ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಶಾಲಾ ಶಿಕ್ಷಣ: ವಾಸ್ತವಿಕ ಸವಾಲು

ದಶಕಗಳ ಹಿಂದಿನ ಶಿಕ್ಷಣ ವ್ಯವಸ್ಥೆಯು ಈಗಿನ ವ್ಯವಸ್ಥೆಗಿಂತ ನಿಜವಾಗಿಯೂ ಉತ್ತಮವಾಗಿತ್ತೇ?
Published 21 ಮಾರ್ಚ್ 2024, 0:20 IST
Last Updated 21 ಮಾರ್ಚ್ 2024, 0:20 IST
ಅಕ್ಷರ ಗಾತ್ರ

‘ಪರೀಕ್ಷಾ ಫಲಿತಾಂಶಕ್ಕಾಗಿ ಶಿಕ್ಷಕರ ಮೇಲೆ ಅತಿಯಾಗಿ ಒತ್ತಡ ಹಾಕಲಾಗುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ’ ಎನ್ನುವ ಗೊಣಗಾಟ ನಿರಂತರವಾಗಿ ಇದೆ. ಇದರ ಹಿಂದೆ ಸತ್ಯ ಸಂಗತಿಗಳೇ ಇಲ್ಲ ಎಂದೇನಿಲ್ಲ. ‘ನಮ್ಮ ಕಾಲ’ ಎನ್ನುವ ಪರಿಕಲ್ಪನೆ ಯಾವಾಗಲೂ ಸಾಪೇಕ್ಷವಾಗಿರುತ್ತದೆ.‌ ಸಾಮಾನ್ಯವಾಗಿ ಈ ಪರಿಕಲ್ಪನೆಯು ತಾನು ಅಂದುಕೊಂಡ ಕಾಲಘಟ್ಟವು ಬಹಳ ಶ್ರೇಷ್ಠವಾಗಿತ್ತೆಂದೂ, ಬದಲಾಗಿರುವ ಸನ್ನಿವೇಶವು ತೀರಾ ಕಳಪೆಯಾಗಿದೆ ಎಂದೂ ಅರ್ಥೈಸಲ್ಪಟ್ಟೇ ಬಳಕೆಯಾಗುತ್ತದೆ.‌ ಆದರೆ ವಾಸ್ತವ ಹಾಗೇನೂ ಇರುವುದಿಲ್ಲ.

ಪದವಿ ಮುಗಿಸುವವರೆಗೂ ತನ್ನ ಜೀವನದ ಗುರಿ ಏನು ಎಂಬುದರ ಸ್ಪಷ್ಟ ಕಲ್ಪನೆ ಇರದೆ, ಎಸ್ಎಸ್ಎಲ್‌ಸಿ ಮುಗಿದದ್ದರಿಂದ ಪಿಯುಸಿ, ಪಿಯುಸಿ ಮುಗಿದದ್ದರಿಂದ ಪದವಿ ಎಂದು ಗೊತ್ತು ಗುರಿ ಇಲ್ಲದೆ ಒಟ್ಟಂದದಲ್ಲಿ ಅಭ್ಯಾಸ ಮಾಡುತ್ತಿದ್ದ ವ್ಯವಸ್ಥೆ ಒಂದು ಕಾಲಮಾನದ್ದು. ಇದು, ಪಿ‌ಯುಸಿಯಲ್ಲೇ ತನ್ನ ಜೀವನದ ಗುರಿಯ ಸ್ಪಷ್ಟ ಕಲ್ಪನೆ ಇರಿಸಿಕೊಂಡು, ಏನನ್ನು ಅಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿ ನಿರ್ಧರಿಸುವ ಕಾಲಮಾನದ ವ್ಯವಸ್ಥೆಗಿಂತ ಶ್ರೇಷ್ಠವಾಗಿತ್ತೆಂದು ಹೇಳಲು ಆಗುವುದಿಲ್ಲ. ಈಗ ‘ನಮ್ಮ ಕಾಲ’ ಎನ್ನುವ ಪರಿಕಲ್ಪನೆಯು ಬಹುತೇಕ 1980ರಿಂದ 2000ದವರೆಗಿನ ಕಾಲಮಾನದ ಸಾಮಾನ್ಯ ಶೈಕ್ಷಣಿಕ ಅನುಭವಗಳನ್ನು ಸೂಚಿಸುತ್ತದೆ.

‘ನಮ್ಮ ಕಾಲ’ ಎನ್ನುವ ಕಾಲಮಾನದಲ್ಲಿ ಶಾಲೆಗಳು ಬಹಳ ದೂರ ದೂರ ಇದ್ದವು. ಕಡ್ಡಾಯ ಶಿಕ್ಷಣವು ಈಗಿನಂತೆ ಮೂಲಭೂತ ಹಕ್ಕಾಗಿರಲಿಲ್ಲ. ಆದ್ದರಿಂದ ತಾನು ಶಾಲಾ ಶಿಕ್ಷಣ ಪಡೆಯಲೇಬೇಕು ಎಂಬ ಭಾವನೆ ಇದ್ದ ಮಕ್ಕಳು, ಕೆಲವೊಮ್ಮೆ ತಂದೆ-ತಾಯಿಯ ಒತ್ತಡಕ್ಕೆ ಒಳಗಾದವರು ಶಾಲೆಗೆ ಬರುತ್ತಿದ್ದರು. ‘ನಮ್ಮ ಕಾಲ’ದಲ್ಲಿನ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಎಳವೆಯಲ್ಲೇ ಹೋಟೆಲ್ ಕೆಲಸಕ್ಕೊ, ಬಡಗಿಯ ಕೆಲಸಕ್ಕೊ, ಕೂಲಿಗೋ ಹೋಗಿ ಜೀವನದ ದಾರಿಯನ್ನು ಕಂಡುಕೊಳ್ಳುತ್ತಿದ್ದರು. ಆ ಆಯ್ಕೆಯನ್ನು ಮಾಡಿಕೊಂಡವರೂ ಸಮೃದ್ಧ ಜೀವನವನ್ನು ನಡೆಸುತ್ತಿದ್ದಾರೆ. ಇದು ಏನನ್ನು ಶಿಕ್ಷಣ ಎಂದು ಪರಿಗಣಿಸಬೇಕು ಎಂಬ ಬೇರೆಯದೇ ಆದ ವಿಷಯವಾಗಿದೆ. ಆದರೆ ಸ್ಥಾಪಿತ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಅಂದಿನ ಬಹುತೇಕ ಮಕ್ಕಳು ಇರಲೇ ಇಲ್ಲ. ಆದರೆ ಆಗಲೂ ಅಂತಹ ಮಕ್ಕಳನ್ನು ಗುರುತಿಸಲಾಗುತ್ತಿತ್ತು. ಅವರು ಪ್ರಯತ್ನಪಟ್ಟೂ ಕಲಿಕೆಯನ್ನು ಸಾಧಿಸಲು ಹಿನ್ನಡೆ ಅನುಭವಿಸಿದವರಾಗಿದ್ದರು.ಕಲಿಕೆಯ ಔಚಿತ್ಯವನ್ನು ಅರಿಯದವರಾಗಿರಲಿಲ್ಲ.

ಇಂದಿನ ಔಪಚಾರಿಕ ಶಿಕ್ಷಣದ ವ್ಯವಸ್ಥೆ ಹಾಗಿಲ್ಲ. ಎಲ್ಲ ಮಕ್ಕಳೂ ಶಾಲಾ ಶಿಕ್ಷಣದಲ್ಲಿ ಒಳಗೊಂಡಿದ್ದಾರೆ. ಆದರೆ ಕಲಿಕೆಯ ಔಚಿತ್ಯವನ್ನು ಅರಿತು, ಅರ್ಥ ಮಾಡಿಕೊಂಡು ಬಂದವರಲ್ಲ. ಆಗ ಅಂತಹ ಮಕ್ಕಳಲ್ಲಿ ಕಲಿಕೆಯ ಮಹತ್ವದ ಅರಿವನ್ನು ಹುಟ್ಟುಹಾಕುವುದೇ ಬಹುದೊಡ್ಡಸವಾಲಾಗಿರುತ್ತದೆ. ನಮ್ಮ ಪೋಷಕರು, ಶಿಕ್ಷಕರು, ಸಮುದಾಯವು ಮಕ್ಕಳಲ್ಲಿ ಅಂತಃಪ್ರೇರಣೆಯನ್ನು ಹುಟ್ಟಿಸಲು ಬಳಸುವ ಪ್ರಧಾನ ಉತ್ತೇಜಕ ಪರಿಕಲ್ಪನೆ ಎಂದರೆ, ‘ನೀನು ಚೆನ್ನಾಗಿ ಓದಿದರೆ ಅತ್ಯುತ್ತಮ ಉದ್ಯೋಗ ಪಡೆಯಬಹುದು’ ಎನ್ನುವುದು. ಆದರೆ ವಾಸ್ತವದಲ್ಲಿ ಚೆನ್ನಾಗಿ ಓದಿಯೂ ಉತ್ತಮ ಉದ್ಯೋಗವನ್ನು ಪಡೆಯಲಾರದವರು ಮಕ್ಕಳ ಕಣ್ಣಿಗೆ ಪ್ರತಿನಿತ್ಯ ಕಾಣುತ್ತಲೇ ಇದ್ದಾರೆ. ಸ್ವತಃ ಅವರ ಶಿಕ್ಷಕರಲ್ಲೇ ಅತಿಥಿ ಶಿಕ್ಷಕರು, ಹೊರಗುತ್ತಿಗೆ ಆಧಾರದ ಶಿಕ್ಷಕರು ಎಂದು ಒಳ್ಳೆಯ ವೇತನವನ್ನಾಗಲೀ ಔದ್ಯೋಗಿಕ ಸ್ಥಿರತೆಯನ್ನಾಗಲೀ ಹೊಂದಿಲ್ಲದವರು ಕಾಣುತ್ತಾ ಇರುವಾಗ, ಅಂತಹ ಮಾತೆಲ್ಲ ಬೊಗಳೆ ಎಂದು ಮಕ್ಕಳಿಗೆ ಅರ್ಥವಾಗುತ್ತದೆ.

ಎರಡನೆಯದಾಗಿ, ಉತ್ತಮ ಉದ್ಯೋಗ ಎಂದು ಹಿರಿಯರು ನೀಡುವ ಪರಿಕಲ್ಪನೆಗೂ ಎಳೆಯ ಮಕ್ಕಳ ಪರಿಕಲ್ಪನೆಗೂ ವ್ಯತ್ಯಾಸ ಇರುತ್ತದೆ. ಒಮ್ಮೆ ಕವಿ ಸಿದ್ಧಲಿಂಗಯ್ಯ ಅವರು ನಮ್ಮ ಶಾಲೆಗೆ ಬಂದಿದ್ದರು. ಮಕ್ಕಳ ಬಳಿ ‘ನೀವು ಏನಾಗಬಯಸುತ್ತೀರಿ?’ ಎಂದು ಕೇಳಿದರು. ಹೆಚ್ಚಿನ ಮಕ್ಕಳು ‘ಪೊಲೀಸ್ ಕಾನ್‌ಸ್ಟೆಬಲ್ ಆಗುತ್ತೇವೆ’ ಎಂದರು. ಐಪಿಎಸ್ ಮಾಡುವುದು ಮಕ್ಕಳಿಗೆ ಬೇಡ. ಪೊಲೀಸ್ ಕಾನ್‌ಸ್ಟೆಬಲ್ ಆದಾಗ ಮಾತ್ರ ರಸ್ತೆಯಲ್ಲಿ ಹೋಗುವ ವಾಹನ ಚಾಲಕರನ್ನು ನಿಲ್ಲಿಸಿ ಅಧಿಕಾರ ಚಲಾಯಿಸಲು ಆಗುತ್ತದೆ. ಪೊಲೀಸ್‌ ವರಿಷ್ಠಾಧಿಕಾರಿಯು (ಎಸ್.ಪಿ.) ಜನರ ಮೇಲೆ ಅಧಿಕಾರ ಚಲಾಯಿಸಿರಬಹುದಾದ ನಿದರ್ಶನಗಳನ್ನು ಮಕ್ಕಳು ನೋಡಿರುವ ಸಾಧ್ಯತೆ ಕಡಿಮೆ.

ಎಷ್ಟೋ ಮಕ್ಕಳಿಗೆ ಜೆಸಿಬಿ ಯಂತ್ರದ ಚಾಲಕನಾಗುವುದು ಉತ್ತಮ‌ ಉದ್ಯೋಗ ಎನಿಸಿರುತ್ತದೆ. ಹಾಗಿರುವಾಗ, ಹಿರಿಯರು ಹೇಳುವ ಉತ್ತಮ ಉದ್ಯೋಗ ಮಕ್ಕಳಿಗೆ ಆಕರ್ಷಕ ಆಗಿರಬೇಕಾಗಿಲ್ಲ ಎನ್ನುವುದು ಸಮಸ್ಯೆಯ ಒಂದು ಭಾಗವಾಗಿದ್ದರೆ, ಉತ್ತಮ ಉದ್ಯೋಗದ ಪರಿಕಲ್ಪನೆಯ ಮೂಲಕ ಮಕ್ಕಳಲ್ಲಿ ಮೇಲು–ಕೀಳಿನ ತಾರತಮ್ಯವನ್ನೂ ಸೃಷ್ಟಿಸಲಾಗುತ್ತಿರುವುದು ಸಮಸ್ಯೆಯ ಮತ್ತೊಂದು ಮಗ್ಗುಲಾಗಿದೆ. ಒಮ್ಮೆ ಅನುತ್ತೀರ್ಣರಾದವರಿಗೆ ಪರಿಹಾರ ಬೋಧನೆ, ಮರುಪರೀಕ್ಷೆ ಮಾಡಿದಾಗಲೂ ಪ್ರಯೋಜನ
ಆಗದಿದ್ದರೆ ಆಗ ಅನುತ್ತೀರ್ಣಗೊಳಿಸಬಹುದು. ಮಕ್ಕಳ ಪರವಾಗಿರಿ ಎಂದು ಸರ್ಕಾರ ಹೇಳುವುದೇ ವಿನಾ ಎಷ್ಟು ಮಾತ್ರಕ್ಕೂ ಯಾವ ಹಂತದಲ್ಲೂ ಅನುತ್ತೀರ್ಣಗೊಳಿಸತಕ್ಕದ್ದಲ್ಲ ಎಂದು ಹೇಳಿಲ್ಲ. ಅನುತ್ತೀರ್ಣ
ಗೊಳಿಸದೇ ಇರುವುದು ಸರ್ಕಾರಕ್ಕಿಂತ ಹೆಚ್ಚಾಗಿ ಶಾಲೆಗಳ ಅನಿವಾರ್ಯ ಆಗಿರುತ್ತದೆ.

ಅನುತ್ತೀರ್ಣನಾದ ವಿದ್ಯಾರ್ಥಿ ಮುಂದಿನ ವರ್ಷ ಬೇರೆ ಶಾಲೆಗೆ ಹೋಗುತ್ತಾನೆ. ಆಗ ಸರ್ಕಾರಿ ಶಾಲೆಗಾಗಲೀ ಖಾಸಗಿ ಶಾಲೆಗಾಗಲೀ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಶಾಲೆಯ ಬಗ್ಗೆ ನಕಾರಾತ್ಮಕ ಭಾವನೆ ಬರುತ್ತದೆ. ಮಕ್ಕಳ ಸಂಖ್ಯೆ ಕಡಿಮೆಯಾದರೆ ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿ ಹುದ್ದೆ, ವರ್ಗಾವಣೆಯಂತಹ ಸಮಸ್ಯೆಗಳು ಬರುತ್ತವೆ. ಖಾಸಗಿ ಶಾಲೆಯಲ್ಲಿ ಗ್ರಾಹಕರನ್ನು ಕಳೆದುಕೊಳ್ಳುವ ಸಮಸ್ಯೆ ಬರುತ್ತದೆ. ಹಾಗಾಗಿ, ಉತ್ತೀರ್ಣರಾಗುತ್ತಾ ಹೋಗುವ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿಗೆ ಬಂದಾಗ ಪಬ್ಲಿಕ್‌ ಪರೀಕ್ಷೆಯನ್ನು ಎದುರಿಸಬೇಕಾದಾಗ ಪೋಷಕರಿಗೂ ಶಿಕ್ಷಕರಿಗೂ ಏನು ಮಾಡುವುದು ಎಂದು ಗೊತ್ತಾಗದ ರೀತಿಯ ಸವಾಲಾಗುತ್ತಾರೆ. ಆಗ ‘ಫಲಿತಾಂಶಕ್ಕಾಗಿ ಸರ್ಕಾರ ಒತ್ತಡ ಹೇರುತ್ತದೆ’ ಎಂಬ ಗೊಣಗಾಟ ಶಿಕ್ಷಕರಿಂದ ಕೇಳಿಬರುತ್ತದೆ. ಆದರೆ ಒತ್ತಡ ಹೇರುವುದರಿಂದಾಗಿ, ವಿದ್ಯಾರ್ಥಿಯಲ್ಲಿ ಕಲಿಕೆಯೇ ನಡೆಯದಿದ್ದರೂ ಒಂದಷ್ಟು ಆಯ್ದ ಪ್ರಶ್ನೆಗಳನ್ನು ಕೊಟ್ಟು ಪದೇಪದೇ ಅವುಗಳನ್ನು ಬರೆಸೀ ಬರೆಸೀ ಹೇಗಾದರೂ ಮಾಡಿ ಬಹಳಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಹಾಗೆ ಮಾಡಲಾಗುತ್ತದೆ ಎನ್ನುವುದೂ ಸತ್ಯವಲ್ಲವೇ? ಒತ್ತಡವೇ ಇಲ್ಲದಿದ್ದರೆ ಅಷ್ಟೂ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಿದ್ದರು ಎನ್ನುವುದೂ ಸತ್ಯವಲ್ಲವೇ? ಶಿಕ್ಷಕರು ಆತ್ಮಸಾಕ್ಷಿಗನುಗುಣವಾಗಿ ಯೋಚಿಸಿದರೆ ಈ ಸತ್ಯ ಅವರಿಗೇ ಹೊಳೆಯುತ್ತದೆ.

ಹಾಗಿದ್ದರೆ ಸಮರ್ಪಕ ಕಲಿಕೆ ನಡೆಯದೇ ಉತ್ತೀರ್ಣಗೊಳ್ಳುವುದು ಸರಿಯೇ ಎಂದರೆ, ಸರಿಯಲ್ಲ. ಸಮರ್ಪಕ ಕಲಿಕೆ ನಡೆಯಬೇಕಾದರೆ ಶಾಲೆಗಳನ್ನು ಆಡಳಿತಾತ್ಮಕವಾಗಿ ಉತ್ತಮೀಕರಿಸಬೇಕು. ನಮ್ಮೆಲ್ಲ ಶೈಕ್ಷಣಿಕ ಸುಧಾರಣೆಗಳು ಶೈಕ್ಷಣಿಕ ಪ್ರಕ್ರಿಯೆಯನ್ನು ಬದಲಿಸಿವೆಯೇ ವಿನಾ ಶೈಕ್ಷಣಿಕ ಆಡಳಿತವನ್ನು ಬದಲಿಸಿಲ್ಲ. ಅದು ‘ನಮ್ಮ ಕಾಲ’ದಲ್ಲಿದ್ದ ಹಾಗೆಯೇ ಇದೆ. ಡಿ.ಇಡಿ ಆಗಿ, ಟಿಇಟಿಯನ್ನೂ ಮಾಡಿ, ಸಿಇಟಿಯಲ್ಲೂ ಆಯ್ಕೆಯಾದ ಶಿಕ್ಷಕರ ಗುಣಮಟ್ಟ ಅತ್ಯುತ್ತಮವಾಗಿ ಇರಲೇಬೇಕು. ಇಲ್ಲದಿದ್ದರೆ ಅಷ್ಟೂ ಸ್ಪರ್ಧಾತ್ಮಕ ಪರೀಕ್ಷೆಗಳೇ ಸರಿಯಿಲ್ಲ ಎಂದಾಗುತ್ತದೆ. ಆದರೆ ಅತ್ಯುತ್ತಮ ಶಿಕ್ಷಕ ಹೋಗುವ ಶಾಲೆ ಅತ್ಯುತ್ತಮವಾಗಿಯೇ ಇರುವ ಹಾಗೆ ಮಾಡಿಲ್ಲ. ಆಗ ಉತ್ತಮ ಶಿಕ್ಷಕನೂ ಉತ್ತಮವಲ್ಲದ ಶಾಲಾ ಸನ್ನಿವೇಶಕ್ಕೆ ಹೊಂದಿಕೊಂಡಾಗ ವಿಫಲನಾಗುವುದು ಅನಿವಾರ್ಯ ಆಗುತ್ತದೆ. ಉದಾಹರಣೆಗೆ, ಹಲವಾರು ಪರೀಕ್ಷೆಗಳ ಮೂಲಕ ಉತ್ತಮ ವಿಜ್ಞಾನ ಶಿಕ್ಷಕರ ನೇಮಕ ಆಗುತ್ತದೆ ಎಂದು ಭಾವಿಸಿ. ಆ ಶಾಲೆಯಲ್ಲಿ ಹತ್ತು ವರ್ಷಗಳಿಂದ ಕನ್ನಡ ಭಾಷಾ ಶಿಕ್ಷಕರೇ ಇಲ್ಲದಿದ್ದರೆ ಮಕ್ಕಳಿಗೆ ವಾಕ್ಯ ರಚನೆಯ ಕೌಶಲ ಬಂದಿರುವುದಿಲ್ಲ. ವಾಕ್ಯ ರಚನೆ ಬಾರದ ವಿದ್ಯಾರ್ಥಿಗಳಿಂದ ವಿಜ್ಞಾನ ಶಿಕ್ಷಕ ವಿಜ್ಞಾನದ ಪರಿಕಲ್ಪನೆಗಳನ್ನು ಹೇಗೆ ನಿರೂಪಣೆ ಮಾಡಿಸಬೇಕು? ಆಗ ವಿಜ್ಞಾನ ಶಿಕ್ಷಕರಾಗಿ ಹೋದವರು ಕನ್ನಡ ಕಲಿಸಲು ಶುರು ಮಾಡಬೇಕು.‌ ಆದರೆ ಅವರು ಕನ್ನಡ ಭಾಷಾ ಶಿಕ್ಷಕರಾಗಿ ಯಾವ ಪರೀಕ್ಷೆಯನ್ನೂ ಬರೆದು ಆಯ್ಕೆ ಆದವರೇ ಅಲ್ಲ. ನಿಜವಾಗಿ ಕಲಿಕೆ ಸಮರ್ಪಕ ಆಗಬೇಕಾದರೆ ಶಾಲೆಗಳ ಆಡಳಿತಾತ್ಮಕ ಸನ್ನಿವೇಶದ ಸುಧಾರಣೆಗೆ ಆದ್ಯತೆಯನ್ನು ನೀಡಬೇಕಾಗಿದೆ.

‘ನಮ್ಮ ಕಾಲ’ದ ಆಡಳಿತಾತ್ಮಕ ಸನ್ನಿವೇಶವನ್ನೇ ಇರಿಸಿಕೊಂಡು ಈ ಕಾಲಮಾನದ ಸುಧಾರಿತ ಶಿಕ್ಷಣವನ್ನು ಯಶಸ್ವಿಗೊಳಿಸುತ್ತೇವೆ ಎಂದರೆ ಅದು ಸಾಧ್ಯವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT