ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ನೇರ ನಗದಿನ ಬದಲು ಪೌಷ್ಟಿಕಧಾನ್ಯ ವಿತರಣೆ ‘ಕರ್ನಾಟಕ ಮಾದರಿ’ಯಾಗಲಿ!
Published 20 ಅಕ್ಟೋಬರ್ 2023, 0:06 IST
Last Updated 20 ಅಕ್ಟೋಬರ್ 2023, 0:06 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಪಕ್ಷವು ವಚನ ನೀಡಿದ್ದಂತೆ, ಅಧಿಕಾರಕ್ಕೆ ಬಂದ ನಂತರ ಪಡಿತರ ವಿತರಿಸಲು ಸಾಧ್ಯವಾಗದೇ ಇದ್ದಾಗ, ಅದರ ಬದಲು ನೇರ ನಗದು ಪಾವತಿ ವ್ಯವಸ್ಥೆಯ ಮೂಲಕ ಹಣ ನೀಡಲು ಆರಂಭಿಸಿ ಎರಡು ತಿಂಗಳಾಗಿದೆ. ಇದು ಬರೀ ತಾತ್ಕಾಲಿಕ ವ್ಯವಸ್ಥೆ ಎಂದು ಸರ್ಕಾರ ಹೇಳಿದ್ದರೂ ಧಾನ್ಯ ಖರೀದಿ, ಸಂಗ್ರಹ ಮತ್ತು ವಿತರಣೆಯಂತಹ ಜಂಜಾಟಗಳಿಗಿಂತ ಹಣ ವಿತರಣೆಯೇ ಸುಲಭ ಮಾರ್ಗ. ಆಹಾರ ಭದ್ರತಾ ಕಾನೂನಿನಲ್ಲಿ ಇದಕ್ಕೆ ಅವಕಾಶ ಕೂಡ ಇರುವುದರಿಂದ ಸರ್ಕಾರ ಇದನ್ನು ಮುಂದುವರಿಸಿಕೊಂಡು ಹೋಗುವ ಎಲ್ಲ ಸಾಧ್ಯತೆಗಳೂ ಇದ್ದೇ ಇವೆ. ಇದು, ಜನರ ಪೌಷ್ಟಿಕಾಂಶದ ಬಗ್ಗೆ ಚಿಂತಿಸುವ ಎಲ್ಲರಿಗೂ ಕಳವಳ ಮತ್ತು ಆತಂಕದ ವಿಚಾರವೇ ಆಗಿದೆ.

ಬಿಪಿಎಲ್‌ ಕಾರ್ಡ್‌ದಾರರಿಗೆ ತಲಾ ಐದು ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ಕೊಡುತ್ತೇವೆ ಎಂಬುದು ಚುನಾವಣೆ ವೇಳೆ ‘ಗ್ಯಾರಂಟಿ’ ಹೆಸರಿನಲ್ಲಿ ಕಾಂಗ್ರೆಸ್‌ ಪಕ್ಷ ನೀಡಿದ ಭರವಸೆಗಳಲ್ಲಿ ಒಂದು. ‘ಅಕ್ಕಿಯೆಂದರೆ ಪಿಷ್ಟ ಮಾತ್ರ. ಅಕ್ಕಿಯ ಬದಲಿಗೆ ಒಬ್ಬ ವ್ಯಕ್ತಿಗೆ ಕೊಡುತ್ತಿರುವ ₹ 170 ಸಹ ಆಹಾರಕ್ಕೇ ಖರ್ಚಾಗುತ್ತದೆ ಎಂಬುದರ ಬಗೆಗೂ ಗ್ಯಾರಂಟಿ ಇಲ್ಲ. ನೇರವಾಗಿ ನಗದು ನೀಡುವುದನ್ನು ಆದಷ್ಟು ಬೇಗ ರದ್ದುಗೊಳಿಸಬೇಕು. ಅಕ್ಕಿ ಸಲುವಾಗಿ ವ್ಯಯಿಸುವ ₹ 9,000 ಕೋಟಿಯಷ್ಟು ಬೃಹತ್‌ ಮೊತ್ತವನ್ನು ಪೌಷ್ಟಿಕಾಂಶಯುಕ್ತ ಇತರ ಆಹಾರ ಪದಾರ್ಥಗಳನ್ನು ಕೊಡಲು ಬಳಸಬೇಕು’ ಎಂದು ರೈತ ಸಂಘದ ಬಡಗಲಪುರ ನಾಗೇಂದ್ರ, ಚಾಮರಸ ಪಾಟೀಲ ಅವರೊಂದಿಗೆ ಹತ್ತು ಹಲವು ಚಿಂತಕರು ಇತ್ತೀಚೆಗೆ ಕೃಷಿ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಜೊತೆಗೆ ಅದನ್ನು ಹೇಗೆ ಸಾಧಿಸಬಹುದು ಎಂಬುದನ್ನು ಸಹ ವಿವರಿಸಿದ್ದಾರೆ.

ಹಣ ಅಥವಾ ಅಕ್ಕಿಯ ಬದಲಿಗೆ ಇತರ ಪೌಷ್ಟಿಕ ಆಹಾರಪದಾರ್ಥವನ್ನು ಕೊಡುವತ್ತ ಸರ್ಕಾರ ಮನಸ್ಸು ಮಾಡಿದರೆ ಅದು ಗ್ರಾಮೀಣ ಉದ್ಯೋಗಗಳ ಪುನಶ್ಚೇತನಕ್ಕೆ ಕಾರಣವಾಗುತ್ತದೆ. ಅತಿ ಹೆಚ್ಚು ನೀರು ಬೇಡುವ ಭತ್ತದ ಬದಲು ಮಳೆಯಾಶ್ರಿತ ಸಿರಿಧಾನ್ಯ ಗಳನ್ನು ಬೆಳೆಯಲು ಪೋತ್ಸಾಹ ನೀಡುವುದೆಂದರೆ ಅದು, ಸಣ್ಣ ಹಿಡುವಳಿದಾರರನ್ನು ಪ್ರೋತ್ಸಾಹಿಸಿದಂತೆಯೇ ಸರಿ. ಪಾಲಿಷ್‌ ಮಾಡಿದ ಅಕ್ಕಿಯ ಬದಲು, ಜೋಳ ಮತ್ತು ರಾಗಿ ತಿನ್ನುವ ಜನರಿಗೆ ಅವನ್ನೇ ಪೂರೈಸಿದರೆ ಪ್ರಾದೇಶಿಕ ಆಹಾರ ವೈವಿಧ್ಯವನ್ನು ಪೋಷಿಸಿದಂತೆಯೂ ಆಗುತ್ತದೆ.

ಅಕ್ಕಿಯನ್ನು ಹೊಂದಿಸುವುದು ಸರ್ಕಾರಕ್ಕೆ ಕಷ್ಟವಾದ ಪಕ್ಷದಲ್ಲಿ ಜೋಳ ಅಥವಾ ರಾಗಿಯನ್ನು ಪೂರೈಸಬಹುದು. ಇದಕ್ಕಾಗಿ, 1.1 ಕೋಟಿ ಕುಟುಂಬಗಳಿಗೆ ರಾಗಿ ಮತ್ತು ಜೋಳವನ್ನು ಅದು ತನ್ನ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಇಂತಿಷ್ಟು ಪ್ರಮಾಣದಲ್ಲಿ ನೀಡುತ್ತೇವೆ ಎಂದು ಹಿಂಗಾರಿ ಬಿತ್ತನೆಗೆ ಮೊದಲೇ ಸರ್ಕಾರ ಘೋಷಿಸಿದರೆ ರೈತರು ಆ ಬೆಳೆ ಬೆಳೆಯುವತ್ತ ಮನಹರಿಸಬಹುದು.  ರಾಜ್ಯದಲ್ಲಿ ರಾಗಿಯ ಉತ್ಪಾದನೆ ವರ್ಷಕ್ಕೆ 11 ಲಕ್ಷ ಟನ್ ಇದ್ದು, ಅದರಲ್ಲಿ ಅರ್ಧ ಭಾಗವನ್ನು ರೈತರು ತಮಗಾಗಿ ತೆಗೆದಿಟ್ಟುಕೊಂಡು ಉಳಿದುದನ್ನು ಮಾರುತ್ತಾರೆ ಎಂದುಕೊಂಡರೂ 5.5 ಲಕ್ಷ ಟನ್ ರಾಗಿ ಲಭ್ಯವಾಗುತ್ತದೆ. ಜೋಳದ ಉತ್ಪಾದನೆ 7 ಲಕ್ಷ ಟನ್ ಇದೆ. ಇದರ ಜೊತೆಗೆ ಒಂದು ಕೆ.ಜಿ. ತೊಗರಿಬೇಳೆ ಯನ್ನು ಸರ್ಕಾರವು ರೈತರಿಂದ ಖರೀದಿಸಿ ಪಡಿತರದಾರರಿಗೆ ಕೊಡಬಹುದು. ಹಾಗೆ ನೀಡಿದಲ್ಲಿ ವರ್ಷಕ್ಕೆ 11,000 ಟನ್ ತೊಗರಿಬೇಳೆ ಬೇಕಾಗುತ್ತದೆ. 

ಪಡಿತರದಲ್ಲಿ ಬಹುಕಾಲದಿಂದ ಬೇಡಿಕೆ ಇರುವ ಮೂರನೆಯ ವಸ್ತುವೆಂದರೆ ಅಡುಗೆ ಎಣ್ಣೆ. ಕುಟುಂಬಕ್ಕೆ ಒಂದು ಲೀಟರ್‌ ಅಡುಗೆ ಎಣ್ಣೆಯನ್ನು ಕೊಡಬೇಕೆಂದರೆ, ವರ್ಷಕ್ಕೆ ಸರ್ಕಾರದ ಬಳಿ 1.3 ಲಕ್ಷ ಟನ್ ಎಣ್ಣೆಯ ಸಂಗ್ರಹ ಬೇಕಾಗುತ್ತದೆ. ಇದಕ್ಕೆ ಬೇಕಾದ ಎಣ್ಣೆಕಾಳು ಗಳನ್ನು ಸರ್ಕಾರವು ಖರೀದಿಸಿ, ಅದರ ಎಣ್ಣೆ ಮಾಡಲು ಪಂಚಾಯಿತಿಗೊಂದು ಎಣ್ಣೆಯ ಗಾಣವನ್ನು ಇಟ್ಟರೂ ಒಟ್ಟು ಖರ್ಚು ₹ 2,700 ಕೋಟಿಯನ್ನು ಮೀರುವುದಿಲ್ಲ ಎಂಬುದು ಕೃಷಿ ಕ್ಷೇತ್ರದ ತಜ್ಞರ ಲೆಕ್ಕಾಚಾರ. ಚಿತ್ರದುರ್ಗ, ತುಮಕೂರು, ಧಾರವಾಡ, ಬಳ್ಳಾರಿ ಭಾಗದಲ್ಲಿ ಎಣ್ಣೆಕಾಳುಗಳ ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತದೆ. ಅಲ್ಲದೆ ಎಣ್ಣೆಗಾಣಗಳನ್ನು ಪಂಚಾಯಿತಿಗೆ ಒಂದರಂತೆ ನೆಲೆಗೊಳಿಸುವುದರ ಪರಿಣಾಮವಾಗಿ ಸ್ಥಳೀಯವಾಗಿ ಉದ್ಯೋಗಕ್ಕೆ ಪ್ರೋತ್ಸಾಹ ಸಿಗುತ್ತದೆ. ಪಡಿತರದಲ್ಲಿ ಹೀಗೆ ಭಿನ್ನ ಭಿನ್ನ ಧಾನ್ಯಗಳನ್ನು ಸೇರಿಸಿದಾಗ ಕುಟುಂಬಗಳಿಗೆ ಪೌಷ್ಟಿಕಾಂಶಯುಕ್ತ ಆಹಾರಪದಾರ್ಥಗಳ ಪೂರೈಕೆ ಆಗುತ್ತದೆ.

ಇಂದು ಜೋಳದ ಜಾಗವನ್ನು ನಾವ್ಯಾರೂ ತಿನ್ನದ ಮೆಕ್ಕೆಜೋಳವು ಆಕ್ರಮಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಬಯಲುಸೀಮೆಯಲ್ಲೆಲ್ಲ ಅಡಿಕೆಯ ಗದ್ದೆಗಳು ವ್ಯಾಪಿಸುತ್ತಿವೆ. ಅಡಿಕೆ ಕೂಡ ನಮ್ಮ ಆಹಾರವಲ್ಲ. ನಮ್ಮದಲ್ಲದ ಬೆಳೆಗಳು ಕೃಷಿ ವಲಯದ ಪ್ರಧಾನ ಭಾಗವನ್ನು ಆಕ್ರಮಿಸಲು ಕಾರಣ, ಸರ್ಕಾರವು ಆಹಾರದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ಘೋಷಿಸದಿರುವುದು. ‘ನಮ್ಮೂರ ಭೂಮಿ ನಮಗಿರಲಿ’ ಸಂಘಟನೆಯ ವಿ.ಗಾಯತ್ರಿ ಅವರು ಹೇಳುವಂತೆ, ರಾಗಿಗೆ ಬೆಂಬಲ ಬೆಲೆ ಘೋಷಿಸಿದ ಪರಿಣಾಮವಾಗಿ, ಈಗಾಗಲೇ ವರ್ಷದಿಂದ ವರ್ಷಕ್ಕೆ ರಾಗಿ ಬೆಳೆಯುವ ಪ್ರದೇಶ ವೃದ್ಧಿಯಾಗುತ್ತಿದೆ. ಜೋಳ, ತೊಗರಿಬೇಳೆ, ಎಣ್ಣೆಕಾಳುಗಳಿಗೂ ಯೋಗ್ಯ ಬೆಂಬಲ ಬೆಲೆ ಘೋಷಿಸಿ ಅವುಗಳ ಕೃಷಿ ಕ್ಷೇತ್ರ ವರ್ಧನೆ ಆಗುವಂತೆ ಸರ್ಕಾರ ಮಾಡಬೇಕು.

ವೈವಿಧ್ಯಮಯ ಆಹಾರಧಾನ್ಯಗಳನ್ನು ಕೊಡಲು ಸಾಧ್ಯವಿರುವ ಯೋಜನೆಯನ್ನು ರೈತಸಂಘದವರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಜನಸಮುದಾಯದ ಪೌಷ್ಟಿಕಾಂಶದ ಬಗ್ಗೆ ಚಿಂತಿಸುವವರೂ ಪ್ರಾದೇಶಿಕವಾಗಿ ಬಳಕೆಯಲ್ಲಿರುವ ಆಹಾರಪದಾರ್ಥಗಳನ್ನು ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ‘ಆಹಾರದ ಹಕ್ಕಿಗಾಗಿ ಆಂದೋಲನ’, ಕೃಷಿ ಕೂಲಿಕಾರ ಸಂಘಟನೆಗಳಲ್ಲಿರುವ ಜನಸಾಮಾನ್ಯರು, ಆದ್ಯತಾ ಪಡಿತರ ಚೀಟಿಯುಳ್ಳವರು ತಮಗೆ ರಾಗಿ, ಜೋಳ, ಬೇಳೆ-ಕಾಳು, ಎಣ್ಣೆ ಮತ್ತು ಬೆಲ್ಲವನ್ನು ನೀಡುವಂತೆ ಬೆಳಗಾವಿ, ಕೋಲಾರ, ಬೆಂಗಳೂರು, ಬಾಗಲಕೋಟೆ, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮನವಿಗಳನ್ನು ಕೊಡುತ್ತಲೇ ಬಂದಿದ್ದಾರೆ. ಪತ್ರಿಕಾಗೋಷ್ಠಿಗಳ ಮೂಲಕವೂ ಒತ್ತಾಯಿಸಿದ್ದಾರೆ.

ಬೆಳೆಯುವವರಿಂದಲೂ ಅದೇ ಬೇಡಿಕೆ ಮತ್ತು ಕೊಳ್ಳುವವರಿಂದಲೂ ಅದೇ ಬೇಡಿಕೆ ಇರುವಾಗ ಸರ್ಕಾರ ಇನ್ನೂ ಹಿಂದುಮುಂದು  ನೋಡುತ್ತಿರುವುದು ಯೋಗ್ಯವಲ್ಲ. ಅಕ್ಕಿಗಾಗಿ ಅಂಗಲಾಚುವ ಅಗತ್ಯವೂ ಇಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ ನಿರ್ಧಾರ ಪ್ರಕಟಿಸಬೇಕು. ರೈತರಿಂದ ಖರೀದಿಸುವತ್ತ ಮುಂದಾಗಬೇಕು. ಎಣ್ಣೆಗಾಣಗಳು, ರಾಗಿ ಸ್ವಚ್ಛತಾ ಯಂತ್ರಗಳನ್ನು ಅವಶ್ಯಕತೆ ಇರುವೆಡೆಯೆಲ್ಲ ಸ್ಥಾಪಿಸುವತ್ತ ಹೆಜ್ಜೆ ಹಾಕಬೇಕು. ಇದರಿಂದ ರೈತರೂ ಬದುಕಿಕೊಳ್ಳುತ್ತಾರೆ. ನೆಲದ ಜೀವಿವೈವಿಧ್ಯ, ಪರಿಸರ ಉಳಿಯುತ್ತವೆ. ಗ್ರಾಮೀಣ ಉದ್ಯೋಗಾವಕಾಶ ಹೆಚ್ಚುತ್ತದೆ. ಪಡಿತರ ಪಡೆಯುವವರಲ್ಲಿ ಪೌಷ್ಟಿಕತೆ ಹೆಚ್ಚಿ, ರಾಜ್ಯದ ಅಪೌಷ್ಟಿಕತೆಯ ಪ್ರಮಾಣ ಕೆಳಕ್ಕೆ ಇಳಿಯುತ್ತದೆ. ಹಸಿವಿನ ಸೂಚ್ಯಂಕದಲ್ಲಿ ಕರ್ನಾಟಕದ ತಕ್ಕಡಿ ಮೇಲಕ್ಕೇರುತ್ತದೆ. ಹೀಗೆ, ಒಂದು ಕ್ರಮದಿಂದ ಐದು ಲಾಭಗಳು ಸಾಧ್ಯ.

ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಇಲ್ಲದೆ, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಿರುವ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಹಿತಕರವೂ ಆದ ಯೋಜನೆಗಳಿವು. ಒಮ್ಮೆಗೇ ಕಷ್ಟಸಾಧ್ಯ ಎಂದು ಅನ್ನಿಸಿದರೆ, ಹಂತಹಂತವಾಗಿ ಜಾರಿಗೊಳಿಸಬಹುದು. ಇಚ್ಛಾಶಕ್ತಿ ಪ್ರದರ್ಶಿಸುವುದೇ ಸರ್ಕಾರ?

ಶಾರದಾ ಗೋಪಾಲ

ಶಾರದಾ ಗೋಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT