ಕರ್ನಾಟಕದ ರಾಜಕೀಯ ರಂಗದ ಮೇಲೆ ಕೆಲವು ವಾರಗಳಿಂದ ‘ಮುಡಾ’ ಹೆಸರಿನ ವಿನೂತನ ಪ್ರಹಸನವೊಂದು ಅತ್ಯಂತ ಅದ್ದೂರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ‘ಮರೆಯದೇ ನೋಡಿ, ಮರೆತು ಮರುಗದಿರಿ’, ‘ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನ್ನಿಸುವ ನಾಟಕ’ ಎಂದು ಯಾರೂ ಹ್ಯಾಂಡ್‌ಬಿಲ್ ಹಂಚದಿದ್ದರೂ ಪ್ರೇಕ್ಷಕರು ಮುಗಿಬೀಳುವಂತಾಗಿರುವುದು ಈ ಪ್ರದರ್ಶನದ ವಿಶೇಷ ಆಕರ್ಷಣೆ. ರಂಗಪ್ರೇಮಿಗಳ ಈ ಪರಿ ಸೆಳೆತಕ್ಕೆ ಪಾತ್ರಧಾರಿಗಳ ಆರ್ಭಟ, ಡೈಲಾಗ್ ಡೆಲಿವರಿಯ ಶೈಲಿ, ಭಾಷಾ ಸೌಂದರ್ಯ, ವೈಯಾಕರಣಿಗಳನ್ನು ಬೆರಗುಗೊಳಿಸುವಂತಹ ಪದ ಪ್ರಯೋಗಗಳು ಕಾರಣವಾಗಿವೆ ಎಂಬುದು ರಂಗತಜ್ಞರ ವಿವರಣೆ.
ಮೈಸೂರಿನ ಯಶಸ್ವಿ ಪ್ರಯೋಗದಿಂದ ಆನಂದತುಂದಿಲರಾದ ಶ್ರೀ ಶ್ರೀ ಪಟ್ಟಭದ್ರೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಪ್ರಮುಖರು ಇದೀಗ ರಂಗದ ಮೇಲೆ ಬಂದು ಪ್ರಹಸನದ ಎರಡನೇ ಭಾಗವನ್ನು ಘೋಷಿಸಿ, ‘ಹಿಂದಿನಂತೆಯೇ ಮುಂದಿನ ಪ್ರಯೋಗವನ್ನೂ ಪ್ರೋತ್ಸಾಹಿಸಲು’ ಕಲಾಭಿಮಾನಿಗಳಲ್ಲಿ ಬಿನ್ನವಿಸಿಕೊಂಡಿದ್ದಾರೆ. ಪಾತ್ರ ವಹಿಸಲು ಪರವೂರುಗಳಿಂದ ಘಟಾನುಘಟಿ ನಟರು ಆಗಮಿಸುವ ಸುಳಿವನ್ನೂ ನೀಡಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ನಾಟಕವನ್ನು ರಂಗದ ಮೇಲೆಯೇ ನೋಡಿ ದುಃಖಿಸುವ, ತಲೆತಗ್ಗಿಸುವ ಅಮೋಘ ಅವಕಾಶವು ಪ್ರೇಕ್ಷಕಪ್ರಭುಗಳಿಗೆ ಇರುವುದರಿಂದ, ಇಲ್ಲಿ ಓದುಗರಿಗಾಗಿ ನಾಟಕದ ವಸ್ತು-ಹಿನ್ನೆಲೆಯನ್ನು ಮಾತ್ರ ಒಂದಿಷ್ಟು ಒರೆಗೆ ಹಚ್ಚಬಹುದು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಡದಿ ಪಾರ್ವತಿಯವರಿಗೆ ಹಂಚಿಕೆ ಮಾಡಿದ ಹದಿನಾಲ್ಕು ಬದಲಿ ನಿವೇಶನಗಳ ಪ್ರಕರಣವು ಬಹು ಆಯಾಮಗಳನ್ನು, ಪ್ರಭಾವವನ್ನು, ಪರಿಣಾಮವನ್ನು ಹೊಂದಿದ ವಿವಾದ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಅಂತೆಯೇ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ತಮ್ಮೆಲ್ಲಾ ಅನುಭವ, ಬುದ್ಧಿವಂತಿಕೆ, ಹೋರಾಟ ಮತ್ತು ಮಾತುಗಾರಿಕೆಯನ್ನು ಈ ವಿಷಯದ ಸುತ್ತ ವಿನಿಯೋಗಿಸಲು ಮುಂದಾಗಿವೆ. ಎರಡೂ ರಾಷ್ಟ್ರೀಯ ಪಕ್ಷಗಳ ದೆಹಲಿ ನಾಯಕರಿಗೆ ಕೂಡ ಈ ವಿವಾದದ ಪ್ರಾಮುಖ್ಯ ಅರಿವಾಗಿರುವುದರಿಂದ, ಸ್ಥಳೀಯ ನಾಯಕತ್ವಗಳಿಗೆ ಬಹಳಷ್ಟು ಆಕ್ರಮಣಕಾರಿ ನಿರ್ದೇಶನಗಳನ್ನು ನೀಡುತ್ತಿವೆ. ಹಾಗಾಗಿಯೇ ಸ್ಥಳೀಯ ಹೊಂದಾಣಿಕೆ ರಾಜಕಾರಣ, ಅನುಕೂಲಸಿಂಧು ನಡವಳಿಕೆ ಶಿಥಿಲಗೊಂಡು, ಬಿಜೆಪಿ-ಜೆಡಿಎಸ್ ‘ಮೈಸೂರು ಚಲೋ’ ಪಾದಯಾತ್ರೆ ಮತ್ತು ಕಾಂಗ್ರೆಸ್ ಪಕ್ಷದ ಜನಾಂದೋಲನ ಸಭೆಗಳು ನಿರೀಕ್ಷೆ ಮೀರಿ ಸಂಘರ್ಷದ ವಾತಾವರಣ ಸೃಷ್ಟಿಸಿವೆ. ನಿಧಾನಗತಿಯಲ್ಲೋ ನನೆಗುದಿಯಲ್ಲೋ ಇದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳ ತನಿಖೆಗೆ ಈಗ ವೇಗ ದೊರಕಲೂ ಸಾಧ್ಯವಾಗಿದೆ.
ರಾಜ್ಯ ರಾಜಕಾರಣದ ಮಟ್ಟಿಗೆ ಹೊಸದಲ್ಲದ ಹೊಂದಾಣಿಕೆ ರಾಜಕಾರಣದ ಒಳಸುಳಿಗಳು ಹೊರಬೀಳಲು ಸಹ ಮುಡಾ ಸಂಘರ್ಷ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗೆದ್ದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಕ್ಷೇತ್ರದಲ್ಲಿ ಅಷ್ಟೇನೂ ಜನಪ್ರಿಯರಲ್ಲದ ವ್ಯಕ್ತಿಗೆ ಟಿಕೆಟ್ ನೀಡಿತ್ತು. ‘ಇದನ್ನು ವಿಜಯೇಂದ್ರ ಸದಾ ಗಮನದಲ್ಲಿ ಇಟ್ಟುಕೊಳ್ಳಬೇಕು’ ಎಂಬ ಹಿತವಚನವನ್ನೂ ಶಿವಕುಮಾರ್ ನೀಡಿದ್ದಾರೆ. ಶಿಕಾರಿಪುರ ಮತ್ತು ವರುಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಯಡಿಯೂರಪ್ಪನವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬ ಬಸನಗೌಡ ಪಾಟೀಲ ಯತ್ನಾಳ ಮತ್ತು ಕೆ.ಎಸ್.ಈಶ್ವರಪ್ಪ ಅವರ ನಿರಂತರ ಆರೋಪಕ್ಕೆ ಈ ಮಾತುಗಳು ಪುಷ್ಟಿ ನೀಡಿವೆ.
ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮುಡಾ ನಿವೇಶನ ಹಂಚಿಕೆಯ ಆರೋಪ ಕೇಳಿಬಂದಾಗ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮೈಸೂರಿಗೆ ದೌಡಾಯಿಸಿ ಹಲವು ಹಾನಿನಿವಾರಕ ಕ್ರಮಗಳಿಗೆ ಮುಂದಾಗಿದ್ದರು. ಮುಡಾ ಆಯುಕ್ತರ ಜೊತೆಗೆ ಮೂವರು ಅಧಿಕಾರಿಗಳ ವರ್ಗಾವಣೆ ಮಾಡಲಾಯಿತು. ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿತ್ತು. ವಿಧಾನಸಭೆ ಅಧಿವೇಶನ ಆರಂಭವಾಗುವ ಹಿಂದಿನ ದಿನವೇ ಮುಡಾ ಹಗರಣದ ತನಿಖೆಗಾಗಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಲಾಯಿತು. ನಂತರ ವಿಧಾನಸೌಧದಲ್ಲಿ ಗದ್ದಲ, ವಿರೋಧ ಪಕ್ಷಗಳ ಪಾದಯಾತ್ರೆ, ಆಡಳಿತ ಪಕ್ಷದ ಜನಾಂದೋಲನ, ರಾಜ್ಯಪಾಲರ ಷೋಕಾಸ್ ನೋಟಿಸ್, ಮಂತ್ರಿ ಪರಿಷತ್ತಿನ ಉತ್ತರ… ಘಟನಾವಳಿಗಳ ಈ ಸರಣಿ ಇದೀಗ ಮತ್ತೊಂದು ಮಜಲಿಗೆ ಏರಿದೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡುವ ಮೂಲಕ ತೀವ್ರ ಸ್ವರೂಪದ ಸಂಘರ್ಷಕ್ಕೆ ಚಾಲನೆ ನೀಡಿದ್ದಾರೆ. ಈ ತಿಕ್ಕಾಟಕ್ಕೆ ಸಾಮಾಜಿಕ, ರಾಜಕೀಯ, ಕಾನೂನು ಮತ್ತು ನೈತಿಕ ಸ್ತರಗಳಿರುವುದು ಗಮನಾರ್ಹ.
ಈ ಬೆಳವಣಿಗೆಗಳು, ‘ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಅಹಿಂದ ನೇತಾರ ಸಿದ್ದರಾಮಯ್ಯ ಅವರ ವಿರುದ್ಧದ ಪಿತೂರಿ’ ಎಂಬ ಖಚಿತ ನಿಲುವನ್ನು ಕಾಂಗ್ರೆಸ್ ಪಕ್ಷ ತಾಳಿದೆ. ರಾಜ್ಯಪಾಲರ ಹುದ್ದೆಯ ದುರ್ಬಳಕೆ ಮತ್ತು ಚುನಾಯಿತ ಸರ್ಕಾರವನ್ನು ಕೆಡಹುವ ಹುನ್ನಾರದ ವಿರುದ್ಧ ರಾಜಕೀಯ ಮತ್ತು ಕಾನೂನು ಹೋರಾಟಕ್ಕೆ ಇಳಿದಿದೆ.
ಎಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಮತ್ತು ಜನಾರ್ದನ ರೆಡ್ಡಿ ಅವರ ವಿರುದ್ಧದ ತನಿಖೆಗೆ ಮಂಜೂರಾತಿ ಕೋರಿದ ಅರ್ಜಿಗಳು ರಾಜ್ಯಪಾಲರ ಮೇಜಿನ ಮೇಲೆ ತಿಂಗಳಾನುಗಟ್ಟಲೆ ಬಾಕಿ ಉಳಿದಿರುವಾಗ ಸಿದ್ದರಾಮಯ್ಯನವರ ವಿರುದ್ಧದ ಮನವಿಯನ್ನು ತರಾತುರಿಯಲ್ಲಿ ವಿಲೇವಾರಿ ಮಾಡಿದ್ದೇಕೆ ಎಂಬುದು ಎಲ್ಲರಿಗೂ ಉತ್ತರ ಗೊತ್ತಿರುವ ಪ್ರಶ್ನೆ! ಆರೋಪ ಹೊತ್ತು ಅಧಿಕಾರದಲ್ಲೇಕೆ ಇರಬೇಕು, ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂಬ ವಾದ ಮಂಡಿಸುವ ಬಿಜೆಪಿ, 2011ರಲ್ಲಿ ಇಂತಹುದೇ ಸನ್ನಿವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿದರ್ಶನವನ್ನು ಆದರ್ಶವೆಂಬಂತೆ ಮುಂದಿಡುತ್ತಿದೆ.
ಎರಡೂ ಪಾಳಯದ ನಾಯಕಮಣಿಗಳು ರಾಜಕೀಯ ಮತ್ತು ಕಾನೂನು ವಿಷಯದಲ್ಲಿ ವಿಶೇಷ ಪರಿಣತಿ ಸಾಧಿಸಿದವರು ಎಂಬುದು ನಿರ್ವಿವಾದ. ರಾಜಕೀಯ ಪರಿಭಾಷೆಯಲ್ಲಿ ಆರೋಪ, ಪ್ರತ್ಯಾರೋಪ ಮಾಡುವ ಅವರೆಲ್ಲರ ಸಾಮರ್ಥ್ಯ ಪ್ರಶ್ನಾತೀತ. ಇವರಲ್ಲಿ ಬಹಳಷ್ಟು ಜನ ಕಾನೂನು ತಜ್ಞರೂ ಹೌದು. ಆದರೆ ಎರಡೂ ಬದಿಯಲ್ಲಿ ಕಾಣೆಯಾಗಿರುವುದು ಸಾರ್ವಜನಿಕ ಬದುಕಿನ ಜೀವದ್ರವ್ಯ ಆಗಬೇಕಿದ್ದ ನೈತಿಕತೆ. ಮತ ನೀಡಿ ಗೆಲ್ಲಿಸುವ ಜನರಲ್ಲಿಯೇ ಇಲ್ಲದಿರುವ ನೈತಿಕತೆಯನ್ನು ಜನಪ್ರತಿನಿಧಿಗಳಲ್ಲಿ ನಿರೀಕ್ಷಿಸುವುದು ಎಷ್ಟು ಸರಿ ಎಂಬುದೂ ಪರಿಶೀಲನೆಗೆ ಅರ್ಹವೇ!
ಇಷ್ಟೊಂದು ಸದ್ದು ಮಾಡಿದ ಗಂಭೀರ ಆರೋಪದ ಬಗ್ಗೆ ತನಿಖೆ ನಡೆಯಬೇಕೆಂಬುದನ್ನು ಯಾವ ನ್ಯಾಯನಿಷ್ಠುರಿಯೂ ನಿರಾಕರಿಸಲು ಸಾಧ್ಯವಾಗದು. ಇನ್ನಿತರರ ಮೇಲಿರುವ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ರಾಜ್ಯಪಾಲರು ತಕ್ಷಣ ನಿರ್ಧಾರ ಪ್ರಕಟಿಸುವುದೂ ಅತ್ಯಗತ್ಯ. ಆದರೆ ಯಾವ ರೀತಿಯಲ್ಲಿ, ಯಾರಿಂದ ತನಿಖೆ ನಡೆದರೆ ಸತ್ಯಸಂಗತಿ ಹೊರಬರುತ್ತದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಯಾವ ರೀತಿಯಲ್ಲಿ ತನಿಖೆ ಸೂಕ್ತ ಎಂಬುದನ್ನು ಆರೋಪಕ್ಕೆ ಈಡಾದವರ ನೇತೃತ್ವದ ಸರ್ಕಾರ ನಿರ್ಧರಿಸುವುದರಲ್ಲಿ ಹಿತಾಸಕ್ತಿ ಸಂಘರ್ಷ ಏರ್ಪಡುವುದರಿಂದ ಸಮಂಜಸ ಎನ್ನಿಸುವುದಿಲ್ಲ. ಹಾಗೆಯೇ ಆರೋಪ ಹೊರಿಸಿದವರ ಅಪೇಕ್ಷೆಯಂತೆ ತನಿಖಾ ವಿಧಾನ ನಿರ್ಧಾರವಾಗುವುದೂ ಸೂಕ್ತವಾಗಲಾರದು.
ಅಧಿಕಾರದಲ್ಲಿ ಇರುವವರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಬರೀ ಆರೋಪವಾಗಿಯೇನೂ ಉಳಿದಿಲ್ಲ; ಅದು ಸಾಬೀತಾಗಿರುವ ಸತ್ಯ. ಆದ್ದರಿಂದ ರಾಜ್ಯ ಅಥವಾ ಒಕ್ಕೂಟ ಸರ್ಕಾರದ ನೆರಳಿನಲ್ಲಿ ಕಾರ್ಯ ನಿರ್ವಹಿಸುವ ಯಾವ ‘ಸ್ವಾಯತ್ತ’ ತನಿಖಾ ಸಂಸ್ಥೆಯಿಂದಲೂ ನಿಷ್ಪಕ್ಷಪಾತ ತನಿಖೆ ನಡೆಯುವ ಸಂಭವ, ನಂಬಿಕೆ ಇಲ್ಲವಾಗಿದೆ. ಅಂತಿಮವಾಗಿ ಉನ್ನತ ನ್ಯಾಯಾಲಯದ ಕಣ್ಗಾವಲಿನಲ್ಲಿ ಆರೋಪಗಳ ನಿಷ್ಕರ್ಷೆ ಆಗುವುದೇ ಸದ್ಯದ ಸ್ಥಿತಿಯಲ್ಲಿ ಏಕೈಕ ಮಾರ್ಗ ಅನ್ನಿಸುತ್ತದೆ. ಇದಕ್ಕೆ ಪೂರಕವಾಗಿ ನಾಗರಿಕ ಸಮಾಜದ ಜಾಗೃತ ಮನಸ್ಸುಗಳು ನಿಗಾ ವಹಿಸಿದರೆ ಆಶಾದಾಯಕ ಫಲಿತಾಂಶವನ್ನು ನಿರೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.