ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಯುದ್ಧೋನ್ಮಾದ: ಎಚ್ಚರಿಸಲು ಸಕಾಲ

Published 24 ಅಕ್ಟೋಬರ್ 2023, 23:33 IST
Last Updated 24 ಅಕ್ಟೋಬರ್ 2023, 23:33 IST
ಅಕ್ಷರ ಗಾತ್ರ

ಯುದ್ಧ ಸಂಸ್ಕೃತಿ ಮನುಷ್ಯನ ಇತಿಹಾಸದುದ್ದಕ್ಕೂ ಹಾಸುಹೊಕ್ಕಾಗಿರುವುದನ್ನು ನಾವು ಕಾಣುತ್ತೇವೆ. ಈ ಯುದ್ಧಗಳು ಪ್ರಕೃತಿಯೊಂದಿಗೆ ಸೆಣಸಾಟ, ಪ್ರಾಕೃತಿಕ ಸಂಪನ್ಮೂಲ ಹಾಗೂ ತನ್ನ ಸುಪರ್ದಿಯ ಕ್ಷೇತ್ರಕ್ಕಾಗಿ ಗುಂಪು ಘರ್ಷಣೆ ಮತ್ತು ಕ್ರಮೇಣ ಅವನು ತನ್ನ ಅಪ್ರತಿಮ ಬುದ್ಧಿಕ್ಷಮತೆಯಿಂದ ಆವಿಷ್ಕರಿಸಿದ ಯಂತ್ರಗಳು ಮನುಷ್ಯಕೇಂದ್ರಿತ ಯೋಚನೆಗಳನ್ನು ಹೆಚ್ಚಿಸುತ್ತಾ, ಜಗತ್ತಿನ ನಿಯಂತ್ರಕನೆನ್ನುವ ಭ್ರಮೆಯಲ್ಲಿ ಅವನನ್ನು ಇರಿಸಿವೆ.

ಮನುಷ್ಯನ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವನ ಕಾರ್ಯಯೋಜನೆಗಳೆಲ್ಲಾ ಸುಖದ ಲಾಲಸೆಗಳನ್ನು ಹೆಚ್ಚಿಸುವುದು ಮತ್ತು ಸಾಧ್ಯವಾದಷ್ಟೂ ದೈಹಿಕ ಶ್ರಮವನ್ನು ಕಡಿಮೆಗೊಳಿಸಿ ನಿರಾಯಾಸವಾಗಿ ಬದುಕುವ ಮಾರ್ಗಗಳನ್ನು ಅನ್ವೇಷಿಸುವುದರಲ್ಲಿಯೇ ತನ್ನೆಲ್ಲಾ ಸಮಯ ಕಳೆದಿರುವುದನ್ನು ಕಾಣಬಹುದು. ಈ ರೀತಿ, ಜನಸಮೂಹದ ಮುಖಂಡರು ತಮ್ಮ ಶ್ರಮವಿಲ್ಲದೆ ಜೀವನದ ಸುಖ ಅನುಭವಿಸಲು ಕಂಡುಕೊಂಡ ಮಾರ್ಗವೆಂದರೆ- ತನ್ನ ಆಧಿಪತ್ಯದ ಆಚೆಗಿನ ಪ್ರದೇಶಗಳನ್ನು ವಶಪಡಿಸಿಕೊಂಡು ಅಲ್ಲಿನ ಸಂಪತ್ತನ್ನು ಕೊಳ್ಳೆಹೊಡೆದು ಐಷಾರಾಮದಿಂದ ಬದುಕುವುದು, ಅಲ್ಲಿನ ಗಂಡಸರು ಮತ್ತು ಮಕ್ಕಳನ್ನು ಸೆರೆ
ಹಿಡಿದು ಗುಲಾಮರನ್ನಾಗಿಸಿಕೊಳ್ಳುವುದು, ಹೆಣ್ಣು ಮಕ್ಕಳನ್ನು ಕಾಮತೃಷೆಗೆ ಬಳಸಿಕೊಳ್ಳುವುದು. ಈ ಯೋಜನೆಗೆ ರಾಜರು ಇಟ್ಟ ಪೌರುಷದ ಹೆಸರೇ ಯುದ್ಧ.

ಸಾಮಾನ್ಯವಾಗಿ, ಈ ಹಿಂಸಾತ್ಮಕ ಯುದ್ಧಗಳು ಧರ್ಮ, ಶಾಂತಿ ಮತ್ತು ನ್ಯಾಯ ಸ್ಥಾಪನೆಯ ಹೆಸರಿನ
ಲ್ಲಿಯೇ ನಡೆಯುತ್ತವೆ. ಇದು, ಆಳುವವರಿಗೆ ಮೋಜಿನ ಬೇಟೆ, ಸೈನಿಕರಿಗೆ ಹೊಟ್ಟೆಪಾಡಿಗಾಗಿ ಹುತಾತ್ಮ
ರಾಗುವ ಸಂದರ್ಭ, ಜನಸಾಮಾನ್ಯರಿಗೆ ಯಾವಾಗ ತಮ್ಮ ಜೀವನ ಮತ್ತು ಸಂಸಾರ ಛಿದ್ರವಾಗುತ್ತದೋ ಎನ್ನುವ ಅನಿಶ್ಚಯದ ಬದುಕು. ಈ ನಿಯಮ, ಎಲ್ಲಾ ಪ್ರದೇಶಗಳ, ಕಾಲಗಳ ಯುದ್ಧಕ್ಕೂ ಅನ್ವಯಿಸುತ್ತದೆ.

ಈ ಪ್ರಕಾರ, ಬುಡಕಟ್ಟುಗಳು ಸಂಘರ್ಷದಿಂದ ಸಾಮ್ರಾಜ್ಯಗಳಾಗಿ, ಆನಂತರ ಪ್ರಜಾಪ್ರಭುತ್ವವೂ ಒಳಗೊಂಡಂತೆ ವಿವಿಧ ಮಾದರಿಯ ಆಡಳಿತ ವ್ಯವಸ್ಥೆಗಳು ಜಾರಿಗೆ ಬಂದಾಗಲೂ ಜನಸಾಮಾನ್ಯರನ್ನು ಆಳುವ ನಾಯಕರ ಯುದ್ಧೋತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಇಂದು, ಯಾವುದೇ ರಾಷ್ಟ್ರ ಗಂಭೀರ
ವಾಗಿ ಯುದ್ಧ ಮಾಡಿದರೆ, ಇಡೀ ಭೂಮಿಯೇ ಸ್ಮಶಾನವಾಗುವಷ್ಟು ಅಣ್ವಸ್ತ್ರಗಳನ್ನು ಹೊಂದಿದೆ. ಈ ಎಚ್ಚರಿಕೆ ಎಲ್ಲ ರಾಷ್ಟ್ರಗಳಿಗೆ ಇದ್ದರೂ ಯುದ್ಧಕ್ಕಿಳಿಯುತ್ತಿವೆ. ಯುದ್ಧವು ದೇಶದ ಸಾಮಾಜಿಕ ಮತ್ತು ಆರ್ಥಿಕ ಚಿತ್ರಣ
ವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಇಂದುದೇಶಗಳು ಪರಸ್ಪರ ಅವಲಂಬಿಸಿರುವು
ದರಿಂದ, ಜಾಗತಿಕ ಮಟ್ಟದಲ್ಲಿಯೂ ಆರ್ಥಿಕ ಸ್ಥಿತ್ಯಂತರವಾಗುತ್ತದೆ.

ಸದ್ಯದ ರಷ್ಯಾ-ಉಕ್ರೇನ್ ಯುದ್ಧವಾಗಲಿ, ಇಸ್ರೇಲ್-ಹಮಾಸ್ ಸಂಘರ್ಷವಾಗಲಿ, ಯುದ್ಧ ಹೂಡಿದ ನಾಯಕರು ಜೀವ ಕಳೆದುಕೊಳ್ಳುವುದಾಗಲಿ, ವೈಯಕ್ತಿಕವಾಗಿ ಆರ್ಥಿಕ ನಷ್ಟ ಅನುಭವಿಸುವು
ದನ್ನಾಗಲಿ ನಾವು ಕಾಣುವುದಿಲ್ಲ. ಇಲ್ಲಿ, ಸಾಯುವವರು, ಗಾಯಗೊಳ್ಳುವವರು, ಮನೆ-ಬದುಕು-ಕೆಲಸ ಕಳೆದು
ಕೊಳ್ಳುವವರು, ಅತ್ಯಾಚಾರಕ್ಕೆ ಒಳಗಾಗುವವರು, ಅನಾಥರಾಗುವವರು ಯುದ್ಧದೊಂದಿಗೆ ಯಾವುದೇ ಸಂಬಂಧ ಹೊಂದಿರದ ಜನಸಾಮಾನ್ಯರು. ಹಾಗೆಯೇ ಯುದ್ಧದಿಂದಾಗುವ ಆರ್ಥಿಕ ನಷ್ಟದ ಪರಿಣಾಮವಾಗಿ ಉಂಟಾಗುವ ಬೆಲೆಯೇರಿಕೆ, ತೆರಿಗೆ ಹೆಚ್ಚಳ, ಉದ್ಯೋಗ ನಷ್ಟವನ್ನು ಭರಿಸುವವರು ಕೂಡ ಅವರೇ. ನಮ್ಮನ್ನು ಆಳುವವರು, ಸರ್ಕಾರಿ ನಿಯಂತ್ರಣದ ಮಾಧ್ಯಮಗಳ ಮೂಲಕ ಯುದ್ಧೋನ್ಮಾದ ಹೆಚ್ಚಿಸಿ, ಜನಾಭಿಪ್ರಾಯ ಕೂಡ ತಮ್ಮ ನಿರ್ಧಾರಗಳಿಗೆ ಪೂರಕವಾಗುವಂತೆ ನೋಡಿಕೊಂಡು, ಜೊತೆಗೆ ಜನ ತಮ್ಮ ದೈನಂದಿನ ಬದುಕಿನ ಕಷ್ಟ-ನಷ್ಟಗಳನ್ನು ಕ್ಷಣಕಾಲ ಮರೆಯುವಂತೆ ಮಾಡಿ ರಾಜಕಾರಣ ನಡೆಸುತ್ತಾರೆ. ವೈಯಕ್ತಿಕ ಪ್ರತಿಷ್ಠೆಗೆ ರಾಷ್ಟ್ರ ಬೆಲೆ ತೆರುತ್ತದೆ.

ಸಾಮ್ರಾಜ್ಯಗಳ ಕಾಲದಲ್ಲಿ, ಇಂಥ ಪ್ರವೃತ್ತಿಯನ್ನು ಜನ ಪ್ರಶ್ನಿಸುವಂತಿರಲಿಲ್ಲ. ಆದರೆ, ವರ್ತಮಾನದಲ್ಲಿ,
ಪ್ರಜ್ಞಾವಂತ ನಾಗರಿಕರು ಆಳುವವರ ಪ್ರತಿಷ್ಠೆಯ ಈ ಚೆಲ್ಲಾಟವನ್ನು ಪ್ರತಿಭಟಿಸದೆ ಆತ್ಮಾಹುತಿಗೆ ಸಿದ್ಧರಾಗುವುದು ವಿಪರ್ಯಾಸ.

ವಿಶ್ವಸಂಸ್ಥೆಯು ಬಲಿಷ್ಠ ರಾಷ್ಟ್ರಗಳ ಕೈಗೊಂಬೆಯಾಗಿರುವ ಇಂದಿನ ಸಂದರ್ಭದಲ್ಲಿ, ಜಗತ್ತಿನ ಎಲ್ಲಾ ಸ್ವಸ್ಥ ಬುದ್ಧಿಯ ಮನಸ್ಸುಗಳು ಮೌನವಾಗಿ, ಟಿ.ವಿಯಲ್ಲಿನ ದೃಶ್ಯಗಳನ್ನು ನೋಡಿ, ಇದು ತಮ್ಮ ಲೋಕಕ್ಕೆ ಸಂಬಂಧಿಸದ ಘಟನೆ ಎಂದುಕೊಂಡು ಸುಮ್ಮನಿರದೆ, ನಾಳೆ ತಮಗೂ ಆ ಸ್ಥಿತಿ ಬರಬಹುದು ಎನ್ನುವುದನ್ನು ಮನಗಂಡು, ಅಧಿಕಾರದ ಅಮಲಿನಲ್ಲಿ ಇರುವ ಆಳುವವರ ಹುಚ್ಚುತನವನ್ನು ಪ್ರಶ್ನಿಸಿ ವಿಶ್ವಶಾಂತಿ ಸ್ಥಾಪಿಸಬೇಕಾಗಿದೆ. ಯುದ್ಧದಿಂದ ಯಾರಿಗೂ ಒಳಿತಿಲ್ಲ, ಬದಲಾಗಿ ಎಲ್ಲರ ಸೋಲಿದೆ.

ಮೊದಲ ಮಹಾಯುದ್ಧವನ್ನು ಹತ್ತಿರದಿಂದ ಗಮನಿಸಿದ ಫ್ರೆಂಚ್ ಕಾದಂಬರಿಕಾರ ಹೆನ್ರಿ ಬಾರ್ಬುಸ್ಸೆ ಪ್ರಕಾರ- ‘ಯುದ್ಧದಲ್ಲಿ, ಪರಸ್ಪರ ಹೋರಾಡುವ ಎರಡು ಸೈನ್ಯಗಳು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಒಂದು ದೊಡ್ಡ ಸೈನ್ಯದಂತೆ ಕಾಣಿಸುತ್ತವೆ’. ಇದು, ಯುದ್ಧದ ಸೂತ್ರಧಾರರಿಗೆ ಅರ್ಥವಾಗದಿರುವುದು, ಜನಸಾಮಾನ್ಯರು ಅವರನ್ನು ಎಚ್ಚರಿಸದಿರುವುದು ವರ್ತಮಾನ ಕಾಲದ ದೊಡ್ಡ ದುರಂತ.

ಈಗಾಗಲೇ, ಬಹಳಷ್ಟು ಮಾನವನಿರ್ಮಿತ ಸಮಸ್ಯೆಗಳನ್ನು ಜಗತ್ತು ಎದುರಿಸುತ್ತಿರುವಾಗ, ಒಟ್ಟಾಗಿ ಭೂಮಿಯನ್ನು ಸಂರಕ್ಷಿಸುವುದನ್ನು ಬಿಟ್ಟು, ಯುದ್ಧ ಮಾಡಿ ಇನ್ನಷ್ಟು ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವಿದೆಯೇ?

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ತುಮಕೂರು ವಿಶ್ವವಿದ್ಯಾಲಯ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT