್ನು ಅನುಭವಿಸಿದೆ. ಇತ್ತೀಚೆಗೆ ಅಮೆರಿಕ ಸೇನೆ ವಾಪಸಾತಿಯ ನಂತರವೂ ಅಫ್ಗಾನಿಸ್ತಾನದಲ್ಲಿ ಸ್ಥಿರತೆ ಸಾಧಿಸಲು, ರಾಷ್ಟ್ರದ ಮರುರಚನೆಗೆ ನೆರ ವಾಗಲು ಭಾರತದಿಂದಾಗಲೀ ನೆರೆಹೊರೆ ರಾಷ್ಟ್ರಗಳಿಂದಾ ಗಲೀ ಯಾವುದೇ ಸಹಕಾರದ ಪ್ರಯತ್ನಗಳಾಗಿಲ್ಲ.

ಇದಕ್ಕೆ ಒಂದು ಕಾರಣ, ತಾಲಿಬಾನ್‌ನ ಧಾರ್ಮಿಕ ಮತಾಂಧತೆ. ಮತ್ತೊಂದು, ಭಾರತ– ಪಾಕಿಸ್ತಾನದ ನಡುವಿನ ಹಗೆತನ. ನಮ್ಮ ಎಡೆಬಿಡದ ಶತ್ರುತ್ವದಿಂದಾಗಿ, ಅಫ್ಗಾನಿಸ್ತಾನ ಸಹ ಸದಸ್ಯ ರಾಷ್ಟ್ರವಾಗಿ ರುವ ಸಾರ್ಕ್ (ಪ್ರಾದೇಶಿಕ ಸಹಕಾರಕ್ಕಾಗಿ ದಕ್ಷಿಣ ಏಷ್ಯಾ ಸಂಘಟನೆ) ಪೂರ್ಣ ನಿಷ್ಕ್ರಿಯಗೊಂಡಿದೆ ಹಾಗೂ ಕೋಮಾ ಸ್ಥಿತಿಯಲ್ಲಿದೆ. ಇದರ ನೇತಾರರು 2014ರಿಂದಲೂ ಶೃಂಗಸಭೆ ನಡೆಸುವುದು ಸಾಧ್ಯ ವಾಗಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ಶಾಂಘೈ ಸಹಕಾರ ಸಂಘಟನೆಯನ್ನು (ಎಸ್‌ಸಿಒ), ಈ ಪ್ರದೇಶದಲ್ಲಿ ಪಾಶ್ಚಿಮಾತ್ಯೇತರ ಕಾರ್ಯಸಾಧ್ಯ ವೇದಿಕೆಯಾಗಿ ರೂಪಿಸುವಲ್ಲಿ ಚೀನಾ ಒಂದಿಷ್ಟು ಯಶಸ್ಸು ಸಾಧಿಸಿದೆ.

ಹೆಚ್ಚು ಆತಂಕದ ಸಂಗತಿ ಎಂದರೆ, ಅಫ್ಗಾನಿಸ್ತಾನದಲ್ಲಿನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಆ ದೇಶದ ಹೊರಗಿನಿಂದ ನಡೆಸುವುದಕ್ಕಾಗಿ ವಾಯವ್ಯ ಭಾರತದ ಒಂದು ಜಾಗದಲ್ಲಿ ಮಿಲಿಟರಿ ನೆಲೆ ಯನ್ನು ಹೊಂದಲು ಅಮೆರಿಕ ನಡೆಸಿರುವ ಪ್ರಯತ್ನ ಕುರಿತಾದಂತಹ ವರದಿ. ಇದಕ್ಕೆ ಒಪ್ಪಿಕೊಳ್ಳುವುದು ಭಾರತ ಹಾಗೂ ಸುತ್ತಲಿನ ವಲಯಕ್ಕೆ ವಿಪ್ಲವಕಾರಿಯಾದುದು. ಇದರಿಂದ ದ್ವಿಮುಖ ಮಾನದಂಡಗಳನ್ನು ಅನುಸರಿಸುವ ಕುರಿತಾದ ಟೀಕೆಗಳಿಗೂ ನಮ್ಮನ್ನು ನಾವೇ ತೆರೆದುಕೊಂಡಂತಾಗುತ್ತದೆ.

ಭಾರತದ ವಿರುದ್ಧದ ಕಾರ್ಯಾಚರಣೆಗಳಿಗೆ ಅಫ್ಗನ್ ನೆಲ ಬಳಸಿಕೊಳ್ಳಲು ತಾಲಿಬಾನ್ ಅವಕಾಶ ನೀಡಬಾರದೆಂದು ಭಾರತ ಸರಿಯಾಗಿಯೇ ಒತ್ತಾಯಿಸುತ್ತಿದೆ. ಹಾಗಿದ್ದಲ್ಲಿ, ಭಾರತೀಯ ನೆಲದಿಂದ ಅಮೆರಿಕದ ಅಫ್ಗನ್ ವಿರೋಧಿ ಕಾರ್ಯಾಚರಣೆಗಳಿಗೆ ನಾವು ಹೇಗೆ ಅವಕಾಶ ನೀಡಬಹುದು?

ಏಷ್ಯಾದ ಒಳಗಿನ ಮತ್ತೊಂದು ಪ್ರಮುಖ ವೈರತ್ವವನ್ನು ಪರಿಶೀಲಿಸೋಣ. ಏಷ್ಯಾ ನಾಗರಿಕತೆಯ ಎರಡು ದೊಡ್ಡ ನೆರೆಹೊರೆಯ ರಾಷ್ಟ್ರಗಳಾದ ಭಾರತ ಮತ್ತು ಚೀನಾ, ಪರಸ್ಪರ ಶಕ್ತಿ ಸಮರದಲ್ಲಿ ಸಿಲುಕಿಕೊಂಡಿವೆ. ದಕ್ಷಿಣ ಚೀನಾ ಸಮುದ್ರದಲ್ಲಿ ನೆರೆಹೊರೆಯವರೊಂದಿಗೆ ಕಡಲ ವ್ಯಾಜ್ಯಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಿಕೊಳ್ಳುವಲ್ಲಿನ ಚೀನಾದ ವೈಫಲ್ಯವೂ ಕದಡಿದ ಜಲದಲ್ಲಿ ಮೀನು ಹಿಡಿಯಲು ದೂರದ ಅಮೆರಿಕಕ್ಕೆ ಅವಕಾಶ ಮಾಡಿ ಕೊಟ್ಟಂತಾಗಿದೆ.

ಏಷ್ಯನ್ ವಿವಾದಗಳಲ್ಲಿ ತಲೆಹಾಕಲು ಅಮೆರಿಕಕ್ಕೆ ಯಾವ ಪ್ರಮೇಯವೂ ಇಲ್ಲ. ಹೀಗಿದ್ದೂ ಜಾಗತಿಕ ನಾಯಕತ್ವ ಪಡೆದುಕೊಳ್ಳುವಂತಹ ಹಿತಾನುಭವವನ್ನು ಭಾರತದ ಪಾಶ್ಚಾತ್ಯ ಅನುಕರಣೆಯ ಆಡಳಿತದ ಗಣ್ಯರಿಗೆ ನೀಡುವ ರೀತಿಯಲ್ಲಿ ‘ಭಾರತ– ಪೆಸಿಫಿಕ್’ ಕೃತಕ ಪರಿಕಲ್ಪನೆಯನ್ನು ಮುಂದೆ ಮಾಡಿ, ಭಾರತ-ಚೀನಾ ಜಗಳ ದಲ್ಲಿ ತನಗೂ ನೆಲೆ ಒದಗಿಸಿಕೊಳ್ಳಲು ಮೋದಿ ನೇತೃತ್ವದ ಸರ್ಕಾರದ ಮನ ಒಲಿಸಿದೆ ಅಮೆರಿಕ.

ಎರಡನೇ ವಿಶ್ವ ಮಹಾಯುದ್ಧ ಮುಗಿದ ನಂತರ, ತಮ್ಮ ರಾಷ್ಟ್ರವೇ ಜಾಗತಿಕ ದೊಡ್ಡಣ್ಣನಾಗಿದ್ದು, ವಿಶ್ವದಲ್ಲಿ ಎಲ್ಲಿ ಬೇಕಾದರೂ ಶಕ್ತಿ ಪ್ರದರ್ಶಿಸುವ ಹಕ್ಕು ಇದೆ ಎಂಬಂಥ ನಂಬಿಕೆಯಲ್ಲಿ ಅಮೆರಿಕದ ಆಡಳಿತಗಾರರು
ವರ್ತಿಸುತ್ತಿದ್ದಾರೆ. ಆದರೆ, ಇತ್ತೀಚಿನ ದಶಕಗಳಲ್ಲಿ ಚೀನಾದ ಪ್ರಬಲ ಹೊಮ್ಮುವಿಕೆಯಿಂದಾಗಿ ಜಾಗತಿಕವಾಗಿ ಅಮೆರಿಕ ಪ್ರಾಬಲ್ಯದ ದಿನಗಳನ್ನು ಸ್ಪಷ್ಟವಾಗಿ ಎಣಿಸುವಂತಾಗಿದೆ. ಈ ಖಚಿತತೆಯಿಂದ ಆತಂಕಗೊಂಡಿರುವ ಅಮೆರಿಕವು ಏಷ್ಯಾದಲ್ಲಿ ಅನೈಕ್ಯತೆಯ ಬೀಜಗಳನ್ನು ಬಿತ್ತುವ ಕ್ರಿಯೆಯಲ್ಲಿ ತೊಡಗಿಕೊಂಡಿದೆ. ಈ ಉದ್ದೇಶಕ್ಕಾಗಿ ಚೀನಾವನ್ನು ನಿಗ್ರಹಿಸಲು ಮಿಲಿಟರಿ ಗುಂಪುಗಳನ್ನು ಇದು ನಿರ್ಮಿಸುತ್ತಿದೆ. ದುರದೃಷ್ಟವಶಾತ್ ನಾವು ಭಾರತೀಯರು, ಚೀನಾದ ಜೊತೆಗಿನ ನಮ್ಮ ವಿವಾದ ಗಳನ್ನು ನಮ್ಮದೇ ಸಮಾನತೆ ಹಾಗೂ ನ್ಯಾಯದ ಆಧಾರದ ಮೇಲೆ ಪರಿಹರಿಸಿಕೊಳ್ಳುವ ಬದಲಿಗೆ, ಅಮೆರಿಕ ನೇತೃತ್ವದ ನಾಲ್ಕು ರಾಷ್ಟ್ರಗಳ ಕೂಟಕ್ಕೆ ಸೇರಿಕೊಳ್ಳುವುದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಮೂಲಭೂತವಾಗಿ ಚೀನಾ ವಿರೋಧಿ ಮೈತ್ರಿಕೂಟವಾಗಿರುವ ‘ಕ್ವಾಡ್’, ಏಷ್ಯಾವನ್ನು ಹೊಸ ಶೀತಲ ಸಮರ ಹಾಗೂ ದುಬಾರಿ ಶಸ್ತ್ರಾಸ್ತ್ರ ಪೈಪೋಟಿಯ ರಂಗಮಂಚವಾಗಿಸಬಹುದು. ಚೀನಾದ ಮೇಲೆ ಗುಂಡು ಹಾರಿಸಲು ತನ್ನ ಭುಜದ ಮೇಲೆ ಬಂದೂಕುಗಳನ್ನು ಇಡಲು ಹೊರಗಿ ನವರಿಗೆ ಭಾರತ ಅವಕಾಶ ಮಾಡಿಕೊಡಬೇಕೇ? ಅಮೆರಿಕದ ಆಟಗಳಿಗೆ ಭಾರತ ದಾಳವಾಗುವುದರಿಂದ ಆಗಬಹುದಾದ ಪರಿಣಾಮಗಳೇನು?

‘ಆಕಸ್’ (AUKUS) ಎಂಬ ಮತ್ತೊಂದು ಚೀನಾ ವಿರೋಧಿ ಗುಂಪನ್ನು ಈಗ ಅಮೆರಿಕ ಸೃಷ್ಟಿಸಿದೆ. ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಅಮೆರಿಕ ಮಧ್ಯದ ಭದ್ರತಾ ಒಡಂಬಡಿಕೆ ಇದು. ಈ ಮೂರೂ, ಬ್ರಿಟಿಷ್ ಸಂಸ್ಕೃತಿಯಲ್ಲಿ ಮೂಲ ಎಳೆ ಹೊಂದಿ ಆಂಗ್ಲ ಭಾಷೆ ಮಾತನಾಡುವಂತಹ ರಾಷ್ಟ್ರಗಳು. ಚೀನಾವನ್ನು ತಡೆಯುವುದಕ್ಕಾಗಿ ಪರಮಾಣುಶಕ್ತ ಸಬ್‌ಮರಿನ್‌ಗಳನ್ನು ಅಭಿವೃದ್ಧಿಪಡಿಸಿ ನಿಯೋಜಿಸಲು ಆಸ್ಟ್ರೇಲಿಯಾಗೆ ಅಮೆರಿಕ ಮತ್ತು ಬ್ರಿಟನ್ ನೆರವಾಗಲಿವೆ. ತನ್ನೆರಡು ನ್ಯಾಟೊ ಮಿತ್ರರಾಷ್ಟ್ರಗಳ ಬಗ್ಗೆ ಫ್ರಾನ್ಸ್‌ಗೆ ತೀವ್ರ ಕೋಪವಿದೆ. ಏಕೆಂದರೆ, ಲಾಭದಾಯಕವಾದ 8,000 ಕೋಟಿ ಡಾಲರ್ ಮೌಲ್ಯದ ಫ್ರೆಂಚ್ – ಆಸ್ಟ್ರೇಲಿಯನ್ ಸಬ್‌ಮರಿನ್ ಒಪ್ಪಂದಕ್ಕೆ ಈ ಒಡಂಬಡಿಕೆಯಿಂದ ಕುತ್ತುಬಂದಿದೆ. ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಹೇಗೆ ಈಗ ಪ್ರಮುಖವಾಗಿ ಯುದ್ಧ ಆರ್ಥಿಕತೆಗಳಾಗುತ್ತಿವೆ ಎಂಬುದನ್ನು ಇದು ತೋರಿಸುತ್ತದೆ.

‘ಕ್ವಾಡ್’ ಇರಲಿ, ‘ಆಕಸ್’ ಇರಲಿ, ಹೇಗೆ ನಮ್ಮ ಸಮುದ್ರಗಳು ಹಾಗೂ ಸಾಗರಗಳು, ವಿಪತ್ತುಕಾರಕ ಸಮರನೌಕೆಗಳು ಹಾಗೂ ಸಬ್‌ಮರಿನ್‌ಗಳ ಕ್ರೀಡಾಂಗಣಗಳಾಗುತ್ತಿರುವುದು ಹೆಚ್ಚುತ್ತಿದೆ ಎಂಬುದು ಭಾರತೀಯರು ಹಾಗೂ ಇತರ ಎಲ್ಲಾ ಏಷ್ಯನ್ನರ ಚಿಂತೆಗೆ ಕಾರಣವಾಗಬೇಕು. ತಮ್ಮ ನೌಕಾಪಡೆಗಳನ್ನು ಬಳಸಿಕೊಂಡು ಶಕ್ತ ರಾಷ್ಟ್ರಗಳು ‘ವಿಶ್ವದ ಶಾಂತಿಗೆ ಬೆದರಿಕೆಯೊಡ್ಡಿ ವಿಶ್ವದ ಸಂಪನ್ಮೂಲಗಳನ್ನು ದೋಚಬಹುದು’ (ಯಂಗ್ ಇಂಡಿಯಾ; 8 ಡಿಸೆಂಬರ್ 1921) ಎಂಬಂಥ ಭವಿಷ್ಯದ ಬಗ್ಗೆ ಮಹಾತ್ಮ ಗಾಂಧಿಯವರು ಸರಿಯಾಗಿ ನೂರು ವರ್ಷಗಳ ಹಿಂದೆ ಎಚ್ಚರಿಕೆ ನೀಡಿದ್ದರು. ಅವರ ಎಚ್ಚರಿಕೆ, ಈಗ ಭಯಾನಕ ಸತ್ಯವಾಗಿ ಪರಿಣಮಿಸುತ್ತಿದೆ.

ಎರಡು ಭಯಂಕರ ವಿಶ್ವಯುದ್ಧಗಳಿಗೆ ಪ್ರೇರಕವಾದ ಯುರೋಪಿಯನ್ ಪೈಪೋಟಿಯ ರಾಕ್ಷಸೀಯ ಲಕ್ಷಣಗಳ ಅನುಕರಣೆಯ ವಿರುದ್ಧ ಏಷ್ಯನ್ನರನ್ನು ಟ್ಯಾಗೋರ್ ಸಹ ಎಚ್ಚರಿಸಿದ್ದರು. ಗುರುದೇವರ ಈ ಎಚ್ಚರಿಕೆಯನ್ನೂ ‘ವಿಶ್ವ ಗುರು’ ಆಗಲು ಉತ್ಕಟಾಕಾಂಕ್ಷಿಯಾಗಿರುವ ಭಾರತವು ತನ್ನದೇ ಆನಂದದಲ್ಲಿ ಮೈಮರೆತು ಕಡೆಗಣಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT