ಶಿವರಾಮ ಕಾರಂತರ ವ್ಯಕ್ತಿತ್ವ, ವಿಚಾರ, ಸ್ವಭಾವಗಳನ್ನು ಬಲ್ಲವರು ಕಾರಂತರು ಅನ್ಯಾಯ ಕಂಡಾಗ ಪರಶುರಾಮರೇ ಎಂದು ಹೇಳುತ್ತಿದ್ದುದುಂಟು. ‘ದಾಕ್ಷಿಣ್ಯಪರ ನಾನಲ್ಲ, ನ್ಯಾಯನಿಷ್ಠುರಿ ಲೋಕವಿರೋಧಿ. ನಾನಾರಿಗೂ ಅಂಜುವವನಲ್ಲ’ ಎಂಬ ಜಾಯಮಾನ ಕಾರಂತರದ್ದು. ಆದುದರಿಂದಲೇ ಅವರನ್ನು ಹತ್ತಿರದಿಂದ ಬಲ್ಲವರು, ‘ಇವರು ಕಾರಂತರಲ್ಲ, ‘ಖಾ’ರಂತರು’ ಎಂದು ಹೇಳುತ್ತಿದ್ದುದು.

ಇಂತಹ ಕಾರಂತರು ತಮ್ಮ ಕಾಲದ ರಾಜಕೀಯ ವ್ಯಕ್ತಿಯೊಬ್ಬರ ವ್ಯಕ್ತಿತ್ವ, ಆದರ್ಶ, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳಿಗೆ ಮಾರುಹೋಗಿದ್ದಾರೆ. ಆ ರಾಜಕಾರಣಿಯನ್ನೇ ಕಥಾನಾಯಕನನ್ನಾಗಿ
ಇಟ್ಟುಕೊಂಡು ಕಾದಂಬರಿ ಬರೆದಿದ್ದಾರೆ. ನಾನು ಹೇಳುತ್ತಿರುವುದು 1947ರಲ್ಲಿ ಕಾರಂತರು ಬರೆದ ‘ಔದಾರ್ಯದ ಉರುಳಲ್ಲಿ’ ಕಾದಂಬರಿಯ ಬಗ್ಗೆ. ಈಗ್ಯೆ 75 ವರ್ಷಗಳ ಹಿಂದಿನ ಕಾದಂಬರಿ ಇದು. ಈ ಕಾದಂಬರಿಯ ಬಗ್ಗೆ ಮತ್ತು ಅದರ ಕಥಾನಾಯಕನ ಬಗ್ಗೆ ಕಾರಂತರು ತಮ್ಮ ‘ಸ್ಮೃತಿಪಟಲದಿಂದ’ ಕೃತಿಯಲ್ಲಿ ಹೇಳಿರುವ ಮಾತುಗಳನ್ನು ಕೇಳಿ.

‘1947ರಲ್ಲಿ ನಾನೇ ಪ್ರಕಾಶಕನೂ ಮುದ್ರಕನೂ ಆಗಿ ಪ್ರಕಟಿಸಿದ ಒಂದು ಕಾದಂಬರಿ ‘ಔದಾರ್ಯದ ಉರುಳಲ್ಲಿ’. ಗಾತ್ರದಿಂದ ಅದು ‘ಮರಳಿ ಮಣ್ಣಿಗೆ’ ಬರಹಕ್ಕಿಂತ ದೊಡ್ಡದು... ಆ ಕಾದಂಬರಿಯ ವಸ್ತುವಿಗೆ ಮೂಲ ಪ್ರೇರಕರಾಗಿ ಸ್ಫೂರ್ತಿ ಕೊಟ್ಟ ವ್ಯಕ್ತಿ ನಮ್ಮ ಜಿಲ್ಲೆಯ ಆದಿ ಕಾಂಗ್ರೆಸ್ ಧುರೀಣರಾದ ಕಾರ್ನಾಡ್ ಸದಾಶಿವರಾಯರು. ಅವರು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸ್ಥೆಯ ಸ್ಥಾಪಕರಾಗಿ ಸರಳತೆಯಿಂದ, ಪ್ರಾಮಾಣಿಕತೆಯಿಂದ, ದೀರ್ಘಕಾಲ ದುಡಿದು ಆತ್ಮತೃಪ್ತಿಯಿಂದ ವಿರಮಿಸುವ ಬದಲು, ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದ ಮುಂದಣ ತಲೆಮಾರಿನ ದೇಶಭಕ್ತರ ಹೊಣೆಗಾರಿಕೆಗೆ ಗುರಿಯಾಗಿ ದುಃಖಮಯ ಜೀವನ ನಡೆಸುವಂತಾಯಿತು. ಕಾಂಗ್ರೆಸ್ಸಿಗಾಗಿ ಆಗಲಿ, ಸಾರ್ವಜನಿಕರ ಹಿತಕ್ಕೇ ಆಗಲಿ ಪಿತ್ರಾರ್ಜಿತವಾಗಿ ಬಂದ ಆಸ್ತಿಪಾಸ್ತಿಗಳನ್ನೆಲ್ಲಾ, ಮನೆಗಳನ್ನೆಲ್ಲಾ ಕಳೆದುಕೊಂಡವರು ಸದಾಶಿವರಾಯರು. ಅವರ ಪ್ರಯತ್ನದಿಂದ, ಅವರ ಹಣದಿಂದ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನಂತಹ ಸಂಸ್ಥೆ ಹುಟ್ಟಿತು, ಬೆಳೆಯಿತು, ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿತು. ನಮ್ಮ ಜಿಲ್ಲೆಯಲ್ಲಿ ಖಾದಿ ಚಳವಳಿ, ರಾಷ್ಟ್ರೀಯ ವಿದ್ಯಾಭ್ಯಾಸ, ಹರಿಜನೋದ್ಧಾರದ ಕೆಲಸ, ಅವರ ಉತ್ಸಾಹ ಸೇವೆಗಳಿಂದ ಸಾಕಷ್ಟು ಮುಂದಕ್ಕೆ ಬಂದವು. ಮನುಷ್ಯರ ಸ್ವಭಾವವನ್ನು ಇಣುಕಿ ನೋಡಲಾರದ, ಕಣ್ಮುಚ್ಚಿ ನಂಬುವ ಪ್ರವೃತ್ತಿ ಅವರದ್ದು. ಹೀಗಾಗಿ ಅವರ ಸರಳತನವನ್ನು ವಂಚಿಸಿ, ಅವರಿಂದ ಲಾಭ ಪಡೆಯುವ ಸಲುವಾಗಿ ಅವರ ಸುತ್ತಲೂ ಕಲೆತ ಠಕ್ಕು ದೇಶಸೇವಕರಂತೂ ಹಲವಾರು ಮಂದಿ ಇದ್ದರು. ಸ್ವಂತ ಹಣದಿಂದ–ಪ್ರಾಮಾಣಿಕರೋ, ಅಪ್ರಾಮಾಣಿಕರೋ ಆದ ಅನೇಕ ದೇಶಸೇವಕರನ್ನು ಅವರು ಪೋಷಿಸಿದರು’.

ಕಾರಂತರಂತಹವರಿಗೇ ಸ್ಫೂರ್ತಿಯ ಸೆಲೆಯಾಗಿದ್ದ ಅವರ ಬದುಕು ಹೇಗಿತ್ತು? ಹೇಗಾಯಿತು?

ಸದಾಶಿವರಾಯರು ಮಂಗಳೂರಿನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರು (1881). ಆ ಕಾಲದಲ್ಲಿ ಪ್ರಖ್ಯಾತ ವಕೀಲರಾಗಿದ್ದ ರಾಮಚಂದ್ರ ರಾವ್ ಕಾರ್ನಾಡ್ರವರ ಏಕೈಕ ಪುತ್ರ ಸದಾಶಿವರಾಯರು. ತಂದೆಯಂತೆಯೇ ಕಾನೂನು ವ್ಯಾಸಂಗವನ್ನು ಮುಂಬಯಿಯಲ್ಲಿ ಮುಗಿಸಿ ಮಂಗಳೂರಿಗೆ ಬಂದು ವಕೀಲಿ ವೃತ್ತಿ ಆರಂಭಿಸಿದರು.

ಮನೆಯಲ್ಲಿ ಸಿರಿ ಸಂಪತ್ತು ತುಂಬಿದ್ದರೂ, ಸದಾಶಿವರಾಯರ ತುಡಿತ ರಾಷ್ಟ್ರೀಯತೆಯತ್ತ. ಬಡಬಗ್ಗರ ಸೇವೆ ಎಂದರೆ ಅವರಿಗೆ ಪ್ರಿಯವಾದ ಸಂಗತಿ. ಇದಕ್ಕೆ ಧಾರಾಳವಾಗಿ ಕೈ ಜೋಡಿಸಿದವರು ಅವರ ಪತ್ನಿ. ದಂಪತಿ ಮೊದಲು ಆರಂಭಿಸಿದ್ದೇ ‘ಮಹಿಳಾ ಸಭೆ’ಯನ್ನು. ಆ ಮಹಿಳಾ ಸಭೆ ಬಾಲವಿಧವೆಯರ ಪುನರ್ವಿವಾಹ ಹಾಗೂ ಸಮಾಜ ತಿರಸ್ಕರಿಸಿದಂತಹ ಸ್ತ್ರೀಯರಿಗೆ ಆಶ್ರಯ ತಾಣವಾಯಿತು. ಸದಾಶಿವರಾಯರು ಹರಿಜನರ ಉದ್ಧಾರಕ್ಕಾಗಿ ‘ತಿಲಕ ವಿದ್ಯಾಲಯ’ ತೆರೆದರು. ಅದರಲ್ಲಿ ಸರ್ವಧರ್ಮೀಯರಿಗೂ ಪ್ರವೇಶಾವಕಾಶವಿತ್ತು. ಈ ಮಾದರಿಯ 18 ವಿದ್ಯಾಲಯಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರೆದರು. ದೇವಸ್ಥಾನಗಳಿಗೆ ಹರಿಜನರಿಗೆ ಪ್ರವೇಶ ಕೊಡಿಸುವುದರಲ್ಲಿ ಅವರು ಅಗ್ರಗಣ್ಯರಾಗಿದ್ದರು.

ಗಾಂಧೀಜಿಯವರ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮೊದಲಾದ ಚಳವಳಿಗಳಲ್ಲಿ ಸದಾಶಿವರಾಯರು ಭಾಗಿಯಾದರು. ಐದು ವರ್ಷ ಸೆರೆಮನೆ ವಾಸ ಅನುಭವಿಸಿದರು. ಗಾಂಧೀಜಿ ಹಾಕಿದ ಗೆರೆ ಅವರಿಗೆ ದಾಟಬಾರದ ಲಕ್ಷ್ಮಣರೇಖೆ. ಹಾಗಾಗಿಯೇ, ಗಾಂಧೀಜಿಯವರ ‘ಅಸಂಗ್ರಹ’ ಸೂತ್ರ ತಿಳಿದ ಮೇಲೆ ಸದಾಶಿವರಾಯರಿಗೆ ‘ಗಾಂಧೀಜಿ ತಮ್ಮನ್ನು ಕಂಡೇ ಹೇಳಿದ್ದಿರಬೇಕು’ ಎಂದು ಅನ್ನಿಸಿತೋ ಏನೋ! ಆ ಸೂತ್ರದಂತೆ ತಮ್ಮ ಅಪಾರ ಸಂಪತ್ತು, ಪಿತ್ರಾರ್ಜಿತ ಆಸ್ತಿ, ತಾವಿದ್ದ ಮನೆಯನ್ನೂ ದಾನವಾಗಿ ಕೊಟ್ಟರು. 1923ರಲ್ಲಿ ಒಂದೇ ವರ್ಷದಲ್ಲಿ ಅವರ ಪತ್ನಿ ಮತ್ತು ಒಬ್ಬನೇ ಮಗ ನಿಧನ ಹೊಂದಿದರು. ತಕ್ಷಣವೇ ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ಸ್ವಯಂಸೇವಕರಾದರು. ಅಲ್ಲಿ, ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡರು.

1924–25ರ ಸಾಲಿನಲ್ಲಿ ದಕ್ಷಿಣ ಕನ್ನಡದಲ್ಲಿ ನೆರೆಹಾವಳಿ ಬಂದಾಗ ಮತ್ತೆ ತವರು ಜಿಲ್ಲೆಗೆ ಬಂದು ಸಂತ್ರಸ್ತರ ಸೇವೆಗೆ ನಿಂತರು. ‘ಸೌತ್ ಕೆನರಾ ಡಿಸ್ಟ್ರಿಕ್ಟ್ ರಿಲೀಫ್ ಫಂಡ್’ ಸಂಸ್ಥೆ ಸ್ಥಾಪಿಸಿ ನೆರವು ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ– ರಾಷ್ಟ್ರೀಯ ಭಾವನೆಯನ್ನು ಮೂಡಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಮಾರ್ಗದರ್ಶನ ಮಾಡಿ, ಕಾಂಗ್ರೆಸ್ ಸಂಸ್ಥೆಗೆ ಬುನಾದಿ ಹಾಕಿದವರು ಸದಾಶಿವರಾಯರು. ಆದರೆ, ಅಂದಿನ ಕೆಲವು ಪ್ರಭಾವಿ ರಾಜಕೀಯ ವ್ಯಕ್ತಿಗಳು ಸದಾಶಿವರಾಯರ ಮೇಲ್ಮೈಯನ್ನು ತಮ್ಮ ಪಾಲಿಗೆ ವಿಘ್ನವೆಂದು ತಿಳಿದು ಅವರನ್ನು ಮೂಲೆಗುಂಪು ಮಾಡುತ್ತಲೇ ಬಂದರು ಎನ್ನುತ್ತಾರೆ ಕಾರಂತರು. 1925ರ ಕಾಂಗ್ರೆಸ್ ಅಧಿವೇಶನ ಮಂಗಳೂರಿನಲ್ಲಿ ನಡೆಯಬೇಕೇ ಎಂಬ ಪ್ರಶ್ನೆ ಬಂದಾಗ ವೀರಾವೇಶದ ಸ್ಪರ್ಧೆ ನಡೆದದ್ದನ್ನು ಜ್ಞಾಪಿಸಿಕೊಳ್ಳುವ ಕಾರಂತರು, ಸದಾಶಿವರಾಯರಿಗೆ ಸೋಲುಂಟಾಗಿ ಸಮಾವೇಶ ಬೆಳಗಾವಿಯಲ್ಲಿ ನಡೆಯಿತು ಎನ್ನುತ್ತಾರೆ.

1930ರ ಉಪ್ಪಿನ ಸತ್ಯಾಗ್ರಹ ಕಾಲದಲ್ಲಿ ಸದಾಶಿವರಾಯರ ನೇತೃತ್ವದ ಚಳವಳಿ ತಮ್ಮ ಜಿಲ್ಲೆಗೆ ಹೆಸರು ಮತ್ತು ಪ್ರಸಿದ್ಧಿಯನ್ನು ತಂದುಕೊಟ್ಟಿತಾದರೂ, ಈ ಪ್ರದೇಶಕ್ಕಾಗಿ ತಮ್ಮ ಸಂಪೂರ್ಣವನ್ನೂ ತೆತ್ತು ಸುಧಾಮರಾದ ಅವರ ಪಾಲಿಗೆ ಏನೊಂದೂ ಮನ್ನಣೆ ದೊರೆಯದೇ ಹೋಯಿತು ಎಂದು ಕಾರಂತರು ವಿಷಾದಿಸುತ್ತಾರೆ. ‘ಕಾಂಗ್ರೆಸ್ಸಿನ ಧುರೀಣತ್ವವೋ, ಸೂತ್ರಧಾರಿತ್ವವೋ, ಅದೇನಿದ್ದರೂ ಮೇಲಿನಿಂದಲೇ ಬರಬೇಕಾಗಿತ್ತು’ ಎಂದು ಅಂದೂ ಇದ್ದ ಕಾಂಗ್ರೆಸ್ನ ಹೈಕಮಾಂಡ್ ಸಂಸ್ಕೃತಿಯ ಕಡೆಗೆ ಗಮನ ಸೆಳೆಯುತ್ತಾರೆ.

ಸದಾಶಿವರಾಯರ ಬದುಕು ಕೊನೆ ಕೊನೆಗೆ ತೀರ ಅನಾಥ ಬದುಕೇ ಆಯಿತು ಎಂಬುದನ್ನು ಜ್ಞಾಪಿಸಿಕೊಳ್ಳುವ ಕಾರಂತರು– ‘ಅವರ ಅನೇಕ ಹಂತಗಳನ್ನು ನೋಡಿದವನು ನಾನು. ಅವರ ವ್ಯಕ್ತಿತ್ವಕ್ಕೂ ನಮ್ಮ ಮುಂದಾಳುಗಳಾಗಿ ಮೆರೆದ ಇತರ ಕೆಲವು ದೇಶಭಕ್ತರ ವ್ಯಕ್ತಿತ್ವಕ್ಕೂ ಇರುವ ಪ್ರಾಮಾಣಿಕತೆಯ ಅಂತರವನ್ನು ಬಲು ಚೆನ್ನಾಗಿ ಕಂಡಿದ್ದೇನೆ’ ಎನ್ನುತ್ತಾರೆ. ಅದಕ್ಕಾಗಿಯೇ ‘ಇಂತಹ ರಾಜಕೀಯ ಮತ್ತು ಸಾಮಾಜಿಕ ಪ್ರವೃತ್ತಿಗಳನ್ನೂ, ಅದಕ್ಕೆ ಕಾರಣವಾದ ಹಲವಾರು ವ್ಯಕ್ತಿಗಳನ್ನೂ ಸಮೀಪದಿಂದ ನೋಡಿದ ನಾನು ಇದನ್ನೆಲ್ಲಾ ವಸ್ತುಗಳನ್ನಾಗಿ ಬಳಸಿಕೊಂಡು ‘ಔದಾರ್ಯದ ಉರುಳಲ್ಲಿ’ ಎಂಬ ಕಾದಂಬರಿ ಬರೆದೆ. ಅದರ ಕಥಾನಾಯಕ ಕಾರ್ನಾಡ್ ಸದಾಶಿವರಾಯರೇ ಇರಬೇಕು ಎಂದು ಬೊಟ್ಟಿಟ್ಟು ತೋರಿಸಬಹುದಾದರೂ, ಉಳಿದ ಪಾತ್ರಗಳ ಚಿತ್ರಣದಲ್ಲಿ ಅವರ್ಯಾರು, ಎಂಥವರು, ಎಂದು ನನಗೆ ತಿಳಿದಿದ್ದರೂ, ನಿರ್ದಿಷ್ಟ ವ್ಯಕ್ತಿಗಳನ್ನು ಉದ್ದೇಶಿಸದೇ ಜನಗಳಲ್ಲಿ ಕಂಡುಬಂದ ದುಷ್ಟ ಪ್ರವೃತ್ತಿಗಳನ್ನು ಒತ್ತಿ ಹೇಳಲು ಸೃಷ್ಟಿ ಪಾತ್ರಗಳನ್ನು ತರಬೇಕಾಯಿತು’ ಎಂದು ಕಾದಂಬರಿ ರಚನೆಯ ಕಾರಣವನ್ನು ಕಾರಂತರು ಸ್ಪಷ್ಟವಾಗಿ ಹೇಳಿದ್ದಾರೆ.

30ರ ದಶಕದ ರಾಜಕಾರಣವನ್ನೂ, ಇಂದಿನ ರಾಜಕಾರಣವನ್ನೂ ಹೋಲಿಸಿ ನೋಡಲು ನಾವು ‘ಔದಾರ್ಯದ ಉರುಳಲ್ಲಿ’ ಕಾದಂಬರಿಯನ್ನು ಓದಬೇಕು. ಆದರೆ, ನಮಗೆ ನಿರಾಶೆ ತಪ್ಪಿದ್ದಲ್ಲ. ಬದಲಾಗದ ರಾಜಕೀಯ ವ್ಯವಸ್ಥೆಯ ಬಗ್ಗೆ ಸಿಟ್ಟೋ ಸಿನಿಕತನವೋ ಕಾಡುವುದಂತೂ ನಿಜ. 1937ರಲ್ಲಿನಿಧನರಾದಾಗ ರಾಯರ ಅಂತ್ಯಕ್ರಿಯೆ ಮಾಡುವುದಕ್ಕೂ ಕುಟುಂಬದವರು ಅಶಕ್ಯರಾಗಿದ್ದರು. ಸದಾಶಿವರಾಯರು ಸತ್ತ ಮೇಲೆ ಅವರ ವೃದ್ಧ ತಾಯಿ ಮತ್ತು ಹೆಣ್ಣುಮಕ್ಕಳ ವಾಸ ಬಾಡಿಗೆ ಮನೆಯಲ್ಲಿ.

ಸದಾಶಿವರಾಯರ ತ್ಯಾಗ, ಆದರ್ಶದ ಬದುಕಿಗೆ ತದ್ವಿರುದ್ಧವಾದ ಕ್ರೂರವ್ಯಂಗ್ಯ ಮತ್ತು ಘೋರ ವಿಪರ್ಯಾಸದ ಸಂಗತಿಯನ್ನು ನೋಡಿ. 1960ರಲ್ಲಿ ಬೆಂಗಳೂರಿನ ಅಂದಿನ ‘ಸಿ.ಐ.ಟಿ.ಬಿ.’ಯು ಬೆಂಗಳೂರಿನ ಒಂದು ಬಡಾವಣೆಗೆ ಸದಾಶಿವರಾಯರ ಹೆಸರಿನಲ್ಲಿ ‘ಸದಾಶಿವ ನಗರ’ ಎಂದು ಹೆಸರಿಟ್ಟು ಧನ್ಯವಾಯಿತು! ಈ ಸದಾಶಿವ ನಗರವಾದರೋ ಇಂದು ಶ್ರೀಮಂತರು, ಧನಿಕಾತಿಧನಿಕರು, ಬಲಾಢ್ಯರು, ಪ್ರತಿಷ್ಠಿತರ ಐಷಾರಾಮಿ ಆಡುಂಬೊಲವಾಗಿದೆ. ಅಲ್ಲಿನ ಭವ್ಯಮಹಲುಗಳಲ್ಲಿ ಸಿರಿ ಸಂಪತ್ತು ಕಾಲುಮುರಿದುಕೊಂಡು ಬಿದ್ದಿದೆ; ಗಾಂಧೀಜಿಯವರ ‘ಅಸಂಗ್ರಹ’, ‘ಸರಳತೆ’ ಸೂತ್ರಗಳನ್ನು ಅಣಕಿಸುತ್ತಿದೆ. ಕಾರಂತರು ಹೇಳಿದ ಪ್ರಾಮಾಣಿಕರೋ, ಅಪ್ರಾಮಾಣಿಕರೋ, ಆದ ಅನೇಕ ‘ದೇಶಸೇವಕ’ರ ನೆಚ್ಚಿನ ಬೀಡಾಗಿದೆ!

ಎಲ್ಲಿಯ ಸದಾಶಿವರಾಯರು, ಎಲ್ಲಿಯ ಸದಾಶಿವನಗರ! ತಮ್ಮ ಹೆಸರು ಹೊತ್ತ ಬಡಾವಣೆಯ ಐಸಿರಿಯನ್ನು ನೋಡಿ ಸದಾಶಿವರಾಯರ ಆತ್ಮ ಅದೆಷ್ಟು ಕೊರಗುತ್ತಿದೆಯೋ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.