ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಸಸ್‌ ಅಷ್ಟು ಸುಲಭವಲ್ಲ

Last Updated 22 ಸೆಪ್ಟೆಂಬರ್ 2018, 20:37 IST
ಅಕ್ಷರ ಗಾತ್ರ

ರಾಯಚೂರು, ಬೀದರ್‌ ಜಿಲ್ಲೆಗಳಲ್ಲಿ ಸಾಕ್ಷರತಾ ಮಿಷನ್‌ ಯಶಸ್ಸು ಹೂಹಗುರವಾಗಿರಲಿಲ್ಲ. ಒಂದು ಸಮಾಜದ ಚೌಕಟ್ಟಿನಿಂದಾಚೆ ಕೆಲಸ ಮಾಡಬೇಕಾಗಿತ್ತು. ಸಂಜೆಯ ನಂತರ ಹೆಣ್ಣುಮಕ್ಕಳು ಮನೆಯಿಂದಾಚೆ ಹೋಗುವುದು, ಓದುವುದು, ಬರೆಯುವುದು, ಸಚೇತಕಿಯರು, ಸಂಯೋಜಕರೊಂದಿಗೆ ಚರ್ಚಿಸುವುದು... ವಯಸ್ಕರ ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರಗಳಷ್ಟೇ ಅಲ್ಲ, ಅರಿವನ್ನೂ ನೀಡುತ್ತಿದ್ದೆವಲ್ಲ, ಅನ್ಯಾಯವನ್ನು ಪ್ರಶ್ನಿಸುವ ಹಂತಕ್ಕೆ ಹೆಣ್ಮಕ್ಕಳು ಬೆಳೆದರು.

ಇದರಿಂದ ಪುರುಷರ ಅಹಂಕಾರವನ್ನು ಕೆಣಕಿದಂತಾಗಿತ್ತು. ಹೆಂಡತಿಯನ್ನು ಹೊಡೆಯಬೇಕು ಎಂದುಕೊಂಡು ಕುಡಿದು ಮನೆಗೆ ಬಂದಾಗ, ಹೆಂಡತಿ ಮನೆಯೊಳಗಿರದೆ, ಆಚೆಬರೆಯಲು, ಓದಲು ಹೋದರೆ ಪುರುಷನಿಗೆ ಹೇಗಾಗಿರ
ಬೇಡ? ಹೆಣ್ಣುಮಕ್ಕಳಿಗೆ ಒಂದು ಅವಕಾಶ ಬೇಕಾಗಿತ್ತು. ಆ ಅವಕಾಶ ಇದೀಗ ಸಿಕ್ಕಿತ್ತು. ಅವರು ತಮ್ಮ ದೂರು, ದುಮ್ಮಾನಗಳನ್ನು ಪರಸ್ಪರ ಚರ್ಚಿಸುತ್ತಿದ್ದರು. ಆ ಸಮಸ್ಯೆಗಳಿಗೆ ಪರಿಹಾರಗಳನ್ನೂ ಹುಡುಕುತ್ತಿದ್ದರು. ಮನೆಯಲ್ಲಿ ಹೊಡೆಯಲು ಬಂದ ಯಜಮಾನನನ್ನು ತಡೆಯಲು ಆರಂಭಿಸಿದರು.

ಸಾಂಪ್ರದಾಯಿಕವಲ್ಲದ ಉದ್ಯೋಗಗಳಿಗೆ ಮುಂದಾದರು, ಆಟೋ ಓಡಿಸಲು ಸಹ ಆರಂಭಿಸಿದರು. ಈ ಎಲ್ಲ ಬದಲಾವಣೆಗಳು ಹೆಣ್ಣುಮಕ್ಕಳ ದೃಷ್ಟಿಯಿಂದ ಸಕಾರಾತ್ಮಕವಾಗಿದ್ದವು. ಆದರೆ ಗಂಡಸರ ದೃಷ್ಟಿಯಿಂದ ಇವೆಲ್ಲ ಸಹಿಸಲಸಾಧ್ಯವಾಗಿದ್ದವು. ಹೆಣ್ಣುಮಗಳೊಬ್ಬಳು ಮೇಲಧಿಕಾರಿಯಾಗಿದ್ದರೆ, ಒಳಗೊಳಗೇ ಆಕೆಯನ್ನು ವಿರೋಧಿಸುವ ಗುಣ ಸಹೋದ್ಯೋಗಿಗಳಿಗೆ ಇದ್ದೇ ಇರುತ್ತದೆ. ನನ್ನ ಅಧಿಕಾರಾವಧಿಯಲ್ಲಿ ಅಭಿಮಾನ ಉಂಡಷ್ಟೇ, ಅಸಮಾಧಾನವನ್ನೂ ಉಂಡಿದ್ದೇನೆ. ಅಸಹನೆಯನ್ನೂ ಕಂಡಿದ್ದೇನೆ. ಅವನ್ನು ಸಹಿಸುವುದು ಸುಲಭವಾಗಿರಲಿಲ್ಲ.

ವಯಸ್ಕರ ಶಿಕ್ಷಣ ಮತ್ತು ರಾತ್ರಿಶಾಲೆಗಳ ವಿರುದ್ಧವಂತೂ ಸಂಚು, ಪಿತೂರಿಗಳೇ ನಡೆದವು. ನಾವು ಸಾಕ್ಷರತಾ ಯೋಜನೆಯಡಿ ಎಲ್ಲೆಡೆ ಘೋಷಣೆಗಳನ್ನು ಬರೆಯುತ್ತಿದ್ದೆವು. ‘ಕಲಿತ ನಾರಿ, ಅಭಿವೃದ್ಧಿಗೆ ದಾರಿ’ ಎಂದು. ದಿನ ಕಳೆಯುವುದರೊ
ಳಗೆ ಕುತ್ಸಿತ ಬುದ್ಧಿಯವರು ‘ಕಲಿತ ನಾರಿ ಪರರೊಂದಿಗೆ ಪರಾರಿ’ ಎಂದು ಬರೆದಿರುತ್ತಿದ್ದರು. ರಾಜ್ಯಮಟ್ಟದ ವಾರಪತ್ರಿಕೆ ಯಲ್ಲಿಯಂತೂ ನನ್ನದೊಂದು ದೊಡ್ಡ ಚಿತ್ರ ಹಾಕಿ ಅವಹೇಳನಕಾರಿಯಾಗಿ ಬರೆದರು.

‘ರಾತ್ರಿ ಶಾಲೆಗಳು ಆರಂಭವಾದ ಬಳಿಕ, ವಯಸ್ಸಿಗೆ ಬಂದ ಹೆಣ್ಣುಮಕ್ಕಳು, ಸಂಜೆಯಾದ ಮೇಲೆ ಮನೆಯಿಂದಾಚೆ ಬರುತ್ತಿದ್ದಾರೆ. ಗರ್ಭಿಣಿಯರಾಗುತ್ತಿದ್ದಾರೆ. ಗರ್ಭಪಾತದ ಪ್ರಕರಣಗಳು ಹೆಚ್ಚುತ್ತಿವೆ...’ ಎಂದೆಲ್ಲ ಬಾಯಿಗೆ ಬಂದಂತೆ ಬರೆದಿದ್ದರು. ಇದಕ್ಕೆಲ್ಲ ಜಿಲ್ಲಾಧಿಕಾರಿಯ ಕುಮ್ಮಕ್ಕಿದೆ ಎಂದೂ ಬರೆದಿದ್ದರು. ರಾಯಚೂರಿನಲ್ಲಿ ಅಂಥ ಪ್ರಸಾರವಿರದಿದ್ದರೂ ಆ ವಾರ ಮಾತ್ರ ಓಣಿ ಓಣಿಗಳಲ್ಲಿ ಪತ್ರಿಕೆಯನ್ನು ಹಂಚಿದ್ದರು. ಆಗಿನ್ನೂ ರಾಯಚೂರು ಜಿಲ್ಲೆ ವಿಭಜನೆ ಆಗಿರಲಿಲ್ಲ. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗಬೇಕೆಂದರೆ ಆರೇಳು ಗಂಟೆಗಳ ಪ್ರಯಾಣ ಅಗತ್ಯವಾಗಿತ್ತು. ಇಲ್ಲಿಯ ತನಕಮನೆಯವರ ಸಣ್ಣ ಸಣ್ಣ ಅಸಮಾಧಾನಗಳನ್ನು ಹತ್ತಿಕ್ಕಿ ಆಚೆ ಬರುತ್ತಿದ್ದ ಹೆಣ್ಣುಮಕ್ಕಳು, ಈ ವರದಿಯ ನಂತರ ಮನೆಯಿಂದಾಚೆ ಬರಲು ನಿರಾಕರಿಸತೊಡಗಿದರು. ಪದ್ಮಾ ಎನ್ನುವ ಯುವತಿ ಸಚೇತಕಿಯಾಗಿದ್ದಳು. ಸಪೂರ ಮೈಕಟ್ಟಿನ ಎತ್ತರ ನಿಲುವಿನ ಈ ಹುಡುಗಿ ಮಾತ್ರ ಒಂದಿನ ಸಿಡಿದೆದ್ದಳು. ‘ಮನೆ ಯಿಂದಾಚೆ ಬಂದವರೆಲ್ಲ ಚಾರಿತ್ರ್ಯ ಕಳೆದುಕೊಳ್ಳುವುದಿಲ್ಲ. ನೀವು, ನಿಮ್ಮ ಮನೆಯ ಮಾನ ಮರ್ಯಾದೆ ಕಾಪಾಡುವುದನ್ನು ಹೆಣ್ಮಕ್ಕಳಿಗೆ ಹೇಳಿಕೊಟ್ಟಿಲ್ಲವೇ? ಅದ್ಯಾರಿಗೆ ಹೀಗೆಲ್ಲ ಎನಿಸುತ್ತದೆ ಮುಂದೆ ಬನ್ನಿ’ ಎಂದೆಲ್ಲ ಪ್ರಶ್ನಿಸಿದಳು. ಅವಳ ಮಾತುಗಳಿಗೆ ಪಂಚಾಯ್ತಿಯ ಹಿರಿಯರು ನಿರುತ್ತರರಾಗಿದ್ದರು.

ನಾನೂ ಆ ಪತ್ರಿಕೆಯ ವಿರುದ್ಧ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾಗೆ ದೂರು ನೀಡಿದೆ. ದೇಶದ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಹೀಗೆ ಅಡೆತಡೆಯೊಡ್ಡುವುದು ಸರಿಯೇ? ಮಹಿಳಾ ಜಿಲ್ಲಾಧಿಕಾರಿಯ ಬಗ್ಗೆ ಹೀಗೆಲ್ಲ ಬರೆಯುವುದರ ಔಚಿತ್ಯವೇನು ಎಂದು ಪ್ರಶ್ನಿಸಿದೆ. ಇದಾಗಿ ಎರಡು ವರ್ಷಗಳ ನಂತರ ಆ ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳಲಾಯಿತು.

ಈ ಪ್ರಸಂಗದ ನಂತರ ಇಂಥ ಹಲವಾರು ಪ್ರಸಂಗಗಳನ್ನು ಎದುರಿಸಿದ್ದೇನೆ. ಅನುಭವಿಸಿದ್ದೇನೆ. ಒಂದು ವ್ಯವಸ್ಥೆಯಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವ ಜನರಿದ್ದಷ್ಟೇ, ಅನುಮಾನದಿಂದ ನೋಡುವ, ಅವಮಾನಿಸುವ ಜನರೂ ಇದ್ದಾರೆ. ಸಹೋದ್ಯೋಗಿಗಳಂತೂ ಸ್ಪರ್ಧಾರ್ಥಿಯಂತೆ ನೋಡುತ್ತಾರೆ. ಆ ಕಾಲದಲ್ಲಿ ಹೆಣ್ಣುಮಗಳಾಗಿದ್ದ ಪ್ರಧಾನಕಾರ್ಯದರ್ಶಿಯೂ, ಐಎಎಸ್‌ ಅಧಿಕಾರಿಗಳ ಗುಂಪು ಸಹ ಗುಸುಗುಸು ಮಾತನಾಡುತ್ತಿತ್ತೇ ಹೊರತು, ಬೆಂಬಲಕ್ಕೆ ಬರುತ್ತಿರಲಿಲ್ಲ. ನೈತಿಕ ಬೆಂಬಲ ಸಿಗಬೇಕೆಂದರೆ ನಮ್ಮೊಳಗು ಗಟ್ಟಿಯಾಗಿರಬೇಕು ಅಷ್ಟೆ. ಬಾಹ್ಯ ಬೆಂಬಲವೆಂಬುದು ಯಾವತ್ತಿಗೂ ಸಿಗುವುದಿಲ್ಲ. ಇಂಥ ಅನುಭವಗಳಿಂದಲೆ ನಾನು ಉದ್ಯೋಗಸ್ಥ ಮಹಿಳೆಯರಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಆರಂಭಿಸಿದೆ.

ಇದೆಲ್ಲ ಒಂದೆರಡು ದಶಕಗಳ ಹಿಂದಿನ ಕಥೆಯಾಯಿತು. ತೀರ ಇತ್ತೀಚೆಗೆ ಸಹ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆಮಾಡುವಾಗಲೂ ಹೆಣ್ಮಕ್ಕಳಿಗೆ ಈ ಇಲಾಖೆ ಹೇಳಿ ಮಾಡಿಸಿ
ದ್ದಲ್ಲ ಎಂಬ ಮಾತುಗಳೇ ಹೆಚ್ಚಾಗಿದ್ದವು. ‘ಸಂಜೆಯ ಕೂಟಗಳಿಗೆ ಇವರು ಬರಲಾರರು. ಇವರಿದ್ದರೆ ಮುಕ್ತವಾಗಿ ಚರ್ಚೆಗಳಾಗುವುದಿಲ್ಲ. ಹಲವಾರು ನಿರ್ಣಯಗಳಾಗುವುದೇ ಸಂಜೆಯ ಕೂಟಗಳಲ್ಲಿ. ಇವರಿಂದ ಅದೆಲ್ಲ ಸಾಧ್ಯವಿಲ್ಲ...’ ಇಂಥ ಮಾತುಗಳನ್ನೇ ಹೆಣ್ಣುಮಕ್ಕಳ ವಿರುದ್ಧ ಕಟ್ಟಿಹಾಕುತ್ತಾರೆ. ಪರಿಣಾಮ ಈ ಹುದ್ದೆ ಕೊಡುವ ಮೊದಲು ಸಾಕಷ್ಟು ಹಗ್ಗಜಗ್ಗಾಟವಾಯಿತು. ಆದರೆ ನಂತರ ನಮ್ಮ ಇಲಾಖೆಗೆ ಅಮೆರಿಕದ ಪ್ರಶಸ್ತಿ ದೊರೆಯಿತು. ‘ಬೆಸ್ಟ್‌ ಸಪೋರ್ಟಿವ್‌ ಸ್ಟೇಟ್‌
ಗವರ್ನಮೆಂಟ್‌ ಫಾರ್‌ ಇಂಡಸ್ಟ್ರಿ’ ಪ್ರಶಸ್ತಿ ದೊರೆಯಿತು.

ಇದಕ್ಕೂ ಭಯಾನಕವಾದ ಅನುಭವವೆಂದರೆ ಯಾರೋಒಬ್ಬ ಗೂಂಡಾ ಥರದ ವ್ಯಕ್ತಿ, ಕೊರಳಿಗೆ ಚಿನ್ನದ ಚೈನು ಬಿಗಿದುಕೊಂಡು, ‘ನಾನು ರತ್ನಪ್ರಭಾ ಸಹೋದರ. ಒಂದು ಪಕ್ಷದ ಕಾರ್ಯಕರ್ತ. ಅವರಿಗೆ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಲು ಅನುಮತಿ ದೊರೆಯುತ್ತದೆ. ನಮ್ಮ ಪಕ್ಷ ಆಡಳಿತದಲ್ಲಿರದಿದ್ದರೂ ನಮ್ಮದೇ ಆಡಳಿತ ನಡೆಯುತ್ತದೆ...’ ಎಂದೆಲ್ಲ ಹೇಳಿಕೊಂಡ ವಿಡಿಯೋ ಹರಿಯಬಿಟ್ಟಿದ್ದ. ನನ್ನ ಸಹೋದರ ಒಬ್ಬ ವೈದ್ಯ. ಇನ್ನೊಬ್ಬ ಐಎಎಸ್‌ ಅಧಿಕಾರಿ. ಇದು ಗೊತ್ತಿರಲಿಲ್ಲವೇ? ಇಂಥ ಕುಚೋದ್ಯಗಳು ಖಂಡಿತ ನಾವು ಕುಗ್ಗುವಂತೆ ಮಾಡುತ್ತವೆ. ಆದರೆ ನಮ್ಮೊಳಗಿನ ಕರ್ತೃಶಕ್ತಿ ಇದೆಯಲ್ಲ, ಅದಕ್ಕೆ ಇವನ್ನೆಲ್ಲ ನಿಭಾಯಿಸುವುದೂ ಗೊತ್ತಿರುತ್ತದೆ. ನಿರ್ಲಕ್ಷಿಸುವುದೂ ತಿಳಿದಿರುತ್ತದೆ.

ತೆಲಂಗಾಣಕ್ಕೆ ನಿಯೋಜನೆಗೊಂಡಾಗಲೂ ಅಷ್ಟೆ, ಅಲ್ಲಿಯವರಿಗೆ ನಮ್ಮ ರಾಜ್ಯದ, ಕೇಡರ್‌ನ ಒಂದು ಹುದ್ದೆ ಕರ್ನಾಟಕದ ಪಾಲಾಗಿದೆ ಎಂಬ ಅಸಮಾಧಾನ. ಮಹಿಳೆಯೊಬ್ಬಳನ್ನುಉನ್ನತ ಸ್ಥಾನದಲ್ಲಿ ಕಲ್ಪಿಸಿಕೊಳ್ಳುವುದೇ ಪುರುಷಾಹಂಕಾರಕ್ಕೆ
ಆಗದ ಮಾತು. ಅದಕ್ಕಾಗಿ ಏನೆಲ್ಲ ಪಿತೂರಿ ಮಾಡ್ತಾರೆ, ಸಂಚುಗಳನ್ನು ಮಾಡ್ತಾರೆ... ಇವಕ್ಕೆಲ್ಲ ನಮ್ಮ ಕೆಲಸಗಳೇ ಉತ್ತರವಾಗಬೇಕು. ಜನರ ನಡುವೆಯೇ ನಮ್ಮ ಕೆಲಸ ಸಾಗಬೇಕು. ಜನರಿಗಾಗಿಯೇ ಅಧಿಕಾರವಿದೆ ಎಂದು ಅರಿತು ಸೇವೆ ಸಲ್ಲಿಸಿದರೆ ಈ ಕೆಲವರ ಸಂಚುಗಳಿಂದ, ಪಿತೂರಿಗಳಿಂದ ನಮ್ಮ ಜನಪರ ಕೆಲಸಗಳೇ ನಮ್ಮನ್ನು ಕಾಯುತ್ತವೆ.

ರಾಯಚೂರಿನ ಪದ್ಮಾಳಂತೆಯೇ ನಮ್ಮಲ್ಲಿ ಪ್ರಶ್ನಿಸುವ ಜೀವ ಮಜಬೂತಾಗಬೇಕು. ಸಮಜಾಯಿಷಿ ನೀಡುವುದಲ್ಲ, ಪ್ರಶ್ನಿಸಿರುವ ಹಿಂದಿನ ಮಸಲತ್ತನ್ನು ಅರಿಯುವ ಬಲವಿರಬೇಕು. ಅದೇ ನಮ್ಮನ್ನು ಕಾಪಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT