ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸುರಕ್ಷಿತ ಹಿಮಾಲಯ, ಸುರಕ್ಷಿತ ಭಾರತ

Last Updated 14 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

‘ಹಿಮಾಲಯ ಪರ್ವತಗಳು ಇಡೀ ಮನುಕುಲಕ್ಕೆ ಪ್ರಕೃತಿಮಾತೆ ನೀಡಿರುವ ಅಮೂಲ್ಯ ಉಡುಗೊರೆ. ಹಿಮಾಚ್ಛಾದಿತವಾದ ಈ ಬೃಹತ್ ಪರ್ವತಗಳು ಸಹಸ್ರಾರು ವರ್ಷಗಳಿಂದ ನಮ್ಮನ್ನು ರಕ್ಷಿಸಿವೆ. ಈಗ ನಾವೆಲ್ಲ ಒಗ್ಗೂಡಿ ಹಿಮಾಲಯ ಪರ್ವತಗಳನ್ನು ರಕ್ಷಿಸಬೇಕಾದ ಸಮಯ ಬಂದಿದೆ’.

ಫೆಬ್ರುವರಿ 2ರಂದು ಬೀಜಿಂಗ್‌ನಲ್ಲಿ ನಡೆದ, ಹಿಮಾಲಯದ ಸೂಕ್ಷ್ಮ ಪರಿಸರವನ್ನು ರಕ್ಷಿಸುವುದಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ವರ್ಚುವಲ್ ಆಗಿ ಪಾಲ್ಗೊಂಡು ನಾನು ಈ ಮಾತು ಹೇಳಿದ್ದೆ. ಇದಾದ ಐದೇ ದಿನಗಳಲ್ಲಿ ಉತ್ತರಾಖಂಡವು ಹಿಮಾಲಯದ ಹಿಮಕಟ್ಟೆ ಕುಸಿತಕ್ಕೆ ತುತ್ತಾಯಿತು. ಗಂಗೋತ್ರಿ, ಯಮುನೋತ್ರಿ, ಬದರೀನಾಥ, ಕೇದಾರ ನಾಥ, ಹರಿದ್ವಾರ ಸೇರಿದಂತೆ ಹಲವು ಪವಿತ್ರ ಸ್ಥಳಗಳಿರುವ ದೇವಭೂಮಿ ಉತ್ತರಾಖಂಡ. ಇದು ಹಿಮಾಲಯ ಶ್ರೇಣಿಯಲ್ಲಿ ಆಗಿರುವ ಮೊದಲ ಪ್ರಾಕೃತಿಕ ವಿಕೋಪವಲ್ಲ, ಕೊನೆಯದೂ ಅಲ್ಲ. 2013ರಲ್ಲಿ ಕೇದಾರನಾಥಕ್ಕೆ ಎರಗಿದ ಹಠಾತ್ ಪ್ರವಾಹದ ನೆನಪುಗಳು ಇನ್ನೂ ಹಸಿಯಾಗಿವೆ.

ಹಿಂದೂ ಕುಶ್ ಹಿಮಾಲಯನ್ ಪ್ರದೇಶದಲ್ಲಿ– ಇದು ಅಫ್ಗಾನಿಸ್ತಾನ, ಪಾಕಿಸ್ತಾನ, ಭಾರತ, ಚೀನಾ, ನೇಪಾಳ, ಭೂತಾನ್, ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶವನ್ನು ಒಳಗೊಂಡಿದೆ– ಈಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ವಿಕೋಪಗಳಿಗೆ ತುತ್ತಾಗದೆ ಇರುವ ಒಂದೇ ಒಂದು ದೇಶವೂ ಇಲ್ಲ. ಹಾಗಾಗಿ, ಈ ಪ್ರದೇಶದ ಎಲ್ಲ ದೇಶಗಳು ಒಟ್ಟಾಗಿ, ಹಿಮಾಲಯ ಪರ್ವತಗಳನ್ನು ರಕ್ಷಿಸಲು ಒಂದು ಕಾರ್ಯತಂತ್ರ ರೂಪಿಸಬೇಕಾದ ಸಾಮೂಹಿಕ ಜವಾಬ್ದಾರಿ ಹೊಂದಿವೆಯಲ್ಲವೇ? ಈ ಪ್ರಯತ್ನದ ಭಾಗವಾಗುವುದು ಅಂತರರಾಷ್ಟ್ರೀಯ ಸಮುದಾಯದ ಪಾಲಿಗೆ ಕರ್ತವ್ಯವೂ ಹೌದಲ್ಲವೇ?

ಹಿಮಾಲಯದ ಪರಿಸರಕ್ಕೆ ಎದುರಾಗಿರುವ ಮುಖ್ಯ ಅಪಾಯಕ್ಕೆ ಕಾರಣ ಜಾಗತಿಕ ತಾಪಮಾನ ಹೆಚ್ಚುತ್ತಿರು ವುದು ಮತ್ತು ಹವಾಮಾನ ಬದಲಾವಣೆ. ಇದಕ್ಕೆ ಇಂಗಾಲದ ಡೈ–ಆಕ್ಸೈಡ್ ‌ಅನ್ನು ಹೆಚ್ಚಾಗಿ ಹೊರ ಸೂಸುತ್ತಿರುವ ಎಲ್ಲ ಪ್ರಮುಖ ಅರ್ಥವ್ಯವಸ್ಥೆಗಳೂ ಕಾರಣ.ನಾನು ಪಾಲ್ಗೊಂಡ ಅಂತರರಾಷ್ಟ್ರೀಯ ಸಮ್ಮೇಳನದ ವಿಷಯ ಇದೇ ಆಗಿತ್ತು. ಇದನ್ನು ಆಯೋಜಿಸಿದ್ದ ಚೀನಾದ ವಿದೇಶಾಂಗ ಇಲಾಖೆಯ ಉಪ ಸಚಿವ ಲಾವ್ಜಾ ಹುಯಿ ನನ್ನನ್ನು ಆಹ್ವಾನಿಸಿದ್ದರು. ವಿವಿಧ ಸರ್ಕಾರ ಗಳನ್ನು ಪ್ರತಿನಿಧಿಸುವ ತಜ್ಞರು ಹಾಗೂ ಸರ್ಕಾರಗಳ ಜೊತೆ ಗುರುತಿಸಿಕೊಂಡಿರದ ತಜ್ಞರು ಇದರಲ್ಲಿ ಪಾಲ್ಗೊಂಡಿದ್ದರು. ವಿಶ್ವಸಂಸ್ಥೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್ ಅವರೂ ಭಾಗಿಯಾಗಿದ್ದರು.

ಸಮ್ಮೇಳನದಲ್ಲಿ ಮಾತನಾಡಿದವರಲ್ಲಿ ಐದು ಅಂಶಗಳ ವಿಚಾರವಾಗಿ ಬಹುತೇಕ ಸಹಮತ ಇತ್ತು. ಮೊದಲನೆಯದು, ಹಿಮಾಲಯ ಪರ್ವತ ಶ್ರೇಣಿಯು 30 ಸಾವಿರ ಚದರ ಮೈಲಿಗಿಂತ ಹೆಚ್ಚಿನ ವಿಸ್ತೀರ್ಣದ ನೀರ್ಗಲ್ಲನ್ನು ಹೊಂದಿರುವ ಕಾರಣ, ಈ ಶ್ರೇಣಿಯನ್ನು ಭೂಮಿಯ ಮೂರನೆಯ ಧ್ರುವ ಎನ್ನಲಾಗುತ್ತದೆ. ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಹೊರತುಪಡಿಸಿದರೆ, ಇಷ್ಟೊಂದು ನೀರ್ಗಲ್ಲು ಇರುವುದು ಹಿಮಾಲಯದಲ್ಲಿ ಮಾತ್ರ. ಹಿಮಾಲಯದ ನೀರ್ಗಲ್ಲುಗಳಿಂದ ಹರಿಯುವ ನೀರು ಏಷ್ಯಾದ ಪಾಲಿಗೆ ಜೀವ ಪೋಷಣೆಯ ‘ಜಲ ಗೋಪುರ’ವಿದ್ದಂತೆ. ದಕ್ಷಿಣ ಏಷ್ಯಾ, ಚೀನಾ, ಆಗ್ನೇಯ ಏಷ್ಯಾದ 100 ಕೋಟಿಗೂ ಹೆಚ್ಚು ಜನ ನೀರು, ಆಹಾರ, ಇಂಧನಕ್ಕಾಗಿ – ವಾಸ್ತವದಲ್ಲಿ ತಮ್ಮ ಇಡೀ ಬದುಕಿಗಾಗಿ – ಈ ನೀರ್ಗಲ್ಲುಗಳನ್ನು ನಂಬಿಕೊಂಡಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯನ್ನು ಈ ಶತಮಾನದ ಅಂತ್ಯದೊಳಗೆ, ಕೈಗಾರಿಕಾ ಯುಗಕ್ಕೆ ಮೊದಲಿನ ತಾಪಮಾನಕ್ಕೆ ಹೋಲಿಸಿದರೆ 1.5 ಸೆಲ್ಸಿಯಸ್‌ಗೆ ಮಿತಿಗೊಳಿಸಲು ಸಾಧ್ಯವಾದರೂ, ಹಿಮಾಲಯದ ನೀರ್ಗಲ್ಲುಗಳು ಕರಗುವ, ಚೂರಾಗುವ ಹಾಗೂಅನಾಹುತಗಳನ್ನು ಸೃಷ್ಟಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಮಗೆ ಈಗ ಎದುರಾಗಿರುವುದು ಜಾಗತಿಕ ಪರಿಸರ ತುರ್ತುಪರಿಸ್ಥಿತಿಯಲ್ಲದೆ ಮತ್ತೇನೂ ಅಲ್ಲ.

ಸುಧೀಂದ್ರ ಕುಲಕರ್ಣಿ
ಸುಧೀಂದ್ರ ಕುಲಕರ್ಣಿ

ಎರಡನೆಯದು, ಯಾವ ದೇಶಕ್ಕೂ ಈ ತುರ್ತು ಸ್ಥಿತಿಯನ್ನು ಏಕಾಂಗಿಯಾಗಿ ನಿಭಾಯಿಸಲು ಆಗದು. ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಲ್ಲಿ ಇರುವ ಗುರಿಗಳನ್ನು ತಲುಪಲು ಜಗತ್ತಿನ ಎಲ್ಲ ಪ್ರಮುಖ ಅರ್ಥ ವ್ಯವಸ್ಥೆಗಳು, ಅದರಲ್ಲೂ ಮುಖ್ಯವಾಗಿ ಅಮೆರಿಕ, ಚೀನಾ, ಭಾರತ, ಜಪಾನ್ ಮತ್ತು ಐರೋಪ್ಯ ಒಕ್ಕೂಟ ಒಂದುಗೂಡಿ ಕೆಲಸ ಮಾಡಬೇಕು. ಅಂದರೆ, ಎಲ್ಲದಕ್ಕಿಂತ ಮೊದಲನೆಯದಾಗಿ ಅಮೆರಿಕ ಮತ್ತು ಚೀನಾ ನಡುವೆ ಆರ್ಥಿಕ ಹಾಗೂ ರಾಜಕೀಯ ಸಹಕಾರ ಇರಬೇಕು.

ಮೂರನೆಯದು, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವನ್ನು ಹಾಳುಮಾಡುವ, ಸಂಘರ್ಷ ಸೃಷ್ಟಿಸುವ ಈಗಿನ ಆರ್ಥಿಕ ಅಭಿವೃದ್ಧಿ ಮಾದರಿಯು ಸುಸ್ಥಿರವೂ ಅಲ್ಲ, ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವಂಥದ್ದೂ ಅಲ್ಲ. ಇದರಿಂದ, ಬಡತನ ನಿರ್ಮೂಲಗೊಳಿಸಲು, ಸಂಪತ್ತಿನ ಅಸಮಾನ ಹಂಚಿಕೆ ತಗ್ಗಿಸಲು, ಆರೋಗ್ಯ ಮತ್ತು ನೆಮ್ಮದಿಯನ್ನು ಹೆಚ್ಚಿಸಲು ಇದರಿಂದಾಗದು. ಹಾಗಾಗಿ, ಜಗತ್ತು ‘ಕೈಗಾರಿಕಾ ನಾಗರಿಕತೆ’ಯ ಸ್ಥಿತಿಯಿಂದ ‘ಪರಿಸರ ನಾಗರಿಕತೆ’ಯ ಸ್ಥಿತಿಯತ್ತ ಸಾಗಬೇಕು.

ನಾಲ್ಕನೆಯದು, ಎಲ್ಲ ಪ್ರಮುಖ ಅರ್ಥ ವ್ಯವಸ್ಥೆಗಳೂ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರುವತ್ತ ಕೆಲಸ ಮಾಡಬೇಕು. ಈ ವಿಚಾರದಲ್ಲಿ, ಕಠ್ಮಂಡುವಿನಲ್ಲಿ ಇರುವ ‘ಸಮಗ್ರ ಪರ್ವತ ಅಭಿವೃದ್ಧಿ ಅಂತರರಾಷ್ಟ್ರೀಯ ಕೇಂದ್ರ’ದ (ಐಸಿಐಎಮ್‌ಒಡಿ) ಮುಖ್ಯಸ್ಥ ಡಾ. ಪೆಮಾ ಗ್ಯಾಮ್‌ಟ್ಶೊ ಅವರು ಭೂತಾನದ ಪ್ರೇರಣಾದಾಯಿ ಉದಾಹರಣೆ ನೀಡಿದರು. ಕರ್ನಾಟಕದ ಐದನೆಯ ಒಂದರಷ್ಟು ಇರುವ ಇದು ವಿಶ್ವದಲ್ಲಿ ‘ತಾನು ಹೊರಸೂಸುವುದಕ್ಕಿಂತ ಹೆಚ್ಚಿನ ಪ್ರಮಾಣದ ಇಂಗಾಲವನ್ನು ವಾತಾವರಣದಿಂದ ತೆಗೆದುಹಾಕುವ ಕೆಲಸ ಮಾಡುತ್ತಿರುವ’ (carbon negative) ಏಕೈಕ ದೇಶ. ದೇಶದ ಒಟ್ಟು ಭೂಪ್ರದೇಶದ ಕನಿಷ್ಠ ಶೇಕಡ 60ರಷ್ಟು ಯಾವಾಗಲೂ ಕಾಡಿನಿಂದ ಆವೃತವಾಗಿರಬೇಕು ಎಂದು ಅಲ್ಲಿನ ಸಂವಿಧಾನ ತಾಕೀತು ಮಾಡಿದೆ.

ಐದನೆಯದು, ಹಿಮಾಲಯ ಶ್ರೇಣಿ ಮಾತ್ರವೇ ಅಲ್ಲದೆ ಜೀವವೈವಿಧ್ಯಕ್ಕೆ ಅಪಾಯ ಎದುರಾಗಿರುವ ತಾಣಗಳು ಜಗತ್ತಿನಲ್ಲಿ ಇನ್ನೂ ಹಲವು ಇವೆ. ಅಲ್ಲದೆ, ಪರಿಸರ ಸಂರಕ್ಷಣಾ ವಿಜ್ಞಾನವು ಇನ್ನೂ ಪೂರ್ಣಪ್ರಮಾಣದಲ್ಲಿ ಬೆಳೆದಿಲ್ಲ. ಹಾಗಾಗಿ, ಹಿಮಾಲಯ ಶ್ರೇಣಿ ಮತ್ತು ಅಲ್ಲಿನ ಜೀವವೈವಿಧ್ಯದ ರಕ್ಷಣೆಗೆ ವಿಜ್ಞಾನಿಗಳು, ತಂತ್ರಜ್ಞರು, ಪರಿಸರವಾದಿಗಳು ಮತ್ತು ಸರ್ಕಾರಗಳ ನಡುವೆ ಸಾಧ್ಯವಾದಷ್ಟೂ ದೊಡ್ಡ ಮಟ್ಟದಲ್ಲಿ ಸಹಕಾರ ಇರಬೇಕು. ಪ್ರಕೃತಿಯ ನಿಯಮಗಳನ್ನು ಗೌರವಿಸಲು ಹೇಳುವ, ನಮ್ಮ ದುರಾಸೆಗಳಿಗೆ ಪ್ರಕೃತಿಯ ನಿಯಮಗಳನ್ನು ಮೀರಬಾರದು ಎಂದು ಹೇಳುವ ನಮ್ಮ ಸಂಸ್ಕೃತಿ ಹಾಗೂ ನಾಗರಿಕತೆಗಳ ವಿವೇಕವನ್ನು ಮತ್ತೆ ನೆನಪಿಸಿಕೊಳ್ಳುವ ಅಗತ್ಯವೂ ಇದೆ. ವೈಜ್ಞಾನಿಕ, ತಾಂತ್ರಿಕ ಹಾಗೂ ಆಧ್ಯಾತ್ಮಿಕ ಜ್ಞಾನದ ಆಧಾರದಲ್ಲಿ ಎಲ್ಲರಿಗೂ ಅನುಕೂಲ ಆಗುವ ರೀತಿಯಲ್ಲಿ ವಿಶ್ವದ ರಾಷ್ಟ್ರಗಳು,ಅದರಲ್ಲೂ ಮುಖ್ಯವಾಗಿ ಹಿಂದೂ ಕುಶ್ ಹಿಮಾಲಯ ಪ್ರದೇಶದ ರಾಷ್ಟ್ರಗಳು, ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು.

ಹಿಮಾಲಯ ಪ್ರದೇಶವು ರಾಜಕೀಯ–ಭೌಗೋಳಿಕ ಹಗೆತನದ ಕಾರಣದಿಂದಲೂ ಅಪಾಯ ಎದುರಿಸುತ್ತಿದೆ ಎಂದು ನಾನು ಭಾಷಣದಲ್ಲಿ ಹೇಳಿದೆ. ಮಿಲಿಟರಿಯವರು ಇಲ್ಲಿ ರಸ್ತೆಗಳನ್ನು, ಸೈನಿಕ ಡಿಪೊಗಳನ್ನು, ವಿಮಾನ ನೆಲೆಗಳನ್ನು, ಸುರಂಗಗಳನ್ನು, ಭೂಮಿಯ ಆಳದಲ್ಲಿ ಕ್ಷಿಪಣಿ ನೆಲೆಗಳನ್ನು ನಿರ್ಮಿಸುತ್ತಿದ್ದಾರೆ. ಜಗತ್ತಿನ ಅತ್ಯಂತ ಎತ್ತರದ ಮಿಲಿಟರಿ ಪ್ರದೇಶವಾಗಿರುವ ಸಿಯಾಚಿನ್ ನೀರ್ಗಲ್ಲಿನಲ್ಲಿ ಭಾರತದ ಮತ್ತು ಪಾಕಿಸ್ತಾನದ ಯೋಧರು ಪ್ರತಿವರ್ಷ ಹಿಮಕುಸಿತ, ತೀವ್ರ ಗಾಳಿಗೆ ಸಿಲುಕಿ ಮೃತಪಡುತ್ತಾರೆ. ಹಗೆತನಗಳನ್ನು ಸಹಕರಿಸುವ ಸಂಬಂಧಗಳ ರೂಪಕ್ಕೆ ತಾರದಿದ್ದರೆ ಹಿಮಾಲಯ ಶ್ರೇಣಿಗಳು ಸರಿಪಡಿಸಲು ಆಗದಂತಹ ನಷ್ಟವನ್ನು ಅನುಭವಿಸುತ್ತವೆ. ಹಿಂದೂ ಕುಶ್ ಹಿಮಾಲಯ ಪ್ರದೇಶವನ್ನು ‘ಯುದ್ಧಕ್ಕೆ ಅವಕಾಶವಿಲ್ಲದ ವಲಯ’ ಎಂದು ಘೋಷಿಸುವ ಕಾಲವೂ ಬಂದಿದೆ. ಭಾರತ, ಚೀನಾ ಮತ್ತು ಪಾಕಿಸ್ತಾನದ ನಡುವೆ ಸಹಕಾರ ಹಾಗೂ ಸಹಮತ ಇಲ್ಲದಿದ್ದರೆ ಇದು ಸಾಧ್ಯವಿಲ್ಲ.

ಭಾರತವು ಪಾಕಿಸ್ತಾನ ಅಥವಾ ಚೀನಾ ಜೊತೆ ಕೈಜೋಡಿಸುವುದು ಈಗಿನ ಹಂತದಲ್ಲಿ ಅಸಂಗತ ಅನ್ನಿಸಬಹುದು. ಆದರೆ, ನಾವು ಹಿಮಾಲಯ ಶ್ರೇಣಿಯ ಬಗ್ಗೆ ನಿಜಕ್ಕೂ ಕಾಳಜಿ ಹೊಂದಿದ್ದರೆ, ಮೂರೂ ದೇಶಗಳ ಮೇಲೆ ಈ ಹೊಣೆ ಇದೆ ಎಂಬುದು ಗೊತ್ತಾಗುತ್ತದೆ. ಹಿಮಾಲಯ ಶ್ರೇಣಿಯು ಮಾನವನ ಇತಿಹಾಸದುದ್ದಕ್ಕೂ ಶಾಂತಿಯನ್ನು ಬೋಧಿಸಿದ ಋಷಿಗಳ, ಸಂತರ ನೆಲೆ. ‘ಸತ್ಯಂ, ಶಿವಂ, ಸುಂದರಂ’ ಎನ್ನುವ ಮಹಾನ್ ಸತ್ಯ ಗೋಚರಿಸಿದ್ದು ಕೂಡ ಹಿಮಾಲಯ ಶಿಖರಗಳಲ್ಲಿ. ಅವುಗಳನ್ನು ರಕ್ಷಿಸಿ, ನಮ್ಮನ್ನೂ ರಕ್ಷಿಸಿಕೊಳ್ಳುವ ಸಮಯ ಇದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT