ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಆಟದಂಗಣದ ಆಚೆಗಿನ ಮುಳ್ಳುಗಳು

ಅಂದು ದ್ರೌಪದಿ, ಇಂದು ಕುಸ್ತಿಪಟುಗಳು: ಸ್ಥಿತಿ ಬದಲಾದರೂ ಪರಿಸ್ಥಿತಿಯೇಕೆ ಬದಲಾಗುತ್ತಿಲ್ಲ?
Published 23 ಜೂನ್ 2023, 23:31 IST
Last Updated 23 ಜೂನ್ 2023, 23:31 IST
ಅಕ್ಷರ ಗಾತ್ರ

‘ಅಹಹ ಪಾಂಡವ ರಾಯ ಪಟ್ಟದ ಮಹಿಳೆಗೀ ವಿಧಿಯೇ’ ಎಂಬ ಈ ಉದ್ಗಾರ ಬಂದಿದ್ದು ಸಭಾ ಜನರಿಂದ. ದ್ರೌಪದಿಯನ್ನು ಸಭೆಗೆ ಧರಧರನೆ ಎಳೆದು ತಂದಾಗಿನ ಮಾತಿದು. ಇಂದು ‘ಒಲಿಂಪಿಕ್ ಪದಕ ಗೆದ್ದ ಮಹಿಳೆಯರಿಗೆ ಈ ವಿಧಿಯೇ’ ಎಂಬ ಉದ್ಗಾರ ಹಲವು ಸಾಮಾನ್ಯ ಜನರಿಂದ ಬಂದಿದೆ. ಉದ್ಗಾರದಾಚೆಗಿನ ಬೆಂಬಲ ವ್ಯಾಪಕವಾಗಿ ಯಾಕೆ ಸಿಗುತ್ತಿಲ್ಲ ಎಂಬುದೂ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ.

ಯಾಕೆ ಇಡೀ ಸಭೆ ದ್ರೌಪದಿಯ ವಿಷಯದಲ್ಲಿ ಮೌನವಾಯಿತು? ಮೊದಲಿಗೇ ವಿದುರ, ‘ಇದೆಂತಹ ಮೂರ್ಖ ನಡೆ, ಸಿಡಿಲನ್ನು ಪೊಟ್ಟಣಗಟ್ಟಿ (ಮೈಗೆ) ಶಾಖ ಕೊಟ್ಟುಕೊಳ್ಳಲು ಹೊರಟಿದ್ದೀರಿ’ ಎಂದು ಎಚ್ಚರಿಸುತ್ತಾನೆ. ಅದಕ್ಕೆ ಕೌರವರು ಸಿಟ್ಟಾಗುತ್ತಾರೆ ವಿನಾ ತಿಳಿದುಕೊಳ್ಳುವುದಿಲ್ಲ. ಈಗಲೂ ಇಂತಹ ಬುದ್ಧಿಮಾತು ಹಲವರಿಗೆ ರುಚಿಸುವುದಿಲ್ಲ. ರಾಜನ ಮುಂದೆ ಘಟಾನುಘಟಿಗಳೇ ಮೌನ ತಾಳುತ್ತಾರೆ. ಯಾಕೆ? ಹೆಣ್ಣು ಎಂಬುದು ‘ವಸ್ತು’ ಮಾತ್ರವಾಗಿ ಅವರಿಗೆ ಕಾಣಿಸುವುದು. ಅವಳನ್ನು ಪಟ್ಟದಲ್ಲಿ ಕೂರಿಸಿ ಮೆರೆಸಿದಾಗ ಮೆರೆಯಬೇಕು. ತೊತ್ತೆಂದು ತುಳಿದಾಗ ತುಳಿಸಿಕೊಳ್ಳಬೇಕು. ಆದರೆ ಅವಳು ಬಾಯಿಬಿಟ್ಟು ನ್ಯಾಯದ ಪ್ರಶ್ನೆ ಮಾತ್ರ ಎತ್ತಬಾರದು. ಇಂದು ಮಹಿಳಾ ಕುಸ್ತಿಪಟುಗಳ ಸ್ಥಿತಿಯೂ ಇದೇ ಆಗಿದೆ.

ಗೆದ್ದಾಗ ಸಿಕ್ಕ ಮನ್ನಣೆ, ಪ್ರೀತಿ, ಪುರಸ್ಕಾರ, ಅವಕಾಶಗಳು ತಮ್ಮ ಸಾಧನೆಗೆ, ದೇಶಕ್ಕಾಗಿ ತಾವು ಕೊಟ್ಟ ಕೊಡುಗೆಗೆ ಎಂದೇ ಈ ಸಾಧಕಿಯರು ಭಾವಿಸಿದ್ದು ಸಹಜವೇ ತಾನೇ? ಹಾಗಾದರೆ ಅವರು ಎತ್ತುತ್ತಿರುವ ನ್ಯಾಯದ ಪ್ರಶ್ನೆಯನ್ನೇಕೆ ಮುಳ್ಳೆಂದು ಭಾವಿಸಲಾಗುತ್ತಿದೆ? ನೂರಾರು ಬಡ, ಚಿಕ್ಕ ಹರೆಯದ, ಕುಸ್ತಿಪಟುಗಳಾಗುವ, ಸಾಧನೆ ಮಾಡುವ ಆಸೆಯಿಂದ ಬಂದ ಹುಡುಗಿಯರಿಗೆ ಆಗುತ್ತಿರುವ ದೌರ್ಜನ್ಯವನ್ನು ಭವಿಷ್ಯದಲ್ಲಾದರೂ ನಿಲ್ಲಿಸಿದರೆ ಇನ್ನಷ್ಟು ಸಾಧಕಿಯರು ನಿರುಮ್ಮಳವಾಗಿ ದೇಶದ ಪತಾಕೆಯನ್ನು ಎತ್ತಿ ಹಿಡಿಯಬಹುದು. ಇದಕ್ಕೆ ಅನುವು ಮಾಡಿಕೊಡುವುದು ತಮ್ಮ ಕರ್ತವ್ಯವೆಂದು ಅವರು ಭಾವಿಸುವುದು ತರವಲ್ಲವೇ?

ಈ ಕಾರಣಕ್ಕಾಗಿ ಅವರು ಮೊದಲು ಇದನ್ನು ವೈಯಕ್ತಿಕ ಮನವಿಯಾಗಿ ಸಂಬಂಧಪಟ್ಟವರ ಗಮನಕ್ಕೆ ತಂದರೇ ವಿನಾ ಬಾಹ್ಯ ಜಗತ್ತಿನೆದುರು ನೇರವಾಗಿ ಇಡಲಿಲ್ಲ. ನ್ಯಾಯ ಸಿಗುವ ಭರವಸೆಯಿಂದ ಕಾದರು. ಆದರೆ ಅವರಿಗೇ ಅಚ್ಚರಿ ಎಂಬಂತೆ ಇವತ್ತು ಬ್ರಿಜ್‍ಭೂಷಣ್ ಶರಣ್‍ಸಿಂಗ್ ಎಂಬ ವ್ಯಕ್ತಿ ದೇಶದಲ್ಲೇ ಯಾರ ಅಳವಿಗೂ ಸಿಗದಾತ! ಮಾತ್ರವಲ್ಲ, ಅತನಿಗೆ ಸಿಗುತ್ತಿರುವ ಬೆಂಬಲ ಊಹಾತೀತ. ಪಿ.ಟಿ.ಉಷಾ, ಮೀನಾಕ್ಷಿ ಲೇಕಿ ಎಲ್ಲಾ ಮೈಕ್ ಕಂಡರೆ ಓಡುವಷ್ಟು ಎಲ್ಲರಲ್ಲಿ ಭಯ!

ರಾಣಿಯಾಗಿ ಮೆರೆದ ದ್ರೌಪದಿಗೆ ಇಡೀ ಸಭೆಯಲ್ಲಿ ಬೆಂಬಲದ ಒಂದು ಮುಖ, ಒಂದು ನೋಟ ಕಾಣದೇ ಹೋಯಿತು. ‘ಪತಿಗಳೆನ್ನನು ಮಾರಿ ಧರ್ಮಸ್ಥಿತಿಯ ಕೊಂಡರು/ ಭೀಷ್ಮ ಮೊದಲಾದ ಅತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ’ ಎಂದಾಗಲೂ ಗೋಣು ಬಗ್ಗಿಸಿ ನೆಲ ನೋಡುತ್ತಿರುವ ಹಿರಿ ಕಿರಿಯರು! ಅಟ್ಟಹಾಸದ, ಕುಹಕದ ಇರಿತಗಳೇ ಎಲ್ಲೆಲ್ಲೂ. ವಿಕರ್ಣನೊಬ್ಬನೇ ತನ್ನವರನ್ನೇ ವಿರೋಧಿಸಿ ಝಂಕಿಸಿಕೊಂಡ. ಜಾತಿಯ ಕಾರಣಕ್ಕೆ ಸದಾ ಅವಮಾನಿತನಾಗುತ್ತಿದ್ದ ಕರ್ಣನೂ ಅಸಹ್ಯದ ಮಾತಾಡಿ ಸಣ್ಣವನಾದ. ಇಂದು ನಮ್ಮ ಕುಸ್ತಿಪಟು ಹೆಣ್ಣುಮಕ್ಕಳನ್ನೂ, ಹೀಗೇ ಏನೆಲ್ಲಾ ಹೇಳಿ ಬಗ್ಗಿಸಲಾಗುತ್ತಿದೆ. ‘ದೌರ್ಜನ್ಯವನ್ನು ಎಂಜಾಯ್ ಮಾಡಿ ಈಗ ಗಲಾಟೆ ಮಾಡುತ್ತಿದ್ದೀರಾ?’ ಅಂತ ಒಬ್ಬ ಮಹಾನುಭಾವ ಕೇಳಿದ. ದೌರ್ಜನ್ಯವನ್ನೂ ಎಂಜಾಯ್ ಮಾಡುವ ಹೊಸ ಸಂಶೋಧನೆ ಬೇರೆ ಆಗಿದೆ!

ಸಾಕ್ಷಿ ಮಲಿಕ್, ವಿನೇಶಾ ಪೋಗಟ್‍ರಂತಹವರ ಬಗ್ಗೆಯೂ- ಇವರು ಕೆಲವು ನಿಯಮಗಳಿಂದ ಜಾರಿಕೊಳ್ಳಲು, ಹಣದ ಆಸೆಗಾಗಿ- ಹೀಗೆ ಹೆಂಗಸರ ವಿಷಯದಲ್ಲಿ ಏನೇನು ಸಲೀಸಾಗಿ ಹೇಳಿಯೂ ದಕ್ಕಿಸಿಕೊಳ್ಳಬಹುದೋ ಅದೆಲ್ಲವನ್ನೂ ಹೇಳಲಾಗುತ್ತಿದೆ. ತಮ್ಮನ್ನು ತಾವು ಮೆಟೀರಿಯಲ್‍ಗಳು ಎಂದು ವ್ಯವಸ್ಥೆ ಕಲಿಸಿಕೊಟ್ಟ ನಿರೂಪಣೆಗಳನ್ನು ತಲೆಯಲ್ಲಿ ತುಂಬಿಕೊಂಡ ಮಹಿಳೆಯರೂ ‘ಇವರ ರೂಪ ನೋಡಿ ಯಾರು ಬರ್ತಾರೆ?’ ಎಂದು ಕೇವಲವಾಗಿ ಮಾತಾಡಿದ ವಿಡಿಯೊಗಳು ಹರಿದಾಡುತ್ತಿವೆ. ಪ್ರಶ್ನೆ ಬಹಳ ಸರಳವಾದುದು. ಇಷ್ಟೆಲ್ಲ ಆಪಾದನೆ ಇದ್ದ ವ್ಯಕ್ತಿ ಸರ್ಕಾರಕ್ಕೆ ಅನಿವಾರ್ಯವಾಗಿದ್ದು ಯಾಕೆ?

ಎಲ್ಲ ಘಟಾನುಘಟಿಗಳ ಮೌನ ನೋಡಿ ದ್ರೌಪದಿ, ‘ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿ. ಅದು ಸಭೆಯಲ್ಲ. ಮೂರ್ಖರು ಹಿರಿಯರಲ್ಲ. ಯಥಾರ್ಥ ಭಾಷಣ ಭೀತ ಚೇತನರು’ ಎನ್ನುತ್ತಾಳೆ. ಭೀಮನಿಗೆ ಕಸಿವಿಸಿಯಾಗುತ್ತದೆ. ಧರ್ಮದ ಹೆಸರಿನಲ್ಲಿ ಅಣ್ಣ ಸುಮ್ಮನಿರುವುದರಿಂದ ಅಣ್ಣನ ಮೇಲೇ ಸಿಟ್ಟಾಗುತ್ತಾನೆ. ಆಗ ಅವನನ್ನು ತಡೆಯುವ ಅರ್ಜುನನ ಮಾತು ಕೇಳಿ: ‘ನಮಗೀ ನಿತಂಬಿನಿಯಾದಿಯಾದ (ದ್ರೌಪದಿಯನ್ನೂ ಸೇರಿಸಿಕೊಂಡು) ಸಮಸ್ತ ವಸ್ತುಗಳು ಈ ನರೇಂದ್ರಗೆ ಸರಿಯೆ... ನಮಗೀತನೇ ಗತಿಯೆಂದ’. ಕಾಲ ಅಲ್ಲಿಯೇ ನಿಂತಿರಬಹುದೇ? ಹೆಣ್ಣು ವಸ್ತು ಎನ್ನುವುದನ್ನು ಬೇರೆ ಬೇರೆ ರೂಪದಲ್ಲಿ ಮತ್ತೆ ಮತ್ತೆ ಹೇಳಲಾಗುತ್ತಿದೆಯೇ?

ರೈತರ ಒಗ್ಗಟ್ಟಿನ ಹೋರಾಟದಲ್ಲಿ ಏಳ್ನೂರಕ್ಕೂ ಹೆಚ್ಚು ಜನರ ಪ್ರಾಣ ಹೋಯಿತು. ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಹೋಗಿ ಬೆಂಬಲ ಕೊಟ್ಟರು. ಎಲ್ಲ ಅಡೆತಡೆಗಳ ನಡುವೆ ಅದಕ್ಕೆ ದೇಶದಾದ್ಯಂತ ಸ್ಪಂದನೆ ಸಿಕ್ಕಿತು. ರೈತಸಂಘದವರು ಕುಸ್ತಿಪಟುಗಳ ಬೆಂಬಲಕ್ಕೆ ಬಂದರು. ಆದರೆ ಅದಕ್ಕೆ ವ್ಯಾಪಕ ಸ್ಪಂದನೆ ಸಿಗಲಿಲ್ಲ. ಇದು ಯೋಚಿಸಬೇಕಾದ ಸಂಗತಿ. ಹೆಣ್ಣನ್ನು ಅಸಹಾಯಕತೆಯ ಸುಳಿಯಿಂದ ಹೊರಬರಲಾರದಂತಹ ಸ್ಥಿತಿಯಲ್ಲೇ ಇಡಲಾಗುತ್ತಿದೆ (ಹೆಂಗಸರಿಗೆ ಉಚಿತ ಪ್ರಯಾಣದ ಬಗೆಗೆ ವ್ಯಕ್ತವಾಗುತ್ತಿರುವ ಆಕ್ರೋಶದ ಹಿಂದೆ ಹೆಣ್ಣಿಗೆ ಸಿಗಬಹುದಾದ ಚಲನೆಯ ಸ್ವಾತಂತ್ರ್ಯದ ಬಗೆಗೆ ಗಾಬರಿ, ಅನುಮಾನ, ತಮ್ಮ ನಿಯಂತ್ರಣ ಮೀರಿಬಿಡುತ್ತಾರೆ ಎಂಬ ಆತಂಕಗಳೂ ಇರುವುದು ಹೆಚ್ಚು ನಿಜ).

‘ರಾಷ್ಟ್ರಾಭಿಮಾನಿ’ಗಳೆಲ್ಲರೂ ತಮ್ಮನ್ನು ಬೆಂಬಲಿಸುತ್ತಾರೆ ಎಂದು ಮುಗ್ಧವಾಗಿ ನಂಬಿದ್ದ ಕುಸ್ತಿಪಟುಗಳು ಮೊದ ಮೊದಲು ತಮ್ಮ ಪ್ರತಿಭಟನೆಗೆ ರಾಜಕಾರಣಿಗಳ ಪ್ರವೇಶವನ್ನು ನಿರಾಕರಿಸಿದರು. ಈಗವರಿಗೆ ‘ರಾಜಕಾರಣ’ದ ಬಿಸಿ ಮುಟ್ಟುತ್ತಿದೆ. ಅವರ ಪರವಾಗಿ ಹೋರಾಟ ಮಾಡುತ್ತಿರುವ ಹಲವು ಎಡಪಂಥೀಯ ಸಂಘಟನೆಗಳ ಮುಖಂಡರನ್ನೂ ಸಂಸತ್ತಿನ ಉದ್ಘಾಟನೆಯ ದಿನ ಬಂಧಿಸಲಾಗಿತ್ತು. ಅವರನ್ನು ಬೀದಿಯಲ್ಲಿ ಧರಧರನೆ ಎಳೆದಾಡಿದ ಬಗೆಗೆ ‘ಮಹಿಳೆಯರನ್ನು ಗೌರವಿಸುವ ಸಂಸ್ಕೃತಿ ನಮ್ಮದು’ ಎನ್ನುವವರು ತುಟಿ ಬಿಚ್ಚಲಿಲ್ಲ. ಬದಲಿಗೆ ಇವರೆಲ್ಲ ‘ದೇಶದ ಮಾನ ಬೀದಿಗೆ ತರುತ್ತಿದ್ದಾರೆ’ ಎಂದು ದೂಷಿಸಿದರು. ಮೊದಲೇ ಕರೆದು ಮಾತಾಡಿಸಿದ್ದಿದ್ದರೆ ಅವರು ಅಂದೇಕೆ ಅಲ್ಲಿಗೆ ಹೋಗುತ್ತಿದ್ದರು? ಅವರೆಡೆಗೆ ಕಣ್ಣಿನ ಅಂಚಿನಿಂದಲೂ ನೋಡದೆ, ತುಟಿಯಂಚಿನಲ್ಲೂ ಸೊಲ್ಲೆತ್ತದೆ ಸಂಪೂರ್ಣ ನಿರ್ಲಕ್ಷಿಸುವ ಕ್ರೌರ್ಯಕ್ಕಿಂತ ಎದುರಾ ಬದುರು ಮಾತಾಡುವ ಶೌರ್ಯ ತೋರಬಹುದಿತ್ತಲ್ಲವೇ?

ಒಲಿಂಪಿಕ್‍ನಲ್ಲಿ ಭಾರತ ಅತ್ಯಂತ ಕಳಪೆ ಸಾಧನೆ ಮಾಡುವುದಕ್ಕೂ ನಮ್ಮ ಬಡತನದ ಹಿನ್ನೆಲೆಗೂ ದೊಡ್ಡ ಸಂಬಂಧವಿದೆ. ಕುಸ್ತಿಪಟುಗಳು ಹೆಚ್ಚಾಗಿ ಬಡತನದ ಹಿನ್ನೆಲೆಯವರು. ಅದರ ಜೊತೆಗಿನ ಅಷ್ಟೇ ಮಹತ್ವದ ಕಾರಣ ಆಯ್ಕೆಯಲ್ಲಿ ನಡೆಯುವ ರಾಜಕೀಯ. ಇದನ್ನು ಇಲ್ಲಿನ ಪುರುಷ ಕ್ರೀಡಾಪಟುಗಳೂ ಅನುಭವಿಸಿರುತ್ತಾರೆ. ನಾವೀಗ ಈ ರಾಜಕೀಯಗಳಿಂದ ಕ್ರೀಡಾ ಕ್ಷೇತ್ರವನ್ನು ಮುಕ್ತಗೊಳಿಸುವ ಬಗೆಗೆ ಯೋಚಿಸಲು ಈ ಕುಸ್ತಿಪಟುಗಳ ಪ್ರತಿಭಟನೆಯನ್ನು ಸರಿಯಾದ ಸನ್ನಿವೇಶ ಎಂದು ಭಾವಿಸಬೇಕು. ಆಯ್ಕೆಯ ರಾಜಕೀಯದಲ್ಲಿ ಲೈಂಗಿಕ ದೌರ್ಜನ್ಯದ ಪಾಲೂ ಇರಲೇಬೇಕಲ್ಲ. ಯಾರು ಸಹಿಸಿಕೊಳ್ಳುವರೋ ಸಹಕರಿಸುವರೋ ಅವರಿಗೆ ಅವಕಾಶ ಎಂದಾದರೆ ಇದು ಎಲ್ಲಿಗೆ ತಲುಪುತ್ತದೆ? ಹುಡುಗರ ಮೇಲೂ ಗಂಡಸರಿಂದಲೇ ನಡೆಯುವ ಲೈಂಗಿಕ ದೌರ್ಜನ್ಯದ ಕುರಿತೂ ಚರ್ಚಿಸಬೇಕಿದೆ. ಇಡೀ ಕ್ರೀಡಾ ಕ್ಷೇತ್ರ ಆಟದ ಬಯಲಿನಷ್ಟೇ ಆಪ್ಯಾಯಮಾನವಾದ ತಾಣವಾಗಿ ಮಾರ್ಪಡಬೇಕಿದೆ.

ಕೊನೆಯದಾಗಿ ಒಂದು ಪ್ರಶ್ನೆ: ಕೃಷ್ಣ ಕೊನೆಯಲ್ಲೇ ಏಕೆ ದ್ರೌಪದಿಯ ನೆರವಿಗೆ ಬಂದ? ಬಹುಶಃ ಎಲ್ಲರ ಬಣ್ಣ ಬಯಲಾಗಲೆಂದೇ ಇರಬೇಕು. ನಮ್ಮ ಕುಸ್ತಿಪಟುಗಳಿಗೂ ಕೃಷ್ಣನೋ  ಮಾರಮ್ಮನೋ ಚೌಡಮ್ಮನೋ ಯಾರದ್ದಾದರೂ ಸರಿ ನೆರವು ಒದಗಿ ಬರಲಿ (ಇಲ್ಲಿನ ಉಲ್ಲೇಖಗಳನ್ನು ಕುಮಾರವ್ಯಾಸ ಭಾರತದಿಂದ ಪಡೆಯಲಾಗಿದೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT