ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಗುರಿ ಇರಿಸಿಕೊಂಡಿದೆ. ಸದ್ಯಕ್ಕೆ ದೇಶಗಳ ಶ್ರೀಮಂತಿಕೆಯನ್ನು ಅಳೆಯುವುದಕ್ಕೆ ತಲಾ ವರಮಾನವನ್ನು ಮಾಪನವನ್ನಾಗಿ ಬಳಸಲಾಗುತ್ತಿದೆ. ಯಾವುದೇ ದೇಶದ ತಲಾ ವರಮಾನವು ಅಮೆರಿಕದ 13,845 ಡಾಲರ್ಗಿಂತ (ಒಂದು ಡಾಲರ್ಗೆ ಸುಮಾರು ₹ 85) ಹೆಚ್ಚಾಗಿದ್ದರೆ ಅದು ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳುತ್ತದೆ.

ಭಾರತದ ತಲಾ ವರಮಾನವು 2,500 ಡಾಲರ್ ಇದೆ. ನಮ್ಮ ದೇಶ ಈಗ ಮಧ್ಯಮ ವರಮಾನದ ದೇಶಗಳ ಪಟ್ಟಿಯಲ್ಲಿದೆ. ಇದು ಶ್ರೀಮಂತ ರಾಷ್ಟ್ರವಾಗಬೇಕಾದರೆ ಹೆಚ್ಚು ವೇಗವಾಗಿ ಬೆಳೆಯಬೇಕು. ದೇಶದ ಜಿಡಿಪಿ, ಅಂದರೆ ನಾವು ಉತ್ಪಾದಿಸುವ ಸರಕು ಹಾಗೂ ಸೇವೆಯ ಪ್ರಮಾಣ ಹೆಚ್ಚು ವೇಗವಾಗಿ ಬೆಳೆಯಬೇಕು. ಸದ್ಯಕ್ಕೆ ಅದು ಸುಮಾರಾಗಿ ಶೇಕಡ 6ರಷ್ಟಿದೆ. ಜಿಡಿಪಿಯು ಕನಿಷ್ಠ ಶೇಕಡ 8ರಿಂದ 10ರಷ್ಟಾದರೂ ಹೆಚ್ಚುತ್ತಾ ಹೋಗಬೇಕು ಎಂಬುದು ತಜ್ಞರ ಅಭಿಮತ.

ವಿಶ್ವಬ್ಯಾಂಕ್ನ 2024ರ ಜಾಗತಿಕ ಅಭಿವೃದ್ಧಿ ವರದಿಯ ಪ್ರಕಾರ, ಹಲವು ದೇಶಗಳಲ್ಲಿ ಬೆಳವಣಿಗೆಯ ವೇಗ ನಿಧಾನವಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಭಾರತವೂ ಸೇರಿದಂತೆ 108 ದೇಶಗಳು ಮಧ್ಯಮ ವರಮಾನದ ದೇಶಗಳಾಗಿಯೇ ಉಳಿದುಬಿಡಬಹುದು. ಇಂತಹ ಪರಿಸ್ಥಿತಿಯನ್ನು ಇಂದ್ರಮಿತ್ ಗಿಲ್ ಹಾಗೂ ಹೋಮಿ ಕರಸ್ ತಮ್ಮ ವರದಿಯೊಂದರಲ್ಲಿ ‘ಮಧ್ಯ ವರಮಾನದ ಬಲೆ’– ಮಿಡಲ್ ಇನ್ಕಂ ಟ್ರ್ಯಾಪ್ ಎಂದು ಕರೆದಿದ್ದಾರೆ. ಜಗತ್ತಿನ ಶೇ 75ರಷ್ಟು ಜನ ಈ ದೇಶಗಳಲ್ಲಿದ್ದಾರೆ. ಅವರಲ್ಲಿ ಶೇ 66ರಷ್ಟು ಜನ ತೀರಾ ಬಡತನದಲ್ಲಿದ್ದಾರೆ. ಅಸಮಾನತೆ, ಹವಾಮಾನ ವೈಪರೀತ್ಯದಂತಹ ಎಲ್ಲಾ ಸಮಸ್ಯೆಗಳು ಅವರನ್ನೇ ಹೆಚ್ಚಾಗಿ ಕಾಡುತ್ತಿವೆ.

ಈ ದೇಶಗಳಲ್ಲಿ ಬೆಳವಣಿಗೆಯನ್ನು ಸಾಧಿಸುವುದು ಹೇಗೆ ಎನ್ನುವುದು ಲಾಗಾಯ್ತಿನಿಂದ ಬಹುತೇಕ ಆರ್ಥಿಕ ತಜ್ಞರನ್ನು ಕಾಡುತ್ತಿದೆ. ಈ ವರದಿಯಲ್ಲಿ ಒಂದು ಪರಿಹಾರವನ್ನು ಸೂಚಿಸಲಾಗಿದೆ. ಹಿಂದೆ ಮಧ್ಯಮ ವರಮಾನದ ಗಡಿಯನ್ನು ದಾಟಿಕೊಂಡು ಶ್ರೀಮಂತ ರಾಷ್ಟ್ರಗಳ ಪಟ್ಟಿ ಸೇರಿದ ಕೊರಿಯಾ, ಪೋಲೆಂಡ್, ಚಿಲಿಯಂತಹ ಕೆಲವು ರಾಷ್ಟ್ರಗಳ ಅನುಭವವನ್ನು ಆಧರಿಸಿ ಉಳಿದ ರಾಷ್ಟ್ರಗಳು ಪ್ರಗತಿಯನ್ನು ಸಾಧಿಸುವುದಕ್ಕೆ ಬೇಕಾದ ಕಾರ್ಯಸೂಚಿಯನ್ನು ರೂಪಿಸಲಾಗಿದೆ.

ರಾಷ್ಟ್ರಗಳು ಬೆಳೆದಂತೆ ಅವುಗಳ ಆರ್ಥಿಕ ಸಂರಚನೆಯಲ್ಲೂ ಬದಲಾವಣೆಯಾಗುತ್ತದೆ. ಅದಕ್ಕೆ ಅನುಗುಣವಾಗಿ ಅನುಸರಿಸುವ ಮಾರ್ಗವೂ ಬದಲಾಗುತ್ತಿರಬೇಕು. ಬೆಳವಣಿಗೆಯ ಪ್ರಾರಂಭದ ಹಂತದಲ್ಲಿರುವ ಬಡರಾಷ್ಟ್ರಗಳು ಶಿಕ್ಷಣ, ಆರೋಗ್ಯ, ಮೂಲಸೌಕರ್ಯದಂತಹವುಗಳ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಹೂಡಬೇಕಾಗುತ್ತದೆ. ಬಂಡವಾಳ ಕ್ರೋಡೀಕರಣ ಹಾಗೂ ಹೂಡಿಕೆಯಿಂದ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ಒಂದು ಹಂತದವರೆಗೆ ಬೆಳವಣಿಗೆಯನ್ನು ಸಾಧಿಸಬಹುದು. ಆದರೆ ಮಧ್ಯಮ ವರಮಾನದ ಹಂತಕ್ಕೆ ಬಂದ ಮೇಲೆ ಹೂಡಿಕೆಯ ಹೆಚ್ಚಳವಷ್ಟೇ ಸಾಲುವುದಿಲ್ಲ. ಆರ್ಥಿಕಾಭಿವೃದ್ಧಿಯ ವೇಗವನ್ನು ಹೆಚ್ಚಿಸುವುದಕ್ಕೆ ಆರ್ಥಿಕ ಸಂರಚನೆಯಲ್ಲಿ ಬದಲಾವಣೆ ತರಬೇಕಾಗುತ್ತದೆ. ಹೊಸ ತಂತ್ರಜ್ಞಾನಗಳು, ಚಿಂತನೆಗಳು ಅವಶ್ಯವಾಗುತ್ತವೆ. ಆದರೆ ಅದಕ್ಕೆ ಒದ್ದಾಡಬೇಕಾಗಿಲ್ಲ. ಅಂತಹ ತಂತ್ರಜ್ಞಾನ ಈಗಾಗಲೇ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಲಭ್ಯವಿರುತ್ತದೆ. ಆ ಬಗೆಯ ಚಿಂತನೆಗಳನ್ನು ಎರವಲು ಪಡೆದುಕೊಂಡು ತಮ್ಮ ದೇಶದ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿಕೊಳ್ಳಬಹುದು. ಇದು ಎರಡನೆಯ ಹಂತ. ಇದನ್ನು ವರದಿಯಲ್ಲಿ ಇನ್ಫ್ಯೂಷನ್ ಎಂದು ಕರೆಯಲಾಗಿದೆ.

ಜಾಗತಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕೆ ಸರ್ಕಾರಗಳು ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕು. ಅದಕ್ಕೆ ಬೇಕಾದ ನೀತಿಗಳನ್ನು ರೂಪಿಸಬೇಕು. ಅವಶ್ಯವಾದ ಎಂಜಿನಿಯರುಗಳು, ವಿಜ್ಞಾನಿಗಳಂತಹ ನುರಿತ ಕೆಲಸಗಾರರನ್ನು ಸೃಷ್ಟಿಸುವುದಕ್ಕೆ ಬೇಕಾದ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಕ್ಕೆ ವ್ಯವಸ್ಥೆಗಳನ್ನು ರೂಪಿಸಬೇಕು. ಆದರೆ ಹೀಗೆ ವಿದೇಶಗಳ ತಂತ್ರಜ್ಞಾನವನ್ನೇ ನೆಚ್ಚಿಕೊಂಡು ಆರ್ಥಿಕತೆಯನ್ನು ಬೆಳೆಸುವುದಕ್ಕೆ ಸಾಧ್ಯವಿಲ್ಲ.

ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುವುದಕ್ಕೆ ಮೂರನೆಯ ಹಂತವಾಗಿ ಅವಶ್ಯ ತಂತ್ರಜ್ಞಾನವನ್ನು ದೇಶದೊಳಗೇ ಕಂಡುಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಕೊರಿಯಾ 1960ರಲ್ಲಿ ತೀರಾ ಬಡರಾಷ್ಟ್ರವಾಗಿತ್ತು. ಅದರ ತಲಾ ವರಮಾನವು 1,200 ಡಾಲರ್ಗಿಂತ ಕಡಿಮೆ ಇತ್ತು. ಅದು ತನ್ನ ಉದ್ದಿಮೆಗಳಿಗೆ ವಿದೇಶಗಳಿಂದ ಅದರಲ್ಲೂ ವಿಶೇಷವಾಗಿ ಜಪಾನಿನ ತಂತ್ರಜ್ಞಾನವನ್ನು ನಕಲು ಮಾಡಿಕೊಂಡು ತನ್ನಲ್ಲಿ ಉತ್ಪಾದನೆಯನ್ನು ಸುಧಾರಿಸಿಕೊಳ್ಳತೊಡಗಿತು. ನಂತರದಲ್ಲಿ ಇದಕ್ಕೆ ಜಪಾನಿನ ವಿರೋಧ ವ್ಯಕ್ತವಾಗುತ್ತಿದ್ದಂತೆ, ತನ್ನ ಅವಶ್ಯಕತೆಗೆ ಬೇಕಾದ ತಂತ್ರಜ್ಞಾನಕ್ಕಾಗಿ ಅನ್ವೇಷಣೆಯನ್ನು ಪ್ರಾರಂಭಿಸಿತು. ಅವಶ್ಯ ಪರಿಣತರನ್ನು ಒದಗಿಸುವುದಕ್ಕೆ ಶಿಕ್ಷಣ ಸಚಿವಾಲಯವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ನೀತಿಗಳು, ಯೋಜನೆಗಳನ್ನು ರೂಪಿಸಿಕೊಂಡಿತು. ಇದರ ಫಲವಾಗಿ ಕೊರಿಯಾ ಇಂದು 33,000 ಡಾಲರ್ ತಲಾ ವರಮಾನದ ರಾಷ್ಟ್ರವಾಗಿ ಬೆಳೆದಿದೆ. ಪೋಲೆಂಡ್ ಹಾಗೂ ಚಿಲಿ ಕೂಡ ಸುಮಾರಾಗಿ ಇದೇ ಹಾದಿಯನ್ನು ಹಿಡಿದು ಶ್ರೀಮಂತ ರಾಷ್ಟ್ರಗಳಾಗಿವೆ.

ಹಾಗಾಗಿ, ಬಂಡವಾಳ ಹೂಡಿಕೆ, ವಿದೇಶಗಳ ತಂತ್ರಜ್ಞಾನದ ಬಳಕೆ ಹಾಗೂ ಅಂತಿಮವಾಗಿ ತಂತ್ರಜ್ಞಾನದ ಅನ್ವೇಷಣೆಯ ಮೂಲಕ ಮಧ್ಯಮ ವರಮಾನದ ದೇಶಗಳು ಹಂತ ಹಂತವಾಗಿ ಶ್ರೀಮಂತ ರಾಷ್ಟ್ರಗಳಾಗಿ ಬೆಳೆಯುವುದಕ್ಕೆ ಸಾಧ್ಯ. ಇಲ್ಲದೇಹೋದರೆ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತಗೊಂಡು ಈ ದೇಶಗಳು ಮಧ್ಯಮ ವರಮಾನದ ರಾಷ್ಟ್ರಗಳಾಗಿಯೇ ಶಾಶ್ವತವಾಗಿ ಉಳಿದುಬಿಡುತ್ತವೆ ಎನ್ನುವ ಆತಂಕವು ವರದಿಯಲ್ಲಿ ವ್ಯಕ್ತವಾಗಿದೆ.

ಬೆಳವಣಿಗೆಯನ್ನು ತ್ವರಿತಗೊಳಿಸುವುದಕ್ಕೆ ಗಿಲ್ ಮೂರು ಸಲಹೆಗಳನ್ನು ಸೂಚಿಸಿದ್ದಾರೆ. ಮೊದಲನೆಯದಾಗಿ, ಆರ್ಥಿಕತೆ ಹೆಚ್ಚು ಮುಕ್ತವಾಗಿರಬೇಕು. ನಿರ್ಬಂಧಗಳನ್ನು ಕಡಿಮೆ ಮಾಡಿ ಹೆಚ್ಚು ಉದಾರವಾದಿ ನೀತಿಯನ್ನು ಅನುಸರಿಸಬೇಕು. ಎರಡನೆಯದಾಗಿ, ಆರ್ಥಿಕತೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಇರಬೇಕು. ಮಹಿಳೆಯರು, ಅಲ್ಪಸಂಖ್ಯಾತರಂತಹ ವಂಚಿತ ಸಮುದಾಯಗಳಿಗೆ ಅವಕಾಶ ಕೊಡುವುದರ ಮೂಲಕ, ಲಭ್ಯವಿರುವ ಪ್ರತಿಭೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಮೂರನೆಯದಾಗಿ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.

ಜಾಗತಿಕ ಬ್ಯಾಂಕಿನ ಈ ವರದಿಯ ಕುರಿತಂತೆ ವ್ಯಾಪಕ ಚರ್ಚೆಯಾಗುತ್ತಿದೆ. ಹಲವು ಟೀಕೆಗಳೂ ಬಂದಿವೆ. ಪ್ರತಿ ರಾಷ್ಟ್ರಕ್ಕೂ ಅದರದೇ ಆದ ಚಾರಿತ್ರಿಕ, ಭೌಗೋಳಿಕ ಹಿನ್ನೆಲೆ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಒತ್ತಡಗಳು ಇರುತ್ತವೆ. ಎಲ್ಲ ದೇಶಗಳಿಗೂ ಒಂದೇ ರೀತಿಯ ಪರಿಹಾರ ಸಾಧ್ಯವಿಲ್ಲ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದಾರೀಕರಣದಂತಹ ನೀತಿಯೇ ಈಗಿನ ಆರ್ಥಿಕ ಸಮಸ್ಯೆಗಳಿಗೆ ಕಾರಣ ಅನ್ನುವುದು ನಿಜವಾದರೆ, ಅದನ್ನು ಮುಂದುವರಿಸಿದರೆ ಬಿಕ್ಕಟ್ಟು ಪರಿಹಾರವಾಗುವ ಬದಲು ತೀವ್ರವಾಗಬಹುದು ಎನ್ನುವ ಅನುಮಾನವೂ ಇದೆ. ಹಾಗೆಯೇ ಆಧುನಿಕ ತಂತ್ರಜ್ಞಾನದಿಂದ ಉತ್ಪಾದನೆಯನ್ನು ಹೆಚ್ಚಿಸಬಹುದು. ಆದರೆ ಉತ್ಪಾದಿಸಿದ ವಸ್ತುಗಳಿಗೆ ಬೇಡಿಕೆ ಇರಬೇಕು.

ಭಾರತದಂತಹ ದೇಶಗಳಲ್ಲಿನ ನಿಜವಾದ ಸಮಸ್ಯೆಯೆಂದರೆ ಬೇಡಿಕೆಯ ಕೊರತೆ. ಮಾರಾಟಕ್ಕೆ ಎಲ್ಲಾ ದೇಶಗಳು ರಫ್ತನ್ನು ನೆಚ್ಚಿಕೊಳ್ಳುವುದಕ್ಕೆ ಆಗುವುದಿಲ್ಲ. ಕ್ರಮೇಣ ಆ ದೇಶಗಳು ತಮ್ಮಲ್ಲಿನ ಉದ್ದಿಮೆಗಳನ್ನು ರಕ್ಷಿಸಿಕೊಳ್ಳಲು ಆಮದನ್ನು ನಿಯಂತ್ರಿಸಬಹುದು. ಜೊತೆಗೆ ಸರ್ಕಾರಗಳು ಬೆಳವಣಿಗೆಯನ್ನು ತೀವ್ರಗೊಳಿಸುವ ಭರದಲ್ಲಿ ಬಡವರಿಗೆ ತೊಂದರೆಯಾಗುವ ನೀತಿಗಳನ್ನು ರೂಪಿಸುವ ಸಾಧ್ಯತೆಯೂ ಇದೆ. ಬಹುತೇಕ ಸರ್ಕಾರಗಳು ಉತ್ಪಾದನೆಯನ್ನು ಉತ್ತೇಜಿಸುವುದಕ್ಕಾಗಿ ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆಯನ್ನು ಕಡಿತ ಮಾಡುತ್ತಿವೆ. ಅದರ ಹೊರೆ ಜನಸಾಮಾನ್ಯರ ಮೇಲೆ ಬೀಳುತ್ತದೆ. ಜನಕಲ್ಯಾಣ ಕಾರ್ಯಕ್ರಮಗಳಿಗೆ ಹೊಡೆತ ಬೀಳುತ್ತದೆ. ಬೆಳವಣಿಗೆಯ ಖಾತರಿಯೂ ಇಲ್ಲ.

ಭಾರತದ ಆರ್ಥಿಕತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಶಿಕ್ಷಣಕ್ಕೆ ಹಣ ಖರ್ಚು ಮಾಡುತ್ತಿದ್ದೇವೆ. ಆದರೆ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಮಕ್ಕಳಿಗೆ ಓದುವ ಸಾಮರ್ಥ್ಯ ಬಂದಿಲ್ಲ. ಆಹಾರದ ಸುಭದ್ರತೆಗೆ ಯೋಜನೆಗಳಿವೆ. ಆದರೆ ಅಪೌಷ್ಟಿಕತೆಯ ಸಮಸ್ಯೆ ಪರಿಹಾರವಾಗಿಲ್ಲ. ಹಲವಾರು ಆರ್ಥಿಕ ಯೋಜನೆಗಳು ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿಲ್ಲ. ಜೊತೆಗೆ ಕೆಲವು ರಾಜ್ಯಗಳಷ್ಟೇ ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಅಲ್ಲೂ ಹಿನ್ನಡೆ ಪ್ರಾರಂಭವಾದರೆ ಒಟ್ಟಾರೆಯಾಗಿ ಭಾರತದ ಆರ್ಥಿಕತೆ ಸೊರಗುತ್ತದೆ.

ಶಾಶ್ವತವಾದ ಅಭಿವೃದ್ಧಿಗೆ ಖಾತರಿಯಾದ ಒಂದು ಕ್ರಮ ನಮಗೆ ತಿಳಿದಿಲ್ಲ. ಬರೀ ಜಿಡಿಪಿಯ ಹೆಚ್ಚಳವೇ ಆರ್ಥಿಕ ಅಭಿವೃದ್ಧಿಯ ಉದ್ದೇಶ ಆಗಬಾರದು. ಗುಣಮಟ್ಟದ ಶಿಕ್ಷಣ, ಆರೋಗ್ಯ, ಸಮಾನತೆ ಇವೆಲ್ಲಾ ಆರ್ಥಿಕ ಅಭಿವೃದ್ಧಿ ಯೋಜನೆಯ ಭಾಗವಾಗಬೇಕು. ಜಾಗತಿಕ ಬ್ಯಾಂಕಿನ ವರದಿಯನ್ನು ಒಂದು ಗಂಭೀರವಾದ ಎಚ್ಚರಿಕೆಯನ್ನಾಗಿ ಪರಿಗಣಿಸಿ, ಬೇರೆ ದೇಶಗಳ ಅನುಭವದಿಂದಲೂ ಕಲಿಯುತ್ತಾ, ನಮ್ಮದೇ ಆದ ದಾರಿಯನ್ನು ಕಂಡುಕೊಳ್ಳುವ ದಿಸೆಯಲ್ಲಿ ಒಂದು ಪ್ರಾಮಾಣಿಕ ಪ್ರಯತ್ನ ನಡೆಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.