ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ದಾಂಪತ್ಯ ಮತ್ತು ಕಲಹದ ಸಾಂಗತ್ಯ!

ರಚನಾತ್ಮಕವಾದ ಜಗಳದಿಂದ ಸಂಬಂಧ ಸುಧಾರಣೆ ಸಾಧ್ಯ ಎನ್ನುತ್ತದೆ ಅಧ್ಯಯನ
Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ಅಕ್ಷರ ಗಾತ್ರ

ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಹಿರಿಯ ಮನೋವೈದ್ಯರ ಬಳಿ ಚಿಕಿತ್ಸೆಗೆಂದು ಬಂದಿದ್ದರು. ಜೊತೆಗೆ ಬಂದಿದ್ದ ಆಕೆಯ ಪತಿ ಹೇಳಿದ್ದು- ‘ಡಾಕ್ಟ್ರೇ, 25 ವರ್ಷಗಳ ದಾಂಪತ್ಯ ಜೀವನದಲ್ಲಿ ನಮ್ಮಿಬ್ಬರ ಮಧ್ಯೆ ಒಂದೇ ಒಂದು ಬಾರಿಯೂ ಜಗಳ ನಡೆದಿಲ್ಲ. ಹೀಗಿರುವಾಗ, ಇವಳಿಗೆ ಈ ರೀತಿ ಖಿನ್ನತೆ ಬರೋದಿಕ್ಕೆ ಹೇಗೆ ಸಾಧ್ಯ? ಅದಕ್ಕೆ ಕಾರಣವಾದರೂ ಏನು?’

ಆಗ ಆ ಮನೋವೈದ್ಯರು ನಕ್ಕು ‘ನೀವಿಬ್ಬರೂ ಮನೆಗೆ ಹೋಗಿ ಚೆನ್ನಾಗಿ ಜಗಳವಾಡಿ. ನನ್ನ ಚಿಕಿತ್ಸೆಯು ನಿಮ್ಮ ಖಿನ್ನತೆಯನ್ನು ತಾತ್ಕಾಲಿಕವಾಗಿ ಸರಿ ಮಾಡಬಹುದು. ಆದರೆ ಅದು ಮರುಕಳಿಸಬಾರದೆಂದರೆ ನೀವಿಬ್ಬರೂ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು. ನಿಮ್ಮ ನಡುವೆ ಭಿನ್ನಾಭಿಪ್ರಾಯಗಳೇನಾದರೂ ಇದ್ದರೆ ಇಬ್ಬರೂ ಅವುಗಳನ್ನು ಹೊರಗೆ ಹಾಕುವ ಮೂಲಕ ಪರಿಹರಿಸಿಕೊಳ್ಳಬೇಕು. ಹೀಗಾಗಿ, ಮೊದಲು ಸರಿಯಾಗಿ (ರಚನಾತ್ಮಕವಾಗಿ) ಜಗಳವಾಡುವುದನ್ನು ಕಲಿಯಿರಿ’ ಎಂದರು!  ಮನೋವೈದ್ಯರು ‘ಜಗಳವಾಡದೆ ಸೌಹಾರ್ದದಿಂದ ಇರಿ’ ಎನ್ನುವ ಬದಲು ‘ಸರಿಯಾಗಿ ಜಗಳವಾಡಿ’ ಎಂದದ್ದು ಅಚ್ಚರಿಯ ಸಂಗತಿಯಲ್ಲವೇ?

ಎಲ್ಲ ಬಗೆಯ ಸಂಬಂಧಗಳಲ್ಲೂ ಕಲಹ ಉಂಟಾಗುವುದು ಸಾಮಾನ್ಯ ಸಂಗತಿಯಾದರೂ ‘ದಾಂಪತ್ಯ ಕಲಹ’ ಎನ್ನುವುದು ಮಾತ್ರ ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ. ‘ಹೆಂಡತಿಯ ಕೈಯಲ್ಲಿ ಬುದ್ಧಿವಂತ ಅನ್ನಿಸಿಕೊಂಡ ಗಂಡ ಇಲ್ಲ’ ಎಂದು ಜಗತ್ತು ಹೇಳಿದರೆ, ‘ನಾನು ಮಾಡಿದ ಕೆಲಸ ಇವರೊಬ್ಬರಿಗೆ ಮಾತ್ರ ಸರಿಹೋಗದು, ಉಳಿದ ಎಲ್ಲರೂ ನನ್ನನ್ನು ಹೊಗಳುತ್ತಾರೆ’ ಎಂದು ಎಷ್ಟೋ ಮಹಿಳೆಯರು ಅಲವತ್ತುಕೊಳ್ಳುತ್ತಾರೆ.

ಅಮೆರಿಕದ ಡಾ. ಜಾನ್‌ ಗೊಟ್‌ಮನ್‌ ಮತ್ತು ಡಾ. ಜೂಲಿ ಸ್ಕ್ವಾರ್ಟ್ಸ್‌ ಗೊಟ್‌ಮನ್‌ ಎಂಬ ಇಬ್ಬರು ವಿಜ್ಞಾನಿಗಳು ಸೇರಿ ನಡೆಸುವ, ‘ಗೊಟ್‍ಮನ್ ವಿಧಾನ’ ಎಂದೇ ಕರೆಯಲಾಗುವ ‘ದಂಪತಿ ಚಿಕಿತ್ಸೆ’ಯು ಗಮನಾರ್ಹವಾದುದು. ಈ ಮೂಲಕ 52 ವರ್ಷಗಳಿಂದ ‘ಪ್ರೀತಿಯ ಪ್ರಯೋಗಶಾಲೆ’ಯನ್ನೇ ನಡೆಸುತ್ತಾ ಬಂದಿರುವ ಈ ಜೋಡಿ, ಒಂದಾದ ಮೇಲೊಂದರಂತೆ, ದಾಂಪತ್ಯ ಕಲಹದ ಬಗೆಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ. ಈ ಎಲ್ಲಾ ಅಧ್ಯಯನಗಳ ಸಾರ ಏನು ಗೊತ್ತೇ? ದಾಂಪತ್ಯದಲ್ಲಿ ಜಗಳ ಎನ್ನುವುದು ಬೇಕೇ ಬೇಕು ಎನ್ನುವುದು! ಅಂದರೆ ಪರಸ್ಪರ ಸಂಬಂಧ ಗಟ್ಟಿಯಾಗಲು ಒಂದು ಇತಿಮಿತಿಯೊಳಗೆ ರಚನಾತ್ಮಕವಾದ ಜಗಳ ಅವಶ್ಯಕ ಎಂದರ್ಥ!

ಇಂಥ ಅಧ್ಯಯನಗಳಲ್ಲಿ ದಂಪತಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವ ರೀತಿಯನ್ನು ಮೊದಲು ಪರಿಶೀಲಿಸಲಾಯಿತು. ಒಂದೆಡೆ ಅವರ ಮಾತುಕತೆಯನ್ನು ಮುದ್ರಿಸಿಕೊಂಡರೆ, ಮತ್ತೊಂದೆಡೆ, ಆ ಸಂದರ್ಭದಲ್ಲಿನ ಅವರ ಎದೆಬಡಿತ, ಉಸಿರಾಟದ ಏರಿಳಿತ, ಒತ್ತಡದ ರಸದೂತಗಳನ್ನು ದಾಖಲಿಸಲಾಯಿತು. ತಮ್ಮ ದಿನಚರಿ, ತಮ್ಮ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ವಿಷಯಗಳು ಸೇರಿದಂತೆ ದೈನಂದಿನ ಸಂಗತಿಗಳ ಬಗೆಗೆ ದಂಪತಿಗಳು ಉಭಯ ಕುಶಲೋಪರಿಯ ರೀತಿಯಲ್ಲಿ ಮಾತನಾಡಿದರು. ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಅವರು ಈ ಚಿಕಿತ್ಸಾ ಕೇಂದ್ರಕ್ಕೆ ಬರುವುದು, ಆಗಲೂ ಇದೇ ರೀತಿಯ ಮಾತುಕತೆಯನ್ನು ನಡೆಸುವುದು, ಅವುಗಳ ದಾಖಲೀಕರಣವು 20 ದೀರ್ಘ ವರ್ಷಗಳವರೆಗೂ ನಿರಂತರವಾಗಿ ನಡೆಯಿತು. ಸುಮಾರು 3,000 ದಂಪತಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರ ಮಾತು, ಹಾವಭಾವ, ದೇಹದ ಸ್ಥಿತಿ ಎಲ್ಲವನ್ನೂ ‘ಪ್ರೀತಿಯ ಪ್ರಯೋಗಶಾಲೆ’ಯಲ್ಲಿ ಎಷ್ಟರಮಟ್ಟಿಗೆ ಅಧ್ಯಯನ ಮಾಡಲಾಯಿತೆಂದರೆ, ಒಂದು ಜೋಡಿಯನ್ನು ಕೆಲಕ್ಷಣ ವೀಕ್ಷಿಸಿ, ಒಂದಷ್ಟು ವರ್ಷಗಳ ನಂತರ ಅವರ ನಡುವಿನ ಸಂಬಂಧ ಹೇಗಿರಬಹುದು ಎಂಬುದನ್ನು ಈ ವಿಜ್ಞಾನಿಗಳು ಶೇಕಡ 90ರಷ್ಟು ನಿಖರವಾಗಿ ಹೇಳಬಲ್ಲವರಾದರು!

ಛೇ ಛೇ! ಇದೆಲ್ಲಾ ಅಮೆರಿಕದಲ್ಲಿ ಸರಿ, ನಮ್ಮ ಭಾರತದಲ್ಲಿ ಆ ರೀತಿಯೆಲ್ಲ ನಡೆಯದು ಎಂದು ನೀವು ಹೇಳಬಹುದು. ಗಂಡ-ಹೆಂಡತಿ ನಡುವಣ ಕಲಹಗಳಲ್ಲಿ ಮೂರು ಮುಖ್ಯವಾದ ವಿಧಗಳನ್ನು ಗುರುತಿಸಲಾಗಿದೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ದಾಂಪತ್ಯ ಕಲಹವು ಸಾರ್ವತ್ರಿಕವಾದುದು, ಅದಕ್ಕೆ ಯಾವ ಕಾಲ, ದೇಶಗಳ ಭೇದವೂ ಇಲ್ಲ ಎಂಬುದು ಗೊತ್ತಾಗಿ ಹೋಗುತ್ತದೆ. ಕೆಲವರಿಗೆ ಜಗಳದ ತಲೆನೋವೇ ಬೇಕಾಗಿರುವುದಿಲ್ಲ. ಅಂತಹವರು ಜಗಳಕ್ಕೆ ಹೆದರಿಕೊಂಡು ಸುಮ್ಮನಾಗಿಬಿಡುತ್ತಾರೆ. ಇನ್ನು ಕೆಲವರಿಗೆ ಸಮಸ್ಯೆ ಏನು ಎಂದು ಹೇಳಲು ಬರುತ್ತದೆ, ಆದರೆ ಅವರು ತತ್‍ಕ್ಷಣವೇ ಅದಕ್ಕೆ ಪರಿಹಾರ ಬಯಸುತ್ತಾರೆ. ಉಳಿದವರು, ಅಂದರೆ ನಮ್ಮಲ್ಲಿ ಹೆಚ್ಚಿನವರು ರೆಕ್ಕೆಪುಕ್ಕ ಕೆದರಿಕೊಂಡು ‘ನಾನು ಸರಿಯಿದ್ದೇನೆ. ನನ್ನ ಗಂಡ ಅಥವಾ ಹೆಂಡತಿಯೇ ಸರಿಯಿಲ್ಲ’ ಎಂಬುದನ್ನು ನಿರೂಪಿಸಲು ಪಣ ತೊಟ್ಟವರಂತೆ ಕಾದಾಡುತ್ತೇವೆ. ಹೀಗೆ ಜಗಳಗಳ ರೀತಿ ಯಾವುದೇ ಇರಲಿ, ಇವೆಲ್ಲದರ ಮಧ್ಯೆಯೂ ದಂಪತಿಯ ಸಂಬಂಧ ಗಟ್ಟಿಯಾಗಿರಲು ಸಾಧ್ಯವಿದೆ ಎನ್ನುವುದೇ ಸಮಾಧಾನದ ಸಂಗತಿ.

ಕಲಹದಿಂದ ಸಂಬಂಧ ಕೆಡುವುದು ಯಾವಾಗ? ಕಲಹದ ಮಾತುಗಳಲ್ಲಿ ಅಸಹ್ಯ, ವ್ಯಂಗ್ಯ, ಅಪಮಾನ ನುಸುಳಿದಾಗ, ನಮ್ಮ ತಪ್ಪಿದ್ದೂ ನಾವು ಮುಗ್ಧರಂತೆ ಮತ್ತೆ ಮತ್ತೆ ನಟಿಸತೊಡಗಿದಾಗ, ನಮ್ಮ ಕಿವಿಗಳನ್ನು ಕಿವುಡು ಮಾಡಿಕೊಂಡು ಸಂಗಾತಿಯ ಮಾತನ್ನು ಪೂರ್ತಿ ನಿರ್ಲಕ್ಷಿಸಿದಾಗ. ಸ್ವಾರಸ್ಯಕರ ಸಂಗತಿಯೆಂದರೆ, ಹೀಗೆ ಮಾಡುವಾಗ ಹೊರಗೆ ನಟನೆ, ನಿರ್ಲಕ್ಷ್ಯ ಕಂಡರೂ ಒಳಗೆ ಆತ ಅಥವಾ ಆಕೆಯ ಎದೆಬಡಿತ ಜೋರಾಗಿಯೇ ಇರುತ್ತದೆ!

ಹಾಗಾದರೆ ರಚನಾತ್ಮಕವಾಗಿ ಜಗಳವಾಡುವುದು ಎಂದರೆ ಹೇಗೆ? ದಾಂಪತ್ಯ ಕಲಹಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನವರ ಗುರಿಯು ಸಂಗಾತಿಯ ವಿರುದ್ಧ ವಾಗ್ಯುದ್ಧದಲ್ಲಿ ಗೆಲ್ಲುವುದೇ ಆಗಿರುತ್ತದೆ. ಆದರೆ ನಿಜವಾಗಿ ಕಲಹ ನಡೆಯಬೇಕಾದದ್ದು ಯಾವುದೇ ಒಂದು ಸಮಸ್ಯೆಯ ಆಳಕ್ಕೆ ಇಳಿಯುವ ಸಲುವಾಗಿ. ಸಮಸ್ಯೆಯಿದೆ, ಭಿನ್ನಾಭಿಪ್ರಾಯವೂ ಇದೆ. ಇಂತಹ ಸ್ಥಿತಿಯಲ್ಲಿ, ಕಲಹ ನಡೆಸಬೇಕಾದದ್ದು ಸಂಗಾತಿಯ ಅಭಿಪ್ರಾಯದ ಹಿಂದಿನ ಕಾರಣವನ್ನು ತಿಳಿದುಕೊಳ್ಳುವ ಸಲುವಾಗಿ! ಈ ಅರಿವು ಕೊಂಡಿಯನ್ನು ಸೇರಿಸುತ್ತದೆ, ಸಂಬಂಧ ಗಟ್ಟಿಯಾಗುತ್ತದೆ.

ಸಾಮಾನ್ಯವಾಗಿ ಇಂತಹ ಕಾರ್ಯ ನಮಗೆ ಅರಿವಿಲ್ಲದೆಯೇ ಕಲಹಗಳ ಮೂಲಕ ನಡೆಯುತ್ತಿರುತ್ತದೆ. ಆದರೆ ಸ್ವಲ್ಪಮಟ್ಟಿಗೆ ಇದನ್ನು ಪ್ರಯತ್ನಪೂರ್ವಕವಾಗಿ ವೈಜ್ಞಾನಿಕವಾದ ರೀತಿಯಲ್ಲಿ ಮಾಡಬಹುದೇ? ಮನೋವಿಜ್ಞಾನ ಇದನ್ನು ‘ಡ್ರೀಮ್ಸ್ ವಿಥಿನ್ ಕಾನ್‍ಫ್ಲಿಕ್ಟ್’ (ಸಂಘರ್ಷದೊಳಗಿನ ಕನಸುಗಳು) ಎನ್ನುತ್ತದೆ. ಅಂದರೆ, ಉದಾಹರಣೆಗೆ ನಾಯಿಯನ್ನು ಸಾಕಬೇಕು ಅಥವಾ ಸಾಕಬಾರದು ಎನ್ನುವ ವಿಷಯದ ಬಗೆಗೆ ಇಬ್ಬರು ಸ್ನೇಹಿತೆಯರು ಜಗಳವಾಡುತ್ತಿದ್ದಾರೆ ಎಂದುಕೊಳ್ಳೋಣ. ನಾಯಿ ಸಾಕಬೇಕು ಎನ್ನುವ ಮಹಿಳೆಗೆ, ಬಾಲ್ಯದಲ್ಲಿ ಆಕೆ ಹೊಂದಿದ್ದ ಏಕೈಕ ಸ್ನೇಹಿತನೆಂದರೆ, ಅವಳ ಬಳಿಯಿದ್ದ ಗೋಲ್ಡನ್ ರಿಟ್ರೀವರ್ ನಾಯಿ. ಆಕೆಯ ‘ಸಂಘರ್ಷದೊಳಗಿನ ಕನಸು’ ಏನೆಂದರೆ, ‘ನಾಯಿ ಸಾಕಿದರೆ ಮಕ್ಕಳು, ಕುಟುಂಬವನ್ನು ನಿರ್ವಹಿಸಲು ಅಭ್ಯಾಸವಾದಂತೆ ಆಗುತ್ತದೆ. ಮಕ್ಕಳು ಮತ್ತು ನಾಯಿ ಸಾಕಣೆ ಎರಡೂ ಹೆಚ್ಚಿನ ಜವಾಬ್ದಾರಿ ಬೇಡುವ ಕೆಲಸಗಳು. ಆದರೆ ಅದರ ನಡುವೆಯೂ ಅವು ಎಷ್ಟೆಲ್ಲಾ ಪ್ರೀತಿಯನ್ನು ನಮಗಾಗಿ ನೀಡುತ್ತವೆ. ಇದು ನಾಯಿ ಸಾಕಬೇಕೆಂಬ ಆಕೆಯ ಹಂಬಲಕ್ಕೆ ಕಾರಣ.

ನಾಯಿ ಸಾಕುವುದು ಬೇಡ ಎನ್ನುವ ಮಹಿಳೆಯದ್ದು ಬೇರೆಯದೇ ಕತೆ. ಆಕೆಯ ‘ಡ್ರೀಮ್ಸ್‌ ವಿಥಿನ್ ಕಾನ್‍ಫ್ಲಿಕ್ಟ್’ ಎಂದರೆ ‘ನಾಯಿ ಸಾಕುತ್ತಿಲ್ಲವೆಂದಾದರೆ ನಮ್ಮ ಮೇಲೆ ಹೊರೆ ಇರುವುದಿಲ್ಲ ಎಂದರ್ಥ. ನಾವು ಯಾವಾಗ ಬೇಕಾದರೂ ಪ್ರವಾಸಕ್ಕೆ ತೆರಳಬಹುದು, ಸಾಹಸ ಕೃತ್ಯಗಳಲ್ಲಿ ಪಾಲ್ಗೊಳ್ಳಬಹುದು’.

ಅಂದರೆ ಇಲ್ಲಿ ಕಲಹ ಇರುವುದು ನಾಯಿಯನ್ನು ಸಾಕಬೇಕೇ ಬೇಡವೇ ಎಂಬ ವಿಷಯಕ್ಕೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದಾದರೂ ವಾಸ್ತವವಾಗಿ ಅದು ಇರುವುದು ‘ಸಾಹಸ ಮತ್ತು ಪ್ರವಾಸಮಯ ಜೀವನ’ ಹಾಗೂ ‘ಮನೆಯಲ್ಲಿರುವುದು- ಕುಟುಂಬವೊಂದನ್ನು ನಿರ್ವಹಿಸುವುದು’ ಎಂಬ ಸಂಗತಿಗಳ ನಡುವೆ.

ಇಂತಹ ತಂತ್ರಗಳನ್ನು ಬಳಸಿ ಎಚ್ಚರದಿಂದ ಕಲಹ ಮಾಡುವುದರಿಂದ ಹಾಗೂ ಆ ಸಂದರ್ಭದಲ್ಲಿ ಪರಸ್ಪರರನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ, ನರಳುವಿಕೆಯ ದಾಂಪತ್ಯದಿಂದ ಹೊರಬಂದು ಸುಖೀ ದಾಂಪತ್ಯದತ್ತ ಹೊರಳಲು ಅನುವಾಗುತ್ತದೆ. ಈ ದಿಸೆಯಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ 600 ದಂಪತಿಗಳ ಪೈಕಿ ಶೇ 87ರಷ್ಟು ಮಂದಿಗೆ ಇಂತಹದ್ದೊಂದು ಸಕಾರಾತ್ಮಕ ಪರಿವರ್ತನೆ ಸಾಧ್ಯವಾಯಿತು ಎಂದು ವರದಿಯಾಗಿದೆ!

ಸಂಬಂಧಗಳೇ ಸಮಾಜದ ತಳಹದಿ ಎಂಬುದು ಗಮನಿಸಬೇಕಾದ ವಿಷಯ. ರಚನಾತ್ಮಕವಾಗಿ ಜಗಳವಾಡುವುದು ಹೇಗೆ ಎಂಬುದನ್ನು ನಾವು ಮನೆಯಲ್ಲಿ ಸರಿಯಾಗಿ ಕಲಿತರೆ, ಹೊರಗೂ ಅದನ್ನು ಅಳವಡಿಸಿಕೊಳ್ಳಲು ಸಾಧ್ಯವಷ್ಟೆ! ಆಗ ಘರ್ಷಣೆಗಳ ನಡುವೆಯೂ ಸಂಬಂಧಗಳ ಸುಧಾರಣೆ ಸಾಧ್ಯವಾಗುತ್ತದೆ. ಆ ಮೂಲಕ ಸಮಾಜದ ಕನಸುಗಳೂ ಉಳಿಯುತ್ತವೆ!

ಲೇಖಕಿ: ಮನೋವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT